My Blog List

Friday, November 8, 2019

ಅಯೋಧ್ಯೆಗೆ ೪೦೦೦ ಅರೆಸೇನಾ ಪಡೆ, ದೇಶಾದ್ಯಂತ ಕಟ್ಟೆಚ್ಚರಕ್ಕೆ ಸೂಚನೆ

ಅಯೋಧ್ಯೆಗೆ ೪೦೦೦ ಅರೆಸೇನಾ ಪಡೆ,
ದೇಶಾದ್ಯಂತ ಕಟ್ಟೆಚ್ಚರಕ್ಕೆ ಸೂಚನೆ
ನವದೆಹಲಿ/ ಅಯೋಧ್ಯೆ: ವಿವಾದಾತ್ಮಕ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ಪಂಚ ಸದಸ್ಯ ಸಂವಿಧಾನ ಪೀಠದ ಚಾರಿತ್ರಿಕ ತೀರ್ಪು ಸನಿಹವಾಗುತ್ತಿದ್ದಂತೆಯೇ ಅಯೋಧ್ಯೆ ಸೇರಿದಂತೆ ಉತ್ತರ ಪ್ರದೇಶ ಹಾಗೂ ದೇಶಾದ್ಯಂತ ಶಾಂತಿ ಸುವ್ಯವಸ್ಥೆ ಪಾಲನೆಗಾಗಿ ಭದ್ರತೆ ಬಿಗಿಗೊಳಿಸಲಾಗುತ್ತಿದ್ದು, ಕೇಂದ್ರ ಸರ್ಕಾರವು ಅಯೋಧ್ಯೆಗೆ ೪೦೦೦ ಅರೆಸೇನಾ ಪಡೆ ಸಿಬ್ಬಂದಿಯನ್ನು 2019 ನವೆಂಬರ್ 07 ಗುರುವಾರ ರವಾನಿಸಿತು. ರಾಜ್ಯಗಳಲ್ಲೂ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿತು.

ಮಧ್ಯೆ, ಅಯೋಧ್ಯೆಯ ಕರಸೇವಕಪುರಂನಲ್ಲಿ ರಾಮಮಂದಿರಕ್ಕಾಗಿ ನಿರ್ಮಾಣಕ್ಕಾಗಿ ದಶಕಗಳಿಂದ ನಡೆಯುತ್ತಿದ್ದ ಶಿಲ್ಪಗಳ ಕೆತ್ತನೆ ಕಾರ್ಯ ಶಿಲ್ಪಿಯ ನಿಧನದ ಪರಿಣಾಮವಾಗಿ ಸ್ಥಗಿತಗೊಂಡಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು .೧೭ರಂದು ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ, ಅವರ ನಿರ್ಗಮನಕ್ಕೆ ಮುನ್ನವೇ ಅಯೋಧ್ಯೆಯ ಭೂ ವಿವಾದಕ್ಕೆ ಪರಿಹಾರ ಒದಗಿಸುವ ತೀರ್ಪು ಹೊರಬೀಳಲಿದೆ ಎಂದು ದೇಶಾದ್ಯಂತ ನಿರೀಕ್ಷಿಸಲಾಗುತ್ತಿದ್ದು, ತೀರ್ಪಿನ ಬಳಿಕ ಯಾವುದೇ ಕಾರಣಕ್ಕೂ ಶಾಂತಿ, ಸೌಹಾರ್ದ ಕದಡದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲೆಡೆ ಭದ್ರತಾಸಿಬ್ಬಂದಿ ಹಾಗೂ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾರಂಭಿಸಿದ್ದಾರೆ.

