Saturday, March 6, 2010

ಇಂದಿನ ಇತಿಹಾಸ History Today ಜನವರಿ 31

ಇಂದಿನ ಇತಿಹಾಸ

ಜನವರಿ 31

ಚುನಾವಣಾ ಆಯುಕ್ತ ಹಾಗೂ ತಮ್ಮ ಸಹೋದ್ಯೋಗಿ ನವೀನ್ ಚಾವ್ಲಾ ಅವರನ್ನು ವಜಾಗೊಳಿಸಲು ಶಿಫಾರಸು ಮಾಡಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಎನ್.ಗೋಪಾಲಸ್ವಾಮಿ ಅವರು ಕೇಂದ್ರಕ್ಕೆ ಪತ್ರ ಬರೆಯುವುದರೊಂದಿಗೆ ಆಯೋಗದ ಸದಸ್ಯರಲ್ಲಿನ ಭಿನ್ನಮತ ತಾರಕಕ್ಕೆ ಏರಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವ ಮತ್ತು ಘನತೆ ಹೊಂದಿದ ಚುನಾವಣಾ ಆಯೋಗದ ಈ ಬಿಕ್ಕಟ್ಟು ಹಾಗೂ ಮುಖ್ಯ ಆಯುಕ್ತರ ಪತ್ರ ಸಂವೈಧಾನಿಕ ಹಾಗೂ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು.

2009: ಚುನಾವಣಾ ಆಯುಕ್ತ ಹಾಗೂ ತಮ್ಮ ಸಹೋದ್ಯೋಗಿ ನವೀನ್ ಚಾವ್ಲಾ ಅವರನ್ನು ವಜಾಗೊಳಿಸಲು ಶಿಫಾರಸು ಮಾಡಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಎನ್.ಗೋಪಾಲಸ್ವಾಮಿ ಅವರು ಕೇಂದ್ರಕ್ಕೆ ಪತ್ರ ಬರೆಯುವುದರೊಂದಿಗೆ ಆಯೋಗದ ಸದಸ್ಯರಲ್ಲಿನ ಭಿನ್ನಮತ ತಾರಕಕ್ಕೆ ಏರಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವ ಮತ್ತು ಘನತೆ ಹೊಂದಿದ ಚುನಾವಣಾ ಆಯೋಗದ ಈ ಬಿಕ್ಕಟ್ಟು ಹಾಗೂ ಮುಖ್ಯ ಆಯುಕ್ತರ ಪತ್ರ ಸಂವೈಧಾನಿಕ ಹಾಗೂ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು. ಗೋಪಾಲಸ್ವಾಮಿ ಅವರ ಅಧಿಕಾರಾವಧಿ ಏ.20ಕ್ಕೆ ಮುಗಿಯುವುದು. ಅದಕ್ಕೆ ಕೇವಲ 70 ದಿನಗಳ ಮುನ್ನ ಹಾಗೂ ಸಾರ್ವತ್ರಿಕ ಲೋಕ ಸಭಾ ಚುನಾವಣೆ ಸಮೀಪಿಸುತ್ತಿ ರುವಾಗ ಅವರು ಈ ಪತ್ರ ಬರೆದರು. ಚಾವ್ಲಾ ಅವರು ಕಾಂಗ್ರೆಸ್ ಪರ ಪಕ್ಷಪಾತ ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿ ಬಿಜೆಪಿ ನೀಡಿದ್ದ ಲಿಖಿತ ದೂರಿನ ಮೇರೆಗೆ ಈ ಕ್ರಮ ಕೈಗೊಂಡರು ಎನ್ನಲಾಯಿತು. ಮೂವರು ಸದಸ್ಯರನ್ನೊಳಗೊಂಡ ಆಯೋಗದಲ್ಲಿ ಈ ಹಿಂದೆಯೇ ಭಿನ್ನ ಮತ ಕಾಣಿಸಿಕೊಂಡಿತ್ತು. ಅಲ್ಲದೆ, ಮಹತ್ವದ ನಿರ್ಧಾರಗಳ ಬಗ್ಗೆ ಸದಸ್ಯರಲ್ಲಿ ಒಮ್ಮತವಿಲ್ಲವೆಂಬುದೂ ಆಗಾಗ ಬಹಿರಂಗವಾಗುತ್ತಿತ್ತು. ಕಳೆದ ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ವಿಧಾನ ಸಭಾ ಚುನಾವಣೆ ನಡೆಸುವ ಬಗ್ಗೆ ಕೂಡ ನವೀನ್ ಚಾವ್ಲಾ ಕೂಡಾ ಗಂಭೀರ ಆಕ್ಷೇಪಗಳನ್ನು ಎತ್ತಿದ್ದರು.

2009: ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ಹಾಗೂ ಸಾವಿರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ದಾಖಲೆ ಸ್ಥಾಪಿಸಿರುವ ತಾಯ್ ನಾಗೇಶ್ (76) ದೀರ್ಘಕಾಲದ ಅನಾರೋಗ್ಯದಿಂದ ಚೆನ್ನೈಯಲ್ಲಿ ನಿಧನರಾದರು. ನಾಗೇಶ್ ಅವರು ನಟ ಆನಂದ ಬಾಬು ಸೇರಿದಂತೆ ಮೂವರು ಪುತ್ರರನ್ನು ಅಗಲಿದರು. ಹಾಸ್ಯ ಪಾತ್ರಕ್ಕೆ ನಾಗೇಶ್ ಅದೆಷ್ಟರ ಮಟ್ಟಿಗೆ ಜೀವ ತುಂಬುತ್ತೊದ್ದರೆಂದರೆ ಚಿತ್ರರಂಗಕ್ಕೆ ಕಾಲಿಟ್ಟ ಆರಂಭಿಕ ವರ್ಷಗಳಲ್ಲಿ ಇವರನ್ನು ಹಾಲಿವುಡ್ ನಟ ಡ್ಯಾನಿ ಕಯೆ ಅವರೊಂದಿಗೆ ಹೋಲಿಸಲಾಗುತ್ತಿತ್ತು. 1933 ರಲ್ಲಿ ತಿಪಟೂರಿನಲ್ಲಿ ಕನ್ನಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ನಾಗೇಶ್ ಅಲಿಯಾಸ್ ಗುಂಡೂರಾವ್, 60 ಮತ್ತು 70 ರ ದಶಕದ ಮಧ್ಯಾವಧಿಯಲ್ಲಿ ತಮಿಳು ಚಿತ್ರರಂಗದ ಬಹುಬೇಡಿಕೆಯ ಹಾಸ್ಯ ನಟರಾಗಿದ್ದರು. ಕನ್ನಡದಲ್ಲೂ 'ಪೆದ್ದಗೆದ್ದ' ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು. ಬಣ್ಣದ ಬದುಕಿನತ್ತ ಆಕರ್ಷಿತರಾಗುವ ಮುನ್ನ ಅವರು ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್ ಆಗಿದ್ದರು. ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದ ನಾಗೇಶ್ ತಾಯ್ ನಾಟಕದಿಂದ ಪ್ರಸಿದ್ಧರಾದ ಕಾರಣ ಅವರಿಗೆ ತಾಯ್‌ ನಾಗೇಶ್ ಎಂಬ ಹೆಸರು ಬಂದಿತು. ಸುಮಾರು 5 ದಶಕಗಳ ಕಾಲ ತಮಿಳು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದರು. ಈ ಅವಧಿಯಲ್ಲಿ ಅವರು ಅಭಿನಯಿಸಿದ ಚಿತ್ರಗಳು ಸಾವಿರಕ್ಕೂ ಹೆಚ್ಚು. ಎಂಜಿಆರ್, ಶಿವಾಜಿ ಗಣೇಶನ್, ರಜನೀಕಾಂತ್ ಹಾಗೂ ಕಮಲಹಾಸನ್ ಅವರಂಥ ಮೇರು ನಟರೊಂದಿಗೆ ಸಹ ನಟನಾಗಿ ಅಭಿನಯಿಸಿದ ಹೆಗ್ಗಳಿಕೆ ಇವರದು. ಕಮಲಹಾಸನ್ ಅವರ 'ದಶಾವತಾರಂ' ನಾಗೇಶ್ ನಟಿಸಿದ ಕೊನೆಯ ಚಿತ್ರ. ನಾಗೇಶ್ ಪ್ರತಿಭೆಯನ್ನು ಗುರುತಿಸಿದ ನಿರ್ದೇಶಕ ಕೆ.ಬಾಲಚಂದರ್, ಅನೇಕ ಚಿತ್ರಗಳಲ್ಲಿ ಇವರು ನಾಯಕ ನಟರಾಗಿ ಮಿಂಚಲು ಕಾರಣರಾದರು. 'ಎದಿರ್ ನೀಚಲ್'. 'ನೀರ್ ಕುಮಿಳಿ', 'ಸರ್ವರ್ ಸುಂದರಂ' ಮೊದಲಾದ ಚಿತ್ರಗಳಲ್ಲಿ ನಾಗೇಶ್ ಅವರ ಅಭಿನಯ ವಿಶ್ವ ವಿಖ್ಯಾತ ಹಾಸ್ಯನಟ ಚಾರ್ಲಿ ಚಾಪ್ಲಿನ್ ಅವರನ್ನು ನೆನಪಿಸುತ್ತಿದ್ದವು. (ಈ ಎಲ್ಲ ಚಿತ್ರಗಳೂ ಕನ್ನಡಕ್ಕೆ ರೀಮೇಕ್ ಆಗಿದ್ದವು). ಶಿವಾಜಿ ಗಣೇಶನ್ ಅವರೊಂದಿಗೆ ನಾಗೇಶ್ ನಟಿಸಿದ 'ತಿಲ್ಲಾನ ಮೋಹನಾಂಬಾಳ್' ಹಾಗೂ 'ತಿರುವಿಳೈಯಾಡಲ್' ಚಿತ್ರಗಳನ್ನಂತೂ ಚಿತ್ರಪ್ರೇಮಿಗಳು ಎಂದೂ ಮರೆಯಲಾಗದು. 'ಆಯಿತ್ತಿಲ್ ಒರುವನ್' ಸೇರಿದಂತೆ ಎಂಜಿಆರ್ ಜತೆಗೂ ನಾಗೇಶ್ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದರು. ಎಂಜಿಆರ್ ಹಾಗೂ ಶಿವಾಜಿ ಗಣೇಶನ್ ಅಭಿನಯದ ಬಹುತೇಕ ಚಿತ್ರಗಳಲ್ಲಿ ಅಭಿನಯಿಸಿದ ಕೆಲವೇ ಕೆಲವು ಹಾಸ್ಯ ನಟರಲ್ಲಿ ಇವರೂ ಒಬ್ಬರು. ತಮ್ಮ ನಟನೆಯಿಂದ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದ್ದ ನಾಗೇಶ್ ಅವರು ಅನೇಕ ವರ್ಷಗಳ ಕಾಲ ಕುಡಿತದ ದಾಸರಾಗಿ ಚಿತ್ರೋದ್ಯಮದ ಅನಾದರಕ್ಕೆ ಒಳಗಾದರು. ಆದರೆ ಈ ವ್ಯಸನದಿಂದ ಹೊರಬಂದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರುಪ್ರವೇಶ ಮಾಡಿದರು. ಇವರು ಕೇವಲ ಹಾಸ್ಯ ನಟರಾಗಿ ಮಾತ್ರವಲ್ಲ ಖಳನಾಯಕ, ಪೋಷಕ ಪಾತ್ರಗಳಲ್ಲೂ ಮಿಂಚಿದ್ದರು.

2009: ಭಾರತದ ಯೂಕಿ ಭಾಂಬ್ರಿ ಅವರು ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಚಾಂಪಿಯನ್‌ಶಿಪ್‌ನ ಜೂನಿಯರ್ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಹೊಸ ಇತಿಹಾಸ ನಿರ್ಮಿಸಿದರು. ಮೆಲ್ಬರ್ನ್ ಪಾರ್ಕ್‌ನ ರಾಡ್ ಲೇವರ್ ಅರೆನಾದಲ್ಲಿ ನಡೆದ ಫೈನಲ್‌ನಲ್ಲಿ ಯೂಕಿ 6-3, 6-1 ರಲ್ಲಿ ಜರ್ಮನಿಯ ಅಲೆಕ್ಸಾಂಡ್ರೊಸ್ ಫರ್ಡಿನಾಂಡೊಸ್ ಅವರನ್ನು ಮಣಿಸಿದರು. 57 ನಿಮಿಷಗಳ ಹೋರಾಟದ ಕೊನೆಗೆ ಗೆಲುವು ಲಭಿಸುತ್ತಿದ್ದಂತೆಯೇ ಯೂಕಿ ತಮ್ಮ ಮುಷ್ಠಿಯನ್ನು ಗಾಳಿಯಲ್ಲಿ ಗುದ್ದಿ ಸಂಭ್ರಮಿಸಿದರು. ಆ ಕ್ಷಣ ಭಾರತದ ಟೆನಿಸ್ ಅಭಿಮಾನಿಗಳ ರೋಮಾಂಚನಕ್ಕೆ ಕಾರಣವಾಯಿತು. ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಮ್‌ನ ಜೂನಿಯರ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ದೆಹಲಿಯ 16ರ ಹರೆಯದ ಯೂಕಿ ತಮ್ಮದಾಗಿಸಿದರು. ಅದೇ ರೀತಿ ಜೂನಿಯರ್ ಗ್ರ್ಯಾಂಡ್ ಸ್ಲಾಮ್ನಲ್ಲಿ ಪ್ರಶಸ್ತಿ ಜಯಿಸಿದ ಭಾರತದ ನಾಲ್ಕನೇ ಆಟಗಾರನಾಗಿ ಯೂಕಿ ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆದರು. ರಾಮನಾಥನ್ ಕೃಷ್ಣನ್ (1954ರ ವಿಂಬಲ್ಡನ್ ಜೂನಿಯರ್ ಪ್ರಶಸ್ತಿ), ಅವರ ಪುತ್ರ ರಮೇಶ್ ಕೃಷ್ಣನ್ (1979ರ ವಿಂಬಲ್ಡನ್ ಮತ್ತು ಫ್ರೆಂಚ್ ಓಪನ್) ಹಾಗೂ ಲಿಯಾಂಡರ್ ಪೇಸ್ (1990ರ ವಿಂಬಲ್ಡನ್ ಮತ್ತು ಯುಎಸ್ ಓಪನ್) ಅವರು ಈ ಹಿಂದೆ ಭಾರತಕ್ಕೆ ಜೂನಿಯರ್ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ತಂದಿತ್ತಿದ್ದರು. ಕಳೆದ ಬಾರಿ ಇಲ್ಲಿ ಸೆಮಿಫೈನಲಿನಲ್ಲಿ ಸೋಲು ಅನುಭವಿಸಿದ್ದ ಯೂಕಿ ಫೈನಲಿನಲ್ಲಿ ಎಲ್ಲ ವಿಭಾಗಗಲ್ಲೂ ಮೇಲುಗೈ ಸಾಧಿಸಿದರು. ಮೊದಲ ಸೆಟ್‌ನ ನಾಲ್ಕನೇ ಗೇಮಿನಲ್ಲಿ ಎದುರಾಳಿಯ ಸರ್ವ್ ಮುರಿದ ಅವರು 3-1 ರಲ್ಲಿ ಮುನ್ನಡೆ ಸಾಧಿಸಿದರು. ಅದೇ ಲಯವನ್ನು ಕಾಪಾಡಿಕೊಂಡರಲ್ಲದೆ, 31 ನಿಮಿಷಗಳಲ್ಲಿ ಸೆಟ್ ಗೆದ್ದರು. ಎರಡನೇ ಸೆಟ್ ಗೆಲ್ಲಲು ಕೇವಲ 26 ನಿಮಿಷಗಳನ್ನು ವ್ಯಯಿಸಿದ ಯೂಕಿ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಟ್ರೋಫಿಗೆ ಮುತ್ತಿಕ್ಕಿದರು. ಅಮೆರಿಕದ ಸೆರೆನಾ ವಿಲಿಯಮ್ಸ್ ಇದೇ ಚಾಂಪಿಯನ್‌ಶಿಪ್ನ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ರಾಡ್ ಲೇವರ್ ಅರೆನಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸೆರೆನಾ 6-0, 6-3 ರಲ್ಲಿ ರಷ್ಯಾದ ದಿನಾರ ಸಫಿನಾ ವಿರುದ್ಧ ಜಯ ಪಡೆದರು. ಇದು ಸೆರೆನಾ ಅವರ ವೃತ್ತಿಜೀವನದ 10ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. ಈ ಗೆಲುವಿನ ಮೂಲಕ ಅವರು ರಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು.

2009: ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಮತ್ತು ನಿವೃತ್ತ ಲೋಕಾಯುಕ್ತ ಎನ್.ವೆಂಕಟಾಚಲ ಬೆಂಗಳೂರಿನಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಿ.ವಿ.ಸದಾನಂದಗೌಡರ ಸಮ್ಮುಖದಲ್ಲಿ ಈದಿನ ಅಧಿಕೃತವಾಗಿ ಬಿಜೆಪಿ ಸೇರಿದರು.

2009: ತೆಲುಗು ನಟಿ ವಿಜಯಶಾಂತಿ ತನ್ನ ತಲ್ಲಿ ತೆಲಂಗಾಣ ಪಕ್ಷವನ್ನು ಹೈದರಾಬಾದಿನಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಪಕ್ಷದೊಂದಿಗೆ ವಿಲೀನಗೊಳಿಸಿದರು. ಅವರು ಟಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಅವರ ಮನೆಗೆ ತೆರಳಿ ಪಕ್ಷದ ಸದಸ್ಯರಾದರು. ನಂತರ ಅವರು ಟಿಆರ್‌ಎಸ್‌ನೊಂದಿಗೆ ತಮ್ಮ ಪಕ್ಷದ ವಿಲೀನವನ್ನು ಘೋಷಿಸಿದರು.

2009: ಕೋಸಿ ನದಿ ಪ್ರವಾಹ ಸಂತ್ರಸ್ತರ ಪುನರ್‌ವಸತಿಗೆಂದು ಮುಖ್ಯಮಂತ್ರಿ ಪರಿಹಾರ ನಿಧಿಯ ಮೂಲಕ ನೆರವು ನೀಡಿದ ಕರ್ನಾಟಕದ ಜನತೆಗೆ ಅದರಲ್ಲೂ ವಿಶೇಷವಾಗಿ 'ಡೆಕ್ಕನ್ ಹೆರಾಲ್ಡ್' ಮತ್ತು 'ಪ್ರಜಾವಾಣಿ' ಪತ್ರಿಕೆಗಳಿಗೆ ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ್ ಅವರು ಅಭಿನಂದನೆ ಸಲ್ಲಿಸಿದರು. ಪಟ್ನಾದಲ್ಲಿ 'ಡೆಕ್ಕನ್ ಹೆರಾಲ್ಡ್' ಹಾಗೂ 'ಪ್ರಜಾವಾಣಿ' ಸಂಪಾದಕರಾದ ಕೆ.ಎನ್. ತಿಲಕ್ ಕುಮಾರ್ ಅವರು ಕಳುಹಿಸಿಕೊಟ್ಟ 2ನೇ ಕಂತಿನ 12, 09,497 ರೂಪಾಯಿಗಳ ಡಿ.ಡಿ ಯನ್ನು ಪಟ್ನಾದ 'ಡೆಕ್ಕನ್ ಹೆರಾಲ್ಡ್' ವರದಿಗಾರ ಅಭಯ್ ಕುಮಾರ್ ಅವರು ತಮಗೆ ಸಲ್ಲಿಸಿದ ಸಂದರ್ಭದಲ್ಲಿ ಅವರು ಈ ಧನ್ಯವಾದ ಸಮರ್ಪಿಸಿದರು. ಅಕ್ಟೋಬರ 30 ರಂದು ಸಂಪಾದಕ ಕೆ. ಎನ್. ತಿಲಕ್ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಓದುಗರಿಂದ ಸಂಗ್ರಹವಾದ ಮೊದಲ ಕಂತಿನ 51,32,00 ರೂಪಾಯಿಗಳ ಡಿ.ಡಿ.ಯನ್ನು ಖುದ್ದಾಗಿ ನೀಡಿದ್ದರು.

2009: ಆಹಾರ ಪದಾರ್ಥಗಳ ಪ್ಯಾಕ್ ಮಾಡಲು ಬಳಸುವ, ರಸಗೊಬ್ಬರ, ಜವಳಿ, ಪೀಠೋಪಕರಣಗಳ ಮೆತ್ತೆ ಹಾಗೂ ಸ್ತ್ರೀಯರ ಖಾಸಗಿ ಉಪಯೋಗದ ಬಹುತೇಕ ವಸ್ತುಗಳಲ್ಲಿ ಅತಿಯಾಗಿ ಬಳಕೆಯಾಗುವ ರಾಸಾಯನಿಕ ಅಂಶಗಳು ಮಹಿಳೆಯರ ಬಂಜೆತನಕ್ಕೆ ಕಾರಣವಾಗಬಲ್ಲವು ಎಂದು ಅಧ್ಯಯನವೊಂದು ತಿಳಿಸಿತು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಹಾಗೂ ಲಾಸ್ ಏಂಜಲೀಸಿನ ಸಾರ್ವಜನಿಕ ಆರೋಗ್ಯ ಶಾಲೆಗಳು ನಡೆಸಿದ ಸಂಶೋಧನೆಯಲ್ಲಿ ಈ ಅಂಶ ವ್ಯಕ್ತವಾಯಿತು. ಈ ವಸ್ತುಗಳ ಬಳಕೆಯಿಂದಾಗಿ ಮಹಿಳೆಯರ ದೇಹದಲ್ಲಿನ ರಕ್ತದಲ್ಲಿ ಪರ್‌ಫ್ಯ್ಲೂರೊಆಕ್ಟೇನ್ ಹಾಗೂ ಪರ್‌ಫ್ಯ್ಲೂರೊಆಕ್ಟೇನ್ ಸಲ್ಫೋನೇಟ್ ಮಟ್ಟ ಹೆಚ್ಚಾಗುತ್ತದೆ. ಇಂತಹ ಅಂಶಗಳುಳ್ಳ ಮಹಿಳೆಯರು ಗರ್ಭಧರಿಸಲು ಸಾಮಾನ್ಯ ಮಹಿಳೆಯರು ತೆಗೆದುಕೊಳ್ಳುವ ಅವಧಿಗಿಂತಲೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ ಎಂದು ಸಂಶೋಧಕರು ಅಭಿಪ್ರಾಯಪಟ್ಟರು.

2009: ಭಾರತೀಯ ಮೂಲದ ಹಾಸ್ಯ ಬರಹಗಾರ ಶರತ್ ಸರ್ದಾನಾ (40) ಲಂಡನ್ನಿನಲ್ಲಿ ನಿಧನರಾದರು. ಬ್ರಿಟನ್ನಿನಲ್ಲಿನ ಭಾರತೀಯರ ಮನೋಧರ್ಮಗಳನ್ನು ಬದಲಾಯಿಸುವಲ್ಲಿ ಇವರ ಕ್ರಾಂತಿಕಾರಿ ಹಾಸ್ಯ (ಕಾಮಿಕ್) ಬರಹಗಳು ಇವರಿಗೆ ಅತ್ಯಂತ ಖ್ಯಾತಿಯನ್ನು ತಂದುಕೊಟ್ಟಿದ್ದವು. ಸಾಮಾಜಿಕ ಹವ್ಯಾಸಗಳಿಂದ ಜನಾಂಗೀಯ ನೀತಿಗಳವೆರೆಗಿನ ಇವರ ಹಾಸ್ಯ ಬರಹಗಳು ಬ್ರಿಟನ್ ದೃಶ್ಯ ಮಾಧ್ಯಮದಲ್ಲೂ ಭಾರಿ ಬೇಡಿಕೆ ಹೊಂದಿದ್ದವು. ಅಂತೆಯೇ ಶರತ್ ಮತ್ತು ರಿಚರ್ಡ್ ಪಿಂಟೊ ಜೋಡಿ ಭಾರಿ ಖ್ಯಾತಿ ಗಳಿಸಿತ್ತು.

2008: ಕರ್ನಾಟಕ ರಾಜ್ಯದ ವಿವಿಧೆಡೆಗಳಲ್ಲಿ ಹತ್ತು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಅಪಾರ ಪ್ರಮಾಣದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದರು. ಆದರೆ ಈ ದಾಳಿಯ ಬಗ್ಗೆ ವಿವರ ನೀಡಲು ಲೋಕಾಯುಕ್ತ್ತ ಎನ್. ಸಂತೋಷ ಹೆಗ್ಡೆ ನಿರಾಕರಿಸಿದರು. ಐಎಎಸ್ ಅಧಿಕಾರಿ ಡಾ. ಬಾಬುರಾವ್ ಮುಡಬಿ, ಬಳ್ಳಾರಿಯ ಹೆಚ್ಚುವರಿ ಎಸ್ಪಿ ಡಾ.ಡಿ.ಸಿ. ರಾಜಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಶೇಖರ್, ಗುಲ್ಬರ್ಗದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಪಿತಾಂಬರ ಹೆರಾಜೆ, ಬೆಳಗಾವಿಯ ಪೊಲೀಸ್ ಇಲಾಖೆಯ ಅಬಕಾರಿ ವಿಚಕ್ಷಣ ದಳದ ಡಿ ವೈ ಎಸ್ ಪಿ ಪಿ.ಜಿ. ವಾಂಡ್ ಕರ, ದಾವಣಗೆರೆ ಜಿಲ್ಲೆ ಜಗಳೂರಿನ ಪೊಲೀಸ್ ಇನ್ಸ್ ಪೆಕ್ಟರ್ ರೇವಣ್ಣ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ತಾಂತ್ರಿಕ ನಿರ್ದೇಶಕ ಎಸ್.ಪಿ. ಕೊಲ್ಹಾರ, ಕೋಲಾರದ ಕೈಗಾರಿಕಾ ಇಲಾಖೆ ಅಧಿಕಾರಿ ಸುಬ್ರಹ್ಮಣ್ಯ ಮತ್ತಿತರರು ದಾಳಿಗೆ ಒಳಗಾದ ಅಧಿಕಾರಿಗಳಲ್ಲಿ ಸೇರಿದ್ದರು. ಲೋಕಾಯುಕ್ತರು, ಉಪಲೋಕಾಯುಕ್ತ ಪತ್ರಿ ಬಸವನಗೌಡ ಮತ್ತು ಸಂಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆಯಿತು.

2008: ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಮೆಡಿಟರೇನಿಯನ್ ಸಾಗರದೊಳಗಿನ ಎರಡು ಕೇಬಲುಗಳು ಜಖಂಗೊಂಡಿರುವುದರಿಂದ ಪಶ್ಚಿಮ ಏಷ್ಯಾದ ಬಹುತೇಕ ಭಾಗ ಹಾಗೂ ಭಾರತದಲ್ಲಿ ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಕೇಬಲುಗಳು ತುಂಡಾದದ್ದರಿಂದ ಭಾರತದ ಅಂತರ್ಜಾಲ ಸೇವೆಯಲ್ಲಿ ಶೇ 60ರಷ್ಟು ಹಾಗೂ ಈಜಿಪ್ತಿನಲ್ಲಿ ಶೇ 70 ರಷ್ಟು ವ್ಯತ್ಯಯ ಉಂಟಾಯಿತು. ಸಂಯುಕ್ತ ಅರಬ್ ರಾಷ್ಟ್ರ, ಕುವೈತ್ ಹಾಗೂ ಸೌದಿ ಅರೇಬಿಯಾ ಕೂಡ ಈ ತೊಂದರೆ ಅನುಭವಿಸಿದವು.

2008: ಸಂಗೀತ ಸಾಮ್ರಾಜ್ಞಿ ಡಾ. ಗಂಗೂಬಾಯಿ ಹಾನಗಲ್, ಇತಿಹಾಸ ತಜ್ಞ ಪ್ರೊ. ಬಿ.ಷೇಕ್ ಅಲಿ, ವಿಜ್ಞಾನ ಲೇಖಕ ಪ್ರೊ.ಜಿ.ಟಿ. ನಾರಾಯಣರಾವ್ ಹಾಗೂ ಕಾನೂನು ತಜ್ಞ-ಸ್ವಾತಂತ್ರ್ಯ ಹೋರಾಟಗಾರ ಕೋ. ಚೆನ್ನಬಸಪ್ಪ ಅವರಿಗೆ 8ನೆಯ ಘಟಿಕೋತ್ಸವದಲ್ಲಿ ಗೌರವ ಡಿ.ಲಿಟ್ ಪದವಿ ನೀಡಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನಿರ್ಧರಿಸಿತು. ವಿ.ವಿ ಕುಲಪತಿ ಪ್ರೊ.ಬಿ.ಎ. ವಿವೇಕ್ ರೈ ಈ ವಿಷಯ ಪ್ರಕಟಿಸಿದರು.

2008: ಬೆಂಗಳೂರಿನ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ದಿವಂಗತ ವ್ಯಾಸರಾಯ ಬಲ್ಲಾಳ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಈದಿನ ಮಧ್ಯಾಹ್ನ 12.30ರ ಸುಮಾರಿಗೆ ನಡೆಯಿತು. ಸಾಹಿತಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಬಂಧು ಬಳಗದವರು ಪಾಲ್ಗೊಂಡಿದ್ದರು.

