ಇಂದಿನ ಇತಿಹಾಸ
ಜನವರಿ 31
ಚುನಾವಣಾ ಆಯುಕ್ತ ಹಾಗೂ ತಮ್ಮ ಸಹೋದ್ಯೋಗಿ ನವೀನ್ ಚಾವ್ಲಾ ಅವರನ್ನು ವಜಾಗೊಳಿಸಲು ಶಿಫಾರಸು ಮಾಡಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಎನ್.ಗೋಪಾಲಸ್ವಾಮಿ ಅವರು ಕೇಂದ್ರಕ್ಕೆ ಪತ್ರ ಬರೆಯುವುದರೊಂದಿಗೆ ಆಯೋಗದ ಸದಸ್ಯರಲ್ಲಿನ ಭಿನ್ನಮತ ತಾರಕಕ್ಕೆ ಏರಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವ ಮತ್ತು ಘನತೆ ಹೊಂದಿದ ಚುನಾವಣಾ ಆಯೋಗದ ಈ ಬಿಕ್ಕಟ್ಟು ಹಾಗೂ ಮುಖ್ಯ ಆಯುಕ್ತರ ಪತ್ರ ಸಂವೈಧಾನಿಕ ಹಾಗೂ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು.
2009: ಚುನಾವಣಾ ಆಯುಕ್ತ ಹಾಗೂ ತಮ್ಮ ಸಹೋದ್ಯೋಗಿ ನವೀನ್ ಚಾವ್ಲಾ ಅವರನ್ನು ವಜಾಗೊಳಿಸಲು ಶಿಫಾರಸು ಮಾಡಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಎನ್.ಗೋಪಾಲಸ್ವಾಮಿ ಅವರು ಕೇಂದ್ರಕ್ಕೆ ಪತ್ರ ಬರೆಯುವುದರೊಂದಿಗೆ ಆಯೋಗದ ಸದಸ್ಯರಲ್ಲಿನ ಭಿನ್ನಮತ ತಾರಕಕ್ಕೆ ಏರಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವ ಮತ್ತು ಘನತೆ ಹೊಂದಿದ ಚುನಾವಣಾ ಆಯೋಗದ ಈ ಬಿಕ್ಕಟ್ಟು ಹಾಗೂ ಮುಖ್ಯ ಆಯುಕ್ತರ ಪತ್ರ ಸಂವೈಧಾನಿಕ ಹಾಗೂ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು. ಗೋಪಾಲಸ್ವಾಮಿ ಅವರ ಅಧಿಕಾರಾವಧಿ ಏ.20ಕ್ಕೆ ಮುಗಿಯುವುದು. ಅದಕ್ಕೆ ಕೇವಲ 70 ದಿನಗಳ ಮುನ್ನ ಹಾಗೂ ಸಾರ್ವತ್ರಿಕ ಲೋಕ ಸಭಾ ಚುನಾವಣೆ ಸಮೀಪಿಸುತ್ತಿ ರುವಾಗ ಅವರು ಈ ಪತ್ರ ಬರೆದರು. ಚಾವ್ಲಾ ಅವರು ಕಾಂಗ್ರೆಸ್ ಪರ ಪಕ್ಷಪಾತ ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿ ಬಿಜೆಪಿ ನೀಡಿದ್ದ ಲಿಖಿತ ದೂರಿನ ಮೇರೆಗೆ ಈ ಕ್ರಮ ಕೈಗೊಂಡರು ಎನ್ನಲಾಯಿತು. ಮೂವರು ಸದಸ್ಯರನ್ನೊಳಗೊಂಡ ಆಯೋಗದಲ್ಲಿ ಈ ಹಿಂದೆಯೇ ಭಿನ್ನ ಮತ ಕಾಣಿಸಿಕೊಂಡಿತ್ತು. ಅಲ್ಲದೆ, ಮಹತ್ವದ ನಿರ್ಧಾರಗಳ ಬಗ್ಗೆ ಸದಸ್ಯರಲ್ಲಿ ಒಮ್ಮತವಿಲ್ಲವೆಂಬುದೂ ಆಗಾಗ ಬಹಿರಂಗವಾಗುತ್ತಿತ್ತು. ಕಳೆದ ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ವಿಧಾನ ಸಭಾ ಚುನಾವಣೆ ನಡೆಸುವ ಬಗ್ಗೆ ಕೂಡ ನವೀನ್ ಚಾವ್ಲಾ ಕೂಡಾ ಗಂಭೀರ ಆಕ್ಷೇಪಗಳನ್ನು ಎತ್ತಿದ್ದರು.
2009: ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ಹಾಗೂ ಸಾವಿರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ದಾಖಲೆ ಸ್ಥಾಪಿಸಿರುವ ತಾಯ್ ನಾಗೇಶ್ (76) ದೀರ್ಘಕಾಲದ ಅನಾರೋಗ್ಯದಿಂದ ಚೆನ್ನೈಯಲ್ಲಿ ನಿಧನರಾದರು. ನಾಗೇಶ್ ಅವರು ನಟ ಆನಂದ ಬಾಬು ಸೇರಿದಂತೆ ಮೂವರು ಪುತ್ರರನ್ನು ಅಗಲಿದರು. ಹಾಸ್ಯ ಪಾತ್ರಕ್ಕೆ ನಾಗೇಶ್ ಅದೆಷ್ಟರ ಮಟ್ಟಿಗೆ ಜೀವ ತುಂಬುತ್ತೊದ್ದರೆಂದರೆ ಚಿತ್ರರಂಗಕ್ಕೆ ಕಾಲಿಟ್ಟ ಆರಂಭಿಕ ವರ್ಷಗಳಲ್ಲಿ ಇವರನ್ನು ಹಾಲಿವುಡ್ ನಟ ಡ್ಯಾನಿ ಕಯೆ ಅವರೊಂದಿಗೆ ಹೋಲಿಸಲಾಗುತ್ತಿತ್ತು. 