ಭಾರತದ
ಮುಖ್ಯ ನ್ಯಾಯಮೂರ್ತಿ ಕಚೇರಿ ಆರ್‌ಟಿಐ ವ್ಯಾಪ್ತಿಗೆ
ಸುಪ್ರೀಂಕೋರ್ಟ್
ಪಂಚ ಸದಸ್ಯ ಸಂವಿಧಾನ ಪೀಠದ ತೀರ್ಪು
ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿಯವರ (ಸಿಜೆಐ) ಕಚೇರಿಯು ಪಾರದರ್ಶಕತೆಯ
ಕಾನೂನಾಗಿರುವ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ ಎಂದು ಭಾರತದ ಮುಖ್ಯ
ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು 2019 ನವೆಂಬರ್ 13ರ ಬುಧವಾರ
ಮಹತ್ವದ ತೀರ್ಪು ನೀಡಿತು.
’ಮಾಹಿತಿಯನ್ನು ಮುಚ್ಚಿಡುವ ಮೂಲಕ ನ್ಯಾಯಾಂಗ ಸ್ವಾತಂತ್ರ್ಯ
ಪಡೆಯಲು ಸಾಧ್ಯವಿಲ್ಲ’ ಎಂದು ಪೀಠ ಹೇಳಿತು.
‘ನ್ಯಾಯಾಂಗ
ಸ್ವಾತಂತ್ರ್ಯ ಮತ್ತು ಉತ್ತರದಾಯಿತ್ವವು ಪರಸ್ಪರ ಕೈ ಹಿಡಿದುಕೊಂಡೇ ಸಾಗುತ್ತವೆ.. ಪಾರದರ್ಶಕತೆಯು
ಸ್ವಾತಂತ್ರ್ಯವನ್ನು ಬಲಪಡಿಸುತ್ತದೆ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಹೇಳಿದರು. ನ್ಯಾಯಮೂರ್ತಿಗಳಾದ
ಸಂಜೀವ್ ಖನ್ನಾ, ದೀಪಕ್ ಗುಪ್ತ, ಎನ್‌ವಿ ರಮಣ ಮತ್ತು ಡಿವೈ ಚಂದ್ರಚೂಡ್ ಅವರು ಪೀಠದ ಇತರ ಸದಸ್ಯರಾಗಿದ್ದರು.
‘ನ್ಯಾಯಾಂಗ
ಸ್ವಾತಂತ್ರ್ಯ ಎಂದರೆ ನ್ಯಾಯಾಧೀಶರು ಕಾನೂನಿಗಿಂತ ಮೇಲೆ ಎಂದು ಅರ್ಥವಲ್ಲ’ ಎಂದು
ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.
ಸಿಜೆಐ
ಕಚೇರಿಯು ಸಾರ್ವಜನಿಕ ಪ್ರಾಧಿಕಾರವಾಗಿದೆ ಎಂಬುದಾಗಿ ಹೇಳಿ ಆರ್‌ಟಿಐ ಕಾರ್‍ಯಕರ್ತ ಎಸ್‌ಸಿ ಅಗರ್‌ವಾಲ್
ಅವರು ಕೋರಿದ್ದಂತೆ ನ್ಯಾಯಾಧೀಶರ ಆಸ್ತಿ ವಿವರ ನೀಡುವಂತೆ ಸುಪ್ರೀಂಕೋರ್ಟ್ ಸೆಕ್ರೆಟರಿ ಜನರಲ್ ಅವರಿಗೆ
ನಿರ್ದೇಶನ ನೀಡಿ ೨೦೧೦ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಕೋರ್ಟಿನ
ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ ಸಲ್ಲಿಸಿದ್ದ ಅರ್ಜಿಯ ಮೇಲೆ, ನವೆಂಬರ್ ೧೭ರಂದು ನಿವೃತ್ತರಾಗಲಿರುವ
ಸಿಜೆಐ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಪೀಠವು ಈ ತೀರ್ಪನ್ನು ನೀಡಿದೆ.
ಸುಪ್ರೀಂಕೋರ್ಟ್
೧೯೯೭ರ ಮೇ ೧೭ರಂದು ಕೈಗೊಂಡಿದ್ದ ನಿರ್ಣಯದ ಪ್ರತಿಯೊಂದನ್ನು ನೀಡುವಂತೆ ಅಗರ್‌ವಾಲ್ ಅವರು ೨೦೦೭ರಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಕೋರಿದ್ದರು.
ಈ ನಿರ್ಣಯದ ಪ್ರಕಾರ ಎಲ್ಲ ನ್ಯಾಯಮೂರ್ತಿಗಳು ತಾವು ಹೊಂದಿರುವ ಆಸ್ತಿಯನ್ನು ಘೋಷಿಸುವುದು ಕಡ್ಡಾಯವಾಗಿತ್ತು.
