My Blog List

Wednesday, January 22, 2020

ಸಂಸದ, ಶಾಸಕರ ಅನರ್ಹತೆ ವಿಚಾರಣೆಗೆ ಸ್ವತಂತ್ರ ಸಂಸ್ಥೆ

ಸಂಸದ, ಶಾಸಕರ ಅನರ್ಹತೆ ವಿಚಾರಣೆಗೆ ಸ್ವತಂತ್ರ ಸಂಸ್ಥೆ
ಸಂಸತ್ತಿಗೆ ಮಹತ್ವದ ಸಲಹೆ ನೀಡಿದ ಸುಪ್ರೀಕೋರ್ಟ್
ನವದೆಹಲಿ: ಸಂಸತ್ತು, ಶಾಸನ ಸಭೆಗಳ ಸಭಾಧ್ಯಕ್ಷರು ನಿರ್ದಿಷ್ಟ ಪಕ್ಷವೊಂದಕ್ಕೆ ಸೇರಿದವರಾದ್ದರಿಂದ ಅವರಿಗೆ ಇರುವ ಚುನಾಯಿತ ಪ್ರತಿನಿಧಿಗಳ ಅನರ್ಹತೆ ಅಧಿಕಾರದ ಬಗ್ಗೆ ಪುನರ್ವಿಮರ್ಶೆ ನಡೆಸುವಂತೆ ಸಂಸತ್ತಿಗೆ ಸಲಹೆ ನೀಡಿರುವ ಸುಪ್ರೀಂಕೋರ್ಟ್ ವಿಚಾರದಲ್ಲಿ ಸ್ವತಂತ್ರ ಸಂಸ್ಥೆಯೊಂದಕ್ಕೆ ಅಧಿಕಾರ ನೀಡುವುದು ಉತ್ತಮ ಎಂದು 2020 ಜನವರಿ 21ರ  ಮಂಗಳವಾರ  ಅಭಿಪ್ರಾಯ ವ್ಯಕ್ತ ಪಡಿಸಿತು.

ಮಣಿಪುರದಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಗೆದ್ದು ಬಳಿಕ ಬಿಜೆಪಿ ಸರ್ಕಾರಕ್ಕೆ ಸೇರ್ಪಡೆಯಾಗಿದ್ದ ಅರಣ್ಯ ಮತ್ತು ಪರಿಸರ ಸಚಿವ ತೌನೋಜಾಮ್  ಶ್ಯಾಮ ಕುಮಾರ್ (ಟಿ. ಶ್ಯಾಮ್ ಕುಮಾರ್) ಅವರನ್ನು ಅನರ್ಹಗೊಳಿಸುವಂತೆ ಕೋರಲಾಗಿರುವ  ಪ್ರಕರಣದ ವಿಚಾರಣೆಯ ವೇಳೆಯಲ್ಲಿ ನ್ಯಾಯಮೂರ್ತಿ ರೋಹಿಂಗ್ಟನ್ ನೇತೃತ್ವದ ತ್ರಿಸದಸ್ಯ ಪೀಠವು ಸಲಹೆಯನ್ನು ಮಾಡಿತು.

ಇತ್ತೀಚಿನ ದಿನಗಳಲ್ಲಿ ಸಂಸತ್ ಸದಸ್ಯರು ಮತ್ತು ಶಾಸಕರನ್ನು ಅನರ್ಹಗೊಳಿಸುವ ವಿಚಾರಗಳು ತೀವ್ರ ಗೊಂದಲಗಳಿಗೆ ಕಾರಣವಾಗುತ್ತಿವೆ. ಸಾಮಾನ್ಯವಾಗಿ ಆಡಳಿತ ಪಕ್ಷಕ್ಕೆ ಸೇರಿದವರೇ ಸದನದ ಸಭಾಧ್ಯಕ್ಷರಾಗಿರುವುದರಿಂದ ಅವರ ನಿರ್ಧಾರದಲ್ಲಿ ಪಕ್ಷಪಾತದ ನಿಲುವು ವ್ಯಕ್ತವಾಗುತ್ತದೆ ಎಂಬ ಟೀಕೆಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಪೀಠದ ಸಲಹೆ ಮಹತ್ವ ಪಡೆಯಿತು.
ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಅನರ್ಹತೆಯ ವಿಚಾರವನ್ನು ಸ್ವತಂತ್ರ ಸಂಸ್ಥೆಗೆ ವಹಿಸುವ ಬಗ್ಗೆ ಸಂಸತ್ತು ಚಿಂತನೆ ನಡೆಸಬೇಕು ಎಂದು ಪೀಠ ಸಲಹೆ ಮಾಡಿತು..

