My Blog List

Tuesday, March 10, 2020

ಕಾಂಗ್ರೆಸ್ಸಿಗೆ ಮುಳುವಾಗುತ್ತಿದೆಯೇ ’ಅನಿರ್ಧಾರ’ ’ಯಥಾಸ್ಥಿತಿ’ ಪಾಲನೆಯ ನೀತಿ?


ಕಾಂಗ್ರೆಸ್ಸಿಗೆ ಮುಳುವಾಗುತ್ತಿದೆಯೇ 'ಅನಿರ್ಧಾರ 'ಯಥಾಸ್ಥಿತಿಪಾಲನೆಯ ನೀತಿ?
ನವದೆಹಲಿ: ಪಕ್ಷದ ಹಿರಿಯ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರ ರಾಜೀನಾಮೆಯು ಕಾಂಗ್ರೆಸ್ ಪಕ್ಷಕ್ಕೆ ಬಲವಾದ ಏಟನ್ನು ನೀಡಿದ್ದು, ಉನ್ನತ ನಾಯಕತ್ವದಅನಿರ್ಧಾರಮತ್ತುಯಥಾಸ್ಥಿತಿ ಮುಂದುವರಿಕೆಯ ಧೋರಣೆಪಕ್ಷದಲ್ಲಿ ಭ್ರಮನಿರಸನ ಬೆಳೆಯುತ್ತಿರುವುದಕ್ಕೆ ಕನ್ನಡಿ ಹಿಡಿದಿದೆ ಎಂದು ರಾಜಕೀಯ ವಲಯಗಳು 2020 ಮಾರ್ಚ್ 10ರ ಮಂಗಳವಾರ ವಿಶ್ಲೇಷಿಸಿದವು.

ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷರ ನೇಮಕಾತಿ ಬಗೆಗಿನ ನಿರ್ಧಾರ ೨೦೧೮ರಲ್ಲಿ ಕಮಲನಾಥ್ ಅವರು ಮುಖ್ಯಮಂತ್ರಿಯಾದಂದಿನಿಂದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ನೆನೆಗುದಿಯಲ್ಲಿ ಬಿದ್ದಿತ್ತು..

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಮತ್ತು ಪಕ್ಷದ ಅಧ್ಯಕ್ಷ ಸ್ಥಾನ ಎರಡನ್ನು ಹೊಂದಿರುವ ಕಮಲನಾಥ್ ಅವರು ಹಲವಾರು ಬಾರಿ ವಿಷಯದ ಬಗ್ಗೆ ಚರ್ಚಿಸಲು ಕಾಂಗೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಆದರೆ ನಿರ್ಧಾರ ಮಾತ್ರ ಇನ್ನೂ ಆಗಿಲ್ಲ.
ವರಿಷ್ಠರ ಅನಿರ್ಧಾರದ ಪರಿಣಾಮವಾಗಿ ಬಿಕ್ಕಟ್ಟು ಬೆಳೆಯುತ್ತಲೇ ಹೋಯಿತು ಎಂದು ಇದೀಗ ವಿಶ್ಲೇಷಿಸಲಾಗುತ್ತಿದೆ.

ಕಳೆದ ವರ್ಷ ರಾಷ್ಟ್ರೀಯ ಚುನಾವಣೆಯಲ್ಲಿ ಭಾರೀ ಪರಾಭವ ಅನುಭವಿಸಿದ ಬಳಿಕ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪರಾಭವದ ನೈತಿಕ ಹೊಣೆ ಹೊತ್ತು ಮೇ ೨೫ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದರೊಂದಿಗೆ ಹಳೆಯ ಮಹಾನ್ ಪಕ್ಷವು ಗಂಭೀರವಾದ ನಾಯಕತ್ವ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿತು.

