My Blog List

Sunday, January 12, 2020

ಮರಡು ಫ್ಲ್ಯಾಟ್ ಇನ್ನು ನೆನಪು ಮಾತ್ರ: ಕ್ಷಣದಲ್ಲಿ ಧರೆಗುರುಳಿದ ೧೫೮ ಫ್ಲ್ಯಾಟ್‌ಗಳು

ಮರಡು ಫ್ಲ್ಯಾಟ್ ಇನ್ನು ನೆನಪು ಮಾತ್ರಕ್ಷಣದಲ್ಲಿ ಧರೆಗುರುಳಿದ  ೧೫೮  ಫ್ಲ್ಯಾಟ್ಗಳು
ಕೋಚಿ/ ನವದೆಹಲಿ: ಸುಪ್ರೀಂಕೋರ್ಟ್ ಆದೇಶದ ನಾಲ್ಕು ತಿಂಗಳುಗಳ ಬಳಿಕ ಕೇರಳದ ಕೋಚಿಯಲ್ಲಿ ಜಲಾಭಿಮುಖವಾಗಿ ತಲೆಎತ್ತಿ ನಿಂತಿದ್ದ ಒಟ್ಟು ೧೫೮ ಫ್ಲ್ಯಾಟ್ಗಳಿದ್ದ ಎರಡು ಕಟ್ಟಡಗಳನ್ನು ನಿಯಂತ್ರಿತ ಸ್ಫೋಟದ ಮೂಲಕ ಕ್ಷಣಮಾತ್ರದಲ್ಲಿ ನೆಲಸಮ ಗೊಳಿಸುವುದರೊಂದಿಗೆ ತೀವ್ರ ವಿವಾದಕ್ಕೆ ಗುರಿಯಾಗಿದ್ದ ಮರಡು ಫ್ಲ್ಯಾಟ್ಗಳು 2020 ಜನವರಿ 11ರ ಶನಿವಾರ ನೆನಪಿನ ಅಂಗಳಕ್ಕೆ ಸರಿದವು.

ಬಹುಅಂತಸ್ತಿನ ನಾಲ್ಕು ಕಟ್ಟಡಗಳ ಪೈಕಿ ಎಚ್ ೨೦ ಹೋಲಿ ಫೈತ್ ಮತ್ತು ಆಲ್ಫಾ ಸೆರೇನ್ ಹೆಸರಿನ ಕಟ್ಟಡಗಳು ಶನಿವಾರ ಇಸ್ಪೇಟು ಎಲೆಗಳಿಂದ ನಿರ್ಮಿಸಿದ ಕಟ್ಟಡದಂತೆ ದಪದಪನೆ ಕೆಳಕ್ಕುರುಳಿ, ಇಡೀ ಪ್ರದೇಶದಲ್ಲಿ ದೂಳಿನ ಕಾರ್ಮೋಡ ಆವರಿಸಿತು.

ಸುಪ್ರೀಂಕೋರ್ಟ್ ಆದೇಶದಂತೆ ಜಲಾಭಿಮುಖಿ ಅಪಾರ್ಟ್ಮೆಂಟ್ಗಳ ನೆಲಸಮ ಕಾರ್ಯಾಚರಣೆಯನ್ನು  ಈದಿ ನ ಆರಂಭಿಸಿದ ಆಡಳಿತವು ಬೆಳಗ್ಗೆ ೧೧ ಗಂಟೆಗೆ ಎಚ್೨೦ ಹೋಲಿಫೈತ್ ಹೆಸರಿನ ಕಟ್ಟಡವನ್ನು ನಿಯಂತ್ರಿತ ಸ್ಫೋಟದ ಮೂಲಕ ಕೆಲವೇ ಕ್ಷಣಗಳಲ್ಲಿ ಧರೆಗೆ ಉರುಳಿಸಿತು. ಮೊದಲ ಕಟ್ಟಡ ದೂಳೀಪಟವಾದ ಬೆನ್ನಲ್ಲೇ ಆಲ್ಫಾ ಸೆರೇನ್ ಹೆಸರಿನ ಇನ್ನೊಂದು ಕಟ್ಟಡವನ್ನು ಉರುಳಿಸಲಾಯಿತು. ಉಳಿದ ಜೈನ್ ಕೋರಲ್ ಕೇವ್ ಮತ್ತು ಗೋಲ್ಡನ್ ಕಯಲೋರಂ ಹೆಸರಿನ ಅಪಾರ್ಟ್ಮೆಂಟ್ಗಳ ನೆಲಸಮ ಕಾರ್ಯಾಚರಣೆಯನ್ನು 2020 ಜನವರಿ 11ರ ಭಾನುವಾರ ಕೈಗೆತ್ತಿಕೊಳ್ಳಲಾಗುವುದು.