ಟಿ. ಶ್ಯಾಮಕುಮಾರ್ ಪ್ರಕರಣದ ವಿಚಾರಣೆಯ ಕಾಲದಲ್ಲಿ ಕೆಲವಾರು ಸಾಧ್ಯಾಸಾಧ್ಯತೆಗಳನ್ನು ವಿಮರ್ಶಿಸಿದ ಪೀಠವುಅನರ್ಹತೆ ಅರ್ಜಿಗಳ ವಿಚಾರವನ್ನು ಸ್ಪೀಕರ್ ನಿರ್ಧಾರಕ್ಕೆ ಬಿಡುವುದು ಸರಿಯಾಗುವುದಿಲ್ಲ. ಏಕೆಂದರೆ ಸಭಾಧ್ಯಕ್ಷರು ಒಂದು ರಾಜಕೀಯ ಪಕ್ಷದ ಸದಸ್ಯರೇ ಆಗಿರುತ್ತಾರೆ. ಹಿನ್ನೆಲೆಯಲ್ಲಿ ಸ್ವತಂತ್ರವಾದ ಬೇರೆಯೇ ಆದ ಒಂದು ಸಂಸ್ಥೆಯನ್ನು ರಚಿಸುವುದು ಸೂಕ್ತಎಂದು ಹೇಳಿತು.

ಶಾಸಕರ ಅನರ್ಹತೆಯ ಅರ್ಜಿಯ ವಿಚಾರಣೆಯನ್ನು ಸಭಾಧ್ಯಕ್ಷರು ಹೆಚ್ಚು ವಿಳಂಬ ಮಾಡಬಾರದು. ಮೂರು ತಿಂಗಳೊಳಗೆ ಅರ್ಜಿಯ ಇತ್ಯರ್ಥ ಪಡಿಸಬೇಕು ಎಂದೂ ಸುಪ್ರೀಂ ಕೋರ್ಟ್ ಪೀಠ ಸೂಚಿಸಿತು.

ಬಿಜೆಪಿ ಶಾಸಕ ಮತ್ತು ಮಣಿಪುರ ಅರಣ್ಯ ಸಚಿವರಾದ ಟಿ ಎಚ್ ಶ್ಯಾಮಕುಮಾರ್   ಅವರನ್ನು ಅನರ್ಹಗೊಳಿಸುವಂತೆ ಕೋರಿ  ಕಾಂಗ್ರೆಸ್ ನಾಯಕರು ಮಾಡಿರುವ ಮನವಿಯ ಬಗ್ಗೆ ನಾಲ್ಕು ವಾರಗಳ ಒಳಗಾಗಿ ನಿರ್ಧಾರ ಕೈಗೊಳ್ಳುವಂತೆ ಮಣಿಪುರ ಸಭಾಧ್ಯಕ್ಷರಿಗೆ ಆಜ್ಞಾಪಿಸಿದ ನ್ಯಾಯಮೂರ್ತಿ ಆರ್.ಎಫ್ ನಾರಿಮನ್ ನೇತೃತ್ವದ ಪೀಠವು, ಸಭಾಧ್ಯಕ್ಷರು ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮತ್ತೆ ತನ್ನನ್ನು ಸಂಪರ್ಕಿಸುವ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಶಾಸಕ ಫಜರ್ ರಹಮಾನ್ ಮತ್ತು ಕೆ. ಮೇಘಚಂದ್ರ ಅವರಿಗೆ ನೀಡಿತು.

ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಶ್ಯಾಮಕುಮಾರ್ ಅವರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಗೆದ್ದಿದ್ದರು. ಬಳಿಕ ಬಿಜೆಪಿಗೆ ಸೇರ್ಪಡೆಯಾಗಿ ಸಚಿವರಾಗಿದ್ದರು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷವು ಅವರನ್ನು ಶಾಸನಸಭೆಯಿಂದ ಅನರ್ಹಗೊಳಿಸುವಂತೆ ಕೋರಿ ವಿಧಾನಸಭಾಧ್ಯಕ್ಷರಿಗೆ ಮನವಿಪತ್ರ ಸಲ್ಲಿಸಿತ್ತು.

ಸಭಾಧ್ಯಕ್ಷರು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೇರಿದವರಾದ್ದರಿಂದ, ಕಾರ್ಯ ವಿಧಾನದಲ್ಲಿ ಹೆಚ್ಚಿನ ನ್ಯಾಯದ ಹಿತದೃಷ್ಟಿಯಿಂದ ಸಂಸತ್ ಸದಸ್ಯರು ಮತ್ತು ಶಾಸಕರ ಇಂತಹ ಅನರ್ಹತೆಯ ಮನವಿಗಳನ್ನು ಸದನದ ಸಭಾಧ್ಯಕ್ಷರೇ ನಿರ್ಧರಿಸಬೇಕೇ ಎಂಬ ಬಗ್ಗೆ ಸಂಸತ್ತು ಮರುಚಿಂತನೆ ನಡೆಸುವುದು ಒಳಿತು ಎಂದು ಸುಪ್ರೀಂಕೋರ್ಟ್ ಪೀಠ ಹೇಳಿತು.