೨೦೧೦ರಲ್ಲಿ
ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಎಪಿ ಶಾ, ವಿಕ್ರಮ್ ಜಿತ್ ಸೇನ್ ಮತ್ತು ಎಸ್.ಮುರಳೀಧರ್ ಅವರನ್ನು
ಒಳಗೊಂಡ ದೆಹಲಿ ಹೈಕೋರ್ಟಿನ ತ್ರಿಸದಸ್ಯ ಪೀಠವು ಸಿಜೆಐ ಕಚೇರಿಯು ಸಾರ್ವಜನಿಕ ಪ್ರಾಧಿಕಾರವಾಗಿದೆ.
ಆದ್ದರಿದ ಅದು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ ಎಂದು ತೀರ್ಪು ನೀಡಿತ್ತು. ಆದರೆ
ಈ ತೀರ್ಪನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು.
ಮೇಲ್ಮನವಿಯನ್ನು
ಅಂಗೀಕರಿಸಿದ್ದ ಸುಪ್ರೀಂಕೋರ್ಟ್ ಪೀಠವು, ಹೈಕೋರ್ಟ್ ತೀರ್ಪಿನ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಿತ್ತು.
‘ಮಾಹಿತಿ
ಹಕ್ಕು ಕಾಯ್ದೆಯು ನಾಗರಿಕರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕಿಗೆ ಮನ್ನಣೆಯನ್ನು
ಮಾತ್ರ ನೀಡುತ್ತದೆ. ನ್ಯಾಯಾಂಗದ ಸ್ವಾತಂತ್ರ್ಯವು ಸಂವಿಧಾನದ ಮೂಲ ರಚನೆಯ ಭಾಗವಾಗಿದೆ. ನ್ಯಾಯಾಂಗದ
ಸ್ವಾತಂತ್ರ್ಯ ಮತ್ತು ಮುಕ್ತ ಭಾಷಣ ಹಾಗೂ ಅಭಿವ್ಯಕ್ತಿಯ ಮೂಲಭೂತ ಹಕ್ಕು ಅತ್ಯಂತ ಮೌಲ್ಯಯುತವಾದುದಾಗಿದ್ದು
ಅವುಗಳನ್ನು ಸಮತೋಲನಗೊಳಿಸಬೇಕಾದ ಅಗತ್ಯವಿದೆ. ಹಾಲಿ ಚರ್ಚೆಯು ಆರೋಗ್ಯಶಾಲಿ ರಾಷ್ಟ್ರದ ಸಂಕೇತವಾಗಿದೆ’ ಎಂದು
ದೆಹಲಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡುತ್ತಾ ಸುಪ್ರೀಂಕೋರ್ಟ್ ಹೇಳಿತ್ತು.
ಈ ವರ್ಷದ
ಆದಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಾದ ಮಂಡಿಸಿದ್ದ ವಕೀಲ ಪ್ರಶಾಂತ ಭೂಷಣ್ ಅವರು ’ಮಾಹಿತಿಯನ್ನು
ಬಹಿರಂಗ ಪಡಿಸುವುದು ಸರಿಯಾದ ಜನರ ನೇಮಕಾತಿಯ ಖಾತರಿಗೆ ಅತ್ಯುತ್ತಮ ರಕ್ಷಣೆಯಾಗಿದೆ. ಮಾಹಿತಿ ಬಹಿರಂಗವು
ಸಾರ್ವಜನಿಕವಾಗಿರಬೇಕು ಮತ್ತು ಸಾರ್ವಜನಿಕರಿಗಾಗಿ ಇರಬೇಕು’ ಎಂದು
ಹೇಳಿದ್ದರು.
ಸುಪ್ರೀಂಕೋರ್ಟಿನ ಪರ ಹಾಜರಾಗಿದ್ದ ಭಾರತದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ’ಪೂರ್ಣ ಪಾರದರ್ಶಕತೆಯು ನ್ಯಾಯಾಂಗ ಸ್ವಾತಂತ್ರ್ಯದ ಮೇಲೆ ಪ್ರಭಾವ ಬೀರುತ್ತದೆ ಮತ್ತು ನ್ಯಾಯಾಧೀಶರಿಗೆ ಸಂಬಂಧಿಸಿದ ವಿವರಗಳನ್ನು ಬಹಿರಂಗ ಪಡಿಸಬಾರದು’ ಎಂದು ವಾದಿಸಿದ್ದರು.
ಸುಪ್ರೀಂಕೋರ್ಟಿನ ಪರ ಹಾಜರಾಗಿದ್ದ ಭಾರತದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ’ಪೂರ್ಣ ಪಾರದರ್ಶಕತೆಯು ನ್ಯಾಯಾಂಗ ಸ್ವಾತಂತ್ರ್ಯದ ಮೇಲೆ ಪ್ರಭಾವ ಬೀರುತ್ತದೆ ಮತ್ತು ನ್ಯಾಯಾಧೀಶರಿಗೆ ಸಂಬಂಧಿಸಿದ ವಿವರಗಳನ್ನು ಬಹಿರಂಗ ಪಡಿಸಬಾರದು’ ಎಂದು ವಾದಿಸಿದ್ದರು.
