My Blog List

Monday, May 18, 2020

ಒತ್ತಡಕ್ಕೆ ಮಣಿದ ಚೀನಾ, ಕೋರೋನಾ ವೈರಸ್ ಮೂಲದ ತನಿಖೆಗೆ ಅಸ್ತು

ಒತ್ತಡಕ್ಕೆ ಮಣಿದ ಚೀನಾಕೋರೋನಾ ವೈರಸ್ ಮೂಲದ ತನಿಖೆಗೆ ಅಸ್ತು
ನವದೆಹಲಿ: ವಿಶ್ವಾದ್ಯಂತ ಲಕ್ಷಾಂತರ ಮಂದಿಯನ್ನು ಬಲಿತೆಗೆದುಕೊಂಡಿರುವ ಕೋವಿಡ್-೧೯ ಸಾಂಕ್ರಾಮಿಕದ ಮೂಲದ ತನಿಖೆ ಮತ್ತು ಸಾಂಕ್ರಾಮಿಕಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಸ್ಪಂದನೆ ಬಗ್ಗೆ ಪುನರ್ ಪರಿಶೀಲನೆಯಾಗಬೇಕು ಎಂಬ ಬಗ್ಗೆ ಹೆಚ್ಚುತ್ತಿರುವ ಜಾಗತಿಕ ಒತ್ತಡಕ್ಕೆ ಚೀನಾ  2020 ಮೇ 18ರ ಸೋಮವಾರ ಕೊನೆಗೂ ಮಣಿದಿದ್ದು, ಕೊರೋನಾ ಸೋಂಕಿನ ಉಗಮದ ಕುರಿತು ತನಿಖೆಗೆ ಒಪ್ಪಿತು.

ಚೀನಾದ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಮಹಾಧಿವೇಶನದಲ್ಲಿ ಮಾತನಾಡುತ್ತಾ  ವಿಶ್ವಾದ್ಯಂತ ಲಕ್ಷಾಂತರ ಮಂದಿಯನ್ನು ಬಾಧಿಸಿರುವ ರೋಗವು ಮೊದಲಿಗೆ ಸ್ಫೋಟಗೊಂಡಾಗ ಚೀನಾವು ಮುಕ್ತತೆ, ಪಾರದರ್ಶಕತೆ ಮತ್ತು ಜವಾಬ್ದಾರಿಯಿಂದ ವರ್ತಿಸಿದೆ ಎಂದು ಹೇಳಿದರು.

ಸುಮಾರು ೧೦೦ಕ್ಕೂ ಹೆಚ್ಚು ದೇಶಗಳು ಬೆಂಬಲಿಸಿದ ಕರಡು ನಿರ್ಣಯವನ್ನು ಐರೋಪ್ಯ ಒಕ್ಕೂಟವು ಮಂಡಿಸಿದ ಬಳಿಕ ಅಧ್ಯಕ್ಷ ಕ್ಷಿ ಅವರನ್ನು ಮಹಾಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುವಂತೆ ಆಹ್ವಾನಿಸಲಾಯಿತು.

ರೋಗಕ್ಕೆ ಸಂಬಂಧಿಸಿದಂತೆ ಜಾಗತಿಕ ಸ್ಪಂದನೆಯ ಸಮಗ್ರ ಪರಿಶೀಲನೆ ನಡೆಯಬೇಕು ಎಂಬ ಕರೆಗಳನ್ನು ಬೆಂಬಲಿಸಿದ ಕ್ಷಿ, ತನಿಖೆಯನ್ನು ರೋಗದಿಂದ ಉದ್ಭವಿಸಿದ ಸಂಕಷ್ಟಮಯ ಪರಿಸ್ಥಿತಿಯ ಹಿಡಿತದಿಂದ ವಿಶ್ವವು ಮುಕ್ತಗೊಂಡ ಬಳಿಕ ನಡೆಸಬೇಕು ಎಂದು ಹೇಳಿದರು. ಜಗತ್ತಿನ ತತ್ ಕ್ಷಣದ ಆದ್ಯತೆ ಜನರ ರಕ್ಷಣೆಯಾಗಬೇಕು ಎಂದು ಅವರು ನುಡಿದರು.

