ಚಂದ್ರಬಾಬು ನಾಯ್ಡು ಕನಸಿನ ಅಮರಾವತಿ ಅಭಿವೃದ್ಧಿಗೆ ಜಗನ್ ಎಳ್ಳುನೀರು
ನವದೆಹಲಿ: ತೀವ್ರ ವಿರೋಧದ ನಡುವೆಯೂ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸರ್ಕಾರವು2020
ಜನವರಿ 20ರ ಸೋಮವಾರ ಆರಂಭವಾದ ಮೂರು ದಿನಗಳ ರಾಜ್ಯ ವಿಧಾನಸಭಾ ವಿಶೇಷ ಅಧಿವೇಶನದಲ್ಲಿ "ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ" ಕುರಿತಾದ ಮಸೂದೆ ಮಂಡಿಸಿತು.
ಮೂರುದಿನಗಳ ಚರ್ಚೆಯ ಬಳಿಕ ಮಸೂದೆ ಅಂಗೀಕಾರಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಯಿತು. ಇದರೊಂದಿಗೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕನಸಿನ ಅಮರಾವತಿ ಅಭಿವೃದ್ಧಿಗೆ ಜಗನ್ ಸರ್ಕಾರ ಎಳ್ಳುನೀರು ಬಿಟ್ಟಿತು.
ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾದ ಮಸೂದೆಯ ಮೇಲೆ ವಿಧಾನಸಭೆಯಲ್ಲಿ ಸೋಮವಾರ ಇಡೀ ದಿನ ಕೋಲಾಹಲಕಾರಿ ಚರ್ಚೆ ನಡೆಯಿತು.
ವಿಧಾನಸಭೆಯಲ್ಲಿ ಆಂಧ್ರಪ್ರದೇಶ ಹಣಕಾಸು ಸಚಿವ ಬುಗ್ಗನ್ ರಾಜೇಂದ್ರನಾಥ್ ರೆಡ್ಡಿ, ರಾಜ್ಯಾಡಳಿತ ವಿಕೇಂದ್ರಿಕರಣ ಮಸೂದೆ ಮಂಡಿಸಿದರು. ಜತೆಗೆ ಆಂಧ್ರದ ಎಲ್ಲಾ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮಸೂದೆಯನ್ನು ಮಂಡನೆ ಮಾಡಿದರು
ಎಂದು ವರದಿಗಳು ಹೇಳಿದವು.
ಆಂಧ್ರಪ್ರದೇಶ ವಿಭಜನೆಯಾದಾಗ ಆಂಧ್ರಪ್ರದೇಶ ಪುನರ್ರಚನೆ ಕಾಯ್ದೆ ಸಮಿತಿ ಅಧ್ಯಕ್ಷರಾಗಿ ಕೆ.ಎಸ್ ಶಿವರಾಮಕೃಷ್ಣನ್ ಅವರನ್ನು ನೇಮಿಸಲಾಗಿತ್ತು. ಹಲವು ದಿನಗಳ ಅಧ್ಯಯನದ ನಂತರ ಕೆ.ಎಸ್ ಶಿವರಾಮಕೃಷ್ಣನ್ ಸಮಿತಿ ಶಿಫಾರಸುಗಳನ್ನು ಪರಿಗಣಿಸದೆ ಅಂದು ಆಂಧ್ರಪ್ರದೇಶದ ರಾಜಧಾನಿಯನ್ನು ನಿರ್ಧರಿಸಲಾಗಿತ್ತು. ಆದರೆ ಈಗ ಇತರೆ ಪ್ರದೇಶಗಳ ಆರ್ಥಿಕ ಅಭಿವೃದ್ಧಿ ಬಗ್ಗೆ ಒತ್ತು ನೀಡಿ ಆಡಳಿತ ವಿಕೇಂದ್ರಿಕರಣ ಮಾಡಲಾಗುತ್ತಿದೆ ಎಂದು ರಾಜೇಂದ್ರನಾಥ್ ರೆಡ್ಡಿ ಮಸೂದೆಯನ್ನು ಮಂಡಿಸುತ್ತಾ ಸದನಕ್ಕೆ ತಿಳಿಸಿದರು.
ರಾಜ್ಯಾಡಳಿತ ವಿಕೇಂದ್ರಿಕರಣ ಬಗ್ಗೆ ವಿವಿಧ ಸಮಿತಿಗಳು ನೀಡಿದ ವರದಿಗಳನ್ನು ಪರಿಶೀಲಿಸಿದ್ದೇವೆ. ಸಮಾನ ಮತ್ತು ವಿಕೇಂದ್ರೀಕೃತ ಅಭಿವೃದ್ಧಿಯನ್ನು ಖಚಿತಪಡಿಸಿಕೊಂಡ ನಂತರವೇ ಈ ಮಸೂದೆ ಮಂಡಿಸಲಾಗಿದೆ ಎಂದು ರಾಜೇಂದ್ರನಾಥ್ ರೆಡ್ಡಿ ಹೇಳಿದರು.
ಈ ಹಿಂದೆಯೇ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿ ಮಾಡುವುದಾಗಿ ಘೋಷಿಸಿದ್ದರು. ಅದಾದ ಬಳಿಕ ರಾಜ್ಯದಲ್ಲಿ ಪರಿಸ್ಥಿತಿ ಭಾರೀ ಗಂಭೀರವಾಗಿತ್ತು. ಮಸೂದೆ ಪ್ರಕಾರ ಅಮರಾವತಿಯನ್ನು ಶಾಸಕಾಂಗ ರಾಜಧಾನಿಯನ್ನಾಗಿ; ವಿಶಾಖಪಟ್ಟಣವನ್ನು ಕಾರ್ಯಾಂಗ ರಾಜಧಾನಿಯನ್ನಾಗಿ ಮತ್ತು ಕರ್ನೂಲ್ ನ್ಯಾಯಾಂಗ ರಾಜಧಾನಿಯನ್ನಾಗಿ ಮಾಡಲು ಉದ್ದೇಶಿಸಲಾಗಿತ್ತು.
