Monday, July 13, 2020

ಗೂಗಲ್ ನಿಂದ ಭಾರತದ ಡಿಜಿಟಲೀಕರಣಕ್ಕೆ ೧೦ ಶತಕೋಟಿ ಡಾಲರ್

ಗೂಗಲ್ ನಿಂದ ಭಾರತದ ಡಿಜಿಟಲೀಕರಣಕ್ಕೆ
೧೦ ಶತಕೋಟಿ ಡಾಲರ್

ನವದೆಹಲಿ: ಮುಂದಿನ ಐದರಿಂದ ಏಳು ವರ್ಷಗಳ ಅವಧಿಯಲ್ಲಿ ಭಾರತವನ್ನು ಸಂಪೂರ್ಣ ಡಿಜಿಟಲೀಕರಣ ಮಾಡುವ ಸಲುವಾಗಿ ಮೂಲ ಸವಲತ್ತು ಅಭಿವೃದ್ಧಿಗೆ ಸುಮಾರು ೧೦ ಶತಕೋಟಿ (ಬಿಲಿಯನ್) ಡಾಲರ್ ಬಂಡವಾಳವನ್ನು ಕಂಪೆನಿಯು ಹೂಡಿಕೆ ಮಾಡಲಿದೆ ಎಂದು ಗೂಗಲ್ ಮುಖ್ಯ ಕಾರ್ ನಿರ್ವಹಣಾ ಅಧಿಕಾರಿ (ಸಿಇಒ) ಸುಂದರ ಪಿಚೈ  2020 ಜುಲೈ 07ರ ಸೋಮವಾರ ಪ್ರಕಟಿಸಿದರು.

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಹಯೋಗದೊಂದಿಗೆ ಗೂಗಲ್ ಫಾರ್ ಇಂಡಿಯಾದ ಆರನೇ ಸಮಾವೇಶದಲ್ಲಿ ಪಿಚೈ ಮಾತನಾಡುತ್ತಿದ್ದರು.

ಗೂಗಲ್ ಪೇಯನ್ನು ಬಳಸಿಕೊಂಡು ಡಿಜಿಟಲ್ ಪಾವತಿಯ ಅವಕಾಶಗಳನ್ನು ವಿಸ್ತರಿಸುವ ಮತ್ತು ಕಡಿಮೆ ವೆಚ್ಚದ ಸ್ಮಾರ್ಟ್ ಫೋನುಗಳ ಅಭಿವೃದ್ಧಿಯಿಂದ ಹಿಡಿದು ಫೀಚರ್ ಫೋನ್ ಬಳಕೆದಾರರನ್ನು ಸ್ಮಾರ್ಟ್ ಫೋನ್ ಬಳಕೆದಾರರಾಗಿ ಬದಲಾಯಿಸುವ ನಿಟ್ಟಿನಲ್ಲಿ ತಾನು ಕೈಗೊಳ್ಳಲಿರುವ ಕ್ರಮಗಳನ್ನು ಕೂಡಾ ತಂತ್ರಜ್ಞಾನದ ದೈತ್ಯ ಸಂಸ್ಥೆಯು ಸಮಾವೇಶದಲ್ಲಿ ಪ್ರಕಟಿಸಿತು.

ಬೆಳಗ್ಗೆ ನಾನು ಸುಂದರ ಪಿಚೈ ಅವರ ಜೊತೆಗೆ ಅತ್ಯಂತ ಫಲಪ್ರದ ಸಂವಹನ ನಡೆಸಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದರು.

ವಿಸ್ತಾರವಾದ ವಿಷಯಗಳ ಬಗೆಗೆ, ನಿರ್ದಿಷ್ಟವಾಗಿ ತಂತ್ರಜ್ಞಾನದ ಶಕ್ತಿಯನ್ನು ಭಾರತದ ರೈತರು, ಯುವಕರು ಮತ್ತು ಉದ್ಯಮಿಗಳ ಬದುಕು ಬದಲಾವಣೆಗಾಗಿ ಬಳಸುವ ಬಗೆಗೆ ನಾವು ಮಾತನಾಡಿದೆವು ಎಂದು ಮೋದಿ ಬರೆದರು.

