Wednesday, November 13, 2019

17 ಶಾಸಕರ ಅನರ್ಹತೆ ಸರಿ,ಉಪಚುನಾವಣೆ ಸ್ಪರ್ಧೆಗಿಲ್ಲ ಅಡ್ಡಿ: ಸುಪ್ರೀಂ ತೀರ್ಪು

17 ಶಾಸಕರ ಅನರ್ಹತೆ ಸರಿ,ಉಪಚುನಾವಣೆ ಸ್ಪರ್ಧೆಗಿಲ್ಲ ಅಡ್ಡಿ: ಸುಪ್ರೀಂ ತೀರ್ಪು
ವಿಧಾನಸಭಾಧ್ಯಕ್ಷ ರಮೇಶ ಕುಮಾರ್  ಆದೇಶ ಭಾಗಶಃ ಸಿಂಧು

ನವದೆಹಲಿ: ಹದಿನೇಳು ಮಂದಿ ಅನರ್ಹ ಶಾಸಕರನ್ನು ಅನರ್ಹಗೊಳಿಸಿ ಅಂದಿನ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ನೀಡಿದ್ದ ಆದೇಶವನ್ನು  ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠವು 2019 ನವೆಂಬರ್ 13ರ ಬುಧವಾರ ಭಾಗಶಃ ಎತ್ತಿಹಿಡಿದು, ಡಿಸೆಂಬರ್ ೫ರಂದು ನಡೆಯಲಿರುವ ಉಪಚುನಾವಣೆಗಳಲ್ಲಿ ಸ್ಪರ್ಧಿಸಲು ಅನರ್ಹ ಶಾಸಕರಿಗೆ ಅವಕಾಶ ನೀಡಿತು.

ಶಾಸಕರನ್ನು ಅನರ್ಹಗೊಳಿಸಿದ ವಿಧಾನಸಭಾಧ್ಯಕ್ಷರ ಆದೇಶ ಸರಿ, ಆದರೆ ಶಾಸನಸಭೆಯ ಪೂರ್ತಿ ಅವಧಿಗೆ ಅನರ್ಹಗೊಳಿಸಿದ್ದು ಸರಿಯಲ್ಲ, ಅನರ್ಹರಾದವರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್‌ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ತೀರ್ಪು ನೀಡಿತು. ಇದರೊಂದಿಗೆ ಡಿಸೆಂಬರ್ ೫ರಂದು ನಡೆಯಲಿರುವ ರಾಜ್ಯದ ೧೫ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಅನರ್ಹ ಶಾಸಕರ ಪ್ರಕರಣಕ್ಕೆ ತೆರೆ ಬಿದ್ದಿತು.

೨೦೨೩ರವರೆಗೆ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಸ್ಪೀಕರ್ ಆದೇಶವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು. ರಾಜೀನಾಮೆ ಸ್ವೀಕರಿಸುವುದಷ್ಟೇ ಸ್ಪೀಕರ್ ಕೆಲಸ ಎಂದು ಸುಪ್ರೀಂಕೋರ್ಟ್ ಪೀಠ ಸ್ಪಷ್ಟಪಡಿಸಿತು.

ಶಾಸಕರ ಅನರ್ಹತೆಗೆ ಅವಧಿ ನಿರ್ಧಾರ ಮಾಡುವಂತಿಲ್ಲ. ಅನರ್ಹತೆ ಕೇವಲ ಉಪಚುನಾವಣೆ ನಡೆಯುವವರೆಗೆ ಮಾತ್ರ. ವಿಧಾನಸಭೆ ಅವಧಿ ಮುಗಿಯುವವರೆಗೆ ಅಲ್ಲ. ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧಿಸಬಹುದು. ಆದರೆ ಚುನಾವಣೆಗೆ ಸ್ಪರ್ಧಿಸುವವರೆಗೆ ಮಂತ್ರಿಯಾಗುವಂತಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರ ಮಂತ್ರಿಯಾಗಬಹುದು ಎಂದು ಸುಪ್ರೀಂಕೋರ್ಟ್ ಹೇಳಿತು.

