ನಡುರಾತ್ರಿಯಲ್ಲಿ ಏಕೆ ಸ್ವಾತಂತ್ರ್ಯ? 1947ರ ಒಂದು ಕಥೆ
1947ರ ಜೂನ್ 4ರ
ಮಧ್ಯಾಹ್ನ. ಕಲ್ಕತ್ತಾದ (ಈಗಿನ ಕೋಲ್ಕತ್ತಾ) ಖ್ಯಾತ ಜ್ಯೋತಿಷಿ ಸ್ವಾಮಿ ಮದನಾನಂದ ಅವರು ಆಲ್
ಇಂಡಿಯಾ ರೇಡಿಯೋದಲ್ಲಿ (AIR)
ಬ್ರಿಟಿಷ್ ಭಾರತದ ಕೊನೆಯ ವೈಸ್ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರ
ಪತ್ರಿಕಾ ಗೋಷ್ಠಿಯನ್ನು ಆಲಿಸುತ್ತಿದ್ದರು. "ಆಗಸ್ಟ್ 15, 1947ರಂದು
ಬ್ರಿಟಿಷರು ಭಾರತೀಯರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ" ಎಂದು ಮೌಂಟ್ ಬ್ಯಾಟನ್
ಘೋಷಿಸಿದರು.
ದೇಶವೇ ದಶಕಗಳಿಂದ
ಕಾಯುತ್ತಿದ್ದ ಸ್ವಾತಂತ್ರ್ಯದ ದಿನ ನಿಗದಿಯಾಗಿತ್ತು. ಆದರೆ ಮದನಾನಂದರ ಮುಖದಲ್ಲಿ ಖುಷಿಯ ಬದಲಿಗೆ
ಆತಂಕ ಕವಿಯಿತು.
"ಅಯ್ಯೋ, ಅವರು ಏನು ಮಾಡಿಬಿಟ್ಟರು? ಏನು
ಮಾಡಿಬಿಟ್ಟರು?” ಎಂದು ಮದನಾನಂದರು ದಿಗ್ಭ್ರಮೆಯಿಂದ ಕೂಗಿಕೊಂಡರು.
ತಕ್ಷಣ ತಮ್ಮ ಜ್ಯೋತಿಷ್ಯದ ಖಗೋಳ ನಕ್ಷತ್ರ ನಕಾಶೆಗಳನ್ನು ತೆಗೆದು ಪರಿಶೀಲಿಸಿದರು. ರಾಷ್ಟ್ರಕ್ಕೆ
ಕಾದಿರುವ ಭಯಾನಕ ಭವಿಷ್ಯದ ಮುನ್ಸೂಚನೆ
ಅವರಿಗೆ ಸಿಕ್ಕಿತು.
ನಕ್ಷತ್ರ ದೋಷದ ಆತಂಕ
ವಾರಾಣಸಿ, ಕಲ್ಕತ್ತಾ
ಮತ್ತು ದಕ್ಷಿಣ ಭಾರತದಾದ್ಯಂತ ಜ್ಯೋತಿಷಿಗಳು ಈ ದಿನಾಂಕವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರು.
ಆಗಸ್ಟ್ 15,
1947 ಶುಕ್ರವಾರವಾಗಿತ್ತು. ಹಿಂದೂ ಜ್ಯೋತಿಷ್ಯದ ಪ್ರಕಾರ ಶುಕ್ರವಾರ ಮತ್ತು
ಭಾನುವಾರಗಳು ಯಾವುದೇ ಶುಭ ಕಾರ್ಯಗಳಿಗೆ ಅಶುಭ ದಿನಗಳು. ಭಾರತವು ಮಕರ ರಾಶಿಯಲ್ಲಿ, ಶನಿ
ಮತ್ತು ರಾಹುವಿನ ಪ್ರಭಾವದೊಂದಿಗೆ ಜನಿಸಲಿದೆ ಎಂದು ಜ್ಯೋತಿಷಿಗಳು ಕಂಡುಕೊಂಡರು.
"ಪ್ರಳಯ, ಬರಗಾಲ, ಕ್ಷಾಮ
ಮತ್ತು ನರಮೇಧಗಳು ಸಂಭವಿಸಿದರೆ, ಸ್ವತಂತ್ರ
ಭಾರತವು ನಕ್ಷತ್ರಗಳ ಶಾಪಗ್ರಸ್ತ ದಿನದಂದು ಜನಿಸಿದ್ದೇ ಕಾರಣವಾಗುತ್ತದೆ" ಎಂದು ಸ್ವಾಮಿ
ಮದನಾನಂದರು ಮೌಂಟ್ ಬ್ಯಾಟನ್ ಅವರಿಗೆ ಪತ್ರ ಬರೆದು ಎಚ್ಚರಿಸಿದರು. ದೇಶದ ನಾಯಕರಿಗೂ ಸಹ
ಜ್ಯೋತಿಷಿಗಳು ಈ ಬಗ್ಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ ಮೌಂಟ್ ಬ್ಯಾಟನ್ ಅವರಿಗೆ
ತಮ್ಮ ನಿರ್ಧಾರ ಮುಖ್ಯವಾಗಿತ್ತು. ಆಗಸ್ಟ್ 15 ಜಪಾನ್ ಶರಣಾಗತಿಯ ಎರಡನೇ ವಾರ್ಷಿಕೋತ್ಸವದ
ದಿನ. ಈ ನೆನಪಿಗಾಗಿ ಮೌಂಟ್ ಬ್ಯಾಟನ್ ಈದಿನವನ್ನು ಆಯ್ದುಕೊಂಡಿದ್ದರು. ಹೀಗಾಗಿ ದಿನ ಬದಲಾವಣೆ ಅಸಾಧ್ಯವಾಗಿತ್ತು.
