My Blog List

Tuesday, December 10, 2019

ಪೌರತ್ವ (ತಿದ್ದುಪಡಿ) ಮಸೂದೆಗೆ ಲೋಕಸಭೆ ಅಸ್ತು, ವಿಪಕ್ಷ ಪ್ರತಿಭಟನೆ

ಪೌರತ್ವ (ತಿದ್ದುಪಡಿ) ಮಸೂದೆಗೆ ಲೋಕಸಭೆ ಅಸ್ತು, ವಿಪಕ್ಷ ಪ್ರತಿಭಟನೆ
ಶೇಕಡಾ .೦೦೧ರಷ್ಟು ಕೂಡಾ ಅಲ್ಪಸಂಖ್ಯಾತ ವಿರೋಧಿ ಅಲ್ಲ: ಅಮಿತ್ ಶಾ
ನವದೆಹಲಿ: ಸುದೀರ್ಘವಾದ ಚರ್ಚೆ, ಮಾತಿನ ಚಕಮಕಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಬಲ ಸಮರ್ಥನೆಯ ಬಳಿಕ  ಲೋಕಸಭೆಯು ಪೌರತ್ವ (ತಿದ್ದುಪಡಿ) ಮಸೂದೆಯನ್ನು 2019 ಡಿಸೆಂಬರ್ 09ರ ಸೋಮವಾರ ಅಂಗೀಕರಿಸಿತು. ಮತ ವಿಭಜನೆಯಲ್ಲಿ ಮಸೂದೆಯ ಪರವಾಗಿ 311 ಮತ್ತುವಿರುದ್ಧವಾಗಿ 80 ಮತಗಳು ಬಂದವು.

ವಿರೋಧ ಪಕ್ಷಗಳು ಸಂವಿಧಾನ ವಿರೋಧಿ ಎಂಬುದಾಗಿ ಮಸೂದೆಯನ್ನು ಬಣ್ಣಿಸಿದರೂ, ಅಮಿತ್ ಶಾ ಅವರು ಮಸೂದೆಯನ್ನು ಪ್ರಬಲವಾಗಿ ಸಮರ್ಥಿಸಿ ಅದು ಸಂವಿಧಾನ ವಿರೋಧಿಯೂ ಅಲ್ಲ, ಅಲ್ಪಸಂಖ್ಯಾತರ ವಿರೋಧಿಯೂ ಅಲ್ಲ ಎಂದು ಪ್ರತಿಪಾದಿಸಿದರು. ಚರ್ಚೆಯ ಮಧ್ಯೆ ಒಂದು ಹಂತದಲ್ಲಿ ಅಸಾದುದದೀನ್ ಓವೈಸಿ ಅವರು ಮಸೂದೆಯ ಪ್ರತಿಯನ್ನು ಹರಿದು ಚಿಂದಿ ಮಾಡಿ ಎಸೆದರು.

ಮಸೂದೆ 2019 ಡಿಸೆಂಬರ್ 12ರ ಮಂಗಳವಾರ ರಾಜ್ಯಸಭೆಯಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ.

ಇದಕ್ಕೆ ಮುನ್ನ ಬೆಳಗ್ಗೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಯ ಮಧ್ಯೆ, ಸದನವು ಮಸೂದೆ ಮಂಡನೆ ಪರವಾಗಿ ಬಹುಮತ ವ್ಯಕ್ತ ಪಡಿಸಿದ ಬಳಿಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು.
ಇದು ಅಲ್ಪಸಂಖ್ಯಾತ ವಿರೋಧಿ ಮಸೂದೆಯಲ್ಲದೆ ಬೇರೇನಲ್ಲಎಂಬ ಕಾಂಗೆಸ್ ಪಕ್ಷದ ಕಟು ಟೀಕೆಯನ್ನು ತಳ್ಳಿಹಾಕಿದ ಅಮಿತ್ ಶಾಮಸೂದೆಯು ಶೇಕಡಾ .೦೦೧ ರಷ್ಟು ಕೂಡಾ ದೇಶದ ಅಲ್ಪ ಸಂಖ್ಯಾತ ವಿರೋಧಿ ಅಲ್ಲಎಂದು ಪ್ರತಿಪಾದಿಸಿದರು.