ಚುನಾವಣೆಯಲ್ಲಿ ಸ್ಪರ್ಧಿಸಲು ವಿಧಾನಸಭಾಧ್ಯಕ್ಷರು ನಿರ್ಬಂಧ ವಿಧಿಸಿದ್ದು ತಪ್ಪು. ಶಾಸಕರ ರಾಜೀನಾಮೆ ಸ್ವಯಂ ಪ್ರೇರಿತವಾಗಿದ್ದರೆ ಅದನ್ನು ಒಪ್ಪಬೇಕು. ಶಾಸಕರ ರಾಜೀನಾಮೆ ಅಂಗೀಕರಿಸಬೇಕು. ರಾಜೀನಾಮೆ ಅಂಗೀಕರಿಸಲಿ ಅಥವಾ ಅನರ್ಹಗೊಳಿಸಲಿ ಶಾಸಕ ಸ್ಥಾನ ಖಾಲಿಯಾಗುತ್ತದೆ. ಆಗ ಚುನಾವಣೆ ನಡೆಯಲೇಬೇಕಾಗುತ್ತದೆ ಎಂದು ಪೀಠ ಹೇಳಿತು.

ನ್ಯಾಯಮೂರ್ತಿಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠವು ಪ್ರಕರಣದ ವಿಚಾರಣೆ ಬಳಿಕ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಬುಧವಾರ ಬೆಳಗ್ಗೆ ೧೦.೩೦ಕ್ಕೆ ತೀರ್ಪನ್ನು ಪೀಠವು ಪ್ರಕಟಿಸಿತು.
"೧೭ ಶಾಸಕg ಅನರ್ಹತೆಯನ್ನು ಎತ್ತಿ ಹಿಡಿದಿದ್ದೇವೆ. ಆದರೆ, ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುತ್ತಿದ್ದೇವೆ. ೨೦೨೩ರವರೆಗೂ ಚುನಾವಣೆಗೆ ಸ್ಪರ್ಧಿಸಲು ನಿರ್ಬಂಧ ಹೇರುವುದು ಸರಿಯಲ್ಲ," ಎಂದು ಪೀಠ ಹೇಳಿತು.

ರಾಜೀನಾಮೆಗಳ ಸಿಂಧುತ್ವವು ಪ್ರತಿಯೊಂದು ಪ್ರಕರಣದ ವಾಸ್ತವಾಂಶಗಳು ಮತ್ತು ಸಂದರ್ಭಗಳನ್ನು ಅವಲಂಬಿಸಿರುತ್ತದೆ. ಶೆಡ್ಯೂಲು ೧೦ರ ಅಡಿಯಲ್ಲಿ ಶಾಸನಸಭೆಯ ಅವಧಿ ಮುಗಿಯುವವರೆಗೆ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ವಿಧಾನಸಭಾಧ್ಯಕ್ಷರಿಗೆ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳೀತು. ’ರಾಜಕೀಯ ನೈತಿಕತೆಯು ಸಾಂವಿಧಾನಿಕ ನೈತಿಕತೆಯನ್ನು ಉಡುಗಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.

ಉಪಚುನಾವಣೆಯಲ್ಲಿ ಗೆದ್ದರೆ ಅನರ್ಹಗೊಂಡ ಶಾಸಕರು ಮಂತ್ರಿಗಳಾಗಬಹುದು ಅಥವಾ ಸಾರ್ವಜನಿಕ ಹುದ್ದೆಯನ್ನು ಹೊಂದಬಹುದು. ನ್ಯಾಯಾಲಯದ ತೀರ್ಪು ವಾಸ್ತವಾಂಶ ಮತ್ತು ಸಂದರ್ಭಗಳನ್ನು ಆಧರಿಸಿದ್ದು ಮತ್ತು ಅದು ಸದಸ್ಯರನ್ನು ಅನರ್ಹಗೊಳಿಸುವ ಸಭಾಧ್ಯಕ್ಷರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸುಪ್ರೀಕೋರ್ಟ್ ಹೇಳಿತು.