2008: ಹಾಲಿವುಡ್ಡಿನ ಆಂಜೋಲಿನಾ ಜೋಲಿ ಹಾಗೂ ಬಾಲಿವುಡ್ಡಿನ ಐಶ್ವರ್ಯ ರೈ ಪೂರ್ವಜರು ಒಂದೇ ಮೂಲಕ್ಕೆ ಸೇರಿದವರು ಎಂಬ ಅಂಶವನ್ನು ಲಂಡನ್ ವಿಜ್ಞಾನಿಗಳು ಬಹಿರಂಗಪಡಿಸಿದರು. ಸುಮಾರು 10 ಸಾವಿರ ವರ್ಷಗಳ ಹಿಂದೆ ಕಪ್ಪು ಸಮುದ್ರ ಪ್ರದೇಶದಲ್ಲಿ ಬದುಕಿದ್ದ ನೀಲಿ ಕಣ್ಣುಗಳ ಪೂರ್ವಜರ ಪೀಳಿಗೆಯೇ ಇವರದು ಎಂದು ಸಂಶೋಧಕರು ಹೇಳಿದರು. ಕಣ್ಣುಗಳ ಬಣ್ಣದ ಕುರಿತು ಸುಮಾರು 800 ಜನರ ಮೇಲೆ ಸಂಶೋಧನೆ ಕೈಗೊಂಡ ಕೊಪನ್ ಹೇಗನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇಂತಹ ಸಾಧ್ಯತೆಯನ್ನು ಬಯಲಿಗೆಳೆದರು. ಇವರ ಪ್ರಕಾರ ನೀಲಿ ಕಣ್ಣುಗಳನ್ನು ಹೊಂದಿದ ಶೇ 99.5ರಷ್ಟು ಜನರ ಡಿ ಎನ್ ಎ (ವಂಶವಾಹಿ ತಳಿ ನಕ್ಷೆ) ಒಂದೇ ರೀತಿಯದ್ದಾಗಿರುತ್ತದೆ. ಇವರ ಕಣ್ಣುಗಳ ಪೊರೆಯ ಬಣ್ಣ ನಿರ್ಧರಿಸುವ ಜೀನುಗಳ (ವಂಶವಾಹಿ) ಮಾರ್ಪಾಡು ಒಂದೇ ರೀತಿಯಾಗಿದೆ.

2008: ಪ್ರವಾದಿ ಮೊಹಮ್ಮದ್ ಅವರ ಕುರಿತ ಕ್ಯಾರಿಕೇಚರುಗಳನ್ನು (ಅಣಕು ಚಿತ್ರಣದ ಕಲಾಕೃತಿ) ಸಂರಕ್ಷಿಸಿ ಇಡಲು ಡೆನ್ಮಾರ್ಕ್ ರಾಷ್ಟ್ರೀಯ ಗ್ರಂಥಾಲಯ ನಿರ್ಧರಿಸಿತು. ಎರಡು ವರ್ಷಗಳ ಹಿಂದೆ ಈ ಕಲಾಕೃತಿಗಳು ಇಸ್ಲಾಮೀ ಜಗತ್ತಿನಲ್ಲಿ ಭಾರಿ ವಿವಾದವನ್ನು ಎಬ್ಬಿಸಿದ್ದವು. ಕೆಲವು ಮುಸ್ಲಿಮ್ ನಾಯಕರ ಆಕ್ಷೇಪಗಳ ನಡುವೆಯೂ ಮೊಹಮ್ಮದರನ್ನು ಕುರಿತ ಕ್ಯಾರಿಕೇಚರುಗಳನ್ನು ಅಧ್ಯಯನ ದೃಷ್ಟಿಯಿಂದ ಸಂರಕ್ಷಿಸಲಾಗುವುದು ಎಂದು ಗ್ರಂಥಾಲಯದ ವಕ್ತಾರ ಜೆಟ್ಟೆ ಜಾಯಿರ್ಗಾರ್ಡ್ ತಿಳಿಸಿದರು.

2008: ಗಣರಾಜ್ಯೋತ್ಸವ ಪೆರೇಡಿನಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ `ಬೇಲೂರು ಚನ್ನಕೇಶವ ದೇವಾಲಯ' ಸ್ತಬ್ಧಚಿತ್ರ ಸಮಗ್ರ ರೂಪದ ಎರಡನೇ ಅತ್ಯುತ್ತಮ ಪ್ರಶಸ್ತಿ ಸೇರಿದಂತೆ ಮೂರು ಪ್ರಶಸ್ತಿಗಳನ್ನು ಗಳಿಸಿತು. ಸ್ತಬ್ಧಚಿತ್ರದ ಮೆರವಣಿಗೆಗೆ ಹಿಮ್ಮೇಳವಾಗಿ ನಾದಸ್ವರ ನುಡಿಸಿದ ಕೋಲಾರ ಜಿಲ್ಲೆಯ ಬೇತಮಂಗಲದ ಗಂಗಾಧರ ನಾದಸ್ವರ ಗುರುಕುಲದ ಕಲಾವಿದರು `ಉತ್ತಮ ಪ್ರಸ್ತುತಿ ಪ್ರಶಸ್ತಿ' ಗಳಿಸಿದರು. ಸ್ತಬ್ಧಚಿತ್ರವನ್ನು ತಯಾರಿಸಿದ ಬೆಂಗಳೂರಿನ `ಸಂಜಯ್ ಮಾರ್ಕೆಟಿಂಗ್ ಮತ್ತು ಸರ್ವೀಸಸ್' ಸಂಸ್ಥೆ `ಉತ್ತಮ ರಚನಾ ಪ್ರಶಸ್ತಿ' ಯನ್ನು ಪಡೆಯಿತು.

2008: ಅನಿಲ್ ಕುಂಬ್ಳೆ ಅವರನ್ನು ಈ ಬಾರಿಯ `ಎಸ್ಸೆಲ್ ಕರ್ನಾಟಕದ ಶ್ರೇಷ್ಠ ಕ್ರೀಡಾ ವ್ಯಕ್ತಿ -2008' ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. `ಜೀವಮಾನದ ಶ್ರೇಷ್ಠ ಸಾಧಕ' ಪ್ರಶಸ್ತಿ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಕೆ.ವಿ. ವರದರಾಜ್ ಅವರಿಗೆ ಲಭಿಸಿತು. ಇವರಿಬ್ಬರಲ್ಲದೆ ಅನೂಪ್ ಶ್ರೀಧರ್ (ಬ್ಯಾಡ್ಮಿಂಟನ್), ಚಿತ್ರಾ ಮಗಿಮೈರಾಜ್ (ಬಿಲಿಯರ್ಡ್ಸ್), ಗಿರೀಶ್ ಎ ಕೌಶಿಕ್ (ಚೆಸ್), ಹೆಲೆನ್ ಮೇರಿ ಇನೊಸೆಂಟ್ (ಹಾಕಿ) ಮತ್ತು ಶಿಖಾ ಟಂಡನ್ (ಈಜು) ಇವರನ್ನೂ ಶ್ರೇಷ್ಠ ಸಾಧಕ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2007: ಇಂಗ್ಲೆಂಡ್ ಮೂಲದ `ಕೋರಸ್' ಉಕ್ಕು ಕಂಪೆನಿ ಖರೀದಿಗೆ ಭಾರತದ ಟಾಟಾ ಸ್ಟೀಲ್ಸ್ ಮತ್ತು ಬ್ರೆಜಿಲಿನ ಸಿ ಎಸ್ ಎನ್ ಕಂಪೆನಿಗಳ ನಡುವೆ ನಾಲ್ಕು ತಿಂಗಳುಗಳಿಂದ ನಡೆದಿದ್ದ ಜಿದ್ದಾಜಿದ್ದಿನ ಪೈಪೋಟಿ ಈ ದಿನ ಕೊನೆಗೊಂಡು, ಟಾಟಾ ಸ್ಟೀಲ್ಸ್ ಗೆಲುವಿನ ನಗೆ ಬೀರುವುದರೊಂದಿಗೆ ಭಾರತೀಯ ಔದ್ಯಮಿಕ ಇತಿಹಾಸದಲ್ಲಿ ದಾಖಲೆ ನಿರ್ಮಾಣಗೊಂಡಿತು. ಭಾರತೀಯ ಔದ್ಯಮಿಕ ಇತಿಹಾಸದಲ್ಲೇ ದಾಖಲೆ ಎನ್ನಬಹುದಾದ ಈ ಖರೀದಿ ಒಪ್ಪಂದದಿಂದಾಗಿ ಜಗತ್ತಿನ ಉಕ್ಕು ಉದ್ಯಮದಲ್ಲಿ ಭಾರತೀಯ ಕಂಪೆನಿಗಳ ಹಿಡಿತ ಇನ್ನಷ್ಟು ಬಿಗಿಗೊಂಡಿತು. ಪ್ರಸ್ತುತ ಟಾಟಾ ಸ್ಟೀಲ್ಸಿನ ವಾರ್ಷಿಕ ಉತ್ಪಾದನೆ ಐವತ್ತು ಲಕ್ಷ ಟನ್ ಇದ್ದು, `ಕೋರಸ್' ನ ಉತ್ಪಾದನೆ 1.82 ಕೋಟಿ ಟನ್ ಇದೆ. ಈ ಖರೀದಿಯಿಂದಾಗಿ ಟಾಟಾ ಸ್ಟೀಲ್ಸ್ ಈಗ 23.2 ಮೆಟ್ರಿಕ್ ಟನ್ ವಾರ್ಷಿಕ ಉತ್ಪಾದನೆಯ ಕಂಪೆನಿಯಾಗಲಿದ್ದು, ಜಗತ್ತಿನ ಐದನೇ ದೊಡ್ಡ ಉಕ್ಕು ಉತ್ಪಾದನೆ ಕಂಪೆನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗುವುದು. ಟಾಟಾ ಮತ್ತು ಸಿ ಎಸ್ ಎನ್ ಕಂಪೆನಿಗಳೆರಡೂ `ಕೋರಸ್' ನ್ನು ತಮ್ಮ ತೆಕ್ಕೆಗೆ ಪಡೆಯಲು ಎಲ್ಲಿಲ್ಲದ ಕಸರತ್ತು ನಡೆಸಿದ್ದರಿಂದ ಅಂತಿಮವಾಗಿ ಬಹಿರಂಗ ಹರಾಜು ನಡೆಸಲು ನಿರ್ಧರಿಸಲಾಗಿತ್ತು. ಜನವರಿ 30ರ ರಾತ್ರಿಯಿಂದ 31ರ ಬೆಳಗಿನವರೆಗೆ ನಡೆದ ಒಂಬತ್ತು ಸುತ್ತಿನ ಬಹಿರಂಗ ಹರಾಜಿನಲ್ಲಿ `ಕೋರಸ್' ನ ಪ್ರತಿ ಷೇರಿಗೆ 608 ಪೆನ್ನಿಗಳನ್ನು ನೀಡಲು ಮುಂದಾದ ಟಾಟಾ ಸ್ಟೀಲ್ಸ್ ಗೆ ಜಯ ಸಿಕ್ಕಿತು. ಸಿ ಎಸ್ ಎನ್ ಪ್ರತಿ ಷೇರಿಗೆ 603 ಪೆನ್ನಿವರೆಗೆ ಕೊಡಲು ತಯಾರಾಗಿತ್ತು. ಆದರೆ, 608 ಪೆನ್ನಿ ನೀಡಲು ಟಾಟಾ ಸ್ಟೀಲ್ಸ್ ಮುಂದಾದಾಗ ಸಿ ಎಸ್ ಎನ್ ಕೈ ಚೆಲ್ಲಿತು. ಕೋರಸ್ ಕಂಪೆನಿಗಾಗಿ ಒಟ್ಟು 1,130 ಕೋಟಿ ಡಾಲರ್ನ್ನು ಸಂಪೂರ್ಣ ನಗದು ನೀಡಲು ಟಾಟಾ ಒಪ್ಪಿಕೊಂಡಿದ್ದು, ಇದು 50,850 ಕೋಟಿ ರೂಪಾಯಿಯಾಗುತ್ತದೆ. ಈ ಸಾಲಿನಲ್ಲಿ ಕೋರಸ್ ನ ಪ್ರತಿ ಷೇರು 550 ಪೆನ್ನಿಗಳ ಮೌಲ್ಯದಲ್ಲಿ ಮಾರಾಟವಾಗುತ್ತಿದ್ದು, ಟಾಟಾ ಸ್ಟೀಲ್ 608 ಪೆನ್ನಿ ನೀಡಲು ಮುಂದಾಗಿದ್ದರಿಂದ ಕೋರಸ್ ಷೇರುದಾರರಿಗೆ ಭಾರೀ ಲಾಭವಾಯಿತು.

2007: ಕಾವೇರಿ ನದಿ ದಂಡೆಯ ಮೇಲಿರುವ ಟಿ. ನರಸೀಪುರದ ಅಗಸ್ತ್ಯೇಶ್ವರ ದೇವಾಲಯದಲ್ಲಿ ಬೆಳಗ್ಗೆ ಕಲಶ ಸ್ಥಾಪನೆ, ಗಣಹೋಮ ಹಾಗೂ ಸಂಜೆ ಗಂಗಾಪೂಜೆ, ಯಾಗ ಶಾಲೆ ಪ್ರವೇಶ ಮಾಡುವುದರೊಂದಿಗೆ ಏಳನೇ ಮಹಾಕುಂಭಮೇಳ ವಿಧ್ಯುಕ್ತವಾಗಿ ಆರಂಭಗೊಂಡಿತು.

2007: ಕೇವಲ ಮಹಿಳೆಯರೇ ಇರುವ ಭಾರತೀಯ ಪೊಲೀಸ್ ತುಕಡಿ ಆಫ್ರಿಕದ ಪಶ್ಚಿಮ ಭಾಗದಲ್ಲಿರುವ ಲೈಬೀರಿಯಾ ಶಾಂತಿಪಾಲನಾ ಕಾರ್ಯ ನಿರ್ವಹಿಸುವ ಸಲುವಾಗಿ ಲೈಬೀರಿಯಾವನ್ನು ತಲುಪುವ ಮೂಲಕ ಇತಿಹಾಸ ಸೃಷ್ಟಿಸಿತು. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವಾಗಿ ಸೇರ್ಪಡೆಗೊಳ್ಳುವ ಈ ತುಕಡಿಯಲ್ಲಿ 103 ಮಂದಿ ಮಹಿಳಾ ಸಿಬ್ಬಂದಿ ಇದ್ದು, ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಕಾರ್ಯಕ್ರಮದ ಇತಿಹಾಸದಲ್ಲಿ ಪೂರ್ಣ ಪ್ರಮಾಣದ ಮಹಿಳಾ ತುಕಡಿಯ ಸೇರ್ಪಡೆ ಇದೇ ಮೊದಲು.

2007: ಸ್ನಾತಕೋತ್ತರ ವೈದ್ಯಕೀಯ ಕೋರ್ಸಿನಲ್ಲಿ (ಪಿಜಿ) ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ ಶೇಕಡಾ 22.5ರಷ್ಟು ಮೀಸಲಾತಿ ಜಾರಿಗೊಳಿಸಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿತು.

2007: ವರ್ಣಭೇದ ನೀತಿ ವಿರುದ್ಧ ಸಿಡಿದು ನಿಂತ ಹಾಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗೆ ಅಹಿಂಸೆ, ಗಾಂಧಿ ತತ್ವಗಳ ಮೂಲಕ ಶ್ರಮಿಸಿದ ದಕ್ಷಿಣ ಆಫ್ರಿಕದ ಆರ್ಚ್ ಬಿಷಪ್ ಡೆಸ್ಮಂಡ್ ಟುಟು ಅವರಿಗೆ ನವದೆಹಲಿಯಲ್ಲಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ `ಗಾಂಧಿ ಪ್ರಶಸ್ತಿ' ಪ್ರದಾನ ಮಾಡಿದರು. ಈ ಪ್ರಶಸ್ತಿಯು 1 ಕೋಟಿ ರೂಪಾಯಿ ನಗದು ಹಣ ಮತ್ತು ಪುರಸ್ಕಾರ ಪತ್ರವನ್ನು ಹೊಂದಿದೆ.

2007: ಬ್ರಾಡ್ ವೇ ರಂಗಭೂಮಿ, ಚಲನಚಿತ್ರ ಮತ್ತು ಟೆಲಿವಿಷನ್ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ಕಾದಂಬರಿಕಾರ ಸಿಡ್ನಿ ಶೆಲ್ಡನ್ (89) ಅವರು ಲಾಸ್ ಏಂಜೆಲಿಸ್ನಲ್ಲಿ ನಿಧನರಾದರು.

2007: ಮಂಗಳೂರಿನ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಕನ್ನಡ ಸಾಹಿತ್ಯ ಪ್ರಶಸ್ತಿಗೆ ನೀಡುವ `ಸಂದೇಶ' ಪ್ರಶಸ್ತಿಗೆ `ನಾಡೋಜ' ಪ್ರಶಸ್ತಿ ಪುರಸ್ಕೃತ ಡಾ. ಚನ್ನವೀರ ಕಣವಿ ಆಯ್ಕೆಯಾದರು.

2005: ಖ್ಯಾತ ಶಿಕ್ಷಣ ತಜ್ಞ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಭೌತಶಾಸ್ತ್ರಜ್ಞ ಡಾ. ಎಚ್. ನರಸಿಂಹಯ್ಯ (1920-2005) ಈದಿನ ನಿಧನರಾದರು.

1971: ಆಲನ್ ಶೆಫರ್ಡ್, ಸ್ಟುವರ್ಟ್ ರೂಸಾ ಮತ್ತು ಎಡ್ಗರ್ ಮಿಶೆಲ್ (mitchell) ಅವರನ್ನು ಹೊತ್ತ ಅಪೋಲೋ 14 ಬಾಹ್ಯಾಕಾಶ ನೌಕೆಯನ್ನು ಗಗನಕ್ಕೆ ಹಾರಿ ಬಿಡಲಾಯಿತು. ಶೆಫರ್ಡ್ ಮತ್ತು ಮಿಶೆಲ್ ಅವರು ಈ ಯಾನದ ಮೂಲಕ ಮೂರನೇ ಬಾರಿ ಚಂದನಲ್ಲಿ ಇಳಿದರು.

1963: ನವಿಲನ್ನು ಭಾರತದ `ರಾಷ್ಟ್ರೀಯ ಪಕ್ಷಿ' ಎಂಬುದಾಗಿ ಘೋಷಿಸಲಾಯಿತು.

1958: ಅಮೆರಿಕಾದ ಮೊದಲ ಉಪಗ್ರಹ `ಎಕ್ಸ್ ಪ್ಲೋರರ್ -1' ಕೇಪ್ ಕೆನವರಾಲ್ನಿಂದ ಉಡ್ಡಯನಗೊಂಡಿತು.

1950: ಅಮೆರಿಕಾ ಅಧ್ಯಕ್ಷ ಹ್ಯಾರಿ ಎಸ್. ಟ್ರೂಮನ್ ಅವರು ಜಲಜನಕ ಬಾಂಬ್ (ಹೈಡ್ರೋಜನ್ ಬಾಂಬ್) ಅಭಿವೃದ್ಧಿ ಪಡಿಸಲು ತಾವು ಆಜ್ಞಾಪಿಸಿರುವುದಾಗಿ ಪ್ರಕಟಿಸಿದರು.

1943: ಸ್ಟಾಲಿನ್ ಗಾರ್ಡಿನಲ್ಲಿ ಹಿಟ್ಲರನ ಆದೇಶಗಳನ್ನು ಉಲ್ಲಂಘಿಸಿ ಫೀಲ್ಡ್ ಮಾರ್ಷಲ್ ಪೌಲಸ್ ಜರ್ಮನ್ 6ನೇ ಸೇನಾ ತುಕಡಿಯೊಂದಿಗೆ ರಷ್ಯಕ್ಕೆ ಶರಣಾಗತರಾದರು.

1938: ರಾಗ ಸಂಯೋಜಕ, ಸಂಗೀತ ತಜ್ಞ ಬೆಂಗಳೂರು ಎಸ್. ಮುಕುಂದ್ ಅವರು ರೆವಿನ್ಯೂ ಕಮೀಷನರ್ ಶ್ರೀನಿವಾಸನ್ - ತಮಿಳು ಲೇಖಕಿ ಜಯಲಕ್ಷ್ಮಿ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1923: ಅಮೆರಿಕಾದ ಕಾದಂಬರಿಕಾರ ನಾರ್ಮನ್ ಮೈಲರ್ ಹುಟ್ಟಿದರು. ಕಾದಂಬರಿಯ ಕಲ್ಪನೆ ಹಾಗೂ ವಿಷಯ ಸಮೃದ್ಧಿಯೊಂದಿಗೆ ನೈಜ ಘಟನೆಗಳನ್ನು ನಿರೂಪಿಸುವ ಪತ್ರಿಕೋದ್ಯಮ ವಿಧಾನವನ್ನು ಇವರು ರೂಪಿಸಿದರು.

1918: ಸೋವಿಯತ್ ಒಕ್ಕೂಟದಲ್ಲಿ ಆಗ ಬಳಕೆಯಲ್ಲಿದ್ದ ಜ್ಯೂಲಿಯನ್ ಕ್ಯಾಲೆಂಡರಿನ ಕೊನೆಯ ದಿನ. ಮರುದಿನದಿಂದ ಅಲ್ಲಿ ಗ್ರೆಗೋರಿಯನ್ ಕ್ಯಾಲೆಂಡರ್ ಬಳಕೆಗೆ ಬಂತು. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಮರುದಿನವನ್ನು `ಫೆಬ್ರುವರಿ 14' ಎಂಬುದಾಗಿ ಪರಿಗಣಿಸಲಾಯಿತು. ಈ ಎರಡು ದಿನಾಂಕಗಳ ನಡುವಣ ವ್ಯತ್ಯಾಸ ಸರಿಪಡಿಸುವ ಸಲುವಾಗಿ ಮಧ್ಯದ ದಿನಾಂಕಗಳನ್ನು ಕಿತ್ತು ಹಾಕಲಾಯಿತು.

1896: ಖ್ಯಾತ ಸಾಹಿತಿ, ಕಾವ್ಯವಾಚನದ ಗಾರುಡಿಗ ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ.ಬೇಂದ್ರೆ- ಅಂಬಿಕಾತನಯದತ್ತ) (1896-1981) ಅವರು ರಾಮಚಂದ್ರ ಪಂತ- ಅಂಬೂತಾಯಿ ದಂಪತಿಯ ಮಗನಾಗಿ ಧಾರವಾಡದ ಪೋತನೀಸರ ಗಲ್ಲಿಯಲ್ಲಿ ಜನಿಸಿದರು. ಜ್ಞಾನಪೀಠ ಪ್ರಶಸ್ತಿ (ನಾಕುತಂತಿ ಕವನ ಸಂಗ್ರಹ) ಪಡೆದ ಕನ್ನಡದ ಮೇರು ಸಾಹಿತಿಗಳ ಪೈಕಿ ಇವರು ಒಬ್ಬರು.

1882: ಫ್ರಾಂಕ್ಲಿನ್ ಡೆಲಾನೊ ರೂಸ್ ವೆಲ್ಟ್ (1882-1945) ಹುಟ್ಟಿದ ದಿನ. ಅಮೆರಿಕದ 32ನೇ ಅಧ್ಯಕ್ಷರಾದ ಇವರು 1933-1945ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದರು. ಇವರ ಆಳ್ವಿಕೆ ಕಾಲದಲ್ಲೇ ಎರಡನೇ ಜಾಗತಿಕ ಸಮರ ನಡೆಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Friday, March 5, 2010

ಇಂದಿನ ಇತಿಹಾಸ History Today ಮಾರ್ಚ್ 05

ಇಂದಿನ ಇತಿಹಾಸ

ಮಾರ್ಚ್ 05

ಭಾರತೀಯ ವಾಯುಪಡೆಯ ಬೃಹತ್ ವಿಮಾನ ಇಲ್ಯೂಷಿನ್- 76 (ವಾಯುಪಡೆಯಿಂದ ಮರು ನಾಮಕರಣಗೊಂಡಿರುವ 'ಗಜರಾಜ್')ನ ಸಹ ಪೈಲಟ್ ಆಗಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು (ಸ್ಕ್ವಾಡ್ರನ್ ಲೀಡರ್ ವೀಣಾ ಸಹರನ್) ಆಯ್ಕೆಯಾದರು. ಈ ಮೂಲಕ ದೇಶದ ಮಹಿಳೆಯರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಯಿತು.

2009: ಗೆಲ್ಲುವ ಸಾಮರ್ಥ್ಯದ ಎದುರು ನಂಬಿಕೊಂಡು ಬಂದ ತತ್ವಕ್ಕೆ ಮಂಡಿ ಊರಿದ ಕಾರಣ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ ಸೇರಿದಂತೆ ರಾಜ್ಯದ ಬಿಜೆಪಿ ನಾಯಕರ ಮಕ್ಕಳು, ಸೋದರ-ಸೋದರಿಯರೆಲ್ಲಾ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಪಡೆದರು. ನವದೆಹಲಿಯಲ್ಲಿ ಬಿಡುಗಡೆ ಮಾಡಿದ ಪಕ್ಷದ ಹನ್ನೊಂದು ಅಭ್ಯರ್ಥಿಗಳ ಪಟ್ಟಿಯಲ್ಲಿ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಅವರ ಮಗ ಶಿವಕುಮಾರ್ ಉದಾಸಿ, ಶಾಸಕ ಉಮೇಶ್ ಕತ್ತಿಯವರ ಸೋದರ ರಮೇಶ್ ಕತ್ತಿ ಮತ್ತು ಸಚಿವ ಶ್ರೀರಾಮುಲು ಸೋದರಿ ಜೆ.ಶಾಂತಿ ಸೇರಿದರು. ಇತ್ತೀಚೆಗೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಮಾಜಿ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜ್ ತುಮಕೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಪಡೆದರು.

2009: ವಿವಾದ ಹಾಗೂ ಚರ್ಚೆಗೆ ಗ್ರಾಸವಾದ ಶಾಂತಿದೂತ ಗಾಂಧಿ ಅವರ ವಸ್ತುಗಳ ಹರಾಜನ್ನು ಕೈಬಿಟ್ಟು ಅವುಗಳನ್ನು ಭಾರತಕ್ಕೆ ಕೊಡುಗೆಯಾಗಿ ಕೊಡಲು ತಾನು ತಾತ್ವಿಕ ಒಪ್ಪಿಗೆ ನೀಡಿರುವುದಾಗಿ ಅವುಗಳ ಮಾಲೀಕ ಜೇಮ್ಸ್ ಓಟಿಸ್ ಹೇಳಿದರು. ಭಾರತ ತನ್ನ ಬಡವರ ಆರೋಗ್ಯಕ್ಕಾಗಿ ಹೆಚ್ಚು ಹಣ ಖರ್ಚು ಮಾಡಲು ಹಾಗೂ ಈ ವಸ್ತುಗಳನ್ನು ಅಂತಾ ರಾಷ್ಟ್ರೀಯ ಪ್ರದರ್ಶನದಲ್ಲಿ ಪ್ರದರ್ಶಿಸಲು ಭಾರತದ ರಾಜತಾಂತ್ರಿಕರು ಒಪ್ಪಿಕೊಂಡಿದ್ದಾರೆ, ನನ್ನ ಪ್ರಸ್ತಾವಗಳಿಗೆ ಒಪ್ಪಿಕೊಂಡದ್ದಕ್ಕೆ ಪ್ರತಿಯಾಗಿ ನಾನು ಹರಾಜು ರದ್ದು ಮಾಡುವ ತೀರ್ಮಾನಕ್ಕೆ ಬಂದೆ ಎಂದು ಜೇಮ್ಸ್ ವಿವರಿಸಿದರು.

2009: ಅಂಧರು ಹಾಗೂ ನಿಮ್ನ ದೃಷ್ಟಿವುಳ್ಳವರಿಗೆ ಅರಿವು ಮೂಡಿಸಲು ವೆಬ್‌ಸೈಟ್‌ ಒಂದನ್ನು ಪ್ರಾರಂಭಿಸಲಾಗಿದೆ, ಇದು ದೇಶದಲ್ಲೇ ಮೊದಲು ಎಂದು ಇದಕ್ಕಾಗಿ ತೊಡಗಿಸಿಕೊಂಡ ಸ್ಕೋರ್ ಫೌಂಡೇಶನ್ ಸ್ವಯಂ ಸೇವಾಸಂಸ್ಥೆ ನವದೆಹಲಿಯಲ್ಲಿ ಪ್ರಕಟಿಸಿತು. ವೆಬ್‌ಸೈಟನ್ನು ಅಂಧರಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಅರಿವು ಮೂಡಿಸಲು ರೂಪಿಸಲಾಗಿದೆ. ಅಂಧರ ಸಮಸ್ಯೆ ಅವರ ಅಂಧತ್ವವಲ್ಲ. ಅವರ ಕುಟುಂಬದ, ಸಮಾಜದ ಮನೋಭಾವ ಮತ್ತು ಆಲೋಚನೆ ಎಂದು ಸ್ಕೋರ್ ಫೌಂಡೇಶನ್ ಸ್ವಯಂ ಸೇವಾಸಂಸ್ಥೆ ಮುಖ್ಯಸ್ಥ ಜಾರ್ಜ್ ಅಬ್ರಹಾಂ ವೆಬ್‌ಸೈಟ್ ಬಿಡುಗಡೆ ಸಂದರ್ಭದಲ್ಲಿ ಹೇಳಿದರು. ಈ ವೆಬ್ ಸೈಟ್ ಸಾಫ್ಟ್‌ವೇರನ್ನು ಅಮೆರಿಕದಿಂದ 800 ಡಾಲರಿಗೆ ಕೊಂಡುಕೊಳ್ಳಲಾಗಿದೆ. ಈ ಸ್ವಯಂಸೇವಾ ಸಂಸ್ಥೆ ರೇಡಿಯೋ ಕಾರ್ಯಕ್ರಮವನ್ನೂ ಬಿತ್ತರಿಸುತ್ತಿದ್ದು ಆಕಾಶವಾಣಿಯ 30 ನಿಲಯಗಳಿಂದ ಪ್ರಸಾರ ಮಾಡಲಾಗುತ್ತಿದೆ. ದೇಶದಲ್ಲಿ 16 ದಶಲಕ್ಷ ಮಂದಿ ಅಂಧರಿದ್ದು 28 ದಶಲಕ್ಷ ಮಂದಿ ನಿಮ್ನ ದೃಷ್ಟಿಯವರಿದ್ದಾರೆ.