ಸಿಜೆಐ
ಅವರ ಕಚೇರಿಯು ಆರ್‌ಟಿಐ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಯನ್ನು ೨೦೧೭ರಲ್ಲಿ
ಸಂವಿಧಾನ ಪೀಠಕ್ಕೆ ವಹಿಸಲಾಗಿತ್ತು. ಪ್ರಸ್ತುತ ಮುಖ್ಯ ನ್ಯಾಯಮೂರ್ತಿಯಾಗಿರುವ ರಂಜನ್ ಗೊಗೋಯಿ ನೇತೃತ್ವದ
ತ್ರಿಸದಸ್ಯ ಪೀಠವು ವಿಷಯವನ್ನು ಪಂಚ ಸದಸ್ಯ ಸಂವಿಧಾನ ಪೀಠಕ್ಕೆ ಒಪ್ಪಿಸಿತ್ತು.
ನವೆಂಬರ್
೧೭ರಂದು ನಿವೃತ್ತರಾಗುತ್ತಿರುವ ಸಿಜೆಐ ರಂಜನ್ ಗೊಗೋಇ ಅವರ ಮುಂದೆ ನಿರ್ಧಾರಗೊಳ್ಳಬೇಕಾಗಿರುವ ಹಲವು
ಪ್ರಮುಖ ಪ್ರಕರಣಗಳಲ್ಲಿ ಇದೂ ಸೇರಿತ್ತು. ಕೇರಳದ ಶಬರಿಮಲೈ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ
ನೀಡಿದ್ದ ಸುಪ್ರೀಂಕೋರ್ಟಿನ ಆದೇಶದ ಮೇಲೆ ಸಲ್ಲಿಸಲಾಗಿದ್ದ ಪುನರ್ ಪರಿಶೀಲನಾ ಅರ್ಜಿ, ಕಾಂಗ್ರೆಸ್
ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಸಲ್ಲಿಸಲಾಗಿದ್ದ ಮಾನನಷ್ಟ ಪ್ರಕರಣ, ಮತ್ತು ರಫೇಲ್ ಯುದ್ಧ ವಿಮಾನ
ಒಪ್ಪಂದಕ್ಕೆ ಸಂಬಂಧಿಸಿದ ಆದೇಶ ವಿರುದ್ಧದ ಪುನರ್ ಪರಿಶೀಲನಾ ಅರ್ಜಿಗಳನ್ನು ಪೀಠ ಗುರುವಾರ ಕೈಗೆತ್ತಿಕೊಳ್ಳಲಿದೆ.
ಸಿಜೆಐ
ನೇತೃತ್ವದ ಸಂವಿಧಾನ ಪೀಠವು ಈಗಾಗಲೇ ಅಯೋಧ್ಯಾ ಭೂವಿವಾದ ಪ್ರಕರಣದಲ್ಲಿ ತನ್ನ ಚಾರಿತ್ರಿಕ ತೀರ್ಪನ್ನು
ನೀಡಿ ವಿವಾದಾತ್ಮಕ ಭೂಮಿಯನ್ನು ಹಿಂದುಗಳಿಗೆ ನೀಡುವಂತೆಯೂ, ಮುಸ್ಲಿಮರಿಗೆ ಪರ್‍ಯಾಯ ಭೂಮಿ ನೀಡುವಂತೆಯೂ
ಆದೇಶ ನೀಡಿದೆ. ಸುಪ್ರೀಂಕೋರ್ಟಿನ ಮುಂದೆ ಇದ್ದ ಇನ್ನೊಂದು ಮಹತ್ವದ ಪ್ರಕರಣದಲ್ಲಿ ಕರ್ನಾಟಕದ ಶಾಸಕರನ್ನು
ಅನರ್ಹಗೊಳಿಸಿದ ವಿಧಾನಸಭಾಧ್ಯಕ್ಷರ ಆದೇಶವನ್ನು ಭಾಗಶಃ ಎತ್ತಿ ಹಿಡಿದ ಸುಪ್ರೀಕೋರ್ಟ್ ಡಿಸೆಂಬರ್ ೫ರ
ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹ ಶಾಸಕರಿಗೆ ಅವಕಾಶ ನೀಡಿದೆ. ಶಾಸಕರನ್ನು ಅನರ್ಹಗೊಳಿಸುವ ವಿಧಾನಸಭಾಧ್ಯಕ್ಷರ
ಅಧಿಕಾರವನ್ನು ಮಾನ್ಯ ಮಾಡಿದ ಪೀಠವು, ಶಾಸಕರನ್ನು ಶಾಸನಸಭೆಯ ಪೂರ್ತಿ ಅವಧಿಗೆ ಅನರ್ಹಗೊಳಿಸುವ ಮತ್ತು
ಉಪಚುನಾವಣೆಯಲ್ಲಿ ಸ್ಪರ್ಧಿಸದಂತೆ ಆದೇಶ ಮಾಡುವ ಅಧಿಕಾರ ಸಭಾಧ್ಯಕ್ಷರಿಗೆ ಇಲ್ಲ ಎಂದು ಹೇಳಿದೆ.
No comments:
Post a Comment