My Blog List

Thursday, July 23, 2020

ಸುಪ್ರಿಂಕೋರ್ಟಿನಲ್ಲಿ ಪೈಲಟ್ ಗೆ ಮಿನಿ ವಿಜಯ

ಸುಪ್ರಿಂಕೋರ್ಟಿನಲ್ಲಿ ಪೈಲಟ್ ಗೆ ಮಿನಿ ವಿಜಯ

ಅನರ್ಹತೆ ನಿರ್ಧಾರ: ರಾಜಸ್ಥಾನ ಹೈಕೋರ್ಟ್ ತೀರ್ಪಿಗೆ ಅನುಮತಿ

ನವದೆಹಲಿ: ವಿಷಯಕ್ಕೆ ಸಂಬಂಧಿಸಿದಂತೆ ತಾನು ನಿರ್ಧಾರ ಕೈಗೊಳ್ಳುವವರೆಗೆ ಬಂಡಾಯ ನಾಯಕ ಸಚಿನ್ ಪೈಲಟ್ ಮತ್ತು ಇತರ ೧೮ ಮಂದಿ ಬಂಡಾಯ ಕಾಂಗ್ರೆಸ್ ಶಾಸಕರ ಅನರ್ಹತೆ ಬಗ್ಗೆ ರಾಜಸ್ಥಾನ ವಿಧಾನಸಭಾ ಅಧ್ಯಕ್ಷ ಸಿಪಿ ಜೋಶಿ ಅವರು ನಿರ್ಧರಿಸಲು ಸಾಧ್ಯವಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ 2020 ಜುಲೈ 23ರ ಗುರುವಾರ ಮಧ್ಯಂತರ ಆದೇಶ ನೀಡಿತು.

ಇದರೊಂದಿಗೆ ಸಚಿನ್ ಪೈಲಟ್ ಮತ್ತು ಅವರ ಬಣಕ್ಕೆ ಸುಪ್ರೀಂಕೋರ್ಟಿನಲ್ಲಿ ಮಿನಿ ವಿಜಯ ಲಭಿಸಿದೆ. ವಿಧಾನಸಭಾಧ್ಯಕ್ಷರು ಆರಂಭಿಸಿದ ಅನರ್ಹತೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಭಿನ್ನಮತೀಯ ಶಾಸಕರು ಸಲ್ಲಿಸಿರುವ ಅರ್ಜಿಯ ಬಗೆಗಿನ ತೀರ್ಪನ್ನು ನೀಡಲು ರಾಜಸ್ಥಾನ ಹೈಕೋರ್ಟಿಗೆ ಅನುಮತಿ ನೀಡಿದ ಸುಪ್ರೀಂಕೋರ್ಟ್, ತೀರ್ಪು ಸುಪ್ರೀಂಕೋರ್ಟಿನಲ್ಲಿರುವ ಪ್ರಕರಣದ ವಿಚಾರಣೆಯ ಫಲಿತಾಂಶಕ್ಕೆ ಆಧೀನವಾಗಿರುತ್ತದೆ ಎಂದು ಹೇಳಿತು.

ಭಿನ್ನಮತೀಯ ಕಾಂಗ್ರೆಸ್ ಶಾಸಕರು ಅನರ್ಹತೆ ಸಭಾಧ್ಯಕ್ಷರು ನೀಡಿರುವ ಅನರ್ಹತೆ ನೋಟಿಸ್ಗಳನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ರಾಜಸ್ಥಾನ ಹೈಕೋರ್ಟ್ ಜುಲೈ ೨೪ರ ಶುಕ್ರವಾರ ತೀರ್ಪು ನೀಡಲಿದೆ.