ಮಸೂದೆ ಮಂಡನೆ ಮಾಡಬೇಕೇ ಅಥವಾ ಬೇಡವೇ ಎಂಬುದಾಗಿ ನಡೆದ ವಾಗ್ವಾದಗಳ ಬಳಿಕ ಸಭಾಧ್ಯಕ್ಷ ಬಿರ್ಲಾ ಅವರು ಮಸೂದೆ ಮಂಡನೆ ವಿಚಾರವನ್ನು ತೀರ್ಮಾನಿಸಲು ಮತ ವಿಭಜನೆಗೆ ನಿರ್ಧರಿಸಿದರು. ಮಸೂದೆ ಮಂಡನೆ ಪರವಾಗಿ ೨೯೩ ಮತ್ತು ವಿರೋಧವಾಗಿ ೮೨ ಮತಗಳು ಬಂದವು. ಬಳಿಕ ಗೃಹ ಸಚಿವರು ಮಸೂದೆಯನ್ನು ಮಂಡಿಸಿದರು.

ಮಸೂದೆಯು ದೇಶದ ಅಲ್ಪಸಂಖ್ಯಾತರ ವಿರುದ್ಧವಲ್ಲ, ಬದಲಿಗೆ ನುಸಳುಕೋರರ ವಿರುದ್ಧಎಂದು ಬಲವಾಗಿ ಪ್ರತಿಪಾದಿಸಿದ ಅಮಿತ್ ಶಾ, ಪೌರತ್ವ ಮಸೂದೆ ಕುರಿತ ವಿರೋಧ ಪಕ್ಷಗಳ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವುದಾಗಿ ಭರವಸೆ ನೀಡಿದರು. ’ನಾನು ಮಸೂದೆ ಕುರಿತ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ. ಅಲ್ಲಿಯವರೆಗೆ ಸಭಾತ್ಯಾಗ ಮಾಡಬೇಡಿಎಂದು ಸಚಿವರು ಆಗ್ರಹಿಸಿದರು.

ಲೋಕಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರುಪೌರತ್ವ ಮಸೂದೆಯು ಅಲ್ಪಸಂಖ್ಯಾತರ ವಿರುದ್ಧ ಗುರಿಯಿಟ್ಟಿರುವ ಮಸೂದೆ ಹೊರತು ಬೇರೇನೂ ಅಲ್ಲಎಂದು ವಾದಿಸಿದರು.

ಮಸೂದೆಯು ಸಂವಿಧಾನದ ಯಾವುದೇ ವಿಧಿಯ ವಿರುದ್ಧವೂ ಅಲ್ಲ. ಮಸೂದೆಯಿಂದ ಸಮಾನತೆಯ ಹಕ್ಕಿಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಅಮಿತ್ ಶಾ ಹೇಳಿದರು.

೧೯೭೧ರಲ್ಲಿ, ಇಂದಿರಾ ಗಾಂಧಿಯವರು ಬಾಂಗ್ಲಾದೇಶದಿಂದ ಬಂದ ಪ್ರತಿಯೊಬ್ಬರಿಗೂ ಪೌರತ್ವ ನೀಡಲು ನಿರ್ಧರಿಸಿದ್ದರು. ಹಾಗಿರುವಾಗ ಪಾಕಿಸ್ತಾನದಿಂದ ಬಂದವರಿಗೆ ಪೌರತ್ವ ಏಕೆ ನೀಡಲಿಲ್ಲ? ೧೯೭೧ರ ಬಳಿಕ ಕೂಡಾ ಅಲ್ಪಸಂಖ್ಯಾತರು ಬಾಂಗ್ಲಾದೇಶದಲ್ಲಿ  ನಿರಂತರ ಕಿರುಕುಳಕ್ಕೆ ಒಳಗಾಗಿದ್ದರೆ. ಜನಾಂಗ ಹತ್ಯೆ ನಿಂತಿಲ್ಲಎಂದು ಶಾ ನುಡಿದರು.

ಆಲ್ ಇಂಡಿಯಾ ಮಜ್ಲಿಸ್--ಇತ್ತೇಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ನಾಯಕ ಅಸಾದುದ್ದೀನ್ ಓವೈಸಿಇಂತಹ ಕಾನೂನಿನಿಂದ ದೇಶವನ್ನು ರಕ್ಷಿಸಿಎಂದು ಲೋಕಸಭಾಧ್ಯಕ್ಷರಿಗೆ ಮನವಿ ಮಾಡಿದರು.

