My Blog List

Friday, November 8, 2019

ಪಂಚಮಕ್ಕಳ ಕುಟುಂಬದಲ್ಲಿ ಮದುವೆ ಸಂಭ್ರಮ: ನಾಲ್ವರಿಗೆ ಒಂದೇ ದಿನ ಕಂಕಣಬಲ

ಪಂಚಮಕ್ಕಳ ಕುಟುಂಬದಲ್ಲಿ ಮದುವೆ ಸಂಭ್ರಮ:
 ನಾಲ್ವರಿಗೆ ಒಂದೇ ದಿನ ಕಂಕಣಬಲ
ತಿರುವನಂತಪುರಂ:  ಇಪತ್ತನಾಲ್ಕು ವರ್ಷಗಳ ಹಿಂದೆ ೧೯೯೫ರಲ್ಲಿ ಅವರ ಜನನವೇ ಕೇರಳದಲ್ಲಿ ದೊಡ್ಡ ಸುದ್ದಿಯಾಗಿತ್ತು. ಅವರು ರಾಜ್ಯದ ’ಪಂಚವಳಿ’ ಅಥವಾ ’ಪಂಚಮಕ್ಕಳು’ ಒಂದೇ ಹೆರಿಗೆಯಲ್ಲಿ ಜನ್ಮತಳೆದಿದ್ದ ಮಕ್ಕಳು. ಅವರ ಮೊದಲ ದಿನದ ಶಾಲಾ ಪ್ರವೇಶ, ಮೊದಲ ದಿನದ ಕಾಲೇಜು ಪ್ರವೇಶ, ಮೊದಲ ದಿನದ ಮತದಾನ- ಎಲ್ಲವನ್ನೂ ಮಾಧ್ಯಮಗಳು ಸಂಭ್ರಮಿಸಿದ್ದವು. ಅವರ ಪ್ರತಿಯೊಂದು ಚಲನವಲನವೂ ಮಾಧ್ಯಮಕ್ಕೆ ಸುದ್ದಿಯಾಗುತ್ತಿತ್ತು.
ಈ ಸುದ್ದಿಗಳ ಮಧ್ಯೆ ಕಳೆದುಹೋಗಿದ್ದ ತಮ್ಮ ಜೀವನದ ವೈಯಕ್ತಿಕ ನೋವುಗಳನ್ನು ಮರೆತು ಅವರು ಈಗ ಇನ್ನೊಂದು ಸಂಭ್ರಮಾಚರಣೆಗೆ ಸಜ್ಜಾಗಿದ್ದಾರೆ. ಪಂಚಮಕ್ಕಳ ಪೈಕಿ ನಾಲ್ವರು ಕನ್ಯೆಯರು ತಮ್ಮ ಬದುಕಿನ ಇನ್ನೊಂದು ಮಜಲು ಪ್ರವೇಶಕ್ಕೆ ಅಣಿಯಾಗಿದ್ದಾರೆ. ಈ ನಾಲ್ಕೂ ಮಂದಿ ಮುಂದಿನ ವರ್ಷ ಏಪ್ರಿಲ್ ೨೬ರಂದು ಒಂದೇ ದಿನ ಕೇರಳದ ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನದಲ್ಲಿ ಹಸೆಮಣೆ ಏರಲಿದ್ದಾರೆ. ಒಂದೇ ದಿನ ನಡೆಯಲಿರುವ ನಾಲ್ಕು ಮದುವೆಗಳ ವ್ಯವಸ್ಥೆಯಲ್ಲಿ ಅವರ ಜೊತೆಗೇ ಜನಿಸಿದ್ದ ಐದನೆಯ ಸಹೋದರ ಮಗ್ನನಾಗಿದ್ದಾನೆ.