ಸಭಾಧ್ಯಕ್ಷರು ರಾಜಕೀಯ ಪಕ್ಷ ಒಂದರ ಸದಸ್ಯರಾಗಿದ್ದಾಗಲೇ ಸಂಸತ್ ಸದಸ್ಯರು ಮತ್ತು ಶಾಸಕರ ಅನರ್ಹತೆ ಅರ್ಜಿಗಳ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವುದರ ಔಚಿತ್ಯವನ್ನೂ ಸುಪ್ರೀಂಕೋರ್ಟ್ ಪೀಠ ಪ್ರಶ್ನಿಸಿತು.

ಇತೀಚಿನ ಹಲವಾರು ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡ ನ್ಯಾಯಪೀಠವು, ಸಂಸತ್ ಸದಸ್ಯರು ಮತ್ತು ಶಾಸಕರ ಅನರ್ಹತೆ ಕೋರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲು ಸ್ವತಂತ್ರ ಸಂಸ್ಥೆ ಹೊಂದುವ ಬಗ್ಗೆ ಚಿಂತನೆ ನಡೆಸಿ ಎಂದು ಸಂಸತ್ತಿಗೆ ಸೂಚಿಸಿತು.

ಕಾಂಗ್ರೆಸ್ ಟಿಕೆಟಿನಲ್ಲಿ ಗೆದ್ದು ಬಳಿಕ ಬಿಜೆಪಿ ಸೇರಿ ಸಚಿವರಾದ ಶ್ಯಾಮಕುಮಾರ್ ಅವರ ನಡೆಯನ್ನು ಪ್ರಶ್ನಿಸಿ ಉಳಿದಿಬ್ಬರು ಕಾಂಗ್ರೆಸ್ ಶಾಸಕರು ವಿಧಾನಸಭಾಧ್ಯಕ್ಷರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ಇತ್ಯರ್ಥ ಪಡಿಸುವಲ್ಲಿ ಸಭಾಧ್ಯಕ್ಷರು ವಿಳಂಬ ಮಾಡಿದರು. ಹೀಗಾಗಿ ಶಾಸಕರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟಿನಲ್ಲಿ ಅರ್ಜಿ ಪುರಸ್ಕೃತವಾಗದ ಕಾರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಕೆಲವು ತಿಂಗಳುಗಳ ಹಿಂದೆ ಕರ್ನಾಟಕದಲ್ಲೂ ಇಂತಹುದೇ ವಿದ್ಯಮಾನ ಘಟಿಸಿತ್ತು. ಕರ್ನಾಟಕದ ಕಾಂಗ್ರೆಸ್ ಮತ್ತು ಜೆಡಿಎಸ್ ಬಂಡಾಯ ಶಾಸಕರು ವಿಧಾನಸಭಾಧ್ಯಕ್ಷರು ತಮ್ಮ ರಾಜೀನಾಮೆಯನ್ನು ಸ್ವೀಕರಿಸುತ್ತಿಲ್ಲ ಎಂದು ದೂರಿ ಸುಪ್ರೀಂಕೋರ್ಟಿನ ಮೊರೆ ಹೋಗಿದ್ದರು.

ಕರ್ನಾಟಕದ ಪ್ರಕರಣದಲ್ಲಿ ಬಳಿಕ ಸಭಾಧ್ಯಕ್ಷರು ೧೭ ಮಂದಿ ಬಂಡಾಯ ಶಾಸಕರನ್ನು ಶಾಸನಸಭೆಯ ಉಳಿದ ಅವಧಿಗೆ ಪೂರ್ತಿಯಾಗಿ ಅನರ್ಹಗೊಳಿಸಿದ್ದರು. ಇದನ್ನು ಕೂಡಾ ಬಂಡಾಯ ಶಾಸಕರು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ್ದರು.

ಅರ್ಜಿಗಳನ್ನು ಇತ್ಯರ್ಥ ಪಡಿಸಿದ್ದ ಸುಪ್ರೀಂಕೋರ್ಟ್ ಸಭಾಧ್ಯಕ್ಷರಿಗೆ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರವಿದೆ, ಆದರೆ ಶಾಸನಸಭೆಯ ಪೂರ್ತಿ ಅವಧಿಗೆ ಅನರ್ಹಗೊಳಿಸುವ ಹಾಗೂ ಪುನಃ ಚುನಾವಣೆಗೆ ನಿಲ್ಲದಂತೆ ನಿಷೇಧಿಸುವ ಅಧಿಕಾರವಿಲ್ಲ ಎಂದು ಹೇಳಿ, ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆಅರ್ಹರಾಗುವ ಅವಕಾಶವನ್ನು ಕಲ್ಪಿಸಿಕೊಟ್ಟಿತ್ತು.

No comments:

Advertisement