Tuesday, December 8, 2020

ರೈತ ಶಕ್ತಿ ಪ್ರದರ್ಶನ: ಶಾಂತಿಯುತ ಭಾರತ ಬಂದ್

 ರೈತ ಶಕ್ತಿ ಪ್ರದರ್ಶನ: ಶಾಂತಿಯುತ ಭಾರತ ಬಂದ್

ನವದೆಹಲಿ: ಮೂರು ವಿವಾದಾತ್ಮಕ ಕೃಷಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳಭಾರತ ಬಂದ್ ಕರೆಯಮೇರೆಗೆ 2020 ಡಿಸೆಂಬರ್ 08ರ ಮಂಗಳವಾರ ರಾಷ್ಟ್ರಾದ್ಯಂತ ರಸ್ತೆತಡೆ, ರೈಲು ತಡೆ ಸೇರಿದಂತೆ ಭಾರೀ ಪ್ರಮಾಣದಲ್ಲಿ ಪ್ರತಿಭಟನೆಗಳು ಬಹುತೇಕ ಶಾಂತಿಯುತವಾಗಿ ನಡೆದವು. ಪ್ರತಿಭಟನಕಾರ ರೈತರ ಹೋರಾಟಕ್ಕೆ ಬೆಂಬಲ ನೀಡಿ ರಾಜಕೀಯ ಪಕ್ಷಗಳು ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತ ಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡವು.

೨೫ ರಾಜ್ಯಗಳಲ್ಲಿ ಸುಮಾರು ೧೦,೦೦೦ ಸ್ಥಳಗಳಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆ, ಹರತಾಳಗಳು ನಡೆದವು ಎಂದು  ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್ ಹೇಳಿದರು.

"ಮುಕ್ತ ಜೈಲು" ಆಗಿರುವ ಕಾರಣ ಪ್ರತಿಭಟನಾಕಾರರು ಬುರಾರಿ ಮೈದಾನಕ್ಕೆ ಹೋಗುವುದಿಲ್ಲ. ಪ್ರತಿಭಟನೆಗೆ ತಮಗೆ ರಾಮಲೀಲಾ ಮೈದಾನವನ್ನು ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.

ದೆಹಲಿ ಮತ್ತು ಹರಿಯಾಣದ ಜನರಿಗೆ ತೊಂದರೆ ಕೊಡಲು ಅವರು ಬಯಸುವುದಿಲ್ಲ. ಆದ್ದರಿಂದ ದೆಹಲಿ ಗಡಿಗಳಲ್ಲೇ ಪ್ರತಿಭಟನೆ ಮುಂದುವರೆಸುವುದಾಗಿ ಅವರು ಹೇಳಿದರು.

ಏತನ್ಮಧ್ಯೆ, ಪಂಜಾಬ್ ಮತ್ತು ಹರಿಯಾಣದ ಹೆಚ್ಚಿನ ರೈತರು ಸಿಂಗು ಗಡಿಯಲ್ಲಿ ಟ್ರ್ಯಾಕ್ಟರ್-ಟ್ರಾಲಿಗಳು ಮತ್ತು ಕಾರುಗಳನ್ನು ತಂದು ಹೆದ್ದಾರಿಗಳನ್ನು ಅಡ್ಡಗಟ್ಟಿದರು.

ಗಡಿಯಲ್ಲಿ ಪ್ರತಿಭಟಿಸಿದ ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ಅಕ್ಕಿ, ಗೋಧಿ ಹಿಟ್ಟು, ಮಸೂರ, ಎಣ್ಣೆ, ಹಾಲು, ಸಾಬೂನು ಮತ್ತು ಟೂತ್ ಪೇಸ್ಟ್ ಸೇರಿದಂತೆ ಅಗತ್ಯ ವಸ್ತುಗಳ ಸರಬರಾಜು ಸ್ಥಗಿತಗೊಂqವು. ಹೋರಾಟದ  ಸಮಯದಲ್ಲಿ, ಪ್ರತಿಭಟನಾಕಾರರು ಹಲವಾರು ಲಾಭರಹಿತ ಸಂಸ್ಥೆಗಳು ಆಯೋಜಿಸಿದ್ದ ಲಂಗಾರ್ಗಾಗಿ (ಊಟ) ಸಾಲುಗಳಲ್ಲಿ ಕುಳಿತರು. ನಂತರ, ಕೆಲವರು ತಮ್ಮ ಟ್ರಾಲಿಗಳಲ್ಲಿಯೇ ವಿಶ್ರಾಂತಿ ಪಡೆದರು.

