ಆಪ್ ಗೆಲುವಿನ ರೂವಾರಿ ಪ್ರಶಾಂತ ಕಿಶೋರ್ ಟ್ವೀಟ್
ನವದೆಹಲಿ:
ಸಂಯುಕ್ತ ಜನತಾದಳದಿಂದ ನಿತೀಶ್ ಕುಮಾರ್ ಅವರು ಕಿತ್ತೆಸೆದಿದ್ದ ರಾಜಕೀಯ ವ್ಯೂಹ ಚತುರ ಪ್ರಶಾಂತ ಕಿಶೋರ್ ಅವರು ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸಾಧನೆಯ ರೂವಾರಿಯಾಗಿದ್ದು ಪಕ್ಷದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳು ಕಾರಣ ಎಂಬ ಸುಳಿವನ್ನು 2020 ಫೆಬ್ರುವರಿ
11ರ ಮಂಗಳವಾರ ನೀಡಿದರು.
೭೦
ವಿಧಾನಸಭಾ ಕ್ಷೇತ್ರಗಳ ಪೈಕಿ ೫೭ ಸ್ಥಾನಗಳಲ್ಲಿ ಅರವಿಂದ
ಕೇಜ್ರಿವಾಲ್ ನೇತೃತ್ವದ ಆಪ್ ಸ್ಪಷ್ಟ ಮುನ್ನಡೆ ಸಾಧಿಸುತ್ತಿದ್ದಂತೆಯೇ ಪ್ರಶಾಂತ ಕಿಶೋರ್ ಅವರು ದೆಹಲಿ ಮತದಾರರಿಗೆ ಧನ್ಯವಾದಗಳನ್ನು ಹೇಳಿ ಟ್ವೀಟ್ ಮಾಡಿದರು.
‘ಭಾರತದ
ಆತ್ಮ ರಕ್ಷಣೆಗಾಗಿ ಎದ್ದು ನಿಂತದ್ದಕ್ಕಾಗಿ ಧನ್ಯವಾದಗಳು ದೆಹಲಿ’ ಎಂದು ಪ್ರಶಾಂತ ಕಿಶೋರ್ ಟ್ವೀಟ್ ಮಾಡಿದರು.
ಅರವಿಂದ
ಕೇಜ್ರಿವಾಲ್ ಅವರು ವಿದಾನಸಭಾ ಚುನಾವಣೆಗೆ ಮುನ್ನ ಪ್ರಶಾಂತ ಕಿಶೋರ್ ನೇತೃತ್ವದ ಚುನಾವಣಾ ವ್ಯೂಹಗಾರಿಕಾ ಸಂಸ್ಥೆ ’ಇಂಡಿಯನ್ ಪೊಲಿಟಿಕಲ್
ಆಕ್ಷನ್ ಕಮಿಟಿ’ಯನ್ನು ತಮ್ಮ ಕಡೆಗೆ ಸೆಳೆದುಕೊಂಡಿದ್ದರು.
ಪ್ರಶಾಂತ
ಕಿಶೋರ್ ಅವರು ಪೌರತ್ವ ಕಾಯ್ದೆಯ ತೀಕ್ಷ್ಣ ಟೀಕಾಕಾರರಲ್ಲಿ ಒಬ್ಬರಾಗಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯು ನೆರೆಯ ಮುಸ್ಲಿಮ್ ಬಾಹುಳ್ಯದ ದೇಶಗಳಾದ ಪಾಕಿಸ್ತಾನ, ಆಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶದ ಮುಸ್ಲಿಮೇತರರಿಗೆ ತ್ವರಿತವಾಗಿ ಭಾರತದ ಪೌರತ್ವ ಒದಗಿಸುವ ಕಾನೂನು ಆಗಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಇತ್ತೀಚೆಗೆ ಇದನ್ನು ಜಾರಿಗೆ ತಂದಿದೆ.
ಪೌರತ್ವ
ಕಾಯ್ದೆಯನ್ನು ಟೀಕಿಸಿದ ಮೊತ್ತ ಮೊದಲ ರಾಜಕಾರಣಿಗಳಲ್ಲಿಯೂ ಕಿಶೋರ್ ಒಬ್ಬರಾಗಿದ್ದರು. ಉದ್ದೇಶಿತ ರಾಷ್ಟ್ರೀಯ ನಾಗರಿಕರ ನೋಂದಣಿಯ ಜೊತೆಗೆ ಪೌರತ್ವ ಕಾಯ್ದೆಯನ್ನು ಜೋಡಿಸಿದರೆ ಅದು ಮುಸ್ಲಿಮ್ ಸಮುದಾಯದ ಜನರಿಗೆ ಕಿರುಕುಳ ನೀಡುವ ಸಾಧ್ಯತೆ ಇದೆ ಎಂದು ಅವರು ಪ್ರತಿಪಾದಿಸಿದ್ದರು.