1933 ರಲ್ಲಿ ತಿಪಟೂರಿನಲ್ಲಿ ಕನ್ನಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ನಾಗೇಶ್ ಅಲಿಯಾಸ್ ಗುಂಡೂರಾವ್, 60 ಮತ್ತು 70 ರ ದಶಕದ ಮಧ್ಯಾವಧಿಯಲ್ಲಿ ತಮಿಳು ಚಿತ್ರರಂಗದ ಬಹುಬೇಡಿಕೆಯ ಹಾಸ್ಯ ನಟರಾಗಿದ್ದರು. ಕನ್ನಡದಲ್ಲೂ 'ಪೆದ್ದಗೆದ್ದ' ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು. ಬಣ್ಣದ ಬದುಕಿನತ್ತ ಆಕರ್ಷಿತರಾಗುವ ಮುನ್ನ ಅವರು ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್ ಆಗಿದ್ದರು. ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದ ನಾಗೇಶ್ ತಾಯ್ ನಾಟಕದಿಂದ ಪ್ರಸಿದ್ಧರಾದ ಕಾರಣ ಅವರಿಗೆ ತಾಯ್ ನಾಗೇಶ್ ಎಂಬ ಹೆಸರು ಬಂದಿತು. ಸುಮಾರು 5 ದಶಕಗಳ ಕಾಲ ತಮಿಳು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದರು. ಈ ಅವಧಿಯಲ್ಲಿ ಅವರು ಅಭಿನಯಿಸಿದ ಚಿತ್ರಗಳು ಸಾವಿರಕ್ಕೂ ಹೆಚ್ಚು. ಎಂಜಿಆರ್, ಶಿವಾಜಿ ಗಣೇಶನ್, ರಜನೀಕಾಂತ್ ಹಾಗೂ ಕಮಲಹಾಸನ್ ಅವರಂಥ ಮೇರು ನಟರೊಂದಿಗೆ ಸಹ ನಟನಾಗಿ ಅಭಿನಯಿಸಿದ ಹೆಗ್ಗಳಿಕೆ ಇವರದು. ಕಮಲಹಾಸನ್ ಅವರ 'ದಶಾವತಾರಂ' ನಾಗೇಶ್ ನಟಿಸಿದ ಕೊನೆಯ ಚಿತ್ರ. ನಾಗೇಶ್ ಪ್ರತಿಭೆಯನ್ನು ಗುರುತಿಸಿದ ನಿರ್ದೇಶಕ ಕೆ.ಬಾಲಚಂದರ್, ಅನೇಕ ಚಿತ್ರಗಳಲ್ಲಿ ಇವರು ನಾಯಕ ನಟರಾಗಿ ಮಿಂಚಲು ಕಾರಣರಾದರು. 'ಎದಿರ್ ನೀಚಲ್'. 'ನೀರ್ ಕುಮಿಳಿ', 'ಸರ್ವರ್ ಸುಂದರಂ' ಮೊದಲಾದ ಚಿತ್ರಗಳಲ್ಲಿ ನಾಗೇಶ್ ಅವರ ಅಭಿನಯ ವಿಶ್ವ ವಿಖ್ಯಾತ ಹಾಸ್ಯನಟ ಚಾರ್ಲಿ ಚಾಪ್ಲಿನ್ ಅವರನ್ನು ನೆನಪಿಸುತ್ತಿದ್ದವು. (ಈ ಎಲ್ಲ ಚಿತ್ರಗಳೂ ಕನ್ನಡಕ್ಕೆ ರೀಮೇಕ್ ಆಗಿದ್ದವು). ಶಿವಾಜಿ ಗಣೇಶನ್ ಅವರೊಂದಿಗೆ ನಾಗೇಶ್ ನಟಿಸಿದ 'ತಿಲ್ಲಾನ ಮೋಹನಾಂಬಾಳ್' ಹಾಗೂ 'ತಿರುವಿಳೈಯಾಡಲ್' ಚಿತ್ರಗಳನ್ನಂತೂ ಚಿತ್ರಪ್ರೇಮಿಗಳು ಎಂದೂ ಮರೆಯಲಾಗದು. 'ಆಯಿತ್ತಿಲ್ ಒರುವನ್' ಸೇರಿದಂತೆ ಎಂಜಿಆರ್ ಜತೆಗೂ ನಾಗೇಶ್ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದರು. ಎಂಜಿಆರ್ ಹಾಗೂ ಶಿವಾಜಿ ಗಣೇಶನ್ ಅಭಿನಯದ ಬಹುತೇಕ ಚಿತ್ರಗಳಲ್ಲಿ ಅಭಿನಯಿಸಿದ ಕೆಲವೇ ಕೆಲವು ಹಾಸ್ಯ ನಟರಲ್ಲಿ ಇವರೂ ಒಬ್ಬರು. ತಮ್ಮ ನಟನೆಯಿಂದ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದ್ದ ನಾಗೇಶ್ ಅವರು ಅನೇಕ ವರ್ಷಗಳ ಕಾಲ ಕುಡಿತದ ದಾಸರಾಗಿ ಚಿತ್ರೋದ್ಯಮದ ಅನಾದರಕ್ಕೆ ಒಳಗಾದರು. ಆದರೆ ಈ ವ್ಯಸನದಿಂದ ಹೊರಬಂದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರುಪ್ರವೇಶ ಮಾಡಿದರು. ಇವರು ಕೇವಲ ಹಾಸ್ಯ ನಟರಾಗಿ ಮಾತ್ರವಲ್ಲ ಖಳನಾಯಕ, ಪೋಷಕ ಪಾತ್ರಗಳಲ್ಲೂ ಮಿಂಚಿದ್ದರು.