2009: ಭಾರತೀಯ ವಾಯುಪಡೆಯ ಬೃಹತ್ ವಿಮಾನ ಇಲ್ಯೂಷಿನ್- 76 (ವಾಯುಪಡೆಯಿಂದ ಮರು ನಾಮಕರಣಗೊಂಡಿರುವ 'ಗಜರಾಜ್')ನ ಸಹ ಪೈಲಟ್ ಆಗಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಆಯ್ಕೆಯಾದರು. ಈ ಮೂಲಕ ದೇಶದ ಮಹಿಳೆಯರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಯಿತು. ಸ್ಕ್ವಾಡ್ರನ್ ಲೀಡರ್ ವೀಣಾ ಸಹರನ್, ರಷ್ಯಾ ನಿರ್ಮಿತ ಈ ವಿಮಾನವನ್ನು 40 ಗಂಟೆಗಳು ಹಾರಾಡಿಸಿದ ಬಳಿಕ ಪೂರ್ಣ ಪ್ರಮಾಣದ ಪೈಲಟ್ ಆಗುವರು. 'ಇದೊಂದು ಮಹತ್ವದ ಸಾಧನೆ. ಇತ್ತೀಚೆಗಷ್ಟೇ ಐಎಲ್- 76 ವಿಮಾನವನ್ನು ಚಲಾಯಿಸಿರುವ ನಾನು ಪರಿಣತಿ ಹೊಂದುವ ಎರಡನೇ ಹಂತದ ತರಬೇತಿಯನ್ನು ಎದುರು ನೋಡುತ್ತಿದ್ದೇನೆ. ಮಹಿಳಾ ಅಧಿಕಾರಿಗಳಿಗೆ ವಾಯುಪಡೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿರುವುದು ಉತ್ತಮ ಬೆಳವಣಿಗೆ' ಎಂದು 27 ವರ್ಷದ ವೀಣಾ ಪ್ರತಿಕ್ರಿಯಿಸಿದರು. ಜೈಪುರ ಮೂಲದ ಅವರ ತಂದೆ ಸೇನಾಪಡೆಯಲ್ಲಿ ಕರ್ನಲ್. ವೀಣಾ ಅವರು ಆಗ್ರಾದ ಸೇನಾ ನೆಲೆಯಲ್ಲಿ ಎರಡು ತಿಂಗಳ ಮೂಲ ತರಬೇತಿ ಪೂರೈಸಿ ಹೆಚ್ಚಿನ ತರಬೇತಿಗಾಗಿ ನಾಗಪುರಕ್ಕೆ ಬಂದರು. ದೆಹಲಿ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪದವಿ ಪಡೆದ ವೀಣಾ, 2002ರಿಂದ ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಒಂದೂವರೆ ದಶಕದ ಹಿಂದೆ ವಾಯುಪಡೆಗೆ ಮಹಿಳೆಯರ ನಿಯೋಜನೆ ಆರಂಭವಾದಾಗಿನಿಂದಲೂ ಐಎಲ್- 76 ವಿಮಾನವನ್ನು ಚಲಾಯಿಸುವ ಅವಕಾಶ ಮಹಿಳೆಯರಿಗೆ ಮುಕ್ತವಾಗಿತ್ತು. ಆದರೆ ಹೆಚ್ಚಿನ ಪರಿಣತಿ ಬೇಡುವ ಈ ಹುದ್ದೆಗೆ ಈವರೆಗೂ ಯಾರೂ ಆಯ್ಕೆಯಾಗಿರಲಿಲ್ಲ. ನಾಲ್ಕು ಬಗೆಯ ವಿಮಾನಗಳನ್ನು ಚಲಾಯಿಸಿರುವ ವೀಣಾ ಅವರ ಕಠಿಣ ಪರಿಶ್ರಮಕ್ಕೆ ಐಎಲ್‌ನ ಅವಕಾಶ ದೊರಕಿತು.

2008: ಮಹಾರಾಷ್ಟ್ರ ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿ ಕರ್ನಾಟಕದ ರಾಜಕಾರಣಕ್ಕೆ ಮರಳಲು ನಿರ್ಧರಿಸುವುದರೊಂದಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸುದೀರ್ಘಾವಧಿಯ ಊಹಾಪೋಹದ ಆಟಕ್ಕೆ ತೆರೆ ಎಳೆದರು. ಕಾಂಗ್ರೆಸ್ ಪಕ್ಷದೊಳಗಿನ `ಅತಿರಥ-ಮಹಾರಥ'ರ ಕಡುವಿರೋಧದ ಹೊರತಾಗಿಯೂ ಸೋನಿಯಾ ಗಾಂಧಿ ಅವರು ಕೃಷ್ಣ ಅವರ ಇಷ್ಟಾರ್ಥವನ್ನು ನೆರವೇರಿಸಿಕೊಟ್ಟರು. ಈದಿನ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಮಹಾರಾಷ್ಟ್ರ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡುವ ತಮ್ಮ ನಿರ್ಧಾರವನ್ನು ತಿಳಿಸಿದ ಕೃಷ್ಣ ನಂತರ ಅಧಿಕೃತವಾಗಿ ತಮ್ಮ ರಾಜೀನಾಮೆಯನ್ನು ಕಳುಹಿಸಿಕೊಟ್ಟರು.

2008: ಎರಡು ದಶಕಗಳ ಹಿಂದೆ ಎಳೆಯ ಬಾಲಕನೊಬ್ಬನನ್ನು ತನ್ನ ವಿಕೃತ ಕಾಮಕ್ಕೆ ಬಳಸಿಕೊಳ್ಳಲು ಯತ್ನಿಸಿದರೆಂಬ ಆರೋಪ ಎದುರಿಸುತ್ತಿದ್ದ ಶ್ರೀ ಸಿದ್ದಗಂಗಾ ಮಠಕ್ಕೆ ಸೇರಿದ್ದ ಗೌರಿಶಂಕರ ಸ್ವಾಮಿಗಳು ನಿರ್ದೋಷಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಮಠದಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನು 1986ರಲ್ಲಿ ಪೊಲೀಸರಿಗೆ ದೂರು ನೀಡಿ, ಅದರಲ್ಲಿ ಗೌರಿಶಂಕರ ಸ್ವಾಮಿಗಳು ತನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದರೆಂದು ಆರೋಪಿಸಿದ್ದನು. ಈ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ಸರಿಯಾದ ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣ ನೀಡಿ 1998ರ ನವೆಂಬರಿನಲ್ಲಿ ಸ್ವಾಮಿಗಳನ್ನು ನಿರ್ದೋಷಿ ಎಂದು ತೀರ್ಪು ನೀಡಿತ್ತು. ಆದರೆ ಈ ತೀರ್ಪಿನ ವಿರುದ್ಧ ಬಂದ ಮೇಲ್ಮನವಿಯ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಗೌರಿಶಂಕರ ಸ್ವಾಮಿಗಳಿಗೆ ಹತ್ತು ವರ್ಷ ಜೈಲು ಶಿಕ್ಷೆ ಮತ್ತು 25 ಲಕ್ಷ ರೂಪಾಯಿಗಳ ದಂಡ ವಿಧಿಸಿ 2004ರಲ್ಲಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಗೌರಿಶಂಕರ ಸ್ವಾಮಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದರು. ನ್ಯಾಯಮೂರ್ತಿಗಳಾದ ಎಸ್ ಬಿ ಸಿನ್ಹಾ, ಎಚ್ ಎಸ್ ಬೇಡಿ ಅವರನ್ನು ಒಳಗೊಂಡ ನ್ಯಾಯಪೀಠವು ಗೌರಿಶಂಕರ ಸ್ವಾಮಿಗಳು ನಿರ್ದೋಷಿ ಎಂದು ತೀರ್ಪು ನೀಡಿ, ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿತು.

2008: ಖ್ಯಾತ ಮೊಸಳೆ ಸಂರಕ್ಷಕ ಸ್ಟೀವ್ ಇರ್ವಿನ್ ಅವರ ಪತ್ನಿ ಟೆರ್ರಿ ಅವರು ಸಾಲ ಮರುಪಾವತಿಗೆ ಸಂಬಂಧಿಸಿದ ಕಾನೂನು ಸಮರದ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದರು. ಸುಮಾರು 2.3ದಶಲಕ್ಷ ಡಾಲರ್ ಮೊತ್ತಕ್ಕಿಂತ ಹೆಚ್ಚಿನ ಸಾಲವನ್ನು ಮರುಪಾವತಿ ಮಾಡದ ಕಾರಣ ಇರ್ವಿನ್ ಅವರ ಪತ್ನಿ ವಿರುದ್ಧ ಕಳೆದ ತಿಂಗಳು ಸಾಲ ವಸೂಲಾತಿ ಸಂಸ್ಥೆ ( ಅಲಿಸ್ಸಾ ಟ್ರೆಸರಿ ಸರ್ವೀಸ್) ದಾವೆ ಹೂಡಿತ್ತು. ಸಿಂಗಪುರ ಮೂಲದ ಬ್ಯಾಂಕ್, ಇರ್ವಿನ್ ಹಾಗೂ ಟೆರ್ರಿ ಅವರು ಸ್ಥಾಪಿಸಲು ಉದ್ದೇಶಿಸಿದ್ದ ವನ್ಯಜೀವಿ ಧಾಮಕ್ಕೆ ಹಣಕಾಸು ನೆರವು ನೀಡಿತ್ತು. 2006 ರಲ್ಲಿ ಟಿವಿ ಧಾರಾವಾಹಿ ಚಿತ್ರೀಕರಣದ ವೇಳೆ ಇರ್ವಿನ್ ಮೃತರಾಗಿದ್ದರು.

2008: ಪಾಕಿಸ್ಥಾನದಲ್ಲಿ 1999ರಲ್ಲಿ ಸಂಭವಿಸಿದ ನಾಲ್ಕು ಬಾಂಬ್ ಸ್ಫೋಟಗಳಲ್ಲಿ ಭಾಗಿಯಾದ ಆರೋಪದ ಮೇಲೆ ಮರಣದಂಡನೆ ಎದುರಿಸುತ್ತಿರುವ ಭಾರತದ ಸರಬ್ಜಿತ್ ಸಿಂಗ್ ಅವರಿಗೆ ಕ್ಷಮಾದಾನ ನೀಡಲು ಅಧ್ಯಕ್ಷ ಪರ್ವೇಜ್ ಮುಷರಫ್ ನಿರಾಕರಿಸಿದರು. ಸರಬ್ಜಿತ್ ಸಿಂಗ್ ಅವರನ್ನು ಭಾರತದ ಗೂಢಚಾರ ಮಂಜಿತ್ ಸಿಂಗ್ ಎಂದೇ ಪಾಕಿಸ್ಥಾನ ಭಾವಿಸಿದೆ. ಲಾಹೋರ್ ಮತ್ತು ಮುಲ್ತಾನಿನಲ್ಲಿ ಸಂಭವಿಸಿದ ಸ್ಫೋಟಗಳ ಹಿಂದೆ ಮಂಜಿತ್ ಸಿಂಗ್ ಕೈವಾಡವಿತ್ತೆಂದು ಆರೋಪಿಸಲಾಗಿದೆ. ಕೋರ್ಟ್ ಇದನ್ನು ಎತ್ತಿ ಹಿಡಿದು ಮರಣದಂಡನೆ ವಿಧಿಸಿದೆ. ತನಗೆ ಕ್ಷಮಾದಾನ ನೀಡಬೇಕು ಎಂದು ಸರಬ್ಜಿತ್ ಸಿಂಗ್ ಅಧ್ಯಕ್ಷ ಮುಷರಫ್ ಅವರಿಗೆ ಮನವಿ ಮಾಡಿದ್ದರು. `ಸಂಪೂರ್ಣ ಪರಿಶೀಲನೆ ಬಳಿಕ ಕ್ಷಮಾದಾನದ ಅರ್ಜಿಯನ್ನು ಅಧ್ಯಕ್ಷರು ತಿರಸ್ಕರಿಸಿದರು' ಎಂದು ಪಾಕಿಸ್ಥಾನದ ಸುದ್ದಿಸಂಸ್ಥೆ ಎನ್ ಎನ್ ಐ ತಿಳಿಸಿತು.

2008: ಬೆಂಗಳೂರು ಮತ್ತು ಹೈದರಾಬಾದಿನಲ್ಲಿ ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಆರಂಭವಾಗಲು ಇನ್ನು ಕೆಲವೇ ದಿನಗಳು ಉಳಿದಿರುವಂತೆಯೇ ಸಂಸದೀಯ ಸಮಿತಿಯು ಈ ಎರಡು `ಹೊಸ ವಿಮಾನ ನಿಲ್ದಾಣ'ಗಳನ್ನು ಅಭಿವೃದ್ಧಿ ಪಡಿಸಿರುವ ಖಾಸಗಿ ಸಂಸ್ಥೆಗಳೊಂದಿಗಿನ ಒಪ್ಪಂದವನ್ನು ಪುನರ್ ಪರಿಷ್ಕರಣೆ ಮಾಡಿ, ಹಳೆಯ ವಿಮಾನ ನಿಲ್ದಾಣಗಳನ್ನೂ ಉಳಿಸಿಕೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತು. `ಈ ಎರಡೂ ನಗರಗಳಲ್ಲಿ ಇರುವ ಹಳೆಯ ವಿಮಾನ ನಿಲ್ದಾಣಗಳನ್ನು ಮುಚ್ಚುವುದು ಅಥವಾ ಇನ್ನಷ್ಟು ಸುಧಾರಿಸುವ ಬಗ್ಗೆ ತೀರ್ಮಾನಿಸಲು ಸರ್ಕಾರಕ್ಕೆ ಇನ್ನೂ ಸಮಯವಿದ್ದು, ಪರಿಷ್ಕೃತ ಒಪ್ಪಂದದ ಮೂಲಕ ಹಳೆಯ ವಿಮಾನ ನಿಲ್ದಾಣಗಳನ್ನು ಉಳಿಸಿಕೊಳ್ಳಬಹುದು' ಎಂದೂ ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಂಸದೀಯ ಸಮಿತಿಯ ಮುಖ್ಯಸ್ಥರಾದ ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಹೇಳಿದರು.

2007: ಪೈಲಟ್ ರಹಿತ ಯುದ್ಧ ವಿಮಾನ `ಲಕ್ಷ್ಯ'ದ ಪರೀಕ್ಷಾರ್ಥ ಪ್ರಯೋಗವನ್ನು ಭಾರತವು ಬಾಲಸೋರ್ ಸಮೀಪದ ಚಂಡೀಪುರದಲ್ಲಿ ಯಶಸ್ವಿಯಾಗಿ ನಡೆಸಿತು. ಬೆಂಗಳೂರಿನ ವಿಮಾನ ಅಭಿವೃದ್ಧಿ ಸಂಸ್ಥೆಯಲ್ಲಿ (ಎಡಿಇ) ಸಿದ್ಧ ಪಡಿಸಲಾಗಿರುವ ಈ ವಿಮಾನ ಪೈಲಟ್ಗಳಿಲ್ಲದೆಯೇ ಗುರಿಯನ್ನು ನಾಶ ಪಡಿಸುವ ಸಾಮರ್ಥ್ಯ ಹೊಂದಿದೆ.

2007: ಬೊಫೋರ್ಸ್ ಪ್ರಕರಣದ ಆರೋಪಿ ಒಟ್ಟಾವಿಯೊ ಕ್ವಟ್ರೋಚಿ ಹಸ್ತಾಂತರ ಕೋರಿ ಭಾರತ ಸರ್ಕಾರವು ಸಲ್ಲಿಸಿದ 250 ಪುಟಗಳ ದಾಖಲೆಯು ಕ್ರಮಬದ್ಧವಾಗಿದೆ ಎಂದು ನಿರ್ಧರಿಸಿದ ಅರ್ಜೆಂಟೀನಾ ಸರ್ಕಾರವು ಅದನ್ನು ಮಿಸಿಯೊನೆಸ್ ಪ್ರಾಂತದ ಎಲ್ ಡೊರಾಡೊದಲ್ಲಿನ ಫೆಡರಲ್ ಕೋರ್ಟಿಗೆ ಕಳುಹಿಸಲು ನಿರ್ಧರಿಸಿತು. ಪ್ರಾಸೆಕ್ಯೂಷನ್ ನಿರ್ದೇಶಕ ಎಸ್. ಕೆ. ಶರ್ಮಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಕೇಶವ ಮಿಶ್ರ ಅವರನ್ನು ಒಳಗೊಂಡ ದ್ವಿಸದಸ್ಯ ಸಿಬಿಐ ತಂಡವು ಹಸ್ತಾಂತರಕ್ಕೆ ಸಂಬಂಧಿಸಿದ ಕೋರಿಕೆ ಹಾಗೂ ದಾಖಲೆಗಳನ್ನು ಕಳೆದ ವಾರ ಅರ್ಜೆಂಟೀನಾ ಸರ್ಕಾರಕ್ಕೆ ಸಲ್ಲಿಸಿತ್ತು.

2007: ಜೆಮ್ ಶೆಡ್ ಪುರದ ಜೆಎಂಎಂ ಸಂಸತ್ ಸದಸ್ಯ ಸುನೀಲ್ ಮಹತೋ ಅವರ ಕೊಲೆ ಪ್ರಕರಣವನ್ನು ಜಾರ್ಖಂಡ್ ಸರ್ಕಾರವು ಸಿಬಿಐ ತನಿಖೆಗೆ ಒಪ್ಪಿಸಿತು.

1997: ಮುಂಬೈಯ ಪಾಂಡುರಂಗ ಶಾಸ್ತ್ರಿ ಅಠವಳೆ ಅವರನ್ನು ಧಾರ್ಮಿಕ ಪ್ರಗತಿಗಾಗಿ ನೀಡಲಾಗುವ 1997ರ `ಜಾನ್ ಎಂ.ಟಿ. ಟೆಂಪ್ಲೆಟನ್ ಪ್ರಶಸ್ತಿ'ಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಲಾಯಿತು. ಈ ಪ್ರಶಸ್ತಿಯ ಮೊತ್ತ 12 ಲಕ್ಷ ಡಾಲರುಗಳು.

1995: ಭಾರತ ಮತ್ತು ಚೀನಾ ಹೊಸ ಗಡಿ ರೇಖೆಯನ್ನು ಗುರುತಿಸಿದವು. ಮಿಲಿಟರಿ ಅಧಿಕಾರಿಗಳ ಮಾತುಕತೆಗೆ ನೆರವಾಗಲು ಸಿಕ್ಕಿಂನ ನಾಥೂಲಾ ಪ್ರದೇಶವನ್ನು ಗುರುತಿಸಲಾಯಿತು.

1990: ಭೋಪಾಲಿನಲ್ಲಿ 1984ರಲ್ಲಿ ಸಂಭವಿಸಿದ ಭೀಕರ ವಿಷಾನಿಲ ದುರಂತದಲ್ಲಿ ತೊಂದರೆಗೆ ಒಳಗಾದ 5 ಲಕ್ಷ ಜನರಿಗೆ 360 ಕೋಟಿ ರೂಪಾಯಿಗಳ ನೆರವನ್ನು ಸರ್ಕಾರ ಘೋಷಿಸಿತು.

1953: ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ (1922-53) ಹಾಗೂ ಸೋವಿಯತ್ ಒಕ್ಕೂಟದ ಪ್ರಧಾನಿಯಾಗಿದ್ದ (1941-53) ಜೋಸೆಫ್ ಸ್ಟಾಲಿನ್ ತಮ್ಮ 73ನೇ ವಯಸ್ಸಿನಲ್ಲಿ ನಿಧನರಾದರು. ಇವರು ಸುಮಾರು ಕಾಲು ದಶಕ ಕಾಲ ಸೋವಿಯತ್ ಒಕ್ಕೂಟದ ಪ್ರಶ್ನಾತೀತ ನಾಯಕರಾಗಿ ಮೆರೆದರು.

1940: ಮಹಾತ್ಮಾ ಗಾಂಧಿಯವರು ಸೆಗಾಂವ್ ಗ್ರಾಮಕ್ಕೆ `ಸೇವಾ ಗ್ರಾಮ' ಎಂಬುದಾಗಿ ಮರುನಾಮಕರಣ ಮಾಡಿದರು.

1916: ಬಿಜೊಯಾನಂದ `ಬಿಜು' ಪಟ್ನಾಯಕ್ (1916-1997) ಹುಟ್ಟಿದರು. ಎರಡನೇ ಜಾಗತಿಕ ಯುದ್ಧದಲ್ಲಿಪಾಲ್ಗೊಂಡ್ದಿದ ಭಾರತದ ಈ ವಿಮಾನ ಚಾಲಕ, ಸ್ವಾತಂತ್ರ್ಯ ಹೋರಾಟಗಾರರೂ, ವಾಣಿಜ್ಯ ವಿಮಾನ ಉದ್ಯಮಿಯೂ ಆಗಿದ್ದರು. 1961-63 ಮತ್ತು
1990-95ರ ಅವಧಿಗಳಲ್ಲಿ ಎರಡು ಬಾರಿ ಒರಿಸ್ಸಾ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

1913: ಕಿರಾಣ ಘರಾಣ ಸಂಗೀತ ಪದ್ಧತಿಗೆ ದೊಡ್ಡ ಕೀರ್ತಿ ತಂದ ಡಾ. ಗಂಗೂಬಾಯಿ ಹಾನಗಲ್ ಅವರು ಚಿಕ್ಕೂರಾವ್ ನಾಡಗೀರ- ಅಂಬಾಬಾಯಿ ದಂಪತಿಯ ಮಗಳಾಗಿ ಧಾರವಾಡದ ಶುಕ್ರವಾರ ಪೇಟೆಯಲ್ಲಿ ಜನಿಸಿದರು. ತಾಯಿ ಅಂಬಾಬಾಯಿ ಅವರೇ ಇವರಿಗೆ ಸಂಗೀತದ ಗುರು ಹಾಗೂ ಎಲ್ಲ ಸಾಧನೆಗಳ ಪ್ರೇರಕ ಶಕ್ತಿ. ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸರ್ಕಾರದ ಪದ್ಮಭೂಷಣ, ಪದ್ಮವಿಭೂಷಣ, ರೂ-ಇ-ಗಜಲ್, ಬೇಗಂ ಅಕ್ತರ್ ಪ್ರಶಸ್ತಿ ಇತ್ಯಾದಿ ಸೇರಿದಂತೆ ಇವರಿಗೆ ಲಭಿಸಿದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ.

1912: ಕಥೆಗಾರ್ತಿ ಕೊಡಗಿನ ಗೌರಮ್ಮ ಅವರು ಹುಟ್ಟಿದ ದಿನ. ವಕೀಲ ಹಾಗೂ ಪ್ಲಾಂಟರ್ ಆಗಿದ್ದ ಎನ್.ಎಸ್. ರಾಮಯ್ಯ ಮತ್ತು ನಂಜಕ್ಕ ದಂಪತಿಯ ಮಗಳಾಗಿ ಜನಿಸಿದ ಗೌರಮ್ಮ 1939ರ ಏಪ್ರಿಲ್ 13ರಂದು ನಿಧನರಾದರು. 1931ರಿಂದ 1939ರ ಅವಧಿಯಲ್ಲಿ ಅವರು 21 ಸದಭಿರುಚಿಯ, ಮನದಾಳದ ಅನಿಸಿಕೆಗಳ ಚಿತ್ರ ಕೊಡುವ ಕಥೆಗಳನ್ನು ರಚಿಸಿ ಹೆಸರು ಪಡೆದರು.

1851: ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಸ್ಥಾಪನೆಗೊಂಡಿತು.

1730: ಆಂಟನಿ ಲೌಮೆಟ್ ಡೆ ಲಾ ಮೋತ್ ಕಾಡಿಲ್ಯಾಕ್ (1658-1730) ಹುಟ್ಟಿದ. ಫ್ರೆಂಚ್ ಯೋಧ, ಸಂಶೋಧಕ ಹಾಗೂ ಫೆಂಚ್ ಉತ್ತರ ಅಮೆರಿಕಾದ ಆಡಳಿತಗಾರನಾದ ಈತ ಡೆಟ್ರಾಯಿಟ್ ನಗರದ ಸ್ಥಾಪಕ. ಸಿಟಿ ಆಫ್ ಕಾಡಿಲ್ಯಾಕ್, ಕಾಡಿಲ್ಯಾಕ್ ಮೌಂಟನ್, ಕಾಡಿಲ್ಯಾಕ್ ಆಟೋಮೊಬೈಲ್ ಇವುಗಳಿಗೆಲ್ಲ ಈತನ ಹೆಸರನ್ನೇ ಇಡಲಾಗಿದೆ.

1512: ಗೆರಾರ್ಡಸ್ ಮರ್ಕೇಟರ್ (1512-1594) ಹುಟ್ಟಿದ ದಿನ. ನಕಾಶೆಗಾರನಾದ ಈತ ನಕಾಶೆಗಳ ಸಂಗ್ರಹಕ್ಕೆ `ಅಟ್ಲಾಸ್' ಎಂಬ ಶಬ್ದವನ್ನು ಅನುಷ್ಠಾನಕ್ಕೆ ತಂದ. ಈತನ ಅತ್ಯಂತ ಪ್ರಮುಖ ಸಂಶೋಧನೆ `ನಕಾಶೆ' (ಮ್ಯಾಪ್). ಮುಂದೆ ಇದು ಮರ್ಕೇಟರ್ ಪ್ರೊಜೆಕ್ಷನ್ ಎಂದೇ ಖ್ಯಾತಿ ಪಡೆಯಿತು.

ಇಂದಿನ ಇತಿಹಾಸ History Today ಜನವರಿ 30

ಇಂದಿನ ಇತಿಹಾಸ

ಜನವರಿ 30

ಪ್ರಸಿದ್ಧ ಕಾದಂಬರಿಕಾರ ವ್ಯಾಸರಾಯ ಬಲ್ಲಾಳ (85) ಅವರು ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಸ್ವಂತ ಮನೆ 'ಉತ್ತರಾಯಣ'ದಲ್ಲಿ ಈದಿನ ರಾತ್ರಿ ನಿಧನರಾದರು. ಉಡುಪಿಯ ನಿಡಂಬೂರು ವ್ಯಾಸರಾಯ ಬಲ್ಲಾಳರು (ಜನನ: ಡಿ.1, 1923) ಕನ್ನಡ ಸಾರಸ್ವತ ಲೋಕದಲ್ಲಿ `ಬಂಡಾಯದ ಬಲ್ಲಾಳ' ಎಂದೇ ಪ್ರಸಿದ್ಧರು. ಕನ್ನಡ ಕಾದಂಬರಿ ಲೋಕಕ್ಕೆ ಹೊಸ ಜಗತ್ತು ಹಾಗೂ ಸಂವೇದನೆಗಳನ್ನು ಪರಿಚಯಿಸಿದ `ಬಂಡಾಯ' ಬಲ್ಲಾಳರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕಾದಂಬರಿ.

ಇಂದು `ಹುತಾತ್ಮದಿನ'. 1948ರಲ್ಲಿ ಈದಿನ ಸಂಜೆ 5.10 ಗಂಟೆಗೆ ನವದೆಹಲಿಯ ಬಿರ್ಲಾ ಹೌಸಿನಲ್ಲಿ ಮಹಾತ್ಮಾ ಗಾಂಧೀಜಿ ಅವರು ನಾಥೂರಾಂ ಗೋಡ್ಸೆಯ ಗುಂಡೇಟಿಗೆ ಬಲಿಯಾಗಿ ಅಸು ನೀಗಿದರು. ಭಾರತದಲ್ಲಿ ಈ ದಿನವನ್ನು `ಹುತಾತ್ಮ ದಿನ'ವಾಗಿ ಆಚರಿಸಲಾಗುತ್ತದೆ.

