My Blog List

Thursday, November 14, 2019

ಅನರ್ಹ ಶಾಸಕರೇ ಬಿಜೆಪಿ ಅಭ್ಯರ್ಥಿಗಳು: ಕೋರ್ ಕಮಿಟಿ ತೀರ್ಮಾನ

ಅನರ್ಹ ಶಾಸಕರೇ ಬಿಜೆಪಿ ಅಭ್ಯರ್ಥಿಗಳು:
ಕೋರ್ ಕಮಿಟಿ ತೀರ್ಮಾನ
ಬೆಂಗಳೂರು: ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆ ಹೊಂದಿದ್ದಾರೆ ಎಂಬುದಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಬೆನ್ನಲ್ಲೇ ಅನರ್ಹ ಶಾಸಕರಿಗೆ ಉಪಚುನಾವಣಾ ಅಭ್ಯರ್ಥಿಗಾಗಿ ಟಿಕೆಟ್ ನೀಡಲು ಆಡಳಿತಾರೂಢ ಭಾರತೀಯ ಜನತಾ ಪಕ್ಷ 2019 ನವೆಂಬರ್ 13ರ ಬುಧವಾರ ನಿರ್ಧರಿಸಿತು.

ಅನರ್ಹ ಶಾಸಕರು 2019 ನವೆಂಬರ್ 14ರ ಗುರುವಾರ ಪಕ್ಷವನ್ನು ಸೇರಿದ ಬಳಿಕ ಅವರನ್ನು ಪಕ್ಷದ ಅಭ್ಯರ್ಥಿಗಳು ಎಂಬುದಾಗಿ ಘೋಷಿಸಲು ಬಿಜೆಪಿ ತೀರ್ಮಾನಿಸಿತು. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಾಯಕರು ಈ ತೀರ್ಮಾನ ಕೈಕೊಂಡಿದ್ದಾರೆ ಎಂದು ಸುದ್ದಿ ಮೂಲಗಳು ಹೇಳಿದವು.

ಅನರ್ಹ ಶಾಸಕರು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡನೆಯಾದ ಬಳಿಕ ಅವರಿಗೆ ಟಿಕೆಟ್ ನೀಡಲಾಗುವುದು. ಯಾರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿದವು.

ಕೋರ್ ಕಮಿಟಿ ಸಭೆಯಲ್ಲಿ ಟಿಕೆಟ್ ನೀಡುವ ಬಗೆಗಿನ ನಿರ್ಧಾರದ ಜೊತೆಗೆ ೧೫ ಕ್ಷೇತ್ರಗಳಿಗೆ ಉಸ್ತುವಾರಿಗಳ ಆಯ್ಕೆಯನ್ನೂ ಮಾಡಲಾಗಿದೆ.  ಅಭ್ಯರ್ಥಿಗಳನ್ನು ಗೆಲ್ಲಿಸುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಸಲಾಗುವುದು. ನಾನು ಹಾಗೂ ರಾಜ್ಯಾಧ್ಯಕ್ಷರು ಈ ವಿಚಾರ ಚರ್ಚಿಸಿದ್ದು,  ಸಮಾಲೋಚನೆ ನಡೆಸಿದ್ದೇವೆ  ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಅನರ್ಹರಿಗೆ ಟಿಕೆಟ್ ನೀಡುವುದರಿಂದ ಪಕ್ಷದಲ್ಲಿ ಮೂಲ ಕಾರ್ಯಕರ್ತರು ಬಂಡಾಯ ಏಳುವ ಸಾಧ್ಯತೆ ಕೂಡಾ ಇದ್ದು, ಅದನ್ನು ಯಾವ ರೀತಿ ಶಮನ ಮಾಡಬೇಕು ಎಂಬ ಕುರಿತೂ  ಸಭೆಯಲ್ಲಿ ಚರ್ಚಿಸಲಾಯಿತು.

ಅನರ್ಹ ಶಾಸಕರ ರಾಜೀನಾಮೆ, ತ್ಯಾಗದ ಫಲವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಅವರಿಗೆ ಟಿಕೆಟ್ ನೀಡುವ ಬಗ್ಗೆ ಈ ಹಿಂದೆಯೇ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದರು. ಆದರೆ, ಸುಪ್ರೀಂಕೋರ್ಟಿನಲ್ಲಿ ಅನರ್ಹರ ಪ್ರಕರಣದ  ವಿಚಾರಣೆಯ ಹಿನ್ಜೆಲೆಯಲ್ಲಿ ತೀರ್ಪು ನೋಡಿಕೊಂಡು ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದರು.

