My Blog List

Tuesday, January 7, 2020

ರಾಜಧಾನಿಯ ’ಗದ್ದುಗೆ ಗುದ್ದಾಟ’ಕ್ಕೆ ರಂಗ ಸಜ್ಜು

ರಾಜಧಾನಿಯಗದ್ದುಗೆ ಗುದ್ದಾಟಕ್ಕೆ ರಂಗ ಸಜ್ಜು
ದೆಹಲಿ ಅಸೆಂಬ್ಲಿ ಚುನಾವಣೆ ಘೋಷಣೆ, ಮತದಾನ ಫೆಬ್ರುವರಿ , ಫಲಿತಾಂಶ ಫೆ.೧೧ಕ್ಕೆ
ನವದೆಹಲಿ: ಇಡೀ ದೇಶದ ಕೇಂದ್ರ ಬಿಂದುವಾಗಿರುವ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣಾ ದಿನಾಂಕ 2020 ಜನವರಿ 06ರ ಸೋಮವಾರ ಪ್ರಕಟಗೊಳ್ಳುವುದರೊಂದಿಗೆ ಇನ್ನೊಂದು ಸುತ್ತಿನ ಪ್ರತಿಷ್ಠಿತ ರಾಜಕೀಯ ಸಮರಕ್ಕೆ ರಂಗ ಸಜ್ಜುಗೊಂಡಿದೆ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಧ್ಯ ಜಿದ್ದಾಜಿದ್ದಿ ಸಮರ ನಡೆಯಲಿದೆ.

೭೦
ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ ೮ರಂದು ಚುನಾವಣೆ ನಡೆಯಲಿದ್ದು, ಫೆಬ್ರುವರಿ ೧೧ರಂದು ಮತಗಳ ಎಣಿಕೆ ನಡೆಯಲಿದೆ. ದೆಹಲಿ ವ್ಯಾಪ್ತಿಯಲ್ಲಿ ಈದಿನದಿಂದಲೇ  ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ದೆಹಲಿಯ
ಹಾಲಿ ವಿಧಾನಸಭೆಯ ಅವಧಿ ಫೆಬ್ರುವರಿ ೨೨ರಂದು ಮುಕ್ತಾಯಗೊಳ್ಳಲಿದ್ದು, ನೂತನ ವಿಧಾನಸಭೆ ಅದಕ್ಕೆ ಮುನ್ನ ರಚನೆಯಾಗಬೇಕಾಗಿದೆ.

೨೦೧೫ರ
ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದ್ದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು (ಆಪ್) ಚುನಾವಣೆಯಲ್ಲಿ ಪುನರಾಯ್ಕೆ ಬಯಸುತ್ತಿದೆ. ೨೦೧೫ರ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ೬೭ ಸ್ಥಾನಗಳನ್ನು ಗೆದ್ದಿತ್ತು. ಉಳಿಕ ಸ್ಥಾನಗಳನ್ನು  ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆದ್ದಿತ್ತು. ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿತ್ತು.

೨೦೨೦ರ ಫೆಬ್ರುವರಿ ೮ರಂದು ದೆಹಲಿ ವಿಧಾನಸಭೆಗೆ ಏಕಹಂತದ ಚುನಾವಣೆ ನಡೆಯಲಿದ್ದು, ಮತಗಳ ಎಣಿಕೆ ಫೆಬ್ರುವರಿ ೧೧ರಂದು ನಡೆಯಲಿದೆ. ನಾಮಪತ್ರ ಸಲ್ಲಿಕೆಗಾಗಿ ಜನವರಿ ೧೪ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಜನವರಿ ೨೨ ಅಂತಿಮ ದಿನವಾಗಿರುತ್ತದೆ. ನಾಮಪತ್ರ ವಾಪಸಿಗೆ ಜನವರಿ ೨೪ ಕೊನೆಯ ದಿನ ಎಂದು ಸುನಿಲ್ ಅರೋರಾ ಹೇಳಿದರು.

ಮಾದರಿ
ನೀತಿ ಸಂಹಿತೆ: ಮಾದರಿ ನೀತಿ ಸಂಹಿತೆಯು ದೆಹಲಿಯಲ್ಲಿ ತತ್ ಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸಿಇಸಿ ನುಡಿದರು.