ಅನರ್ಹ ಶಾಸಕರು ಮೊದಲು ಹೈಕೋರ್ಟಿಗೆ ಹೋಗದೆ ನೇರವಾಗಿ ಸುಪ್ರೀಂಕೋರ್ಟನ್ನು ಸಂಪರ್ಕಿಸಿದ ರೀತಿ ಸರಿಯಲ್ಲ ಎಂದೂ ಸುಪ್ರಿಂಕೋರ್ಟ್ ಪೀಠ ಹೇಳಿತು.
೧೫ನೇ ವಿಧಾನಸಭೆಯಲ್ಲಿ ಅನರ್ಹ ಶಾಸಕರು ಯಾವುದೇ ಅಧಿಕಾರವನ್ನು ಹೊಂದದಂತೆ ಸಭಾಧ್ಯಕ್ಷರು ಆದೇಶ ನೀಡಿದ್ದರು. ಅಂದರೆ ೨೦೨೩ರ ವಿಧಾನಸಭಾ ಚುನಾವಣೆಯವರೆಗೂ ಅನರ್ಹ ಶಾಸಕರು ಯಾವುದೇ ಚುನಾವಣಾ ಪ್ರಕ್ರಿಯೆಯಲ್ಲಿ ಸ್ಪರ್ಧಿಸುವಂತಿರಲಿಲ್ಲ. ಆದರೆ ವಿಧಾನಸಭಾಧ್ಯಕ್ಷರು ನೀಡಿದ್ದ ಈ ಆದೇಶವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು.

ಶಾಸಕರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಈಗ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದ್ದು, ಅನರ್ಹರಿಗೆ ನಿರಾಳತೆಯನ್ನು ಒದಗಿಸಿತು.

ಡಿಸೆಂಬರ್ ೫ರಂದು ಉಪ ಚುನಾವಣೆ ನಡೆಯಲಿದ್ದು, ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಗಳಿವೆ ಎಂದು ಸುದ್ದಿ ಮೂಲಗಳು ಹೇಳಿವೆ.

ಕಾಂಗ್ರೆಸ್-ಜೆಡಿಎಸ್ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದ ೧೭ ಶಾಸಕರು ರಾಜೀನಾಮೆ ನೀಡಿ ಮುಂಬೈ ಸೇರಿದ್ದರು. ಈ ಮೂಲಕ ಸರ್ಕಾರ ಪತನಕ್ಕೆ ಕಾರಣವಾಗಿದ್ದರು. ಇದಾದ ಬೆನ್ನಲ್ಲೇ ಶಾಸಕರು ನೀಡಿರುವ ರಾಜೀನಾಮೆ ಸಕಾರಣದಿಂದ ಕೂಡಿಲ್ಲ ಎಂಬ ಕಾರಣ ನೀಡಿ ಅಂದಿನ ವಿಧಾನಸಭಾಧ್ಯಕ ರಮೇಶಕುಮಾರ್ ಅವರು ೧೭ ಶಾಸಕರನ್ನು ಅನರ್ಹಗೊಳಿಸಿ ಜುಲೈ ೨೮ರಂದು ಆದೇಶ ಹೊರಡಿಸಿದ್ದರು. ಇದರಿಂದ ವಿಚಲಿತರಾದ ಅನರ್ಹ ಶಾಸಕರು ವಿಧಾನಸಭಾಧ್ಯಕ್ಷರ ಆದೇಶ ಪ್ರಶ್ನಿಸಿ ಆಗಸ್ಟ್ ೧ರಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಸುಪ್ರೀಂಕೋರ್ಟಿನಲ್ಲಿ ಜಯ ಸಿಗಬಹುದು ಎಂಬ ಆಸೆ ಹೊತ್ತಿದ್ದ ಅನರ್ಹ ಶಾಸಕರಿಗೆ ಪ್ರತಿ ಬಾರಿಯೂ ಹಿನ್ನಡೆ ಆಗುತ್ತಲೇ ಇತ್ತು. ವಿಧಾನಸಭಾಧ್ಯಕ್ಷರ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿಎರಡು ತಿಂಗಳಾದರೂ ಪ್ರಕರಣ ವಿಚಾರಣೆಗೆ ಬಂದಿರಲಿಲ್ಲ. ಈಗ ಕೊನೆಗೂ ತೀರ್ಪು ಹೊರ ಬಿದ್ದು, ಅನರ್ಹರಿಗೆ ನಿರಾಳತೆ ಲಭಿಸಿತು.

ಕಾಂಗ್ರೆಸ್ ಮತ್ತು ಜನತಾದಳ ಶಾಸಕರು ಜುಲೈ ತಿಂಗಳಲ್ಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಬಳಿಕ ಮುಂಬೈಯ ಹೊಟೇಲ್ ಮತ್ತು ರೆಸಾರ್ಟ್‌ಗಳಿಗೆ ತಮ್ಮ ವಾಸ್ತವ್ಯ ಬದಲಿಸಿದ್ದನ್ನು ಟೀಕಿಸಿದ್ದ ಕಾಂಗ್ರೆಸ್ ಮತ್ತು ಜೆಡಿ(ಎಸ್) ’ಮನಸ್ಸು ಬದಲಾಯಿಸದಂತೆ ತಡೆಯುವ ಸಲುವಾಗಿ ಅವರನ್ನು ಬಿಜೆಪಿ ನಾಯಕರು ಪ್ರತ್ಯೇಕಿತರನ್ನಾಗಿ ಮಾಡಿ ಇಟ್ಟಿದ್ದಾg’ ಎಂದು ಆಪಾದಿಸಿದ್ದವು.