ರಾಜಸ್ಥಾನ ವಿಧಾನಸಭಾ ಅಧ್ಯಕ್ಷ ಸಿಪಿ ಜೋಶಿ ಅವರು ಸಂವಿಧಾನದ ೧೦ನೇ ಶೆಡ್ಯೂಲಿನ ಅಡಿಯಲ್ಲ್ಲಿ ತಾನು ಆರಂಭಿಸಿದ ಅನರ್ಹತೆ ಪ್ರಕ್ರಿಯೆಯಲ್ಲಿ ಹೈಕೋರ್ಟ್ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಪ್ರತಿಪಾದಿಸಿ ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದರು. ಆದರೆ, ತಮ್ಮ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಪರಿಹಾರ ಪಡೆಯುವಲ್ಲಿ ಅವರು ವಿಫಲರಾದರು.

ನ್ಯಾಯಮೂರ್ತಿಗಳಾದ ಅರುಣ್ ಮಿಶ್ರ, ಬಿ.ಆರ್. ಗವಾಯಿ ಮತ್ತು ಕೃಷ್ಣ ಮುರಾರಿ ಅವರನ್ನು ಒಳಗೊಂಡ ಪೀಠವು ಜೋಶಿಯವರ ಮನವಿಯು ಹಲವಾರು ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದು ಬಗ್ಗೆ ಸುದೀರ್ಘ ವಿಚಾರಣೆ ಮಾಡಬೇಕಾಗುತ್ತದೆ ಎಂದು ಹೇಳಿತು.

ಆದೇಶ ನೀಡದಂತೆ ನಾವು ಹೈಕೋರ್ಟ್ನ್ನು ನಿರ್ಬಂಧಿಸುವುದಿಲ್ಲ, ಆದರೆ ಅದರ ತೀರ್ಪು ಸುಪ್ರೀಂಕೋರ್ಟಿನ ಮುಂದಿನ (ವಿಧಾನಸಭಾ ಅಧ್ಯಕ್ಷರು ಸಲ್ಲಿಸಿರುವ) ಅರ್ಜಿಯ ಫಲಿತಾಂಶಕ್ಕೆ ಆಧೀನವಾಗಿರುತ್ತದೆ ಎಂದು ಹೇಳಿದ ಪೀಠ, ಮುಂದಿನ ವಿಚಾರಣೆಗೆ ಜುಲೈ ೨೭ರ ದಿನಾಂಕವನ್ನು ನಿಗದಿ ಪಡಿಸಿತು.

ಪ್ರಜಾಪ್ರಭುತ್ವದಲ್ಲಿ ಭಿನ್ನಮತದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಹೇಳಿದ ಪೀಠ, ‘ ಪ್ರಕ್ರಿಯೆಗೆ (ಅನರ್ಹತೆ) ಅನುಮತಿ ನೀಡಲು ಸಾಧ್ಯವೇ ಎಂಬದನ್ನು ತಿಳಿಯಲು ನಾವು ಯತ್ನಿಸುತ್ತಿದ್ದೇವೆ ಎಂದು ಹೇಳಿತು. ಭಿನ್ನಮತೀಯ ಶಾಸಕರ ವಿರುದ್ಧ ಅನರ್ಹತೆ ಪ್ರಕ್ರಿಯೆ ಆರಂಭಿಸಲು ಕಾರಣಗಳೇನು ಎಂಬ ಬಗ್ಗೆ ಜೋಶಿ ಅವರನ್ನು ಪ್ರಶ್ನಿಸುತ್ತಾ ಪೀಠ ಅಭಿಪ್ರಾಯ ವ್ಯಕ್ತ ಪಡಿಸಿತು.

ಜೋಶಿ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಅನರ್ಹತೆ ಪ್ರಕ್ರಿಯೆ ಆರಂಭಿಸಲು ಕಾರಣಗಳನ್ನು ಪಟ್ಟಿ ಮಾಡಿದರು. ಶಾಸಕರು ಪಕ್ಷದ ಸಭೆಗಳಿಗೆ ಹಾಜರಾಗಲಿಲ್ಲ ಮತ್ತು ತಮ್ಮದೇ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಚು ಹೂಡಿದರು ಎಂದು ಅವರು ಹೇಳಿದರು.