ರಾಜಕೀಯ
ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಚುನಾವಣೆ ಕಾಲದಲ್ಲಿ ಮುಖ್ಯವಾಗಿ ಭಾಷಣಗಳ ವೇಳೆಯಲ್ಲಿ ಅನುಸರಿಸಬೇಕಾದ ನಿಯಮಗಳು ಹಾಗೂ ಮತದಾನದ ದಿನ, ಮತಗಟ್ಟೆಗಳಲ್ಲಿ, ಚುನಾವಣಾ ಪ್ರಣಾಳಿಕೆಗಳಲ್ಲಿ, ಮೆರವಣಿಗೆಗಳಲ್ಲಿ ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಲಾಗಿದೆ ಹಾಗೂ ಸಾಮಾನ್ಯ ಮಾದರಿ ಸಂಹಿತೆಯನ್ನೂ ಹೊರಡಿಸಲಾಗಿದೆ. ಮಾಧ್ಯಮ ನಿಗಾ ಘಟಕವನ್ನೂ ಚುನಾವಣೆ ಸಲುವಾಗಿ ರಚಿಸಲಾಗುವುದು ಎಂದು ವಿವರಿಸಿದ ಅರೋರಾ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟು  ಜಾರಿಗೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಅವರು ಹೇಳಿದರು.

ರಾಷ್ಟ್ರದ
ರಾಜಧಾನಿ ಪ್ರದೇಶದಲ್ಲಿ ಒಟ್ಟು ,೪೬,೯೨,೧೩೬ ಮತದಾರರಿದ್ದಾರೆ. ಇವರ ಪೈಕಿ ೮೦.೫೫ ಲಕ್ಷ ಮಂದಿ ಪುರುಷರು ಮತ್ತು  ೬೬.೩೫ ಲಕ್ಷ ಮಂದಿ ಮಹಿಳೆಯರು. ಒಟ್ಟು ೧೩,೭೫೦ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದು ಅರೋರಾ ನುಡಿದರು.

ಚುನಾವಣಾ
ಪ್ರಕ್ರಿಯೆ ಶಾಂತಿಯುತ ಹಾಗೂ ಸುರಳೀತವಾಗಿ ನಡೆಯಲು ೯೦,೦೦೦ ಪೊಲೀಸರನ್ನು ನಿಯೋಜಿಸಲಾಗುವುದು. ಹೆಚ್ಚುವರಿ ಕಾರ್ಯದರ್ಶಿಯವರು ಯಾರೇ ಹೆಚ್ಚುವರಿ ಅಧಿಕಾರಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬೇಕಾಗಿ ಬಂದಲ್ಲಿ ಹೊಣೆಗಾರಿಕೆಯನ್ನು ನಿಭಾಯಿಸುವರು ಎಂದು ಸಿಇಸಿ ಹೇಳಿದರು.

ಚುನಾವಣಾ
ವೇಳಾಪಟ್ಟಿ ಅಂತಿಮಗೊಳಿಸುವುದಕ್ಕೆ ಮುನ್ನ ಮೂವರು ಕಾರ್ಯದರ್ಶಿಗಳ ಜೊತೆಗೆ ಸಮಾಲೋಚನೆಗಳನ್ನು ನಡೆಸಲಾಗಿದೆ. ಆಯೋಗವು ಡಿಸೆಂಬರ್ ೨೬ರಂದು ಚುನಾವಣಾ ಸಿದ್ಧತೆ ಪರಿಶೀಲನೆಗಾಗಿ ದೆಹಲಿ ಪೊಲೀಸ್ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳ ಸಭೆ ನಡೆಸಿತ್ತು ಎಂದು ಅರೋರಾ ತಿಳಿಸಿದರು.

ಆಪ್- ಬಿಜೆಪಿ ಜಿದ್ದಾಜಿದ್ದಿ: ದೆಹಲಿ ವಿಧಾನಸಭೆಯ ಚುನಾವಣಾ ಪ್ರಚಾರ ಸಮರವನ್ನು ಬಿಜೆಪಿಯ ಪ್ರಧಾನಿ ಮೋದಿ ಬ್ರ್ಯಾಂಡ್ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಆಧರಿಸಿಯೇ ನಡೆಸಲಿದೆ.

