Sunday, November 1, 2020

ಹಿಜ್ಬುಲ್ ಮುಖ್ಯಸ್ಥ ಡಾ.ಸೈಫುಲ್ಲಾ ಹತ್ಯೆ

 ಹಿಜ್ಬುಲ್ ಮುಖ್ಯಸ್ಥ ಡಾ.ಸೈಫುಲ್ಲಾ ಹತ್ಯೆ

ಶ್ರೀನಗರ: ಮಹತ್ವದ ಬೆಳವಣಿಗೆಯೊಂದರಲ್ಲಿ ಕುಖ್ಯಾತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯ ಕಮಾಂಡರನನ್ನು ಭದ್ರತಾ ಪಡೆಗಳು ಗುಂಡಿನ ಘರ್ಷಣೆಯಲ್ಲಿ  2020 ನವೆಂಬರ್ 01ರ ಭಾನುವಾರ ಕೊಂದು ಹಾಕಿದವು.

ಶ್ರೀನಗರದ  ಹೊರವಲಯದ ರಂಗ್ರೆತ್ ಪ್ರದೇಶದಲ್ಲಿ  ನಡೆದ ಗುಂಡಿನ ಘರ್ಷಣೆಯಲ್ಲಿ ಹಿಜ್ಬುಲ್  ಕಮಾಂಡರ್ ಸಫಿವುಲ್ಲಾನನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರದ ಐಜಿ ವಿಜಯಕುಮಾರ್ ಸ್ಪಷ್ಟಪಡಿಸಿದರು.

ಸಫಿವುಲ್ಲಾ ಅವಿತುಕೊಂಡಿದ್ದ ಸ್ಥಳದ ಖಚಿತ ಮಾಹಿತಿ ಮೇರೆಗೆ ಸಿಆರ್ ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿ ದಾಳಿ ಮಾಡಿದ್ದಾರೆ ಎಂದು ವಿಜಯಕುಮಾರ್ ತಿಳಿಸಿದರು.

ಶರಣಾಗುವಂತೆ ಪೊಲೀಸರು ಮಾಡಿದ ಮನವಿಯನ್ನು ತಿರಸ್ಕರಿಸಿದ ಸಫಿವುಲ್ಲಾ, ತನ್ನ ಎಕೆ-೪೭ ಬಂದೂಕಿನಿಂದ ಭದ್ರತಾ ಪಡೆಗಳತ್ತ ಏಕಾಏಕಿ ಗುಂಡು ಹಾರಿಸತೊಡಗಿದ. ಇದಕ್ಕೆ ಪ್ರತ್ಯುತ್ತರ ನೀಡಿದ ಭದ್ರತಾ ಪಡೆರಗಳು ಘರ್ಷಣೆಯಲ್ಲಿ ಸಫಿವುಲ್ಲಾನನ್ನು ಹೊಡೆದುರುಳಿಸಿದವು ಎಂದು ವರದಿಗಳು ಹೇಳಿದವು.

ಕಳೆದ ಮೇ ತಿಂಗಳಲ್ಲಿ  ರಿಯಾಜ್ ನಾಯ್ಕೂ  ಹತ್ಯೆ ಬಳಿಕ ಸಫಿವುಲ್ಲಾ ಹಿಜ್ಬುಲ್ ಉಗ್ರ ಸಂಘಟನೆಯ ಮುಖ್ಯಸ್ಥನಾಗಿ ನೇಮಕಗೊಂಡಿದ್ದ. ಗುಂಡಿನ ಘರ್ಷಣೆಯಲ್ಲಿ ಈತನನ್ನು ಕೊಂದಿರುವುದು ಭದ್ರತಾ ಪಡೆಗಳಿಗೆ ದೊರೆತ ಭಾರೀ ಯಶಸ್ಸು ಎಂದು ಕಾಶ್ಮೀರ ಐಜಿ ವಿಜಯಕುಮಾರ್ ಸಂತಸ ವ್ಯಕ್ತಪಡಿಸಿದರು.