ರಾಹುಲ್ ಗಾಂಧಿಯವರು ರಾಜೀನಾಮೆ ಹಿಂಪಡೆಯಲು ನಿರಾಕರಿಸಿದ ಪರಿಣಾಮವಾಗಿ ಎರಡು ತಿಂಗಳಿಗೂ ಹೆಚ್ಚು ಕಾಲ ಪಕ್ಷವು ತೀವ್ರ ಗೊಂದಲದಲ್ಲಿ ಮುಳುಗಿತ್ತು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಪುನಃ ಆಗಸ್ಟ್ ೧೦ರಂದು ಸಭೆ ಸೇರಿದ ಬಳಿಕ ಮಾತ್ರವೇ ಸೋನಿಯಾ ಗಾಂಧಿಯವರು ಹಂಗಾಮಿ ಅಧ್ಯಕ್ಷರಾಗಲು ಒಪ್ಪುವುದರೊಂದಿಗೆ ಪಕ್ಷವು ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವಾಗಿತ್ತು.
ಆದರೆ ಬಳಿಕವೂ ನೂತನ ಅಧ್ಯಕ್ಷರು ಯಾರಾಗಬೇಕು ಎಂಬುದನ್ನು ನಿರ್ಣಯಿಸಲಾಗದೆ ಪಕ್ಷವು ಯಥಾಸ್ಥಿತಿಯನ್ನು ಕಾಯ್ದುಕೊಂಡೇ ಮುಂದುವರೆಯುತ್ತಿದೆ.

ನಾಯಕತ್ವದ ವಿಚಾರದಲ್ಲಿ ಕಾಂಗ್ರೆಸ್ ವರಿಷ್ಠರ ಅನಿರ್ಧಾರ ದುಷ್ಪರಿಣಾಮ ಬೀರಿರುವುದು ಮಧ್ಯಪ್ರದೇಶದಲ್ಲಿ ಮಾತ್ರವೇ ಅಲ್ಲ.

ಕರ್ನಾಟಕದಲ್ಲಿ: ಕರ್ನಾಟಕದಲ್ಲಿ ಕೂಡಾ ರಾಜ್ಯದ ಹಾಲಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಳೆದ ವರ್ಷ ಡಿಸೆಂಬರಿನಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಪಕ್ಷದ ಕಳಪೆ ಸಾಧನೆಯ ನೈತಿಕ ಹೊಣೆಗಾರಿಕೆಯನ್ನು ಹೊತ್ತು ಕಾಂಗ್ರೆಸ್ ವರಿಷ್ಠರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕಾಂಗ್ರೆಸ್ ಶಾಸಕಾಂಗ ಪಕ್ದ ನಾಯಕತ್ವದಿಂದ ಕೆಳಗಿಳಿದಿದ್ದರು.

ಸರಣಿ ಮಾತುಕತೆಗಳ ಬಳಿಕ ಕೇಂದ್ರ ನಾಯಕತ್ವವು ಪಕ್ಷದ ಪ್ರಮುಖಸಂಕಟ ನಿವಾರಕಡಿಕೆ ಶಿವಕುಮಾರ್ ಅವರ ಹೆಸರನ್ನು ಕರ್ನಾಟಕ ಘಟಕದ ನೂತನ ಅಧ್ಯಕ್ಷ ಸ್ಥಾನಕ್ಕೆ ಅಂತಿಮಗೊಳಿಸಿತ್ತು.  ಆದರೆ, ಸಿದ್ದರಾಮಯ್ಯ ಅವರು ಹುದೆಗೆ ಲಿಂಗಾಯತ ನಾಯಕ ಎಂಬಿ ಪಾಟೀಲ್ ಬಗ್ಗೆ ಒಲವು ವ್ಯಕ್ತ ಪಡಿಸಿದ ಬಳಿಕ ವರಿಷ್ಠರು ತಮ್ಮ ನಿರ್ಧಾರವನ್ನು ತಡೆ ಹಿಡಿದರು. ವರಿಷ್ಠ ಮಂಡಳಿಯು ಇನ್ನೂ ತನ್ನ ನಿರ್ಧಾರವನ್ನು ಪ್ರಕಟಿಸಲಾಗದೆ ತೊಳಲಾಟವನ್ನು ಮುಂದುವರೆಸಿದೆ.

ಪಂಜಾಬ್: ಇದೇ ರೀತಿ ಪಂಜಾಬಿನಲ್ಲಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು  ಅವರ ಮಾಜಿ ಸಂಪುಟ ಸಹೋದ್ಯೋಗಿ ನವಜೋತ್ ಸಿಂಗ್ ಸಿಧು ನಡುವಣ ಭಿನ್ನಾಭಿಪ್ರಾಯಗಳನ್ನು ನಿವಾರಿಸುವಲ್ಲಿ ಕಾಂಗ್ರೆಸ್ ವರಿಷ್ಠಲು ವಿಫಲರಾಗಿದ್ದಾರೆ.

ತಿಂಗಳುಗಟ್ಟಲೆ ಮೌನದ ಬಳಿಕ ಕಳೆದ ಫೆಬ್ರುವರಿ ತಿಂಗಳ ಕೊನೆಯ ವಾರ ಸಿಧು ಅವರು ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಿ ಪಕ್ಷದಲ್ಲಿ ತಮ್ಮ ಭವಿಷ್ಯದ ಪಾತ್ರದ ಬಗ್ಗೆ ಚರ್ಚಿಸಿದರು. ಆದರೆ ಯಾವುದೇ ನಿರ್ಧಾರ ಇನ್ನೂ ಆಗಿಲ್ಲ.

ಹರಿಯಾಣ: ಕಾಂಗ್ರೆಸ್ ವರಿಷ್ಠರ ನಿರ್ಧಾರ ಕೈಗೊಳ್ಳಲಾಗದ ಪರಿಸ್ಥಿತಿ ಹರಿಯಾಣದಲ್ಲಿ ಕೂಡಾ ಪಕ್ಷಕ್ಕೆ ಮುಳುವಾಗಿದೆ. ಆರು ವರ್ಷಗಳಿಂದ ಪಕ್ಷವನ್ನು ಮುನ್ನಡೆಸುತ್ತಿದ್ದ ಅಶೋಕ ತನ್ವರ್ ಅವರನ್ನು ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಇರುವಾಗ ಹುದ್ದೆಯಿಂದ ಕಿತ್ತು ಹಾಕಲಾಗಿತ್ತು. ಹಿರಿಯ ನಾಯಕಿ ಕುಮಾರಿ ಸೆಲ್ಜಾ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಿ, ಮಾಜಿ ಮುಖ್ಯಮಂತ್ರಿ ಭೂಪೀಂದರ್ ಸಿಂಗ್ ಹೂಡಾ ಅವರಿಗೆ ಚುನಾವಣಾ ನಿರ್ವಹಣೆಯ ಸಾರಥ್ಯ ವಹಿಸಲಾಗಿತ್ತು. ಹೂಡಾ ಅವರು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಅಧಿಕಾರದಿಂದ ದೂರ ತಳ್ಳುವುದಕ್ಕೆ ಅತ್ಯಂತ ಸನಿಹದವರೆಗೆ ಪಕ್ಷವನ್ನು ತಂದು ನಿಲ್ಲಿಸಿದ್ದರು.

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಕೂಡಾ ಕಾಂಗ್ರೆಸ್ ಪಕ್ಷವು ಸಂಘಟನಾತ್ಮಕ ರಚನೆ, ಹೋರಾಟದ ಸ್ಫೂರ್ತಿ ಮತ್ತು ಚುನಾವಣಾ ಉತ್ಸಾಹವನ್ನೂ ಕಳೆದುಕೊಂಡಿತ್ತು. ಪಕ್ಷದ ರಾಧಾಕೃಷ್ಣ ವಿಖೆ -ಪಾಟೀಲ್ ಮತ್ತು ಹರ್ಷ ವರ್ಧನ ಪಾಟೀಲ್ ಅವರು ಬಿಜೆಪಿಗೆ ಪಕ್ಷಾಂತರ ಮಾಡಿದ್ದು ಸಂಜಯ್ ನಿರುಪಮ್ ಅವರು ಪಕ್ಷದ ಪರವಾಗಿ ಪ್ರಚಾರ ಮಾಡಲೂ ನಿರಾಕರಿಸಿದ್ದರು.

