ಕೊರೋನಾ: ಸರ್ಕಾರಿ ನೌಕರ, ಪಿಂಚಣಿದಾರರ ಏರಿಕೆ ತುಟ್ಟಿಭತ್ಯೆ ಸ್ಥಗಿತ
ನವದೆಹಲಿ: ಮಾರ್ಚ್ ತಿಂಗಳಲ್ಲಿ ಪ್ರಕಟಿಸಲಾಗಿದ್ದ ತನ್ನ ನೌಕರರು ಮತ್ತು ಪಿಂಚಣಿದಾರರ ಹೆಚ್ಚುವರಿ ತುಟ್ಟಿಭತ್ಯೆಯನ್ನು
(ಡಿಎ)
ಕೇಂದ್ರ ಸರ್ಕಾರವು 2020 ಏಪ್ರಿಲ್ 23ರ ಗುರುವಾರ ಅಮಾನತುಗೊಳಿಸಿತು ಮತ್ತು ಮುಂದಿನ ಎರಡು ತುಟ್ಟಿಭತ್ಯೆ ಏರಿಕೆಯನ್ನೂ ಸ್ಥಗಿತಗೊಳಿಸಲು ನಿರ್ಧರಿಸಿತು.
ಕೊರೋನಾವೈರಸ್ ಸಾಂಕ್ರಾಮಿಕದ ಪರಿಣಾಮವಾಗಿ ಆರ್ಥಿಕತೆಗೆ ಉಂಟಾಗಿರುವ ತೀವ್ರ ಧಕ್ಕೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ನಿರ್ಧಾರ ಕೈಗೊಂಡಿತು.
ಸ್ಥಗಿತದ ಪರಿಣಾಮವಾಗಿ ಸರ್ಕಾರವು ೨೦೨೦ ಜನವರಿ ೦೧ರಿಂದ ನೀಡಬೇಕಾಗಿದ್ದ ತುಟ್ಟಿಭತ್ಯೆಯನ್ನು ಪಾವತಿ ಮಾಡುವುದಿಲ್ಲ ಮತ್ತು ತುಟ್ಟಿಭತ್ಯೆ ದರಗಳು ಮುಂದಿನ ವರ್ಷ ಜುಲೈವರೆಗೂ ಬದಲಾವಣೆ ಇಲ್ಲದೆ ಹಾಗೆಯೇ ಮುಂದುವರೆಯುವುವು ಎಂದು ಸರ್ಕಾರ ಈದಿನ ಹೊರಡಿಸಿದ ಅಧಿಸೂಚನೆ ತಿಳಿಸಿತು.
೨೦೨೦ ಜನವರಿ ೦೧ರಿಂದ ೨೦೨೧ ಜೂನ್ ೩೦ರವರೆಗಿನ ಅವಧಿಗೆ ಯಾವುದೇ ಬಾಕಿಯನ್ನೂ ಪಾವತಿ ಮಾಡಲಾಗುವುದಿಲ್ಲ ಎಂದೂ ಸರ್ಕಾರ ತಿಳಿಸಿತು.
ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತ ನಿರ್ಧಾರ ಕೈಗೊಳ್ಳಲಾಗಿದೆ.
ಕೇಂದ್ರ ಸಚಿವ ಸಂಪುಟವು ಮಾರ್ಚ್ ತಿಂಗಳಲ್ಲಿ ಜನವರಿ ೨೦೨೦ರಿಂದ ಅನ್ವಯಾಗುವಂತೆ ತುಟ್ಟಿಭತ್ಯೆಯನ್ನು ಶೇಕಡಾ ೪ರಷ್ಟು ಹೆಚ್ಚಿಸಿ ಮೂಲ ವೇತನದ ಶೇಕಡಾ ೨೧ರಷ್ಟು ತುಟ್ಟಿಭತ್ಯೆ ನೀಡಲು ಅನುಮೋದನೆ ನೀಡಿತ್ತು.
ತುಟ್ಟಿಭತ್ಯೆಯ ಹೆಚ್ಚುವರಿ ಕಂತುಗಳು ಮತ್ತು ೨೦೨೦ ಜುಲೈ ೦೧ರಿಂದ ೨೦೨೧ ಜನವರಿ ೦೧ರವರೆಗಿ ತುಟ್ಟಿಭತ್ಯೆ ಪರಿಹಾರ ಬಾಕಿಯನ್ನು ಕೂಡಾ ಪಾವತಿ ಮಾಡಲಾಗುವುದಿಲ್ಲ ಎಂದ ವಿತ್ತ ಸಚಿವಾಲಯವು ತಿಳಿಸಿತು.
’ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರ ಈಗಿನ ದರದಲ್ಲೆ ಮುಂದುವರೆಯುವುವು’ ಎಂದು ಹೆಚ್ಚುವರಿ ಕಾರ್‍ಯದರ್ಶಿ ಅನ್ನೀ ಜಾರ್ಜ್ ಮ್ಯಾಥ್ಯೂ ಅವರು ಸಹಿ ಹಾಕಿದ ಅಧಿಸೂಚನೆ ತಿಳಿಸಿದೆ.
ಸರ್ಕಾರದ ನಿರ್ಧಾರವು ೪೯.೨೬ ಲಕ್ಷ ಮಂದಿ ಕೇಂದ್ರ ಸರ್ಕಾರಿ ನೌಕರರು ಮತ್ತು ೬೧.೧೭ ಲಕ್ಷ ಪಿಂಚಣಿದಾರರ ಮೇಲೆ ಪರಿಣಾಮ ಬೀರಲಿದೆ.
ಹಣದುಬ್ಬರ ಏರಿಕೆಯ ಪೆಟ್ಟಿನಿಂದ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರನ್ನು ರಕ್ಷಸಲು ವೇತನದ ಒಂದು ಭಾಗವಾಗಿ ತುಟ್ಟಿಭತ್ಯೆಯನ್ನು ನೀಡಲಾಗುತ್ತದೆ.
ಸರ್ಕಾರವು ಇದನ್ನು ಎರಡು ವರ್ಷಗಳಿಗೊಮ್ಮೆ ಪರಿಷ್ಕರಿಸುತ್ತದೆ.
ವಿತ್ತ ಸಚಿವಾಲಯದ ಅಂದಾಜಿನಂತೆ ತುಟ್ಟಿ ಭತ್ಯೆ ಸ್ಥಗಿತದ ಪರಿಣಾಮವಾಗಿ ಸರ್ಕಾರಕ್ಕೆ ಅಂದಾಜು ೩೭,೫೩೦ ಕೋಟಿ ರೂಪಾಯಿಗಳಷ್ಟು ಉಳಿತಾಯವಾಗುತ್ತದೆ.
ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಪರಿಹಾರ ಸ್ಥಗಿತದಿಂದ ಸರ್ಕಾರಕ್ಕೆ ಪ್ರತಿ ತಿಂಗಳು ೧,೦೦೦ ಕೋಟಿ ರೂಪಾಯಿಗಳಷ್ಟು ಉಳಿತಾಯವಾಗುತ್ತದೆ.
ಇದರಿಂದ ೧೪ ತಿಂಗಳ ಅವಧಿಯಲ್ಲಿ ಬೊಕ್ಕಸಕ್ಕೆ ಅಂದಾಜು ೧೪,೫೯೫ ಕೋಟಿ ರೂಪಾಯಿಗಳಷ್ಟು ಉಳಿತಾಯವಾಗುತ್ತದೆ.
ಕೊರೋನಾವೈರಸ್ ದಿಗ್ಬಂಧನದ
(ಲಾಕ್ ಡೌನ್)
ಪರಿಣಾಮವಾಗಿ ಸರ್ಕಾರದ ತೆರಿಗೆ ಆದಾಯ ಕುಸಿದಿದ್ದು,
ದುರ್ಬಲ ವರ್ಗಗಳಿಗೆ ಬೆಂಬಲಸ್ವರೂಪದ ನೆರವಿನ ಪ್ರಮಾಣ ಹೆಚ್ಚಿದ್ದರಿಂದಾಗಿ ವೆಚ್ಚಗಳು ಅಧಿಕಗೊಂಡಿವೆ.
ತುಟ್ಟಿ ಭತ್ಯೆಯ ಮುಂದಿನ ಪರಿಷ್ಕರಣೆಯು ೨೦೨೧ರ ಜುಲೈ ತಿಂಗಳಲ್ಲಿ ಇರುವುದಿಲ್ಲ ಮತ್ತು ೨೦೨೦ ಜನವರಿ,
೨೦೨೦ ಜುಲೈ ಮತ್ತು ೨೦೨೧ ಜನವರಿಗಳಿಂದ ಅನ್ವಯವಾಗುವ ದರಗಳು ಮುಂದಿನ ಪರಿಷ್ಕೃತ ದರಗಳಲ್ಲಿ ಅಂತರ್ಗತಗೊಳ್ಳುತ್ತವೆ ಎಂದು ಸರ್ಕಾರ ಹೇಳಿದೆ.
ಕೇಂದ್ರ ಸರ್ಕಾರಿ ನೌಕರರ ಮೇಲೆ ಕೊರೋನಾವೈರಸ್ಸಿನಿಂದ ಆಗಿರುವ ಮೊದಲ ಪರಿಣಾಮ ಇದು.