ಏತನ್ಮಧ್ಯೆ, ರಾಮ ಮಂದಿರಕ್ಕಾಗಿ ಶಿಲ್ಪ, ಸ್ಥಂಭ ಇತ್ಯಾದಿಗಳ ನಿರ್ಮಾಣಕ್ಕಾಗಿ ಕಲ್ಲು ಕೆತ್ತನೆ ಮಾಡುವನಿರ್ಮಾಣ ಕಾರ್ಯಶಾಲೆ ಶಿಲ್ಪಿಯು ಇತ್ತೀಚೆಗಷ್ಟೇ ನಿಧನರಾಗಿದ್ದು ಹಿನ್ನೆಲೆಯಲ್ಲಿ ಇದೀಗ ಕೆತ್ತನೆ ಕಾರ್ಯವೂ ಸ್ಥಗಿತಗೊಂಡಿದೆ. ಕಳೆದ ಕೆಲವು ತಿಂಗಳಿಂದ ಶಿಲ್ಪಿ ಏಕಾಂಗಿಯಾಗಿಯೇ ಕೆತ್ತನೆ ಕಾರ್ಯ ಕೆಲಸ ನಿರ್ವಹಿಸುತ್ತಿದ್ದು, ಕಳೆದ ಮೂರು ದಶಕಗಳಲ್ಲಿ ಬಹುಶಃ ಇದೇ  ಮೊದಲ ಬಾರಿಗೆ   ಕಾರ್ಯಶಾಲೆಯಿಂದ ಬರುತ್ತಿದ್ದ ಕಲ್ಲು ಕೆತ್ತನೆಯ ಸದ್ದು ನಿಂತಿದೆ. ಇದರ ಪುನರಾರಂಭದ ದಿನವನ್ನು ಕಾರ್ಯಶಾಲೆಯ ಉಸ್ತುವಾರಿ ವಹಿಸಿಕೊಂಡಿರುವ ರಾಮ ಜನ್ಮಭೂಮಿ ನ್ಯಾಸವು ಸಭೆ ಸೇರಿದ ಬಳಿಕ ನಿರ್ಧರಿಸಲಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಭಕ್ತರು ಕಾರ್ತಿಕ ಪೂರ್ಣಿಮೆ ಸ್ನಾನಕ್ಕಾಗಿ ಅಯೋಧ್ಯೆಗೆ ಆಗಮಿಸಿದ್ದು, ಈಗಾಗಲೇ ಅಲ್ಲಿ ಕೆತ್ತಲಾಗಿರುವ ಕಲ್ಲುಗಳಿಗೆ ಭಕ್ತಿಯಿಂದ ಪ್ರದಕ್ಷಿಣೆ ಬಂದು, ಕಲ್ಲಗಳನ್ನು ಮುಟ್ಟಿ ನಮಸ್ಕರಿಸುತ್ತಿದ್ದಾರೆ ಮತ್ತು ಅದರ ಎದುರು ಸೆಲ್ಫೀ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.

ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಕಾರ್ಯಶಾಲೆಯಲ್ಲಿ ೧೯೯೦ರಲ್ಲಿ ಮುಲಾಯಂ ಸಿಂಗ್ ಯಾದವ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಕೆತ್ತನೆ ಕಾರ್ಯಗಳು ಆರಂಭವಾಗಿದ್ದವು. ಬಳಿಕ ಕೆತ್ತನೆ ಕಾರ್ಯ ನಿರಂತರವಾಗಿ ನಡೆದುಕೊಂಡು ಬಂದಿತ್ತು. ೧೯೯೨ರಲ್ಲಿ ವಿವಾದಾತ್ಮಕ ಬಾಬರಿ ಮಸೀದಿ ಕಟ್ಟಡ ಧ್ವಂಸಗೊಂಡು, ಆರೆಸ್ಸೆಸ್, ವಿಹಿಂಪ ಮತ್ತಿತರ ಸಂಘಟನೆಗಳನ್ನು ನಿಷೇಧಿಸಿದಾಗಲೂ, ಕೆತ್ತನೆ ಕಾರ್ಯ ಸ್ಥಗಿತಗೊಂಡಿರಲಿಲ್ಲ.