ಇದು ಸರಳ ವಿಷಯವಲ್ಲ, ಶಾಸಕರು ಚುನಾಯಿತ ಪ್ರತಿನಿಧಿಗಳು ಎಂದು ಪೀಠ ಹೇಳಿತು. ಪೀಠದ ಪ್ರಶ್ನೆಗೆ ಉತ್ತರ ನೀಡಿದ ಸಿಬಲ್, ಶಾಸಕರು ಹರಿಯಾಣಕ್ಕೆ ಹೋಗಿದ್ದು, ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದಾರೆ ಮತ್ತು ಸದನದಲ್ಲಿ ಬಲಾಬಲ ಪರೀಕ್ಷೆ ನಡೆಯಬೇಕು ಎಂಬುದಾಗಿ ತಾವು ಬಯಸುವುದಾಗಿ ಟಿವಿಗಳಿಗೆ ತಿಳಿಸಿದ್ದಾರೆ ಎಂದು ವಿವರಿಸಿದರು.

ಅನರ್ಹತೆ ಪ್ರಕ್ರಿಯೆಗೆ ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬ ವಿಷಯದ ಬಗ್ಗೆ ನ್ಯಾಯಾಲಯವು ಹಂತದಲ್ಲಿ ಗಮನಿಸುವಂತಿಲ್ಲ. ನಮ್ಮ ಸಮಸ್ಯೆಯು ಸಂಪೂರ್ಣವಾಗಿ ಸಾಂವಿಧಾನಿಕವಾದುದಾಗಿದ್ದು, ಸಭಾಧ್ಯಕ್ಷರು ನಿರ್ಧಾರ ಕೈಗೊಳ್ಳುವವರೆಗೆ ಯಾವುದೇ ಆದೇಶ ಸಾಧ್ಯವಿಲ್ಲ ಎಂದು ಸಿಬಲ್ ವಾದಿಸಿದರು.

ಹೆಚ್ಚೆಂದರೆ ನಿರ್ದಿಷ್ಟ ಕಾಲಮಿತಿಯೊಳಗೆ ಅನರ್ಹತೆ ಬಗ್ಗೆ ನಿರ್ಧರಿಸುವಂತೆ ಸಭಾಧ್ಯಕ್ಷರಿಗೆ ಸೂಚಿಸಬಹುದು. ಆದರೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲಾಗದು ಮತ್ತು ಶಾಸಕರ ಅನರ್ಹತೆ ಅಥವಾ ಅಮಾನತು ವಿಚಾರದಲ್ಲಿ ಸಭಾಧ್ಯಕ್ಷರು ನಿರ್ಧಾರ ಕೈಗೊಳ್ಳುವ ಮುನ್ನ ಯಾವುದೇ ರಿಟ್ ಅರ್ಜಿಯು ಪುರಸ್ಕೃತಗೊಳ್ಳಲು ಸಾಧ್ಯವಿಲ್ಲ ಎಂದೂ ಸಿಬಲ್ ವಾದಿಸಿದರು.

ಸಭೆಯಲ್ಲಿ ಹಾಜರಾಗದೇ ಇದ್ದುದಕ್ಕಾಗಿ ಶಾಸಕರಿಗೆ ಅನರ್ಹತೆ ನೋಟಿಸ್ ನೀಡಬಹುದೇ? ಮತ್ತು ಇದನ್ನು ಪಕ್ಷ ವಿರೋಧಿ ನಿಲುವು ಎಂಬುದಾಗಿ ಪರಿಗಣಿಸಬಹುದೇ ಎಂದು ಪೀಠವು ಸಿಬಲ್ ಅವರನ್ನು ಪ್ರಶ್ನಿಸಿತು. ಸಭೆಗಳಿಗೆ ಹಾಜರಾಗುವಂತೆ ಎಲ್ಲ ಶಾಸಕರಿಗೆ ಮುಖ್ಯ ಸಚೇತಕರು ನೋಟಿಸ್ ನೀಡಿದ್ದರು ಎಂದು ಸಿಬಲ್ ಹೇಳಿದಾಗ ಪೀಠ ಪ್ರಶ್ನೆ ಕೇಳಿತು.

