Friday, January 1, 2021

ಚೀನಾ ಸಮುದ್ರದಲ್ಲಿ ಸಿಕ್ಕಿಬಿದ್ದಿರುವ ಭಾರತೀಯರ ರಕ್ಷಣೆಗೆ ಕ್ರಮ

 ಚೀನಾ ಸಮುದ್ರದಲ್ಲಿ  ಸಿಕ್ಕಿಬಿದ್ದಿರುವ ಭಾರತೀಯರ ರಕ್ಷಣೆಗೆ ಕ್ರಮ

ನವದೆಹಲಿ: ಚೀನಾದ ಜಲಪ್ರದೇಶದಲ್ಲಿ ಕೆಲವು ತಿಂಗಳುಗಳಿಂದ ಎರಡು ವ್ಯಾಪಾರಿ ಹಡಗುಗಳಲ್ಲಿನ ೩೯ ಮಂದಿ ಭಾರತೀಯ ನಾವಿಕರು ಸಿಕ್ಕಿ ಹಾಕಿಕೊಂಡಿದ್ದು, ಅವರನ್ನು ರಕ್ಷಿಸಿ ಸ್ವದೇಶಕ್ಕೆ ಕರೆತರುವ ಬಗ್ಗೆ ವಿವಿಧ ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಭಾರತ 2021ರ ಜನವರಿ 01ರ ಶುಕ್ರವಾರ ತಿಳಿಸಿತು.

ಸಮುದ್ರದಲ್ಲಿ ಅಥವಾ ಚೀನಾದ ಬಂದರಿನಲ್ಲಿ ಸಿಬ್ಬಂದಿ ಬದಲಾವಣೆ ಸೇರಿದಂತೆ ಹಲವಾರು ಆಯ್ಕೆಗಳನ್ನು ನೋಡಲಾಗುತ್ತಿದೆ ಎಂದು ಭಾರತ ಹೇಳಿತು.

ಭಾರತೀಯ ನಾವಿಕರು ಎಂ.ವಿ.ಜಗ್ ಆನಂದ್ ಮತ್ತು ಎಂ.ವಿ. ಅನಸ್ತಾಸಿಯಾದಲ್ಲಿದ್ದಾರೆ, ಅವರು ಆಸ್ಟ್ರೇಲಿಯಾದ ಕಲ್ಲಿದ್ದಲನ್ನು ಹೊತ್ತೊಯ್ದಿದ್ದಾರೆ. ಆದರೆ ಅವರ ಸರಕುಗಳನ್ನು ಇಳಿಸಲು ಚೀನಾದಲ್ಲಿ ಅನುಮತಿ ನೀಡಲಾಗಿಲ್ಲ. ಚೀನಾ-ಆಸ್ಟ್ರೇಲಿಯಾ ನಡುವಣ ವ್ಯಾಪಾರೀ ಬಿಕ್ಕಟ್ಟು ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ವಿಷಯವನ್ನು ಚೀನಾದ ವಿದೇಶಾಂಗ ಸಚಿವಾಲಯ ಮತ್ತು ಸ್ಥಳೀಯ ಪ್ರಾಂತೀಯ ಅಧಿಕಾರಿಗಳೊಂದಿಗೆ ಕೈಗೆತ್ತಿಕೊಳ್ಳಲಾಗಿದ್ದು, ಹಡಗುಗಳನ್ನು ಹಡಗುಕಟ್ಟೆಗೆ ಒಯ್ಯಲು ಅಥವಾ ಅವರ ಸಿಬ್ಬಂದಿಯನ್ನು ಬದಲಾಯಿಸಲು ಅನುಮತಿ ನೀಡುವಂತೆ ಕೋರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.

ಬೃಹತ್ ಸರಕು ಸಾಗಣೆ ಹಡಗು ಎಂ.ವಿ.ಜಗ್ ಆನಂದ್, ೨೩ ಭಾರತೀಯ ಸಿಬ್ಬಂದಿಯೊಂದಿಗೆ ಜೂನ್ ೧೩ ರಿಂದ ಹೆಬೈ ಪ್ರಾಂತ್ಯದ ಜಿಂಗ್ಟಾಂಗ್ ಬಂದರಿನ ಬಳಿ ಲಂಗರು ಹಾಕಿದ್ದರೆ, ಎಂ.ವಿ.ಅನಾಸ್ತಾಸಿಯಾ ಸೆಪ್ಟೆಂಬರ್ ೨೦ ರಿಂದ ೧೬ ಭಾರತೀಯರೊಂದಿಗೆ ಕಾಫಿಡಿಯನ್ ಬಂದರಿನ ಬಳಿ ಲಂಗರು ಹಾಕಿದೆ.