ಭಾರತೀಯ
ಜನತಾ ಪಕ್ಷದ ವಿರುದ್ಧದ ತಮ್ಮ ಈ ನಿಲುವಿನ ಕಾರಣದಿಂದಾಗಿಯೇ
ಪ್ರಶಾಂತ ಕಿಶೋರ್ ಮತ್ತು ನಿತೀಶ್ ಕುಮಾರ್ ಮಧ್ಯೆ ಘರ್ಷಣೆ ಶುರವಾಗಿತ್ತು. ನಿರ್ದಿಷ್ಟವಾಗಿ ದೆಹಲಿಯಲ್ಲಿನ ಬಿಹಾರದ ಮತದಾರರನ್ನು ಸೆಳೆಯುವ ಸಲುವಾಗಿ ಸಂಯುಕ್ತ ಜನತಾದಳವು
ಬಿಜೆಪಿ ನೇತೃತ್ವದ ಮೈತ್ರಿಕೂಟದ ಜೊತೆಗೆ ಸೇರ್ಪಡೆಯಾದ ಬಳಿಕ ನಿತೀಶ್ ಮತ್ತು ಪ್ರಶಾಂತ ಕಿಶೋರ್ ಬಾಂಧವ್ಯ ಹದಗೆಟ್ಟಿತ್ತು. ದೆಹಲಿಯಲ್ಲಿ ಸಂಯುಕ್ತ ಜನತಾದಳವು ಬುರಾರಿ ಮತ್ತು ಸಂಗಮ್ ಈ ಎರಡು ಸ್ಥಾನಗಳಿಗೆ
ಸ್ಪರ್ಧಿಸಿತ್ತು. ಆದರೆ
ಈ ಯೋಜನೆ ಫಲಪ್ರದವಾಗಲಿಲ್ಲ.
೬ನೇ
ಸುತ್ತಿನ ಮತಗಳ ಎಣಿಕೆ ಮುಕ್ತಾಯದ ವೇಳೆಗೆ ಬುರಾರಿಯಲ್ಲಿ ಆಪ್ ಅಭ್ಯರ್ಥಿ ಸಂಜೀವ್ ಝಾ ಅವರು ಶೇಕಡಾ
೬೨ರಷ್ಟು ಮತಗಳನ್ನು ಪಡೆಯಲು ಸಮರ್ಥರಾದರೆ, ಸಂಯುಕ್ತ ಜನತಾದಳ ಅಭ್ಯರ್ಥಿ ಶೇಕಡಾ ೨೨ರಷ್ಟು ಮತಗಳನ್ನು ಮಾತ್ರ ಗಳಿಸಿದರು. ಸಂಗಮ್ ವಿಹಾರದಲ್ಲಿ ಆಪ್ ಅಭ್ಯರ್ಥಿ ದಿನೇಶ್ ಮೋಹನಿಯಾ ಅವರು ಜೆಡಿಯು ಅಭ್ಯಥಿ ಗಳಿಸಿದ ಮತಗಳ ದುಪ್ಪಟ್ಟು ಮತ ಪಡೆದಿದ್ದರು.
ನಿರೀಕ್ಷೆಯಂತೆ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಗೆಲುವಿನತ್ತ ಒಯ್ಯಲು ಪ್ರಚಾರ
ತಂತ್ರಗಳನ್ನು ಹೆಣೆದವರು ಚುನಾವಣಾ ಚಾಣಕ್ಯ ಎಂದೇ ಹೆಸರು ಪಡೆದಿರುವ ಪ್ರಶಾಂತ್ ಕಿಶೋರ್. ದೆಹಲಿಯಲಿ ಆಪ್ ಗೆಲುವಿನ ಮೂಲಕ ಅವರು ಮತ್ತೊಮ್ಮೆ ಗೆಲುವಿನ ಸೂತ್ರದಾರನಾಗಿ ಮೂಡಿ ಬಂದಿದ್ದಾರೆ.
ಪಕ್ಷದ
ಗೆಲುವಿನ ಬೆನ್ನಲ್ಲೇ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಮಾಡಿ ಫೋಟೋ ತೆಗೆಸಿಕೊಂಡ ಪ್ರಶಾಂತ ಕಿಶೋರ್ ದೆಹಲಿ ಜನತೆಗೆ ಅಭಿನಂದನೆ ಮಾಡಿದ ಟ್ವೀಟಿನಲ್ಲಿ ಕೇಜ್ರಿವಾಲ್ ಜೊತೆಗಿನ ಫೋಟೋವನ್ನೂ ಹಂಚಿಕೊಂಡರು.
