Wednesday, April 29, 2020

ಕೊಲ್ಲಿ ರಾಷ್ಟ್ರಗಳಿಗೆ ಭಾರತದ ವೈದ್ಯರು, ದಾದಿಯರು: ಕೇಂದ್ರದ ಹಸಿರು ನಿಶಾನೆ

ಕೊಲ್ಲಿ ರಾಷ್ಟ್ರಗಳಿಗೆ  ಭಾರತದ ವೈದ್ಯರು, ದಾದಿಯರು: ಕೇಂದ್ರದ ಹಸಿರು ನಿಶಾನೆ
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಎರಡು ಕೊಲ್ಲಿ ರಾಷ್ಟ್ರಗಳಿಗೆ ನೆರವು ನೀಡುವುದಕ್ಕಾಗಿ ಭಾರತದಿಂದ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸಿಕೊಡುವಂತೆ ಕುವೈತ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮಾಡಿರುವ ಮನವಿಗಳಿಗೆ ಭಾರತ  2020 ಏಪ್ರಿಲ್  29ರ ಬುಧವಾರ ತಾತ್ವಿಕ ಮನ್ನಣೆ ನೀಡಿತು.

ಕುವೈತ್ ಪ್ರಧಾನಿ ಶೇಖ್ ಸಬಾಹ್ ಅಲ್ ಖಾಲಿದ್ ಅಲ್ ಹಮದ್ ಅಲ್ ಸಭಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡುವ ಮೂಲಕ ತಿಂಗಳ ಆದಿಯಲ್ಲಿ ಮೊತ್ತ ಮೊದಲಿಗರಾಗಿ ಭಾರತದ ವೈದ್ಯಕೀಯ ನೆರವು ಕೋರಿದ್ದರು. ಇದಕ್ಕೆ ಸ್ಪಂದನೆಯಾಗಿ ಭಾರತವು ೧೫ ಸದಸ್ಯರ ಸೇನಾ ಕ್ಷಿಪ್ರ ಸ್ಪಂದನಾ ತಂಡವನ್ನು ಭಾರತೀಯ ವಾಯುಪಡೆ ವಿಮಾನದ ಮೂಲಕ ರವಾನಿಸಿತ್ತು.

ತಂಡವು ಸೋಮವಾರ ಹಿಂತಿರುಗುತ್ತಿದ್ದಂತೆಯೇ ಕುವೈತ್ ಇನ್ನಷ್ಟು ವೈದ್ಯಕೀಯ ತಂಡಗಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಿತು. ’ನಮ್ಮ ಕ್ಷಿಪ್ರ ಸ್ಪಂದನಾ ತಂಡದ ಸೇವೆಯಿಂದ ಅವರು ಪ್ರಭಾವಿತರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ನುಡಿದರು.

ಇದೇ ವೇಳೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ (ಯುಎಇ) ಭಾರತೀಯ ಆರೋಗ್ಯ ರಕ್ಷಣಾ ಸಿಬ್ಬಂದಿಗಾಗಿ ಮನವಿ ಬಂತು ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ತಿಳಿಸಿದರು. ಇಂತಹುದೇ ಮನವಿಗಳು ಮಾರಿಷಸ್, ಆಫ್ರಿಕಾದ ಪೂರ್ವ ಕರಾವಳಿಯಲ್ಲಿರುವ ಕೋಮ್ರೋಸ್ ದ್ವೀಪ ಸಮೂಹಗಳಿಂದಲೂ ಬಂದಿವೆ ಎಂದು ಅವರು ನುಡಿದರು.

ಇತರ ಕೊಲ್ಲಿ ರಾಷ್ಟ್ರಗಳು ಕೂಡಾ ತಮಗೆ ಭಾರತೀಯ ವೈದ್ಯಕೀಯ ನೆರವಿನ ಅಗತ್ಯವಿದೆ ಎಂದು ತಿಳಿಸಿದ್ದು, ಇಷ್ಟರಲ್ಲೇ ಔಪಚಾರಿಕ ಮನವಿಗಳನ್ನು ಕಳುಹಿಸುವ ನಿರೀಕ್ಷೆಯಿದೆ.

ನಿವೃತ್ತ ಸೇನಾ ವೈದ್ಯರು, ದಾದಿಯರು ಮತ್ತು ತಂತ್ರಜ್ಞರನ್ನು ಯುಎಇ ಮತ್ತು ಕುವೈತ್ ಗಳಿಗೆ ಕಳುಹಿಸಿಕೊಡಲು ಭಾರತ ಸರ್ಕಾರವು ತಾತ್ವಿಕ ನಿರ್ಧಾರ ಕೈಗೊಂಡಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

ಕೋಮ್ರೋಸ್ ಮತ್ತು ಮತ್ತು ಮಾರಿಷಸ್‌ಗೆ ಸರ್ಕಾರವು ಅಲ್ಪಾವಧಿಗೆ ಸೇನಾ ಕ್ಷಿಪ್ರ ಸ್ಪಂದನಾ ತಂಡಗಳನ್ನು ನಿಯೋಜಿಸಲು ಒಪ್ಪಿಗೆ ಕೊಟ್ಟಿದೆ. ತಂಡಗಳು ಸೇನಾ ವೈದ್ಯರು, ದಾದಿಯರು ಮತ್ತು ಇತರ ಅರೆ ವೈದ್ಯಕೀಯ ಸಿಬ್ಬಂದಿಯನ್ನು ಹೊಂದಿವೆ.