2009: ವಿಶ್ವದ ಮೂರನೇ ಅತಿದೊಡ್ಡ ಸರಕು-ಸಾಗಣೆ ವಿಮಾನ ಎಫ್ ಕಾರ್ಗೊ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈದಿನ ಬಂದಿಳಿಯಿತು. ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ನಡೆಯುವ ವೈಮಾನಿಕ ಪ್ರದರ್ಶನಕ್ಕೆ ಸಾಧನ-ಸರಕುಗಳನ್ನು ಈ ವಿಮಾನ ಹೊತ್ತು ತಂದಿತು. ಈಗಾಗಲೇ 30 ವಿಶ್ವದಾಖಲೆ ಮಾಡಿರುವ ಈ ವಿಮಾನ, 17,1219 ಕೆ.ಜಿ. ತೂಕದಷ್ಟು ಸರಕನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

2009: ಬಂಧನಕ್ಕೆ ಒಳಗಾದ ಬಿಜೆಪಿ ಶಾಸಕ ವೈ.ಸಂಪಂಗಿ ಅವರು 50 ಸಾವಿರ ರೂಪಾಯಿ ನಗದು ಮತ್ತು ರೂ 4.50 ಲಕ್ಷ ಮೊತ್ತದ ಚೆಕ್ ತೆಗೆದುಕೊಂಡಿರುವುದು ನಿಜ ಎಂಬುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರೂಪಕ್‌ಕುಮಾರ್ ದತ್ತ ತಿಳಿಸಿದರು. ಉದ್ಯಮಿ ಫರೂಕ್ ಮತ್ತು ನಯಾಜ್ ನಡುವಿನ ನಿವೇಶನ ವಿವಾದವನ್ನು ಬಗೆಹರಿಸುವ ದೃಷ್ಟಿಯಿಂದ, ನಯಾಜ್‌ಗೆ ನೀಡುವುದಕ್ಕಾಗಿ ಹಣ ಮತ್ತು ಚೆಕ್ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರು ಲೋಕಾಯುಕ್ತರ ವಿರುದ್ಧವೇ ಆರೋಪ ಮಾಡಿರುವ ವಿಚಾರ ತಮಗೆ ಗೊತ್ತಿಲ್ಲ ಎಂದು ಇಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.

2009: ಮಂಗಳೂರು ನಗರ ಹೊರವಲಯದ ಗುರುಪುರ ಅಮೈ ಎಂಬಲ್ಲಿ ಈದಿನ ಬೆಳಗ್ಗೆ ಉಡುಪಿ ಜಿಲ್ಲೆಯ ನಂದಿಕೂರು ಅಡ್ವೆ ಕೋಟೆ ಬಾಳಿಕೆಯ ನಿವಾಸಿ ಧನಂಜಯ ಎಂಬಾತ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ. ರವಿ ಪೂಜಾರಿ ಸಹಚರ ಎನ್ನಲಾದ ಧನಂಜಯ ಮಂಗಳೂರಿನಲ್ಲಿ ಈಚೆಗೆ ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಫ್ತಾ ವಸೂಲಿಗೆ ಪ್ರಯತ್ನಿಸಿದ್ದ ಎಂಬ ಆರೋಪವಿತ್ತು. ರಾತ್ರಿ ಎರಡು ಗಂಟೆ ಸುಮಾರಿಗೆ ಒಮ್ನಿ ಕಾರಿನಲ್ಲಿ ಸಾಗುತ್ತಿದ್ದ ಮೂವರನ್ನು ಪೊಲೀಸರು ತಡೆದರು. ಆಗ ಅವರು ವಾಹನವನ್ನು ವೇಗವಾಗಿ ಚಲಾಯಿಸಿ ಪರಾರಿಯಾಗಲು ಯತ್ನಿಸಿದರು. ಅಲ್ಲದೇ ಪೊಲೀಸರತ್ತ ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿದಾಳಿ ನಡೆಸಿದ ಪರಿಣಾಮ ಧನಂಜಯ ಮೃತನಾದ. ಉಳಿದಿಬ್ಬರು ತಪ್ಪಿಸಿಕೊಂಡರು.

2009: ಬರಾಕ್ ಒಬಾಮ ಅವರು ಅಧ್ಯಕ್ಷರಾದುದರಿಂದ ತೆರವಾಗಿದ್ದ ಇಲಿನಾಯ್ ಸೆನೆಟ್ ಸ್ಥಾನವನ್ನು ಅಧಿಕಾರ ದುರ್ಬಳಕೆ ಮಾಡಿಕೊಂಡು ಮಾರಾಟ ಮಾಡಿದ ಆಪಾದನೆಗಾಗಿ ಗೌರ್ನರ್ ರಾಡ್ ಬಾಗ್ಲೊಜೆವಿಕ್ ಅವರನ್ನು ವಾಗ್ದಂಡನೆಯ ಮೂಲಕ ಉಚ್ಛಾಟಿಸಲಾಯಿತು. ಬಾಗ್ಲೊಜೆವಿಕ್ ಅವರ ಸ್ಥಾನಕ್ಕೆ ಲೆ. ಗೌರ್ನರ್ ಪ್ಯಾಟ್ ಕ್ವಿನ್ ಅವರನ್ನು ಆಯ್ಕೆ ಮಾಡಲಾಯಿತು. ಇಲಿನಾಯ್ ಸೆನೆಟ್ ಬಾಗ್ಲೊಜೆವಿಕ್ ಅವರನ್ನು ಉಚ್ಛಾಟಿಸುವ ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಿತು.

2009: ಆಸ್ಕರ್ ಪ್ರಶಸ್ತಿಗೆ ನಾಮಾಂಕಿತಗೊಂಡ ಆಂಗ್ಲಭಾಷಾ ಚಿತ್ರ 'ಸ್ಲಮ್‌ಡಾಗ್ ಮಿಲಿಯನೇರ್'ಗೆ ಪ್ರಶಸ್ತಿಗಳ ಸುರಿಮಳೆ ಮುಂದುವರಿಯಿತು. ಇಲ್ಲಿ ನಡೆದ ರಿಚರ್ಡ್ ಅಟೆನ್ ಬರೊ ಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿತು. ವರ್ಷದ ಅತ್ಯುತ್ತಮ ಚಿತ್ರ 'ಪ್ರಶಸ್ತಿ ಸ್ಲಮ್ ಡಾಗ್'' ಮುಡಿಗೇರಿತು. ಇದಲ್ಲದೇ, ಈ ಚಿತ್ರ ನಿರ್ದೇಶಿಸಿದ ಡ್ಯಾನಿ ಬೊಯ್ಲೆ ಅವರಿಗೆ 'ಅತ್ಯುತ್ತಮ ನಿರ್ದೇಶಕ' ಹಾಗೂ ಇದರಲ್ಲಿ ನಾಯಕ ನಟನಾಗಿ ನಟಿಸಿದ ದೇವ್ ಪಟೇಲ್‌ಗೆ 'ಉದಯೋನ್ಮುಖ ನಟ' ಪ್ರಶಸ್ತಿ ದೊರೆಯಿತು. 'ದಿ ರೀಡರ್' ಚಿತ್ರದ ಅಭಿನಯಕ್ಕಾಗಿ ನಾಯಕಿ ಕೇಟ್ ವಿನ್ಸಲೇಟ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.

2008: ಪ್ರಸಿದ್ಧ ಕಾದಂಬರಿಕಾರ ವ್ಯಾಸರಾಯ ಬಲ್ಲಾಳ (85) ಅವರು ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಸ್ವಂತ ಮನೆ 'ಉತ್ತರಾಯಣ'ದಲ್ಲಿ ಈದಿನ ರಾತ್ರಿ ನಿಧನರಾದರು. ಉಡುಪಿಯ ನಿಡಂಬೂರು ವ್ಯಾಸರಾಯ ಬಲ್ಲಾಳರು (ಜನನ: ಡಿ.1, 1923) ಕನ್ನಡ ಸಾರಸ್ವತ ಲೋಕದಲ್ಲಿ `ಬಂಡಾಯದ ಬಲ್ಲಾಳ' ಎಂದೇ ಪ್ರಸಿದ್ಧರು. ಕನ್ನಡ ಕಾದಂಬರಿ ಲೋಕಕ್ಕೆ ಹೊಸ ಜಗತ್ತು ಹಾಗೂ ಸಂವೇದನೆಗಳನ್ನು ಪರಿಚಯಿಸಿದ `ಬಂಡಾಯ' ಬಲ್ಲಾಳರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕಾದಂಬರಿ. `ಆಕಾಶಕ್ಕೊಂದು ಕಂದೀಲು', `ಹೇಮಂತಗಾನ', `ವಾತ್ಸಲ್ಯ ಪಥ', `ಉತ್ತರಾಯಣ', `ಬಂಡಾಯ`, `ಅನುರಕ್ತೆ ', `ಹೆಜ್ಜೆ' (ಎರಡು ಭಾಗಗಳು) ಅವರ ಪ್ರಸಿದ್ಧ ಕಾದಂಬರಿಗಳು. ಬಲ್ಲಾಳರದ್ದು ಹೋರಾಟದ ಬದುಕು. ಅವರ ತಂದೆ ರಾಮದಾಸ ಸಂಸ್ಕೃತ ಹಾಗೂ ಕನ್ನಡದಲ್ಲಿ ವಿದ್ವಾಂಸರು. ಬಡತನ ಕಟ್ಟಿಕೊಟ್ಟ ನೋವಿನ ಬುತ್ತಿಯನ್ನು ಹೊತ್ತುಕೊಂಡೇ ಮುಂಬೈಗೆ ತೆರಳಿದ ಅವರು, ಆ ಮಹಾನಗರಿಯಲ್ಲಿ ಅನ್ನದ ಹಸಿವು ಹಾಗೂ ಸೃಜನಶೀಲತೆಯ ಹಸಿವನ್ನು ಇಂಗಿಸುವ ಮಾರ್ಗಗಳನ್ನು ಕಂಡುಕೊಂಡರು. ಮುಂಬೈಯ ತೈಲ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದುಕೊಂಡೇ ಮಹಾನಗರದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮುಂಬೈ ನಗರದ ಜೀವಂತಿಕೆ ಹಾಗೂ ನಗರದ ಬದುಕಿನ ತಳಮಳಗಳನ್ನು ತಮ್ಮ ಕೃತಿಗಳಲ್ಲಿ ಕಲಾತ್ಮಕವಾಗಿ ಚಿತ್ರಿಸಿದರು. ನವೋದಯ, ಪ್ರಗತಿಶೀಲ, ನವ್ಯ- ಹೀಗೆ ಸಾಹಿತ್ಯ ಚಳವಳಿಗಳಿಗೆ ಮುಖಾಮುಖಿಯಾದರೂ ತಮ್ಮದೇ ಆದ `ವ್ಯಾಸ(ರಾಯ) ಮಾರ್ಗ' ರೂಪಿಸಿಕೊಂಡ ಹೆಗ್ಗಳಿಕೆ ಅವರದು. ಮುಂಬೈಯ `ಕರ್ನಾಟಕ ಸಂಘ', `ಸಾಹಿತ್ಯಕೂಟ', `ಕನ್ನಡ ಕಲಾ ಕೇಂದ್ರ'ಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಅವರು, `ನುಡಿ' ಪತ್ರಿಕೆಯಲ್ಲಿ ಕೆಲಸ ಮಾಡುವ ಮೂಲಕ ಬರವಣಿಗೆಯ ಇನ್ನೊಂದು ಸಾಧ್ಯತೆಗೆ ತಮ್ಮನ್ನು ತೆರೆದುಕೊಂಡವರು. `ಸಂಪಿಗೆ', `ಮಂಜರಿ', `ಕಾಡು ಮಲ್ಲಿಗೆ' ಹಾಗೂ `ಸಮಗ್ರ ಕಥೆಗಳು' ಬಲ್ಲಾಳರಿಗೆ ಹೆಸರು ತಂದುಕೊಟ್ಟ ಕೃತಿಗಳು. ಇಬ್ಸನ್, ಬರ್ನಾಡ್ ಷಾ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿರುವ ಅವರ ಪ್ರವಾಸ ಕಥನ `ನಾನೊಬ್ಬ ಭಾರತೀಯ ಪ್ರವಾಸಿ'. ನಿವೃತ್ತಿಯ ನಂತರ ಬಲ್ಲಾಳರು ಬೆಂಗಳೂರಿನಲ್ಲಿ ನೆಲೆಸಿದ್ದರು.

2008: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಹುತಾತ್ಮರಾದ 60 ವರ್ಷಗಳ ಬಳಿಕ ಅವರ ಚಿತಾಭಸ್ಮವನ್ನು ಒಳಗೊಂಡ ಮತ್ತೊಂದು ಕಲಶವನ್ನು ಮುಂಬೈಯಲ್ಲಿ ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲಾಯಿತು. ಗಾಂಧೀಜಿ ಅವರ ಚಿತಾಭಸ್ಮ ಒಳಗೊಂಡ ಕಲಶವನ್ನು 2006ರ ಆಗಸ್ಟಿನಲ್ಲಿ ದುಬೈ ಮೂಲದ ಉದ್ಯಮಿ ಭರತ್ ನಾರಾಯಣ್ ಅವರು ಮುಂಬೈಯ ಮಣಿ ಭವನಕ್ಕೆ ಹಸ್ತಾಂತರಿಸಿದ್ದರು. ಉದ್ಯಮಿಯ ಹೆತ್ತವರು 1948ರಿಂದೀಚೆಗೆ ಈ ಚಿತಾಭಸ್ಮವನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. ಚಿತಾಭಸ್ಮದ ಕಲಶವನ್ನು ವಿಸರ್ಜಿಸುವವರೆಗೂ ಗಾಂಧೀಜಿ ನಗರಕ್ಕೆ ಆಗಮಿಸುತ್ತಿದ್ದಾಗಲೆಲ್ಲಾ ತಂಗುತ್ತಿದ್ದ ಈ ಮಣಿ ಭವನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಕೊನೆಯ ದಿನದ ತನಕವೂ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿದ್ದರು. ಮಹಾತ್ಮನ ಚಿತಾಭಸ್ಮವನ್ನು 1948ರ ಫೆಬ್ರುವರಿ 12ರಂದು ದೇಶದ ವಿವಿಧ ನದಿಗಳಲ್ಲಿ ಮತ್ತು ಸಮುದ್ರಗಳಲ್ಲಿ ವಿಸರ್ಜಿಸಲಾಗಿತ್ತು. ಆದರೆ ಇನ್ನೂ ಕೆಲವು ಅಸ್ತಿಕಲಶಗಳನ್ನು ವಿಸರ್ಜಿಸದ ಅಭಿಮಾನಿಗಳು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಕಳೆದ 60 ವರ್ಷಗಳಲ್ಲಿ ಹೀಗೆ ದೊರೆತ 2ನೇ ಚಿತಾಭಸ್ಮ ಇದು. 1997ರಲ್ಲಿ ಭುನವೇಶ್ವರದ ಬ್ಯಾಂಕ್ ಲಾಕರ್ ಒಂದರಲ್ಲಿ ಪತ್ತೆಯಾಗಿದ್ದ ಮಹಾತ್ಮ ಅವರ ಚಿತಾಭಸ್ಮವನ್ನು ಬಳಿಕ ಅಲಹಾಬಾದಿನಲ್ಲಿ ವಿಸರ್ಜಿಸಲಾಗಿತ್ತು.

2008: ಇಸ್ಲಾಮ್ ಅರ್ಥವನ್ನು ಅಪಾರ್ಥಗೊಳಿಸಿದ ಸಾಹಿತ್ಯ ಒಳಗೊಂಡಿದೆ ಎಂಬ ಆಪಾದನೆ ಮೇರೆಗೆ ಅಮೆರಿಕ ಪ್ರಕಟಣೆಯ 11 ಪುಸ್ತಕಗಳನ್ನು ಮಲೇಷ್ಯಾ ಸರ್ಕಾರ ನಿಷೇಧಿಸಿತು. ಮಲೇಷ್ಯಾದ ಆಂತರಿಕ ಭದ್ರತಾ ಸಚಿವಾಲಯ ಈ ಪುಸ್ತಕಗಳನ್ನು ನಿಷೇಧಿಸಿದ್ದು ಅವುಗಳಲ್ಲಿ 8 ಪುಸ್ತಕಗಳು ಇಂಗ್ಲಿಷಿನಲ್ಲಿ ಹಾಗೂ 3 ಸ್ಥಳೀಯ ಮಲಯ ಭಾಷೆಯಲ್ಲೂ ಇದ್ದವು. ಪುಸ್ತಕಗಳಲ್ಲಿ ಭಯೋತ್ಪಾದಕರ ಜೊತೆ ಮುಸ್ಲಿಮರನ್ನು ತಳಕು ಹಾಕಲಾಗಿದೆ ಹಾಗೂ ಇಸ್ಲಾಮ್ ಧರ್ಮ ಮಹಿಳೆಯರನ್ನು ಅನುಚಿತವಾಗಿ ನಡೆಸಿಕೊಳ್ಳುತ್ತದೆ ಎಂಬುದಾಗಿ ಮುದ್ರಿಸಲಾಗಿದೆ ಎಂದು ಮಲೇಷ್ಯಾ ಆಪಾದಿಸಿತು.

2008: ವೇಗದ ಬೌಲರುಗಳಾದ ಜಹೀರ್ ಖಾನ್, ಆರ್ ಪಿ ಸಿಂಗ್ ಮತ್ತು ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರು `ಕ್ರಿಕ್ ಇನ್ಫೋ' ಪ್ರಶಸ್ತಿಗೆ ಆಯ್ಕೆಯಾದರು. ಭಾರತದ ಈ ಮೂವರಲ್ಲದೆ ಶ್ರೀಲಂಕಾ ತಂಡದ ಕುಮಾರ ಸಂಗಕ್ಕಾರ ಮತ್ತು ಲಸಿತ್ ಮಾಲಿಂಗ ಹಾಗೂ ಆಸ್ಟ್ರೇಲಿಯಾ ತಂಡದ ಆಡಮ್ ಗಿಲ್ ಕ್ರಿಸ್ಟ್ ಅವರೂ ಇದೇ ಮೊದಲ ಬಾರಿ `ಕ್ರಿಕ್ ಇನ್ಫೋ' ಪ್ರಕಟಿಸಿದ ಪ್ರಶಸ್ತಿಗೆ ಭಾಜನರಾದರು.

2007: ಭೋಪಾಲ್ ರಂಗಮಂಡಲದ ಹಿರಿಯ ನಟಿ- ನಿದರ್ೆಶಕಿ ವಿಭಾ ಮಿಶ್ರ ನವದೆಹಲಿಯಲ್ಲಿ ನಿಧನರಾದರು. ರಾಷ್ಟ್ರೀಯ ನಾಟಕಶಾಲೆ ನಿರ್ದೇಶಕ ದೇವೇಂದ್ರ ಕುಮಾರ್ ಅಂಕುರ್ ಹಾಗೂ ದೇಶದ ಹೆಸರಾಂತ ಕನ್ನಡದ ರಂಗ ನಿರ್ದೇಶಕ ಬಿ.ವಿ. ಕಾರಂತರ ಶಿಷ್ಯೆಯಾಗಿದ್ದ ವಿಭಾ ಮಿಶ್ರ ಎರಡು ವರ್ಷಗಳ ಹಿಂದೆ ಮೈಸೂರಿನ ರಂಗಾಯಣದಲ್ಲಿ ತಮ್ಮ ತಂಡದ ವತಿಯಿಂದ ನಾಟಕ ಪ್ರದರ್ಶಿಸಿದ್ದರು.

2007: ವಿಶ್ವದಲ್ಲೇ ಅತಿದೊಡ್ಡ ರಕ್ತದಾನ ಶಿಬಿರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಿತು. 50ಕ್ಕೂ ಹೆಚ್ಚು ಸಂಸ್ಥೆಗಳು ಸಹಯೋಗ ನೀಡಿದ್ದ ಈ ಶಿಬಿರದಲ್ಲಿ 400ಕ್ಕೂ ಹೆಚ್ಚು ಹಾಸಿಗೆ ವ್ಯವಸ್ಥೆ ಮಾಡಲಾಗಿತ್ತು. 100ಕ್ಕೂ ಹೆಚ್ಚು ತಜ್ಞ ವೈದ್ಯರು, 500ಕ್ಕೂ ಹೆಚ್ಚು ದಾದಿಯರು, 1000ಕ್ಕೂ ಹೆಚ್ಚು ಸ್ವಯಂ ಸೇವಕರು ಪಾಲ್ಗೊಂಡ ಈ ಶಿಬಿರದಲ್ಲಿ 7000ಕ್ಕೂ ಹೆಚ್ಚು ಜನ ರಕ್ತದಾನ ಮಾಡಿ ಇತಿಹಾಸ ನಿರ್ಮಿಸಿದರು. 2003ರಲ್ಲಿ ಮುಂಬೈಯಲ್ಲಿ ನಡೆದ ಈ ಮಾದರಿ ಶಿಬಿರದಲ್ಲಿ 5600 ಜನ ರಕ್ತದಾನ ಮಾಡಿದ್ದರು.

2007: ಏರ್ ಮಾರ್ಷಲ್ ಫಾಲಿ ಹೋಮಿ ಮೇಜರ್ (59) ಅವರನ್ನು ಕೇಂದ್ರ ಸರ್ಕಾರವು ವಾಯುಪಡೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿತು.

2006: ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ (ಎಎಸ್ಐ) ನೀಡುವ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಗೆ ವಿಮಾನಶಾಸ್ತ್ರ ವಿಜ್ಞಾನಿ ಮತ್ತು ಬಾಹ್ಯಾಕಾಶ ಆಯೋಗದ ಸದಸ್ಯ ಪ್ರೊ. ರೊದ್ದಂ. ನರಸಿಂಹ ಆಯ್ಕೆಯಾದರು. ಈ ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

2006: ಲಾಹೋರಿಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ ಪ್ರಪಾತಕ್ಕೆ ಉರುಳಿದ ಪರಿಣಾಮ 46 ಮಂದಿ ಮೃತರಾದರು. ಪಾಕಿಸ್ಥಾನದ ಈ ರೈಲು ರಾವಲ್ಪಿಂಡಿಯಿಂದ ಲಾಹೋರಿಗೆ ತೆರಳುತ್ತಿತ್ತು.

1991: ಟ್ರಾನ್ಸಿಸ್ಟರಿನ ಜಂಟಿ ಸಂಶೋಧಕ ಜಾನ್ ಬರ್ಡೀನ್ (1908-1991) ತನ್ನ 82ನೇ ವಯಸ್ಸಿನಲ್ಲಿ ಮೃತನಾದ. 1956ರಲ್ಲಿ ಭೌತವಿಜ್ಞಾನಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಗೆದ್ದುಕೊಂಡ ಈತ ಸೂಪರ್ ಕಂಡಕ್ಟಿವಿಟಿ ಸಂಶೋಧನೆಯಲ್ಲೂ ಪಾತ್ರ ವಹಿಸಿದ ವ್ಯಕ್ತಿ.

1965: ಸರ್ ವಿನ್ ಸ್ಟನ್ ಚರ್ಚಿಲ್ ಅಂತ್ಯಕ್ರಿಯೆ ನೆರವೇರಿತು. 90 ವರ್ಷಗಳ ಹಿಂದೆ ಅವರು ಹುಟ್ಟಿದ ಬೆನ್ಹೀಮ್ ಅರಮನೆಯ ಸಮೀಪದ ಬ್ಲಾಡನ್ ಚರ್ಚ್ ಯಾರ್ಡಿನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.

1958: ಕಲಾವಿದೆ ಎಚ್.ಎಸ್. ಇಂದಿರಾ ಜನನ.

1933: ಅಡಾಲ್ಫ್ ಹಿಟ್ಲರ್ ಜರ್ಮನಿಯ ಚಾನ್ಸಲರ್ ಆದ. ಇದು ಜರ್ಮನಿಯ ಪ್ರಜಾತಾಂತ್ರಿಕ ಸಂಸದೀಯ ವ್ಯವಸ್ಥೆಯ ಶವ ಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಯಾಯಿತು. ಕೆಲ ದಿನಗಳ ಒಳಗಾಗಿಯೇ ಹಿಟ್ಲರ್ ಎಲ್ಲ ಸಾರ್ವಜನಿಕ ಸಭೆಗಳನ್ನು ನಿಯಂತ್ರಿಸುವ ಹಾಗೂ ಪತ್ರಿಕೆಗಳನ್ನು ನಿಯಂತ್ರಿಸಲು ಬೇಕಾದ ಅಪರಿಮಿತ ಅಧಿಕಾರಗಳನ್ನು ಸರ್ಕಾರಕ್ಕೆ ನೀಡಿದ.

1927: ಈದಿನ ಹುಟ್ಟಿದ ಒಲೋಫ್ ಪಾಮೆ (Olof Palme) (1927-1986) ಮುಂದೆ ಸ್ವೀಡನ್ನಿನ ಪ್ರಧಾನಿಯಾದರು. ಅವರು 1986 ರಲ್ಲಿ ಹತ್ಯೆಗೀಡಾದರು.

1913: ಹಂಗೆರಿ ಸಂಜಾತ ಭಾರತೀಯ ವರ್ಣಚಿತ್ರ್ರ ಕಲಾವಿದೆ ಅಮೃತಾ ಶೆರ್ಗಿಲ್ (1913-1956) ಹುಟ್ಟಿದ ದಿನ. ನಗ್ನ ಚಿತ್ರಗಳನ್ನು ರಚಿಸಿದ ಈಕೆ ಭಾರತೀಯ ಚಿತ್ರಕಲೆಗೆ ಆಧುನಿಕತೆಯ ಸ್ಪರ್ಶ ನೀಡಿದವರು.

1901: ತೈಲವರ್ಣ ಹಾಗೂ ಜಲವರ್ಣ ಚಿತ್ರ ರಚನಯಲ್ಲಿ ಸಿದ್ಧಹಸ್ತರಾಗಿದ್ದ ಮಡಿವಾಳಪ್ಪ ವೀರಪ್ಪ ಮಿಣಜಗಿ ಅವರು ವೀರಪ್ಪ- ಶರಣವ್ವ ದಂಪತಿಯ ಮಗನಾಗಿ ವಿಜಾಪುರದಲ್ಲಿ ಜನಿಸಿದರು.

1785: ಚಾರ್ಲ್ಸ್ ಥಿಯೋಫಿಲಸ್ ಮೆಟ್ಕಾಫ್ (1785-1846) ಹುಟ್ಟಿದ ದಿನ. ಬ್ರಿಟಿಷ್ ಆಡಳಿತಗಾರನಾದ ಈತ ಭಾರತದ ಹಂಗಾಮಿ ಗವರ್ನರ್ ಜನರಲ್ ಆಗಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಇಂಗ್ಲಿಷನ್ನು ಅಧಿಕೃತ ಭಾಷೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಮುಖ ಸುಧಾರಣೆಗಳನ್ನು ಜಾರಿಗೆ ತಂದ.

Thursday, March 4, 2010

ಇಂದಿನ ಇತಿಹಾಸ History Today ಜನವರಿ 29

ಇಂದಿನ ಇತಿಹಾಸ

ಜನವರಿ 29

ಖ್ಯಾತ ಚಿತ್ರನಟ ಶಂಕರ್‌ನಾಗ್ ಸಾವಿಗೆ ಸಂಬಂಧಿಸಿದಂತೆ, ಅವರ ಕುಟುಂಬ ವರ್ಗಕ್ಕೆ ಪರಿಹಾರದ ಮೊತ್ತವನ್ನು ಹೆಚ್ಚಿಸಿ ಹೈಕೋರ್ಟ್, ಆದೇಶ ಹೊರಡಿಸಿತು. ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಆದೇಶಿಸಿದ್ದ 25 ಲಕ್ಷ ರೂಪಾಯಿಗಳನ್ನು 26,80,155 ರೂಪಾಯಿಗೆ ಹೆಚ್ಚಿಸಲು ನ್ಯಾಯಮೂರ್ತಿಗಳಾದ ಕೆ.ಶ್ರೀಧರ ರಾವ್ ಹಾಗೂ ಎಸ್.ಎನ್.ಸತ್ಯನಾರಾಯಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿತು.

2009: ಲಂಚ ತೆಗೆದಕೊಂಡ ಪ್ರಕರಣವೊಂದರಲ್ಲಿ ಇದೇ ಮೊದಲ ಬಾರಿಗೆ ಶಾಸಕರೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದರು. ಕ್ರಿಮಿನಲ್ ಪ್ರಕರಣವೊಂದನ್ನು ಇತ್ಯರ್ಥಪಡಿಸುವ ಸಂಬಂಧ ಶಾಸಕರ ಭವನದ ಕೊಠಡಿಯಲ್ಲೇ ವ್ಯಕ್ತಿಯೊಬ್ಬರಿಂದ ಐದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಕೆಜಿಎಫ್‌ನ ಬಿಜೆಪಿ ಶಾಸಕ ವೈ. ಸಂಪಂಗಿ ಅವರನ್ನು ಈದಿನ ಮಧ್ಯಾಹ್ನ ಬಂಧಿಸಲಾಯಿತು. ಲಂಚ ತೆಗೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದ ಕೆಜಿಎಫ್ ಶಾಸಕ ವೈ.ಸಂಪಂಗಿ ಅವರನ್ನು ಪಕ್ಷದಿಂದ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಡಿ.ವಿ.ಸದಾನಂದಗೌಡ ತಿಳಿಸಿದರು. ಅಂಡರ್‌ಸನ್ ಪೇಟೆಯ ಹುಸೇನ್ ಮೊಯಿನ್ ಫರೂಕ್ ಎಂಬವರು ನೀಡಿದ್ದ ದೂರನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸಲಾಯಿತು. ಅಲ್ಲಿನ ಇನ್ಸ್‌ಪೆಕ್ಟರ್ ಲಕ್ಷ್ಮಯ್ಯ ಮತ್ತು ಸಬ್ ಇನ್ಸ್‌ಪೆಕ್ಟರ್ ಪಾಷಾ ವಿರುದ್ಧವೂ ಈ ಸಂಬಂಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಯಿತು.