ಇತರರು ತಮ್ಮ ನಾಯಕರು ವೇದಿಕೆಯಿಂದ ಮಾಡಿದ ಭಾಷಣಗಳನ್ನು ಆಲಿಸಿದರು.

ಭಾರತ್ ಬಂದ್ ಕರೆಯ ಮೇರೆಗೆ ದೇಶಾದ್ಯಂತ ರೈಲ್ವೆ ಹಳಿಗಳು ಮತ್ತು ಹೆದ್ದಾರಿಗಳನ್ನು ನಿರ್ಬಂಧಿಸಲಾಯಿತು. ೧೦ ದಿನಗಳ ನಂತರ ರಾಜಧಾನಿಯೂ ಸಂಪೂರ್ಣ ದಿಗ್ಬಂಧನಕ್ಕೆ ಒಳಗಾಯಿತು.

ನವೆಂಬರ್ ೨೬ ರಿಂದ ನವದೆಹಲಿಗೆ ಬಂದ ಸಹಸ್ರಾರು ರೈತರು ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ಸ್ಥಾಪಿಸಿ ಧರಣಿ ನಡೆಸಿದ್ದು, ಈದಿನವೂ ಅದು ಮುಂದುವರೆಯಿತು.

೨೦೧೯ ರಲ್ಲಿ ಪ್ರಚಂಡ ವಿಜಯದೊಂದಿಗೆ ಪುನರಾಯ್ಕೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಎದುರಾದ ದೊಡ್ಡ ಸವಾಲುಗಳಲ್ಲಿ ಒಂದಾಗಿರುವ ವಿವಾದಾತ್ಮಕ ಕಾನೂನುಗಳನ್ನು ರದ್ದುಪಡಿಸುವವರೆಗೂ ದೆಹಲಿ ಗಡಿಗಳಿಂದ ಚಲಿಸುವುದಿಲ್ಲ ಎಂದು ಪ್ರತಿಭಟನಕಾರ ರೈತರು ಪ್ರತಿಜ್ಞೆ ಮಾಡಿದ್ದಾರೆ.

ಅಧಿಕಾರಿಗಳು ದೆಹಲಿಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದ್ದಲ್ಲದೆ ಮತ್ತು ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆಯಾಗಿ ದೇಶದ ಇತರ ಭಾಗಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದರು.

ರೈಲ್ವೆ ಕಾರ್ಮಿಕರು, ಟ್ರಕ್ ಚಾಲಕರು, ಶಿಕ್ಷಕರು ಮತ್ತು ಇತರ ಒಕ್ಕೂಟಗಳು ಮುಷ್ಕರದಲ್ಲಿ ಪಾಲ್ಗೊಳ್ಳಲು ಕರೆ ನೀಡಿದ್ದವು. ಪೂರ್ವ ಮತ್ತು ಪಶ್ಚಿಮದ ಅನೇಕ ರಾಜ್ಯಗಳಲ್ಲಿ, ಪ್ರತಿಭಟನಾಕಾರರು ರೈಲ್ವೆ ಹಳಿಗಳು, ರಸ್ತೆಗಳು ಮತ್ತು ರೈಲುಗಳನ್ನು ತಡೆದರು.

ತಾವು ಅಧಿಕಾರದಲ್ಲಿ ಇದ್ದಾಗ ಕರೆ ನೀಡಿದ್ದ ಸುಧಾರಣಾ ಕ್ರಮಗಳನ್ನು ಈಗ ತಂದ ಹೊತ್ತಿನಲ್ಲಿ ವಿರೋಧಿಸುತ್ತಿರುವುದಕ್ಕಾಗಿ ಕೇಂದ್ರದ ಆಡಳಿತಾರೂಢ ಭಾರತೀಯ ಜನತಾ ಪಕ್ಷವು, ವಿರೋಧ ಪಕ್ಷUಳನ್ನು ತರಾಟೆಗೆ ತೆಗೆದುಕೊಂಡಿದೆ. ವಿರೋಧ ಪಕ್ಷಗಳು ಅವಕಾಶವಾದಿಗಳಾಗಿವೆ ಎಂದು ಬಿಜೆಪಿ ಆಪಾದಿಸಿದೆ.