ಬಿಜೆಪಿ
ಅಧ್ಯಕ್ಷ ಅಮಿತ್ ಶಾ ಅವರು ಬಿಜೆಪಿ ಕಾರ್ಯಕರ್ತರಿಗೆ ದಲಿತರು, ಸಿಕ್ಖರು ಮತ್ತು ನಿರಾಶ್ರಿತರನ್ನು ಮನೆ ಮನೆಗೆ ತೆರಳಿ ಭೇಟಿ ಮಾಡುವಂತೆ ಮತ್ತು ಪ್ರಚಾರ ನಡೆಸುವಂತೆ ಸೂಚನೆ ನೀಡಿದ್ದಾರೆ. ’ಮೋದಿಜಿ ಅವರಿಗೆ ಪೌರತ್ವ ನೀಡಬಯಸಿದ್ದಾರೆ, ಆದರೆ ದಲಿತ ವಿರೋಧಿ ಕೇಜ್ರಿವಾಲ್ ಮತ್ತು ದಲಿತ ವಿರೋಧಿ ಕಾಂಗ್ರೆಸ್ ಇದನ್ನು ವಿರೋಧಿಸುತ್ತಿದೆ ಎಂಬುದನ್ನು ದಲಿತರು, ನಿರಾಶ್ರಿತರಿಗೆ ತಿಳಿಹೇಳಬೇಕುಎಂದು ಅಮಿತ್ ಶಾ ಸೂಚಿಸಿದ್ದಾರೆ.

ಪುನರಾಯ್ಕೆ
ಕೋರುತ್ತಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ (ಆಪ್) ರಾಜಧಾನಿಯ ಚುನಾವಣೆ ಪ್ರತಿಷ್ಠೆಯ ಸಮರವಾಗಿದೆ. ಚುನಾವಣಾ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆಯೇ ಆಮ್ ಆದ್ಮಿ ಪಕ್ಷದ ರಾಘವ ಛಢಾ ಅವರು ತಮ್ಮ ಪಕ್ಷವು ಚುನಾವಣಾ ಸಮರಕ್ಕೆ ಸಜ್ಜಾಗಿದ್ದು, ಸ್ಥಳೀಯ ವಿಷಯಗಳನ್ನು ಆಧರಿಸಿ ಹೋರಾಡಲಿದೆ ಎಂದು ಹೇಳಿದ್ದಾರೆ.

ವಿವಾದಾತ್ಮಕ
ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ), ಪೌರತ್ವ ತಿದ್ದುಪಡಿ ಕಾಯ್ದೆ, ವಾಯುಮಾಲಿನ್ಯ, ಮಹಿಳಾ ಸುರಕ್ಷತೆ ಮತ್ತು  ದೆಹಲಿಗೆ ರಾಜ್ಯ ಸ್ಥಾನ ಕುರಿತ ಬೇಡಿಕೆ ಚುನಾವಣಾ ಪ್ರಚಾರ ಸಮರದಲ್ಲಿ ಪ್ರಮುಖ ವಿಚಾರಗಳಾಗುವ ಸಾಧ್ಯತೆ ಇದೆ.

ಕೇಜ್ರಿವಾಲ್ ಅವರು ಮೊಹಲ್ಲಾ ಕ್ಲಿನಿಕ್ಗಳು ಮತ್ತು ಮಾದರಿ ಶಾಲೆಗಳಂತಹ ತಮ್ಮ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಬೆಳಕು ಚೆಲ್ಲುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರು ಮಾಡಿದ್ದಂತೆ, ಕೇಜ್ರಿವಾಲ್ ಅವರೂ ಮರು ಆಯ್ಕೆಯ ಸಲುವಾಗಿ ಚುನಾವಣಾ ವ್ಯೂಹಗಾರ ಪ್ರಶಾಂತ ಕಿಶೋರ್ ಅವರ ರಾಜಕೀಯ ಸಮಾಲೋಚನಾ ಸಂಸ್ಥೆ -ಪ್ಯಾಕ್ ನೆರವನ್ನು ಈಗಾಗಲೇ ಪಡೆದುಕೊಂಡಿದ್ದಾರೆ. 
ಆಮ್ ಆದ್ಮಿ ಪಕ್ಷವುಅಚ್ಛೆ ಬೀತೆ ಸಾಲ್ ಲಗೇ ರಹೋ ಕೇಜ್ರಿವಾಲ್ (ಕಳೆದ ವರ್ಷಗಳು ಉತ್ತಮವಾಗಿದ್ದವು, ಕೇಜ್ರಿವಾಲ್ ಜೊತೆ ಹೆಜ್ಜೆ ಹಾಕಿ) ಘೋಷಣೆಯೊಂದಿಗೆ ಕಳೆದ ತಿಂಗಳು ತನ್ನ ಪ್ರಚಾರ ಅಭಿಯಾನವನ್ನು ಆರಂಭಿಸಿತ್ತು. ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರೂ ಪಕ್ಷದ ಯಶಸ್ಸಿನ ಬಗ್ಗೆ ವಿಶ್ವಾಸ ವ್ಯಕ್ತ ಪಡಿಸಿದ್ದರು.