ವಸತಿ ಹಾಗೂ ವಾಣಿಜ್ಯ ಕಟ್ಟಡಗಳು ಸೇರಿದಂತೆ ಅಕ್ರಮ ಕಟ್ಟಡಗಳ ಧ್ವಂಸ ಕಾರ್ಯಾಚರಣೆಯಲ್ಲಿ ಭಾರತದಲ್ಲೇ ಅತ್ಯಂತ ಬೃಹತ್ ಪ್ರಮಾಣದ ನೆಲಸಮ ಕಾರ್ಯಾಚರಣೆ ಇದಾಗಿತ್ತು.

ನಿವಾಸಿಗಳನ್ನು ತೆರವುಗೊಳಿಸಲಾಗಿದ್ದ ಅಪಾರ್ಟ್ಮೆಂಟ್ ಕಟ್ಟಡಗಳ ಪ್ರದೇಶದಲ್ಲಿ ಸೆಕ್ಷನ್ ೧೪೪ರ ಅಡಿಯಲ್ಲಿ ನಿರ್ಬಂಧಕ ಆಜ್ಞೆಯನ್ನು ವಿಧಿಸಲಾಗಿತ್ತು. ತೆರವು ವಲಯದಲ್ಲಿನ ಎಲ್ಲ ನಿವಾಸಿಗಳಿಗೂ ತಮ್ಮ ಮನೆಗಳಲ್ಲಿ ವಿದ್ಯುತ್ ಬಂದ್  ಮಾಡುವಂತೆ ಮತ್ತು  ಎಲ್ಲ ಎಲೆಕ್ಟ್ರಾನಿಕ್, ಗ್ಯಾಸ್ ಇತ್ಯಾದಿ ಉಪಕರಣಗಳ ಕಾರ್ಯಾಚರಣೆ ಸ್ಥಗಿತಗೊಳಿಸಿ, ದೂಳು ಒಳಹೋಗದಂತೆ ರಕ್ಷಿಸಲು ಮನೆಗಳ ಕಿಟಕಿ ಬಾಗಿಲುಗಳನ್ನು ಭದ್ರ ಪಡಿಸಿ ಮನೆಗಳಿಂದ ಹೊರ ಹೋಗುವಂತೆ ಸೂಚಿಸಲಾಗಿತ್ತು.

ವಾಯುಮಾರ್ಗ
ಮತ್ತು ಜಲಮಾರ್ಗ ಮೂಲಕ ಸಂಚರಿಸುವ ವಾಹನಗಳು ಸೇರಿದಂತೆ ಎಲ್ಲ ಬಗೆಯ ವಾಹನ ಸಂಚಾರಗಳನ್ನು ತೆರವು ವಲಯದಲ್ಲಿ ನಿಷೇಧಿಸಲಾಗಿತ್ತು.

ನೆಲಸಮಗೊಳಿಸುವ ಕಟ್ಟಡಗಳಲ್ಲಿ ಸ್ಫೋಟಕಗಳನ್ನು ಇರಿಸಿದ್ದುದರಿಂದ ತೆರವು ಪ್ರದೇಶದಲ್ಲಿ ತತ್ ಕ್ಷಣದಿಂದ ಡ್ರೋಣ್ಗಳನ್ನೂ ಹಾರಿಸಲು ಯಾರಿಗೂ ಅವಕಾಶ ನೀಡಿರಲಿಲ್ಲ. ಯಾವುದೇ ಸೂಚನೆಗಳ ಉಲ್ಲಂಘನೆಯು ಅತ್ಯಂತ ಅಪಾಯಕಾರಿಯಾಗಿದ್ದು, ಉಲ್ಲಂಘಿಸಿದವರು ಉಗ್ರ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಮೊದಲೇ ಸೂಚನೆ ನೀಡಲಾಗಿತ್ತು.