ಎಂ.ವಿ. ಅನಸ್ತಾಸಿಯಾ ತನ್ನ ಪ್ರಸ್ತುತ ಲಂಗರು ಹಾಕುವ ಹಂತದಲ್ಲಿ ಸಮುದ್ರದಲ್ಲಿ ಸಿಬ್ಬಂದಿ ಬದಲಾವಣೆಯ ಸಾಧ್ಯತೆಯನ್ನು ಅನ್ವೇಷಿಸುತ್ತಿದೆ ಮತ್ತು ಬೀಜಿಂಗಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಗುರುವಾರ ಚೀನಾದ ಅಧಿಕಾರಿಗಳಿಗೆ ಪತ್ರ ಬರೆದು, ಪರ್ಯಾಯವನ್ನು ಪ್ರಸ್ತಾಪಿಸಿ ಅದಕ್ಕೆ ಅನುಮೋದನೆ ಕೋರಿದೆ ಎಂದು ಶ್ರೀವಾಸ್ತವ ಹೇಳಿದರು.

ಚೀನಾದ ವಿದೇಶಾಂಗ ಸಚಿವಾಲಯವು ನವೆಂಬರ್ ಅಂತ್ಯದಲ್ಲಿ ಜಿಂಗ್ಟಾಂಗ್ ಬಂದರಿನಲ್ಲಿ ಸಿಬ್ಬಂದಿ ಬದಲಾವಣೆ ಕಾರ್ಯಸಾಧ್ಯವಾಗುವುದಿಲ್ಲ ಮತ್ತು ಟಿಯಾಂಜಿನ್ ಬಂದರಿನಲ್ಲಿ ಸಿಬ್ಬಂದಿ ತಿರುಗಾಟಕ್ಕಾಗಿ ಹಡಗು ಕಂಪೆನಿಗಳ ವಿನಂತಿಗಳನ್ನು ಸ್ಥಳೀಯ ಅಧಿಕಾರಿಗಳು ಪರಿಶೀಲಿಸುತ್ತಾರೆ ಎಂದು ಹೇಳಿದೆ. ಇದನ್ನು ಅನುಸರಿಸಿ, ಹಡಗು ಕಂಪೆನಿಗಳಿಗೆ ಸಿಬ್ಬಂದಿ ಬದಲಾವಣೆಯ ಅರ್ಜಿಗಳನ್ನು ತ್ವರಿತವಾಗಿ ಸಲ್ಲಿಸುವಂತೆ ತಿಳಿಸಲಾಗಿದೆ ಎಂದು ಅವರು ಹೇಳಿದರು.

"ಹಡಗು ಕಂಪೆನಿಗಳು ತಮ್ಮ ಪ್ರಸ್ತುತ ಲಂಗರುಹಾಕಿರುವ ಸ್ಥಳಗಳಿಂದ ಹಡಗುಗಳನ್ನು ಸಾಗಿಸುವ ಸಾಗಣೆ (ಲಾಜಿಸ್ಟಿಕ್ಸ್) ಬಗ್ಗೆ ಪರಿಶೀಲಿಸುತ್ತಿದ್ದರೆ, ಸಿಬ್ಬಂದಿ ಬದಲಾವಣೆಗೆ ಅನುಕೂಲವಾಗುವಂತೆ ನಮ್ಮ ರಾಯಭಾರ ಕಚೇರಿ ಟಿಯಾಂಜಿನ್ನಲ್ಲಿರುವ ಸಂಬಂಧಿತ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸುತ್ತಿದೆ" ಎಂದು ಶ್ರೀವಾಸ್ತವ ಹೇಳಿದರು.

"ಸ್ಥಳೀಯ ಚೀನಾದ ಅಧಿಕಾರಿಗಳ ಅನುಮೋದನೆಗಾಗಿ ಹಡಗು ಕಂಪೆನಿಗಳು ಸಿಬ್ಬಂದಿ ಬದಲಾವಣೆಯ ಯೋಜನೆಗಳನ್ನು ತ್ವರಿತವಾಗಿ ಸಲ್ಲಿಸುವಂತೆ ನಾವು ಕೋರಿದ್ದೇವೆ ಎಂದು ಅವರು ಹೇಳಿದರು.

ಕಳೆದ ಕೆಲವು ತಿಂಗಳುಗಳಿಂದ ಭಾರತೀಯ ಅಧಿಕಾರಿಗಳು ಭಾರತೀಯ ನಾವಿಕರ ಸಮಸ್ಯೆಯನ್ನು ಅನುಸರಿಸುತ್ತಿದ್ದಾರೆ. ಭಾರತದ ರಾಯಭಾರಿ ವಿಕ್ರಮ್ ಮಿಸ್ರಿ ಅವರು ಚೀನಾದ ಉಪ ವಿದೇಶಾಂಗ ಸಚಿವರೊಂದಿಗೆ ವೈಯಕ್ತಿಕವಾಗಿ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನವದೆಹಲಿಯ ಚೀನಾದ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದೆ.