ಕೋವಿಡ್-೧೯ರ ಕಾಲದಲ್ಲಿ ಉದಯಿಸುತ್ತಿರುವ ನೂತನ ಕೆಲಸದ ಸಂಸ್ಕೃತಿಯ ಬಗ್ಗೆ ಕೂಡಾ ಉಭಯರು ಮಾತನಾಡಿದುದಾಗಿಯೂ ಪ್ರಧಾನಿ ನುಡಿದರು.

ಕ್ರೀಡೆಯಂತಹ ಕ್ಷೇತ್ರಗಳಿಗೆ ಜಾಗತಿಕ ಸಾಂಕ್ರಾಮಿಕವು ಎಸೆದಿರುವ ಸವಾಲುಗಳ ಬಗ್ಗೆ ನಾವು ಮಾತನಾಡಿದೆವು. ಡೇಟಾ ಭದ್ರತೆ ಮತ್ತು  ಸೈಬರ್ ಸುರಕ್ಷತೆಯ ಮಹತ್ವದ ಬಗೆಗೂ ನಾವು ಚರ್ಚಿಸಿದೆವು ಎಂದು ಪ್ರಧಾನಿ ಮೋದಿ ಟ್ವೀಟ್ ತಿಳಿಸಿತು.

ಶಿಕ್ಷಣ, ಕಲಿಕೆ, ಡಿಜಿಟಲ್ ಇಂಡಿಯಾ ಮತ್ತು ಡಿಜಿಟಲ್ ಪಾವತಿ ಮತ್ತು ಇನ್ನೂ ಹೆಚ್ಚಿನ ಹಲವಾರು ರಂಗಗಳಲ್ಲಿ ಗೂಗಲ್ ಮಾಡುತ್ತಿರುವ ಯತ್ನಗಳ ಬಗ್ಗೆ ತಿಳಿದು ನನಗೆ ಹರ್ಷವಾಯಿತು ಎಂದೂ ಪ್ರಧಾನಿ ಬರೆದರು.

ಡಿಜಿಟಲ್ ಇಂಡಿಯಾ ಕಾರ್ಯಕ್ರಮವು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಭಾರತೀಯ ತಂತ್ರಜ್ಞಾನ ಕ್ಷೇತ್ರವು ಇನ್ನೂ ಮುಂದಕ್ಕೆ ಸಾಗಿ, ಪ್ರಧಾನಿಯವರು ಕಳೆದ ತಿಂಗಳು ಆತ್ಮ ನಿರ್ಭರ ಆಪ್ ಸವಾಲು ಪ್ರಕಟಿಸಿದ ಬಳಿಕ ಮೇಕ್ ಇಂಡಿಯಾ ಕಡೆಗೆ ಹೆಚ್ಚಿನ ಗಮನ ಹರಿಸಿದೆ.

ಗೂಗಲ್ ಫಾರ್ ಇಂಡಿಯಾ ಡಿಜಿಟಲೈಸೇಷನ್ ನಿಧಿಯು ಮುಂದಿನ - ವರ್ಷಗಳ ಅವಧಿಯಲ್ಲಿ ಸಮಾನತೆ, ಪಾಲುದಾರಿಕೆ, ಕಾರ್ಯಾಚರಣೆ ಮತ್ತು ಮೂಲ ಸವಲತ್ತು ಅಭಿವೃದ್ಧಿಗಾಗಿ ೧೦ ಶತಕೋಟಿ (೧೦ ಬಿಲಿಯನ್) ಡಾಲರ್ ಹಣವನ್ನು ಹೂಡಿಕೆ ಮಾಡಲಿದೆ ಎಂದು ಪಿಚೈ ಸೋಮವಾರ ಹೇಳಿದರು.