ಕುವೈತ್ ಮತ್ತು ಯುಎಇಗೆ ಯಾವ ರೀತಿಯಾಗಿ ವೈದ್ಯಕೀಯ ತಂಡಗಳನ್ನು ರಚಿಸಬೇಕು ಎಂಬ ಬಗ್ಗೆ ವಿದೇಶಾಂಗ ಸಚಿವಾಲಯ ಮತ್ತು ಸಶಸ್ತ್ರ ಪಡೆಗಳು ಪರಿಶೀಲನೆ ನಡೆಸುತ್ತಿವೆ.

ನಿವೃತ್ತ ಆರೋಗ್ಯ ರಕ್ಷಣಾ ವೃತ್ತಿಪರರು- ವೈದ್ಯರು, ದಾದಿಯರು, ಲ್ಯಾಬ್ ತಂತ್ರಜ್ಞರು- ಇತ್ಯಾದಿ ಯಾರು ಕಾರ್‍ಯ ವಹಿಸಿಕೊಳ್ಳಲು ಸಿದ್ಧರಿದ್ದಾರೋ ಅಂತಹವರನ್ನು ಕೊಲ್ಲಿ ರಾಷ್ಟ್ರಗಳಿಗೆ ನೆರವಾಗಲು ಆಯ್ಕೆ ಮಾಡಬಹುದು ಎಂದು ಅಧಿಕಾರಿಯೊಬ್ಬರು ನುಡಿದರು.

ಸರಾಸರಿ ೧೦೦ ವೈದ್ಯರು, ೩೦-೪೦ ದಾದಿಯರು ಮತ್ತು ಕೆಲವು ನೂರು ಅರೆ ವೈದ್ಯಕೀಯ ಸಿಬ್ಬಂದಿ ಸೇನಾ ವೈದ್ಯಕೀಯ ದಳದಿಂದ ಪ್ರತಿವರ್ಷ ನಿವೃತ್ತರಾಗುತ್ತಾರೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

ಸಂದರ್ಭದಲ್ಲಿ ಭಾರತದ ಜನರ ಆರೋಗ್ಯ ಅಗತ್ಯಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆಯೇ ಕೊಲ್ಲಿ ರಾಷ್ಟ್ರಗಳ ಅಗತ್ಯಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಯೋಚನೆ ನಡೆಸಿದೆ.

ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಕೊರೋನಾ ಹಿನ್ನೆಲೆಯಲ್ಲಿ ಭಾರತೀಯ ನೆರವಿಗಾಗಿ ಕೊಲ್ಲಿ ರಾಷ್ಟ್ರಗಳಿಂದ ಅಸಂಖ್ಯಾತ ಮನವಿಗಳು ಬಂದಿದ್ದು, ಪ್ಯಾರಾಸಿಟಮೋಲ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಕಳುಹಿಸಿಕೊಡುವಂತೆ ಅವರು ಮಾಡಿದ್ದ ಮನವಿಗಳಿಗೆ ಆದ್ಯತೆ ನೀಡುವಂತೆ ಪ್ರಧಾನಿ ಸೂಚಿಸಿದ್ದರು.

ಈವರೆಗೆ ೪೫ ಮಿಲಿಯನ್ (೪೫೦ ಲಕ್ಷ) ಹೈಡ್ರಾಕ್ಸಿಕ್ಲೊರೋಕ್ವಿನ್ ಮಾತ್ರೆಗಳು ಮತ್ತು ೧೧ ಮೆಟ್ರಿಕ್ ಟನ್ ಎಚ್‌ಸಿಕ್ಯೂ ಆಕ್ಟಿವ್ ಫಾರ್ಮಾಸ್ಯೂಟಿಕಲ್ ಇನ್‌ಗ್ರೀಡಿಯಂಟ್ಸ್‌ನ್ನು ಬಹರೈನ್, ಜೋರ್ಡಾನ್, ಒಮನ್, ಖತರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಆರು ಕೊಲ್ಲಿ ರಾಷ್ಟ್ರಗಳಿಗೆ ವಾಣಿಜ್ಯ ಆಧಾರದಲ್ಲಿ ಕಳುಹಿಸಿಕೊಡಲಾಗಿದೆ.

ಇದಲ್ಲದೆ, ೨೨. ಮಿಲಿಯನ್ (೨೨೭ ಲಕ್ಷ) ಪ್ಯಾರಾಸಿಟಮೋಲ್ ಮಾತ್ರೆಗಳನ್ನು ಕುವೈತ್ ಮತ್ತು ಯುಎಇಗೆ ಏಪ್ರಿಲ್  ೧೭ರಂದು ಸರ್ಕಾರವು ಔಷಧಗಳ ಮೇಲಿನ ರಫ್ತು ನಿಯಂತ್ರಣವನ್ನು ತೆರವುಗೊಳಿಸುವುದಕ್ಕೆ ಮೊದಲೇ ಕಳುಹಿಸಿತ್ತು..  ಪ್ಯಾರಾಸಿಟಮೋಲ್‌ನ ಇನ್ನಷ್ಟು ಸರಕನ್ನು ಬಳಿಕ ಇರಾಕ್ ಮತ್ತು ಯೆಮೆನ್ ಹಾಗೂ ಇನ್ನೆರಡು ರಾಷ್ಟ್ರಗಳಿಗೂ ಕಳುಹಿಸಲಾಗಿತ್ತು.

No comments:

Advertisement