Saturday, November 23, 2019

ರಾತ್ರೋರಾತ್ರಿ ‘ಮಹಾಕ್ರಾಂತಿ’ ; ಶಿವಸೇನೆಗೆ ಭಾರೀ ಮುಖಭಂಗ

ರಾತ್ರೋರಾತ್ರಿ ‘ಮಹಾಕ್ರಾಂತಿ’ ; ಶಿವಸೇನೆಗೆ ಭಾರೀ ಮುಖಭಂಗ
ಮುಖ್ಯಮಂತ್ರಿಯಾಗಿ ಫಡ್ನವಿಸ್, ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್  ಪ್ರಮಾಣ
ಮುಂಬೈ:  ಮಹಾರಾಷ್ಟ್ರದಲ್ಲಿ ಸಂಭವಿಸಿದ ದಿಢೀರ್ ಬೆಳವಣಿಗೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ ಸಿಪಿ) ಅಧಿಕಾರಕ್ಕೆ ಏರಲು ಪರಸ್ಪರ ಕೈಜೋಡಿಸಿದ್ದು, ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿಯಾಗಿಯೂ, ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿಯೂ ಅಧಿಕಾರ ಶನಿವಾರ ಬೆಳಗ್ಗೆ ಅಧಿಕಾರ ವಹಿಸಿಕೊಂಡರು.

ಬಿಜೆಪಿಗೆ ಕೈಕೊಟ್ಟು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ ಸಿಪಿ) ಮತ್ತು ಕಾಂಗ್ರೆಸ್ ಜೊತೆಗೆ  ಹೊಸ ಪಕ್ಷ ಮೈತ್ರಿಕೂಟ ರಚಿಸಿ ಅಧಿಕಾರಕ್ಕೆ ಎರಲು ಯತ್ನ ನಡೆಸುತ್ತಿದ್ದ ಶಿವಸೇನೆ ಹಾಗೂ ಎನ್ ಸಿಪಿ ಜೊತೆಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ದಿಡೀರ್ ಬೆಳವಣಿಗೆಯಿಂದ ‘ಮಹಾಘಾತ’ವಾಗಿದ್ದು, ಶಿವಸೇನೆಗೆ ಭಾರೀ ಮುಖಭಂಗವಾಗಿದೆ.

ಶನಿವಾರದ ಹಠಾತ್ ಬೆಳವಣಿಗೆಯಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ದೇವೇಂದ್ರ ಫಡ್ನವಿಸ್  ಮತ್ತು ಅಜಿತ್ ಪವಾರ್ ಅವರಿಗೆ ಕ್ರಮವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಪ್ರಮಾಣವಚನ ಬೋಧಿಸಿದರು.

ಕಾಂಗ್ರೆಸ್​​-ಎನ್​​ಸಿಪಿ ಮತ್ತು ಶಿವಸೇನೆ ಮೈತ್ರಿ ಕೂಟ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಶಿವಸೇನಾ ಮುಖ್ಯಸ್ಥ ಉದ್ಬವ್ಠಾಕ್ರೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ಶುಕ್ರವಾರ ರಾತ್ರಿಯವರೆಗೂ ಭಾವಿಸಲಾಗಿತ್ತು.

ಮೂರೂ ಪಕ್ಷಗಳ ನಾಯಕರ ಸಭೆಯ ಬಳಿಕ ಶರದ್ ಪವಾರ್ ಅವರು ಮೂರು ಪಕ್ಷಗಳ ಮೈತ್ರಿಕೂಟವನ್ನು ಉದ್ಧವ್ ಠಾಕ್ರೆ ಮುನ್ನಡೆಸಲಿದ್ದಾರೆ ಎಂದು ಪ್ರಕಟಿಸಿದ್ದರು.

ಶನಿವಾರ ಇನ್ನೊಂದು ಸುತ್ತಿನ ಮಾತುಕತೆಗಳ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಹಾಮೈತ್ರಿ ಹಾಗೂ ಸರ್ಕಾರ ರಚನೆಯ ವಿವರಗಳನ್ನು ಪ್ರಕಟಿಸುವುದಾಗಿಯೂ ಶುಕ್ರವಾರ ತಿಳಿಸಲಾಗಿತ್ತು.
ಉದ್ಧವ್ ಠಾಕ್ರೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಮೂರೂ ಪಕ್ಷಗಳ ಮುಖಂಡರು ಒಪ್ಪಿದ್ಧಾರೆ ಎಂದು ಹೇಳಲಾಗಿತ್ತು.

ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಯಾವುದೇ ಅಧಿಕಾರ ಹಂಚಿಕೆ ಇರುವುದಿಲ್ಲ. ಉದ್ಧವ್ ಠಾಕ್ರೆ ಅವರೇ  ಐದು ವರ್ಷಗಳ ಪೂರ್ಣಾವಧಿಯವರೆಗೆ ಮುಖ್ಯಮಂತ್ರಿಯಾಗಲಿದ್ದಾರೆ. ಠಾಕ್ರೆ ಮುಖ್ಯಮಂತ್ರಿಯಾಗಲು ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಮ್ಮತದಿಂದ ಸಮ್ಮತಿ ವ್ಯಕ್ತಪಡಿಸಿವೆ. ಮೂರು ಪಕ್ಷಗಳು ಒಗ್ಗೂಡಿ ಸರ್ಕಾರ ರಚನೆಗೆ ರಾಜ್ಯಪಾಲರಲ್ಲಿ ಹಕ್ಕು ಮಂಡನೆ ಮಾಡಲಿವೆ ಎಂದು ಹೇಳಲಾಗಿತ್ತು.

ಆದರೆ ಶನಿವಾರ  ಏಕಾಏಕಿ ಬಿಜೆಪಿ ಮತ್ತು ಎನ್​​ಸಿಪಿ ಮೈತ್ರಿಯಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿವೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದೇವೇಂದ್ರ ಫಢ್ನವಿಸ್​​​ ಅವರಿಗೆ ಶುಭಾಶಯ ಕೋರಿದ್ಧಾರೆ. ಇವರೊಂದಿಗೆ ಬಿಜೆಪಿ ಗಣ್ಯರು ಎನ್ಸಿಪಿ ಮತ್ತು ಬಿಜೆಪಿ ನೇತೃತ್ವದ ಹೊಸ ಸರ್ಕಾರಕ್ಕೆ ಶುಭವಾಗಲಿ ಎಂದು ಟ್ವೀಟ್ಮಾಡಿದ್ಧಾರೆ.

ಅಕ್ಟೋಬರ್ 21ರಂದು ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಬಿಜೆಪಿ-ಶಿವಸೇನಾ ಹಾಗೂ ಇತರ ಕೆಲ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. 288 ಸದಸ್ಯಬಲದ ವಿಧಾನಸಭೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಗಳಿಸಿ ಏಕೈಕ ದೊಡ್ಡ ಪಕ್ಷವಾಗಿ ಮೂಡಿ ಬಂದಿತ್ತು. ಶಿವಸೇನಾ 56, ಎನ್ಸಿಪಿ 54 ಮತ್ತು ಕಾಂಗ್ರೆಸ್ ಪಕ್ಷ 44 ಸ್ಥಾನಗಳನ್ನು ಗೆದ್ದಿದ್ದವು.

 ಬಿಜೆಪಿ ಮತ್ತು ಶಿವಸೇನಾ ಜೊತೆಗೂಡಿ ಸರ್ಕಾರ ರಚಿಸುವ ನಿರೀಕ್ಷೆ ಇತ್ತಾದರೂ, ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಭಿನ್ನಾಭಿಪ್ರಾಯವುಂಟಾಗಿ ಶಿವಸೇನಾ ತನ್ನ ಎದುರಾಳಿಗಳತ್ತ ಮುಖ ಮಾಡಿತ್ತು. ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಲು ಶಿವಸೇನಾ ನಿರ್ಧರಿಸಿತ್ತು.

 ನಾಟಕೀಯ ಬೆಳವಣಿಗೆ:  ನಾಟಕೀಯ ಬೆಳವಣಿಗೆಯಲ್ಲಿ ಶನಿವಾರ ಬೆಳಗ್ಗೆ ಭಾರತೀಯ ಜನತಾ ಪಕ್ಷವು ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿತು. ಬಳಿಕ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಮಹಾರಾಷ್ಟ್ರದಲ್ಲಿನ ರಾಷ್ಟ್ರಪತಿ ಆಡಳಿತ ಹಿಂತೆಗೆದು ಕೊಳ್ಳುವಂತೆ  ಕೇಂದ್ರವನ್ನು ಕೋರಿದರು.