ಆಪ್
ಈ ಬಾರಿ ಸಾಧಿಸಿರುವ
ಗೆಲುವು ಪ್ರಶಾಂತ್
ಕಿಶೋರ್ ಮತ್ತು ಅವರ ನೇತೃತ್ವದ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿಯ (ಐ-ಪ್ಯಾಕ್) ಪಾಲಿನ
ಐದನೇ ಗೆಲುವಾಗಿದೆ.
೨೦೧೪ರ
ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ಪರ ಪ್ರಚಾರಕ್ಕೆ ಪ್ರಶಾಂತ್
ಕಿಶೋರ್ ಧುಮುಕಿದ್ದರು. ಈ ಮೂಲಕ ಮೊದಲ
ಬಾರಿಗೆ ಅವರ ಹೆಸರು ಭಾರತದ ರಾಜಕಾರಣದಲ್ಲಿ ಕೇಳಿ ಬಂದಿತ್ತು. ’ಚಾಯ್ ಪೇ ಚರ್ಚಾ’ದಂತಹ ಯಶಸ್ವೀ ಕಾರ್ಯಕ್ರಮಗಳನ್ನು ಸಂಘಟಿಸಿ ಪ್ರಶಾಂತ್ ಕಿಶೋರ್ ಬಿಜೆಪಿಗೆ ಭರ್ಜರಿ ಗೆಲುವನ್ನು ತಂದು ಕೊಟ್ಟಿದ್ದರು.
ಆದರೆ ಆ ಬಳಿಕ ಅಮಿತ್ ಶಾ ಜೊತೆ ಮುನಿಸಿಕೊಂಡ ಪ್ರಶಾಂತ ಕಿಶೋರ್ ಬಿಜೆಪಿ ವಿರುದ್ಧವೇ ಅವರು ತೊಡೆ ತಟ್ಟಿದ್ದರು.
೨೦೧೫ರ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಬೇಕು ಎಂದು ಪಣತೊಟ್ಟ ಪ್ರಶಾಂತ್ ಕಿಶೋರ್ ಪರಸ್ಪರ ವಿರುದ್ಧ ದಿಕ್ಕಿನ ರಾಜಕಾರಣಿಗಳಾದ ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ ಅವರನ್ನು ಜೊತೆಗೂಡಿಸಿದ್ದರು. ಇವರ ಜೊತೆಗೆ ಕಾಂಗ್ರೆಸ್ ಪಕ್ಷವೂ ಬರುವಂತೆ ಮಾಡಿ ಮಹಾಘಟಬಂಧನ್ ಕಟ್ಟಿ ಬಿಜೆಪಿಗೆ ಅಧಿಕಾರ ಸಿಗದಂತೆ ಮಾಡಿದ್ದರು. ಈ ಚುನಾವಣೆಯ ಭರ್ಜರಿ
ಗೆಲುವಿನೊಂದಿಗೆ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಬಳಿಕ ಬೇರೆ ಬೇರೆ ಕಾರಣಗಳಿಗಾಗಿ ಆರ್ಜೆಡಿ ಮತ್ತು ಕಾಂಗ್ರೆಸ್ ಮೈತ್ರಿ ಕೂಟವನ್ನು ತೊರೆದವು.
ಜೆಡಿಯು ಮತ್ತೆ ಬಿಜೆಪಿ ನೇತೃತ್ವದ ಎನ್ಡಿಎ ತೆಕ್ಕೆಗೆ ಸರಿಯಿತು.
೨೦೧೭ರಲ್ಲಿ
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪರವಾಗಿ ಕೆಲಸ ಮಾಡಿ ಕೈ ಪಕ್ಷಕ್ಕೆ ಭಾರೀ
ಗೆಲುವನ್ನು ಪ್ರಶಾಂತ ಕಿಶೋರ್ ತಂದು ಕೊಟ್ಟಿದ್ದರು.
‘ಕಾಫಿ
ವಿತ್ ಕ್ಯಾಪ್ಟನ್’ನಂತಹ ಕಾರ್ಯಕ್ರಮಗಳನ್ನು ರೂಪಿಸಿ ಆಮ್ ಆದ್ಮಿ ಪಕ್ಷದ ಭಾರಿ ಪೈಪೋಟಿಯ ನಡುವೆಯೂ ಕಾಂಗ್ರೆಸ್ ಪಕ್ಷಕ್ಕೆ ವಿಜಯಮಾಲೆ
ತೊಡಿಸಿದ್ದರು. ಪಂಜಾಬ್ ಚುನಾವಣೆಯ ಬಳಿಕ ಪ್ರಶಾಂತ್ ಕಿಶೋರ್ ಜನಪ್ರಿಯತೆ ಮತ್ತಷ್ಟು ಜಾಸ್ತಿಯಾಯಿತು.