೧೯೯೯ರ ಬಳಿಕ ಬಹುಶಃ ಇದೇ ಮೊದಲ ಬಾರಿಗೆ ಬಿಜೆಪಿ -ಶಿವಸೇನಾ ಮೈತ್ರಿಕೂಟದ ವಿರುದ್ಧ ಸೆಣಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ ಸಿಪಿ) ಮತ್ತು ಕಾಂಗ್ರೆಸ್ ಮೈತ್ರಿಕೂಟ ರಚಿಸಿದಾಗ ಶರದ್ ಪವಾರ್ ನೇತೃತ್ವದ ಎನ್ಸಿಪಿಯನ್ನು ದೊಡ್ಡಣ್ಣನಾಗಿ ಒಪ್ಪುವಂತಹ ಸ್ಥಿತಿಗೆ ಕಾಂಗ್ರೆಸ್ ಇಳಿಯಲು ಕಾರಣವಾದದ್ದು ಬಹುಶಃ ವರಿಷ್ಠರ ಇದೇ ಅನಿರ್ಧಾರ ಮನಃಸ್ಥಿತಿ ಇರಬಹುದು ಎಂದು ಭಾವಿಸಲಾಗಿದೆ. ಪರಿಣಾಮವಾಗಿ ಕಾಂಗ್ರೆಸ್ ಪಕ್ಷವು ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು.

ದೆಹಲಿ, ತೆಲಂಗಾಣ, ಒಡಿಶಾ: ದೆಹಲಿಯಲ್ಲಿ ನಾಯಕತ್ವವೇ ಇಲ್ಲದೆ ಕಾಂಗ್ರೆಸ್ ಕಳೆದ ತಿಂಗಳ ವಿಧಾನಸಭಾ ಚುನಾವಣೆಯಲ್ಲಿ ಪುನಃ ಖಾತೆ ತೆರೆಯುವಲ್ಲೂ ವಿಫಲವಾಯಿತು.

ತೆಲಂಗಾಣದಲ್ಲಿ ಪಕ್ಷದ ರಾಜ್ಯ ನಾಯಕರಾದ ಉತ್ತಮ್ ಕುಮಾರ್ ರೆಡ್ಡಿ ಮತ್ತು ಒಡಿಶಾದ ರಾಜ್ಯ ಘಟಕ ಅಧ್ಯಕ್ಷ ನಿರಂಜನ್ ಪಾಟ್ನಾಯಕ್ ಲೋಕಸಭಾ ಚುನಾವಣೆ ಬಳಿಕ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಅವರಿಗೆ ಬದಲಿ ನಾಯಕತ್ವ ರೂಪಿಸಲು ಪಕ್ಷವು ಇನ್ನೂ ತಿಣುಕುತ್ತಲೇ ಇದೆ!

ರಾಜಸ್ಥಾನ, ಛತ್ತೀಸ್ ಗಢ: ಕಾಂಗ್ರೆಸ್ ಆಡಳಿತ ಇರುವ ರಾಜಸ್ಥಾನ, ಛತ್ತೀಸ್ಗಢ ರಾಜ್ಯಗಳಲ್ಲಿ ಕೂಡಾ ಒಳಜಗಳವನ್ನು ವರಿಷ್ಠರು ಮುಟ್ಟದೆ ಹಾಗೇ ಯಥಾಸ್ಥಿತಿಯನ್ನು ಕಾಯ್ದುಕೊಂಡು ಹೋಗುತ್ತಿದ್ದಾರೆ.ಈಗ ಎಲ್ಲರ ಕಣ್ಣುಗಳು ಎರಡು ರಾಜ್ಯಗಳ ಸರ್ಕಾರಗಳ ಸ್ಥಿರತೆಯತ್ತ ನೆಟ್ಟಿದೆ.

ಜ್ಯೋತಿರಾದಿತ್ಯ ಸಿಂಧಿಯಾ ನಿರ್ಗಮನವು ಪಕ್ಷದ ವರಿಷ್ಠ ಮಂಡಳಿಗೆ ಹೆಜ್ಜೆ ಸರಿಪಡಿಸುವ ಮತ್ತು ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಮುಳುಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕಠಿಣ ಸವಾಲನ್ನೇ ಎಸೆದಿದೆ. ಪಕ್ಷದ ನಾಯಕತ್ವವು ಯಥಾಸ್ಥಿತಿ ಪಾಲನೆಯ ಧೋರಣೆಯನ್ನು ಕೈಬಿಟ್ಟು ನಿರ್ಧಾರಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ದಿಟ್ಟ ಅಡಿ ಇಡಲೇಬೇಕಾದ ಸ್ಥಿತಿ ಇದೀಗ ಉದ್ಭವಿಸಿದೆ ಎಂದು ರಾಜಕೀಯ ವಲಯಗಳು ಅಭಿಪ್ರಾಯ ಪಟ್ಟಿವೆ.

No comments:

Advertisement