My Blog List

Saturday, June 27, 2020

ಗುರುಗ್ರಾಮ, ದೆಹಲಿಗೆ ಮಿಡತೆ ದಂಡಿನ ಲಗ್ಗೆ

ಗುರುಗ್ರಾಮ, ದೆಹಲಿಗೆ ಮಿಡತೆ ದಂಡಿನ ಲಗ್ಗೆ

ನವದೆಹಲಿ: ಬೆಳೆ ನಾಶ ಮಾಡುವ ಮಿಡತೆಗಳ ಭಾರೀ ದಂಡು ರಾಷ್ಟ್ರದ ರಾಜಧಾನಿಗೆ ಗಡಿಯಲ್ಲಿರುವ ಗುರುಗ್ರಾಮದಿಂದ 2020 ಜೂನ್ 27ರ ಶನಿವಾರ ಮಧ್ಯಾಹ್ನ ದೆಹಲಿಗೆ ಲಗ್ಗೆ ಹಾಕಿದ್ದು, ದಕ್ಷಿಣ ದೆಹಲಿಯ ಛತ್ತಾರಪುರದಲ್ಲಿ ಹೊಲಗಳು ಮತ್ತು ಮನೆಗಳ ಮೇಲೆ ದಾಳಿ ನಡೆಸಿವೆ. ಮಿಡತೆ ಓಡಿಸಲು ಜನರು ಜೋರಾಗಿ ಸಂಗೀತ ನುಡಿಸಿದ್ದಲ್ಲದೆ, ಪಾತ್ರೆಗಳನ್ನು ಬಡಿದು ಸದ್ದು ಮಾಡಿದರು.

ಮರುಭೂಮಿಯ ಮಿಡತೆ ದಂಡು ಶನಿವಾರ ಬೆಳಗ್ಗೆ ಗುರುಗ್ರಾಮಕ್ಕೆ ತಲುಪಿದ್ದು, ಅಲ್ಲಿನ ನಿವಾಸಿಗಳು ಭಾರೀ ಪ್ರಮಾಣದಲ್ಲಿ ಮಿಡತೆಗಳು ಮನೆಗಳ ಸುತ್ತ ಮುತ್ತ ಮತ್ತು ಆಕಾಶದಲ್ಲಿ ಮುತ್ತಿಕೊಂಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದರು.

ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಅವರು ರಾಷ್ಟ್ರೀಯ ರಾಜಧಾನಿಯ ದಕ್ಷಿಣ ಮತ್ತು ಪಶ್ಚಿಮ ಜಿಲ್ಲೆಗಳ ಆಡಳಿತಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಸರ್ಕಾರ ಕರೆದ ತುರ್ತು ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಯೊಬ್ಬರ ಪ್ರಕಾರ ದಕ್ಷಿಣ ದೆಹಲಿಯ ಅಸೋಲ ಭಟ್ಟಿ ಪ್ರದೇಶದಕ್ಕೆ ಕೂಡಾ ಮಿಡತೆ ದಂಡು ತಲುಪಿದೆ ಎಂಬ ವರ್ತಮಾನ ಸಚಿವರಿಗೆ ಬಂದಿದೆ.

ಎಲ್ಲ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ಗಳಿಗೆ ದೆಹಲಿಯಲ್ಲಿ ಸಂಭಾವ್ಯ ಮಿಡತೆ ದಾಳಿಯನ್ನು ನಿಭಾಯಿಸಲು ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿಸ್ತೃತ ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಕೃಷಿ ಇಲಾಖೆಗೆ ಸೂಚಿಸಲಾಗಿದೆ ಎಂದು ಅಧಿಕಾರಿ ನುಡಿದರು.

ಗುರುಗ್ರಾಮಕ್ಕೆ ಸಮೀಪದ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸುವಂತೆಯೂ ರೈ ಅವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಲಸೆ ಮಿಡತೆಗಳು ಸಧ್ಯಕ್ಕೆ ರಾಜಧಾನಿಯನ್ನು ಬಿಟ್ಟು ಹರಿಯಾಣದ ಪಲ್ವಾಲ್ ಮತ್ತು ಫರೀದಾಬಾದ್ ಕಡೆಗೆ ಚಲಿಸುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಹೇಳಿದರು.