ರಾಮ ಮಂದಿರದ ಸಲುವಾಗಿ ಶೇ.೬೫ರಷ್ಟು ಕೆತ್ತನೆ ಕಾರ್ಯವು ಈಗಾಗಲೇ ಪೂರ್ಣಗೊಂಡಿದೆ. ಅಖಿಲೇಶ್ ಯಾದವ್ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ರಾಜಸ್ಥಾನ ಮತ್ತು ಗುಜರಾತಿನಿಂದ ಇಲ್ಲಿಗೆ ಕಲ್ಲುಗಳನ್ನು ತರಲಾಗಿದ್ದು, ಕೆತ್ತನೆ ಕಾರ್ಯ ಅವಿರತವಾಗಿ ಮುಂದುವರೆದಿತ್ತು. ಆದರೆ ಇತ್ತೀಚೆಗೆ ಕಾರ್ಯಶಾಲೆಯ ಪ್ರಧಾನ ಶಿಲ್ಪಿ ನಿಧನರಾದ ಬಳಿಕ ಕೆತ್ತನೆ ಕಾರ್ಯ ಸ್ಥಗಿತಗೊಂಡಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವಷ್ಟೇ ರಾಮ ಜನ್ಮಭೂಮಿ ನ್ಯಾಸವು ಸಭೆ ಸೇರಿ, ಮತ್ತಷ್ಟು  ಶಿಲ್ಪಿಗಳನ್ನು ಸೇರಿಸಿಕೊಳ್ಳುವ ಹಾಗೂ ಕೆತ್ತನೆ ಕಾರ್ಯ ಪುನಾರಂಭಿಸುವ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ಸ್ಥಳೀಯ ವಿಶ್ವ ಹಿಂದೂ ಪರಿಷತ್ ವಕ್ತಾರ ಶರದ್ ಶರ್ಮಾ ಅವರು ಮಾಧ್ಯಮಗಳಿಗೆ ತಿಳಿಸಿದರು.

ರಾಜೀವ ಗಾಂಧಿ ಅವರು ದೇಶದ ಪ್ರಧಾನಿಯಾಗಿದ್ದ ಸಮಯದಲ್ಲಿ ೧೯೮೯ರ ನವೆಂಬರ್ ೧೦ರಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದಿತ್ತು. ೧೯೯೦ರ ಆಗಸ್ಟ್ ೩೦ರಂದು ಕಾರ್ಯಶಾಲೆಯು ಅಸ್ತಿತ್ವಕ್ಕೆ ಬಂದಿತ್ತು. ಸುಮಾರು ಏಳು ವರ್ಷಗಳ ಕಾಲ ಕೆತ್ತನೆ ಕಾರ್ಯ ಮುಂದುವರೆದಿತ್ತು. ಬಳಿಕ ಹೈಕೋರ್ಟ್ ಪ್ರಕರಣಗಳಿಂದಾಗಿ ಸ್ವಲ್ಪ ಕಾಲ ಕೆತ್ತನೆ ಕೆಲಸ ಸ್ಥಗಿತಗೊಂಡಿತ್ತುಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ, ಕೆತ್ತನೆ ಕಾರ್ಯವು ಪುನಾರಂಭಗೊಂಡಿತ್ತು.

ಅಯೋಧ್ಯೆಗೆ ಭೇಟಿ ನೀಡುವವರಿಗೆ ಕೆತ್ತನೆ ಕಾರ್ಯಶಾಲೆಯು ಪ್ರಧಾನ ಆಕರ್ಷಣೆಯಾಗಿತ್ತು. ರಾಮ ಜನ್ಮಭೂಮಿ - ಬಾಬರಿ ಮಸೀದಿಯ ಸ್ಥಳದಿಂದ ಇದು ಕೇವಲ ಕಿ.ಮೀ. ದೂರದಲ್ಲಿದೆ.
ಈನಡುವೆ, ನವೆಂಬರ್ ೧೭ಕ್ಕೆ ಮುನ್ನ ಯಾವುದೇ ಸಮಯದಲ್ಲಾದರೂ ಅಯೋಧ್ಯಾ ಭೂ ವಿವಾದದ ತೀರ್ಪು ಹೊರಬೀಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕಟ್ಟೆಚ್ಚರದಿಂದ ಇರುವಂತೆ  ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದರು.

ಎಲ್ಲ ಸೂಕ್ಷ್ಮಪ್ರದೇಶಗಳಲ್ಲೂ ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ, ದೇಶದ ಯಾವುದೇ ಮೂಲೆಯಲ್ಲೂ ಅಹಿತಕರ ಘಟನೆಗಳು ಘಟಿಸದಂತೆ ತಡೆಯಲು ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು. ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಉತ್ತರ ಪ್ರದೇಶ ಸರ್ಕಾರಕ್ಕೆ ನೆರವಾಗಲು ಉತ್ತರ ಪ್ರದೇಶಕ್ಕೆ  ನಿರ್ದಿಷ್ಟವಾಗಿ ಅಯೋಧ್ಯೆಗೆ ೪೦ ಕಂಪೆನಿ ಅರೆಸೇನಾ ಪಡೆಗಳನ್ನು ಕೇಂದ್ರವು ಕಳುಹಿಸಿದೆ. ಪ್ರತಿ ಕಂಪೆನಿಯಲ್ಲಿ ತಲಾ ೧೦೦ ಮಂದಿ ಸಿಬ್ಬಂದಿ ಇದ್ದಾರೆ ಎಂದು ಅಧಿಕಾರಿ ಹೇಳಿದರು.