೨೦೧೯ರ
ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಪ್ರಚಾರದ ನೇತೃತ್ವವನ್ನೂ ಇದೇ ಪ್ರಶಾಂತ್ ಕಿಶೋರ್ ವಹಿಸಿಕೊಂಡಿದ್ದರು. ಈ ಚುನಾವಣೆಯಲ್ಲಿ ಜಗನ್
ಮೋಹನ್ ರೆಡ್ಡಿ ಪಕ್ಷ ಅಕ್ಷರಶಃ ತೆಲುಗುದೇಶಂ ಪಕ್ಷವನ್ನು (ಟಿಡಿಪಿ) ದೂಳೀಪಟ ಮಾಡಿತ್ತು. ಈ ಮೂಲಕ ತಾವೊಬ್ಬ
ಅಪ್ಪಟ ಚುನಾವಣಾ ತಂತ್ರಗಾರ ಎಂಬುದನ್ನು ಪ್ರಶಾಂತ್ ಕಿಶೋರ್ ಮತ್ತೆ ಸಾಬೀತು ಪಡಿಸಿದ್ದರು.
ತೆರೆಯ
ಹಿಂದೆ ಇರುತ್ತಿದ್ದ ಪ್ರಶಾಂತ್ ಕಿಶೋರ್ ೨೦೧೮ರ ಸೆಪ್ಟೆಂಬರಿನಲ್ಲಿ ಜೆಡಿಯು ಸೇರುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಧುಮುಕಿದರು. ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ಏರಿದ್ದ ಅವರು ಇತ್ತೀಚಿನವರೆಗೂ ಅವರು ಪಕ್ಷದಲ್ಲಿ ನಿತೀಶ್ ಕುಮಾರ್ ನಂತರದ ಉನ್ನತ ನಾಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯಿದೆ ವಿಚಾರದಲ್ಲಿ ಇಬ್ಬರೂ ನಾಯಕರ ನಡುವೆ ಭಿನ್ನಾಭಿಪ್ರಾಯ ಹುಟ್ಟಿಕೊಂಡು ಜನವರಿ ೨೯ರಂದು ಅವರನ್ನು ನಿತೀಶ್ ಕುಮಾರ್ ಪಕ್ಷದಿಂದ ಹೊರ ಹಾಕಿದ್ದರು.
ಜೆಡಿಯು
ಪಕ್ಷದಿಂದ ಹೊರ ಬಿದ್ದರೂ, ಚುನಾವಣಾ ರಾಜಕಾರಣದಲ್ಲಿ ಮಾತ್ರ ಪ್ರಶಾಂತ್ ಕಿಶೋರ್ ಬೇಡಿಕೆ ಕುಗ್ಗಲಿಲ್ಲ. ೨೦೨೧ ರಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪರವಾಗಿ ಪ್ರಶಾಂತ್ ಕಿಶೋರ್ ನೇತೃತ್ವದ ಐ-ಪ್ಯಾಕ್ ಕೆಲಸ
ಮಾಡಲಿದೆ. ಈ ಮೂಲಕ ಮಮತಾ
ಬ್ಯಾನರ್ಜಿ ಪರವಾಗಿ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಇದರ
ಜೊತೆಗೆ ಇತ್ತೀಚೆಗೆ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷದ ಜೊತೆಗೂ ಐ-ಪ್ಯಾಕ್ ಒಪ್ಪಂದ
ಮಾಡಿಕೊಂಡಿದೆ. ಕರುಣಾನಿಧಿ ಸಾವಿನ ಬಳಿಕ ಹೇಗಾದರೂ ಮಾಡಿ ತಮಿಳುನಾಡಿನಲ್ಲಿ ಅಧಿಕಾರ ಹಿಡಿಯಬೇಕು ಎಂದು ಹಠತೊಟ್ಟಿರುವ ಡಿಎಂಕೆ ವರಿಷ್ಠ ಎಂಕೆ ಸ್ಟಾಲಿನ್ ಪ್ರಶಾಂತ್ ಕಿಶೋರ್ ಹೆಗಲಿಗೆ ಕೈ ಹಾಕಿದ್ದಾರೆ.
No comments:
Post a Comment