ಈ ಐದೂ ಮಕ್ಕಳು ೧೯೯೫ರ ನವೆಂಬರ್ ೧೮ರಂದು ಒಂದೇ ಹೆರಿಗೆಯಲ್ಲಿ ಜನಿಸಿದ್ದರು. ಸಣ್ಣ ವ್ಯಾಪಾರಿಯಾಗಿದ್ದ ಈ ಮಕ್ಕಳ ತಂದೆ ಐವರ ಜನನಕ್ಕೆ ಸಂಭ್ರಮಿಸಿ ಅವರಿಗೆ ಒಂದೇ ರೀತಿಯ ಹೆಸರುಗಳನ್ನು ಅಂದರೆ ಉತ್ತರಾಜ, ಉತ್ತರಾ, ಉತ್ತಮ, ಉತ್ತರ ಮತ್ತು ಉತ್ತರಾಜನ್ ಎಂಬ ಹೆಸರುಗಳನ್ನು ಇಟ್ಟಿದ್ದರು. ಮಲಯಾಳಂ ಪಂಚಾಂಗದಂತೆ ಈ ಮಕ್ಕಳು ’ಉತ್ತರಾ’ ನಕ್ಷತ್ರದಲ್ಲಿ ಜನಿಸಿದ್ದರಿಂದ ತಂದೆ ಈ ಹೆಸರುಗಳನ್ನು ಇಟ್ಟಿದ್ದರು.
ಪಂಚಮಕ್ಕಳ ಜನನದ ಬಳಿಕ ವ್ಯಾಪಾರಿ ತನ್ನ ಮನೆಯ ಹೆಸರನ್ನೂ ’ಪಂಚರತ್ನಂ’ ಎಂಬುದಾಗಿ ಬದಲಿಸಿದ್ದರು. ಈ ಪಂಚಮಕ್ಕಳು ಹಲವಾರು ವಿಧದಲ್ಲಿ ’ತಾರೆ’ಯರೇ ಆಗಿದ್ದರು. ಆದರೆ ಅವರ ಬದುಕು ಸುಲಭದ್ದೇನೂ ಆಗಿರಲಿಲ. ಐವರೂ ಮಕ್ಕಳಿಗೆ ಒಂದೇ ರೀತಿಯ ಉಡುಪು, ಚೀಲ, ಕೊಡೆ ಇತ್ಯಾದಿಗಳನ್ನು ಕೊಡಿಸಲು ತಂದೆ ತೀವ್ರ ಹೋರಾಟ ನಡೆಸಿದ್ದರು. ಐವರೂ ಮಕ್ಕಳೂ ಒಂದೇ ರೀತಿ ಕಾಣದೇ ಇದ್ದರೂ, ಒಂದೇ ರೀತಿಯ ಉಡುಪು ಮತ್ತು ಪರಿಕರಗಳನ್ನು ಹೊಂದಿರಬೇಕು ಎಂದು ತಂದೆ ಬಯಸಿದ್ದರು.
ಆದರೆ, ವ್ಯಾಪಾರಿಯ ಪತ್ನಿಗೆ ಹೃದಯ ಸಮಸ್ಯೆ ಶುರುವಾಗಿ ಕುಟುಂಬ ಒಂದಾದ ಮೇಲೆ ಒಂದರಂತೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿತು. ಪಂಚರತ್ನಗಳು ಜನಿಸಿದ ೯ ವರ್ಷಗಳ ಬಳಿಕ ೨೦೦೪ರಲ್ಲಿ ತಂದೆ ಆತ್ಮಹತ್ಯೆ ಮಾಡಿಕೊಂಡ. ಅಸ್ವಸ್ಥ ಪತ್ನಿ ಮತ್ತು ಮಕ್ಕಳು ಅನಾಥರಾದರು. ಈ ದುರಂತ ಇಡೀ ರಾಜ್ಯವನ್ನೇ ದಿಗ್ಭ್ರಮೆಗೊಳಿಸಿತು. ಪಂಚಮಕ್ಕಳ ಜೀವನದ ಇನ್ನೊಂದು ಮಗ್ಗುಲನ್ನು ಕಾಣದೇ ಇದ್ದುದಕ್ಕಾಗಿ ಹಲವರು ಮಾಧ್ಯಮಗಳನ್ನು ಟೀಕಿಸಿದರು.
ಉದಾತ್ತ ದಾನಿಗಳು ಕುಟುಂಬದ ನೆರವಿಗೆ ಬಂದರು. ’ಪೇಸ್ ಮೇಕರ್’ ಅಳವಡಿಸಿಕೊಂಡಿದ್ದ ತಾಯಿಗೆ ಸರ್ಕಾರಿ ನೌಕರಿ ಲಭಿಸಿತು. ಕೆಲವು ಮಾಧ್ಯಮ ಸಂಸ್ಥೆಗಳೂ ಕುಟುಂಬಕ್ಕೆ ನೆರವಾದವು.