ಸುಮಾರು ಎರಡು ಕಿಮೀಗಳಷ್ಟು ಅಗಲಕ್ಕೆ ಆಗಸದಲ್ಲಿ ವ್ಯಾಪಿಸಿಕೊಂಡು ಹಾರುತ್ತಿರುವ ಮಿಡತೆಗಳು ಪಶ್ಚಿಮದಿಂದ ಪೂರ್ವದತ್ತ ತೆರಳುತ್ತಿವೆ. ಅವು ಬೆಳಗ್ಗೆ ೧೧.೩೦ರ ವೇಳೆಗೆ ಗುರುಗ್ರಾಮವನ್ನು ಪ್ರವೇಶಿಸಿದವು ಎಂದು ಕೃಷಿ ಸಚಿವಾಲಯದ ಮಿಡತೆ ಎಚ್ಚರಿಕೆ ಸಂಸ್ಥೆಯ ಕೆಎಲ್ ಗುರ್ಜರ್ ಹೇಳಿದರು.

ಮರಗಳು, ಮನೆ ಛಾವಣಿಗಳೂ ಮತ್ತು ಗಿಡಗಳ ಮೇಲೆ ಎರಗುವ ಮಿಡತೆ ದಂಡನ್ನು ಕಂಡು ಜಾಗೃತರಾದ ಗುರುಗ್ರಾಮದ ನಿವಾಸಿಗಳು ಎತ್ತರದ ಸ್ಥಳಗಳಿಂದ ಮಿಡತೆ ದಂಡಿನ ಚಿತ್ರಗಳು ಹಾಗೂ ವಿಡಿಯೋಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದರು. ಗುರುಗ್ರಾಮದ ಬಹುತೇಕ ಕಡೆಗಳಲ್ಲಿ ನಿವಾಸಿಗಳು ಮಿಡತೆಗಳು ಮನೆಗಳ ಒಳಕ್ಕೆ ಪ್ರವೇಶಿಸದಂತೆ ತಡೆಯಲು ಕಿಟಕಿಗಳನ್ನು ಮುಚ್ಚಿದರು.

ಮಿಡತೆ ದಂಡಿನ ದಾಳಿ ನಿಭಾಯಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಕರೆದ ತುರ್ತು ಸಭೆಯಲ್ಲಿ ಅಭಿವೃದ್ಧಿ ಕಾರ್ಯದರ್ಶಿ, ವಿಭಾಗೀಯ ಆಯುಕ್ತರು, ಕೃಷಿ ನಿರ್ದೇಶಕರು ಮತ್ತು ಜಿಲ್ಲಾ ನ್ಯಾಯಾಧೀಶರು ಸಹ ಭಾಗವಹಿಸಿದ್ದರು ಎಂದು ಸುದ್ದಿ ಸಂಸ್ಥೆ ವರದಿ ತಿಳಿಸಿತು.

ಗುರುಗ್ರಾಮದಲ್ಲಿ ಜನರು ಮಿಡತೆಗಳ ಹಿಂಡುಗಳನ್ನು ಹಿಮ್ಮೆಟ್ಟಿಸಲು ಜೋರಾಗಿ ಸಂಗೀತ ನುಡಿಸಿದರು.

ಗುರುಗ್ರಾಮ ಜಿಲ್ಲಾಡಳಿತವು ಮಿಡತೆಗಳ ಹಿಂಡುಗಳಿಂದ ಆಕ್ರಮಣ ನಡೆಯುವ ಸಾಧ್ಯತೆಯ ಬಗ್ಗೆ ಶುಕ್ರವಾರ ಎಚ್ಚರಿಕೆ ನೀಡಿತ್ತು ಮತ್ತು ನಿಂತಿರುವ ಬೆಳೆಗಳು ಮತ್ತು ಹಸಿರು ತರಕಾರಿಗಳನ್ನು ತಿನ್ನುವ ಕೀಟಗಳನ್ನು ಹಿಮ್ಮೆಟ್ಟಿಸಲು ನಿವಾಸಿಗಳಿಗೆ ಜೋರಾಗಿ ಸಂಗೀತ ನುಡಿಸಲು ಮತ್ತು ಪಾತ್ರೆಗಳನ್ನು ಬಡಿಯುವಂತೆ ಸೂಚಿಸಿತ್ತು.