2009: ಭಾರತದ ಯೂಕಿ ಭಾಂಬ್ರಿ ಅವರು ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಚಾಂಪಿಯನ್‌ಶಿಪ್‌ನ ಜೂನಿಯರ್ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಹೊಸ ಇತಿಹಾಸ ನಿರ್ಮಿಸಿದರು. ಮೆಲ್ಬರ್ನ್ ಪಾರ್ಕ್‌ನ ರಾಡ್ ಲೇವರ್ ಅರೆನಾದಲ್ಲಿ ನಡೆದ ಫೈನಲ್‌ನಲ್ಲಿ ಯೂಕಿ 6-3, 6-1 ರಲ್ಲಿ ಜರ್ಮನಿಯ ಅಲೆಕ್ಸಾಂಡ್ರೊಸ್ ಫರ್ಡಿನಾಂಡೊಸ್ ಅವರನ್ನು ಮಣಿಸಿದರು. 57 ನಿಮಿಷಗಳ ಹೋರಾಟದ ಕೊನೆಗೆ ಗೆಲುವು ಲಭಿಸುತ್ತಿದ್ದಂತೆಯೇ ಯೂಕಿ ತಮ್ಮ ಮುಷ್ಠಿಯನ್ನು ಗಾಳಿಯಲ್ಲಿ ಗುದ್ದಿ ಸಂಭ್ರಮಿಸಿದರು. ಆ ಕ್ಷಣ ಭಾರತದ ಟೆನಿಸ್ ಅಭಿಮಾನಿಗಳ ರೋಮಾಂಚನಕ್ಕೆ ಕಾರಣವಾಯಿತು. ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಮ್‌ನ ಜೂನಿಯರ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ದೆಹಲಿಯ 16ರ ಹರೆಯದ ಯೂಕಿ ತಮ್ಮದಾಗಿಸಿದರು. ಅದೇ ರೀತಿ ಜೂನಿಯರ್ ಗ್ರ್ಯಾಂಡ್ ಸ್ಲಾಮ್ನಲ್ಲಿ ಪ್ರಶಸ್ತಿ ಜಯಿಸಿದ ಭಾರತದ ನಾಲ್ಕನೇ ಆಟಗಾರನಾಗಿ ಯೂಕಿ ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆದರು. ರಾಮನಾಥನ್ ಕೃಷ್ಣನ್ (1954ರ ವಿಂಬಲ್ಡನ್ ಜೂನಿಯರ್ ಪ್ರಶಸ್ತಿ), ಅವರ ಪುತ್ರ ರಮೇಶ್ ಕೃಷ್ಣನ್ (1979ರ ವಿಂಬಲ್ಡನ್ ಮತ್ತು ಫ್ರೆಂಚ್ ಓಪನ್) ಹಾಗೂ ಲಿಯಾಂಡರ್ ಪೇಸ್ (1990ರ ವಿಂಬಲ್ಡನ್ ಮತ್ತು ಯುಎಸ್ ಓಪನ್) ಅವರು ಈ ಹಿಂದೆ ಭಾರತಕ್ಕೆ ಜೂನಿಯರ್ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ತಂದಿತ್ತಿದ್ದರು. ಕಳೆದ ಬಾರಿ ಇಲ್ಲಿ ಸೆಮಿಫೈನಲಿನಲ್ಲಿ ಸೋಲು ಅನುಭವಿಸಿದ್ದ ಯೂಕಿ ಫೈನಲಿನಲ್ಲಿ ಎಲ್ಲ ವಿಭಾಗಗಲ್ಲೂ ಮೇಲುಗೈ ಸಾಧಿಸಿದರು. ಮೊದಲ ಸೆಟ್‌ನ ನಾಲ್ಕನೇ ಗೇಮಿನಲ್ಲಿ ಎದುರಾಳಿಯ ಸರ್ವ್ ಮುರಿದ ಅವರು 3-1 ರಲ್ಲಿ ಮುನ್ನಡೆ ಸಾಧಿಸಿದರು. ಅದೇ ಲಯವನ್ನು ಕಾಪಾಡಿಕೊಂಡರಲ್ಲದೆ, 31 ನಿಮಿಷಗಳಲ್ಲಿ ಸೆಟ್ ಗೆದ್ದರು. ಎರಡನೇ ಸೆಟ್ ಗೆಲ್ಲಲು ಕೇವಲ 26 ನಿಮಿಷಗಳನ್ನು ವ್ಯಯಿಸಿದ ಯೂಕಿ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಟ್ರೋಫಿಗೆ ಮುತ್ತಿಕ್ಕಿದರು. ಅಮೆರಿಕದ ಸೆರೆನಾ ವಿಲಿಯಮ್ಸ್ ಇದೇ ಚಾಂಪಿಯನ್‌ಶಿಪ್ನ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ರಾಡ್ ಲೇವರ್ ಅರೆನಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸೆರೆನಾ 6-0, 6-3 ರಲ್ಲಿ ರಷ್ಯಾದ ದಿನಾರ ಸಫಿನಾ ವಿರುದ್ಧ ಜಯ ಪಡೆದರು. ಇದು ಸೆರೆನಾ ಅವರ ವೃತ್ತಿಜೀವನದ 10ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. ಈ ಗೆಲುವಿನ ಮೂಲಕ ಅವರು ರಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು.
2009: ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಮತ್ತು ನಿವೃತ್ತ ಲೋಕಾಯುಕ್ತ ಎನ್.ವೆಂಕಟಾಚಲ ಬೆಂಗಳೂರಿನಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಿ.ವಿ.ಸದಾನಂದಗೌಡರ ಸಮ್ಮುಖದಲ್ಲಿ ಈದಿನ ಅಧಿಕೃತವಾಗಿ ಬಿಜೆಪಿ ಸೇರಿದರು.
2009: ತೆಲುಗು ನಟಿ ವಿಜಯಶಾಂತಿ ತನ್ನ ತಲ್ಲಿ ತೆಲಂಗಾಣ ಪಕ್ಷವನ್ನು ಹೈದರಾಬಾದಿನಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಪಕ್ಷದೊಂದಿಗೆ ವಿಲೀನಗೊಳಿಸಿದರು. ಅವರು ಟಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಅವರ ಮನೆಗೆ ತೆರಳಿ ಪಕ್ಷದ ಸದಸ್ಯರಾದರು. ನಂತರ ಅವರು ಟಿಆರ್‌ಎಸ್‌ನೊಂದಿಗೆ ತಮ್ಮ ಪಕ್ಷದ ವಿಲೀನವನ್ನು ಘೋಷಿಸಿದರು.
2009: ಕೋಸಿ ನದಿ ಪ್ರವಾಹ ಸಂತ್ರಸ್ತರ ಪುನರ್‌ವಸತಿಗೆಂದು ಮುಖ್ಯಮಂತ್ರಿ ಪರಿಹಾರ ನಿಧಿಯ ಮೂಲಕ ನೆರವು ನೀಡಿದ ಕರ್ನಾಟಕದ ಜನತೆಗೆ ಅದರಲ್ಲೂ ವಿಶೇಷವಾಗಿ 'ಡೆಕ್ಕನ್ ಹೆರಾಲ್ಡ್' ಮತ್ತು 'ಪ್ರಜಾವಾಣಿ' ಪತ್ರಿಕೆಗಳಿಗೆ ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ್ ಅವರು ಅಭಿನಂದನೆ ಸಲ್ಲಿಸಿದರು. ಪಟ್ನಾದಲ್ಲಿ 'ಡೆಕ್ಕನ್ ಹೆರಾಲ್ಡ್' ಹಾಗೂ 'ಪ್ರಜಾವಾಣಿ' ಸಂಪಾದಕರಾದ ಕೆ.ಎನ್. ತಿಲಕ್ ಕುಮಾರ್ ಅವರು ಕಳುಹಿಸಿಕೊಟ್ಟ 2ನೇ ಕಂತಿನ 12, 09,497 ರೂಪಾಯಿಗಳ ಡಿ.ಡಿ ಯನ್ನು ಪಟ್ನಾದ 'ಡೆಕ್ಕನ್ ಹೆರಾಲ್ಡ್' ವರದಿಗಾರ ಅಭಯ್ ಕುಮಾರ್ ಅವರು ತಮಗೆ ಸಲ್ಲಿಸಿದ ಸಂದರ್ಭದಲ್ಲಿ ಅವರು ಈ ಧನ್ಯವಾದ ಸಮರ್ಪಿಸಿದರು. ಅಕ್ಟೋಬರ 30 ರಂದು ಸಂಪಾದಕ ಕೆ. ಎನ್. ತಿಲಕ್ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಓದುಗರಿಂದ ಸಂಗ್ರಹವಾದ ಮೊದಲ ಕಂತಿನ 51,32,00 ರೂಪಾಯಿಗಳ ಡಿ.ಡಿ.ಯನ್ನು ಖುದ್ದಾಗಿ ನೀಡಿದ್ದರು.