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟಕ್ಕೆ ಮತ್ತು ಸರ್ಕಾರದ ಉನ್ನತ ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ಅಯೋಧ್ಯೆ ವಿಚಾರದಲ್ಲಿ ತೀರ್ಪು ನೀಡಿದ ಬಳಿಕ ದೇಶಾದ್ಯಂತ ಶಾಂತಿ, ಸೌಹಾರ್ದಕ್ಕೆಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದರು.
ಶಾಂತಿ ಕಾಯ್ದುಕೊಳ್ಳುವಂತೆ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಮನವಿ ಮಾಡಿವೆ. ಜಮಾತ್ ಉಲೇಮಾ --ಹಿಂದ್ ಅಧ್ಯಕ್ಷ ಅರ್ಶದ್ ಮದನಿ ಅವರು ಇಸ್ಲಾಮಿಕ್ ಕಾನೂನಿನ ಪ್ರಕಾರ ಬಾಬರಿ ಮಸೀದಿಯು ಒಂದು ಮಸೀದಿ ಎಂಬುದಾಗಿ ತಾನು ನಂಬುವುದಾದರೂ ಸಮುದಾಯವು ಸುಪ್ರೀಂಕೋರ್ಟ್ ತೀರ್ಪನ್ನು ಅಂಗೀಕರಿಸಲು ಇಚ್ಛಿಸಿದೆ ಎಂದು ಹೇಳಿದರು.

ನಾವು ಬೀದಿಗಳಿಗೆ ಇಳಿಯಲಿಲ್ಲ, ಬದಲಿಗೆ ಕಾನೂನು ಹೋರಾಟವನ್ನು ಆಯ್ಕೆ ಮಾಡಿಕೊಂಡೆವು. ನಾವು ಸುಪ್ರೀಂಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದೇವೆ. ಅದು ನಮ್ಮ ಪರ ಬರುವುದು ಎಂಬುದು ನಮ್ಮ ಭಾವನೆ. ಆದರೆ ದೇಶ, ಕಾನೂನು ಮತ್ತು ಸುಪ್ರೀಂಕೋರ್ಟ್ ನಮ್ಮದು ಎಂದೂ ನಾವು ಸಹಸ್ರಬಾರಿ ಹೇಳಿದ್ದೇವೆ. ನಾವು ತೀರ್ಪನ್ನು ಅಂಗೀಕರಿಸುತ್ತೇವೆಎಂದು ಹಿರಿಯ ಜಮಾತೆ ನಾಯಕ ಹೇಳಿದರು.

ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸಂವಿಧಾನಪೀಠವು ದೈನಂದಿನ ವಿಚಾರಣೆಗಳನ್ನು ಅಕ್ಟೋಬರ್ ೧೬ರಂದು ಮುಕ್ತಾಯಗೊಳಿಸಿದ್ದು, ಯಾವುದೇ ದಿನ ತೀರ್ಪು ನೀಡುವ ನಿರೀಕ್ಷೆ ಇದೆ. ಅಯೋಧ್ಯೆಯ ವಿವಾದಿತ .೭೭ ಎಕರೆ ಭೂಮಿಯನ್ನು ನಿರ್ಮೋಹಿ ಅಖಾಡ, ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಮತ್ತು ರಾಮಲಲ್ಲಾ (ಬಾಲ ರಾಮ ದೇವರು) ಅವರಿಗೆ ಸಮಾನವಾಗಿ ಹಂಚಬೇಕು ಎಂಬುದಾಗಿ ೨೦೧೦ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿದ್ದ ಮೇಲ್ಮನವಿಗಳ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

No comments:

Advertisement