ಕೋವಿಡ್-೧೯ರ ಕುರಿತ ಜಾಗತಿಕ ಸ್ಪಂದನೆಯ ಸಮಗ್ರ ಪುನರ್ ಪರಿಶೀಲನೆಯಾಗಬೇಕು ಎಂಬ ಕಲ್ಪನೆಯನ್ನು ಚೀನಾ ಬೆಂಬಲಿಸುತ್ತದೆ. ಆದರೆ ಇದನ್ನು ರೋಗವನ್ನು ನಿಯಂತ್ರಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದ ಬಳಿಕ ನಡೆಸಬೇಕು ಮತ್ತು ಲೋಪದೋಷಗಳ ಬಗ್ಗೆ ಗಮನಿಸಬೇಕು ಎಂದು ಅಧ್ಯಕ್ಷ ಕ್ಷಿ ಅವರು ವಿಶ್ವಸಂಸ್ಥೆಯ ಜಾಗತಿಕ ಆರೋಗ್ಯ ಸಂಸ್ಥೆಯ ನೀತಿ ನಿರ್ಣಾಯಕ ಅಧಿವೇಶನಕ್ಕೆ ತಿಳಿಸಿದರು.

ಇಂತಹ ತನಿಖೆ ನಡೆಸುವಂತೆ ಅಮೆರಿಕ ಮತ್ತು ಕ್ಯಾನ್ ಬೆರಾ ನೀಡಿದ್ದ ಕರೆಗಳನ್ನು ಇದಕ್ಕೆ ಮುನ್ನ ಚೀನಾ ವಿರೋಧಿಸಿತ್ತು.

ಜಾಗತಿಕ ಆರೋಗ್ಯ ಸಂಸ್ಥೆಯ ಮಹಾ ಅಧಿವೇಶನವು ಸುಮಾರು ೧೨೦ಕ್ಕೂ ಹೆಚ್ಚು ದೇಶಗಳು ಬೆಂಬಲಿಸಿರುವ ನಿರ್ಣಯವನ್ನು ಮಂಗಳವಾರ ಔಪಚಾರಿಕವಾಗಿ ಚರ್ಚೆಗೆ ಎತ್ತಿಕೊಳ್ಳುವ ನಿರೀಕ್ಷೆ ಇದೆ.

ಈಗ ಅದು ಔಪಚಾರಿಕತೆ. ಈಗ ಯಾರೂ ಅದನ್ನು ಆಕ್ಷೇಪಿಸುತ್ತಿಲ್ಲ ಎಂದು ಜಿನೇವಾದಲ್ಲಿನ ರಾಜತಾಂತ್ರಿಕರೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದರು.

 ಕೋರೋನಾ ವೈರಸ್ ಮೂಲದ ತನಿಖೆ: ೧೦೦ಕ್ಕೂ ಹೆಚ್ಚು ರಾಷ್ಟ್ರಗಳ ಬೆಂಬಲ
ವಿಶ್ವ ಆರೋಗ್ಯ ಸಂಸ್ಥೆ ಸಮಾವೇಶದಲ್ಲಿ ನಿರ್ಣಯ ಸಂಭವ
ನವದೆಹಲಿ: ವಿಶ್ವಾದ್ಯಂತ ಲಕ್ಷಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿರುವ ಕೊರೋನಾವೈರಸ್ ಸೋಂಕಿನ ಮೂಲದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಐರೋಪ್ಯ ಒಕ್ಕೂಟವು ನಿರ್ಣಯವನ್ನು ಸಿದ್ಧ ಪಡಿಸಿದ್ದು, ಭಾರತ ಸೇರಿದಂತೆ ೧೦೦ಕ್ಕೂ ಹೆಚ್ಚು ದೇಶಗಳು ಅದನ್ನು ಬೆಂಬಲಿಸಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಹೂ) ಬೃಹತ್ ವಾರ್ಷಿಕ ಸಮಾವೇಶಕ್ಕೆ ಮುನ್ನ ಸಂಸ್ಥೆಗೆ ಸಲ್ಲಿಸಲಾಗಿರುವ ದಾಖಲೆಗಳು ತಿಳಿಸಿವೆ.

ವಿಶ್ವ ಆರೋಗ್ಯ ಸಂಸ್ಥೆಯು ಪ್ರಮುಖ ನೀತಿ ನಿರೂಪಣಾ ಸಂಸ್ಥೆಯಾಗಿರುವ ವಿಶ್ವ ಆರೋಗ್ಯ ಅಸೆಂಬ್ಲಿಯ ಸಭೆ 2020 ಮೇ 18ರ ಸೋಮವಾರ ಮಧ್ಯಾಹ್ನ .೩೦ ಗಂಟೆಗೆ ನಡೆಯಲಿದೆ. ಇದೇ ಮೊದಲ ಬಾರಿಗೆ ಸಮ್ಮೇಳನ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ. ಸಮ್ಮೇಳನವು ಸಧ್ಯಕ್ಕೆ ಎರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿದ್ದು ಲಕ್ಷಾಂತರ ಮಂದಿಯನ್ನು ಕಾಡುತ್ತಿರುವ ವೈರಸ್ಸಿನ ಕಪಿಮುಷ್ಠಿಯಿಂದ ವಿಶ್ವವು ಬಿಡುಗಡೆ ಹೊಂದಿದ ಬಳಿಕ ಪುನಃ ಸಮಾವೇಶಗೊಳ್ಳಲಿದೆ.

ಈಗ ಸಾರ್ಸ್ -ಕೋವ್- ಎಂಬುದಾಗಿ ಕರೆಯಲಾಗುತ್ತಿರುವ ವೈರಸ್ಸಿನ ಮೂಲ ಮತ್ತು ಅದು ಮಾನವರನ್ನು ತಲುಪಿದ ಮಾರ್ಗದ ಬಗ್ಗೆ ಬಗ್ಗೆ ತನಿಖೆ ನಡೆಯಬೇಕು ಎಂದು ನಿರ್ಣಯ ಕೋರಿದೆ. ವಿಶ್ವವನ್ನು ಕಾಡುತ್ತಿರುವ ಮಾರಣಾಂತಿಕ ಕೊರೋನಾವೈರಸ್ ಚೀನಾದ ವುಹಾನ್ ನಗರದಲ್ಲಿ ಮೊತ್ತ ಮೊದಲಿಗೆ ಪತ್ತೆಯಾಗಿತ್ತು.

ಆದರೆ, ಕಳೆದ ವರ್ಷ ರೋಗ ಪತ್ತೆಯಾದ ಬಳಿಕ ಪ್ರಾರಂಭದ ದಿನಗಳಲ್ಲಿ ಅದನ್ನು ಮುಚ್ಚಿಡಲು ಚೀನಾವು ಪ್ರಯತ್ನಿಸಿತು ಎಂದು ಆಪಾದಿಸಲಾಗಿದ್ದು, ಅದು ಬೇರೆಲ್ಲೋ ಹುಟ್ಟಿರಬೇಕು ಎಂದೂ ಅದು ಆಗಾಗ ವಾದಿಸಿದೆ. ಚೀನಾದ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ವಿಚಾರದಲ್ಲಿ ಅಮೆರಿಕದತ್ತ ಬೊಟ್ಟು ಮಾಡಿದ್ದರು.

ಕೋವಿಡ್ ೧೯ ಉಗಮದ ಬಗ್ಗೆ ತನಿಖೆ ನಿರ್ಣಯಕ್ಕೆ ಬೆಂಬಲ ಕೊಟ್ಟ ರಾಷ್ಟ್ರಗಳು:
ಐರೋಪ್ಯ ಒಕ್ಕೂಟ ಮತ್ತು ಅದರ ಸದಸ್ಯ ರಾಷ್ಟ್ರಗಳು, ಆಫ್ರಿಕ ಸಮೂಹ ಮತ್ತು ಅದರ ಸದಸ್ಯ ರಾಷ್ಟ್ರಗಳು, ಅಲ್ಬೇನಿಯಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಬೆಲಾರಸ್, ಭೂತಾನ್, ಬ್ರೆಜಿಲ್, ಕೆನಡ, ಚಿಲಿ, ಕೊಲಂಬಿಯಾ, ಜಿಬೌಟಿ, ಡೊಮಿನಿಕನ್ ರಿಪಬ್ಲಿಕ್, ಈಕ್ವೆಡಾರ್, ಎಲ್ ಸಾಲ್ವಡಾರ್, ಗ್ವಾಟೆಮಾಲಾ, ಗಯಾನಾ, ಐಸ್ಲ್ಯಾಂಡ್ , ಭಾರತ, ಇಂಡೋನೇಷ್ಯಾ, ಜಪಾನ್, ಜೋರ್ಡಾನ್, ಕಜಕಿಸ್ತಾನ್, ಮಲೇಷ್ಯಾ, ಮಾಲ್ಡೀವ್ಸ್, ಮೆಕ್ಸಿಕೊ, ಮೊನಾಕೊ, ಮಾಂಟೆನೆಗ್ರೊ, ನ್ಯೂಜಿಲೆಂಡ್, ಉತ್ತರ ಮ್ಯಾಸಿಡೋನಿಯಾ, ನಾರ್ವೆ, ಪರಾಗ್ವೆ, ಪೆರು, ಕತಾರ್, ಕೊರಿಯಾ ಗಣರಾಜ್ಯ, ಮೊಲ್ಡೊವಾ ಗಣರಾಜ್ಯ, ರಷ್ಯಾದ ಒಕ್ಕೂಟ, ಸ್ಯಾನ್ ಮರಿನೋ, ಸೌದಿ ಅರೇಬಿಯಾ, ಟುನೀಶಿಯಾ, ಟರ್ಕಿ, ಉಕ್ರೇನ್ ಮತ್ತು ಯುನೈಟೆಡ್ ಕಿಂಗ್‌ಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್.

ಚೀನಾವನ್ನು ಗುರಿಯಾಗಿಸುವ ನಿರ್ಣಯಕ್ಕೆ ಬೆಂಬಲವನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಸ್ಟ್ರೇಲಿಯಾ, ತನಿಖೆಗೆ ಹೆಚ್ಚುತ್ತಿರುವ ಬೆಂಬಲವನ್ನು ಸ್ವಾಗತಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ’ನಿರ್ಣಯವು ನಾವು ಪ್ರಾರಂಭಿಸಿದ ಸಂಭಾಷಣೆಯ ಪ್ರಮುಖ ಭಾಗವಾಗಿದೆ" ಎಂದು ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಮಾರಿಸ್ ಪೇನ್ ಹೇಳಿದ್ದಾರೆ.

ಪಾತ್ರಕ್ಕಾಗಿ ಆಸ್ಟ್ರೇಲಿಯಾವು ಚೀನಾದ ಕೆಂಗಣ್ಣಿಗೂ ಗುರಿಯಾಗಿದೆ. ಚೀನಾದ ಅಧಿಕಾರಿಗಳು ಬಾರ್ಲಿ ಆಮದಿಗೆ ಭಾರಿ ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಮತ್ತು ಈಗಾಗಲೇ ಆಸ್ಟ್ರೇಲಿಯಾದ ನಾಲ್ಕು ಪೂರೈಕೆದಾರರಿಂದ ಗೋಮಾಂಸ ಆಮದನ್ನು ಸ್ಥಗಿತಗೊಳಿಸಿದ್ದಾರೆ.

ತನ್ನ ನಿರ್ಧಾರವು ಆಸ್ಟ್ರೇಲಿಯಾದ ಕೋವಿಡ್ ಮೂಲದ ವಿಚಾರಣೆಗೆ ಒತ್ತಾಯಿಸಿದ್ದಕ್ಕೆ ನೀಡಲಾಗಿರುವ ಪ್ರತಿಕ್ರಿಯೆ ಎಂಬುದನ್ನು ಚೀನಾ ನಿರಾಕರಿಸಿದೆ. "ಇದು ಅತ್ಯಂತ ಬೇಜವಾಬ್ದಾರಿಯುತ ಹೇಳಿಕೆ. ಇದರಿಂದ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿನ ಅಂತಾರಾಷ್ಟ್ರೀಯ ಸಹಕಾgಕ್ಕೆ ಅಡ್ಡಿಯಾಗಬಹುದು ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ.

ಆದಾಗ್ಯೂ, ಅಮೆರಿಕದ ಬೆಂಬಲದೊಂದಿಗೆ ಆಸ್ಟ್ರೇಲಿಯಾ ತನ್ನ ಮಾರ್ಗದಲ್ಲಿ ಪ್ರಯತ್ನಗಳನ್ನು ಮುಂದುವರೆಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ನವೀಕರಿಸಿದ ದಾಖಲೆಯು ನಿರ್ಣಯಕ್ಕೆ ಬೆಂಬಲ ಹೆಚ್ಚುತ್ತಿದೆ ಎಂದು ಅದು ಹೇಳಿದೆ.

ಸೌದಿ ಅರೇಬಿಯಾ, ಕತಾರ್ ಮತ್ತು ಪ್ರಸ್ತತ ೧೨೩ ಸದಸ್ಯರ ಇರುವ ೫೪ ರಾಷ್ಟ್ರಗಳ ಆಫ್ರಿಕಾ ಸಮೂಹ ಕೂಡಾ ನಿರ್ಣಯಕ್ಕೆ ಬೆಂಬಲ ನೀಡಿ ಸಹಿ ಹಾಕಿವೆ.

ಚೀನಾದ ಪಾತ್ರ ಮಾತ್ರವೇ ಅಲ್ಲ, ವಿಶ್ವ ಆರೋಗ್ಯ  ಸಂಸ್ಥೆಯ ನಾಯಕತ್ವವನ್ನು  ಕೂಡಾ ನಿರ್ದಿಷ್ಟವಾಗಿ, ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಪಾತ್ರವನ್ನು ಕೂಡಾ ಪರಿಶೀಲನೆಗೆ ಒಳಪಡಿಸಬೇಕು ಎಂದು ಕರಡು ನಿರ್ಣಯ ಹೇಳಿದೆ.

"ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯವಿಧಾನಗಳ ಪರಿಣಾಮಕಾರಿತ್ವದ ಮೌಲ್ಯಮಾಪನ ಸೇರಿದಂತೆ, ನಿಷ್ಪಕ್ಷಪಾತ, ಸ್ವತಂತ್ರ ಮತ್ತು ಸಮಗ್ರ ಮೌಲ್ಯಮಾಪನ" ವನ್ನು ಪ್ರಾರಂಭಿಸುವಂತೆ ಕರಡು ನಿರ್ಣಯವು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರನ್ನು  ಆಗ್ರಹಿಸಿದೆ,

ತನಿಖೆಗೆ  ಕಾಲ ಪಕ್ವವಲ್ಲ: ಚೀನಾ ಪ್ರತಿಪಾದನೆ
ಬೀಜಿಂಗ್: ಕೇಂದ್ರ ಚೀನೀ ನಗರ ವುಹಾನ್‌ನಲ್ಲಿ ಕಳೆದ ವರ್ಷ ಮೊತ್ತ ಮೊದಲಿಗೆ ಕಂಡು ಬಂದ ಕೋವಿಡ್-೧೯ ಸಾಂಕ್ರಾಮಿಕ ಬಗ್ಗೆ ಅಂತಾರಾಷ್ಟ್ರೀಯ ತನಿಖೆ ನಡೆಸುವಂತೆ ಭಾರತ ಸಹಿತವಾಗಿ ೧೦೦ಕ್ಕೂ ಹೆಚ್ಚು ರಾಷ್ಟ್ರಗಳು ಕರಡು ನಿರ್ಣಯದ ಮೂಲಕ ಒತ್ತಾಯಿಸಿದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಮಾವೇಶಕ್ಕೆ ಮುನ್ನ ಪ್ರತಿಕ್ರಿಯಿಸಿದ ಚೀನಾಸಾಂಕ್ರಾಮಿಕ ಮೂಲದ ತನಿಖೆಗೆ ಕಾಲ ಪಕ್ವವಾಗಿಲ್ಲ ಎಂದು ಪ್ರತಿಪಾದಿಸಿತು.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝವೋ ಲಿಜಿಯನ್ ಅವರು ತಮ್ಮ ನಿಯಮಿತ ಪತ್ರಿಕಾಗೋಷ್ಠಿಯಲ್ಲಿಸಾಂಕ್ರಾಮಿಕ ಇನ್ನೂ ಮುಕ್ತಾಯಕಂಡಿಲ್ಲ ಎಂದು ವಿಶ್ವದ ಬಹುತೇಕ ರಾಷ್ಟ್ರಗಳು ನಂಬಿವೆ ಎಂದು ಹೇಳಿದರು.

ತನಿಖೆ ನಡೆಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ಒತ್ತಾಯಿಸುತ್ತಿರುವ ಅಮೆರಿಕ ಮತ್ತು ಆಸ್ಟ್ರೇಲಿಯಾ ವಿಷಯವನ್ನು ರಾಜಕೀಯಗೊಳಿಸುತ್ತಿವೆ ಮತ್ತು ಇದು ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕೆ ಅಡ್ಡಿಯಾಗಬಹುದು ಎಂದು ಹೇಳುವ ಮೂಲಕ ಲಿಜಿಯನ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಿಖೆಗಾಗಿ ಎದ್ದಿರುವ ಬೇಡಿಕೆಯನ್ನು ಮೂಲೆಗೆ ತಳ್ಳುವ ಯತ್ನ ಮಾಡಿದರು.

ಐರೋಪ್ಯ ಒಕ್ಕೂಟವು ಸಿದ್ಧ ಪಡಿಸಿರುವ ಕರಡು ನಿರ್ಣಯವನ್ನು ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಮಂಡಿಸುವ ನಿರೀಕ್ಷೆಯಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಮಾವೇಶ ಆರಂಭವಾಗುವುದಕ್ಕೆ ಕೆಲವು ತಾಸುಗಳ ಮುನ್ನ ಚೀನೀ ವಿದೇಶಾಂಗ ಸಚಿವಾಲಯದ ಹೇಳಿಕೆ ಹೊರಬಿದ್ದಿತು.

No comments:

Advertisement