ಮೇ ತಿಂಗಳಲ್ಲಿ  ಭಾರತದ ಹಾನಿಕಾರಕ ಮಿಡತೆ ದಂಡಿನ ವಿರುದ್ಧ ಹೋರಾಟ ನಡೆಸಿತ್ತು. ಬೆಳೆಗಳನ್ನು ಹಾನಿಗೊಳಿಸುವ ಮಿಡತೆಗಳ ದಂಡು ಮೊತ್ತ ಮೊದಲಿಗೆ ರಾಜಸ್ಥಾನದಲ್ಲಿ ದಾಳಿ ನಡೆಸಿತ್ತು. ಬಳಿಕ ಪಂಜಾಬ್, ಗುಜರಾತ್, ಮಹಾರಾಷ್ಟ್ರ, ಮತ್ತು ಮಧ್ಯಪ್ರದೇಶಕ್ಕೆ ನುಗ್ಗಿದ್ದವು.

ತಜ್ಞರ ಪ್ರಕಾರ ಭಾರತದಲ್ಲಿ ನಾಲ್ಕು ಜಾತಿಯ ಮಿಡತೆಗಳು ಕಂಡು ಬರುತ್ತವೆ. ಮರುಭೂಮಿಯ ಮಿಡತೆ, ವಲಸೆ ಮಿಡತೆ, ಬಾಂಬೆ ಮಿಡತೆ ಮತು ಮರ ಮಿಡತೆ. ಮರುಭೂಮಿಯ ಮಿಡತೆ ಅತ್ಯಂತ ಹಾನಿಕಾರಕ ಮಿಡತೆ ಎಂದು ಪರಿಗಣಿತವಾಗಿದೆ.

ಮರುಭೂಮಿ ಮಿಡತೆ ಅತ್ಯಂತ ವೇಗವಾಗಿ ದುಪ್ಪಟ್ಟಾಗುತ್ತವೆ ಮತ್ತು ದಿನಕ್ಕೆ ೧೫೦ ಕಿಮೀ ಪಯಣಿಸುವ ಸಾಮರ್ಥ್ಯ ಹೊಂದಿವೆ. ಕೀಟವು ಕುಪ್ಪಳಿಸುವ ಸ್ವಭಾವದ್ದಾಗಿದ್ದು, ತನ್ನ ದೇಹದ ತೂಕಕ್ಕಿಂತ ಹೆಚ್ಚು ಆಹಾರ ಭಕ್ಷಿಸುತ್ತದೆ. ಒಂದು ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿನ ವ್ಯಾಪಿಸುವ ಮಿಡತೆ ದಂಡಿನಲ್ಲಿ ಅಂದಾಜು ಕೋಟಿ (೪೦ ಮಿಲಿಯನ್) ಮಿಡತೆಗಳಿರುತ್ತವೆ ಇವು ಸುಮಾರು ದಿನಕ್ಕೆ ೩೫,೦೦೦ ಜನರು ಸೇವಿಸುವಷ್ಟು ಆಹಾರ ಭಕ್ಷಿಸಬಲ್ಲವು.

ಸಣ್ಣ ಕೊಂಬಿನ ಮಿಡತೆ ತಮ್ಮ ಹಾದಿಯಲ್ಲಿರುವ ಎಲ್ಲವನ್ನೂ ತಿನ್ನುತ್ತದೆ ಮತ್ತು ಲಕ್ಷಾಂತರ ಜನರ ಜೀವನೋಪಾಯಕ್ಕೆ ಅಭೂತಪೂರ್ವ ಬೆದರಿಕೆಯನ್ನು ಒಡ್ಡುತ್ತದೆ.

ಹೆಚ್ಚುತ್ತಿರುವ ಮರುಭೂಮಿ ಮಿಡತೆ ಹಾನಿ ಹೆಚ್ಚಳಕ್ಕೆ ಪರಿಸರ ಬದಲಾವಣೆಯೇ ಕಾರಣ ಎಂದು ತಜ್ಞರು ಹೇಳುತ್ತಾರೆ. ಮಿಡತೆಗಳ ಸಂತಾನೋತ್ಪತ್ತಿಯು ಮಣ್ಣಿನ ತೇವಾಂಶ ಮತ್ತು ಆಹಾರ ಲಭ್ಯತೆಗೆ ನೇರವಾಗಿ ಸಂಬಂಧಿಸಿದೆ ಎಂದು ಅವರು ಹೇಳುತ್ತಾರೆ.

No comments:

Advertisement