ವಿಧಾನಸಭಾ ಅಧಿವೇಶನಕ್ಕೂ ಮುನ್ನವೇ ಜಗನ್ ನೇತೃತ್ವದ ಸಚಿವ ಸಂಪುಟ ಈ ಮಸೂದೆಗೆ ಒಪ್ಪಿಗೆ ನೀಡಿತು. ಹಾಗೆಯೇ ರಾಜಧಾನಿಗೆ ಸಂಬಂಧಿಸಿದ ಸಚಿವರು ಮತ್ತು ತಜ್ಞರ ಸಮಿತಿಗಳ ಶಿಫಾರಸುಗಳಿಗೂ ಸಂಪುಟ ಸಮ್ಮತಿ ನೀಡಿತು.
ಆಂಧ್ರ ಪ್ರದೇಶದ ರಾಜಧಾನಿಯಾಗಿ ಅಮರಾವತಿಯನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಕೈಬಿಟ್ಟ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಆಂಧ್ರ ಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವನ್ನು ರದ್ದುಪಡಿಸಲು ನಿರ್ಧಾರ ಕೈಗೊಂಡಿತು. ಆದರೆ ಹೊಸ ರಾಜಧಾನಿ ಕುರಿತು ಇನ್ನೂ ಯಾವುದೇ ಘೋಷಣೆ ಮಾಡಿಲ್ಲ.
ಗುಂಟೂರು ಜಿಲ್ಲೆಯಲ್ಲಿ, ಕೃಷ್ಣಾ ನದಿಯ ದಂಡೆಯಲ್ಲಿ ೩೩ ಸಾವಿರ ಎಕರೆ ಪ್ರದೇಶದಲ್ಲಿ ಹೊಸ ರಾಜಧಾನಿ ನಿರ್ಮಿಸುವ ಯೋಜನೆಯನ್ನು ಹಿಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೈಗೆತ್ತಿಕೊಂಡಿದ್ದರು. ಆದರೆ, ಈಗಿನ ಮುಖ್ಯಮಂತ್ರಿ ಜಗನ್ ಅವರು, ಅಮರಾವತಿ ತಮ್ಮ ಆದ್ಯತೆ ಅಲ್ಲ ಎಂದು ಈ ಹಿಂದೆಯೇ ಹೇಳಿದ್ದರು.
ಮುಂಗಡಪತ್ರದಲ್ಲಿ ಯೋಜನೆಗೆ ೫೦೦ ಕೋಟಿ ಮಾತ್ರ ಮೀಸಲು ಇಟ್ಟು, ಅಮರಾವತಿಯನ್ನು ರಾಜಧಾನಿಯಾಗಿ ಅಭಿವೃದ್ಧಿಪಡಿಸುವ ಉದ್ದೇಶ ಇಲ್ಲ ಎಂಬ ಸಂದೇಶ ರವಾನಿಸಿದ್ದರು.
ರಾಜಧಾನಿ ಅಭಿವೃದ್ಧಿಗೆ ಸಂಬಂಧಿಸಿ ಸರ್ಕಾರದ ನೀತಿ ಏನು ಎಂಬುದು ಸದ್ಯವೇ ಪ್ರಕಟವಾಗಲಿದೆ ಎಂದು ಪಂಚಾಯಿತಿರಾಜ್ ಸಚಿವ ಬೊಚ್ಚ ಸತ್ಯನಾರಾಯಣ ಆಗಸ್ಟ್ ತಿಂಗಳಲ್ಲಿ ಹೇಳಿದ್ದರು.
ನದಿಯ ದಂಡೆಯಲ್ಲಿ ರಾಜಧಾನಿಯನ್ನು ಕಟ್ಟುವುದರಲ್ಲಿ ಹಲವು ಸಮಸ್ಯೆಗಳಿವೆ. ನಾಯ್ಡು ಅವರು ಆಯ್ಕೆ ಮಾಡಿಕೊಂಡ ಸ್ಥಳ ರಾಜಧಾನಿಗೆ ಸೂಕ್ತವಲ್ಲ ಎಂಬುದನ್ನು ಇತ್ತೀಚಿನ ಪ್ರವಾಹ ತೋರಿಸಿಕೊಟ್ಟಿದೆ. ಪ್ರವಾಹದ ನಿರ್ವಹಣೆಗಾಗಿ ಪ್ರತ್ಯೇಕ ಕಾಲುವೆಗಳು ಮತ್ತು ಚರಂಡಿ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದೂ ಅವರು ತಿಳಿಸಿದ್ದರು.
‘ಇಂತಹ ಸ್ಥಳದಲ್ಲಿ ರಾಜಧಾನಿ ಕಟ್ಟುವುದು ಬೊಕ್ಕಸಕ್ಕೆ ಅನಗತ್ಯ ಹೊರೆ ಉಂಟು ಮಾಡುತ್ತದೆ. ಪ್ರಕಾಶಂ ಜಿಲ್ಲೆಯ ದೊನಕೊಂಡವನ್ನು ರಾಜಧಾನಿಗಾಗಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ’ ಎಂಬ ಸುಳಿವನ್ನು ಅವರು ಕೊಟ್ಟಿದ್ದರು.
No comments:
Post a Comment