ಗ್ರಾಹಕರ ಸುಖ-ದುಃಖ

My Blog List

Wednesday, June 17, 2020

ಪಾಕಿಸ್ತಾನದಲ್ಲಿ ಭಾರತದ ರಾಜತಾಂತ್ರಿಕ ಸಿಬ್ಬಂದಿ ಸಂಖ್ಯೆ ಕಡಿತ?

ಪಾಕಿಸ್ತಾನದಲ್ಲಿ ಭಾರತದ ರಾಜತಾಂತ್ರಿಕ ಸಿಬ್ಬಂದಿ ಸಂಖ್ಯೆ ಕಡಿತ?

ನವದೆಹಲಿ: ಇಸ್ಲಾಮಾಬಾದಿನಲ್ಲಿ ಸೋಮವಾರ ಹೊರ ಹೊರಟಿದ್ದ ಭಾರತೀಯ ಹೈಕಮೀಷನ್ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಅಪಹರಿಸಿ ಹಿಂಸಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿನ ತನ್ನ ರಾಜತಾಂತ್ರಿಕ ಸಿಬ್ಬಂದಿ ಹಾಜರಾತಿಯನ್ನು ಗಣನೀಯವಾಗಿ ತಗ್ಗಿಸುವ ಬಗ್ಗೆ ಭಾರತ ಚಿಂತಿಸಬಹುದು ಎಂದು ನಂಬಲರ್ಹ ಮೂಲಗಳು 2020 ಜೂನ್ 16ರ ಮಂಗಳವಾರ ತಿಳಿಸಿದವು.

ಇಸ್ಲಾಮಾಬಾದಿನ ಪೆಟ್ರೋಲ್ ಸ್ಟೇಷನ್ ಒಂದರಿಂದ ಭಾರತೀಯ ಹೈಕಮೀಷನ್ ಸಿಬ್ಬಂದಿಯನ್ನು ೧೫ ಶಸ್ತ್ರಸಜ್ಜಿತ ವ್ಯಕ್ತಿಗಳು ಅಪಹರಿಸಿದ್ದರು. ಭಾರತೀಯ ಹೈಕಮೀಷನ್ ಕಚೇರಿಗೆ ಅತ್ಯಂತ ಹತ್ತಿರದಲ್ಲೇ ಇದ್ದ ಸ್ಥಳದಿಂದ ಅಪಹರಿಸಿದ ಬಳಿಕ ಸಿಬ್ಬಂದಿಗೆ ಹಲವಾರು ತಾಸುಗಳ ಕಾಲ ಚಿತ್ರ ಹಿಂಸೆ ನೀಡಿದ್ದಲ್ಲದೆ ಬಿಡುಗಡೆ ಮಾಡುವುದಕ್ಕೆ ಮುನ್ನ ಅವರ ವಿರುದ್ಧ ರಸ್ತೆ ಅಪಘಾತ ಎಸಗಿದ ಆರೋಪ ಹೊರಿಸಲಾಗಿತ್ತು. ಅವರ ಕತ್ತು, ಮುಖ, ಪೃಷ್ಠ ಮತ್ತ ಬೆನ್ನಿನಲ್ಲಿ ತೀವ್ರವಾದ ಗಾಯಗಳಿದ್ದವು.

ತನ್ನ ಸಿಬ್ಬಂದಿಯ ಅಪಹರಣ ಮತ್ತು ಚಿತ್ರಹಿಂಸೆಗೆ ಭಾರತ ಇನ್ನೂ ಯಾವುದೇ ಔಪಚಾರಿಕೆ ಪ್ರತಿಕ್ರಿಯೆ ನೀಡಿಲ್ಲ.

