Thursday, February 13, 2020

ನಿರ್ಭಯಾ ಪ್ರಕರಣ: ಮತ್ತೆ ಕಣ್ಣೀರು ಹಾಕಿದ ಸಂತ್ರಸ್ಥೆಯ ತಾಯಿ

ನಿರ್ಭಯಾ ಪ್ರಕರಣ: ಮತ್ತೆ ಕಣ್ಣೀರು ಹಾಕಿದ ಸಂತ್ರಸ್ಥೆಯ ತಾಯಿ
ಶಿಕ್ಷಿತ ಅಪರಾಧಿಗಳ ವಿರುದ್ಧ ಡೆತ್ ವಾರಂಟ್ಗಾಗಿ ಮೊರೆ, ಕೋರ್ಟ್ ಅಸಮ್ಮತಿ
ನವದೆಹಲಿ: ೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನತದೃಷ್ಟ ಸಂತ್ರಸ್ಥೆಯ ತಾಯಿ ಆಶಾದೇವಿ 2020 ಫೆಬ್ರುವರಿ 13ರ ಬುಧವಾರ ಮತ್ತೆ ನ್ಯಾಯಾಲಯದಲ್ಲಿ ಅಳುತ್ತಾ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಗಲ್ಲು ಜಾರಿಗಾಗಿ ಹೊಸದಾಗಿ ಡೆತ್ ವಾರಂಟ್ ಜಾರಿಗೊಳಿಸುವಂತೆ ಮನವಿ ಮಾಡಿದರು.

ಒಂದೂವರೆ ವರ್ಷದಿಂದ ನಾನು ಇಲ್ಲಿಗೆ ಬರುತ್ತಿದ್ದೇನೆ. ಅವರು ತಮ್ಮ ಕಾನೂನುಬದ್ಧ ಪರಿಹಾರಗಳನ್ನು ಚಲಾಯಿಸಲಿ ಎಂದು ನಾನು ಇಲ್ಲಿ ಕಾಯುತ್ತಾ ಇದ್ದೇನೆ. ಆದಾಗ್ಯೂ, ನಾನು ಸಂತ್ರಸ್ಥೆಯ ತಾಯಿ, ನನಗೂ ಕೆಲವು ಹಕ್ಕುಗಳಿವೆ. ದಯಮಾಡಿ ಡೆತ್ ವಾರಂಟ್ ನೀಡಿ ಎಂದು ನಾನು ನಿಮಗೆ ಮನವಿ ಮಾಡುತ್ತಿದ್ದೇನೆಎಂದು ಆಶಾದೇವಿ ಮೊರೆ ಇಟ್ಟರು.

ನ್ಯಾಯಾಲಯವು ಶಿಕ್ಷಿತ ಅಪರಾಧಿಗಳಲ್ಲಿ ಒಬ್ಬನಾದ ಪವನ್ ಗುಪ್ತನಿಗೆ ಕಾನೂನು ನೆರವು ನೀಡಲು ಮುಂದಾದಾಗ ಆಶಾದೇವಿ ಅವರು ಕಣ್ಣೀರುಗರೆಯುತ್ತಾ ಮನವಿ ಮಾಡಿದರು.

ನ್ಯಾಯಾಲಯದಲ್ಲಿ ಹಾಜರಾಗಿದ್ದ ಪವನ್ ಗುಪ್ತನ ತಂದೆ ಯಾವ ವಕೀಲರೂ ತನ್ನ ಮಗನ ಪ್ರಕರಣವನ್ನು ತೆಗೆದುಕೊಳ್ಳಲು ಇಷ್ಟ ಪಡುತ್ತಿಲ್ಲ. ಆದ್ದರಿಂದ ತಮಗೆ ಸ್ವಲ್ಪ ಕಾಲಾವಕಾಶ ಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

೨೩ರ ಹರೆಯದ ನತದೃಷ್ಟ ಯುವತಿಯ ತಂದೆ ಪವನ ಗುಪ್ತನಿಗೆ ಕಾನೂನಿನ ನೆರವು ನೀಡಲು ನ್ಯಾಯಾಲಯ ಮುಂದಾದುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದರು. ಆದರೆ ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಧಮೇಂದರ್ ರಾಣಾ ತಾವು ಕಾನೂನನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿದರು.

ಮರಣದಂಡನೆಗೆ ಗುರಿಯಾದ ಯಾರೇ ಶಿಕ್ಷಿತ ಅಪರಾಧಿಗೂ ತನ್ನ ಉಸಿರಿನ ಕೊನೆಯವರೆಗೂ ಕಾನೂನು ನೆರವು ಪಡೆಯುವ ಅವಕಾಶವಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಡುತ್ತದೆಎಂದು ನ್ಯಾಯಾಧೀಶರು ಹೇಳಿದರು.