"ದೀರ್ಘ ವಿಳಂಬದಿಂದಾಗಿ ಸಿಬ್ಬಂದಿ ಸದಸ್ಯರ ಮೇಲೆ ಒತ್ತಡ ಹೆಚ್ಚುತ್ತಿದೆ ಎಂದು ಶ್ರೀವಾಸ್ತವ ಪುನರುಚ್ಚರಿಸಿದರು. "ನಮ್ಮ ಸಿಬ್ಬಂದಿ ಸದಸ್ಯರಿಗೆ ಹೆಚ್ಚುತ್ತಿರುವ ಕಷ್ಟಕರ ಪರಿಸ್ಥಿತಿಗಳ ಬಗ್ಗೆ ಕಾಳಜಿ ವಹಿಸಿ, ಎರಡು ಪ್ರಕರಣಗಳನ್ನು ತೀವ್ರವಾಗಿ ಅನುಸರಿರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಚೀನಾದ ಬಂದರುಗಳಲ್ಲಿ ತಮ್ಮ ಸರಕುಗಳನ್ನು ಇಳಿಸಲು ವಿವಿಧ ದೇಶಗಳ ಹಲವಾರು ಹಡಗುಗಳು ತಮ್ಮ ಸರದಿಗಾಗಿ ಕಾಯುತ್ತಿವೆ ಎಂದು ಅವರು ನುಡಿದರು.

"ಬೀಜಿಂಗಿನ ನಮ್ಮ ರಾಯಭಾರ ಕಚೇರಿ ಬೀಜಿಂಗ್, ಹೆಬೈ ಮತ್ತು ಟಿಯಾಂಜಿನ್ನಿನಲ್ಲಿನ ಚೀನಾದ ಅಧಿಕಾರಿಗಳೊಂದಿಗೆ ನಿಕಟ ಮತ್ತು ನಿರಂತರ ಸಂಪರ್ಕದಲ್ಲಿದೆ. ತ್ವರಿತ ನಿರ್ಣಯಕ್ಕಾಗಿ ಸಚಿವಾಲಯವು ನವದೆಹಲಿಯ ಚೀನೀ ರಾಯಭಾರ ಕಚೇರಿಯ ಮೂಲಕವೂ ಅನುಸರಿಸುತ್ತಿದೆಎಂದು ಅವರು ಹೇಳಿದರು.

"ನಾವು ಚೀನಾದ ಕಡೆಯ ಹೇಳಿಕೆಗಳನ್ನು ಗಮನಿಸಿದ್ದೇವೆ, ವಿಷಯದಲ್ಲಿ ಅವರ ಸಹಾಯವನ್ನು ವಿಸ್ತರಿಸಲು ಇಚ್ಛೆ ವ್ಯಕ್ತಪಡಿಸುತ್ತೇವೆ. ಹಡಗುಗಳಲ್ಲಿ ಉಂಟಾಗುತ್ತಿರುವ ಗಂಭೀರ ಮಾನವೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಹಾಯವನ್ನು ತುರ್ತು, ಪ್ರಾಯೋಗಿಕ ಮತ್ತು ಸಮಯಕ್ಕೆ ಅನುಗುಣವಾಗಿ ಒದಗಿಸಲಾಗುವುದು ಎಂದು ನಾವು ನಿರೀಕ್ಷಿಸುತ್ತೇ ಎಂದು ಶ್ರೀವಾಸ್ತವ ಹೇಳಿದರು.

ಭಾರತೀಯ ನಾವಿಕರ ಸಂಕಟಕ್ಕೆ ಎರಡು ವ್ಯಾಪಾರಿ ಹಡಗುಗಳಲ್ಲಿ ಸರಕುಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತಿರುವ ವಾಣಿಜ್ಯ ಕಂಪೆನಿಗಳು ಚೀನಾದ ರಾಯಭಾರ ಕಚೇರಿಯನ್ನು ಇತ್ತೀಚೆಗೆ ದೂಷಿಸಿದ್ದವು.

ಮಧ್ಯೆ, ಕೋವಿಡ್ -೧೯ ಸಂಬಂಧಿತ ನಿರ್ಬಂಧಗಳಿಂದಾಗಿ ಜಿಂಟಾಂಗ್ ಮತ್ತು ಕಾಫೀಡಿಯನ್ ಬಂದರುಗಳಲ್ಲಿ ಸಿಬ್ಬಂದಿ ಬದಲಾವಣೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಎಂದು ಚೀನಾದ ಕಡೆಯವರು ಹೇಳಿದ್ದಾರೆ.

No comments:

Advertisement