ತಮ್ಮ ದೈನಂದಿನ ಪತ್ರಿಕಾಗೋಷ್ಠಿಯಲಿ ಭಾರತೀಯ ಹೈಕಮೀಷನ್ ಅಧಿಕಾರಿಗಳುಅಪಹೃತ ಸಿಬ್ಬಂದಿ ತಮಗೆ ನೀಡಲಾದ ಚಿತ್ರ ಹಿಂಸೆಯ ಬಗ್ಗೆ ವಿಸ್ತೃತವಾಗಿ ತಿಳಿಸಿದ್ದು, ಬಲವಂತವಾಗಿ ತಮ್ಮಿಂದ ತಪ್ಪೊಪ್ಪಿಗೆ ಪಡೆದು ಅದನ್ನು ವಿಡಿಯೋದಲ್ಲಿ ದಾಖಲಿಸಲಾಗಿದೆ ಮತ್ತು ಬೆದರಿಕೆಗಳನ್ನು ಹಾಕಲಾಗಿದೆ ಎಂದು ತಿಳಿಸಿದ್ದಾರೆಎಂದು ಹೇಳಿದರು.

ಪಾಕಿಸ್ತಾನದ ಐಎಸ್ಐಯವರು (ಇಂಟರ್ ಸರ್ವೀಸಸ್ ಇಂmಲಿಜೆನ್ಸ್) ಎಂಬುದಾಗಿ ನಂಬಲಾಗಿರುವ ಅಪಹರಣಕಾರರು ರಾಜತಾಂತ್ರಿಕ ಕಚೇರಿಯ ಇತರ ಅಧಿಕಾರಿಗಳಿಗೂ ಭವಿಷ್ಯದಲ್ಲಿ ಇದೇ ಗತಿ ಪ್ರಾಪ್ತವಾಗಲಿದೆ ಎಂದೂ ಅಪಹೃತ ಸಿಬ್ಬಂದಿಯ ಬಳಿ ಪದೇ ಪದೇ ಹೇಳಿದ್ದರು ಎಂದು ಸರ್ಕಾರಿ ಮೂಲವೊಂದು ತಿಳಿಸಿದೆ.

ಭಾರತೀಯ ರಾಜತಾಂತ್ರಿಕರ ಸುರಕ್ಷತೆ ಬಗ್ಗೆ ವಿಯೆನ್ನಾ ಸಮಾವೇಶದ ಅಡಿ ನೀಡಲಾದ ತನ್ನ ಬದ್ಧತೆಯನ್ನು ಈಡೇರಿಸಲು ಪಾಕಿಸ್ತಾನ ಸರ್ಕಾರಕ್ಕೆ ಸಾದ್ಯವಾಗದೇ ಇದ್ದಲ್ಲಿ, ಭಾರತೀಯ ರಾಜತಾಂತ್ರಿಕರಿಗೆ ತಮ್ಮ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ.ಇಂತಹ ಸಂದರ್ಭಗಳಲ್ಲಿ ತೀರಾ ಅಗತ್ಯ ಸಿಬ್ಬಂದಿಯನ್ನು ಮಾತ್ರ ಇರಿಸಿ ಉಳಿದವರನ್ನು ಹಿಂದಕ್ಕೆ ಕರೆಸಿಕೊಂಡು ಸಿಬ್ಬಂದಿ ಸಂಖ್ಯೆಯನ್ನು ಇಳಿಸುವ ಬಗ್ಗೆ ಪರಿಶೀಲಿಸುವುದು ಸಹಜವಾಗುತ್ತದೆ ಎಂದು ಸರ್ಕಾರಿ ಮೂಲವೊಂದು ಹೇಳಿದೆ.

ಅಲ್ಲದೆ, ತಮ್ಮನ್ನು ಬಂಧಿಸಬಹುದು ಎಂಬ ಹೆದರಿಕೆಯಿಂದ ಭಾರತೀಯ ಹೈಕಮೀಷನ್ ಅಧಿಕಾರಿಗಳು ಕಚೇರಿಯಿಂದ ಹೊರಬರುವ ಸಾಧ್ಯತೆಯೇ ಕಡಿಮೆ ಎಂಬುದಾಗಿ ದೆಹಲಿಯಲ್ಲಿ ಪಾಕಿಸ್ತಾನದ ಬಗ್ಗೆ ನಿಗಾ ಇಟ್ಟಿರುವ ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.