ಗುಪ್ತನ ಪರವಾಗಿ ವಕೀಲನ ನೇಮಕಾತಿಯನ್ನು ಅಂತಿಮಗೊಳಿಸುವಂತೆ ಸೂಚಿಸಿದ ನ್ಯಾಯಾಲಯ ವಿಷಯವನ್ನು ಗುರುವಾರಕ್ಕೆ ಮುಂದೂಡಿತು. ಆಶಾದೇವಿ ಅವರು ಸಿಟ್ಟಿನಿಂದಲೇ ನ್ಯಾಯಾಲಯದಿಂದ ಹೊರಕ್ಕೆ ನಡೆದರು.

ಪಬ್ಲಿಕ್ ಪ್ರಾಸೆಕ್ಯೂಟರ್ ಇರ್ಫಾನ್ ಅಹ್ಮದ್ ಮತ್ತು ನ್ಯಾಯಾಲಯ ಸಹಾಯಕಿ (ಅಮಿಕಸ್ ಕ್ಯೂರೀ) ವೃಂದಾ ಗ್ರೋವರ್ ಅವರು ಡೆತ್ ವಾರಂಟ್ ಹೊರಡಿಸಬಹುದು ಎಂದು ಅಭಿಪ್ರಾಯ ಪಟ್ಟರು. ’ನ್ಯಾಯಾಲಯದ ಮುಂದೆ ಯಾವುದೇ ಪ್ರಕರಣವೂ ಬಾಕಿ ಉಳಿದಿಲ್ಲ. ಗಲ್ಲು ಜಾರಿಯ ದಿನಾಂಕವನ್ನು ನಿಗದಿ ಪಡಿಸಬಹುದುಎಂದು ಅವರು ಹೇಳಿದರು.

ಹೊಸದಾಗಿ ಡೆತ್ ವಾರಂಟ್ ವಾರಂಟ್ ಹೊರಡಿಸುವ ಸಲುವಾಗಿ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಲು ಸುಪ್ರೀಂಕೋರ್ಟ್ ಮಂಗಳವಾರ ಅನುಮತಿ ನೀಡಿದ ಬಳಿಕ ಹೊಸದಾಗಿ ಡೆತ್ ವಾರಂಟ್ ಜಾರಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು.

ತಿಹಾರ್ ಸೆರೆಮನೆ ಅಧಿಕಾರಿಗಳು ಕೂಡಾ ನ್ಯಾಯಾಲಯಕ್ಕೆ ಮಂಗಳವಾರ ವಸ್ತುಸ್ಥಿತಿ ವರದಿಯನ್ನು ಸಲ್ಲಿಸಿ ನಾಲ್ವರು ಶಿಕ್ಷಿತರಾದ ಮುಕೇಶ್ ಕುಮಾರ್ ಸಿಂಗ್ (೩೨), ಪವನ್ ಗುಪ್ತ (೨೫), ವಿನಯ್ ಕುಮಾರ್ ಶರ್ಮ (೨೬) ಮತ್ತು ಅಕ್ಷಯ್ ಕುಮಾರ್ (೩೧) ಇವರ ಪೈಕಿ ಯಾರು ಕೂಡಾ ಕಳೆದ ಏಳು ದಿನಗಳಲ್ಲಿ ಕಾನೂನಿನ ನೆರವು ಕೋರಿಕೆ ಮುಂದಿಟ್ಟಿಲ್ಲ್ಲ ಎಂದು ತಿಳಿಸಿದರು. ತಮ್ಮ ಕಾನೂನುಬದ್ಧ ಪರಿಹಾರದ ಆಯ್ಕೆಯನ್ನು ಚಲಾಯಿಸಲು ಶಿಕ್ಷಿತರಿಗೆ ದಎಹಲಿ ಹೈಕೋರ್ಟ್ ಏಳು ದಿನಗಳ ಗಡುವು ನೀಡಿತ್ತು.

ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಗಲ್ಲು ಜಾರಿಗೆ ಹೊಸದಾಗಿ ದಿನಾಂಕ ನಿಗದಿ ಪಡಿಸುವಂತೆ ಕೋರಿ ದೆಹಲಿ ಸರ್ಕಾರ ಮತ್ತು ತಿಹಾರ್ ಸೆರೆಮನೆ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣಾ ನ್ಯಾಯಾಲಯ ಫೆಬ್ರುವರಿ ೭ರಂದು ವಜಾಗೊಳಿಸಿತ್ತು. ಶಿಕ್ಷಿತ ಅಪರಾಧಿಗಳು ತಮ್ಮ ಕಾನೂನುಬದ್ಧ ಪರಿಹಾರಗಳನ್ನು ಒಂದು ವಾರದ ಒಳಗಾಗಿ ಪಡೆದುಕೊಳ್ಳಲು ಅನುಮತಿ ನೀಡಿದ ಹೈಕೋರ್ಟಿನ ಫೆಬ್ರುವರಿ ೫ರ ಆದೇಶವನ್ನು ಅನುಸರಿಸಿ ಹೊಸದಾಗಿ ಡೆತ್ ವಾರಂಟ್ ಹೊರಡಿಸಲು ಮನವಿ ಮಾಡಲಾಗಿತ್ತು.

ಕಾನೂನು ಬದುಕಲು ಅವಕಾಶ ನೀಡಿರುವಾಗ ಶಿಕ್ಷಿತ ಅಪರಾಧಿಯನ್ನು ಗಲ್ಲಿಗೆ ಏರಿಸುವುದು ಕ್ರಿಮಿನಲ್ ಪಾಪಎಂದು ಹೇಳಿದ್ದ ವಿಚಾರಣಾ ನ್ಯಾಯಾಲಯನಾಲ್ಕೂ ಮಂದಿ ಅಪರಾಧಿಗಳನ್ನು ಒಟ್ಟಿಗೇ ಗಲ್ಲಿಗೇರಿಸಬೇಕು ಎಂದು ಹೇಳಿದ್ದ ಹೈಕೋರ್ಟ್ ಅದೇ ಆದೇಶದಲ್ಲಿ ಶಿಕ್ಷಿತ ಅಪರಾಧಿಗಳಿಗೆ ತಮ್ಮ ಕಾನೂನುಬದ್ಧ ಪರಿಹಾರಗಳನ್ನು ಚಲಾಯಿಸಲು ಒಂದು ವಾರದ ಗಡುವನ್ನು  ನೀಡಿದೆಎಂದು ಹೇಳಿತ್ತು.

ಶಿಕ್ಷಿತ ಅಪರಾಧಿಗಳನ್ನು ತಿಹಾರ್ ಸೆರೆಮನೆಯಲ್ಲಿ ಜನವರಿ ೨೨ರಂದು ಗಲ್ಲಿಗೇರಿಸಲು ಮೊತ್ತ ಮೊದಲು ದಿನ ನಿಗದಿ ಪಡಿಸಲಾಗಿತ್ತು.   ಆದರೆ ಜನವರಿ ೧೭ರ ಕೋರ್ಟ್ ಆದೇಶದಂತೆ ಗಲ್ಲು ಜಾರಿಯನ್ನು ಫೆಬ್ರುವರಿ ೧ರ ಬೆಳಗ್ಗೆ ಗಂಟೆಗೆ ಮುಂದೂಡಲಾಗಿತ್ತು.

ಫಿಸಿಯೋಥೆರೆಪಿ ವಿದ್ಯಾರ್ಥಿನಿಯ ಮೇಲೆ ೨೦೧೨ರ ಡಿಸೆಂಬರ್ ೧೬ರ ರಾತ್ರಿ ದಕ್ಷಿಣ ದೆಹಲಿಯ ಚಲಿಸುವ ಬಸ್ಸಿನಲ್ಲಿ ಆರು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿ, ಕ್ರೂರವಾಗಿ ಹಿಂಸಿಸಿ ಬಳಿಕ ರಸ್ರೆಗೆ ಎಸೆದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಆಕೆ ೧೪ ದಿನಗಳ ಜೀವನ್ಮರಣ ಹೋರಾಟದ ಬಳಿಕ ಸಿಂಗಾಪುರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ನಾಲ್ಕು ಮಂದಿ ಶಿಕ್ಷಿತ ಅಪರಾಧಿಗಳು, ರಾಮ್ ಸಿಂಗ್ ಮತ್ತು ಒಬ್ಬ ಅಪ್ರಾಪ್ತ ಬಾಲಕನನ್ನು ಆರೋಪಿಗಳು ಎಂಬುದಾಗಿ ಹೆಸರಿಸಲಾಗಿತ್ತು.

೨೦೧೩ರ ಮಾರ್ಚ್ ತಿಂಗಳಲ್ಲಿ ವಿಶೇಷ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗಿತ್ತು.
ಪ್ರಕರಣದ ಮುಖ್ಯ ಆರೋಪಿ ರಾಮ್ ಸಿಂಗ್ ವಿಚಾರಣೆ ಆರಂಭವಾದ ಕೆಲ ದಿನಗಳ ಬಳಿಕ ತಿಹಾರ್ ಸೆರೆಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ದಾಳಿಕೋರರಲ್ಲಿ ಅತ್ಯಂತ ಕ್ರೂರವಾಗಿ ವರ್ತಿಸಿದ್ದ ಅಪ್ರಾಪ್ತ ಬಾಲಕನನ್ನು ಮೂರು ವರ್ಷಗಳ ಸುಧಾರಣಾ ವಾಸದ ಬಳಿಕ  ೨೦೧೫ರಲ್ಲಿ ಅಜ್ಞಾತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯ ವೇಳೆಗೆ ಆತನಿಗೆ ೨೦ ವರ್ಷ ವಯಸ್ಸಾಗಿತ್ತು.

ಮುಕೇಶ್, ವಿನಯ್, ಅಕ್ಞಯ್ ಮತ್ತು ಪವನ್ಗೆ ೨೦೧೩ರ ಸೆಪ್ಟೆಂಬರ್ ತಿಂಗಳಲ್ಲಿ ವಿಚಾರಣಾ ನ್ಯಾಯಾಲಯವು ಮರಣದಂಡನೆಯನ್ನು ವಿಧಿಸಿತ್ತು.

No comments:

Advertisement