ಪ್ರತಭಟನೆಯಲ್ಲಿ ವಿರೋಧ ಪಕ್ಷಗಳ ಶಾಮೀಲು ಮತ್ತು ವಿಪಕ್ಷಗಳ ವಿರುದ್ಧ ಬಿಜೆಪಿಯ ಆಪಾದನೆಗಳೊಂದಿಗೆ ರೈತರ ಚಳವಳಿ ಮಂಗಳವಾರ ರಾಜಕೀಯ ಆಯಾಮ ಪಡೆದುಕೊಂಡಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ರೈತರ ದಿಗ್ಬಂಧನ ಸ್ಥಳಕ್ಕೆ ಭೇಟಿ ನೀಡಿದ ನಂತರ ಕೇಂದ್ರ  ಸರ್ಕಾರದಿಂದ ನಿಯಂತ್ರಿಸಲ್ಪಡುವ ದೆಹಲಿ ಪೊಲೀಸರು ಸೋಮವಾರದಿಂದ ಕೇಜ್ರಿವಾಲ್ ಅವರನ್ನು "ಗೃಹಬಂಧನದಲ್ಲಿ ಇರಿಸಿದೆ ಎಂದು ಆಮ್ ಆದ್ಮಿ ಪಕ್ಷ ಆಪಾದಿಸಿತು. ಆದರೆ ದೆಹಲಿ ಪೊಲೀಸರು ಪ್ರತಿಪಾದನೆಯನ್ನು ನಿರಾಕರಿಸಿದರು.

ವಿವಾದ ಇತ್ಯರ್ಥಕ್ಕಾಗಿ ರೈತರು ಮತ್ತು ಕೇಂದ್ರ ಸಚಿವರ ನಡುವಣ ಐದು ಸುತ್ತಿನ ಮಾತುಕತೆಗಳು ವಿಫಲಗೊಂಡಿವೆ.

ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಸರ್ಕಾರಿ ಸಂಸ್ಥೆಗಳ ಬದಲಿಗೆ ಸೂಪರ್ ರ್ಮಾರ್ಕೆಟ್ ಸರಪಳಿಗಳು ಸೇರಿದಂತೆ ಮುಕ್ತ ಮಾರುಕಟ್ಟೆಯಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಕಾನೂನುಗಳು ಅನುಮತಿ ನೀಡುತ್ತವೆ. ಇದರಿಂದ  ರೈತರು ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವ ಅಧಿಕಾರ ಕಾರ್ಪೋರೇಟ್ ಕಂಪೆನಿಗಳ ಕೈಸೇರುತ್ತದೆ ಎಂದು ರೈತರು ಹಾಗೂ ವಿರೋಧ ಪಕ್ಷಗಳು ಆಪಾದಿಸಿವೆ.

ಸೋಮವಾರ ಆಗ್ರಾ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರುಅಭಿವೃದ್ಧಿಗೆ ಸುಧಾರಣೆಗಳ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.

"ಹಿಂದಿನ ಶತಮಾನದ ಕಾನೂನುಗಳೊಂದಿಗೆ ನಾವು ಮುಂದಿನ ಶತಮಾನವನ್ನು ನಿರ್ಮಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದರು.

ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಕುಸ್ತಿಪಟು ಕರ್ತಾರ್ ಸಿಂಗ್ ಸೇರಿದಂತೆ ಉನ್ನತ ಕ್ರೀಡಾಪಟುಗಳು ಕಾನೂನುಗಳನ್ನು ವಿರೋಧಿಸಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಹಿಂದಿರುಗಿಸುವುದಾಗಿ ಘೋಷಿಸಿದ್ದಾರೆ.

೧೯೮೦ ಮಾಸ್ಕೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಹಾಕಿ ಆಟಗಾರ್ತಿ ಗುರ್ಮೇಲ್ ಸಿಂಗ್ ಮತ್ತು ಮಾಜಿ ಮಹಿಳಾ ಹಾಕಿ ನಾಯಕ ರಾಜ್ಬೀರ್ ಕೌರ್ ಅವರು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಲು ಸೋಮವಾರ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ನಡೆಸಲು ಪ್ರಯತ್ನಿಸಿದ್ದರು. ಆದರೆ ಅವರನ್ನು ಪೊಲೀಸರು ತಡೆದರು.