ಇಂತಹ ಕಾನೂನಿನಿಂದ ದೇಶವನ್ನು ರಕ್ಷಿಸುವಂತೆ ಮತ್ತು ಗೃಹ ಸಚಿವರಿಂದ (ಅಮಿತ್ ಶಾ) ರಕ್ಷಿಸುವಂತೆ ನಾನು ನಿಮಗೆ (ಸಭಾಧ್ಯಕ್ಷ) ಮನವಿ ಮಾಡುತ್ತಿದ್ದೇನೆ. ಇಲ್ಲದೇ ಹೋದಲ್ಲಿ ಇಸ್ರೇಲಿನ ಪೌರತ್ವ ಕಾಯ್ದೆಯ ನೂರೆಂಬರ್ಗ್ ವರ್ಣೀಯ ಕಾನೂನುಗಳು ಜಾರಿಯಾಗಿ ಗೃಹ ಸಚಿವರ ಹೆಸರು (ಅಡಾಲ್ಪ್) ಹಿಟ್ಲರ್ ಮತ್ತು ಡೇವಿಡ್ ಬೆನ್ -ಗುರಿಯನ್ ಹೆಸರುಗಳ ಜೊತೆಗೆ ಸೇರ್ಪಡೆ ಆಗಲಿದೆಎಂದು ಓವೈಸಿ ಹೇಳಿದರು.

ಕಾಂಗ್ರೆಸ್ ಪಕ್ಷವು ಧರ್ಮದ ನೆಲೆಯಲ್ಲಿ ರಾಷ್ಟ್ರವನ್ನು ವಿಭಜಿಸಿದೆ, ಹೀಗಾಗಿ ಮಸೂದೆ ತರುವುದು ಅಗತ್ಯವಾಯಿತು ಎಂದು ಶಾ ನುಡಿದರು.

ಸಂವಿಧಾನದ ಅಡಿಯಲ್ಲಿ ನೀಡಲಾಗಿರುವ ನ್ಯಾಯೋಚಿತ ವರ್ಗೀಕರಣಗಳ ನೆಲೆಯಲ್ಲಿ ಪ್ರಸ್ತಾಪಿತ ಮಸೂದೆಯನ್ನು ತರಲಾಗುತ್ತಿದೆ. ಅದು ಸಂವಿಧಾನದ ಯಾವ ವಿಧಿಯನ್ನೂ ಉಲ್ಲಂಘಿಸುವುದಿಲ್ಲ ಎಂದು ಕೇಂದ್ರ ಸಚಿವರು ಹೇಳಿದರು.

ಮಸೂದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದಲಿ ಧಾರ್ಮಿಕ ಕಿರುಕುಳಕ್ಕೆ ಬಲಿಯಾಗಿ ಭಾರತಕ್ಕೆ ಬಂದಿರುವ ವಲಸೆಗಾರರಿಗೆ ಭಾರತೀಯ ಪೌರತ್ವ ನೀಡಲು ಕೋರಿದೆ ಎಂದು ಶಾ ಹೇಳಿದರು.

೧೯೭೧ರಲ್ಲಿ ಬಾಂಗ್ಲಾದೇಶ ರಚನೆಯ ಬಳಿಕ ಮತ್ತು ಉಗಾಂಡದಲ್ಲಿ ಭಾರತೀಯರ ಮೇಲೆ ನಡೆದ ದಾಳಿ ಸಂದರ್ಭಗಳು ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ನ್ಯಾಯೋಚಿತ ವರ್ಗೀಕರಣಗಳನ್ನು ಬಳಸಿಕೊಂಡು ಅಲ್ಲಿನ ಜನರಿಗೆ ಪೌರತ್ವ ನೀಡಲು ಕಾನೂನುಗಳನ್ನು ರೂಪಿಸಲಾಗಿದೆ ಎಂದು ಗೃಹಸಚಿವರು ನುಡಿದರು.

ಅಧೀರ್ ರಂಜನ್ ಚೌಧರಿ ಹೊರತಾಗಿ ಮಾತನಾಡಿದ ಸೌಗತ ರಾಯ್, ಎನ್ ಕೆ ಪ್ರೇಮಚಂದ್ರನ್, ಗೌರವ್ ಗೊಗೋಯಿ, ಶಶಿ ತರೂರ್ ಅವರೂ  ಧರ್ಮದ ನೆಲೆಯಲ್ಲಿ ಪೌರತ್ವ ನೀಡುವುದು ಸಂವಿಧಾನದ ವಿವಿಧ ವಿಧಿಗಳನ್ನು ಉಲ್ಲಂಘಿಸುತ್ತದೆ. ಇದು ತಿರೋಗಾಮಿ ಮಸೂದೆಎಂದು ಹೇಳಿ ಮಸೂದೆ ಮಂಡನೆಗೆ ವಿರೋಧ ವ್ಯಕ್ತ ಪಡಿಸಿದರು. ಟಿಎಂಸಿಯು ಮಸೂದೆಯನ್ನುವಿಭಜನಕಾರಿ ಮತ್ತು ಸಂವಿಧಾನವಿರೋಧಿಎಂದು ಹೇಳಿತು.

ಬಹಳ ಹೊತ್ತು ಅಮಿತ್ ಶಾ ಮತ್ತ ವಿರೋಧ ಪಕ್ಷಗಳ ನಡುವೆಮಾತಿನ ಸಮರನಡೆಯಿತು.

ಮಸೂದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದ ಮುಸ್ಲಿಮೇತರ ವಲಸೆಗಾರರಿಗೆ ಭಾರತೀಯ ಪೌರತ್ವ ನೀಡುವ ಪ್ರಸ್ತಾಪ ಮಾಡಿದೆ. ನೆರೆರಾಷ್ಟ್ರಗಳಿಂದ  ೨೦೧೪ರ ಡಿಸೆಂಬರ್ ೩೧ರಂದು ಅಥವಾ ಅದಕ್ಕೆ ಮುನ್ನ ಭಾರತವನ್ನು ಪ್ರವೇಶಿಸಿದ ಹಿಂದು, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಸಮುದಾಯಗಳಿಗೆ ಸೇರಿದ ಜನರು ಮಸೂದೆಯ ಅಡಿಯಲ್ಲಿ ಭಾರತದ ಪೌರತ್ವ ಹೊಂದಲು ಅರ್ಹರಾಗುತ್ತಾರೆ.

ವಿವಾದಾತ್ಮಕ ಮಸೂದೆಯ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಪ್ರದೇಶದ ವಿದ್ಯಾರ್ಥಿ ಸಂಘಟನೆಗಳು, ನಾಗರಿಕ ಸಮಾಜದ ಸಮೂಹಗಳು ಮತ್ತು ವಿರೋಧ ಪಕ್ಷಗಗಳು ಮಸೂದೆಯು ಅಲ್ಪಸಂಖ್ಯಾತರ ಪ್ರವಾಹಕ್ಕೆ ಕಾರಣವಾಗುವುದು ಎಂದು ಪ್ರತಿಪಾದಿಸಿದ್ದವು.

ಕಳೆದ ವಾರ ಕೇಂದ್ರ ಸಚಿವ ಸಂಪುಟವು ಪೌರತ್ವ (ತಿದ್ದುಪಡಿ) ಮಸೂದೆಗೆ ಅನುಮೋದನೆ ನೀಡಿ, ಸಂಸತ್ತಿನಲ್ಲಿ ಅದರ ಮಂಡನೆಗೆ ದಾರಿ ಸುಗಮಗೊಳಿಸಿತ್ತು.

ಕಾಂಗ್ರೆಸ್ ಪಕ್ಷವು ಪೌರತ್ವ (ತಿದ್ದುಪಡಿ) ಮಸೂದೆಯನ್ನು  ಪ್ರಬಲವಾಗಿ ವಿರೋಧಿಸಲು ನಿರ್ಧರಿಸಿತ್ತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ನಡೆದ ಸಭೆಯ ಬಳಿಕ ಅಧೀರ್ ರಂಜನ್ ಚೌಧರಿ ಅವರುಸಂವಿಧಾನ, ಜಾತ್ಯತೀತ ತತ್ವಗಳು, ಪರಂಪರೆ, ಸಂಸ್ಕೃತಿ ಮತ್ತು ನಾಗರಿಕತೆಗೆ ವಿರುದ್ಧವಾಗಿರುವ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸುವುದುಎಂದು ಹೇಳಿದ್ದರು.

ಲೋಕಸಭೆಯಲ್ಲಿ ಮಂಡನೆಯಾದಾಗ ತಮ್ಮ ಪಕ್ಷವು ಮಸೂದೆಗೆ ಎರಡು ತಿದ್ದುಪಡಿಗಳನ್ನು ಸೂಚಿಸುವುದು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದರು. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಎಲ್ಲ ಧರ್ಮಗಳಿಗೆ ಸಮಾನ ಉಪಚಾರ ಲಭಿಸಬೇಕು ಎಂದು ಅವರು ತಿಳಿಸಿದ್ದರು.

No comments:

Advertisement