2009: ಎಲ್‌ಟಿಟಿಇ ನೆಲೆಗಳನ್ನು ಒಂದೊಂದಾಗಿ ತನ್ನ ವಶಕ್ಕೆ ತೆಗೆದುಕೊಳ್ಳುತ್ತಾ ಸಾಗಿದ ಶ್ರೀಲಂಕಾ ಸೇನೆ ಈದಿನ ವಿಸುವಮಡು ಪಟ್ಟಣವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಇದು ಎಲ್‌ಟಿಟಿಗಳ ಪಾಲಿನ ಫಿರಂಗಿಗಳ ಉಗ್ರಾಣ ಸ್ಥಾನವಾಗಿದ್ದು ಈ ಪ್ರದೇಶದಲ್ಲಿ 35 ಅಡಿ ಉದ್ದದ ಸಬ್‌ಮೆರಿನ್ ತರಹದ ಜಲಾಂತರ್ಗಾಮಿ ನೌಕೆಯನ್ನು ವಶಪಡಿಸಿಕೊಳ್ಳಲಾಯಿತು.. ಇದಕ್ಕೂ ಮುನ್ನ ಈ ಪ್ರದೇಶದಲ್ಲಿ ಎಲ್‌ಟಿಟಿಇ ಪಡೆಗಳ ಜೊತೆ ಸೇನೆ ತೀವ್ರ ಕಾಳಗ ನಡೆಸಿತು. ವಿಸುವಮಡು ಎಲ್‌ಟಿಟಿಇ ಪಡೆಗಳ ಪಾಲಿಗೆ ಭದ್ರ ಆಶ್ರಯ ಸ್ಥಾನವಾಗಿತ್ತು. ಈಗ ಇದೂ ಕೂಡಾ ಸೇನೆಯ ವಶಕ್ಕೆ ಸರಿಯಿತು.

2009: ಖ್ಯಾತ ಚಿತ್ರನಟ ಶಂಕರ್‌ನಾಗ್ ಸಾವಿಗೆ ಸಂಬಂಧಿಸಿದಂತೆ, ಅವರ ಕುಟುಂಬ ವರ್ಗಕ್ಕೆ ಪರಿಹಾರದ ಮೊತ್ತವನ್ನು ಹೆಚ್ಚಿಸಿ ಹೈಕೋರ್ಟ್, ಆದೇಶ ಹೊರಡಿಸಿತು. ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಆದೇಶಿಸಿದ್ದ 25 ಲಕ್ಷ ರೂಪಾಯಿಗಳನ್ನು 26,80,155 ರೂಪಾಯಿಗೆ ಹೆಚ್ಚಿಸಲು ನ್ಯಾಯಮೂರ್ತಿಗಳಾದ ಕೆ.ಶ್ರೀಧರ ರಾವ್ ಹಾಗೂ ಎಸ್.ಎನ್.ಸತ್ಯನಾರಾಯಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿತು. ಈ ಪರಿಹಾರದ ಮೊತ್ತವನ್ನು ಘಟನೆ ನಡೆದ ದಿನದಿಂದ ಶೇ 6ರ ಬಡ್ಡಿದರ ಸೇರಿಸಿ ನೀಡುವಂತೆ ನ್ಯಾಯಮೂರ್ತಿಗಳು ನಿರ್ದೇಶಿಸಿದರು. ಶಂಕರ್‌ನಾಗ್ ಅವರು, ದಾವಣಗೆರೆ ಜಿಲ್ಲೆಯ ಅರುಗೋಡು ಗ್ರಾಮದ ಬಳಿ 1990ರ ಸೆ.30ರಂದು ನಡೆದ ಅಪಘಾತದಲ್ಲಿ ಮೃತರಾಗಿದ್ದರು. 'ಜೋಕುಮಾರಸ್ವಾಮಿ' ಚಿತ್ರದ ನಿರ್ಮಾಪಕರಾಗಿದ್ದ ಶಂಕರ್‌ನಾಗ್ ಅವರು ಇದೇ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲು ಆ ಮಾರ್ಗವಾಗಿ ತಮ್ಮ ಪತ್ನಿ ಅರುಂಧತಿ ಹಾಗೂ ಪುತ್ರಿ ಕಾವ್ಯಾ ಜೊತೆ ಕಾರಿನಲ್ಲಿ ಪಯಣಿಸುತಿದ್ದ ವೇಳೆ ಅಪಘಾತ ಸಂಭವಿಸಿತ್ತು. ಇದರಲ್ಲಿ ಅರುಂಧತಿ ಹಾಗೂ ಕಾವ್ಯಾ ಅವರು ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದರು. ಶಂಕರ್‌ನಾಗ್ ಅವರ ಮರಣಕ್ಕೆ ಪರಿಹಾರ ಕೋರಿ ಅರುಂಧತಿ ಹಾಗೂ ಕಾವ್ಯಾ ಅವರು ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮಂಡಳಿಯು ಅವರಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡಿತ್ತು. ಈ ಪರಿಹಾರವನ್ನು ಹೆಚ್ಚಿಸುವಂತೆ ಕೋರಿ ಅವರು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಶಂಕರ್‌ನಾಗ್ ಅವರ ಆದಾಯ, ಖರ್ಚು-ವೆಚ್ಚ ಎಲ್ಲವನ್ನೂ ಗಣನೆಗೆ ತೆಗೆದುಕೊಂಡ ಪೀಠ, ಪರಿಹಾರದ ಹಣವನ್ನು 1.80 ಲಕ್ಷ ರೂಪಾಯಿ ಹೆಚ್ಚಿಸಿತು.

2009: ರಾಷ್ಟ್ರದ ನೂತನ ಅಧ್ಯಕ್ಷ ಬರಾಕ್ ಹುಸೇನ್ ಒಬಾಮ ಸರ್ಕಾರ ಸಿದ್ಧಪಡಿಸಿದ 819 ಶತಕೋಟಿ ಡಾಲರ್ (40 ಲಕ್ಷ ಕೋಟಿ ರೂ.) ಆರ್ಥಿಕ ನೆರವಿನ ಪ್ಯಾಕೇಜಿಗೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟಿಟೀವ್ಸ್ ಒಪ್ಪಿಗೆ ಸೂಚಿಸಿತು. ಡೆಮಾಕ್ರೆಟಿಕ್ ಪಕ್ಷದ ಬಹುಮತವಿರುವ ಜನಪ್ರತಿನಿಧಿ ಸಭೆ, ಒಬಾಮ ಅಧ್ಯಕ್ಷರಾದ ನಂತರದಲ್ಲಿ ಮಂಡಿಸಿದ ಪ್ರಥಮ-ಮಹತ್ವದ ಆರ್ಥಿಕ ಉತ್ತೇಜನ ಕ್ರಮ ಯೋಜನೆಗೆ ಹಸಿರು ನಿಶಾನೆ ತೋರಿತು. ಅಧ್ಯಕ್ಷ ಒಬಾಮ ಮಂಡಿಸಿದ ಪ್ಯಾಕೇಜಿನಲ್ಲಿ 'ತುರ್ತು ವೆಚ್ಚ ಕ್ರಮ ಹಾಗೂ ತೆರಿಗೆ ರಿಯಾಯಿತಿ' ಸೌಲಭ್ಯ ಅಡಕವಾಗಿದ್ದವು. ನಾಗರಿಕರು, ವಾಣಿಜ್ಯೋದ್ಯಮ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲು 275 ಶತಕೋಟಿ ಡಾಲರಿನ ತಾತ್ಕಾಲಿಕ ತೆರಿಗೆ ರಿಯಾಯಿತಿ ಕಲ್ಪಿಸಲಾಗಿತ್ತು. ಉದ್ಯೋಗ ಕಡಿತದ ಭೀತಿಯಲ್ಲಿರುವ ಅಮೆರಿಕನ್ನರ 'ಒತ್ತಡ' ಕಡಿಮೆ ಮಾಡಲು ಒಬಾಮ ಆಡಳಿತ 544 ಶತಕೋಟಿ ಡಾಲರ್ ಮೂಲಕ 'ನೌಕರಿ ಸೃಷ್ಟಿ'ಯ ಹೊಸ ಯೋಜನೆ ಸಿದ್ಧಪಡಿಸಿತ್ತು. ಆರೋಗ್ಯ ಅಭಿವೃದ್ಧಿ ಕ್ಷೇತ್ರ, ಬಡವರು ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ನೆರವು, ಶಿಕ್ಷಣ ಕ್ಷೇತ್ರ ಅಭಿವೃದ್ಧಿಗೆ ಈ ಹಣ ವಿನಿಯೋಜಿಸಲು ಯೋಜಿಸಲಾಗಿತ್ತು.

2008: ಭಾರತ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ವಿರುದ್ಧ ಆಸ್ಟ್ರೇಲಿಯಾ ತಂಡದವರು ಮಾಡಿದ್ದ ಜನಾಂಗೀಯ ನಿಂದನೆ ಆರೋಪ ಸಾಬೀತಾಗಲಿಲ್ಲ. ಹೀಗಾಗಿ ಅವರ ಮೇಲೆ ಹೇರಲಾಗಿದ್ದ ಮೂರು ಪಂದ್ಯಗಳ ನಿಷೇಧ ಶಿಕ್ಷೆ ರದ್ದಾಯಿತು. ಆದರೆ ಸಿಡ್ನಿ ಟೆಸ್ಟ್ ಸಂದರ್ಭದಲ್ಲಿ ಆತಿಥೇಯ ತಂಡದ ಆಂಡ್ರ್ಯೂ ಸೈಮಂಡ್ಸ್ ಜೊತೆಗೆ ಮಾತಿನ ಚಕಮಕಿ ನಡೆಸಿದ್ದ `ಭಜ್ಜಿ' ಮೇಲೆ ಪಂದ್ಯ ಸಂಭಾವನೆಯ ಅರ್ಧದಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಯಿತು. ಅಡಿಲೇಡಿನಲ್ಲಿ ನಡೆದ ಮೇಲ್ಮನವಿ ವಿಚಾರಣೆ ಕಾಲದಲ್ಲಿ ಟೀಮ್ ಇಂಡಿಯಾ ಮ್ಯಾನೇಜರ್ ಎಂ.ವಿ. ಶ್ರೀಧರ್ ಜೊತೆಗೆ ಹರಭಜನ್ ಸಿಂಗ್ ಹಾಗೂ ಸಚಿನ್ ತೆಂಡೂಲ್ಕರ್ ಹಾಜರಿದ್ದರು. (`ಭಜ್ಜಿ' ಜನಾಂಗೀಯ ನಿಂದನೆ `ಪ್ರಹಸನ'ದ ಘಟನಾವಳಿಗಳು: * ಜನವರಿ 4: ಆಕ್ಷೇಪಾರ್ಹ ವರ್ತನೆ ಹಾಗೂ ಜನಾಂಗೀಯ ನಿಂದನೆ ದೂರು. * ಜ.5: ವಿಚಾರಣೆ ಮುಂದೂಡಿದ ಐಸಿಸಿ ಮ್ಯಾಚ್ ರೆಫರಿ ಮೈಕ್ ಪ್ರಾಕ್ಟರ್. * ಜ.6: ಮ್ಯಾಚ್ ರೆಫರಿಯಿಂದ `ಭಜ್ಜಿ'ಗೆ ಮೂರು ಪಂದ್ಯಗಳ ನಿಷೇಧ ಶಿಕ್ಷೆ. * ಜ.7: ತೀರ್ಪು ಬದಲಿಸುವುದಿಲ್ಲ-ಪ್ರಾಕ್ಟರ್ ಸ್ಪಷ್ಟನೆ; ಬಿಸಿಸಿಐಯಿಂದ ಮೇಲ್ಮನವಿ. * ಜ.8: ಪ್ರವಾಸ ರದ್ದು ಬೆದರಿಕೆ ತಾತ್ಕಾಲಿಕವಾಗಿ ಕೈಬಿಟ್ಟ ಬಿಸಿಸಿಐ. * ಜ.9: ಐಸಿಸಿಯಿಂದ ಮೇಲ್ಮನವಿ ಆಯುಕ್ತರ ನೇಮಕ. * ಜ.10: ಸೈಮಂಡ್ಸ್ ಕೆಣಕಿದ್ದೇ ಹರಭಜನ್ ಪ್ರತ್ತ್ಯುತ್ತರ ನೀಡಲು ಕಾರಣ: ಭಾರತದ ವಾದ. * ಜ.11: ಪ್ರವಾಸ ರದ್ದು ತೀರ್ಮಾನದ ಅಧಿಕಾರ ಬಿಸಿಸಿಐ ಅಧ್ಯಕ್ಷ ಶರದ್ ಪವಾರ್ ಅವರಿಗೆ. * ಜ.12: ಸರಣಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಪವಾರ್ ಹೇಳಿಕೆ. * ಜ.13: ಕುಂಬ್ಳೆ ಹಾಗೂ ಪಾಂಟಿಂಗ್ ನಡುವೆ ಸಂಧಾನಕ್ಕೆ ರಂಜನ್ ಮದುಗಲೆ ಮಧ್ಯಸ್ಥಿಕೆ. * ಜ.14: ಟೆಸ್ಟ್ ಸರಣಿಯ ನಂತರ ಮೇಲ್ಮನವಿ ವಿಚಾರಣೆಗೆ ಪ್ರಸ್ತಾವ. * ಜ.25: ಆಸ್ಟ್ರೇಲಿಯಾದವರ ವಾದವನ್ನು ಪರಾಮರ್ಶಿಸದೆ ಒಪ್ಪಿಕೊಂಡ ಪ್ರಾಕ್ಟರ್ ವಿರುದ್ಧ ಕಿಡಿ. * ಜ.26: ಸಿಡ್ನಿ ಟೆಸ್ಟಿನಲ್ಲಿ ಮ್ಯಾಚ್ ರೆಫರಿಗೆ ಭಾರಿ ಸವಾಲು: ಪ್ರಾಕ್ಟರ್ ಅಭಿಪ್ರಾಯ. * ಜ.28: ಹೊಸ ಸಾಕ್ಷಿ ಪರಿಗಣಿಸುವ ನಿರ್ಧಾರಕ್ಕೆ ಬಿಸಿಸಿಐ ಆಕ್ಷೇಪ. * ಜ. 29: ಮೇಲ್ಮನವಿ ವಿಚಾರಣೆ ನಂತರ ಜನಾಂಗೀಯ ನಿಂದನೆ ಆರೋಪ ತಿರಸ್ಕೃತ.)

2008: ಕರ್ನಾಟಕದ ಆಳಂದ ತಾಲ್ಲೂಕಿನ ಭೂಸನೂರು ಸಕ್ಕರೆ ಕಾರ್ಖಾನೆ ಬಳಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಆರು ವರ್ಷದ ಬಾಲಕ ನವನಾಥ ಕಾಶಪ್ಪ ಕಾಂಬಳೆಯನ್ನು ಸತತ ಎಂಟು ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಸುರಕ್ಷಿತವಾಗಿ ಹೊರತರಲಾಯಿತು. ಬೆಳಗ್ಗೆ ಸುಮಾರು 11ಗಂಟೆಗೆ ಆಟವಾಡುವ ವೇಳೆ, ತೆರೆದ ಕೊಳವೆ ಬಾವಿಗೆ ಬಿದ್ದ ಕಾಂಬಳೆಯನ್ನು ಸಂಜೆ 7.30ಕ್ಕೆ ಹಗ್ಗದ ಸಹಾಯದಿಂದ ಹೊರತರಲಾಯಿತು.

2008: ಜೀವ್ ಮಿಲ್ಕಾಸಿಂಗ್ ಅವರನ್ನು ಹಿಂದಿಕ್ಕಿದ ಜ್ಯೋತಿ ರಾಂಧವ ಭಾರತದ ನಂಬರ್ 1 ಗಾಲ್ಫ್ ಆಟಗಾರ ಎಂಬ ಹೆಗ್ಗಳಿಕೆಗೆ ಭಾಜನರಾದರು. ಈದಿನ ನವದೆಹಲಿಯಲ್ಲಿ ಬಿಡುಗಡೆಯಾದ ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ರಾಂಧವ 84ನೇ ಸ್ಥಾನ ಪಡೆದರೆ, ಜೀವ್ 86ನೇ ಸ್ಥಾನ ತಮ್ಮದಾಗಿಸಿಕೊಂಡರು. ಯುರೋಪಿಯನ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಂಧವ ಕತಾರ್ ಮಾಸ್ಟರ್ಸಿನಲ್ಲಿ ಜಂಟಿ ಏಳನೇ ಸ್ಥಾನ ಪಡೆದಿದ್ದರು.

2008: ಕಾಂಗ್ರೆಸ್ ಮುಖಂಡ ಎಚ್. ವಿಶ್ವನಾಥ್ ಅವರ ಆತ್ಮಕಥನ `ಹಳ್ಳಿ ಹಕ್ಕಿಯ ಹಾಡು' ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆ ಮೈಸೂರು ಪತ್ರಕರ್ತರ ಸಂಘದಲ್ಲಿ ಬಿಡುಗಡೆಯಾಯಿತು. ಹಿಂದಿನ ದಿನ ಸಮಾರಂಭದಲ್ಲಿ ಗದ್ದಲ ನಡೆದು ಪುಸ್ತಕ ಬಿಡುಗಡೆ ತಡೆ ಹಿಡಿಯಲ್ಪಟ್ಟಿತ್ತು.

2008: ಸೇತುಸಮುದ್ರಂ ವಿವಾದದ ಬಳಿಕ ರಾಮೇಶ್ವರಂನ ಪುರಾತನ ಸ್ಥಳಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಯಿತು. ಅವರನ್ನು ಸೇತುವೆ ಸಮೀಪ ಕೊಂಡೊಯ್ಯುವುದು ವ್ಯವಹಾರದ ರೂಪ ಪಡೆಯಿತು. ಸೂಕ್ತ ಅನುಮತಿಯಿಲ್ಲದೆ ಯಾತ್ರಾರ್ಥಿಗಳನ್ನು ಹೊತ್ತು ರಾಮೇಶ್ವರಂ ಸೇತುವೆಗೆ ಆಗಮಿಸಿದ ನಾಲ್ಕು ಮೀನುಗಾರಿಕೆ ದೋಣಿಗಳನ್ನು ಪೊಲೀಸರು ವಶಪಡಿಸಿಕೊಂಡರು.

2008: ವಿಶ್ವದ ಅತ್ಯಂತ ಶ್ರೀಮಂತ ಹತ್ತು ಉದ್ಯಮಿಗಳ ಪಟ್ಟಿಯಲ್ಲಿ ಕರ್ನಾಟಕದವರಾದ ವಿಪ್ರೋ ಮುಖ್ಯಸ್ಥ ಅಜೀಮ್ ಪ್ರೇಮ್ ಜಿ ಸೇರಿದಂತೆ ನಾಲ್ವರು ಭಾರತೀಯರು ಸ್ಥಾನ ಗಿಟ್ಟಿಸಿದರು. ಅಮೆರಿಕದ ಪ್ರಸಿದ್ಧ ವಾಣಿಜ್ಯ ನಿಯತಕಾಲಿಕ ಫೋಬ್ಸ್ ತಯಾರಿಸಿದ ಈ ಪಟ್ಟಿಯಲ್ಲಿ ಭಾರತೀಯ ಮುಂಚೂಣಿ ಉದ್ಯಮ ಸಂಸ್ಥೆಗಳ ಮುಖ್ಯಸ್ಥರಾದ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್, ಅಂಬಾನಿ ಸೋದರರಾದ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಹಾಗೂ ಐಟಿ ಉದ್ಯಮಿ ಅಜೀಮ್ ಪ್ರೇಮ್ ಜಿ ಸೇರಿದರು.

2007: ಭಾರತೀಯ ಅಣುಶಕ್ತಿ ಆಯೋಗದ ಸದಸ್ಯ ಸಿ.ಎನ್.ಆರ್. ರಾವ್ ಅವರಿಗೆ ಪಶ್ಚಿಮ ಬಂಗಾಳದ ವಿಶ್ವ ಭಾರತಿ ವಿಶ್ವ ವಿದ್ಯಾನಿಲಯದ ಕುಲಪತಿ ರಜತ್ ಕಾಂತ ರೇ ಅವರು ಅತ್ಯುನ್ನತ ಪದವಿಯಾದ ದೇಶಿಕೋತ್ತಮ (ಡಿ.ಲಿಟ್) ಪದವಿಯನ್ನು ಪ್ರದಾನ ಮಾಡಿದರು. ದೇಶ ವಿದೇಶಗಳಲ್ಲಿ ಅತ್ಯುನ್ನತ ಹುದ್ದೆಗಳನ್ನು ಹೊಂದಿರುವ ರಾವ್ ಅವರು 34 ವಿಶ್ವ ವಿದ್ಯಾಲಯಗಳ ಡಾಕ್ಟರೇಟ್ ಗೆ ಪಾತ್ರರಾಗಿದ್ದಾರೆ.

2007: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯವು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಹಾಗೂ ಖ್ಯಾತ ಸಾಹಿತಿ ನಾ.ಡಿಸೋಜಾ ಅವರಿಗೆ ಕುವೆಂಪು ವಿಶ್ವವಿದ್ಯಾಲಯವು 17ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು.

2006: ಮಲೇಷ್ಯಾ ರಾಜಧಾನಿ ಕ್ವಾಲಾಲಂಪುರದ ಹೊರವಲಯದಲ್ಲಿ ಇರುವ ಬಟು ಗುಹಾ ದೇವಾಲಯದ ಬಳಿ 2.4 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ವಿಶ್ವದ ಅತಿ ಎತ್ತರದ ಸುಬ್ರಹ್ಮಣ್ಯ ಸ್ವಾಮಿಯ ಬೃಹತ್ ಪ್ರತಿಮೆಯನ್ನು ಸಾವಿರಾರು ಹಿಂದೂ ಮತ್ತು ಇತರ ಧರ್ಮೀಯರ ಸಂಭ್ರಮೋತ್ಸಾಹದ ಮಧ್ಯೆ ಅನಾವರಣಗೊಳಿಸಲಾಯಿತು. ಬಟು ಗುಹೆಯ ಸುಬ್ರಹ್ಮಣ್ಯ ದೇವಾಲಯದ ಹೊರಭಾಗದಲ್ಲಿ ಭಾರತೀಯ ವಾಸ್ತುಶಿಲ್ಪಿಗಳು ಕೆತ್ತನೆ ಮಾಡಿರುವ ಈ ವಿಗ್ರಹದ ಎತ್ತರ 42.7 ಮೀಟರುಗಳು. ಇದನ್ನು ನಿರ್ಮಿಸಲು 250 ಟನ್ ಉಕ್ಕು ಹಾಗೂ 300 ಲೀಟರ್ ಚಿನ್ನದ ದ್ರಾವಣ ಬಳಸಲಾಗಿದ್ದು, 15 ಮಂದಿ ಭಾರತೀಯ ಶಿಲ್ಪಿಗಳು ಸತತ 3 ವರ್ಷಕಾಲ ಶ್ರಮಿಸಿದರು. ಈ ಪ್ರತಿಮೆಗೆ ಹೆಲಿಕಾಪ್ಟರುಗಳಿಂದ ಪುಷ್ಪಾರ್ಪಣೆ ಮಾಡಲಾಯಿತು. ಈ ಪ್ರತಿಮೆ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಯಿತು.

2006: ಹಾಲೆಂಡಿನ ವಿಕ್ ಆನ್ ಜೀಯಲ್ಲಿ ಮುಕ್ತಾಯಗೊಂಡ ಕೋರಸ್ ಚೆಸ್ ಪಂದ್ಯದಲ್ಲಿ ಭಾರತದ ವಿಶ್ವನಾಥನ್ ಆನಂದ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ವಿಶ್ವದಾಖಲೆ ನಿರ್ಮಿಸಿದರು. ಐದನೇ ಬಾರಿಗೆ ಈ ಪ್ರಶಸ್ತಿ ಗೆದ್ದು ವಿಶ್ವದಾಖಲೆ ನಿರ್ಮಿಸಿದ ಅವರು ಈ ಬಾರಿ ಮಾತ್ರ ಪ್ರಶಸ್ತಿಯನ್ನು ಆನಂದ್ ವಸಿಲಿನ್ ಟೊಪಲೊವ್ ಅವರ ಜೊತೆಗೆ ಹಂಚಿಕೊಳ್ಳಬೇಕಾಯಿತು.

2006: ಪೋಲೆಂಡಿನ ಕಟೋವೈಸ್ ನಗರದಲ್ಲಿ ಪಾರಿವಾಳ ಹಾರಾಟ ಸ್ಪರ್ಧೆಯ ಸಂದರ್ಭದಲ್ಲಿ ಪ್ರದರ್ಶನ ಕಟ್ಟಡ ಒಂದರ ಛಾವಣಿ ಕುಸಿದು ಕನಿಷ್ಠ 65 ಮಂದಿ ಮೃತರಾಗಿ 160ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2006: ಭಾರತ ತಂಡದ ಎಡಗೈ ಮಧ್ಯಮ ವೇಗದ ಬೌಲರ್ ಇರ್ಫಾನ್ ಪಠಾಣ್ ಕರಾಚಿಯಲ್ಲಿ ನಡೆದ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ಥಾನ ತಂಡದ ವಿರುದ್ಧ ಹ್ಯಾಟ್ರಿಕ್ ಸಾಧಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದರು. ಟೆಸ್ಟ್ ಇತಿಹಾಸದಲ್ಲೇ ಪಂದ್ಯದ ಮೊದಲ ಓವರಿನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಗೌರವಕ್ಕೂ ಪಠಾಣ್ ಪಾತ್ರರಾದರು. ಇದಕ್ಕೆ ಮುನ್ನ ಶ್ರೀಲಂಕಾದ ನುವಾನ್ ಜೋಯ್ಸಾ 2000-01ರಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಎರಡನೇ ಓವರಿನಲ್ಲಿ ಹ್ಯಾಟ್ರಿಕ್ ಸಂಪಾದಿಸಿದ್ದು ಈವರೆಗಿನ ದಾಖಲೆಯಾಗಿತ್ತು.

1970: ಕಲಾವಿದ ಮಧು ಪ್ಯಾಟಿ ಜನನ.

1955: ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ನೃತ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್ ಅವರು ಪ್ರಹ್ಲಾದ್- ಪ್ರೇಮಾ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.

1954: ಕಲಾವಿದ ಮೋಹನ ಸೋನ ಜನನ.

1930: ಕಲಾವಿದ ಕೆ.ಜೆ. ರಾವ್ ಜನನ.

1886: ಮೊತ್ತ ಮೊದಲ `ಪೆಟ್ರೋಲಿನಿಂದ ಚಲಿಸುವ ವಾಹನ'ಕ್ಕೆ ಕಾರ್ಲ್ ಬೆಂಝ್ ಪೇಟೆಂಟ್ ಪಡೆದ. ಮೂರು ಚಕ್ರದ ವಾಹನ ಮೂಲ `ಬೆಂಝ್ ಕಾರು' 1885ರಲ್ಲೇ ಮೊದಲ ಬಾರಿಗೆ ಚಲಿಸಿದ್ದರೂ ಅದರ ವಿನ್ಯಾಸಕ್ಕೆ 1886ರ ವರೆಗೂ ಪೇಟೆಂಟ್ ಲಭಿಸಿರಲಿಲ್ಲ.

1866: ನೊಬೆಲ್ ಪ್ರಶಸ್ತಿ ವಿಜೇತ ಕಾದಂಬರಿಕಾರ, ನಾಟಕಕಾರ, ಪ್ರಬಂಧಕಾರ ರೊಮೈನ್ ರೋಲ್ಲಂಡ್(1866-1944) ಹುಟ್ಟಿದ. ಈತ ಮಹಾತ್ಮಾ ಗಾಂಧಿ ಹಾಗೂ ರಾಮಕೃಷ್ಣ ಪರಮಹಂಸ ಅವರ ಜೀವನಚರಿತ್ರೆಗಳನ್ನೂ ಬರೆದ ವ್ಯಕ್ತಿ.

1856: ಬ್ರಿಟನ್ನಿನ ಅತ್ಯುನ್ನತ ಸೇನಾ ಗೌರವ `ವಿಕ್ಟೋರಿಯಾ ಕ್ರಾಸ್' ರಾಣಿ ವಿಕ್ಟೋರಿಯಾ ಅವರಿಂದ ಆರಂಭಗೊಂಡಿತು.

1820: ಮೂರನೇ ಜಾರ್ಜ್ ವಿಂಡ್ಸರ್ ಕ್ಯಾಸಲಿನಲ್ಲಿ 81ನೇ ವಯಸ್ಸಿನಲ್ಲಿ ನಿಧನನಾದ. 59 ವರ್ಷಗಳ ಕಾಲ ಬ್ರಿಟನ್ನನ್ನು ಆಳಿದ ಈತ ದೀರ್ಘಕಾಲ ಆಡಳಿತ ನಡೆಸಿದ ಬ್ರಿಟಿಷ್ ದೊರೆ.