ಭಾರತ ಮತ್ತು ಅದರ ಡಿಜಿಟಲ್ ಆರ್ಥಿಕತೆಯ ಭವಿಷ್ಯದ ಬಗೆಗೆ ನಮಗೆ ಇರುವ ವಿಶ್ವಾಸವನ್ನು ಇದು ಪ್ರತಿಫಲಿಸುತ್ತದೆ. ಪ್ರತಿಯೊಬ್ಬ ಭಾರತೀಯನಿಗೂ ಆತನ ಸ್ವಂತ ಭಾಷೆಯಲ್ಲಿ ಅಗ್ಗವಾಗಿ ಅಂತರ್ಜಾಲ (ಇಂಟರ್ ನೆಟ್) ಲಭಿಸುವಂತೆ ಮಾಡುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತೇವೆ ಎಂದು ಪಿಚೈ ಹೇಳಿದರು.

ಭಾರತಕ್ಕೆ ಪ್ರಸ್ತುತವಾದ, ಸಣ್ಣ ವ್ಯಾಪಾರವನ್ನು ಸಬಲೀಕರಿಸುವ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ ವಿಶೇಷ ಗಮನ ನೀಡಲಾಗುವುದು. ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳಿಗೆ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ  ಬಳಸುವ ಬಗೆಗೂ  ಗಮನ ಹರಿಸಲಾಗುವುದು ಎಂದು ಪಿಚೈ ನುಡಿದರು.

ಪ್ರಧಾನಿ ಮೋದಿ ಅವರ ಜೊತೆಗೆ ಶ್ರಮಿಸುವುದನ್ನು ನಾವು ಕಾಯುತ್ತಿದ್ದೇವೆ ಮತ್ತು ಸಂಶೋಧನೆಯ ಮುಂದಿನ ಅಲೆಗೆ ಭಾರತವೇ ನೇತೃತ್ವ ವಹಿಸಲಿದೆ ಎಂದು ನಾನು ಹಾರೈಸುವೆ ಎಂದು ಪಿಚೈ ಹೇಳಿದರು.

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ಸಚಿವ ರವಿಶಂಕರ ಪ್ರಸಾದ್ ಅವರು ಭಾರತದ ಡಿಜಿಟಲ್ ಪರಿರ್ತನೆಯು ವಿಶೇಷವಾಗಿ ಡಿಜಿಟಲ್ ಒಳಗೊಳ್ಳುವಿಕೆಗೆ ವಿಶೇಷ ಗಮನ ಹರಿಸಲಿದೆ ಎಂದು ನುಡಿದರು.

ಭಾರತದ ಆಪ್ ಆರ್ಥಿಕತೆಯು ಅತ್ಯಂತ ಪ್ರಬಲವಾಗಿ ಬೆಳೆಯುತ್ತಿದೆ. ಡೌನ್ಲೋಡ್ ಮಾಡುವುದಷ್ಟೇ ಅಲ್ಲ, ಆಪ್ಗಳಿಗೆ ಅಪ್ಲೋಡ್ ಮಾಡುವುದು ಕೂಡಾ ಅಷ್ಟೇ ಮುಖ್ಯ ಎಂದು ಪ್ರಸಾದ್ ಹೇಳಿದರು.

ಭಾರತದಾದ್ಯಂತ ಒಂದು ಲಕ್ಷ ಡಿಜಿಟಲ್ ಗ್ರಾಮಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತಿದ್ದೇವೆ. ಗ್ರಾಮಗಳ ಸಮೂಹವನ್ನು ಗೂಗಲ್ ಎತ್ತಿಕೊಂಡು ಅವುಗಳನ್ನು ಕೌಶಲ ಹಾಗೂ ಟೆಲಿ ಮೆಡಿಸಿನ್ ವಿತರಣೆಯಲ್ಲಿ ಮಾದರಿ ಗ್ರಾಮಗಳನ್ನಾಗಿ ಮಾಡಿದರೆ ನಾನು ಅದನ್ನು ಮೆಚ್ಚುತ್ತೇನೆ ಎಂದು ಸಚಿವರು ನುಡಿದರು.

No comments:

Advertisement