ಪಕ್ಷದ ಹಿಂದೆ ವಿಧಿಸಲಾಗಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ಬೆಳಗ್ಗೆ 5.47 ಸುಮಾರಿಗೆ ಹಿಂಪಡೆದ ಬಳಿಕ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರು ಪ್ರಮಾಣವಚನ ಸ್ವೀಕರಿಸಿದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶುಕ್ರವಾರ ರಾತ್ರಿವರೆಗೆ ಕಾಂಗ್ರೆಸ್, ಎನ್ ಸಿಪಿ ಮತ್ತು ಶಿವಸೇನೆ ನಡೆಸಿದ್ದ ಮುಂದಿನ ಸರ್ಕಾರ ರಚನೆಯ ಮಾತುಕತೆಗಳಲ್ಲಿ ಅಜಿತ್ ಪವಾರ್ ಅವರೂ ಹಾಜರಿದ್ದರು. ಸರ್ಕಾರ ರಚನೆಯ ವಿಧಿವಿಧಾನಗಳನ್ನು ಪ್ರಕಟಿಸಲು ಮೂರೂ ಪಕ್ಷಗಳು ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಲಿವೆ ಎಂದು ನಿರೀಕ್ಷಿಸಲಾಗಿತ್ತು.

ಕಾಂಗ್ರೆಸ್, ಎನ್ ಸಿಪಿ ಮತ್ತು ಶಿವಸೇನೆ ಮೂರು ಪಕ್ಷಗಳ ಮೈತ್ರಿಯ ಮಾತುಕತೆಗಳು ಮುಗಿಯುವ ಲಕ್ಷಣಗಳೇ ಕಾಣದ ಕಾರಣ ನಾನು ನಿರ್ಧಾರ ಕೈಗೊಂಡೆ. ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರ ನೀಡುವ ಅಗತ್ಯವಿತ್ತು ಎಂದು  ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ  ಅಳಿಯ ಅಜಿತ್ ಪವಾರ್ ನುಡಿದರು.

ಅಜಿತ್ ಪವಾರ್ ಅವರು ಎನ್ ಸಿಪಿಯನ್ನು ಒಡೆದಿದ್ದಾರೆಯೇ ಅಥವಾ ಅವರಿಗೆ ಮಾವ ಶರದ್ ಪವಾರ್ ಅವರ ಮತ್ತು ಇಡೀ ಪಕ್ಷದ ಬೆಂಬಲ ವಿದೆಯೇ ಎಂಬುದು ತತ್ ಕ್ಷಣಕ್ಕೆ ಸ್ಪಷ್ಟವಾಗಿಲ್ಲ.
ಆದರೆ ಸುದ್ದಿ ಸಂಸ್ಥೆಯೊಂದರ ವರದಿಯ ಪ್ರಕಾರ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಮಹಾರಾಷ್ಟ್ರ ಸರ್ಕಾರ ರಚನೆಯ ಮಾತುಕತೆಗಳಲ್ಲಿ ಶರದ್ ಪವಾರ್ ಅವರೂ ಪಾಲ್ಗೊಂಡಿದ್ದು ಅವರು ಅಜಿತ್ ಪವಾರ್ ಅವರಿಗೆ ತಮ್ಮ ಒಪ್ಪಿಗೆ ನೀಡಿದ್ದರು ಎನ್ನಲಾಗಿದೆ.

ಶರದ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನವೆಂಬರ್ 21 ಗುರುವಾರ ದೆಹಲಿಯಲ್ಲಿ ಭೇಟಿ ಮಾಡಿ ಸುಮಾರು 40 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು.

ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರ ರಚಿಸುವ ಅಗತ್ಯವಿತ್ತು. ಬೆಂಬಲ ನೀಡಿದ್ದಕ್ಕಾಗಿ ನಾನು ಅಜಿತ್ ಪವಾರ್ ಅವರಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಪವಾರ್ ಜೊತೆಗೆ ಪಕ್ಷದ ಎಲ್ಲ 54 ಶಾಸಕರು ಮತ್ತು ಇತರ 11 ಮಂದಿ ಪಕ್ಷೇತರ ಶಾಸಕರು ನಮಗೆ ಬೆಂಬಲ ನೀಡಿದ್ದಾರೆ. ನಾವು ಈಗ ಸದನದಲ್ಲಿ ಬಹುಮತ ಸಾಬೀತು ಪಡಿಸುತ್ತೇವೆಎಂದು ಫಡ್ನವಿಸ್  ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಹೇಳಿದರು.

ಸರ್ಕಾರ ರಚನೆಗೆ ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ ಜನಾದೇಶ ಲಭಿಸಿತ್ತು. ಆದರೆ ಶಿವಸೇನೆಯು ಜನಾದೇಶಕ್ಕೆ ಅವಮಾನ ಮಾಡಿದ ಕಾರಣ ನಾವು   ನಿರ್ಧಾರ ಕೈಗೊಂಡೆವುಎಂದು ಅವರು ಪ್ರತಿಪಾದಿಸಿದರು.

ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಜಿ ಅವರಿಗೆ  ಕ್ರಮವಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಅಭಿನಂದನೆಗಳು. ಮಹಾರಾಷ್ಟ್ರದ ಭವ್ಯ ಭವಿಷ್ಯಕ್ಕಾಗಿ ಅವರು  ಶ್ರದ್ಧೆಯಿಂದ ಕೆಲಸ ಮಾಡುವರು ಎಂಬ ವಿಶ್ವಾಸ ನನಗಿದೆಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣ ವಚನದ ಬಳಿಕ ಟ್ವೀಟ್ ಮಾಡಿದರು.

ಶಿವಸೇನೆಯ ಪಾಲಿಗೆ ಅಚ್ಚರಿದಾಯಕವಾದ ದಿಢೀರ್ ಬೆಳವಣಿಗೆಯು ಅದರಮುಖ್ಯಮಂತ್ರಿ  ದಾಹವನ್ನು ಹಳಿ ತಪ್ಪಿಸಿದರೆ, ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಅವರು ಬೆಳವಣಿಗೆಯನ್ನು ಅಸಂಬದ್ಧ ಎಂಬುದಾಗಿ ಬಣ್ಣಿಸಿದರು.

ಮುಂಬೈಯಲ್ಲಿನ ರಾಜಭವನದಲ್ಲಿ ಶನಿವಾರ ನಸುಕಿನಲ್ಲಿ ಸಂಭವಿಸಿದ ನಾಟಕೀಯ ಬೆಳವಣಿಗೆಗಳ ಬಳಿಕ, ‘ಮಹಾರಾಷ್ಟ್ರ ಸರ್ಕಾರ ರಚನೆಗೆ ಬಿಜೆಪಿಯನ್ನು ಬೆಂಬಲಿಸುವ ಅಜಿತ್ ಪವಾರ್ ಅವರ ನಿರ್ಧಾರವು ಅವರ ವೈಯಕ್ತಿಕ ನಿರ್ಧಾರವಾಗಿದ್ದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಿರ್ಧಾರವಲ್ಲಎಂದು ಶರದ್ ಪವಾರ್ ಹೇಳಿದರು.
ನಾವು ಅವರ ನಿರ್ಧಾರವನ್ನು ಬೆಂಬಲಿಸುವುದಿಲ್ಲ  ಮತ್ತು ಅನುಮೋದಿಸುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಲು ಬಯಸುತ್ತೇವೆಎಂದು ಟ್ವೀಟ್ ಮಾಡಿದ ಶರದ್ ಪವಾರ್ ತಾವು ಬಂಡಾಯದಿಂದ ದೂರ ಇರುವುದನ್ನು ಸೂಚಿಸಿದರು.

ತಮ್ಮ ಅಳಿಯ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿ ಆಗುತ್ತಿರುವ ವಿಷಯ ತಮಗೆ ಈದಿನ ಬೆಳಗ್ಗೆಯಷ್ಟೇ ಗೊತ್ತಾಯಿತು ಎಂದು ಎನ್ ಸಿಪಿ ಮುಖ್ಯಸ್ಥ ಹೇಳಿದರು.