1803: ಇಂಗ್ಲಿಷ್ ಜನರಲ್ ಹಾಗೂ ಭಾರತೀಯ ರಾಜಕೀಯ ಅಧಿಕಾರಿ ಸರ್ ಜೇಮ್ಸ್ ಔಟ್ ರಾಮ್ (1803-1863) ಹುಟ್ಟಿದ. ಈತ 1856ರಲ್ಲಿ ಅವಧ್ ರಾಜ್ಯವನ್ನು ಬ್ರಿಟಿಷ್ ಆಳ್ವಿಕೆಯ ಭಾರತಕ್ಕೆ ಸೇರ್ಪಡೆ ಮಾಡಿದ.

1780: ಭಾರತದ ಮೊತ್ತ ಮೊದಲ ಪತ್ರಿಕೆ `ಹಿಕ್ಕೀಸ್ ಬೆಂಗಾಲ್ ಗಝೆಟ್' ಅಥವಾ `ಕಲ್ಕತ್ತಾ ಜನರಲ್ ಅಡ್ವರ್ ಟೈಸರ್' ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ) ಇಂಗ್ಲಿಷಿನಲ್ಲಿ ಜೇಮ್ಸ್ ಆಗಸ್ಟಸ್ ಹಿಕ್ಕಿ ಅವರಿಂದ ಪ್ರಕಟಿತವಾಯಿತು. `ಹಿಕ್ಕೀಸ್ ಬೆಂಗಾಲ್ ಗಝೆಟ್' ನಲ್ಲಿ ಮೊತ್ತ ಮೊದಲ ಜಾಹೀರಾತು ಪ್ರಕಟಗೊಳ್ಳುವುದರೊಂದಿಗೆ ಭಾರತದಲ್ಲಿ ವಾಣಿಜ್ಯ ಜಾಹೀರಾತು ಆರಂಭಗೊಂಡಿತು.

Tuesday, March 2, 2010

ಇಂದಿನ ಇತಿಹಾಸ History Today ಜನವರಿ 28

ಇಂದಿನ ಇತಿಹಾಸ

ಜನವರಿ 28

ಪಾಕಿಸ್ಥಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಹಾ ನಿರ್ದೇಶಕ ಸ್ಥಾನಕ್ಕೆ ಪಾಕ್ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಅವರು ರಾಜೀನಾಮೆ ನೀಡಿದರು. ಪಿಸಿಬಿ ಉನ್ನತ ಹುದ್ದೆಯಲ್ಲಿದ್ದರೂ ತಮ್ಮ ಅಧಿಕಾರವನ್ನು ಬಹಳ ಸೀಮಿತಗೊಳಿಸಿದ್ದನ್ನು ಪ್ರತಿಭಟಿಸಿ ಮಿಯಾಂದಾದ್ ಈ ತೀರ್ಮಾನ ಕೈಗೊಂಡರು.

2009: ಮಾಜಿ ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ನವದೆಹಲಿಯಲ್ಲಿ ನೆರವೇರಿತು. ಸಂಜೆ 5 ಗಂಟೆಗೆ ಯಮುನಾ ತಟದ ಏಕತಾ ಸ್ಥಳದಲ್ಲಿ ವೆಂಕಟರಾಮನ್ ಅವರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.

2009: ದೇಶದ ಪ್ರತಿಯೊಬ್ಬ ಪ್ರಜೆಗೂ ಶಾಶ್ವತ ಗುರುತಿನ ಪತ್ರ ನೀಡುವ ಯೋಜನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪ್ರಾಧಿಕಾರ ರಚನೆಗೆ ಸರ್ಕಾರ ಅಧಿಸೂಚನೆ ಹೊರಡಿಸಿತು. ಈ ಗುರುತಿನ ಪತ್ರದಲ್ಲಿ ವಿಭಿನ್ನ ಸಂಖ್ಯೆ, ವ್ಯಕ್ತಿಯ ಭಾವಚಿತ್ರ ಹಾಗೂ ಜನ್ಮವೃತ್ತಾಂತದ ಮಾಹಿತಿ ಇರುತ್ತದೆ. ಅಲ್ಲದೇ ಮಕ್ಕಳಿಗೂ ಕೂಡ ಗುರುತಿನ ಪತ್ರ ನೀಡಲಾಗುತ್ತದೆ. ಗುರುತಿಗೆ ಸಂಬಂಧಿಸಿದಂತೆ ನಡೆಯುವ ಮೋಸ ಹಾಗೂ ದೇಶದ ಭದ್ರತೆ ಹಿತದೃಷ್ಟಿಯಿಂದ ಎಲ್ಲ ಪ್ರಜೆಗಳಿಗೂ ಗುರುತಿನ ಪತ್ರ ನೀಡುವುದು ಸರ್ಕಾರದ ಉದ್ದೇಶ. ಯೋಜನಾ ಆಯೋಗದ ಅಡಿಯಲ್ಲಿ ರಚನೆಯಾಗುತ್ತಿರುವ ರಾಷ್ಟ್ರೀಯ ಪ್ರಾಧಿಕಾರವು ಗುರುತಿನ ಸಂಖ್ಯೆಗಳನ್ನು ನೀಡುತ್ತದೆ. ಭಾರತೀಯ ಪೌರತ್ವ ಕಾಯ್ದೆ ಅನ್ವಯ ಜನಗಣತಿ ನಿರ್ದೇಶನಾಲಯದ ಮೂಲಕ ಹಾಗೂ ರಾಜ್ಯ ಮಟ್ಟದಲ್ಲಿ ರಚನೆಯಾಗುವ ಇಂಥದೇ ಮಾದರಿಯ ಘಟಕಗಳ ಸಹಕಾರದೊಂದಿಗೆ ಇದು ಕಾರ್ಯ ನಿರ್ವಹಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು. ಆರಂಭಿಕ ಹಂತದಲ್ಲಿ ಈ ಗುರುತಿನ ಪತ್ರವನ್ನು ಎಲ್ಲ ಮತದಾರರಿಗೂ ನೀಡಲಾಗುತ್ತದೆ. ಕ್ರಮೇಣ ಇದನ್ನು 18 ವರ್ಷದೊಳಗಿನವರಿಗೂ ಕೊಡಲಾಗುತ್ತದೆ.

2009: ಪತ್ರಕರ್ತ ಶಿವಪ್ರಸಾದ್ ಟಿ.ಆರ್. ಬರೆದ 'ಚಂದ್ರಯಾನ' ಪುಸ್ತಕವನ್ನು ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ನವದೆಹಲಿಯಲ್ಲಿ ಬಿಡುಗಡೆ ಮಾಡಿದರು. ಕನ್ನಡ ಭಾಷೆಯಲ್ಲಿರುವ ಪುಸ್ತಕದ ಒಂದು ಪುಟವನ್ನು ಲೇಖಕರಿಂದ ಓದಿಸಿ ತನ್ಮಯತೆಯಿಂದ ಕೇಳಿದ ಕಲಾಮ್, ತಾವೇ ಕೆಲವು ಪ್ಯಾರಾಗಳನ್ನು ಆಯ್ದು ಅದರ ಕನ್ನಡ ಭಾಷಾಂತರವನ್ನೂ ತಿಳಿದುಕೊಂಡರು. 'ಚಂದ್ರನ ಮೇಲೆ ಮನುಷ್ಯ ಹೋಗಲು ಸಾಧ್ಯ ಎಂದು 1860ರಷ್ಟು ಹಿಂದೆಯೇ ಕಾನ್ಸಾಂಟನ್ ಟಿಶೆಲ್ಸ್ ಎಂಬ ಕುರುಡ ವಿಜ್ಞಾನಿ ಹೇಳಿದ್ದನ್ನು ನೆನಪಿಸಿದ ಮಾಜಿ ರಾಷ್ಟ್ರಪತಿಗಳು, ಚಂದ್ರಯಾನದ ಕಲ್ಪನೆಯ ನಿಜವಾದ ರೂವಾರಿ ಕಾನ್ಸಾಂಟ್' ಎಂದರು. ವಿಜ್ಞಾನದ ವಿಷಯವನ್ನು ಕನ್ನಡದಲ್ಲಿ ಬರೆದ ಶಿವಪ್ರಸಾದ್ ಪ್ರಯತ್ನವನ್ನು ಕಲಾಮ್ ಶಾಘ್ಲಿಸಿದರು. ಬಿಡುಗಡೆಗೊಂಡ ಪುಸ್ತಕದ ಮೊದಲ ಪ್ರತಿಯನ್ನು 'ದಿ ವೀಕ್' ಪತ್ರಿಕೆಯ ಸ್ಥಾನೀಯ ಸಂಪಾದಕ ಸಚ್ಚಿದಾನಂದ ಮೂರ್ತಿ ಅವರಿಗೆ ಅಬ್ದುಲ್ ಕಲಾಂ ನೀಡಿದರು.

2009: ತಿಂಗಳು ಗಟ್ಟಲೇ ಆಕಾಶದಲ್ಲೇ ಕಾಲ ಕಳೆಯುವ ಗಗನಯಾನಿಗಳು ಮೂಳೆಗಳ ಶಕ್ತಿ ಕಳೆದುಕೊಂಡು ನಂತರದ ಜೀವನದಲ್ಲಿ ಭಾರಿ ಪ್ರಮಾಣದಲ್ಲಿ ಮೂಳೆಗಳ ಮುರಿತಕ್ಕೆ ಒಳಗಾಗುತ್ತಾರೆ ಎಂದು ಕ್ಯಾಲಿಫೋರ್ನಿಯಾದ ವಿವಿ ಹೇಳಿತು. ಆರು ದಿನಗಳಿಂದ ನಾಲ್ಕು ತಿಂಗಳು ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾಲ ಕಳೆದ 13 ಯಾನಿ ಗಳನ್ನು ಪರಿಶೀಲಿಸಿದಾಗ ಅವರ ಸೊಂಟದ ಮೂಳೆಗಳ ಶಕ್ತಿ ಶೇ 14 ರಷ್ಟು ಕಡಿಮೆಯಾಗಿದ್ದುದು ಬೆಳಕಿಗೆ ಬಂತು. ಮೂವರು ಗಗನ ಯಾನಿಗಳಲ್ಲಿ ಅಸ್ಥಿ ಗಳ ತೊಂದರೆ ಹೊಂದಿರುವ ವೃದ್ಧ ಮಹಿಳೆಯರ ಮೂಳೆಗಳಿಗಿಂತ ಶೇ. 20 ರಿಂದ 30 ದುರ್ಬಲವಾಗಿದ್ದುದು ಗೊತ್ತಾಯಿತು.

2009: ನಂಬಿದ್ರೆ ನಂಬಿ ಬಿಟ್ಟರೆ ಬಿಡಿ, ಹೆಸರು ಇಟ್ಟಿರುವ ಹಸುಗಳು ಹೆಚ್ಚು ಹಾಲು ಕೊಡುತ್ತವೆ. ಇದಕ್ಕೆ ವಿರುದ್ಧವಾಗಿ ಹೆಸರಿಡದ ಹಸುಗಳು ಹಾಲು ಕೊಡುವ ಪ್ರಮಾಣ ಕಡಿಮೆ. ಈ ಸಂಗತಿ ನ್ಯೂಕ್ಯಾಸ್ಟಲ್ ವಿಶ್ವವಿದ್ಯಾಲಯದಲ್ಲಿ ಮಾಡಲಾದ ಸಂಶೋಧನೆಯಿಂದ ಹೊರಬಿದ್ದಿತು. ಹಸುಗಳಿಗೆ ಹೆಸರಿಟ್ಟು ಅವುಗಳನ್ನು ಪ್ರತ್ಯೇಕವಾಗಿ ಆರೈಕೆ ಮಾಡಿದರೆ ಅವು ಕೊಡುವ ಹಾಲಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತದೆ ಎಂದು ಅಧ್ಯಯನ ಹೇಳಿತು.

2009: ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ ಸುಮಾರು 22,600 ಕಿ.ಮೀ ರಸ್ತೆ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಲೋಕೋಪಯೋಗಿ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಹೂಡಿಕೆದಾರರು ಮತ್ತು ಹಣಕಾಸು ಸಂಸ್ಥೆಗಳ ಮುಖಂಡರ ಸಭೆಗೂ ಮುನ್ನ ನಡೆದ ಸಮಾರಂಭದಲ್ಲಿ ಅವರು ಹೊಸ ಯೋಜನೆಗೆ ಹಸಿರು ನಿಶಾನೆ ತೋರಿದರು. ಒಟ್ಟು 22,600 ಕಿ.ಮೀ ರಸ್ತೆಯಲ್ಲಿ, 10 ಸಾವಿರ ಕಿ.ಮೀ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಗಳು ಹಾಗೂ 12,600 ಕಿ.ಮೀ ಗ್ರಾಮಾಂತರ ರಸ್ತೆಗಳು ಸೇರಿವೆ.

2009: ಪಾಕಿಸ್ಥಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಹಾ ನಿರ್ದೇಶಕ ಸ್ಥಾನಕ್ಕೆ ಪಾಕ್ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಅವರು ರಾಜೀನಾಮೆ ನೀಡಿದರು. ಪಿಸಿಬಿ ಉನ್ನತ ಹುದ್ದೆಯಲ್ಲಿದ್ದರೂ ತಮ್ಮ ಅಧಿಕಾರವನ್ನು ಬಹಳ ಸೀಮಿತಗೊಳಿಸಿದ್ದನ್ನು ಪ್ರತಿಭಟಿಸಿ ಮಿಯಾಂದಾದ್ ಈ ತೀರ್ಮಾನ ಕೈಗೊಂಡರು.

2008: ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ವಿಕೆಟ್ ಕೀಪರ್ `ಗಿಲಿ' ಈದಿನ ಮುಕ್ತಾಯಗೊಂಡ ಅಡಿಲೇಡ್ ಪಂದ್ಯದೊಂದಿಗೆ ಟೆಸ್ಟ್ ಕ್ರಿಕೆಟಿಗೆ ಗುಡ್ ಬೈ ಹೇಳಿದರು. ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುತ್ತಿದ್ದಂತೆಯೇ ಆಸೀಸ್ ತಂಡದ ಪ್ರತಿಯೊಬ್ಬ ಸದಸ್ಯರೂ ಗಿಲ್ ಕ್ರಿಸ್ಟ್ ಅವರನ್ನು ತಬ್ಬಿಕೊಂಡು ವಿದಾಯ ಹೇಳಿದರು. ಈ ವೇಳೆ ಕ್ರೀಸ್ನಲ್ಲಿದ್ದ ಭಾರತ ತಂಡದ ನಾಯಕ ಅನಿಲ್ ಕುಂಬ್ಳೆ ಅವರೂ ಗಿಲ್ಕ್ರಿಸ್ಟ್ ಅವರನ್ನು ಅಪ್ಪಿಕೊಂಡರು. ಭಾರತ ತಂಡದ ಡ್ರೆಸಿಂಗ್ ಕೋಣೆಗೆ ತೆರಳಿ ಪ್ರತಿಯೊಬ್ಬ ಆಟಗಾರನಿಗೆ ಹಸ್ತಲಾಘವ ನೀಡಿದ `ಗಿಲಿ' ಎಲ್ಲರ ಕೇಂದ್ರಬಿಂದುವಾಗಿ ಬದಲಾದರು. ಕೆಲವೊಂದು ಭಾವಪೂರ್ಣ ಕ್ಷಣಗಳಿಗೆ ಅಡಿಲೇಡಿನಲ್ಲಿ ನೆರೆದ ಪ್ರೇಕ್ಷಕರು ಸಾಕ್ಷಿಯಾದರು.

2008: ಹೈದರಾಬಾದಿನ 21ರ ಹರೆಯದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಈದಿನ ಮತ್ತೊಂದು ಮೈಲಿಗಲ್ಲು ನೆಟ್ಟು ಏಷ್ಯಾದ ನಂಬರ್ ಒನ್ ಟೆನಿಸ್ ಆಟಗಾರ್ತಿ ಎನಿಸಿದರು. ಸಾನಿಯಾ ಅವರು ಈದಿನ ಬಿಡುಗಡೆಯಾದ ಡಬ್ಲ್ಯುಟಿಎ ರ್ಯಾಂಕಿಂಗ್ ಪಟ್ಟಿಯಲ್ಲಿ 29ನೇ ಸ್ಥಾನ ಪಡೆದು ಏಷ್ಯಾದ ಅಗ್ರ ರ್ಯಾಂಕಿಂಗಿನ ಅಟಗಾರ್ತಿ ಎಂಬ ಗೌರವ ಪಡೆದುಕೊಂಡರು. ಇದುವರೆಗೂ ಈ ಗೌರವ ಚೀನಾದ ನಾ ಲೀ ಅವರ ಹೆಸರಿನಲ್ಲಿ ಇತ್ತು. ಹೊಸ ಪಟ್ಟಿಯಲ್ಲಿ ಲೀ 32ನೇ ಸ್ಥಾನಕ್ಕೆ ಕುಸಿದರು.

2008: ಜಷ್ಪುರ ಜಿಲ್ಲೆಯ ಜೈಮಾರ್ಗ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ನಕ್ಸಲರನ್ನು ಬಂಧಿಸಿ, ಅವರಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡರು. ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಮಾಹಿತಿ ಆಧರಿಸಿ ಸಿ ಐ ಎಸ್ ಎಫ್ ಮತ್ತು ಪೊಲೀಸ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಪೊಲೀಸರು ಅಶೋಕ್ ಒರಾನ್, ವಿಶ್ವೇಶ್ವರ್ ಮತ್ತು ಜಾರ್ಜ್ ಮಿಂಜ್ ಎಂಬ ಮೂವರು ನಕ್ಸಲರನ್ನು ಬಂಧಿಸಿದರು.

2008: ಥಾಯ್ಲೆಂಡ್ ಸಂಸತ್ ಪುಗ್ನೇಸಿಯಸ್ ರೈಟ್-ವಿಂಗರ್ ಸಮಕ್ ಸುಂದರವೆಜ್ ಅವರನ್ನು ಹೊಸ ಪ್ರಧಾನಿಯಾಗಿ ಆಯ್ಕೆ ಮಾಡಿತು. ಇದರಿಂದಾಗಿ 2006ರ ರಕ್ತರಹಿತ ಕ್ರಾಂತಿಯ ಬಳಿಕ ದೇಶದಲ್ಲಿ ಮತ್ತೆ ಪ್ರಾತಿನಿಧಿಕ, ನಾಗರಿಕ ಸರ್ಕಾರ ಮರಳಿದಂತಾಯಿತು. 72 ವರ್ಷದ ಈ ಮಾಜಿ ಗವರ್ನರ್, ಗಡಿಪಾರಾಗಿರುವ ಪದಚ್ಯುತ ಪ್ರಧಾನಿ ಥಕ್ಸಿನ್ ಶಿನವಾತ್ರ ಅವರನ್ನು ಮರಳಿ ಸ್ವದೇಶಕ್ಕೆ ಕರೆತರುವ ಪಣತೊಟ್ಟು, ಸೇನೆ ಮತ್ತು ರಾಜಪ್ರಭುತ್ವದ ಪ್ರಮುಖರನ್ನು ದಂಗೆಯ ರೂವಾರಿಗಳೆಂದು ದೂಷಿಸಿ, ಸಂಘರ್ಷಕ್ಕೆ ನಾಂದಿ ಹಾಡಿದ್ದರು.

2007: ಬ್ರಿಟನ್ನಿನ `ಚಾನೆಲ್ 4' ಟಿವಿ ವಾಹಿನಿ ಪ್ರಸಾರ ಮಾಡುತ್ತಿದ್ದ `ಸೆಲೆಬ್ರಿಟಿ ಬಿಗ್ ಬ್ರದರ್' ಕಾರ್ಯಕ್ರಮದಲ್ಲಿಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಒಟ್ಟು ಮತಗಳ ಪೈಕಿ ಶೇ 67ರಷ್ಟು ಮತಗಳನ್ನು ಗಳಿಸಿ ಗೆಲುವಿನ ನಗೆ ಬೀರಿದರು. ಇದರಿಂದಾಗಿ 85 ಲಕ್ಷ ರೂಪಾಯಿಗಳಷ್ಟು (1 ಲಕ್ಷ ಪೌಂಡ್) ನಗದು ಬಹುಮಾನ ಅವರ ಮಡಿಲಿಗೆ ಬಿದ್ದಿತು. ಕಾರ್ಯಕ್ರಮದಲ್ಲಿ ಜನಾಂಗೀಯ ನಿಂದನೆ ಆರೋಪ ಹೊತ್ತಿದ್ದ ಮಾಜಿ ಭುವನ ಸುಂದರಿ ಡೇನಿಯೆಲಾ ಲಾಯ್ಡ್ ಮತ್ತು ಜಾಕ್ ಟ್ವೀಡ್ ಅವರು ಅಂತಿಮ ಹಣಾಹಣಿಯ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು. ಡೇನಿಯ್ಲೆಲಾ ಈ ಮೊದಲು ಜನಾಂಗೀಯ ನಿಂದನೆ ಮಾಡಿದ್ದಕ್ಕಾಗಿ ಶಿಲ್ಪಾ ಅವರ ಕ್ಷಮೆ ಯಾಚಿಸಿದ್ದರು. ಇದಕ್ಕೂ ಮುನ್ನ ಜನಾಂಗೀಯ ನಿಂದನೆಗೈದ ಆರೋಪಕ್ಕೆ ಗುರಿಯಾದ ಜೇಡ್ ಗೂಡಿ ನಿರ್ಗಮಿಸಿದ್ದರು. ಜನವರಿ 2ರಂದು ಆರಂಭಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಸ್ಪರ್ಧಾಳುಗಳನ್ನು ಒಂದು ಮನೆಯಲ್ಲಿ ಇರುವಂತೆ ಮಾಡಿ, ಅವರ ನಡವಳಿಕೆಗಳನ್ನು ಹಾಗೂ ದೈನಂದಿನ ಕೆಲಸಗಳಲ್ಲಿ ಉದ್ಭವವಾಗುವ ಸಮಸ್ಯೆಗಳನ್ನು ಇವರೆಲ್ಲ ಹೇಗೆ ನಿಭಾಯಿಸುವರು ಎಂಬುದನ್ನೆಲ್ಲ ಚಿತ್ರೀಕರಿಸಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸ್ಪರ್ಧಾಳುಗಳು ಶಿಲ್ಪಾ ವಿರುದ್ಧ ಮಾಡಲಾದ ಜನಾಂಗೀಯ ಟೀಕೆಗಳ ಬಗ್ಗೆ ಸುದ್ದಿ ಮಾಧ್ಯಮಗಳ ಕಣ್ಗಾವಲು ಸಂಸ್ಥೆಯಾದ `ಆಫ್ ಕಾಮ್'ಗೆ 40 ಸಾವಿರಕ್ಕೂ ಹೆಚ್ಚು ದೂರುಗಳು ಬಂದಿದ್ದವು. ವಿವಾದಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಜನ ಪ್ರತಿನಿಧಿಗಳು ಸಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಬ್ರಿಟನ್ನಿನ ಸುದ್ದಿ ಮಾಧ್ಯಮಗಳೂ ಈ ಘಟನೆಯ ವಿರುದ್ಧ ದನಿ ಎತ್ತಿದ್ದವು.

2007: ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆಯಾಗುವ ಸಲುವಾಗಿ `ಕರಾಟೆ ಭಾನುಮತಿ' ಎಂದೇ ಖ್ಯಾತರಾಗಿರುವ 47 ವರ್ಷದ ಮಹಿಳೆ ತಮಿಳುನಾಡಿನ ಚೆನ್ನೈಯಲ್ಲಿ ಗಾಜಿನ ಚೂರು ಹಾಗೂ 1525 ಮೊಳೆಗಳಿದ್ದ ಹಲಗೆಯಲ್ಲಿ ಪವಡಿಸಿ, ತನ್ನ ಮೈಮೇಲೆ 565 ಮೋಟಾರ್ ಸೈಕಲ್ಲುಗಳನ್ನು ಓಡಿಸಿಕೊಂಡರು. ಈ ದಾಖಲೆ ಸ್ಥಾಪನೆಯ ಒಂದು ಭಾಗವಾಗಿ ಹಲಗೆಯಲ್ಲಿ ಮಲಗಿದ್ದಾಗಲೇ ಆಕೆಯ ಮೇಲೆ 500 ಕಿ.ಗ್ರಾಂ. ತೂಕದ ಗ್ರಾನೈಟ್ ಕಲ್ಲನ್ನು ಇರಿಸಿ ಒಡೆದು ಹಾಕಲಾಯಿತು. ಈ ಸಾಹಸವನ್ನು ನಗರದ ಚಾಲೆಂಜರ್ಸ್ ಅಕಾಡೆಮಿ ಸಂಘಟಿಸಿತ್ತು. ಲಿಮ್ಕಾ ದಾಖಲೆ ಸ್ಥಾಪನೆ ಸಲುವಾಗಿ ಇನ್ನೊಂದು ಸಾಹಸದಲ್ಲಿ ಎಸ್. ರಾಜಾ ಅವರು 32 ಸೆಕೆಂಡುಗಳಲ್ಲಿ ತಮ್ಮ ಒಂದೇ ತೋಳನ್ನು 32 ಸಲ ಮೇಲಕ್ಕೆ ಬೀಸಿ ದಾಖಲೆ ನಿರ್ಮಿಸಿದರು. ಈ ಹಿಂದೆ ಮುಂಬೈಯ ನಾಯಕ್ ಅವರು 41.5 ಸೆಕೆಂಡಿನಲ್ಲಿ 27 ಸಲ ತಮ್ಮ ತೋಳನ್ನು ಮೇಲಕ್ಕೆ ಬೀಸಿ ದಾಖಲೆ ಸ್ಥಾಪಿಸಿದ್ದರು.

2007: `ಜರಾ ಹೊಲ್ಲೆ ಹೊಲ್ಲೆ ಚಲೊ ಮೇರೆ ಸಾಜನಾ', `ಯೇ ಲೊ ಮೇ ಹಾರಿ ಪಿಯಾ'ದಂತಹ ಸುಮಧುರ ಗೀತೆಗಳಿಗೆ ಸಂಗೀತ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ಓಂಕಾರ್ ಪ್ರಸಾದ್ ನಯ್ಯರ್ (ಒ.ಪಿ.ನಯ್ಯರ್) (82) ಈದಿನ ಮಧ್ಯಾಹ್ನ ಟಿ.ವಿ. ನೋಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಆಸ್ಪತ್ರೆಗೆ ಒಯ್ಯುವ ದಾರಿಯಲ್ಲಿಯೇ ನಿಧನರಾದರು. ಕಳೆದ ಕೆಲ ವರ್ಷಗಳಿಂದ ತೆರೆಮರೆಯಲ್ಲಿಯೇ ಇದ್ದ ನಯ್ಯರ್ ತಮ್ಮ ಕುಟುಂಬದವರಿಂದ ದೂರವಾಗಿ ಆಪ್ತರಾಗಿದ್ದ ನಖ್ವಾ ಕುಟುಂಬದ ಜೊತೆ ಥಾಣೆಯಲ್ಲಿ ವಾಸಿಸುತ್ತಿದ್ದರು. ತಮ್ಮ ಪಂಜಾಬಿ ಸೊಗಡಿನ ಮಾಂತ್ರಿಕ ಸಂಗೀತದಿಂದ ನಯ್ಯರ್ ಅವರು ಸಂಗೀತ ಪ್ರೇಮಿಗಳು ಎಂದೂ ಮರೆಯಲಾರದ ಮಾಧುರ್ಯಭರಿತ ಚಿತ್ರಗೀತೆಗಳನ್ನು ನೀಡಿದ್ದರು. ತಮ್ಮ ಸಮಕಾಲೀನರಾದ ಭಾರತದ ಕೋಗಿಲೆ ಖ್ಯಾತಿಯ ಲತಾ ಮಂಗೇಶ್ಕರ್ ಜೊತೆ ಅವರು ಒಮ್ಮೆಯೂ ಕೆಲಸ ಮಾಡಿದವರಲ್ಲ. ಆದರೂ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. 50-60 ದಶಕದಲ್ಲಿ ಗಾಯಕ ಮಹಮ್ಮದ್ ರಫಿ ಜೊತೆ ಮಧುರ ಗೀತೆಗಳನ್ನು ನೀಡಿದ ನಯ್ಯರ್, ಆಶಾ ಭೋಂಸ್ಲೆ ವೃತ್ತಿಜೀವನ ಉತ್ತಂಗಕ್ಕೆ ಏರಲು ಕಾರಣರಾಗಿದ್ದರು. `ಮೇರಾ ನಾಮ್ ಚಿನ್ ಚಿನ್ ಚೂ', `ಆಯಿಯೇ ಮೆಹರಬಾನ್ ಬೈಠಿಯೇ ಜಾನೆಜಾ' (ಹೌರಾ ಬ್ರಿಜ್), `ಮಾಂಗ್ ಕೆ ಸಾತ್ ತುಮ್ಹಾರಾ' (ನಯಾ ದೌರ್)ದಂತಹ ಗೀತೆಗಳು ನಯ್ಯರ್ ಪ್ರತಿಭೆಗೆ ಸಾಕ್ಷಿ. 1926ರಲ್ಲಿ ಅವಿಭಜಿತ ಲಾಹೋರಿನಲ್ಲಿ ಜನಿಸಿದ್ದ ನಯ್ಯರ್, ದೇಶ ವಿಭಜನೆಯ ಬಳಿಕ ಲಾಹೋರಿನಿಂದ ಅಮೃತಸರಕ್ಕೆ ಬಂದು ನೆಲೆಸಿದರು. ಸಂಗೀತದ ಹುಚ್ಚಿನಿಂದ 1949ರಲ್ಲಿ ಚಿತ್ರನಗರಿ ಮುಂಬೈಗೆ ಬಂದಿಳಿದರು. ಐದಾರು ವರ್ಷದ ಹೋರಾಟದ ನಂತರ ಗುರುದತ್ ಅವರ `ಆರ್ ಪಾರ್' ನಯ್ಯರ್ ಅವರಿಗೆ ಬ್ರೇಕ್ ನೀಡಿತು. ಅಲ್ಲಿಂದ ಹಿಂದಿರುಗಿ ನೋಡದ ನಯ್ಯರ್ 50-60 ದಶಕದಲ್ಲಿ ಹಿಂದಿ ಚಿತ್ರರಂಗವನ್ನು ಅಕ್ಷರಶಃ ಆಳಿದರು. `ಹೌರಾಬ್ರಿಜ್', `ಕಾಶ್ಮೀರ್ ಕಿ ಕಲಿ', ಮಿ. ಆ್ಯಂಡ್ ಮಿಸೆಸ್ 55', `ಬಾಜ್' ನಯ್ಯರ್ ಸಂಗೀತಕ್ಕೆ ಕನ್ನಡಿ. 1957ರಲ್ಲಿ `ನಯಾ ದೌರ್' ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ನಯ್ಯರ್, ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.