ರಾಜೀನಾಮೆಗಳ ಪರಿಣಾಮವಾಗಿ ಆಗಿನ ಜನತಾದಳ (ಎಸ್)- ಕಾಂಗ್ರೆಸ್ ಸರ್ಕಾರವು ಅಲ್ಪಮತಕ್ಕೆ ಇಳಿದಿತ್ತು. ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವು ಬಹುಮತ ಕಳೆದುಕೊಳ್ಳುವುದಕ್ಕೆ ಮುನ್ನ ಸಭಾಧ್ಯಕ್ಷರಾಗಿದ್ದ ರಮೇಶ ಕುಮಾರ್ ಅವರು ಸದರಿ ಶಾಸಕರು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಉಲಂಘಿಸಿದ್ದಾರೆ ಎಂದು ಹೇಳಿ ಶಾಸನಸಭೆಯ ಅವಧಿ ಮುಗಿಯುವವರೆಗೆ ಅವರನ್ನು ಅನರ್ಹಗೊಳಿಸಿದ್ದರು.

ಸುಪ್ರೀಂಕೋರ್ಟ್ ತೀರ್ಪು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವರದಾನವಾಗಿ ಪರಿಣಮಿಸಿದ್ದು, ಬಂಡಾಯ ಶಾಸಕರನ್ನು ಉಪಚುನಾವಣೆಯಲ್ಲಿ ಗೆದ್ದರೆ ಸಂಪುಟಕ್ಕೆ ಸೇರ್ಪಡೆ ಮಾಡಲು ಅವಕಾಶ ಕಲ್ಪಿಸಿದೆ.

೨೨೪ ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಯು ೧೦೬ ಶಾಸಕರ ಬೆಂಬಲವನ್ನು ಹೊಂದಿದೆ. ವಿರೋಧಿ ಕಾಂಗ್ರೆಸ್ ಮತ್ತು ಜೆಡಿಎ(ಎಸ್) ಒಟ್ಟು೧೦೧ ಶಾಸಕರ ಬೆಂಬಲ ಹೊಂದಿವೆ.

ಅನರ್ಹ ಶಾಸಕರು ಯಾರು ಯಾರು?

ಮೊದಲ ಹಂತದಲ್ಲಿ ಕಾಂಗ್ರೆಸ್ಸಿನ ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅಥಣಿಯ ಮಹೇಶ ಕುಮಠಹಳ್ಳಿ, ರಾಣೇಬೆನ್ನೂರು ಶಾಸಕ ಆರ್.ಶಂಕರ್ ಅವರನ್ನು ಅಂದಿನ ಸಭಾಧ್ಯಕ್ಷ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು.

ಬಳಿಕ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ, ಯಶವಂತಪುರದ ಎಸ್.ಟಿ. ಸೋಮಶೇಖರ್, ಕೆ.ಆರ್.ಪುರದ ಭೈರತಿ ಬಸವರಾಜು, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ, ಆರ್.ಆರ್.ನಗರ ಶಾಸಕ ಮುನಿರತ್ನ, ಶಿವಾಜಿನಗರ ಶಾಸಕ ರೋಷನ್ ಬೇಗ್, ಚಿಕ್ಕಬಳ್ಳಾಪುರದ ಡಾ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಮಹಾಲಕ್ಷ್ಮೀ ಲೇಔಟಿನ ಕೆ.ಗೋಪಾಲಯ್ಯ, ಕೆ.ಆರ್.ಪೇಟೆಯ ನಾರಾಯಣಗೌಡ, ವಿಜಯನಗರದ ಆನಂದ ಸಿಂಗ್, ಹುಣಸೂರಿನ ಹೆಚ್. ವಿಶ್ವನಾಥ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರನ್ನು ಸಭಾಧ್ಯಕ್ಷರು ಅನರ್ಹಗೊಳಿಸಿದ್ದರು.

No comments:

Advertisement