 ಎಲ್ಲೆಲ್ಲಿ ಹೇಗಿತ್ತು ಪ್ರತಿಭಟನೆ?

ದೆಹಲಿ, ಪಂಜಾಬ್, ಪಶ್ಚಿಮ ಬಂಗಾಳ, ಅಸ್ಸಾಂ ಸೇರಿ ಉತ್ತರದ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಂಡಿತ್ತು.. ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳಲ್ಲಿಯೂ ಪ್ರತಿಭಟನೆ ನಡೆಯಿತು.

ಕರ್ನಾಟಕದ ಹೆಚ್ಚಿನ ಕಡೆಗಳಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ದೆಹಲಿಯ ಸಿಂಘು ಗಡಿಯಲ್ಲಿ ಭಾರಿ ಭದ್ರತೆ: ಕಳೆದ ೧೨ ದಿನಗಳಿಂದ ರೈತರ ಪ್ರತಿಭಟನೆಗೆ ಸಾಕ್ಷಿಯಾಗಿರುವ ದೆಹಲಿ-ಹರಿಯಾಣ ಸಿಂಘು ಗಡಿಯಲ್ಲಿ ಪ್ರತಿಭಟನೆಯ ಕಾವು ಜೋರಾಗಿತ್ತು. ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು..

ಪುಣೆ ಎಪಿಎಂಸಿ ಕಾರ್ಯಾಚರಣೆ: ಮಹಾರಾಷ್ಟ್ರದಲ್ಲಿ ಆಡಳಿತ ಪಕ್ಷ ಶಿವಸೇನಾ ಕೂಡಾ ಬಂದ್ಗೆ ಬೆಂಬಲ ಘೋಷಿಸಿತ್ತು.. ರಾಜ್ಯದ ಬಹುತೇಕ ಕಡೆಗಳಲ್ಲಿ ಎಪಿಎಂಸಿಗಳು ಬಂದ್ zವು. ಆದರೆ, ಪುಣೆಯಲ್ಲಿ ಎಪಿಎಂಸಿ ಮಾರುಕಟ್ಟೆ ಎಂದಿನಂತೆಯೇ ಕಾರ್ಯಾಚರಿಸಿತು..

 ನಾವು ರೈತರ ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದೇವೆ. ಆದರೆ, ಇತರ ರಾಜ್ಯಗಳಿಂದ ಬರುವ ಕೃಷಿ ಉತ್ಪನ್ನಗಳು ಹಾಳಾಗಬಾರದು ಎಂಬ ಉದ್ದೇಶದಿಂದ ಅವುಗಳನ್ನು ಸಂಗ್ರಹಿಸಿಡುವ ಸಲುವಾಗಿ ಮಾರುಕಟ್ಟೆ ತೆರೆದಿದ್ದೇವೆ ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ತಿಳಿಸಿದರು.

ಬಂದ್ ಹಿಂದೆ ರಾಜಕೀಯ ಉದ್ದೇಶವಿಲ್ಲ. ಇದು ರೈತರ ಕುರಿತಾದ ನಮ್ಮ ಸಂವೇದನೆಯಷ್ಟೆ. ದೆಹಲಿಯಲ್ಲಿ ರೈತರು ಯಾವುದೇ ರಾಜಕೀಯ ಪಕ್ಷದ ಬಾವುಟ ಹಿಡಿದು ಪ್ರತಿಭಟನೆ ನಡೆಸುತ್ತಿಲ್ಲ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಹೇಳಿದರು.

ಆಂಧ್ರದಲ್ಲಿ ಎಡಪಕ್ಷಗಳಿಂದ ಪ್ರತಿಭಟನೆ: ಆಂಧ್ರ ಪ್ರದೇಶದ ಪಾರ್ವತಿಪುರಂ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ಎಡಪಕ್ಷಗಳು ಪ್ರತಿಭಟನೆ ನಡೆಸಿದವು. ಎಡಪಕ್ಷಗಳ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕೃಷಿ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸಿದರು..

ಬಿಹಾರದಲ್ಲಿ ಬಿಗಿ ಬಂದೋಬಸ್ತ್: ಭಾರತ್ ಬಂದ್ ಗೆ ಬಿಹಾರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಲಕ್ನೋ  ಸೇರಿದಂತೆ ಪ್ರಮುಖ ನಗರಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.