2007: ಬಾಲಾಪರಾಧಿ ಆಶ್ರಯಧಾಮದ ಸುಮಾರು 46 ಮಕ್ಕಳು ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ, ಧಾಮದ ಕಟ್ಟಡದ ಗೋಡೆಯ ಒಂದು ಭಾಗವನ್ನು ಒಡೆದು ಪರಾರಿಯಾದ ಘಟನೆ ಬೆಂಗಳೂರು ನಗರದ ಮಡಿವಾಳದಲ್ಲಿ ನಡೆಯಿತು. ತಪ್ಪಿಸಿಕೊಂಡ ಬಾಲಕರಲ್ಲಿ ಕೆಲವರನ್ನು ಪೋಷಕರು ಆಶ್ರಯಧಾಮಕ್ಕೆ ಒಪ್ಪಿಸಿದರೆ, ಒಬ್ಬನನ್ನು ಕೋರಮಂಗಲದ ಫೋರಂ ವಾಣಿಜ್ಯ ಮಳಿಗೆ ಬಳಿ ಪೊಲೀಸರು ಬಂಧಿಸಿದರು.

2007: ಖ್ಯಾತ ಹಿಂದಿ ಸಾಹಿತಿ, ಪತ್ರಕರ್ತ ಪದ್ಮ ಭೂಷಣ ಕಮಲೇಶ್ವರ್ (74) ಹೃದಯಾಘಾತದಿಂದ ನವದೆಹಲಿಯ ತಮ್ಮ ಮನೆಯಲ್ಲಿ ನಿಧನರಾದರು. ಕಮಲೇಶ್ವರ್ ಅವರು ಸುಮಾರು 30ಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ. 100ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಅವರು ಸ್ಕ್ರಿಪ್ಟ್ ರಚಿಸಿದ್ದಾರೆ.

2007: ಚೀನಾದ ಶಾಂಘಾಯಿ ದಕ್ಷಿಣ ರೈಲ್ವೆ ನಿಲ್ದಾಣದಿಂದ ಅತಿವೇಗದ ಬುಲೆಟ್ ರೈಲುಗಾಡಿಯು ಶಾಂಘಾಯಿಯಿಂದ ಪ್ರಯಾಣ ಹೊರಟಿತು. ಗಂಟೆಗೆ 250 ಕಿ.ಮೀ. ಪ್ರಯಾಣ ಮಾಡಬಲ್ಲ ಈ ರೈಲುಗಾಡಿ ಶಾಂಘಾಯಿ- ಬೀಜಿಂಗ್ ಮಧ್ಯೆ ಸಂಚರಿಸುವುದು.

2007: ಧರ್ಮಸ್ಥಳದ ರತ್ನ ಮಂಟಪದಲ್ಲಿ ಭಗವಾನ್ ಬಾಹುಬಲಿಯ ಮೂರನೇ ಮಹಾಮಸ್ತಕಾಭಿಷೇಕವನ್ನು ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.

2007: ಬೆಂಗಳೂರಿನ ಅರಮನೆ ಮೈದಾನದಲ್ಲಿ ವೇದಾಂತ ಭಾರತಿ ಸಂಸ್ಥೆಯ ವತಿಯಿಂದ ಯಡತೊರೆ ಶ್ರೀ ಶಂಕರ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ಸುಮಾರು ಒಂದು ಲಕ್ಷ ಮಹಿಳೆಯರು ಶಂಕರಾಚಾರ್ಯರ `ಸೌಂದರ್ಯ ಲಹರಿ'ಯನ್ನು ಸಾಮೂಹಿಕವಾಗಿ ಪಾರಾಯಣ ಮಾಡಿ ಇತಿಹಾಸ ನಿರ್ಮಿಸಿದರು.

2006: ಕರ್ನಾಟಕದ ಮುಖ್ಯಮಂತ್ರಿ ಧರ್ಮಸಿಂಗ್ ರಾಜೀನಾಮೆ. ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರಿಂದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನೂತನ ಸರ್ಕಾರ ರಚನೆಗೆ ಅಧಿಕೃತ ಆಹ್ವಾನಪತ್ರ. ಫೆ.3ರಂದು ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಜನತಾದಳ (ಎಸ್) - ಬಿಜೆಪಿ ಪರ್ಯಾಯ ಸರ್ಕಾರದ ರಚನೆಗೆ ನಿರ್ಧಾರ.

2006: ಭೂಮಿಯ ಮೇಲ್ಮೈಯಿಂದ ಮೇಲ್ಮೈಗೆ ಜಿಗಿಯುವ ಆಕಾಶ್ ಕ್ಷಿಪಣಿಯನ್ನು ಬಾಲಸೂರ್ ಮಧ್ಯಂತರ ಪರೀಕ್ಷಾ ಕೇಂದ್ರದಲ್ಲಿ ಎರಡು ಬಾರಿ ಪರೀಕ್ಷಾರ್ಥವಾಗಿ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

2006: ಸಂಸದರ ಪ್ರದೇಶಾಭಿವೃದ್ಧಿ ದುರ್ಬಳಕೆಯ ತನಿಖೆ ಕುರಿತ ಸಂಸದೀಯ ಸಮಿತಿಯ ಮುಖ್ಯಸ್ಥರಾಗಿ ಕಿಶೋರ್ ಚಂದ್ರ ಅವರನ್ನು ನೇಮಿಸಲಾಯಿತು.

1986: ಸ್ಪೇಸ್ ಷಟಲ್ ನೌಕೆ `ಚಾಲೆಂಜರ್' ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ಸ್ವಲ್ಪ ಹೊತ್ತಿನಲ್ಲೇ ಸ್ಫೋಟಗೊಂಡಿತು. ಶಾಲಾ ಶಿಕ್ಷಕಿ ಕ್ರಿಸ್ಟಾ ಮೆಕ್ಲಿಫ್ ಸೇರಿದಂತೆ ಅದರಲ್ಲಿದ್ದ ಎಲ್ಲ 7 ಮಂದಿ ಗಗನಯಾನಿಗಳೂ ದುರಂತದಲ್ಲಿ ಸಾವನ್ನಪ್ಪಿದರು.

1953: ಡಾ. ರಾಜೇಂದ್ರ ಪ್ರಸಾದ್ ಅವರು ಭಾರತದಲ್ಲಿ ಸಂಗೀತ, ನೃತ್ಯ, ನಾಟಕ ಅಭಿವೃದ್ಧಿಗಾಗಿ ನವದೆಹಲಿಯಲ್ಲಿ ಸಂಗೀತ ನಾಟಕ ಅಕಾಡೆಮಿಯನ್ನು ಉದ್ಘಾಟಿಸಿದರು.

1950: ಭಾರತದ ಸುಪ್ರೀಂಕೋರ್ಟ್ ನವದೆಹಲಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ಸಂಸತ್ ಕಟ್ಟಡದ ಚೇಂಬರ್ ಆಫ್ ಪ್ರಿನ್ಸಸ್ಸಿನಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ದಿ ಫೆಡರಲ್ ಕೋರ್ಟ್ ಆಫ್ ಇಂಡಿಯಾ ಈ ಸ್ಥಳದಲ್ಲೇ 1937ರಿಂದ 1950ರವರೆಗೆ 12 ವರ್ಷಗಳ ಕಾಲ ಕಾರ್ಯ ನಿರ್ವಹಿಸಿತ್ತು. ಈಗಿನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವವರೆಗೆ ಸುಪ್ರೀಂಕೋರ್ಟ್ ಕೂಡಾ ಇದೇ ಸ್ಥಳದಿಂದ ಕಾರ್ಯ ನಿರ್ವಹಿಸಿತು.

1945: ರಂಗಭೂಮಿಯ ಪ್ರತಿಭಾನ್ವಿತ ನಟ, ಸಂಘಟಕ ರಾಜಶೇಖರ ಕದಂಬ ಅವರು ಕದಂಬರದಾಸಪ್ಪ- ವೆಂಕಟಮ್ಮ ದಂಪತಿಯ ಮಗನಾಗಿ ಬೆಂಗಳೂರು ಜಿಲ್ಲೆಯ ಗೊಟ್ಟಿಗೆರೆಯಲ್ಲಿ ಜನಿಸಿದರು.

1933: ಲಂಡನ್ನಿನ ವಾಲ್ ಡೋರ್ಫ್ ಹೋಟೆಲಿನಲ್ಲಿ ಕೇಂಬ್ರಿಜಿನ ಭಾರತೀಯ ಮುಸ್ಲಿಂ ಪದವೀಧರ ರಹಮತ್ ಅಲಿ ಚೌಧರಿ ಭಾರತದ ವಿಭಜನೆಯ ಪ್ರಸ್ತಾವವಿದ್ದ ಟಿಪ್ಪಣಿಯೊಂದನ್ನು ಓದಿದ. `ನೌ ಆರ್ ನೆವರ್' ಎಂಬ ಪುಟ್ಟ ಪುಸ್ತಕವೊಂದನ್ನು ಬರೆದಿದ್ದ ಆತ ಪಾಕಿಸ್ಥಾನಕ್ಕೆ ಈ ಹೆಸರು ಕೊಟ್ಟಿದ್ದ. (ಪಾಕಿಸ್ಥಾನ ಅಥವಾ `ಲ್ಯಾಂಡ್ ಆಫ್ ಪ್ಯೂರ್' ಪಂಜಾಬಿಗೆೆ ಪಿ, ಆಫ್ಘಾನಿಯಾಕ್ಕೆ ಎ, ವಾಯುವ್ಯ ಗಡಿ ಪ್ರಾಂತಕ್ಕೆ ರಹಮತ್ ಅಲಿ, ಕಾಶ್ಮೀರಕ್ಕೆ ಕೆ, ಸಿಂದ್ ಗೆ ಎಸ್, ಬಲೂಚಿಸ್ಥಾನಕ್ಕೆ ತಾನ್)

1931: ಖ್ಯಾತ ಸಾಹಿತಿ ಸಾ.ಶಿ. ಮರುಳಯ್ಯ ಅವರು ಶಿವರುದ್ರಯ್ಯ- ಸಿದ್ದಮ್ಮ ದಂಪತಿಯ ಪುತ್ರನಾಗಿ ತುಮಕೂರು ಜಿಲ್ಲೆ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಈದಿನ ಜನಿಸಿದರು.

1930: ಭಾರತದ ಖ್ಯಾತ ಸಂಗೀತಗಾರ ಮೋತಿರಾಮ್ ಜಸ್ ರಾಜ್ (1930) ಅವರು ಹುಟ್ಟಿದರು.

1925: ಭಾರತೀಯ ವಿಜ್ಞಾನಿ ಭಾರತೀಯ ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ ರಾಜಾ ರಾಮಣ್ಣ (1925) ಹುಟ್ಟಿದ ದಿನ.

1899: ಭಾರತದ ಮೊತ್ತ ಮೊದಲ ಸೇನಾದಂಡನಾಯಕ ಫೀಲ್ಡ್ ಮಾರ್ಷಲ್ ಕೊಡಂದೇರ ಮಾದಪ್ಪ ಕಾರಿಯಪ್ಪ (1899-1993) ಅವರು ಜನಿಸಿದರು.

1865: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ (1865-1928) ಹುಟ್ಟಿದರು.

1809: ಜರ್ಮನಿಯ ಸಂಸ್ಕೃತ ವಿದ್ವಾಂಸ ಥಿಯೋಡೋರ್ ಬೆನ್ ಫೇ (1809-1881) ಹುಟ್ಟಿದರು. ಪ್ರಾಣಿಗಳ ಕಥೆಗಳನ್ನು ಒಳಗೊಂಡ ಭಾರತದ `ಪಂಚತಂತ್ರ' ಸಂಗ್ರಹ ಇವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿದೆ.

Monday, March 1, 2010

ಇಂದಿನ ಇತಿಹಾಸ History Today ಜನವರಿ 27

ಇಂದಿನ ಇತಿಹಾಸ

ಜನವರಿ 27

ತೀವ್ರ ಅಸ್ವಸ್ಥರಾಗಿ ಹದಿನೈದು ದಿನಗಳ ಹಿಂದೆ ಆಸ್ಪತ್ರೆಗೆ ಸೇರಿದ್ದ ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ (98) ಅವರು ಈದಿನ ನವದೆಹಲಿಯ ಸೇನಾ ಆಸ್ಪತ್ರೆಯಲ್ಲಿ ನಿಧನರಾದರು. ಮೂತ್ರನಾಳದ ಮತ್ತು ಉಸಿರಾಟದ ತೊಂದರೆ ಕಾರಣ ಅವರು ಜನವರಿ 12 ರಂದು ಆಸ್ಪತ್ರೆಗೆ ದಾಖಲಾಗಿದ್ದರು. 1910ರ ಡಿಸೆಂಬರ 4ರಂದು ಜನಿಸಿದ್ದ ಆರ್ ವೆಂಕಟರಾಮನ್ ಅವರು, 1987 ರಿಂದ 1992ರ ವರೆಗಿನ ಅವಧಿಯಲ್ಲಿ ದೇಶದ ಎಂಟನೇ ರಾಷ್ಟ್ರಪತಿಗಳಾಗಿ ಕಾರ್ಯ ನಿರ್ವಹಿಸಿದ್ದರು.

2009: ತೀವ್ರ ಅಸ್ವಸ್ಥರಾಗಿ ಹದಿನೈದು ದಿನಗಳ ಹಿಂದೆ ಆಸ್ಪತ್ರೆಗೆ ಸೇರಿದ್ದ ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ (98) ಅವರು ಈದಿನ ನವದೆಹಲಿಯ ಸೇನಾ ಆಸ್ಪತ್ರೆಯಲ್ಲಿ ನಿಧನರಾದರು. ಮೂತ್ರನಾಳದ ಮತ್ತು ಉಸಿರಾಟದ ತೊಂದರೆ ಕಾರಣ ಅವರು ಜನವರಿ 12 ರಂದು ಆಸ್ಪತ್ರೆಗೆ ದಾಖಲಾಗಿದ್ದರು. 1910ರ ಡಿಸೆಂಬರ 4ರಂದು ಜನಿಸಿದ್ದ ಆರ್ ವೆಂಕಟರಾಮನ್ ಅವರು, 1987 ರಿಂದ 1992ರ ವರೆಗಿನ ಅವಧಿಯಲ್ಲಿ ದೇಶದ ಎಂಟನೇ ರಾಷ್ಟ್ರಪತಿಗಳಾಗಿ ಕಾರ್ಯ ನಿರ್ವಹಿಸಿದ್ದರು. ರಾಷ್ಟ್ರಪತಿಗಳಾಗಿ ಚುನಾಯಿತರಾಗುವ ಮುನ್ನ ನಾಲ್ಕು ವರ್ಷಗಳ ಕಾಲ ಅವರು ಉಪರಾಷ್ಟ್ರಪತಿಗಳಾಗಿದ್ದರು. ಸ್ನೇಹಿತರ ಬಳಗದಲ್ಲಿ ಅಕ್ಕರೆಯಿಂದ 'ಆರ್‌ವಿ' ಎಂದೇ ಗುರುತಿಸಿಕೊಂಡಿದ್ದ ರಾಮಸ್ವಾಮಿ ವೆಂಕಟರಾಮನ್ ಅವರು ಸಮ್ಮಿಶ್ರ ಸರ್ಕಾರ ಯುಗದ ಹರಿಕಾರ. ವಿ.ಪಿ.ಸಿಂಗ್, ಚಂದ್ರಶೇಖರ್ ಹಾಗೂ ಪಿ.ವಿ.ನರಸಿಂಹರಾವ್ ಸೇರಿದಂತೆ ಮೂವರು ಪ್ರಧಾನ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದ ಹಿರಿಮೆಯನ್ನು ಕೂಡ ಹೊಂದಿದವರು. 1987 ರ ಜುಲೈ 25 ರಿಂದ 1992 ರ ಜುಲೈ 25 ರ ವರೆಗಿನ ತಮ್ಮ ಅಧಿಕಾರಾವಧಿಯಲ್ಲಿ ದೇಶದ ರಾಜಕೀಯದಲ್ಲಿ ಅತ್ಯಂತ ಸವಾಲಿನ ಘಟ್ಟವನ್ನು ಅವರು ಎದುರಿಸಿದ್ದರು. ಮಂಡಲ್ ಆಯೋಗದ ವರದಿ, ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರ ರಥಯಾತ್ರೆಯಲ್ಲಿ ನಡೆದ ಹಿಂಸಾಚಾರ, 1991 ರಲ್ಲಿ ರಾಜೀವ್ ಗಾಂಧಿ ಹತ್ಯೆ... ಹೀಗೆ ವೆಂಕಟರಾಮನ್ ಅವರು ಒಂದಿಲ್ಲೊಂದು ಅಗ್ನಿಪರೀಕ್ಷೆಗೆ ತಮ್ಮನ್ನು ಒಡ್ಡಿಕೊಳ್ಳಬೇಕಾಯಿತು. ಲೋಕಸಭೆಯಲ್ಲಿ ಅತ್ಯಧಿಕ ಸಂಖ್ಯಾಬಲ ಹೊಂದಿದ್ದರೂ ಕಾಂಗ್ರೆಸ್ ಪಕ್ಷವು 1989 ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿತು. ಆಗ ವೆಂಕಟ್‌ರಾಮನ್ ಅವರು ಸಂಪ್ರದಾಯದಂತೆ ಲೋಕಸಭೆಯಲ್ಲಿ ಏಕೈಕ ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸುವಂತೆ ಆಹ್ವಾನ ನೀಡಿದರು. ವಿ.ಪಿ.ಸಿಂಗ್ ಸರ್ಕಾರ ರಚಿಸುವ ಅವಕಾಶ ಪಡೆದುಕೊಂಡರು. 54 ಸದಸ್ಯ ಬಲದ ಜನತಾದಳಕ್ಕೆ ಕಾಂಗ್ರೆಸ್ ಪಕ್ಷದಿಂದ ಬೆಂಬಲ ದೊರಕಿಸಿಕೊಡುವ ಸಂಬಂಧ ರಾಜೀವ್ ಅವರಿಂದ ಆಶ್ವಾಸನೆ ಪಡೆದಿದ್ದರು. 1990 ರಲ್ಲಿ ವಿ.ಪಿ.ಸಿಂಗ್ ಸರ್ಕಾರ ಪತನಗೊಂಡ ಬಳಿಕ ಚಂದ್ರಶೇಖರ್ ಅವರಿಗೆ ಸರ್ಕಾರ ರಚಿಸುವಂತೆ ಆಹ್ವಾನಿಸಲಾಯಿತು. 1991 ರಲ್ಲಿ ಪಿ.ವಿ.ನರಸಿಂಹರಾವ್ ಪ್ರಧಾನಿಯಾದರು. ಹೀಗೆ ವೆಂಕಟರಾಮನ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಮೂವರು ಪ್ರಧಾನಿಗಳಿಗೆ ಪ್ರಮಾಣ ವಚನ ಬೋಧಿಸಿದರು. 1910 ರಲ್ಲಿ ತಮಿಳುನಾಡು ತಂಜಾವೂರಿನ ರಾಜಮೇದಂನಲ್ಲಿ ಜನನ. ಚೆನ್ನೈನಲ್ಲಿ ಕಾನೂನು ಪದವಿ. 1938ರಲ್ಲಿ ಜಾನಕಿ ಅವರೊಂದಿಗೆ ವಿವಾಹ. 1942 ಕ್ಷಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರು. 1952 ರಲ್ಲಿ ಮೊದಲ ಬಾರಿ ಲೋಕಸಭಾಸದಸ್ಯರಾಗಿ ಆಯ್ಕೆ. 1953 ರಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಕಾರ್ಯದರ್ಶಿ. 1957ರಲ್ಲಿ ಮತ್ತೆ ಚೆನ್ನೈಗೆ ಆಗಮನ. ಮುಂದಿನ 10 ವರ್ಷಗಳ ಕಾಲ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಣೆ. 1967ರಲ್ಲಿ ಯೋಜನಾ ಆಯೋಗದ ಸದಸ್ಯರಾಗಿ ನೇಮಕ. 1984ರಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆ. 1987ರಲ್ಲಿ ರಾಷ್ಟ್ರಪತಿ ಹುದ್ದೆ ಅಲಂಕಾರ.

2009: ಆರೋಗ್ಯ ಕಾರಣಕ್ಕಾಗಿ ಮುಸಿಮ್ಲರು ಯೋಗಾಭ್ಯಾಸ ನಡೆಸುವುದರಲ್ಲಿ ಯಾವುದೇ ತಪ್ಪೂ ಇಲ್ಲ ಎಂದು ಇಸ್ಲಾಮಿನ ಪ್ರಮುಖ ಸಂಸ್ಥೆ ದಾರುಲ್ ಉಲೂಂ ಹೇಳಿತು. 'ಯೋಗಾಭ್ಯಾಸ ಅಥವಾ ಇತರ ಯಾವುದೇ ದೈಹಿಕ ಕಸರತ್ತು ಮಾಡದೆ ಇರಲು ಇಸ್ಲಾಮ್ ಯಾರೊಬ್ಬರನ್ನೂ ನಿಷೇಧಿಸಿಲ್ಲ. ನೀವು ಯಾವ ನಂಬಿಕೆಯಿಂದ ಯೋಗಾಭ್ಯಾಸ ಮಾಡುತ್ತೀರಿ ಎಂಬುದೇ ಇಲ್ಲಿ ಮುಖ್ಯ. ಆರೋಗ್ಯ ಕಾರಣಕ್ಕಾಗಿ ಯೋಗ ಮಾಡಿದರೆ ಅದರಲ್ಲಿ ಯಾವುದೇ ಸಮಸ್ಯೆಯೂ ಇಲ್ಲ' ಎಂದು ದಾರುಲ್ ಉಲೂಂನ ಪರಿಣತ ಖಾರಿ ಉಸ್ಮಾನ್ ಹೇಳಿದರು. ಇಸ್ಲಾಮೇತರ ಧಾರ್ಮಿಕ ಆಚರಣೆಗಳು ಇಲ್ಲದಿದ್ದರೆ ಯೋಗಾಭ್ಯಾಸವೂ ಉತ್ತಮವೇ ಎಂದು ಉತ್ತರ ಪ್ರದೇಶದ ದೇವ ಬಂದ್ ದಾರುಲ್ ಉಲೂಮಿನ ಈ ಧರ್ಮಗುರುಗಳು ಹೇಳಿದರು. ಯೋಗ ಗುರು ರಾಮದೇವ್ ಅವರು ಹಿಂದೂಗಳು 'ಓಂ' ಎಂದರೆ ಮುಸ್ಲಿಮರು 'ಅಲ್ಲಾ' ಎನ್ನಬಹುದು ಎಂದಿರುವ ಬಗ್ಗೆ ಖಾರಿ ಅವರನ್ನು ಕೇಳಿದಾಗ, 'ಯೋಗ ಅಭ್ಯಾಸ ಮಾಡುವುದು ದೈಹಿಕ ಸಾಮರ್ಥ್ಯಕ್ಕಾಗಿ, ಇಲ್ಲಿ ಧಾರ್ಮಿಕ ಮಂತ್ರಗಳನ್ನು ಸೇರಿಸುವುದು ಏಕೆ' ಎಂದು ಪ್ರಶ್ನಿಸಿದರು.

2009: ದಕ್ಷಿಣ ಕ್ಯಾಲಿಫೋರ್ನಿಯಾದ ಮಹಿಳೆಯೊಬ್ಬಳು ಒಂದೇ ಪ್ರಸವಕಾಲಕ್ಕೆ ಎಂಟು ಮಕ್ಕಳನ್ನು ಹೆತ್ತು ದಾಖಲೆ ಸ್ಥಾಪಿಸಿದಳು. ಶಸ್ತ್ರಚಿಕಿತ್ಸೆಯ ಮೂಲಕ ಐದು ನಿಮಿಷಗಳ ಅಂತರದಲ್ಲಿ ಈ ಮಕ್ಕಳನ್ನು ತಾಯಿಯ ಗರ್ಭದಿಂದ ಹೊರತೆಗೆಯಲಾಯಿತು. ಎಂಟು ಶಿಶುಗಳಲ್ಲಿ ಆರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು. ಎಲ್ಲ ಮಕ್ಕಳು ಹಾಗೂ ತಾಯಿಯ ಆರೋಗ್ಯ ಉತ್ತಮ ಸ್ಥಿತಿಯಲ್ಲಿದೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದರು. ಈ ಶಿಶುಗಳು 880 ಗ್ರಾಮಿನಿಂದ 1.47 ಗ್ರಾಮ್‌ವರೆಗೆ ತೂಗುತ್ತಿವೆ. ಮೂರು ಮಕ್ಕಳಿಗೆ ಉಸಿರಾಟದ ತೊಂದರೆಯಿತ್ತು. ಎಲ್ಲ ಮಕ್ಕಳನ್ನು ಎರಡು ತಿಂಗಳುಗಳ ಕಾಲ ಇನ್‌ಕ್ಯುಬೇಟರ್‌ನಲ್ಲಿ ಇಡಲಾಗುತ್ತದೆ. ಒಂದೇ ಬಾರಿ ಎಂಟು ಜೀವಂತ ಶಿಶುಗಳನ್ನು ಹೆತ್ತವರಲ್ಲಿ ಈ ಮಹಿಳೆ ಎರಡನೆಯವಳು. 1998ರಲ್ಲಿ ನೈಜೀರಿಯಾ ಮೂಲದ ಟೆಕ್ಸಾಸ್ ಮಹಿಳೆಯೊಬ್ಬಳು 300 ಗ್ರಾಮಿನಿಂದ 800 ಗ್ರಾಮ್ ತೂಕದ ಎಂಟು ಮಕ್ಕಳನ್ನು ಹೆತ್ತಿದ್ದಳು. ಇವುಗಳಲ್ಲಿ ಅತಿ ಚಿಕ್ಕ ಶಿಶು ಕೆಲ ದಿನಗಳ ನಂತರ ಸಾವನ್ನಪ್ಪಿತ್ತು.

2009: ತುಮಕೂರಿನ ಸಿದ್ಧಗಂಗಾ ಮಠದ ವತಿಯಿಂದ ಪ್ರಥಮ ಬಾರಿಗೆ ನೀಡಲಾಗುವ 'ಸಿದ್ಧ ಗಂಗಾ ಶ್ರೀ' ಪ್ರಶಸ್ತಿಗೆ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಡಾ.ಶಿವಕುಮಾರ ಸ್ವಾಮೀಜಿ ಶತಮಾನೋತ್ಸವ ಸಮಿತಿ ಸಂಚಾಲಕರೂ ಆದ ಶಾಸಕ ವಿ.ಸೋಮಣ್ಣ ಈ ಬಗ್ಗೆ ಮಾಹಿತಿ ನೀಡಿ, 'ಇದೇ ಮೊದಲ ಬಾರಿಗೆ 'ಸಿದ್ಧ ಗಂಗಾಶ್ರೀ' ಪ್ರಶಸ್ತಿ ನೀಡಲಾಗುತ್ತಿದ್ದು, ಡಾ.ಜಿ.ಎಸ್.ಎಸ್. ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

2008: ಪ್ರಸ್ತುತ ಸಾಲಿನ ಪದ್ಮಶ್ರೀ ವಿಜೇತರಲ್ಲಿ ಉತ್ತರ ಪ್ರದೇಶದ ಮಾವು ಬೆಳೆಗಾರರೊಬ್ಬರು ಸೇರಿದ್ದು ವಿಶೇಷವಾಗಿ ಗಮನ ಸೆಳೆಯಿತು. ಉತ್ತರ ಪ್ರದೇಶದ ಮಲಿಹಾಬಾದ್ ಪಟ್ಟಣದಲ್ಲಿ ವಾಸಿಸುವ ಮಾವು ಬೆಳೆಗಾರ ಕಲೀಮುಲ್ಲಾ ಖಾನ್ ಅವರಿಗೆ ಪದ್ಮಶ್ರೀ ಬಂದಿತು. ಇವರು ಒಂದೇ ಮಾವಿನ ಮರದಿಂದ 300 ಕ್ಕೂ ಹೆಚ್ಚು ಹೊಸ ತಳಿಗಳನ್ನು ಉತ್ಪಾದಿಸಿದ್ದಾರೆ. ಆರಂಭದಲ್ಲಿ ತಮ್ಮ ತಂದೆಯಿಂದ ಕಲಿತ ಈ ವಿದ್ಯೆಯನ್ನು ಹಾಗೇ ಬೆಳೆಸಿಕೊಂಡಿದ್ದಾರೆ. ಮೊದ ಮೊದಲು ನಾಟಿ ತಳಿಗಳನ್ನು ಬೆಳೆಸುತ್ತಿದ್ದರು. ನಂತರ ಹೈಬ್ರಿಡ್ ತಳಿಗಳನ್ನು ಪ್ರಯೋಗಗಳ ಮೂಲಕ ಬೆಳೆಯಲಾರಂಭಿಸಿದರು. ಕಲಿಮುಲ್ಲಾ ಪರಿಣತಿ ಅರಿತ ಇರಾನ್ ಸರ್ಕಾರ ತಮ್ಮಲ್ಲೇ ಬಂದು ನೆಲಸುವಂತೆ ಆಹ್ವಾನ ನೀಡಿತು. ಈ ಆಹ್ವಾನವನ್ನು ತಿರಸ್ಕರಿಸಿದ ಖಾನ್, ತಮ್ಮ ಕುಟುಂಬದವರು ಮಾವು ಬೆಳೆಸುತ್ತಿದ್ದ ಮಲಿಹಾಬಾದ್ ಪ್ರದೇಶದಲ್ಲಿಯೇ ಇರಲು ಬಯಸಿದರು.

