My Blog List

Monday, January 20, 2020

ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್?

ಮಂಗಳೂರು  ಬಜ್ಪೆ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್?

ಬೆಂಗಳೂರು/ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಬಜ್ಪೆ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಇದೆ ಎಂದು ಶಂಕಿಸಲಾಗಿರುವ ಬ್ಯಾಗ್ ಒಂದು 2020 ಜನವರಿ 20ರ ಸೋಮವಾರ ಬೆಳಗ್ಗೆ ಪತ್ತೆಯಾಗಿದ್ದು, ಸ್ಥಳದಲ್ಲಿ ಆತಂಕದ ಪರಿಸ್ಥಿತಿ ಸೃಷ್ಟಿಯಾಯಿತು ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.

ಅನುಮಾನಾಸ್ಪದ ಬ್ಯಾಗ್ ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಯಿತು.  ಘಟನೆಯಿಂದ ಭದ್ರತಾ ಸಿಬ್ಬಂದಿ ತಬ್ಬಿಬ್ಬಾದರು ಎಂದು ವರದಿ ಹೇಳಿತು.

ಸೋಮವಾರ ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಓರ್ವ ಆಟೋ ಚಾಲಕ ಸಜೀವ ಬಾಂಬ್ ಇದೆ ಎಂದು ಶಂಕಿಸಲಾದ ಲ್ಯಾಪ್ ಟ್ಯಾಪ್ ಬ್ಯಾಗನ್ನು ಎಸೆದು ಹೋಗಿದ್ದ. ಹೀಗಾಗಿ ಕೆಲ ಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು ಎಂದು ವರದಿ ತಿಳಿಸಿತು. ನಗರದ ಪೊಲೀಸ್ ಕಮೀಷನರ್ ಡಾ.ಹರ್ಷ ಸ್ಥಳಕ್ಕೆ ಆಗಮಿಸಿದ್ದು  ತನಿಖೆ ಮುಂದುವರೆದಿದೆ ಎಂದು ವರದಿ ತಿಳಿಸಿತು.
ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ತುರ್ತಾಗಿ ಮಂಗಳೂರಿಗೆ ತೆರಳಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳ
ಪರಿಶೀಲನೆ ನಡೆಸಲಾಗಿದೆ ಎಂದು ವರದಿಗಳು ಹೇಳಿವೆ. ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿತು.
ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿನ ಟಿಕೆಟ್ ಕೌಂಟರ್ ಸಮೀಪದ ಭದ್ರತಾ ತಪಾಸಣಾ ಗೇಟ್ ಬಳಿ ಬೆಳಿಗ್ಗೆ ಸುಮಾರು ೧೦ ಗಂಟೆಗೆ ಲ್ಯಾಪ್ ಟ್ಯಾಪ್ ಬ್ಯಾಗ್ ಅನುಮಾನಸ್ಪದವಾಗಿ ಪತ್ತೆಯಾಗಿತ್ತು . ಬ್ಯಾಗ್ ಗಮನಿಸಿದ ನಿಲ್ದಾಣದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು.
ನಂತರ ಅಧಿಕಾರಿಗಳು ಜನರನ್ನು ಅಲ್ಲಿಂದ ದೂರ ಸರಿಸಿ ಬ್ಯಾಗನ್ನು ಅಲ್ಲಿಂದ ದೂರಕ್ಕೆ ರವಾನಿಸಿದರು. ವಿಮಾನ ನಿಲ್ದಾಣದಿಂದ ಸುಮಾರು ೫೦೦ ಮೀಟರ್ ನಷ್ಟು ದೂರದಲ್ಲಿ ಅನುಮಾನಾಸ್ಪದ  ಬ್ಯಾಗನ್ನು  ಬಾಂಬ್ ನಿಷ್ಕ್ರಿಯ ಯಂತ್ರದ  ಒಳಗೆ ಇರಿಸಲಾಯಿತು.   ಭಾಗಕ್ಕೆ ಪ್ರವೇಶಿಸಲು ಅನುಮತಿ ನಿರಾಕರಿಸಲಾಯಿತು ಎಂದು ವರದಿ ತಿಳಿಸಿತು.
ಪ್ರಯಾಣಿಕರ ಸುರಕ್ಷಿತೆಯ ದೃಷ್ಟಿಯಿಂದ ವಿಮಾನ ನಿಲ್ದಾಣಕ್ಕೆ ಬರುವ ದಾರಿಯನ್ನು ಬದಲಾವಣೆ ಮಾಡಲಾಗಿದೆ.ವಿಮಾನಗಳ ಸಂಚಾರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ವಿಮಾನ ಸಂಚಾರ ಎಂದಿನಂತೆ ನಡೆಯುತ್ತಿದೆ ಎಂದು ವರದಿ ತಿಳಿಸಿತು.
ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ  ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.ವಿಮಾನ ನಿಲ್ದಾಣದ ಎಲ್ಲ ಪ್ರವೇಶ ದ್ವಾರಗಳನ್ನು ಬಂದ್ ಮಾಡಲಾಗಿದ ಎಂದು ವರದಿಗಳು ಹೇಳಿವೆ.
ಅಪರಿಚಿತ ವ್ಯಕ್ತಿಗಳು ಆಟೊ ರಿಕ್ಷಾದಲ್ಲಿ ಬಂದು ಬ್ಯಾಗ್ ಇರಿಸಿ ಹೋಗಿದ್ದಾರೆ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿತು. 

No comments:

Advertisement