ಆಯುರ್ವೇದ ಅಭಿವೃದ್ಧಿ: ಸಿಡ್ನಿ ವಿಶ್ವವಿದ್ಯಾಲಯ ಜೊತೆಗೆ ಒಪ್ಪಂದಕ್ಕೆ ಸಹಿ
ನವದೆಹಲಿ: ಆಯುರ್ವೇದ ಸೂತ್ರಗಳನ್ನು ಆಧುನಿಕ ಔಷಧದ ಜೊತೆಗೆ ಸಂಯೋಜಿಸುವ ನಿಟ್ಟಿನಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಸಹಯೋಗಕ್ಕಾಗಿ ಆಸ್ಟ್ರೇಲಿಯಾದ ಪಶ್ಚಿಮ ಸಿಡ್ನಿ ವಿಶ್ವ ವಿದ್ಯಾಲಯದ ಜೊತೆಗೆ ತಿಳುವಳಿಕೆ ಪತ್ರಕ್ಕೆ (ಎಂಒಯು) ಅಖಿಲ ಭಾರತ ಆಯುರ್ವೇದ ಸಂಸ್ಥೆಯು (ಎಐಐಎ) ಸಹಿ ಹಾಕಿತು.
ಪಶ್ಚಿಮ ಸಿಡ್ನಿ ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೊಫೆಸರ್ ಬರ್ನಿ ಗ್ಲೋವರ್ ಮತ್ತು ಅಖಿಲ ಭಾರತ ಆಯುರ್ವೇದ ಸಂಸ್ಥೆಯ ನಿರ್ದೇಶಕರಾದ ಪ್ರೊಫೆಸರ್ ತನುಜಾ ನೇಸರಿ ಅವರು ಆಸ್ಟ್ರೇಲಿಯಾ ಸರ್ಕಾರದ ಶಿಕ್ಷಣ ಸಚಿವ ಡ್ಯಾನ್ ಟೆಹನ್ ನೇತೃತ್ವದ ನಿಯೋಗದ ಭಾರತ ಭೇಟಿ ಕಾಲದಲ್ಲಿ 2019 ನವೆಂಬರ್ 22ರ ಶುಕ್ರವಾರ ತಿಳುವಳಿಕೆ ಪತ್ರಕ್ಕೆ ಸಹಿ ಮಾಡಿದರು.
ನವದೆಹಲಿಯ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ’ಭಾರತ-ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ಶಿಕ್ಷಣ ಮತ್ತು ಸಂಶೋಧನಾ ಕಾರ್ಯಾಗಾರದ ಸಂದರ್ಭದಲ್ಲಿ ತಿಳುವಳಿಕೆ ಪತ್ರಕ್ಕೆ ಒಪ್ಪಿ ದಾಖಲೆ ವಿನಿಮಯ ಮಾಡಿಕೊಳ್ಳಲಾಯಿತು.
’ಆಯುರ್ವೇದ ಮತ್ತು ತಂತ್ರಜ್ಞಾನಗಳನ್ನು ಆಧರಿಸಿದ ಮಾಹಿತಿಗಳನ್ನು ಒಗ್ಗೂಡಿಸುವುದು ಅದರಲ್ಲೂ ನಿರ್ದಿಷ್ಟವಾಗಿ ಪರಂಪರಾಗತ ಮತ್ತು ಪೂರಕ ಔಷಧ ಪದ್ಧತಿಯನ್ನು ಪರಿಣಾಮಕಾರಿಯಾಗಿ ಸಂಯೋಜಿಸುವುದು ಉತ್ತಮ ಮತ್ತು ಸುರಕ್ಷಿತ ಆರೋಗ್ಯ ವ್ಯವಸ್ಥೆಯನ್ನು ವಿಶ್ವಕ್ಕಾಗಿ ರೂಪಿಸುವ ನಿಟ್ಟಿನ ಗುರಿ ಸಾಧನೆಗೆ ಮೌಲ್ಯಯುತವಾದ ಕಾಣಿಕೆಯಾಗಬಲ್ಲುದು’ ಎಂದು ಪ್ರೊಫೆಸರ್ ಗ್ಲೋವರ್ ಹೇಳಿದರು.
ಆಧುನಿಕ ಔಷಧದ ಸಾಂಪ್ರದಾಯಿಕ ಕಲ್ಪನೆಗಳ ಜೊತೆಗೆ ಪರಂಪರಾಗತ ಆಯುರ್ವೇದ ಔಷಧವನ್ನು ಜೋಡಿಸುವುದರಿಂದ ಜಾಗತಿಕ ಆರೋಗ್ಯ ಕಾಳಜಿಗೆ ಇನ್ನಷ್ಟು ನೆರವಾಗುವಂತಹ ವೈಜ್ಞಾನಿಕ ಸಾಕ್ಷ್ಯಾಧಾರಗಳ ಸೃಷ್ಟಿಗೆ ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಕಾರ್ಯಾಗಾರದಲ್ಲಿ ಬಿಡುಗಡೆ ಮಾಡಲಾದ ಹೇಳಿಕೆ ತಿಳಿಸಿತು.
ಶಿಕ್ಷಣ, ಸಂಶೋಧನೆ ಮತ್ತು ಪರಂಪರಾಗತ ಔಷಧ ಸಂಶೋಧನೆ ಮತ್ತು ಅನ್ವಯದ ನಿರ್ದಿಷ್ಟ ಕ್ಷೇತ್ರಗಳಲ್ಲಿ ಉಭಯ ಸಂಸ್ಥೆಗಳೂ ಸಹಯೋಗವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯಲು ಬದ್ಧವಾಗಿವೆ ಮತ್ತು ಇದೇ ವೇಳೆಗೆ ಗುಣಮಟ್ಟ ಖಚಿತತೆ ಮತ್ತು ಪರಂಪರಾಗತ ಔಷಧ ಸಂಬಂಧಿತ ಮೂಲಭೂತ ಸವಲತ್ತುಗಳಿಗೆ ಹೂಡಿಕೆಗೆ ಪ್ರೋತ್ಸಾಹ ನೀಡಲೂ ಖಾತರಿ ನೀಡುತ್ತವೆ’ ಎಂದು ಹೇಳಿಕೆ ತಿಳಿಸಿತು.
ಆಸ್ಟ್ರೇಲಿಯಾದ ಅಂತಾರಾಷ್ಟ್ರೀಯ ಪಾಲುದಾರಿಕೆಗಳಲ್ಲಿ ಭಾರತವು ಅಗ್ರ ಪ್ರಾಶಸ್ತ್ಯವನ್ನು ಹೊಂದಿರುವ ರಾಷ್ಟ್ರವಾಗಿದೆ. ತಿಳುವಳಿಕೆ ಪತ್ರವು ಆರೋಗ್ಯ ಕಾಳಜಿ ಕೈಗಾರಿಕೆಯಲ್ಲಿ ಇನ್ನೊಂದು ಮೈಲಿಗಲ್ಲು ಆಗಿದೆ ಎಂದೂ ಹೇಳಿಕೆ ತಿಳಿಸಿತು.
No comments:
Post a Comment