2009: ಆಹಾರ ಪದಾರ್ಥಗಳ ಪ್ಯಾಕ್ ಮಾಡಲು ಬಳಸುವ, ರಸಗೊಬ್ಬರ, ಜವಳಿ, ಪೀಠೋಪಕರಣಗಳ ಮೆತ್ತೆ ಹಾಗೂ ಸ್ತ್ರೀಯರ ಖಾಸಗಿ ಉಪಯೋಗದ ಬಹುತೇಕ ವಸ್ತುಗಳಲ್ಲಿ ಅತಿಯಾಗಿ ಬಳಕೆಯಾಗುವ ರಾಸಾಯನಿಕ ಅಂಶಗಳು ಮಹಿಳೆಯರ ಬಂಜೆತನಕ್ಕೆ ಕಾರಣವಾಗಬಲ್ಲವು ಎಂದು ಅಧ್ಯಯನವೊಂದು ತಿಳಿಸಿತು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಹಾಗೂ ಲಾಸ್ ಏಂಜಲೀಸಿನ ಸಾರ್ವಜನಿಕ ಆರೋಗ್ಯ ಶಾಲೆಗಳು ನಡೆಸಿದ ಸಂಶೋಧನೆಯಲ್ಲಿ ಈ ಅಂಶ ವ್ಯಕ್ತವಾಯಿತು. ಈ ವಸ್ತುಗಳ ಬಳಕೆಯಿಂದಾಗಿ ಮಹಿಳೆಯರ ದೇಹದಲ್ಲಿನ ರಕ್ತದಲ್ಲಿ ಪರ್‌ಫ್ಯ್ಲೂರೊಆಕ್ಟೇನ್ ಹಾಗೂ ಪರ್‌ಫ್ಯ್ಲೂರೊಆಕ್ಟೇನ್ ಸಲ್ಫೋನೇಟ್ ಮಟ್ಟ ಹೆಚ್ಚಾಗುತ್ತದೆ. ಇಂತಹ ಅಂಶಗಳುಳ್ಳ ಮಹಿಳೆಯರು ಗರ್ಭಧರಿಸಲು ಸಾಮಾನ್ಯ ಮಹಿಳೆಯರು ತೆಗೆದುಕೊಳ್ಳುವ ಅವಧಿಗಿಂತಲೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ ಎಂದು ಸಂಶೋಧಕರು ಅಭಿಪ್ರಾಯಪಟ್ಟರು.
2009: ಭಾರತೀಯ ಮೂಲದ ಹಾಸ್ಯ ಬರಹಗಾರ ಶರತ್ ಸರ್ದಾನಾ (40) ಲಂಡನ್ನಿನಲ್ಲಿ ನಿಧನರಾದರು. ಬ್ರಿಟನ್ನಿನಲ್ಲಿನ ಭಾರತೀಯರ ಮನೋಧರ್ಮಗಳನ್ನು ಬದಲಾಯಿಸುವಲ್ಲಿ ಇವರ ಕ್ರಾಂತಿಕಾರಿ ಹಾಸ್ಯ (ಕಾಮಿಕ್) ಬರಹಗಳು ಇವರಿಗೆ ಅತ್ಯಂತ ಖ್ಯಾತಿಯನ್ನು ತಂದುಕೊಟ್ಟಿದ್ದವು. ಸಾಮಾಜಿಕ ಹವ್ಯಾಸಗಳಿಂದ ಜನಾಂಗೀಯ ನೀತಿಗಳವೆರೆಗಿನ ಇವರ ಹಾಸ್ಯ ಬರಹಗಳು ಬ್ರಿಟನ್ ದೃಶ್ಯ ಮಾಧ್ಯಮದಲ್ಲೂ ಭಾರಿ ಬೇಡಿಕೆ ಹೊಂದಿದ್ದವು. ಅಂತೆಯೇ ಶರತ್ ಮತ್ತು ರಿಚರ್ಡ್ ಪಿಂಟೊ ಜೋಡಿ ಭಾರಿ ಖ್ಯಾತಿ ಗಳಿಸಿತ್ತು.
2008: ಕರ್ನಾಟಕ ರಾಜ್ಯದ ವಿವಿಧೆಡೆಗಳಲ್ಲಿ ಹತ್ತು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಅಪಾರ ಪ್ರಮಾಣದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದರು. ಆದರೆ ಈ ದಾಳಿಯ ಬಗ್ಗೆ ವಿವರ ನೀಡಲು ಲೋಕಾಯುಕ್ತ್ತ ಎನ್. ಸಂತೋಷ ಹೆಗ್ಡೆ ನಿರಾಕರಿಸಿದರು. ಐಎಎಸ್ ಅಧಿಕಾರಿ ಡಾ. ಬಾಬುರಾವ್ ಮುಡಬಿ, ಬಳ್ಳಾರಿಯ ಹೆಚ್ಚುವರಿ ಎಸ್ಪಿ ಡಾ.ಡಿ.ಸಿ. ರಾಜಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಶೇಖರ್, ಗುಲ್ಬರ್ಗದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಪಿತಾಂಬರ ಹೆರಾಜೆ, ಬೆಳಗಾವಿಯ ಪೊಲೀಸ್ ಇಲಾಖೆಯ ಅಬಕಾರಿ ವಿಚಕ್ಷಣ ದಳದ ಡಿ ವೈ ಎಸ್ ಪಿ ಪಿ.ಜಿ. ವಾಂಡ್ ಕರ, ದಾವಣಗೆರೆ ಜಿಲ್ಲೆ ಜಗಳೂರಿನ ಪೊಲೀಸ್ ಇನ್ಸ್ ಪೆಕ್ಟರ್ ರೇವಣ್ಣ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ತಾಂತ್ರಿಕ ನಿರ್ದೇಶಕ ಎಸ್.ಪಿ. ಕೊಲ್ಹಾರ, ಕೋಲಾರದ ಕೈಗಾರಿಕಾ ಇಲಾಖೆ ಅಧಿಕಾರಿ ಸುಬ್ರಹ್ಮಣ್ಯ ಮತ್ತಿತರರು ದಾಳಿಗೆ ಒಳಗಾದ ಅಧಿಕಾರಿಗಳಲ್ಲಿ ಸೇರಿದ್ದರು. ಲೋಕಾಯುಕ್ತರು, ಉಪಲೋಕಾಯುಕ್ತ ಪತ್ರಿ ಬಸವನಗೌಡ ಮತ್ತು ಸಂಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆಯಿತು.