ಇದಕ್ಕೂ ಮುನ್ನ ನನಗೆ ಬಗ್ಗೆ ಗೊತ್ತಿರಲಿಲ್ಲ. ನಾನು ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಎಲ್ಲವನ್ನೂ ವಿವರವಾಗಿ ಹೇಳುವೆಎಂದು ಶರದ್ ಪವಾರ್ ನುಡಿದರು.

ಅತ್ಯಂತ ಕುತೂಹಲಕರವಾದ ವಿದ್ಯಮಾನ ಏನೆಂದರೆ ಬೆಳ್ಳಂಬೆಳಗ್ಗೆಯೇ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಎನ್ ಸಿಪಿಯ ಬೇರೆ ಯಾವ ನಾಯಕರೂ ಹಾಜರಿರಲಿಲ್ಲ. ಅಜಿತ್ ಪವಾರ್ ಮತ್ತು ಅವರ ಕುಟುಂಬ ಸದಸ್ಯರು ಮಾತ್ರ ಉಪಸ್ಥಿತರಿದ್ದರು.
ಅಜಿತ್ ಪವಾರ್ ನೇತೃತ್ವದಲ್ಲಿ ಪಕ್ಷವು ವಿಭಜನೆಗೊಂಡಿದ್ದರೆ, ಇಂತಹ ವಿಭಜನೆಗೆ  ಶಾಸಕಾಂಗ ಪಕ್ಷದ  ಕನಿಷ್ಠ ಮೂರನೇ ಎರಡರಷ್ಟು ಶಾಸಕರು ಅವರ ಜೊತೆಗೆ ಇರಬೇಕಾಗುತ್ತದೆ. ಪ್ರಕರಣದಲ್ಲಿ ಎನ್ ಸಿಪಿಯ ಕನಿಷ್ಠ 36 ಶಾಸಕರು ಪ್ರತ್ಯೇಕ ಗುಂಪು ರಚಿಸಬೇಕಾಗುತ್ತದೆ.

ಶರದ್ ಪವಾರ್ ಅವರು ಕೂಡಾ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಸತ್ತಿನಲ್ಲಿ ಭೇಟಿ ಮಾಡಿದ್ದರು. ತಮ್ಮ ಭೇಟಿಗೂ ಸರ್ಕಾರ ರಚನೆಗೂ ಸಂಬಂಧವಿಲ್ಲ, ತಾವು ಮಾತುಕತೆ ನಡೆಸಿದ್ದು ಮಹಾರಾಷ್ಟ್ರದ ರೈತರ ಸಂಕಷ್ಟಗಳ ಬಗ್ಗೆ ಎಂದು ಪವಾರ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದರು.

2007ರಲ್ಲಿ ಕರ್ನಾಟಕದಲ್ಲಿ ಜೆಡಿಎಸ್ ಗುಂಪೊಂದು ಬಿಜೆಪಿ ಜೊತೆಗೆ ಸರ್ಕಾರ ರಚಿಸುವ ಸಲುವಾಗಿ ಎಚ್.ಡಿ. ದೇವೇಗೌಡ ವಿರುದ್ಧ ಬಂಡಾಯವೆದ್ದಿತ್ತು. ಬಂಡಾಯದ ನೇತೃತ್ವ ವಹಿಸಿದ್ದ ದೇವೇಗೌಡರ ಪುತ್ರ ಎಚ್.ಡಿ. ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಮಾಜಿ ಪ್ರಧಾನಿ ದೇವೇಗೌಡ ಬಹಿರಂಗವಾಗಿ  ಪುತ್ರನ  ನಡೆಯನ್ನು ವಿರೋಧಿಸಿದ್ದರು. ಸರ್ಕಾರ ಒಂದು ವರ್ಷ ಕಾಲ ಮುಂದುವರೆದಿತ್ತು. ಬಳಿಕ ದೇವೇಗೌಡ ಮತ್ತು ಕುಮಾರಸ್ವಾಮಿ  ರಾಜಿಯಾಗಿದ್ದರು.

No comments:

Advertisement