ನೆಹರೂ ಉಪಾಯ
ದಿನಾಂಕವನ್ನು
ಬದಲಾಯಿಸಲು ಸಾಧ್ಯವಿಲ್ಲ ಎಂದಾದಾಗ, ಆ ದಿನದೊಳಗೆ ಒಂದು ಶುಭ
ಮುಹೂರ್ತವನ್ನು
ಕಂಡುಹಿಡಿಯುವ ಜವಾಬ್ದಾರಿ ನಾಯಕರ ಮೇಲಿತ್ತು. ಜ್ಯೋತಿಷಿಗಳು ರಾತ್ರಿ 12 ಗಂಟೆಯ ಸಮಯವನ್ನು (ಅಭಿಜಿತ್ ಮುಹೂರ್ತ ಹಾಗೂ ಪುಷ್ಯ ನಕ್ಷತ್ರದ ಸಂಯೋಜನೆ) ಅತ್ಯಂತ
ಅನುಕೂಲಕರವೆಂದು ಸೂಚಿಸಿದರು.
ಪಂಡಿತ್ ಜವಾಹರಲಾಲ್
ನೆಹರೂ ಅವರು ಈ ಸಂದರ್ಭದಲ್ಲಿ ಒಂದು ಅತ್ಯುತ್ತಮ ರಾಜೀ ಮಾರ್ಗವನ್ನು ಕಂಡುಕೊಂಡರು. ಪತ್ರಕರ್ತ
ದುರ್ಗಾ ದಾಸ್ ಅವರ ಪುಸ್ತಕದ ಪ್ರಕಾರ, ನೆಹರೂ ಅವರು ಆಗಸ್ಟ್ 14ರ
ಮಧ್ಯಾಹ್ನವೇ ಸಂವಿಧಾನ ಸಭೆಯನ್ನು ಕರೆದರು ಮತ್ತು ಅದರ ಕಲಾಪವನ್ನು ಮಧ್ಯರಾತ್ರಿಯವರೆಗೆ
ಮುಂದುವರಿಸಿದರು.
ಹಿಂದೂ ಕ್ಯಾಲೆಂಡರ್
ಪ್ರಕಾರ ಸೂರ್ಯೋದಯದ ಬಳಿಕವೇ 15ರ ಆರಂಭ. ಆದರೆ
ಪಾಶ್ಚಿಮಾತ್ಯ ಪದ್ಧತಿಯ ಪ್ರಕಾರ ರಾತ್ರಿ 12 ಗಂಟೆಯಿಂದಲೇ ಆಗಸ್ಟ್
15 ಆರಂಭವಾಗಿತ್ತು. ಹೀಗಾಗಿ,
ಆಗಸ್ಟ್ 15ರ ಆರಂಭದ ಮೊದಲ ಕ್ಷಣದಲ್ಲೇ (ಮಧ್ಯರಾತ್ರಿ)
ಭಾರತವು ಸ್ವಾತಂತ್ರ್ಯ ಪಡೆಯಿತು. ಇದು ಜ್ಯೋತಿಷಿಗಳು ಬಯಸಿದ್ದ
ಶುಭ ಮುಹೂರ್ತವೂ ಆಗಿತ್ತು, ಮೌಂಟ್ ಬ್ಯಾಟನ್ ಘೋಷಿಸಿದ ಆಗಸ್ಟ್ 15ರ
ದಿನವೂ ಕೂಡಾ!
ಹೀಗೆ ನಕ್ಷತ್ರಗಳ
ದೋಷವನ್ನು ಪರಿಹರಿಸಲು ನೆಹರೂ ಅವರು ಕಂಡುಕೊಂಡ ಈ ʼನಡುರಾತ್ರಿʼಯ ದಾರಿಯಿಂದಾಗಿ, ಭಾರತದ
ಸ್ವಾತಂತ್ರ್ಯದ ಇತಿಹಾಸದಲ್ಲಿ ʼನಡುರಾತ್ರಿʼ ಎಂಬ ಪದವು ಶಾಶ್ವತವಾಗಿ ಅಂಟಿಕೊಂಡಿತು. ಆಗಸ್ಟ್ 14ರ ರಾತ್ರಿ ಇಡೀ ದೇಶ
ಎಚ್ಚರದಿಂದಿತ್ತು. ಗಡಿಯಾರದ ಮುಳ್ಳುಗಳು ಹನ್ನೆರಡು ಭಾರಿಸಿದಾಗ, ನೆಹರೂ
ಅವರು ತಮ್ಮ ಐತಿಹಾಸಿಕ ಭಾಷಣವನ್ನು ಮೊಳಗಿಸಿದರು:
"ಇಡೀ ಜಗತ್ತು
ನಿದ್ರಿಸುತ್ತಿರುವಾಗ,
ಭಾರತವು ಜೀವ ಮತ್ತು ಸ್ವಾತಂತ್ರ್ಯಕ್ಕಾಗಿ ಹೊಸ ಚೈತನ್ಯದೊಂದಿಗೆ
ಎಚ್ಚೆತ್ತುಕೊಳ್ಳುತ್ತದೆ."
ಮಾಹಿತಿ ಸೌಜನ್ಯ: ಇಂಡಿಯಾ ಟುಡೆ

1 comment:
Verygood information ! We were unaware of this fact.. Thank you for this info.
Post a Comment