ಇದಕ್ಕೆ ಬದಲಾಗಿ ಭಾರತದಲ್ಲಿನ ಪಾಕಿಸ್ತಾನಿ ರಾಜತಾಂತ್ರಿಕ ಸಿಬ್ಬಂದಿ ಭಾರತದಲ್ಲಿ ಮುಕ್ತವಾಗಿ ಅಡ್ಡಾಡುತ್ತಿದ್ದರಷ್ಟೇ ಅಲ್ಲ, ನಿರ್ದಿಷ್ಟ ಮಾಹಿತಿಗಾಗಿ ಜನರ ಮೇಲೂ ಗೂಢಚರ್ಯೆ ನಡೆಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಗೂಢಚರ್ಯೆ ಅಪರಾಧಕ್ಕಾಗಿಯೇ ಇಬ್ಬರು ಪಾಕಿಸ್ತಾನಿ ರಾಜತಾಂತಿಕರನ್ನು ಮೇ ೩೧ರಂದು ಭಾರತದಿಂದ ಉಚ್ಚಾಟಿಸಲಾಗಿತ್ತು.

ಪರಸ್ಪರರ ವರ್ತನೆಗಳನ್ನು ಆಧರಿಸಿಯೇ ರಾಜತಾಂತ್ರಿಕ ಕಚೇರಿಗಳಲ್ಲಿನ ಸಿಬ್ಬಂದಿ ಬಲವನ್ನು ನಿರ್ಧರಿಸಲಾಗುವುದರಿಂದ ಪಾಕಿಸ್ತಾನ ಕೂಡಾ ನವದೆಹಲಿಯಲ್ಲಿನ ತನ್ನ ರಾಜತಾಂತ್ರಿಕ ಸಿಬ್ಬಂದಿ ಸಂಖ್ಯೆಯನ್ನು ಕುಗ್ಗಿಸಬಹುದು ಎಂದು ಮೂಲಗಳು ಹೇಳಿವೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿ, ರಾಜ್ಯವನ್ನು ಕೇಂದ್ರಾಡಳಿತಕ್ಕೆ ಒಳಪಟ್ಟ ಎರಡು ರಾಜ್ಯಗಳನ್ನಾಗಿ ವಿಂಗಡಿಸಿದ್ದನ್ನು ಅನುಸರಿಸಿ ಪಾಕಿಸ್ತಾನವು ಕಳೆದ ಆಗಸ್ಟ್ ತಿಂಗಳಲ್ಲಿ ಭಾರತದ ಜೊತೆಗಿನ ರಾಜತಾಂತ್ರಿಕ ಬಾಂಧವ್ಯವನ್ನು ಕುಗ್ಗಿಸಿತ್ತು. ಬಳಿಕ ಉಭಯ ದೇಶಗಳೂ ಹೈಕಮೀಷನರ್ ಬದಲಿಗೆ ಚಾರ್ಜ್ ಡಿಅಫೇರ್ಸ್ ನೇಮಕ ಮಾಡಿದ್ದವು.

ಚಾಲಕರಾಗಿರುವ ಭಾರತದ ಇಬ್ಬರು ಸಿಬ್ಬಂದಿಯನ್ನು ಪಾಕ್ ಅಧಿಕಾರಿಗಳು ಐಎಸ್ ಕಸ್ಟಡಿಯಲ್ಲಿದ್ದಾಗ ಪ್ರಶ್ನಿಸಿರುವ ರೀತಿಯು ಇಂತಹ ಘಟನೆಗಳು ಪುನರಾವರ್ತನೆಯಾಗಬಹುದು ಎಂಬ ಸುಳಿವನ್ನು ನೀಡಿದೆ. ಪಾಕ್ ಅಧಿಕಾರಿಗಳು ಹೈಕಮೀಷನ್ನಿನ ಎಲ್ಲ ಅಧಿಕಾರಿಗಳ ನಿರ್ದಿಷ್ಟ ಪಾತ್ರಗಳ ಬಗ್ಗೆ ವಿಚಾರಿದ್ದಲ್ಲದೆ ಹೈಕಮೀಷನ್ ಸಭೆಗಳಿಗೆ ಕಾರುಗಳಲ್ಲಿ ಅಡಗಿಸಿ ಇಟ್ಟುಕೊಂಡು ತಾವು ಜನರನ್ನು ತರುತ್ತಿದ್ದುದಾಗಿ ತಪ್ಪೊಪ್ಪಿಗೆ ಹೇಳಿಕೆಯನ್ನು ಅವರಿಂದ ಪಡೆದಿದ್ದಾರೆ.

No comments:

Advertisement