2008: ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಮೆಡಿಟರೇನಿಯನ್ ಸಾಗರದೊಳಗಿನ ಎರಡು ಕೇಬಲುಗಳು ಜಖಂಗೊಂಡಿರುವುದರಿಂದ ಪಶ್ಚಿಮ ಏಷ್ಯಾದ ಬಹುತೇಕ ಭಾಗ ಹಾಗೂ ಭಾರತದಲ್ಲಿ ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಕೇಬಲುಗಳು ತುಂಡಾದದ್ದರಿಂದ ಭಾರತದ ಅಂತರ್ಜಾಲ ಸೇವೆಯಲ್ಲಿ ಶೇ 60ರಷ್ಟು ಹಾಗೂ ಈಜಿಪ್ತಿನಲ್ಲಿ ಶೇ 70 ರಷ್ಟು ವ್ಯತ್ಯಯ ಉಂಟಾಯಿತು. ಸಂಯುಕ್ತ ಅರಬ್ ರಾಷ್ಟ್ರ, ಕುವೈತ್ ಹಾಗೂ ಸೌದಿ ಅರೇಬಿಯಾ ಕೂಡ ಈ ತೊಂದರೆ ಅನುಭವಿಸಿದವು.
2008: ಸಂಗೀತ ಸಾಮ್ರಾಜ್ಞಿ ಡಾ. ಗಂಗೂಬಾಯಿ ಹಾನಗಲ್, ಇತಿಹಾಸ ತಜ್ಞ ಪ್ರೊ. ಬಿ.ಷೇಕ್ ಅಲಿ, ವಿಜ್ಞಾನ ಲೇಖಕ ಪ್ರೊ.ಜಿ.ಟಿ. ನಾರಾಯಣರಾವ್ ಹಾಗೂ ಕಾನೂನು ತಜ್ಞ-ಸ್ವಾತಂತ್ರ್ಯ ಹೋರಾಟಗಾರ ಕೋ. ಚೆನ್ನಬಸಪ್ಪ ಅವರಿಗೆ 8ನೆಯ ಘಟಿಕೋತ್ಸವದಲ್ಲಿ ಗೌರವ ಡಿ.ಲಿಟ್ ಪದವಿ ನೀಡಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನಿರ್ಧರಿಸಿತು. ವಿ.ವಿ ಕುಲಪತಿ ಪ್ರೊ.ಬಿ.ಎ. ವಿವೇಕ್ ರೈ ಈ ವಿಷಯ ಪ್ರಕಟಿಸಿದರು.
2008: ಬೆಂಗಳೂರಿನ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ದಿವಂಗತ ವ್ಯಾಸರಾಯ ಬಲ್ಲಾಳ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಈದಿನ ಮಧ್ಯಾಹ್ನ 12.30ರ ಸುಮಾರಿಗೆ ನಡೆಯಿತು. ಸಾಹಿತಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಬಂಧು ಬಳಗದವರು ಪಾಲ್ಗೊಂಡಿದ್ದರು.
2008: ಹಾಲಿವುಡ್ಡಿನ ಆಂಜೋಲಿನಾ ಜೋಲಿ ಹಾಗೂ ಬಾಲಿವುಡ್ಡಿನ ಐಶ್ವರ್ಯ ರೈ ಪೂರ್ವಜರು ಒಂದೇ ಮೂಲಕ್ಕೆ ಸೇರಿದವರು ಎಂಬ ಅಂಶವನ್ನು ಲಂಡನ್ ವಿಜ್ಞಾನಿಗಳು ಬಹಿರಂಗಪಡಿಸಿದರು. ಸುಮಾರು 10 ಸಾವಿರ ವರ್ಷಗಳ ಹಿಂದೆ ಕಪ್ಪು ಸಮುದ್ರ ಪ್ರದೇಶದಲ್ಲಿ ಬದುಕಿದ್ದ ನೀಲಿ ಕಣ್ಣುಗಳ ಪೂರ್ವಜರ ಪೀಳಿಗೆಯೇ ಇವರದು ಎಂದು ಸಂಶೋಧಕರು ಹೇಳಿದರು. ಕಣ್ಣುಗಳ ಬಣ್ಣದ ಕುರಿತು ಸುಮಾರು 800 ಜನರ ಮೇಲೆ ಸಂಶೋಧನೆ ಕೈಗೊಂಡ ಕೊಪನ್ ಹೇಗನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇಂತಹ ಸಾಧ್ಯತೆಯನ್ನು ಬಯಲಿಗೆಳೆದರು. ಇವರ ಪ್ರಕಾರ ನೀಲಿ ಕಣ್ಣುಗಳನ್ನು ಹೊಂದಿದ ಶೇ 99.5ರಷ್ಟು ಜನರ ಡಿ ಎನ್ ಎ (ವಂಶವಾಹಿ ತಳಿ ನಕ್ಷೆ) ಒಂದೇ ರೀತಿಯದ್ದಾಗಿರುತ್ತದೆ. ಇವರ ಕಣ್ಣುಗಳ ಪೊರೆಯ ಬಣ್ಣ ನಿರ್ಧರಿಸುವ ಜೀನುಗಳ (ವಂಶವಾಹಿ) ಮಾರ್ಪಾಡು ಒಂದೇ ರೀತಿಯಾಗಿದೆ.
2008: ಪ್ರವಾದಿ ಮೊಹಮ್ಮದ್ ಅವರ ಕುರಿತ ಕ್ಯಾರಿಕೇಚರುಗಳನ್ನು (ಅಣಕು ಚಿತ್ರಣದ ಕಲಾಕೃತಿ) ಸಂರಕ್ಷಿಸಿ ಇಡಲು ಡೆನ್ಮಾರ್ಕ್ ರಾಷ್ಟ್ರೀಯ ಗ್ರಂಥಾಲಯ ನಿರ್ಧರಿಸಿತು. ಎರಡು ವರ್ಷಗಳ ಹಿಂದೆ ಈ ಕಲಾಕೃತಿಗಳು ಇಸ್ಲಾಮೀ ಜಗತ್ತಿನಲ್ಲಿ ಭಾರಿ ವಿವಾದವನ್ನು ಎಬ್ಬಿಸಿದ್ದವು. ಕೆಲವು ಮುಸ್ಲಿಮ್ ನಾಯಕರ ಆಕ್ಷೇಪಗಳ ನಡುವೆಯೂ ಮೊಹಮ್ಮದರನ್ನು ಕುರಿತ ಕ್ಯಾರಿಕೇಚರುಗಳನ್ನು ಅಧ್ಯಯನ ದೃಷ್ಟಿಯಿಂದ ಸಂರಕ್ಷಿಸಲಾಗುವುದು ಎಂದು ಗ್ರಂಥಾಲಯದ ವಕ್ತಾರ ಜೆಟ್ಟೆ ಜಾಯಿರ್ಗಾರ್ಡ್ ತಿಳಿಸಿದರು.