ಸರ್ಕಾರವು ಇದಕ್ಕೆ ಮುನ್ನ ಸಚಿವರು,
ಪ್ರಧಾನಿ,
ರಾಷ್ಟ್ರಪತಿ ಮತ್ತು ಸಂಸತ್ ಸದಸ್ಯರ ವೇತನಗಳನ್ನು ಶೇಕಡಾ ೩೦ರಷ್ಟು ಕಡಿತಗೊಳಿಸಿತ್ತು.
ಜೊತೆಗೆ ಕೊರೋನಾವೈರಸ್ ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಹಣ ಒದಗಿಸುವ ಸಲುವಾಗಿ ಸಂಸತ್ ಸದಸ್ಯರು ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿ ಯೋಜನೆಯನ್ನೂ ಎರಡು ವರ್ಷಗಳ ಅವಧಿಗೆ ಅಮಾನತುಗೊಳಿಸಿತ್ತು.
ತುಟ್ಟಿಭತ್ಯೆ ಹೆಚ್ಚಳದ ನಿರ್ಧಾರವನ್ನು ಸರ್ಕಾರವು ಮಾರ್ಚ್ ತಿಂಗಳಲ್ಲೇ ಕೈಗೊಂಡಿದ್ದರೂ,
ಪ್ರಧಾನಿ ನರೇಂದ್ರ ಮೋದಿ ಅವರು ಸಚಿವ ಸಂಪುಟ ನಿರ್ಧಾರ ಕೈಗೊಂಡ ಎರಡು ವಾರಗಳ ಒಳಗಾಗಿ ರಾಷ್ಟ್ರವ್ಯಾಪಿ ದಿಗ್ಬಂಧನ
(ಲಾಕ್ ಡೌನ್)
ಘೋಷಿಸಿದ ಪರಿಣಾಮವಾಗಿ ತುಟ್ಟಿಭತ್ಯೆ ಹೆಚ್ಚಳದ ಕುರಿತ ಔಪಚಾರಿಕ ಆದೇಶ ಹೊರಡಿಸಲು ಸಾಧ್ಯವಾಗಿರಲಿಲ್ಲ.
ಸರ್ಕಾರವು ಈಗಾಗಲೇ ಮಾರ್ಚ್ ೨೬ರಂದು ದಿಗ್ಬಂಧನದ ಹಿನ್ನೆಲೆಯಲ್ಲಿ ಬಡವರಿಗೆ ತತಕ್ಷಣದ ಪರಿಹಾರ ಒದಗಿಸಲು ೧.೭ ಲಕ್ಷ ಕೋಟಿ ರೂಪಾಯಿಗಳ ಕಲ್ಯಾಣ ಕೊಡುಗೆಯನ್ನು ಪ್ರಕಟಿಸಿದೆ.
ರೈತರು,
ದಿನಗೂಲಿ ನೌಕರರು ಮತ್ತು ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳಿಗೆ ಅಗತ್ಯ ನೆರವು ಮುಂದುವರೆಸಲು ನಿರ್ಧರಿಸಿರುವ ಕೇಂದ್ರ ಸರ್ಕಾರವು ಆರ್ಥಿಕತೆಗೆ ಶಕ್ತಿ ತುಂಬಲು ಕೆಲವು ಹಣಕಾಸು ನಿಯಂತ್ರಣದ ಕ್ರಮಗಳನ್ನೂ ಪ್ರಕಟಿಸಿದ್ದು ಇವುಗಳಿಗೆ ಭಾರೀ ಮೊತ್ತದ ಹಣ ಬೇಕಾಗುತ್ತದೆ ಎಂದು ಇಬ್ಬರು ಅಧಿಕಾರಿಗಳು ಹೇಳಿದರು.
ಕೈಗಾರಿಕಾ ಅಂದಾಜುಗಳ ಪ್ರಕಾರ,
ಆರ್ಥಿಕತೆಯ ಪುನಃಶ್ಚೇತನ,
ಲಕ್ಷಾಂತರ ಉದ್ಯೋಗ ಸೃಷ್ಟಿ ಮತ್ತು ಬದುಕುಗಳ ರಕ್ಷಣೆಗಾಗಿ ಈಗಾಗಲೇ ಪ್ರಕಟಿಸಲಾಗಿರುವ ೧.೭ ಲಕ್ಷ ಕೋಟಿ ರೂಪಾಯಿಗಳು ಸೇರಿದಂತೆ ಒಟ್ಟು ೧೬ ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಉತ್ತೇಜನ ಕೊಡುಗೆಯನ್ನು ಕೇಂದ್ರ ಸರ್ಕಾರ ಒದಗಿಸಲಿದೆ.
No comments:
Post a Comment