ಮೇ ತಿಂಗಳಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ನಾಯಕ ರಿಯಾಜ್ ನಾಯ್ಕೂ ಹತ್ಯೆಯ ನಂತರ ಸಂಘಟನೆಯ ಉಸ್ತುವಾರಿಯನ್ನು ಡಾ.ಸೈಫುಲ್ಲಾ ಹೊತ್ತಿದ್ದ. ಕಾಶ್ಮೀರ ಕಣಿವೆಯಲ್ಲಿ ನಡೆದ ಅನೇಕ ದಾಳಿಗಳಲ್ಲಿ ಸೈಫುಲ್ಲಾ ಪ್ರಧಾನ ವಹಿಸಿದ್ದು, ಹಲವು ಪ್ರಕರಣಗಳಲ್ಲಿ ಭದ್ರತಾ ಪಡೆಗಳಿಗೆ ಬೇಕಾಗಿದ್ದ ವ್ಯಕ್ತಿಯಾಗಿದ್ದ. ಈತನನ್ನು ಭದ್ರತಾ ಪಡೆಗಳು ಗುಂಡಿನ ಘರ್ಷಣೆಯಲ್ಲಿ ಹೊಡೆದುರುಳಿಸಿರುವುದು ಸಣ್ಣ ಸಾಧನೆಯೇನಲ್ಲ. ಪೊಲೀಸ್ ಮತ್ತು ಭದ್ರತಾ ಪಡೆಗಳ ಪಾಲಿಗೆ ಇದೊಂದು ದೊಡ್ಡ ಸಾಧನೆಎಂದೂ ಅವರು ತಿಳಿಸಿದ್ದಾದರು.

‘ದಕ್ಷಿಣ ಕಾಶ್ಮೀರದಿಂದ ಬಂದಿದ್ದ ಸೈಫುಲ್ಲಾ ಮನೆಯೊಂದರಲ್ಲಿ ಅಡಗಿದ್ದ ಮಾಹಿತಿ ದೊರೆತಿತ್ತು. ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಕೈಗೊಂಡಿದ್ದವು. ಆಗ ಹತ್ಯೆಗೀಡಾದ ಉಗ್ರ ಸೈಫುಲ್ಲಾ ಎಂದು ಶೇ ೯೫ರಷ್ಟು ನಮಗೆ ಖಚಿತವಾಗಿದೆ. ಆತನ ದೇಹವನ್ನು ಗುರುತು ಪತ್ತೆಗಾಗಿ ಪಡೆಯಲಾಗಿದೆಎಂದು ವಿಜಯಕುಮಾರ್ ಮಾಹಿತಿ ನೀಡಿದರು.

ಖಚಿತ ಮಾಹಿತಿ ಮೇರೆಗೆ ಶೋಧ: ಶ್ರೀನಗರದ ಹೊರವಲಯದ ಹಳೆಯ ವಾಯುನೆಲೆಯ ಸಮೀಪದ ರಂಗ್ರೆತ್ ಪ್ರದೇಶದಲ್ಲಿ ಉಗ್ರರು ಇರುವ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಕೈಗೊಂಡಿದ್ದವು.

ವೇಳೆ ಉಗ್ರರು ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಪಡೆಗಳೂ ಪ್ರತಿ ದಾಳಿ ನಡೆಸಿದವು. ಗುಂಡಿನ ಚಕಮಕಿಯಲ್ಲಿ ಡಾ.ಸೈಫುಲ್ಲಾ ಹತ್ಯೆಗೀಡಾದ. ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಘರ್ಷಣೆ ನಡೆದ ಸ್ಥಳದಲ್ಲಿ ಅಪಾರ ಪ್ರಮಾಣದ ಮದ್ದುಗುಂಡುಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಪಡಿಕೊಳ್ಳಲಾಗಿದೆ.

No comments:

Advertisement