2008: ಗಣರಾಜ್ಯೋತ್ಸವ ಪೆರೇಡಿನಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ `ಬೇಲೂರು ಚನ್ನಕೇಶವ ದೇವಾಲಯ' ಸ್ತಬ್ಧಚಿತ್ರ ಸಮಗ್ರ ರೂಪದ ಎರಡನೇ ಅತ್ಯುತ್ತಮ ಪ್ರಶಸ್ತಿ ಸೇರಿದಂತೆ ಮೂರು ಪ್ರಶಸ್ತಿಗಳನ್ನು ಗಳಿಸಿತು. ಸ್ತಬ್ಧಚಿತ್ರದ ಮೆರವಣಿಗೆಗೆ ಹಿಮ್ಮೇಳವಾಗಿ ನಾದಸ್ವರ ನುಡಿಸಿದ ಕೋಲಾರ ಜಿಲ್ಲೆಯ ಬೇತಮಂಗಲದ ಗಂಗಾಧರ ನಾದಸ್ವರ ಗುರುಕುಲದ ಕಲಾವಿದರು `ಉತ್ತಮ ಪ್ರಸ್ತುತಿ ಪ್ರಶಸ್ತಿ' ಗಳಿಸಿದರು. ಸ್ತಬ್ಧಚಿತ್ರವನ್ನು ತಯಾರಿಸಿದ ಬೆಂಗಳೂರಿನ `ಸಂಜಯ್ ಮಾರ್ಕೆಟಿಂಗ್ ಮತ್ತು ಸರ್ವೀಸಸ್' ಸಂಸ್ಥೆ `ಉತ್ತಮ ರಚನಾ ಪ್ರಶಸ್ತಿ' ಯನ್ನು ಪಡೆಯಿತು.
2008: ಅನಿಲ್ ಕುಂಬ್ಳೆ ಅವರನ್ನು ಈ ಬಾರಿಯ `ಎಸ್ಸೆಲ್ ಕರ್ನಾಟಕದ ಶ್ರೇಷ್ಠ ಕ್ರೀಡಾ ವ್ಯಕ್ತಿ -2008' ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. `ಜೀವಮಾನದ ಶ್ರೇಷ್ಠ ಸಾಧಕ' ಪ್ರಶಸ್ತಿ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಕೆ.ವಿ. ವರದರಾಜ್ ಅವರಿಗೆ ಲಭಿಸಿತು. ಇವರಿಬ್ಬರಲ್ಲದೆ ಅನೂಪ್ ಶ್ರೀಧರ್ (ಬ್ಯಾಡ್ಮಿಂಟನ್), ಚಿತ್ರಾ ಮಗಿಮೈರಾಜ್ (ಬಿಲಿಯರ್ಡ್ಸ್), ಗಿರೀಶ್ ಎ ಕೌಶಿಕ್ (ಚೆಸ್), ಹೆಲೆನ್ ಮೇರಿ ಇನೊಸೆಂಟ್ (ಹಾಕಿ) ಮತ್ತು ಶಿಖಾ ಟಂಡನ್ (ಈಜು) ಇವರನ್ನೂ ಶ್ರೇಷ್ಠ ಸಾಧಕ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
2007: ಇಂಗ್ಲೆಂಡ್ ಮೂಲದ `ಕೋರಸ್' ಉಕ್ಕು ಕಂಪೆನಿ ಖರೀದಿಗೆ ಭಾರತದ ಟಾಟಾ ಸ್ಟೀಲ್ಸ್ ಮತ್ತು ಬ್ರೆಜಿಲಿನ ಸಿ ಎಸ್ ಎನ್ ಕಂಪೆನಿಗಳ ನಡುವೆ ನಾಲ್ಕು ತಿಂಗಳುಗಳಿಂದ ನಡೆದಿದ್ದ ಜಿದ್ದಾಜಿದ್ದಿನ ಪೈಪೋಟಿ ಈ ದಿನ ಕೊನೆಗೊಂಡು, ಟಾಟಾ ಸ್ಟೀಲ್ಸ್ ಗೆಲುವಿನ ನಗೆ ಬೀರುವುದರೊಂದಿಗೆ ಭಾರತೀಯ ಔದ್ಯಮಿಕ ಇತಿಹಾಸದಲ್ಲಿ ದಾಖಲೆ ನಿರ್ಮಾಣಗೊಂಡಿತು. ಭಾರತೀಯ ಔದ್ಯಮಿಕ ಇತಿಹಾಸದಲ್ಲೇ ದಾಖಲೆ ಎನ್ನಬಹುದಾದ ಈ ಖರೀದಿ ಒಪ್ಪಂದದಿಂದಾಗಿ ಜಗತ್ತಿನ ಉಕ್ಕು ಉದ್ಯಮದಲ್ಲಿ ಭಾರತೀಯ ಕಂಪೆನಿಗಳ ಹಿಡಿತ ಇನ್ನಷ್ಟು ಬಿಗಿಗೊಂಡಿತು. ಪ್ರಸ್ತುತ ಟಾಟಾ ಸ್ಟೀಲ್ಸಿನ ವಾರ್ಷಿಕ ಉತ್ಪಾದನೆ ಐವತ್ತು ಲಕ್ಷ ಟನ್ ಇದ್ದು, `ಕೋರಸ್' ನ ಉತ್ಪಾದನೆ 1.82 ಕೋಟಿ ಟನ್ ಇದೆ. ಈ ಖರೀದಿಯಿಂದಾಗಿ ಟಾಟಾ ಸ್ಟೀಲ್ಸ್ ಈಗ 23.2 ಮೆಟ್ರಿಕ್ ಟನ್ ವಾರ್ಷಿಕ ಉತ್ಪಾದನೆಯ ಕಂಪೆನಿಯಾಗಲಿದ್ದು, ಜಗತ್ತಿನ ಐದನೇ ದೊಡ್ಡ ಉಕ್ಕು ಉತ್ಪಾದನೆ ಕಂಪೆನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗುವುದು. ಟಾಟಾ ಮತ್ತು ಸಿ ಎಸ್ ಎನ್ ಕಂಪೆನಿಗಳೆರಡೂ `ಕೋರಸ್' ನ್ನು ತಮ್ಮ ತೆಕ್ಕೆಗೆ ಪಡೆಯಲು ಎಲ್ಲಿಲ್ಲದ ಕಸರತ್ತು ನಡೆಸಿದ್ದರಿಂದ ಅಂತಿಮವಾಗಿ ಬಹಿರಂಗ ಹರಾಜು ನಡೆಸಲು ನಿರ್ಧರಿಸಲಾಗಿತ್ತು. ಜನವರಿ 30ರ ರಾತ್ರಿಯಿಂದ 31ರ ಬೆಳಗಿನವರೆಗೆ ನಡೆದ ಒಂಬತ್ತು ಸುತ್ತಿನ ಬಹಿರಂಗ ಹರಾಜಿನಲ್ಲಿ `ಕೋರಸ್' ನ ಪ್ರತಿ ಷೇರಿಗೆ 608 ಪೆನ್ನಿಗಳನ್ನು ನೀಡಲು ಮುಂದಾದ ಟಾಟಾ ಸ್ಟೀಲ್ಸ್ ಗೆ ಜಯ ಸಿಕ್ಕಿತು. ಸಿ ಎಸ್ ಎನ್ ಪ್ರತಿ ಷೇರಿಗೆ 603 ಪೆನ್ನಿವರೆಗೆ ಕೊಡಲು ತಯಾರಾಗಿತ್ತು. ಆದರೆ, 608 ಪೆನ್ನಿ ನೀಡಲು ಟಾಟಾ ಸ್ಟೀಲ್ಸ್ ಮುಂದಾದಾಗ ಸಿ ಎಸ್ ಎನ್ ಕೈ ಚೆಲ್ಲಿತು. ಕೋರಸ್ ಕಂಪೆನಿಗಾಗಿ ಒಟ್ಟು 1,130 ಕೋಟಿ ಡಾಲರ್ನ್ನು ಸಂಪೂರ್ಣ ನಗದು ನೀಡಲು ಟಾಟಾ ಒಪ್ಪಿಕೊಂಡಿದ್ದು, ಇದು 50,850 ಕೋಟಿ ರೂಪಾಯಿಯಾಗುತ್ತದೆ. ಈ ಸಾಲಿನಲ್ಲಿ ಕೋರಸ್ ನ ಪ್ರತಿ ಷೇರು 550 ಪೆನ್ನಿಗಳ ಮೌಲ್ಯದಲ್ಲಿ ಮಾರಾಟವಾಗುತ್ತಿದ್ದು, ಟಾಟಾ ಸ್ಟೀಲ್ 608 ಪೆನ್ನಿ ನೀಡಲು ಮುಂದಾಗಿದ್ದರಿಂದ ಕೋರಸ್ ಷೇರುದಾರರಿಗೆ ಭಾರೀ ಲಾಭವಾಯಿತು.
2007: ಕಾವೇರಿ ನದಿ ದಂಡೆಯ ಮೇಲಿರುವ ಟಿ. ನರಸೀಪುರದ ಅಗಸ್ತ್ಯೇಶ್ವರ ದೇವಾಲಯದಲ್ಲಿ ಬೆಳಗ್ಗೆ ಕಲಶ ಸ್ಥಾಪನೆ, ಗಣಹೋಮ ಹಾಗೂ ಸಂಜೆ ಗಂಗಾಪೂಜೆ, ಯಾಗ ಶಾಲೆ ಪ್ರವೇಶ ಮಾಡುವುದರೊಂದಿಗೆ ಏಳನೇ ಮಹಾಕುಂಭಮೇಳ ವಿಧ್ಯುಕ್ತವಾಗಿ ಆರಂಭಗೊಂಡಿತು.
2007: ಕೇವಲ ಮಹಿಳೆಯರೇ ಇರುವ ಭಾರತೀಯ ಪೊಲೀಸ್ ತುಕಡಿ ಆಫ್ರಿಕದ ಪಶ್ಚಿಮ ಭಾಗದಲ್ಲಿರುವ ಲೈಬೀರಿಯಾ ಶಾಂತಿಪಾಲನಾ ಕಾರ್ಯ ನಿರ್ವಹಿಸುವ ಸಲುವಾಗಿ ಲೈಬೀರಿಯಾವನ್ನು ತಲುಪುವ ಮೂಲಕ ಇತಿಹಾಸ ಸೃಷ್ಟಿಸಿತು. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವಾಗಿ ಸೇರ್ಪಡೆಗೊಳ್ಳುವ ಈ ತುಕಡಿಯಲ್ಲಿ 103 ಮಂದಿ ಮಹಿಳಾ ಸಿಬ್ಬಂದಿ ಇದ್ದು, ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಕಾರ್ಯಕ್ರಮದ ಇತಿಹಾಸದಲ್ಲಿ ಪೂರ್ಣ ಪ್ರಮಾಣದ ಮಹಿಳಾ ತುಕಡಿಯ ಸೇರ್ಪಡೆ ಇದೇ ಮೊದಲು.
2007: ಸ್ನಾತಕೋತ್ತರ ವೈದ್ಯಕೀಯ ಕೋರ್ಸಿನಲ್ಲಿ (ಪಿಜಿ) ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ ಶೇಕಡಾ 22.5ರಷ್ಟು ಮೀಸಲಾತಿ ಜಾರಿಗೊಳಿಸಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿತು.
2007: ವರ್ಣಭೇದ ನೀತಿ ವಿರುದ್ಧ ಸಿಡಿದು ನಿಂತ ಹಾಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗೆ ಅಹಿಂಸೆ, ಗಾಂಧಿ ತತ್ವಗಳ ಮೂಲಕ ಶ್ರಮಿಸಿದ ದಕ್ಷಿಣ ಆಫ್ರಿಕದ ಆರ್ಚ್ ಬಿಷಪ್ ಡೆಸ್ಮಂಡ್ ಟುಟು ಅವರಿಗೆ ನವದೆಹಲಿಯಲ್ಲಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ `ಗಾಂಧಿ ಪ್ರಶಸ್ತಿ' ಪ್ರದಾನ ಮಾಡಿದರು. ಈ ಪ್ರಶಸ್ತಿಯು 1 ಕೋಟಿ ರೂಪಾಯಿ ನಗದು ಹಣ ಮತ್ತು ಪುರಸ್ಕಾರ ಪತ್ರವನ್ನು ಹೊಂದಿದೆ.
2007: ಬ್ರಾಡ್ ವೇ ರಂಗಭೂಮಿ, ಚಲನಚಿತ್ರ ಮತ್ತು ಟೆಲಿವಿಷನ್ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ಕಾದಂಬರಿಕಾರ ಸಿಡ್ನಿ ಶೆಲ್ಡನ್ (89) ಅವರು ಲಾಸ್ ಏಂಜೆಲಿಸ್ನಲ್ಲಿ ನಿಧನರಾದರು.
2007: ಮಂಗಳೂರಿನ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಕನ್ನಡ ಸಾಹಿತ್ಯ ಪ್ರಶಸ್ತಿಗೆ ನೀಡುವ `ಸಂದೇಶ' ಪ್ರಶಸ್ತಿಗೆ `ನಾಡೋಜ' ಪ್ರಶಸ್ತಿ ಪುರಸ್ಕೃತ ಡಾ. ಚನ್ನವೀರ ಕಣವಿ ಆಯ್ಕೆಯಾದರು.