ಭಾರತೀಯ
ಜನತಾ ಪಕ್ಷ ಕೂಡಾ ರಾಮಲೀಲಾ ಮೈದಾನದಲ್ಲಿ ತನ್ನ ತಾರಾ ಪ್ರಚಾರಕ ಪ್ರಧಾನಿ ನರೇಂದ್ರ ಮೋದಿ ಅವರ ಸಭೆಯೊಂದಿಗೆ ಕಳೆದ ತಿಂಗಳು ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿತ್ತು. ಮೋದಿಯವರು ಪೌರತ್ವ ಕಾಯ್ದೆ ವಿರೋಧೀ ರಾಷ್ಟ್ರವ್ಯಾಪಿ ಚಳವಳಿಯನ್ನೇ ಬಳಸಿಕೊಂಡು ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಆಮ್
ಆದ್ಮಿ ಪಕ್ಷದ ವಿರುದ್ಧ ಹೆಚ್ಚುತ್ತಿರುವ ಜನರ ಅಸಮಾಧಾನದ ಹಿನ್ನೆಲೆಯಲ್ಲಿ ರಾಷ್ಟ್ರದ ರಾಜಧಾನಿಯಲ್ಲಿ ಈಗ ಕೇಸರಿ ಪಕ್ಷವು ಪರ್ಯಾಯವಾಗಿ ಬೆಳೆದಿದೆ ಎಂದು ಕೇಂದ್ರ ಗೃಹ ಸಚಿವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ತೋರಿದ ಕಳಪೆ ಸಾಧನೆಯಿಂದ ಎದೆಗುಂದದ ಶಾ, ೨೦೨೦ರ ದೆಹಲಿ ವಿಧಾನಸಭಾ ಚುನಾವಣೆ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದರು.

೨೦೧೯ರ
ಲೋಕಸಭಾ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಯತ್ನಿಸಿದ್ದ ಕಾಂಗ್ರೆಸ್ ಯತ್ನದಲ್ಲಿ ವಿಫಲಗೊಂಡಿತ್ತು. ಆದರೂ, ಈಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಪಕ್ಷದ ದೆಹಲಿ ಘಟಕದ ಮುಖ್ಯಸ್ಥ ಸುಭಾಶ್ ಛೋಪ್ರಾ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನಿಧನವು ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ.

ಕೇಂದ್ರ ಬಜೆಟ್ ಪರಿಣಾಮ?: ದೆಹಲಿ ವಿಧಾನಸಭಾ ಚುನಾವಣೆ ಘೋಷಣೆಯು ಫೆಬ್ರುವರಿ ೮ರಂದು ನಡೆಯುವುದಾಗಿ ಚುನಾವಣಾ ಆಯೋಗವು ಘೋಷಿಸಿರುವುದರಿಂದ ಫೆಬ್ರುವರಿ ೧ರಂದು ಮಂಡನೆಯಾಗಲಿರುವ ಕೇಂದ್ರ ಮುಂಗಡಪತ್ರದ ಪರಿಣಾಮ ಮತದಾರರ ಮೇಲೆ ಆಗಬಹುದೇ ಎಂಬ ಪ್ರಶ್ನೆ ಎದ್ದಿದೆ. ಸಾಧ್ಯತೆ ಇದೆ. ಆಡಳಿತಾರೂಢ ಬಿಜೆಪಿಯು ಮುಂಗಡಪತ್ರದಲ್ಲಿ ದೆಹಲಿ ಮತದಾರರಿಗೆ ಅನುಕೂಲವಾಗುವಂತಹ ಘೋಷಣೆಗಳನ್ನು ಮುಂಗಡಪತ್ರದಲ್ಲಿ ಪ್ರಕಟಿಸಲಿದೆಯೇ, ಪ್ರಕಟಿಸಿದರೆ ಅದು ಮತದಾರರ ಮೇಲೆ ಪರಿಣಾಮ ಬೀರಬಹುದೇ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚಿಸಲ್ಪಟ್ಟಿವೆ.