ಇದಕ್ಕೆ ಮುನ್ನ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ನಿವಾಸದಲ್ಲಿ ಮಾತುಕತೆ ನಡೆಸಿದ ಅನರ್ಹ ಶಾಸಕರು 2019 ನವೆಂಬರ್ 14ರ ಗುರುವಾರ ಬೆಳಗ್ಗೆ ೧೦.೩೦ಕ್ಕೆ ಬೆಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಯಾಗುವ ನಿರ್ಧಾರ ಕೈಗೊಂಡಿದ್ದರು.

ಬಿಜೆಪಿಯಲ್ಲಿ ಟಿಕೆಟ್ ನೀಡುವ ಪ್ರಕ್ರಿಯೆಯಲ್ಲಿ ಸಂತೋಷ್ ಪ್ರಮುಖ ಪಾತ್ರ ನಿರ್ವಹಿಸುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿತ್ತು.

ಅನರ್ಹ ಶಾಸಕರಾದ ಮಹೇಶ್ ಕುಮಠಳ್ಳಿ, ರಮೇಶ್ ಜಾರಕಿಹೊಳಿ, ಎಚ್.ವಿಶ್ವನಾಥ, ಬಿ.ಸಿ.ಪಾಟೀಲ, ಶಿವರಾಮ್ ಹೆಬ್ಬಾರ್, ಪ್ರತಾಪಗೌಡ, ಶಂಕರ್, ನಾರಾಯಣಗೌಡ, ಶ್ರೀಮಂತ ಪಾಟೀಲ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು. ಮಾಜಿ ಶಾಸಕ ಯೋಗೇಶ್ವರ್ ಸಹ ಸಭೆಯಲ್ಲಿ ಹಾಜರಿದ್ದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯವೈಖರಿಯನ್ನು ಇಷ್ಟಪಟ್ಟು ನಾವೆಲ್ಲರೂ ನಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರುತ್ತಿದ್ದೇವೆ ಎಂದು ಅನರ್ಹ ಶಾಸಕ ನಾರಾಯಣಗೌಡ ಹೇಳಿದ್ದರು.

ಡಕಾಯಿತರೇ ಸಚಿವರಾಗುತ್ತಾರೆ. ಹಾಗಿರುವಾಗ ನಾವು ಸಚಿವರಾಗುವುದರಲ್ಲಿ ತಪ್ಪೇನಿದೆ? ನಮ್ಮನ್ನು ಅನರ್ಹಗೊಳಿಸಿದ ವಿಧಾನಸಭಾಧ್ಯಕ್ಷರ ಆದೇಶದ ಬಗ್ಗೆ ಮೊದಲಿನಿಂದಲೂ ಆಕ್ಷೇಪಗಳಿದ್ದವು. ಪಕ್ಷದ ಸದಸ್ಯತ್ವ ಪಡೆದುಕೊಂಡ ನಂತರ ಅನರ್ಹರಿಗೆ ಟಿಕೆಟ್ ಕೊಡಬೇಕೇ ಬೇಡವೇ ಎಂಬ ಬಗ್ಗೆ ಬಿಜೆಪಿ ನಾಯಕರು ನಿರ್ಧರಿಸಲಿದ್ದಾರೆ ಎಂದು ರಮೇಶ ಜಾರಕಿಹೊಳಿ ಸುದ್ದಿಗಾರರಿಗೆ ತಿಳಿಸಿದ್ದರು.

ಯಡಿಯೂರಪ್ಪ ಅವರ ಸಮಕ್ಷಮದಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳಲಿರುವ ಅನರ್ಹ ಶಾಸಕರು ಪಕ್ಷದ ಸದಸ್ಯತ್ವವನ್ನೂ ಪಡೆದುಕೊಳ್ಳಲಿದ್ದಾರೆ ಎಂದು ಇನ್ನೊಬ್ಬ ಅನರ್ಹ ಶಾಸಕ ಬಿ.ಸಿ.ಪಾಟೀಲ ಹೇಳಿದರು.

ಉಪಚುನಾವಣೆ ಬಳಿಕ ಮೈತ್ರಿ ಅಂತ್ಯ
ಈ ಮಧ್ಯೆ, ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜನತಾದಳ (ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ’ಉಪಚುನಾವಣೆ ಬಳಿಕ ಕಾಂಗ್ರೆಸ್ ಜತೆ ಮೈತ್ರಿ ಸಾಧ್ಯವೇ ಇಲ್ಲ ಎಂದು ಹೇಳಿದರು.

No comments:

Advertisement