2005: ಖ್ಯಾತ ಶಿಕ್ಷಣ ತಜ್ಞ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಭೌತಶಾಸ್ತ್ರಜ್ಞ ಡಾ. ಎಚ್. ನರಸಿಂಹಯ್ಯ (1920-2005) ಈದಿನ ನಿಧನರಾದರು.
1971: ಆಲನ್ ಶೆಫರ್ಡ್, ಸ್ಟುವರ್ಟ್ ರೂಸಾ ಮತ್ತು ಎಡ್ಗರ್ ಮಿಶೆಲ್ (mitchell) ಅವರನ್ನು ಹೊತ್ತ ಅಪೋಲೋ 14 ಬಾಹ್ಯಾಕಾಶ ನೌಕೆಯನ್ನು ಗಗನಕ್ಕೆ ಹಾರಿ ಬಿಡಲಾಯಿತು. ಶೆಫರ್ಡ್ ಮತ್ತು ಮಿಶೆಲ್ ಅವರು ಈ ಯಾನದ ಮೂಲಕ ಮೂರನೇ ಬಾರಿ ಚಂದನಲ್ಲಿ ಇಳಿದರು.
1963: ನವಿಲನ್ನು ಭಾರತದ `ರಾಷ್ಟ್ರೀಯ ಪಕ್ಷಿ' ಎಂಬುದಾಗಿ ಘೋಷಿಸಲಾಯಿತು.
1958: ಅಮೆರಿಕಾದ ಮೊದಲ ಉಪಗ್ರಹ `ಎಕ್ಸ್ ಪ್ಲೋರರ್ -1' ಕೇಪ್ ಕೆನವರಾಲ್ನಿಂದ ಉಡ್ಡಯನಗೊಂಡಿತು.
1950: ಅಮೆರಿಕಾ ಅಧ್ಯಕ್ಷ ಹ್ಯಾರಿ ಎಸ್. ಟ್ರೂಮನ್ ಅವರು ಜಲಜನಕ ಬಾಂಬ್ (ಹೈಡ್ರೋಜನ್ ಬಾಂಬ್) ಅಭಿವೃದ್ಧಿ ಪಡಿಸಲು ತಾವು ಆಜ್ಞಾಪಿಸಿರುವುದಾಗಿ ಪ್ರಕಟಿಸಿದರು.
1943: ಸ್ಟಾಲಿನ್ ಗಾರ್ಡಿನಲ್ಲಿ ಹಿಟ್ಲರನ ಆದೇಶಗಳನ್ನು ಉಲ್ಲಂಘಿಸಿ ಫೀಲ್ಡ್ ಮಾರ್ಷಲ್ ಪೌಲಸ್ ಜರ್ಮನ್ 6ನೇ ಸೇನಾ ತುಕಡಿಯೊಂದಿಗೆ ರಷ್ಯಕ್ಕೆ ಶರಣಾಗತರಾದರು.
1938: ರಾಗ ಸಂಯೋಜಕ, ಸಂಗೀತ ತಜ್ಞ ಬೆಂಗಳೂರು ಎಸ್. ಮುಕುಂದ್ ಅವರು ರೆವಿನ್ಯೂ ಕಮೀಷನರ್ ಶ್ರೀನಿವಾಸನ್ - ತಮಿಳು ಲೇಖಕಿ ಜಯಲಕ್ಷ್ಮಿ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.
1923: ಅಮೆರಿಕಾದ ಕಾದಂಬರಿಕಾರ ನಾರ್ಮನ್ ಮೈಲರ್ ಹುಟ್ಟಿದರು. ಕಾದಂಬರಿಯ ಕಲ್ಪನೆ ಹಾಗೂ ವಿಷಯ ಸಮೃದ್ಧಿಯೊಂದಿಗೆ ನೈಜ ಘಟನೆಗಳನ್ನು ನಿರೂಪಿಸುವ ಪತ್ರಿಕೋದ್ಯಮ ವಿಧಾನವನ್ನು ಇವರು ರೂಪಿಸಿದರು.
1918: ಸೋವಿಯತ್ ಒಕ್ಕೂಟದಲ್ಲಿ ಆಗ ಬಳಕೆಯಲ್ಲಿದ್ದ ಜ್ಯೂಲಿಯನ್ ಕ್ಯಾಲೆಂಡರಿನ ಕೊನೆಯ ದಿನ. ಮರುದಿನದಿಂದ ಅಲ್ಲಿ ಗ್ರೆಗೋರಿಯನ್ ಕ್ಯಾಲೆಂಡರ್ ಬಳಕೆಗೆ ಬಂತು. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಮರುದಿನವನ್ನು `ಫೆಬ್ರುವರಿ 14' ಎಂಬುದಾಗಿ ಪರಿಗಣಿಸಲಾಯಿತು. ಈ ಎರಡು ದಿನಾಂಕಗಳ ನಡುವಣ ವ್ಯತ್ಯಾಸ ಸರಿಪಡಿಸುವ ಸಲುವಾಗಿ ಮಧ್ಯದ ದಿನಾಂಕಗಳನ್ನು ಕಿತ್ತು ಹಾಕಲಾಯಿತು.
1896: ಖ್ಯಾತ ಸಾಹಿತಿ, ಕಾವ್ಯವಾಚನದ ಗಾರುಡಿಗ ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ.ಬೇಂದ್ರೆ- ಅಂಬಿಕಾತನಯದತ್ತ) (1896-1981) ಅವರು ರಾಮಚಂದ್ರ ಪಂತ- ಅಂಬೂತಾಯಿ ದಂಪತಿಯ ಮಗನಾಗಿ ಧಾರವಾಡದ ಪೋತನೀಸರ ಗಲ್ಲಿಯಲ್ಲಿ ಜನಿಸಿದರು. ಜ್ಞಾನಪೀಠ ಪ್ರಶಸ್ತಿ (ನಾಕುತಂತಿ ಕವನ ಸಂಗ್ರಹ) ಪಡೆದ ಕನ್ನಡದ ಮೇರು ಸಾಹಿತಿಗಳ ಪೈಕಿ ಇವರು ಒಬ್ಬರು.
1882: ಫ್ರಾಂಕ್ಲಿನ್ ಡೆಲಾನೊ ರೂಸ್ ವೆಲ್ಟ್ (1882-1945) ಹುಟ್ಟಿದ ದಿನ. ಅಮೆರಿಕದ 32ನೇ ಅಧ್ಯಕ್ಷರಾದ ಇವರು 1933-1945ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದರು. ಇವರ ಆಳ್ವಿಕೆ ಕಾಲದಲ್ಲೇ ಎರಡನೇ ಜಾಗತಿಕ ಸಮರ ನಡೆಯಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment