My Blog List

Tuesday, May 19, 2020

ಕೊರೋನಾ ಉಗಮ: ಸ್ವತಂತ್ರ ತನಿಖೆಗೆ ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಗೆ

ಕೊರೋನಾ ಉಗಮ:  ಸ್ವತಂತ್ರ ತನಿಖೆಗೆ ವಿಶ್ವ ಆರೋಗ್ಯ ಸಂಸ್ಥೆ  ಒಪ್ಪಿಗೆ
ಜಿನೇವಾ/ ನವದೆಹಲಿ: ಹಲವು ರಾಷ್ರಗಳಿಂದ, ನಿರ್ದಿಷ್ಟವಾಗಿ ಅಮೆರಿಕದಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ ಸಂಬಂಧಿತ ಸ್ಪಂದನೆ ಮತ್ತು ಕಾರ್‍ಯವೈಖರಿ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ವಿಶ್ವ ಆರೋಗ್ಯ ಅಧಿವೇಶನವು  2020 ಮೇ 19ರ ಮಂಗಳವಾರ ಒಪ್ಪಿಗೆ ನೀಡಿತು.

ಕೋವಿಡ್-೧೯ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ ಕ್ರಮಗಳು ಮತ್ತು ಅವುಗಳ ಸಮಯ ಸೂಚಿಗಳ ಬಗ್ಗೆ ತನಿಖೆಯೂ ಸೇರಿದಂತೆ ಕೊರೋನಾ ಬಿಕ್ಕಟ್ಟಿನ ಕುರಿತ ಅಂತಾರಾಷ್ಟ್ರೀಯ ಸ್ಪಂದನೆಯ ಬಗ್ಗೆ ನಿಷ್ಪಕ್ಷಪಾತ, ಸ್ವತಂತ್ರ ಮತ್ತು ಸಮಗ್ರ ಮೌಲ್ಯಮಾಪನ ನಡೆಸಬೇಕು ಎಂದು ಮಹಾ ಅಧಿವೇಶನವು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೋಸ್ ಅಧನೊಮ್ ಅವರಿಗೆ ಸೂಚಿಸಿತು.

ಪ್ರಾಥಮಿಕವಾಗಿ ಐರೋಪ್ಯ ಒಕ್ಕೂಟವು ಸಿದ್ಧ ಪಡಿಸಿದ ನಿರ್ಣಯವನ್ನು ೧೩೦ಕ್ಕೂ ಹೆಚ್ಚು ರಾಷ್ಟ್ರಗಳು ಬೆಂಬಲಿಸಿವೆ.

ಕೋವಿಡ್ ೧೯ರ ಮೂಲದ ತನಿಖೆಯನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿದ್ದ ಚೀನೀ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಅವರು ಸೋಮವಾರ ಸಮಗ್ರ ತನಿಖೆಯನ್ನು ಚೀನಾ ಬೆಂಬಲಿಸುವುದು ಎಂದು ಒತ್ತಿ ಹೇಳಿದ್ದರು. ಆದರೆ ಲಕ್ಷಾಂತರ ಮಂದಿಯನ್ನು ಬಲಿತೆಗೆದುಕೊಂಡದ್ದಲ್ಲದೆ, ಲಕ್ಷಾಂತರ ಮಂದಿಯನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿರುವ ರೋಗದ ಬಗ್ಗೆ ತನಿಖೆ ನಡೆಯಬೇಕೆಂಬ ಜಾಗತಿಕ ಒತ್ತಡ ತೀವ್ರಗೊಂಡ ಬಳಿಕವಷ್ಟೇ ಕ್ಷಿ ಅವರಿಂದ ಮಾತು ಬಂದಿತ್ತು.

ರೋಗಕ್ಕೆ ಸಂಬಂಧಿಸಿz ಮಾಹಿತಿಯನ್ನು ಮುಚ್ಚಿಟ್ಟ ಆರೋಪಕ್ಕೆ ಗುರಿಯಾಗಿದ್ದ ಚೀನಾ ಹಲವಾರು ರಾಷ್ಟ್ರಗಳ ಒತ್ತಡದ ಪರಿಣಾಮವಾಗಿ ತನ್ನ ನಿಲುವನ್ನು ಬದಲಾಯಿಸಬೇಕಾಗಿ ಬಂದಿತ್ತು.

ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನೊಮ್ ವಿರೋಧಿ ಪ್ರಚಾರ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ತಾನು ಹೊರನಡೆಯಬೇಕಾದೀತು ಎಂಬ ಬೆದರಿಕೆಯ ಪತ್ರದ ಮೂಲಕ ರೋಗ ಮೂಲದ ತನಿಖೆಯ ಆಗ್ರಹಕ್ಕೆ ಹೆಚ್ಚಿನ ಬಲ ನೀಡಿತ್ತು.