ವಜಾಗೊಳಿಸಲಾಗಿರುವ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಸೇರಿದಂತೆ ೧೯ ಮಂದಿ ಭಿನ್ನಮತೀಯ ಕಾಂಗ್ರೆಸ್ ಶಾಸಕರ ವಿರುದ್ಧ ಜುಲೈ ೨೪ರವರೆಗೆ ಅನರ್ಹತೆ ಪ್ರಕ್ರಿಯೆ ನಡೆಸದಂತೆ ತನ್ನನ್ನು ನಿರ್ಬಂಧಿಸಲು ರಾಜ್ಯ ಹೈಕೋರ್ಟಿಗೆ ಯಾವುದೇ ಅಧಿಕಾರ ವ್ಯಾಪ್ತಿ ಇಲ್ಲ ಎಂದು ಜೋಶಿ ಅವರು ಸುಪ್ರೀಂಕೋರ್ಟಿನ ಮುಂದೆ ಪ್ರತಿಪಾದಿಸಿದರು.

೧೯೯೨ರಲ್ಲಿ ಕಿಹೊಟೊ ಹೊಲ್ಲೋಹಾನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಪ್ರಮುಖ ತೀರ್ಪನ್ನು ಸಿಬಲ್ ಉಲ್ಲೇಖಿಸಿದರು. ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಸಂವಿಧಾನದ ೧೦ನೇ ಶೆಡ್ಯೂಲಿನ ಅಡಿಯಲ್ಲಿ ವಿಧಾನಸಭಾಧ್ಯಕ್ಷರು ಕೈಗೊಳ್ಳುವ ಅನರ್ಹತೆ ಪ್ರಕ್ರಿಯೆಯಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿತ್ತು.

ಸದನದ ಸದಸ್ಯನನ್ನು ಅಮಾನತುಗೊಳಿಸಲು ಅಥವಾ ಅನರ್ಹಗೊಳಿಸಲು  ಸಭಾಧ್ಯಕ್ಷರು ನಿರ್ಧಾರ ಕೈಗೊಂಡಾಗ ಮಾತ್ರ ನ್ಯಾಯಾಲಯಗಳು ಹಸ್ತಕ್ಷೇಪ ಮಾಡಬಹುದು ಎಂದು ಸಿಬಲ್ ಹೇಳಿದರು. ಸಭಾಧ್ಯಕ್ಷರು ಶಾಸನಕರ್ತನನ್ನು ಅಮಾನತುಗೊಳಿಸಿದರೆ ಅಥವಾ ಅನರ್ಹಗೊಳಿಸಿದರೆ ನ್ಯಾಯಾಲಯಗಳು ಹಸ್ತಕ್ಷೇಪ ಮಾಡಲು ಸಾಧ್ಯವೇ ಇಲ್ಲವೇ ಎಂಬುದಾಗಿ ಪೀಠ ಪ್ರಶ್ನಿಸಿದಾಗ ಸಿಬಲ್ ಉತ್ತರ ನೀಡಿದರು.

ಸಭಾಧ್ಯಕ್ಷರು ನೀಡಿದ ಅನರ್ಹತೆ ನೋಟಿಸ್ಗಳನ್ನು ಪ್ರಶ್ನಿಸಿ  ೧೯ ಮಂದಿ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬಳಿಕ ತಾನು ಜುಲೈ ೨೪ರಂದು ತೀರ್ಪು ನೀಡುವುದಾಗಿಯೂ , ಅಲ್ಲಿಯವರೆಗೆ ಅನರ್ಹತೆ ಪ್ರಕ್ರಿಯೆಗಳನ್ನು ಮುಂದೂಡುವಂತೆಯೂ ರಾಜಸ್ಥಾನ ಹೈಕೋರ್ಟ್ ಜುಲೈ ೨೧ರಂದು ನೀಡಿದ ಆದೇಶವನ್ನು ಜೋಶಿ ಅವರು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ.

No comments:

Advertisement