ಗ್ರಾಹಕರ ಸುಖ-ದುಃಖ

My Blog List

Thursday, November 14, 2019

ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ; ಪುನರ್ ಪರಿಶೀಲನಾ ಅರ್ಜಿ ವಜಾ

ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ: ಪುನರ್ ಪರಿಶೀಲನಾ ಅರ್ಜಿ ವಜಾ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿ ತಾನು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ 2019 ನವೆಂಬರ್ 14ರ ಗುರುವಾರ ವಜಾಗೊಳಿಸಿತು. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಭಾರೀ ನಿರಾಳತೆ ಲಭಿಸಿತು.

ಫ್ರಾನ್ಸ್ ಜೊತೆಗಿನ ರಫೇಲ್ ಯುದ್ಧ ವಿಮಾನ ಖರೀದಿ ಸಮರ್ಪಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ಆದರೆ ಈ ತೀರ್ಪಿನ ವಿರುದ್ಧ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹ, ಅರುಣ್ ಶೌರಿ, ವಕೀಲ ಪ್ರಶಾಂತ್ ಭೂಷಣ್ ಮತ್ತು ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಪುನರ್ ಪರಿಶೀಲನಾ ಅರ್ಜಿ ದಾಖಲಿಸಿದ್ದರು.

"ಈ ಪ್ರಕರಣದಲ್ಲಿ ತನಿಖೆ ನಡೆಸಲು ಆದೇಶ ಹೊರಡಿಸುವ ಪೂರಕ ಅಂಶಗಳಿಲ್ಲ. ಹೀಗಾಗಿ ಅರ್ಜಿಯನ್ನು ವಜಾ ಮಾಡುತ್ತಿದೇವೆ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ತ್ರಿಸದಸ್ಯ ಸುಪ್ರೀಂಕೋರ್ಟ್  ಪೀಠ ಹೇಳಿತು. ಈಗ ಎಫ್‌ಐಆರ್ ದಾಖಲಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.

ರಫೇಲ್‌ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ಈ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿದ್ದ ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆಯನ್ನು ೨೦೧೯ರ ಮೇ ೧೦ರಂದು ಪೂರ್ಣಗೊಳಿಸಿದ್ದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.

ಸಿಜೆಐ ರಂಜನ್ ಗೊಗೋಯಿ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ಕೆ.ಎಂ. ಜೋಸೆಫ್ ಅವರಿದ್ದ ನ್ಯಾಯಪೀಠ  ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿತು.

ಈ ಮುನ್ನ, ರಫೇಲ್‌ಖರೀದಿ ಒಪ್ಪಂದದಲ್ಲಿ ಅಕ್ರಮ ನಡೆದಿದ್ದು, ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ೨೦೧೮ರ ಡಿಸೆಂಬರ್ ೧೪ರಂದು ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣಕ್ಕೆ ವಜಾಗೊಳಿಸಿತ್ತು.

ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ್ದು ಏಕೆ?
ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ತಾನು ನೀಡಿದ್ದ ತೀರ್ಪಿನ ವಿರುದ್ಧ ದಾಖಲಾದ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ್ದು ಏಕೆ ಎಂಬುದಾಗಿ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ವಿವರವಾಗಿ ತಿಳಿಸಿದೆ.

ಸುಪ್ರೀಂಕೋರ್ಟ್ ವಕೀಲ ಪ್ರಶಾಂತ ಭೂಷಣ್, ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹ ಮತ್ತು ಅರುಣ್ ಶೌರಿ ಅವರು ಸಲ್ಲಿಸಿದ್ದ ಪುನರ್‌ಪರಿಶೀಲನಾ ಅರ್ಜಿಯ ಮೂಲಭೂತ ಮನವಿ ೩೬ ರಫೇಲ್ ಯುದ್ಧ ವಿಮಾನಗನ್ನು ಫ್ರಾನ್ಸಿನ ಡಸಾಲ್ಟ್ ಏವಿಯೇಶನ್ ಸಂಸ್ಥೆಯಿಂದ ಖರೀದಿಸಿದ್ದಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಲು ಪ್ರಥಮ ಮಾಹಿತಿ ವರದಿ (ಎಫ್ ಐಆರ್) ದಾಖಲಿಸಲು ನಿರ್ದೇಶನ ನೀಡಬೇಕು ಎಂಬುದಾಗಿತ್ತು.

ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದ ಇಂತಹುದೇ ವಿಷಯದ ಕುರಿತು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ನೀಡಿದ್ದ ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ತಳೆದಿದ್ದ ನಿಲುವನ್ನೇ  ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠವು ಗುರುವಾರ ನೀಡಿದ ತನ್ನ ತೀರ್ಪಿನಲ್ಲೂ ಪುನರುಚ್ಚರಿಸಿದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ’ಸಂಚಾರ ಮತ್ತು ಮೀನಿಗಾಗಿ ಗಾಳಹಾಕುವ ತನಿಖೆ ನಡೆಸುವ ಅಗತ್ಯ ತನಗೆ ಕಾಣುತ್ತಿಲ್ಲ ಎಂದು ಪೀಠ ತನ್ನ ಹಿಂದಿನ ತೀರ್ಪಿನಲ್ಲಿ ಹೇಳಿತ್ತು.

‘ಈ ವಿಮಾನಗಳ ಅಗತ್ಯವು ಎಂದೂ ವಿವಾದವಾಗಿರಲಿಲ್ಲ. ನಾವು ೩೪ನೇ ಪ್ಯಾರಾದಲ್ಲಿ ಮೇಲೆ ತಿಳಿಸಿದ ಮೂರು ಅಂಶಗಳನ್ನು ಹೊರತು ಪಡಿಸಿ, ಅದೂ ಸೀಮಿತ ವ್ಯಾಪ್ತಿಗಾಗಿ, ಪರ್‍ಯಟನೆ ಮತ್ತು ಮೀನಿಗಾಗಿ ಗಾಳಹಾಕುವ ತನಿಖೆಯ ಯತ್ನದ ಅಗತ್ಯವಿದೆ ಎಂದು ಈ ನ್ಯಾಯಾಲಯ ಪರಿಗಣಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ಗುರುವಾರದ ತೀರ್ಪಿನಲ್ಲಿ ತಿಳಿಸಿದೆ.
‘ಇದಲ್ಲದೆ, ದಾಖಲೆಯಲ್ಲಿ ಎದ್ದು ಕಾಣುವಂತಹ ಲೋಪ ಇಲ್ಲದ ಹೊರತು, ಈ ಮರುಪರಿಶೀಲನಾ ಅರ್ಜಿಗಳನ್ನು ಅಂಗೀಕರಿಸಬೇಕಾದ ಅಗತ್ಯವಿಲ್ಲ ಎಂಬ ವಾಸ್ತವಾಂಶವನ್ನೂ ನಾವು ಗಮನಿಸದಿರಲು ಸಾಧ್ಯವಿಲ್ಲ ಎಂದೂ ಪೀಠ ಹೇಳಿದೆ.

ಬೆಲೆ ನಿಗದಿಗೆ ಸಂಬಂಧಿಸಿದಂತೆ, ಒದಗಿಸಲಾದ ಮಾಹಿತಿ ತನಗೆ ತೃಪ್ತಿ ನೀಡಿದೆ ಎಂದು ಪೀಠ ಹೇಳಿದೆ.
ಅರ್ಜಿದಾರರು ತಮ್ಮ ಮನವಿಯಲ್ಲಿ ಎತ್ತಿ ಹಿಡಿದಿದ್ದ ಯುದ್ಧ ವಿಮಾನ ಖರೀದಿಗೆ ಕಾರಣವಾದ ನಿರ್ಣಯದ ಮೇಲಿನ ಅಭಿಪ್ರಾಯದಲ್ಲಿನ ಲೋಪದೋಷಗಳ ವಿಷಯವನ್ನೂ ಸಿಜೆಐ ನೇತೃತ್ವದ ಪೀಠವು ಗಣನೆಗೆ ತೆಗೆದುಕೊಂಡಿದೆ.

‘ಒಪ್ಪಂದದ ಪ್ರತಿಯೊಂದು ಅಂಶವನ್ನು ನಿರ್ಧರಿಸಲು ಅರ್ಜಿದಾರರು ತಮ್ಮನ್ನು ತಾವೇ ಮೇಲ್ಮನವಿ ಪ್ರಾಧಿಕಾರ ಎಂಬುದಾಗಿ ಬಿಂಬಿಸಿಕೊಳ್ಳಲು ಯತ್ನಿಸಿದಂತೆ ಕಾಣುತ್ತಿದೆ ಮತ್ತು ಅದನ್ನೇ ಮಾಡುವಂತೆ ನ್ಯಾಯಾಲಯಕ್ಕೂ ಹೇಳಿದ್ದಾರೆ ಎಂದು ಹೇಳಿದ ಕೋರ್ಟ್, ’ಇದು ಚಲಾಯಿಸಬೇಕಾದ ವ್ಯಾಪ್ತಿ ಎಂದು ನಾವು ನಂಬುವುದಿಲ್ಲ ಎಂದು ಹೇಳಿದೆ.

ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯ ಮಾರ್ಗದಲ್ಲಿ ಅಭಿಪ್ರಾಯಗಳನ್ನು ನೀಡಿರುವುದನ್ನು ನಾವು ನಿಸ್ಸಂಶಯವಾಗಿ ಗಮನಿಸಿದ್ದೇವೆ. ಇವು ನಿರ್ಣಯಕ್ಕಿಂತ ಭಿನ್ನವಾಗಿರಬಹುದು, ಆದರೆ ಯಾವುದೇ ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯು ಚರ್ಚೆಗಳು ಮತ್ತು ತಜ್ಞರ ಅಭಿಪ್ರಾಯವನ್ನು ಎದುರುನೋಡುತ್ತದೆ ಮತ್ತು ಸಮರ್ಥ ಪ್ರಾಧಿಕಾರದ ಜೊತೆಗೆ ಅಂತಿಮ ಚರ್ಚೆ ನಡೆಸುತ್ತದೆ ಎಂದು ಪೀಠ ಹೇಳಿದೆ.

‘ಹಲವಾರು ಅಭಿಪ್ರಾಯಗಳು ದಾಖಲೆಯಲ್ಲಿ ಕಂಡು ಬರದೇ ಇರಲು ಸಾಧ್ಯವಿಲ್ಲ, ಈ ಎಲ್ಲ ಅಭಿಪ್ರಾಯಗಳನ್ನೂ  ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಪಾಲಿಸಬೇಕೆಂದು ಹೇಳಲು ಸಾಧ್ಯವಿಲ್ಲ. ಹಾಗೆ ಮಾಡುವುದು ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿನ ಚರ್ಚೆಯ ಉದ್ದೇಶವನ್ನೇ ಪರಾಭವಗೊಳಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

‘ಪುನರ್ ಪರಿಶೀಲನಾ ಮನವಿಯಲ್ಲಿ ಅರ್ಜಿದಾರರು ಸೋರಿಕೆಯಾದ ದಾಖಲೆಗಳನ್ನು ಉಲ್ಲೇಖಿಸಿದ್ದಾರೆ. ರಕ್ಷಣಾ ಇಲಾಖೆಯು ೨೦೧೫ರಲ್ಲಿ ಪ್ರಧಾನ ಮಂತ್ರಿಯ ಸಚಿವಾಲಯವು ಫ್ರಾನ್ಸ್ ಜೊತೆಗೆ ನಡೆಸಿದ ’ಪರ್‍ಯಾಯ ಮಾತುಕತೆಗಳನ್ನು ಆಕ್ಷೇಪಿಸಿತ್ತು ಎಂಬುದಾಗಿ ಈ ದಾಖಲೆಗಳು ಸೂಚಿಸಿವೆ. ಏಳು ಸದಸ್ಯರು ಭಾರತೀಯ ಮಾತುಕತೆ ತಂಡದ ತಜ್ಞರಾಗಿದ್ದ ರಕ್ಷಣಾ ಸಚಿವಾಲಯದ ಮೂವರು ಹಿರಿಯ ಅಧಿಕಾರಿಗಳು ಬರೆದ ಭಿನ್ನ ಟಿಪ್ಪಣಿಯನ್ನೂ ಪುನರ್ ಪರಿಶೀಲನಾ ಮನವಿ ಉಲ್ಲೇಖಿಸಿದೆ ಎಂದು ತೀರ್ಪು ಹೇಳಿದೆ.

ಪುನರ್ ಪರಿಶೀಲನಾ ಅರ್ಜಿಗಳು ಯಾವುದೇ ಅರ್ಹತೆಯನ್ನೂ ಹೊಂದಿಲ್ಲ ಮತ್ತು ಈ ಕಾರಣಕ್ಕಾಗಿ ಅವುಗಳನ್ನು ವಜಾಗೊಳಿಸಲಾಗಿದೆ. ಮತ್ತೊಮ್ಮೆ, ಭಾರತೀಯ ಸಂವಿಧಾನದ ೩೨ನೇ ಪರಿಚ್ಛೇದದ ವಾಪ್ತಿಯನ್ನು ಆಧರಿಸಿ, ನಮ್ಮ ಮೂಲ ನಿರ್ಣಯವನ್ನು ನಾವು ಪುನರುಚ್ಚರಿಸುತ್ತಿದ್ದೇವೆ ಎಂದು ಪೀಠವು ತನ್ನ ತೀರ್ಪನ್ನು ಸಮಾಪ್ತಿಗೊಳಿಸಿದೆ.

No comments:

Advertisement