ರಾಜ್ಯ ರಚನೆಯ ಬಳಿಕ ಯಾರು ಯಾರು ಗೆದ್ದಿದ್ದರು?
೨೦೧೩ರ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು. ಬಿಜೆಪಿ ೩೧, ಆಮ್ ಆದ್ಮಿ ಪಕ್ಷವು ೨೮ ಹಾಗೂ ಕಾಂಗ್ರೆಸ್ ಸ್ಥಾನ ಗೆದ್ದಿದ್ದವು. ಬಿಜೆಪಿ ಸರ್ಕಾರ ರಚಿಸಲು ಮುಂದೆ  ಬರಲಿಲ್ಲ. ರಾಷ್ಟ್ರಪತಿ ಆಳ್ವಿಕೆ ಸನ್ನಿಹಿತ ಎಂದೆನಿಸುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂದಿಗೆ ಕೆಲವೇ ತಿಂಗಳ ಹಿಂದೆ ಜನ್ಮ ತಾಳಿದ್ದ ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸಿ, ಜನಿಸಿದ ಒಂದೇ ವರ್ಷದೊಳಗೆ ಸರ್ಕಾರ ರಚಿಸಿದ ಹೆಗ್ಗಳಿಕೆಯನ್ನು ಗಳಿಸಿಕೊಂಡಿತ್ತು. ಆದರೆ ಬಳಿಕ ಕಾಂಗ್ರೆಸ್ ಜೊತೆಗಿನ ಘರ್ಷಣೆಯನ್ನು ಅನುಸರಿಸಿ ಕೇಜ್ರಿವಾಲ್ ರಾಜೀನಾಮೆ ನೀಡಿ ಪುನಃ ಜನರ ಮುಂದೆ ಹೋಗಿ, ೨೦೧೫ರಲ್ಲಿ ಪ್ರಚಂಡ ಬಹುಮತದೊಂದಿಗೆ ಗೆದ್ದು ಬಂದಿದ್ದರು.

ದೆಹಲಿ ರಾಜ್ಯ ರಚನೆಯಾದ ಬಳಿಕ ೧೯೯೩ರಿಂದ ಇಲ್ಲಿಯವರೆಗೆ ಚುನಾವಣೆಗಳು ನಡೆದಿದ್ದು, ಮೊದಲ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರ ಹಿಡಿದಿತ್ತು. ಮದನ್ ಲಾಲ್ ಖುರಾನಾ, ಸಾಹಿಬ್ ಸಿಂಗ್ ವರ್ಮ  ಮತ್ತು ಸುಷ್ಮಾ ಸ್ವರಾಜ್ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದರು. ನಂತರ ನಡೆದ ಮೂರು ಚುನಾವಣೆಗಳಲಿ ಕಾಂಗ್ರೆಸ್ ಪಕ್ಷ ಹ್ಯಾಟ್ರಿಕ್ ಗೆಲವು ಸಾಧಿಸಿತ್ತು. ಶೀಲಾ ದೀಕ್ಷಿತ್ ಅವರು ಮುಖ್ಯಮಂತ್ರಿಯಾಗಿ ದೆಹಲಿಯಲ್ಲಿ ತಮ್ಮ ಛಾಪು ಮೂಡಿಸಿದ್ದರು.

ಬಳಿಕ ಆಮ್ ಆದ್ಮಿ ಪಕ್ಷವು ಎರಡು ಬಾರಿ ಸರ್ಕಾರ ರಚಿಸಿದ್ದು, ಇದೀಗ ಮೂರನೇ ಬಾರಿಗೆ ಗದ್ದುಗೆ ಏರಲು ಯತ್ನ ನಡೆಸಿದೆ.

ದೆಹಲಿ ವಿಧಾನಸಭಾ ಚುನಾವಣೆ
ಒಟ್ಟು ಸ್ಥಾನ- 70
ಮತದಾನ - ಫೆಬ್ರುವರಿ 8
ಮತಗಳ ಎಣಿಕೆ - ಫೆಬ್ರುವರಿ 11
ಒಟ್ಟು ಮತದಾರರು- 1,46,92,136
ಒಟ್ಟು ಮತಗಟ್ಟೆ-13,750

No comments:

Advertisement