ದಿಟ್ಟ ತಾಯಿ ತನ್ನ ಐವರೂ ಮಕ್ಕಳಿಗೆ ತಾನು ಒದಗಿಸಬಹುದಾಗಿದ್ದ ಅತ್ಯುತ್ತಮ ಶಿಕ್ಷಣವನ್ನು ಕೊಡಿಸಿದರು. ಅವರೆಲ್ಲರಿಗೂ ಈ ತಿಂಗಳ ೧೮ರಂದು ೨೪ ವರ್ಷ ತುಂಬುತ್ತದೆ.
ಒಬ್ಬ ಪುತ್ರಿ ಈಗ ಫ್ಯಾಷನ್ ಡಿಸೈನರ್ ಆಗಿದ್ದರೆ, ಇಬ್ಬರು ಅರಿವಳಿಕೆ (ಅನಸ್ತೇಷಿಯಾ) ತಜ್ಞೆಯರಾಗಿದ್ದಾರೆ. ಇನ್ನೊಬ್ಬಾಕೆ ಆನ್ ಲೈನ್ ಬರಹಗಾರ್ತಿ. ಇವರೆಲ್ಲರ ಸಹೋದರ ಉತ್ತರಾಜನ್ ಟೆಕ್ಕಿಯಾಗಿದ್ದಾನೆ.
’ಗಂಡನ ಸಾವಿನ ಬಳಿಕ ದಿಕ್ಕೇ ತೋಚದಂತಾಗಿತ್ತು.  ಬಳಿಕ ನಾನು ಮಕ್ಕಳಿಗಾಗಿ ಬದುಕಬೇಕು ಎಂದು ನಿರ್ಧರಿಸಿದೆ ಮತ್ತು ಬದುಕಿನ ಹೋರಾಟಕ್ಕೆ ಇಳಿದೆ. ಇಚ್ಛೆ ಇದ್ದಲ್ಲಿ ಮಾರ್ಗವೂ ಇರುತ್ತದೆ’ ಎಂದು ಒಂದಾದ ಬಳಿಕ ಒಂದರಂತೆ ಎದುರಾದ ಕಷ್ಟಗಳನ್ನು ದಾಟಿದ ಬಗೆಯನ್ನು ಆಕೆ ವಿವರಿಸುತ್ತಾರೆ.
’ಅವರು (ಪತಿ) ಜೀವಿಸಿದ್ದಾಗ ಐದೂ ಮಕ್ಕಳಿಗೆ ಸಮಾನ ಅವಕಾಶಗಳು ಲಭಿಸುವಂತೆ ನೋಡಿಕೊಳ್ಳಲು ಶ್ರಮ ವಹಿಸಿದ್ದರು. ಮತ್ತು ಐವರನ್ನೂ ಸಮಾನವಾಗಿ ನೋಡಿಕೊಳ್ಳುತ್ತಿದ್ದರು. ಅವರ ಕನಸನ್ನು ಜೀವಂತವಾಗಿಡಲು ನಾವು ಬಯಸಿದ್ದೇವೆ. ಅದಕ್ಕಾಗಿಯೇ ಎಲ್ಲರೂ ಒಂದೇ ದಿನ ಮದುವೆಯಾಗಬೇಕು ಎಂದು ತೀರ್‍ಮಾನಿಸಿದ್ದೇವೆ. ನನ್ನ ಮಗ ಹೆಚ್ಚು ಎತ್ತರವಾಗಿದ್ದಾನೆ. ಆದ್ದರಿಂದ ಆತ ಇನ್ನೂ ಸ್ವಲ್ಪ ಸಮಯ ಕಾಯಬಹುದು’ ಎನ್ನುತ್ತಾಳೆ ತಿರುವನಂತಪುರದ ಜಿಲ್ಲಾ ಕೋ ಆಪರೇಟಿವ್ ಬ್ಯಾಂಕ್ ಶಾಕೆಯಲ್ಲಿ ನಾಲ್ಕನೇ ದರ್ಜೆಯ ನೌಕರಳಾಗಿರುವ ಪಂಚ ಮಕ್ಕಳ ತಾಯಿ. ’ನಾವು ಈಗ ನಮ್ಮ ಸಹೋದರನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಉತ್ತರಾ.

No comments:

Advertisement