ರೋಗಕ್ಕೆ ಸಂಬಂಧಿಸಿದ ನಿರ್ಣಾಯಕ ಮಾಹಿತಿಯನ್ನು ಚೀನಾ ಮುಚ್ಚಿಟ್ಟಿತ್ತು ಎಂಬುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ರ ಆಪಾದಿಸಿದ್ದರೂ, ವಿಶ್ವ ಆರೋಗ್ಯ ಅಧಿವೇಶನದಲ್ಲಿನ ಟ್ರಂಪ್ ಆಡಳಿತದ ಪ್ರತಿನಿಧಿ ತಮ್ಮ ಭಾಷಣದಲ್ಲಿ ಚೀನಾದ ಹೆಸರನ್ನು ಉಲ್ಲೇಖಿಸಲಿಲ್ಲ, ಬದಲಿಗೆಒಂದು ರಾಷ್ಟ್ರ ಎಂದಷ್ಟೇ ಹೇಳುವ ಮೂಲಕ ಬೀಜಿಂಗ್‌ನ್ನು ಉಲ್ಲೇಖಿಸಿದರು.

ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್‍ಯದರ್ಶಿ ಅಲೆಕ್ಸ್ ಅಝರ್ ಅವರು ವಿಶ್ವ ಆರೋಗ್ಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾವಿಶ್ವ ಆರೋಗ್ಯ ಸಂಸ್ಥೆಯ ಅತ್ಯಂತ ತುಟ್ಟಿದಾಯಕ ವೈಫಲ್ಯದ ಪರಿಣಾಮವಾಗಿ ಸಾಂಕ್ರಾಮಿಕವು ನಿಯಂತ್ರಣ ಮೀರಿ ಬೆಳೆಯಿತು ಎಂದು ಹೇಳಿದರು. ಇನ್ನೂ ಹೆಚ್ಚು ಪರಿಣಾಮಕಾರಿಯಾದ ವಿಶ್ವ ಮಟ್ಟದ ಸಂಸ್ಥೆಯ ಅಗತ್ಯವನ್ನು ಅವರು ಪ್ರತಿಪಾದಿಸಿದರು.

ಸಂಸ್ಥೆಯು ವಿಶ್ವಕ್ಕೆ ಬೇಕಾಗಿದ್ದ ಅಗತ್ಯ ಮಾಹಿತಿ ಪಡೆಯುವಲ್ಲಿ ವಿಫಲವಾಯಿತು ಮತ್ತು ವೈಫಲ್ಯವು ಹಲವು ಪ್ರಾಣಗಳನ್ನು ಬಲಿತೆಗೆದುಕೊಂಡಿತು ಎಂದು ಅಲೆಕ್ಸ್ ಜಾಗತಿಕ ಸಂಸ್ಥೆಯ ವಾರ್ಷಿಕ ಅಧಿವೇಶನಕ್ಕೆ ತಿಳಿಸಿದರು.

ಕೋವಿಡ್-೧೯ಕ್ಕೆ  ಲಸಿಕೆ ಅಥವಾ ಚಿಕತ್ಸೆ ಪಡೆಯಲು ಪೇಟೆಂಟ್‌ಗಳನ್ನು ನಿರ್ಲಕ್ಷಿಸುವ ಬಡ ರಾಷ್ಟ್ರಗಳ ಹಕ್ಕನ್ನು ಬೆಂಬಲಿಸುವುದಾಗಿ ಹೇಳಿದ ನಿರ್ಣಯದ ಭಾಗಕ್ಕೆ ಅಮೆರಿಕ ಆಕ್ಷೇಪ ವ್ಯಕ್ತ ಪಡಿಸಿತು.

ಏನಿದ್ದರೂ, ಸೋಂಕಿನ ಬಗ್ಗೆ ಜಾಗತಿಕ ಸ್ಪಂದನೆಯ ಪರಿಶೀಲನೆಯ ಕೊನೆಗೆ ಅಂತಿಮ ವರದಿಯಲ್ಲಿ ವ್ಯಕ್ತವಾಗುವ ಅಭಿಪ್ರಾಯವು ಸಮತೋಲನ ಸಾಧಿಸುವ ಮಾರ್ಗವನ್ನು ಸೂಚಿಸಬಹುದು ಎಂದು ಜಿನೇವಾದಲ್ಲಿನ ರಾಜತಾಂತ್ರಿಕರು ಅಭಿಪ್ರಾಯಪಟ್ಟರು. ಪರಿಶೀಲನೆಯು ಸದಸ್ಯ ರಾಷ್ಟ್ರಗಳ ಸಮಾಲೋಚನೆಯ ಜೊತೆಗೇ ನಡೆಯುವ ಕಾರಣ ಕಟು ಅಭಿಪ್ರಾಯಗಳನ್ನು ಚೀನಾ ಅಥವಾ ಅಮೆರಿಕ ಎರಡೂ ಒಪ್ಪಲಾರವು ಎಂದು ಅವರು ನುಡಿದರು.

No comments:

Advertisement