2008: ಮೂರು ದಶಕಗಳ ಕಾಲ ಇಂಡೋನೇಷ್ಯಾವನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡು ಆಡಳಿತ ನಡೆಸಿದ್ದ, ದಶಲಕ್ಷಕ್ಕೂ ಅಧಿಕ ವಿರೋಧಿಗಳನ್ನು ಸಾಯಿಸಿದ್ದ ಆರೋಪ ಹೊತ್ತ ಸರ್ವಾಧಿಕಾರಿ ಎಚ್.ಎಂ.ಸುಹಾರ್ತೋ (86) ಈದಿನ ಜಕಾರ್ತದ ಆಸ್ಪತ್ರೆಯಲ್ಲಿ ನಿಧನರಾದರು. ಸುಹಾರ್ತೋ ಅವರ ನಿಧನವನ್ನು ಪೊಲೀಸ್ ಮುಖ್ಯಸ್ಥರು ಅಧಿಕೃತವಾಗಿ ಘೋಷಿಸಿದರು. ಹೃದಯ, ಮೂತ್ರಪಿಂಡ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಮೂರು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. 1967ರಲ್ಲಿ ಇಂಡೋನೇಷ್ಯಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸುಹಾರ್ತೋ, ನಿರ್ದಯಿ ಸರ್ವಾಧಿಕಾರಿಯಾಗಿದ್ದರು. ಕಮ್ಯೂನಿಸ್ಟ್ ಪಕ್ಷದ ಕಟ್ಟಾ ವಿರೋಧಿಯಾಗಿದ್ದ ಅವರ ಮೇಲೆ ಅಪಾರ ಪ್ರಮಾಣದ ಆಸ್ತಿ ಹೊಂದಿದ್ದಾರೆಂಬ ಆರೋಪವಿತ್ತು. ಕಮ್ಯುನಿಸ್ಟ್ ವಿರೋಧಿ ನೀತಿ ಹಾಗೂ ಆಡಳಿತದ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಸಮರ ಸಾರಿದ್ದವು. ಜೊತೆಗೆ 1997ರಲ್ಲಿ ಏಷ್ಯಾದ ಆರ್ಥಿಕ ಬಿಕ್ಕಟ್ಟು ಅವರು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿತು.

2008: ಸೇತು ಸಮುದ್ರಂ ಯೋಜನೆಯಿಂದ ನೌಕಾದಳಕ್ಕಾಗಲೀ ಅಥವಾ ಅಂತಾರಾಷ್ಟ್ರೀಯ ನೌಕಾಯಾನ ಸಂಸ್ಥೆಗಳಿಗಾಗಲೀ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಈ ಯೋಜನೆಯನ್ನು ತತ್ ಕ್ಷಣವೇ ಕೈಬಿಡಬೇಕು ಎಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಚೆನ್ನೈಯಲ್ಲಿ ಆಗ್ರಹಿಸಿದರು.

2008: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಸೊಸೆ ಐಶ್ವರ್ಯ ರೈ ಬಚ್ಚನ್ ಹೆಸರಿನ ಮಹಿಳಾ ಕಾಲೇಜಿಗೆ ಬಚ್ಚನ್ ಕುಟುಂಬ ಅಡಿಗಲ್ಲು ಹಾಕಿತು. ಭೂ ವಿವಾದ ಕುರಿತು ಅಮಿತಾಬ್ ಬಚ್ಚನ್ ಮೇಲಿದ್ದ ಪ್ರಕರಣವನ್ನು ಎರಡು ತಿಂಗಳ ಹಿಂದೆಯೇ ಅಲ್ಲಿನ ಹೈಕೋರ್ಟ್ ಇತ್ಯರ್ಥ ಪಡಿಸಿತ್ತು.

2008: ದೇಶದಲ್ಲಿ ಭಾರಿ ಸಂಚಲನ ಮೂಡಿಸಿದ ಗುಡಗಾಂವ್ ಅಕ್ರಮ ಮೂತ್ರಪಿಂಡ (ಕಿಡ್ನಿ) ಕಸಿ ಹಗರಣ ತಡೆಗಟ್ಟುವಲ್ಲಿ ರಾಜ್ಯ ಪೊಲೀಸರು ವಿಫಲವಾದುದನ್ನು ಹರಿಯಾಣಾದ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಒಪ್ಪಿಕೊಂಡರು. ಇದು ರಾಜ್ಯ ಸರ್ಕಾರದ ದೊಡ್ಡ ವೈಫಲ್ಯ ಎಂದು ಹೂಡಾ ಹೇಳಿದರು. ಕಿಡ್ನಿ ಹಗರಣದ ಪ್ರಮುಖ ಆರೋಪಿಯ ಹೆಸರು ಡಾ. ಅಮಿತ್ ಕುಮಾರ್ ಹೌದೇ ಅಥವಾ ಡಾ. ಸಂತೋಷ್ ರಾವುತ್ ಎಂದೇ? ಎಂಬ ಗುಮಾನಿ ಪೊಲೀಸ್ ವಲಯದಲ್ಲಿ ಮನೆ ಮಾಡಿತು. ಮುಂಬೈ ವಿಮಾನ ನಿಲ್ದಾಣದಲ್ಲಿ 14 ವರ್ಷಗಳ ಹಿಂದೆ ಕೆಲವು ಶ್ರೀಮಂತ ಪ್ರಯಾಣಿಕರನ್ನು ಕರೆದೊಯ್ಯುವ ಸಲುವಾಗಿ ಟ್ಯಾಕ್ಸಿ ಚಾಲಕರು ಹಿಡಿದುಕೊಂಡಿದ್ದ ಫಲಕಗಳಲ್ಲಿ ಡಾ. ರಾವುತ್ ಹೆಸರು ಇತ್ತು. 1994ರಲ್ಲಿ ಡಾ. ರಾವುತ್ ನನ್ನು ಬಂಧಿಸಿ ಹಗರಣ ಬಯಲಿಗೆಳೆಯಲಾಗಿತ್ತು. ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದ ಆತ ಮುಂಬೈಯಿಂದ ದೂರ ಹೋಗಿದ್ದರೂ, ಆತನ ಕುಟುಂಬ ಇನ್ನೂ ಮುಂಬೈಯಲ್ಲೇ ಇತ್ತು. ದೇಶದಲ್ಲೇ ಅತಿ ದೊಡ್ಡ ಕಿಡ್ನಿ ಹಗರಣ ನಡೆದದ್ದು ಡಾ. ರಾವುತ್ ನ ಕೌಶಲ್ಯ ನರ್ಸಿಂಗ್ ಹೋಮ್ ನಲ್ಲಿ. ಅದೊಂದು ಆಯುರ್ವೇದ ಆಸ್ಪತ್ರೆಯಾದರೂ ಭಾರಿ ಪ್ರಮಾಣದ ಅಕ್ರಮ ಕಿಡ್ನಿ ಕಸಿ ಅಲ್ಲಿ ನಡೆದಿತ್ತು. ಬಳಿಕ ಮಹಾರಾಷ್ಟ್ರ ರಾಜ್ಯ ಮಾನವ ಅಂಗಾಂಗ ದಾನಕ್ಕೆ ಕಠಿಣ ಶಾಸನ ರೂಪಿಸಿತು. ಆದರೂ ಡಾ. ರಾವುತನ ಜಾಲ ದೇಶದ ಇತರ 5 ಕಡೆಗಳಿಗೆ ವ್ಯಾಪಿಸಿತ್ತು.

2008: ಮಂಗಳೂರಿನ ಮಂಗಳಾ ಮ್ಯಾಜಿಕ್ ಸರ್ಕಲ್ ಆಶ್ರಯದಲ್ಲಿ ನಗರದ ಕದ್ರಿ ಶ್ರೀಗೋರಕ್ಷನಾಥ ಸಭಾಭವನದ ಸಂಸ್ಥಾಪಕ ದಿವಂಗತ ಪ್ರೊ. ಬಾಸ್ ವೇದಿಕೆಯಲ್ಲಿ ನಡೆದ `ಕಣ್ಕಟ್-2008' ಸಮ್ಮೇಳನವನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು. ಕಾಸರಗೋಡಿನ ವಾಸುದೇವ ಕೋಟೂರು (ವಾಕೋ), ಉಡುಪಿ ಪ್ರಹ್ಲಾದ ಆಚಾರ್ಯ ಹಾಗೂ ಮಂಗಳೂರಿನ ಪ್ರದೀಪ್ ಸೂರಿ ಜಾದೂತಂತ್ರಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ರಾಜ್ಯಮಟ್ಟದ ಜಾದೂ ಸ್ಪರ್ಧೆಯಲ್ಲಿ ಬೆಂಗಳೂರಿನ ಕರುಣ್ ಕೃಷ್ಣ ಹಾಗೂ ಮಂಗಳೂರಿನ ಮಹೇಶ್ ಜಿ.ಎಸ್. ಪ್ರಶಸ್ತಿ ಗಳಿಸಿದರು.

2008: ಗುಲ್ಬರ್ಗ ಜಿಲ್ಲೆ ಶಹಬಾದಿನಿಂದ ಮಹಾರಾಷ್ಟ್ರದ ಕರಾಡ ಪಟ್ಟಣಕ್ಕೆ ಪರಸಿ ಕಲ್ಲು ತುಂಬಿಕೊಂಡು ಹೊರಟಿದ್ದ ಲಾರಿ ನಗರದ ಹೊರವಲಯದ ಡೋಣಿ ನದಿ ಸೇತುವೆ ಬಳಿ ಮಗುಚಿ ಬಿದ್ದು 10 ಜನ ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿ, 13 ಜನರು ಗಾಯಗೊಂಡರು.

2008: ಜಾಮೀನಿನ ಮೇಲೆ ಚಿತ್ರದುರ್ಗ ಕಾರಾಗೃಹದಿಂದ ಬಿಡುಗಡೆಯಾಗಿದ್ದ ರೌಡಿ ಕೊರಂಗು ಕೃಷ್ಣ (46) ಕಾರಿನಲ್ಲಿ ಆಂಧ್ರಪ್ರದೇಶದ ಚಿತ್ತೂರು ಬಳಿ ಪ್ರಯಾಣಿಸುತ್ತಿದ್ದಾಗ ಬಾಂಬ್ ಸ್ಫೋಟಿಸಿ ಗಾಯಗೊಂಡ.

2007: ಖ್ಯಾತ ಮಲಯಾಳಿ ಬರಹಗಾರ, ಸಾಹಿತ್ಯ ವಿಮರ್ಶಕ ಡಾ. ಸುಕುಮಾರ ಅಯಿಕ್ಕೋಡ್ ಅವರು ಗಣರಾಜ್ಯೋತ್ಸವ ಮುನ್ನಾದಿನ ತಮಗೆ ಘೋಷಿಸಲಾದ `ಪದ್ಮಶ್ರೀ' ಪ್ರಶಸ್ತಿಯನ್ನು ತಿರಸ್ಕರಿಸಿದರು. ಇಂತಹ ಪ್ರಶಸ್ತಿಗಳು, ಸಂವಿಧಾನವು ನೀಡಿರುವ ಎಲ್ಲ ನಾಗರಿಕರ ಸಮಾನತೆಯ ತತ್ವಕ್ಕೆ ವಿರುದ್ಧವಾದವುಗಳು ಎಂದು ಅಯಿಕ್ಕೋಡ್ ಹೇಳಿದರು. ಸರ್ಕಾರಗಳು ಆಯ್ದ ವ್ಯಕ್ತಿಗಳಿಗೆ ಈ ರೀತಿ ಪ್ರಶಸ್ತಿ ಪ್ರದಾನ ಮಾಡುವುದು ಸಂವಿಧಾನವು ಖಾತರಿ ಪಡಿಸಿರುವ ಎಲ್ಲ ನಾಗರಿಕರ ಸಮಾನತೆಯ ತತ್ವಕ್ಕೆ ವಿರುದ್ಧವಾದುದು ಎಂದು ತಾವು ಸ್ಪಷ್ಟವಾಗಿ ಪರಿಗಣಿಸುವುದಾಗಿ ಅಯಿಕೋಡ್ ದೃಢಪಡಿಸಿದರು. ಕೇರಳದ ಸಾಂಸ್ಕೃತಿಕ ಪ್ರಪಂಚದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಅಯಿಕ್ಕೋಡ್ ಖ್ಯಾತ ಸಾಹಿತ್ಯ ವಿಮರ್ಶಕ, ಭಾಷಣಕಾರ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದು, ಸಾರ್ವಜನಿಕ ವಿಚಾರಗಳಿಗೆ ಸಂಬಂಧಿಸಿದಂತೆ ನೇರ ಅಭಿಪ್ರಾಯ ವ್ಯಕ್ತ ಪಡಿಸುವುದಕ್ಕೆ ಹೆಸರಾಗಿದ್ದಾರೆ.

2007: ಭವಿಷ್ಯನಿಧಿಯ ಬಡ್ಡಿ ದರವನ್ನು ಪ್ರಸ್ತುತ ಹಣಕಾಸು ವರ್ಷದಲ್ಲಿ ಇಳಿಸುವುದಕ್ಕೆ ಸಂಬಂಧಿಸಿದ ವಿವಾದಾತ್ಮಕ ವಿಷಯ ಕುರಿತ ನಿರ್ಧಾರ ಕೈಗೊಳ್ಳಲು ನೌಕರರ ಭವಿಷ್ಯನಿಧಿ ಮಂಡಳಿಯ ಸಭೆ ವಿಫಲಗೊಂಡಿದ್ದು, ಇ ಪಿ ಎಫ್ ನಿಧಿಯ ಶೇಕಡಾ 5ರಷ್ಟು ಹಣವನ್ನು ಈಕ್ವಿಟಿ ಮಾರುಕಟ್ಟೆಯಲ್ಲಿ ತೊಡಗಿಸುವ ಹಣಕಾಸು ಸಚಿವಾಲಯದ ಪ್ರಸ್ತಾವವನ್ನೂ ತಿರಸ್ಕರಿಸಿತು.

2007: ಸಹಸ್ರಮಾನದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಫ್ರಾನ್ಸಿನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ `ಲೀಜನ್ ಡಿ' ಆನರ್'ನ್ನು ಫ್ರೆಂಚ್ ರಾಯಭಾರಿ ಕಚೇರಿಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಭಾರತೀಯ ಹಾಗೂ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಮಿತಾಭ್ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಫ್ರೆಂಚ್ ರಾಯಭಾರಿ ಡೊಮಿನಿಕ್ ಗಿರಾರ್ಡ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಸಮಾರಂಭದಲ್ಲಿ ಅಮಿತಾಭ್ ಅವರ ಭಾವಿ ಸೊಸೆ ಐಶ್ವರ್ಯ ರೈ ಸೇರಿದಂತೆ ಅವರು ಕುಟುಂಬದ ಸದಸ್ಯರು ಭಾಗವಹಿಸಿದ್ದರು.

2007: ಬಾಲಿವುಡ್ ನಟ ರಾಹುಲ್ ರಾಯ್ ಭಾರತದ ರಿಯಾಲಿಟಿ ಟಿವಿ ಶೋ `ಬಿಗ್ ಬಾಸ್' ಆಗಿ ಆಯ್ಕೆಯಾದರು.

2007: ಹಿರಿಯ ನೃತ್ಯ ಕಲಾವಿದೆ ಪದ್ಮಿನಿ ರಾವ್ (50) ಅವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಟುವಾಂಗ ನಡೆಸಿಕೊಡುತ್ತಿರುವಾಗಲೇ ತೀವ್ರ ಅಸ್ವಸ್ಥರಾಗಿ ನಿಧನರಾದರು. ತಮ್ಮ ಸಂಸ್ಥೆ ಪೊನ್ನಯ್ಯ ಲಲಿತಕಲಾ ಅಕಾಡೆಮಿ ವತಿಯಿಂದ ಇಡೀ ದಿನ `ಕರುನಾಡ ಪರಂಪರೆ' ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಗ ಈ ಘಟನೆ ನಡೆಯಿತು.

2007: ದಕ್ಷಿಣ ಆಫ್ರಿಕಾದ ಇತಿಹಾಸ ತಜ್ಞ ಹಾಗೂ ಆಂಗ್ಲೊ-ಜುಲು ಯುದ್ಧದ ವಿವರ ನೀಡುವ ಪರಿಣತ ಡೇವಿಡ್ ರಾತ್ರೆ ಅವರು ತಮ್ಮ ವಸತಿ ಗೃಹದಲ್ಲೇ ಅಪರಿಚಿತ ದುಷ್ಕರ್ಮಿಗಳ ಗುಂಡಿಗೆ ಬಲಿಯಾದರು.

2007; ಮೆಲ್ಬೋರ್ನಿನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ರಷ್ಯಾದ ಮಾರಿಯಾ ಶರಪೋವಾ ಅವರನ್ನು ಅಮೆರಿಕದ ಸೆರೆನಾ ಅವರು ಪರಾಭವಗೊಳಿಸಿದರು. ಈ ಮೂಲಕ 28 ವರ್ಷಗಳ ನಂತರ ಗೆದ್ದ ಶ್ರೇಯಾಂಕ ರಹಿತ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1978ರಲ್ಲಿ ವಿಶ್ವದ 111ನೇ ರ್ಯಾಂಕ್ ಹೊಂದಿದ್ದ ಕ್ರಿಸ್ ಓನೆಲ್ ಈ ಸಾಧನೆ ಮಾಡಿದ್ದರು.

2006: ಕನ್ನಡದ ಪ್ರಪ್ರಥಮ ಹಾಸ್ಯ ಬರಹಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಟಿ. ಸುನಂದಮ್ಮ (89) ಬೆಂಗಳೂರಿನ ತಮ್ಮ ವೈಯಾಲಿಕಾವಲ್ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಹಾಸ್ಯ ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡಿದ್ದ ಸುನಂದಮ್ಮ `ಕೊರವಂಜಿ' ಹಾಸ್ಯಪತ್ರಿಕೆಯ ಮೂಲಕ ಹೆಸರಾದರು. ಇವರ ಸಮಗ್ರ ಹಾಸ್ಯ ಕೃತಿ 1993ರಲ್ಲಿಪ್ರಕಟವಾಗಿತ್ತು. `ಭಂಜದ ಚೀಲ', `ಬಣ್ಣದ ಚಿಟ್ಟೆ' ಹಾಗೂ `ಪೆಪ್ಪರ್ ಮೆಂಟ್' ಇವರ ಇನ್ನಿತರ ಕೆಲವು ಕೃತಿಗಳು. `ರಾಜ್ಯೋತ್ಸವ ಪ್ರಶಸ್ತಿ', `ಕರ್ನಾಟಕ ಸಾಹಿತ್ಯ ಅಕಾಡೆಮಿ' ಪುರಸ್ಕಾರ, `ದಾನಚಿಂತಾಮಣಿ' ಪುರಸ್ಕಾರ ಹೀಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಸುನಂದಮ್ಮ ಭಾಜನರಾಗಿದ್ದರು. ಕರ್ನಾಟಕದಲ್ಲಿ `ಲೇಖಕಿಯರ ಸಂಘ' ಕಟ್ಟುವುದಕ್ಕೆ ಕಾರಣಕರ್ತರಾಗಿದ್ದ ಸುನಂದಮ್ಮ, ಸಂಘದ ಸಂಘಟನೆಯಲ್ಲಿ ಕೊನೆಯವರೆಗೆ ಕ್ರಿಯಾಶೀಲವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.

2006: ರಾಜ್ಯಪಾಲರ ಸೂಚನೆಯ ಪ್ರಕಾರ ಈದಿನ ಸದನದಲ್ಲಿ ಬಹುಮತ ಸಾಬೀತು ಪಡಿಸಬೇಕಾಗಿದ್ದ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಸದನದಲ್ಲಿ ವಿಶ್ವಾಸಮತ ನಿರ್ಣಯ ಮಂಡಿಸಲು ಮುಂದಾಗದೇ ಇದ್ದುದರಿಂದ ಲೋಕಸಭಾಧ್ಯಕ್ಷ ಕೃಷ್ಣ ಅವರು ಅಧಿವೇಶನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿ ರಾಜ್ಯಪಾಲರಿಗೆ ದಿನದ ಬೆಳವಣಿಗಳ ಬಗ್ಗೆ ವರದಿ ಸಲ್ಲಿಸಿದರು.

2006: ಖ್ಯಾತ ಸಂಗೀತ ನಿರ್ದೇಶಕ ಸರ್ದಾರ್ ಮಲ್ಲಿಕ್ (81) ಹೃದಯಾಘಾತದಿಂದ ನಿಧನರಾದರು. ಖ್ಯಾತ ಸಂಗೀತ ನಿರ್ದೇಶಕ ಅನು ಮಲ್ಲಿಕ್ ಅವರ ತಂದೆಯಾದ ಸರ್ದಾರ್ ಮಲ್ಲಿಕ್ ಕಳೆದ ಹಲವಾರು ವರ್ಷಗಳಿಂದ ಪಾರ್ಕಿನ್ಸನ್ ರೋಗದಿಂದ ಅಸ್ವಸ್ಥರಾಗಿದ್ದರು. ಸಾರಂಗ, ಬಚ್ ಪನ್ ಮುಂತಾದ ಚಿತ್ರಗಳಿಗೆ ಸರ್ದಾರ್ ಅವರು ಮಾಡಿದ್ದ ಸಂಗೀತ ಸಂಯೋಜನೆ ಭಾರಿ ಪ್ರಸಿದ್ಧಿ ಗಳಿಸಿತ್ತು.

2000: ಟೆನಿಸ್ ಆಟಗಾರ ಡೊನಾಲ್ಡ್ ಬಜ್ ಅವರು ತಮ್ಮ 84ನೇ ವಯಸ್ಸಿನಲ್ಲಿ ಮೃತರಾದರು. ಅವರು ಗ್ರ್ಯಾಂಡ್ ಸ್ಲಾಮನ್ನು ಮೊತ್ತ ಮೊದಲ ಬಾರಿಗೆ ಗೆದ್ದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

1974: ರಾಷ್ಟ್ರಪತಿ ವಿ.ವಿ. ಗಿರಿ ಅವರು ನವದೆಹಲಿಯ ತೀನ್ ಮೂರ್ತಿ ಭವನದಲ್ಲಿನ `ನೆಹರು ಸ್ಮಾರಕ ಮ್ಯೂಸಿಯಂ'ನ್ನು ರಾಷ್ಟ್ರಕ್ಕೆ ಅರ್ಪಿಸಿದರು.

1967: ಫ್ಲಾರಿಡಾದ ಕೇಪ್ ಕೆನಡಿಯಲ್ಲಿ ಅಪೋಲೋ 1 ಬಾಹ್ಯಾಕಾಶ ನೌಕೆಯಲ್ಲಿ ಹಠಾತ್ತನೆ ಅಗ್ನಿ ಅನಾಹುತ ಸಂಭವಿಸಿ ಅದರಲ್ಲಿದ್ದ ಅಮೆರಿಕನ್ ಗಗನಯಾನಿಗಳಾದ ವರ್ಗಿಲ್ ಐ, `ಗಸ್' ಗ್ರಿಸ್ಸೋಮ್, ಎಡ್ವರ್ಡ್ ಎಚ್. ವೈಟ್ ಮತ್ತು ರೋಗರ್ ಬಿ. ಚಾಫೀ ಅವರು ಅಸು ನೀಗಿದರು.

1959: ಕಲಾವಿದ ರಾಮಧ್ಯಾನಿ ಜನನ.

1950: ಚಾರ್ಲ್ಸ್ ಫಿಜರ್ ಮತ್ತು ಕಂಪೆನಿಯು (Charles Pfzer and Company) ಹೊಸ ಆಂಟಿ ಬಯೋಟಿಕ್ ಟೆರ್ರಾಮೈಸಿನನ್ನು ಉತ್ಪಾದಿಸಿರುವುದಾಗಿ ಸೈನ್ಸ್ ಮ್ಯಾಗಜಿನ್ ಪ್ರಕಟಿಸಿತು. ಮಣ್ಣಿನಿಂದ ಅದನ್ನು ಪ್ರತ್ಯೇಕಿಸಲಾಗಿತ್ತು. ನ್ಯೂಮೋನಿಯಾ (pneumonia) ಡೀಸೆಂಟ್ರಿ ಮತ್ತು ಇತರ ಸೋಂಕುಗಳಿಗೆ ಇದು ಪರಿಣಾಮಕಾರಿಯಾಗಿತ್ತು. ಫಿಜರ್ ವಿಜ್ಞಾನಿಗಳಿಂದ ಸಂಶೋಧನೆ ಹಾಗೂ ಅಭಿವೃದ್ಧಿಗೊಂಡ ಮೊತ್ತ ಮೊದಲ ಫಾರ್ಮಸ್ಯೂಟಿಕಲ್ ಇದು.

1945: ಗೀತರಚನೆಕಾರ, ಕವಿ, ಕಥೆಗಾರ, ಕಾದಂಬರಿಕಾರ ಎಂ.ಎನ್ ವ್ಯಾಸರಾವ್ ಅವರು ಈದಿನ ನರಸಿಂಗರಾವ್- ಸುಶೀಲಮ್ಮ ದಂಪತಿಯ ಪುತ್ರನಾಗಿ ಮೈಸೂರಿನಲ್ಲಿ ಜನಿಸಿದರು. ಬೆಂಗಳೂರು ಯುನೈಟೆಡ್ ಕಮರ್ಷಿಯಲ್ ಬ್ಯಾಂಕಿನಲ್ಲಿ 34 ವರ್ಷಗಳ ಸೇವೆ ಬಳಿಕ ಸ್ವಯಂ ನಿವೃತ್ತಿ ಪಡೆದು ನಿರಂತರ ಸಾಹಿತ್ಯ ರಚನೆ, ಸಿನಿಮಾ ಸಾಹಿತ್ಯದ ಬರಹದಲ್ಲಿ ತಲ್ಲೀನರಾಗಿದ್ದಾರೆ.

1927: ಖ್ಯಾತ ಹರಿಕಥೆದಾಸ ಬಿ.ಎನ್. ಭೀಮರಾವ್ ಅವರು ನರಸಪ್ಪ-ಲಕ್ಷ್ಮೀದೇವಿ ದಂಪತಿಯ ಮಗನಾಗಿ ಕೊರಟಗೆರೆ ತಾಲ್ಲೂಕಿನ ಸೋಂಪುರದಲ್ಲಿ ಜನಿಸಿದರು.

1926: ಜಾನ್ ಲಾಗೀ ಬೈರ್ಡ್ ಅವರು ತಮ್ಮ `ಹೊಸ ಟೆಲಿವಿಷನ್ ಯಂತ್ರ'ದ ಮೊತ್ತ ಮೊದಲ ಸಾರ್ವಜನಿಕ ಪ್ರದರ್ಶನ ನೀಡಿದರು. ಲಂಡನ್ನಿನ ರಾಯಲ್ ಇನ್ಸ್ಟಿಟ್ಯೂಷನ್ನಿನ ಸದಸ್ಯರಿಗೆ ಅವರು ಚಲಿಸುವ ವಸ್ತುಗಳನ್ನು ತಮ್ಮ ಯಂತ್ರದಲ್ಲಿ ತೋರಿಸಿದರು.

1880: ಥಾಮಸ್ ಆಲ್ವಾ ಎಡಿಸನ್ ಅವರಿಗೆ `ಇನ್ ಕಾಂಡಿಸೆನ್ಸ್' ನಿಂದ ಬೆಳಕು ನೀಡುವ ಎಲೆಕ್ಟ್ರಿಕ್ ಲೈಟಿಗೆ ಪೇಟೆಂಟ್ (ನಂಬರ್ 223,898) ನೀಡಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Advertisement