ಭಾರತ್ ಬಂದ್ ಪ್ರಯುಕ್ತ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳಿಂದ ಪ್ರತಿಭಟನೆ ವ್ಯಕ್ತವಾಯಿತು.. ಕೋಲತದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಬೆಂಬಲಿಗರು ರೈಲು ಸಂಚಾರಕ್ಕೆ ಅಡ್ಡಿಪಡಿಸಿದರು. ಖಾಸಗಿ ವಾಹನಗಳ ಸಂಚಾರ ಸ್ಥಗಿತಗೊಂಡಿತು. ಸರ್ಕಾರಿ ವಾಹನಗಳು ಕಡಿಮೆ ಪ್ರಮಾಣದಲ್ಲಿ ಕಾರ್ಯಾಚರಿಸಿದವು..

ಎಸ್ಎಫ್ ಹಾಗೂ ಡಿವೈಎಫ್ವೈ ಕಾರ್ಯಕರ್ತರು ಕೋಲ್ಕತದಲ್ಲಿ ಲೇಕ್ಟೌನ್ ರಸ್ತೆ, ಕಾಲೇಜ್ ಸ್ಟ್ರೀಟ್, ಜಾದವ್ಪುರ ಹಾಗೂ ಶ್ಯಾಂಬಜಾರ್ ಪ್ರದೇಶಗಳಲ್ಲಿ ರಸ್ತೆ ತಡೆ ಮಾಡಿದರು.

ಪಶ್ಚಿಮ ಬಂಗಾಳದಲ್ಲಿ ಸಂಪೂರ್ಣ ಬಂದ್ ಆಚರಿಸುತ್ತಿದ್ದೇವೆ. ಇದೇ ತರ ದೇಶದ ಎಲ್ಲೆಡೆಯೂ ಇರಲಿದೆ ಎಂದು ಭಾವಿಸುತ್ತೇವೆ ಎಂದು ಸಿಪಿಐ(ಎಂ) ನಾಯಕ ಸುಜನ್ ಚಕ್ರವರ್ತಿ ಹೇಳಿದರು..

ಉತ್ತರ ಪ್ರದೇಶದಲ್ಲಿಯೂ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯದಾದ್ಯಂತ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.. ತೆಲಂಗಾಣದಲ್ಲಿ ಶಾಂತಿ ಕಾಪಾಡುವಂತೆ ಪ್ರತಿಭಟನಾಕಾರರಲ್ಲಿ ಪೊಲೀಸರು ಮನವಿ ಮಾಡಿದರು.

ಬಿಹಾರದಲ್ಲಿ ಆರ್ಜೆಡಿ ಪ್ರತಿಭಟನೆ: ಬಿಹಾರದ ದರ್ಭಾಂಗದಲ್ಲಿ ಆರ್ಜೆಡಿ ಕಾರ್ಯಕರ್ತರು ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು.

ಅಸ್ಸಾಂನಲ್ಲಿ ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ: ಅಸ್ಸಾಂನ ಗುವಾಹಟಿಯಲ್ಲಿ ಪ್ರತಿಭಟನೆಯ ಕಾವು ತೀವ್ರಗೊಂಡಿತ್ತು.. ಜನತಾ ಭವನದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದರು. ಜಾರ್ಖಂಡಿನಲ್ಲಿಯೂ ಪ್ರತಿಪಕ್ಷ ಕಾರ್ಯಕರ್ತರ ಪ್ರತಿಭಟನೆ ತೀವ್ರಗೊಂಡಿತು.

ಪಂಜಾಬಿನ ಅನೇಕ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು.

ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಜನಜೀವನ ಸಹಜವಾಗಿತ್ತು. ರೈತರ ಸಂಘಟನೆಗಳ ಸದಸ್ಯರು ಹಾಗೂ ಪ್ರತಿಪಕ್ಷಗಳ ಕಾರ್ಯಕರ್ತರ ಪ್ರತಿಭಟನೆಯೂ ಕಂಡುಬಂದಿತು. ಹಲವು ಜಿಲ್ಲೆಗಳಲ್ಲಿ ಪ್ರತಿಭಟನಾನಿರತರು ಕೇಂದ್ರ ಸರ್ಕಾರದ ವಿರುದ್ಧ, ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಘೋಷಣೆಗಳನ್ನು ಕೂಗಿ, ಪ್ರತಿಕೃತಿ ದಹನ ನಡೆಸಿದರು.

No comments:

Advertisement