ಮರಡು ಸಮುಚ್ಚಯದ ಒಟ್ಟು ನಾಲ್ಕು ಕಟ್ಟಡಗಳಲ್ಲಿ ಒಟ್ಟು ೩೫೬ ಫ್ಲ್ಯಾಟುಗಳಿದ್ದು, ೨೪೦ ಕುಟುಂಬಗಳು ವಾಸವಾಗಿದ್ದವು.

ನಿವಾಸಿಗಳನ್ನು ಹೊರಕ್ಕೆ ಕಳುಹಿಸಿದ ಬಳಿಕ, ಅಧಿಕಾರಿಗಳು ಕಟ್ಟಡದಲ್ಲಿನ ಕಿಟಕಿಗಳು ಮತ್ತು ಇತರ ವಸ್ತುಗಳನ್ನು ಅಲ್ಲಿಂದ ತೆರವುಗೊಳಿಸಿದ್ದರು. ಕಟ್ಟಡದಲ್ಲಿ ಅಸ್ಥಿಪಂಜರ ರಚನೆ ಮಾತ್ರವೇ ಉಳಿದಿತ್ತು.

ಕರಾವಳಿ
ನಿಯಂತ್ರಣ ವಲಯ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮರಡು ಸಮುಚ್ಚಯವನ್ನು ೨೦೧೯ರ ಸೆಪ್ಟೆಂಬರ್ ೨೦ರ ಒಳಗಾಗಿ ನೆಲಸಮ ಮಾಡುವಂತೆ ಸುಪ್ರೀಂಕೋರ್ಟ್ ಸೆಪ್ಟೆಂಬರ್ ೬ರಂದು ಆಜ್ಞಾಪಿಸಿತ್ತು. ಆದರೆ ಕೇರಳ ಸರ್ಕಾರವು ಆದೇಶವನ್ನು ಜಾರಿಗೊಳಿಸದೆ ಕಣ್ಣಾಮುಚ್ಚಾಲೆಯಾಡುತ್ತಾ ತೂಗುಯ್ಯಾಲೆಯಲ್ಲಿ ಇಟ್ಟಿತ್ತು.

ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಾಮ್ ಜೋಸ್ ಅವರ ವಿರುದ್ಧ ಕೋರ್ಟ್ ಕೆಂಡಾಮಂಡಲ ಸಿಟ್ಟು ವ್ಯಕ್ತಪಡಿಸಿದಾಗ, ಕೇರಳ ಸರ್ಕಾರವು ಬೇರೆ ಮಾರ್ಗವೇ ಇಲ್ಲದೆ ಕಟ್ಟಡಗಳ ನೆಲಸಮಕ್ಕೆ ಕಟ್ಟಕಡೆಗೂ ಸಿದ್ಧವಾಗಿತ್ತು.

ಹಲವಾರು ಸುತ್ತಿನ ಮಾತುಕತೆಗಳ ಬಳಿಕ ಮುಕ್ತ ಹರಾಜು ಪ್ರಕ್ರಿಯೆಯ ಮೂಲಕ ಕಟ್ಟಡ ನೆಲಸಮ ಕಾರ್ಯಾಚರಣೆಗೆ ದಿನಾಂಕ ನಿಗದಿ ಪಡಿಸಲಾಗಿತ್ತು. ನೆಲಸಮ ಕಾರ್ಯಾಚರಣೆಯ ಹೊಣೆಯನ್ನು ಹಿಂದೆ ಇಂತಹ ಕಾರ್ಯಾಚರಣೆಗಳನ್ನು ಕೈಗೊಂಡಿದ್ದ ಕಂಪೆನಿಗಳಿಗೆ ವಹಿಸಲಾಗಿತ್ತು.

ಎಚ್೨೦ ಹೋಲಿಫೈತ್ ಮತ್ತು ಆಲ್ಫಾ ಸೆರೇನ್ ಗಗನಚುಂಬಿ ಕಟ್ಟಡಗಳನ್ನು ಬೆಳಗಿನ ೧೧.೩೦ರ ವೇಳೆಯಲ್ಲಿ ಧರೆಗುರುಳಿಸುವ ಮೂಲಕ ಸುಪ್ರೀಂಕೋರ್ಟಿನ ಆದೇಶವನ್ನು ಜಾರಿಗೊಳಿಸಲಾಯಿತು ಎಂದು ಅಧಿಕಾರಿಗಳು ಬಳಿಕ ತಿಳಿಸಿದರು.

೧೯ ಅಂತಸ್ತುಗಳ ಅಪಾರ್ಟ್ಮೆಂಟ್ ಸಮುಚ್ಚಯ ಹೋಲಿಫೈತ್ ಮೂರನೇ ಸೈರನ್ ಮೊಳಗಿಸಿದ ಕೆಲವೇ ಸೆಕೆಂಡ್ಗಳಲ್ಲಿ ಕುಸಿಯಿತು. ಇಡೀಪ್ರದೇಶವನ್ನು ಆವರಿಸಿದ ದೂಳು ಕೇವಲ ೧೦ ನಿಮಿಷಗಳ ಒಳಗಾಗಿ ನೆಲ ಸೇರಿ, ಫ್ಲ್ಯಾಟ್ಗಳಿದ್ದ ಯಾವುದೇ ಕುರುಹು ಕೂಡಾ ಇಲ್ಲದಂತೆ ಮಾಡಿತು. ಕಟ್ಟಡದಲ್ಲಿ ೯೧ ಫ್ಲ್ಯಾಟ್ಗಳಿದ್ದವು. ೧೭ ಅಂತಸ್ತುಗಳ ೬೭ ಫ್ಲ್ಯಾಟ್ಗಳಿದ್ದ ಆಲ್ಫಾ ಸೆರೇನ್ ಕಟ್ಟಡ ಬಳಿಕ ನೆಲಸಮವಾಯಿತು.

ಅಪಾರ್ಟ್ಮೆಂಟ್ ಸಮುಚ್ಚಯವನ್ನು ಧರೆಗುರುಳಿಸಲು ೨೧೨. ಕಿಲೋ ಗ್ರಾಂ ಸ್ಫೋಟಕಗಳನ್ನು ಬಳಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತೆರವು ವಲಯದ ಹೊರಗಿನಿಂದಲೇ ಸಹಸ್ರಾರು ಮಂದಿ ಕಟ್ಟಡ ನೆಲಸಮ ಕಾರ್ಯಾಚರಣೆಯನ್ನು ವೀಕ್ಷಿಸಿದರು. ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರವನ್ನು ತಡೆ ಹಿಡಿಯಲಾಗಿತ್ತು. ಈದಿನ ಕುಸಿದ ಎರಡು ಕಟ್ಟಡಗಳಲ್ಲಿ ಒಟು ೭೩ ಫ್ಲ್ಯಾಟ್ಗಳಿದ್ದವು.

ಕರಾವಳಿ ನಿಯಂತ್ರಣ ವಲಯ ನಿಯಮಾವಳಿಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿದ್ದ ೩೪೩ ಫ್ಲ್ಯಾಟ್ಗಳನ್ನು ಒಳಗೊಂಡ  ಜಲಾಭಿಮುಖಿ ಸಮುಚ್ಚಯಗಳನ್ನು ೧೩೮ ದಿನಗಳ ಒಳಗಾಗಿ ನೆಲಸಮಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ೨೦೧೯ರ ಸೆಪ್ಟೆಂಬರಿನಲ್ಲಿ ಕೇರಳ ಸರ್ಕಾರಕ್ಕೆ ಆದೇಶ ನೀಡಿತ್ತು.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ:  https://twitter.com/i/status/1215873513812180993


No comments:

Advertisement