Showing posts sorted by relevance for query ವಿಟ್ಲ. Sort by date Show all posts
Showing posts sorted by relevance for query ವಿಟ್ಲ. Sort by date Show all posts

Thursday, January 24, 2013

ವಿಟ್ಲ ಪಂಚಲಿಂಗೇಶ್ವರನಿಗೆ ಮರುಹುಟ್ಟು ಸಂಭ್ರಮ

ವಿಟ್ಲ ಪಂಚಲಿಂಗೇಶ್ವರನಿಗೆ ಮರುಹುಟ್ಟು ಸಂಭ್ರಮ


ಒಂದೆರಡಲ್ಲ
, ಬರೋಬ್ಬರಿ 4750 ಚದರ ಅಡಿ ವ್ಯಾಪ್ತಿಯ ವಿಸ್ತಾರವಾದ ಅಡಿಪಾಯ. 67 ಅಡಿ ಎತ್ತರದ ಮೂರು ಅಂತಸ್ತುಗಳ ಇಳಿಜಾರು ಛಾವಣಿ. ಛಾವಣಿಗಳಿಗೆ ತಾಮ್ರದ ಹೊದಿಕೆ. 1.20 ಕೋಟಿ ರೂಪಾಯಿ ವೆಚ್ಚದಲ್ಲಿ ಧರ್ಮಸ್ಥಳದಿಂದ ಕೊಡುಗೆಯಾಗಿ ಬಂದ ಮೂರು ಸ್ವರ್ಣ ಲೇಪಿತ ಕಳಸಗಳು.

ಇದು ಮರುಹುಟ್ಟು ಪಡೆದು ಭವ್ಯವಾಗಿ ತಲೆ ಎತ್ತಿ ನಿಂತಿರುವ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ವಿಹಂಗಮ ನೋಟ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡದೆಂದು ಬಣ್ಣಿಸಲಾದ ವಿಟ್ಲದ ಈ ಪಂಚಲಿಂಗೇಶ್ವರ ದೇವಾಲಯಲ್ಲಿ ಇದೀಗ ಸಡಗರವೇ ಸಡಗರ
. ಗ್ರಾಮದ ಪ್ರಮುಖ ರಸ್ತೆಗಳು, ರಥ ಎಳೆಯುವ ಗದ್ದೆ, ದೇವಾಲಯದ ಆವರಣ ಸೇರಿದಂತೆ ಎಲ್ಲ ಕಡೆ ಚಪ್ಪರ, ತಳಿರು ತೋರಣದ ಶೃಂಗಾರ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ತಂಡೋಪತಂಡವಾಗಿ ಸ್ವಯಂ ಸೇವಕರಾಗಿ ಪಂಚಲಿಂಗೇಶ್ವರನ ಸೇವಾ ಕೈಂಕರ್ಯ ನಡೆಸುತ್ತಿರುವ ಜನರ ದಂಡು. ಸಹಸ್ರಾರು ಮಂದಿಗೆ ಪ್ರತಿನಿತ್ಯ ಅನ್ನದಾನ. ದೇವಾಲಯದ ಆವರಣದಲ್ಲೆಲ್ಲಾ ಭಕ್ತಾದಿಗಳಿಂದ ಬಂದ ಲೋಡುಗಟ್ಟಲೆ ಹೊರೆ ಕಾಣಿಕೆಯ ರಾಶಿ.
2001ರಲ್ಲಿ ಕಂಡ ಜೀರ್ಣೋದ್ಧಾರದ ಕನಸು 2013ರಲ್ಲಿ ನನಸಾಗುವ ವೇಳೆಗೆ ಆಗಿದ್ದುದು ಕೇವಲ ಜೀರ್ಣೋದ್ಧಾರವಲ್ಲ, ಬದಲಿಗೆ ದೇಗುಲದ ಸಂಪೂರ್ಣ ಪುನರ್ ನಿರ್ಮಾಣ. ಸಂಪೂರ್ಣ ಮಣ್ಣಿನಿಂದ ನಿರ್ಮಾಣವಾಗಿದ್ದ ದೇವಾಲಯ ಈಗ ಭವ್ಯವಾದ ಶಿಲಾಮಯ ದೇವಸ್ಥಾನವಾಗಿ ಎದ್ದು ನಿಂತಿದೆ.

ಇಡೀ ಗ್ರಾಮ ಈಗ
(ಜನವರಿ 9ರಿಂದ 21ರವರೆಗೆ) 13 ದಿನಗಳ ಕಾಲ ಪುನರ್ ನಿರ್ಮಾಣಗೊಂಡ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಮರ್ಪಣೆ, ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕೋತ್ಸವ ಸಮಾರಂಭ, ನಂತರ ಜನವರಿ 21ರಿಂದ 29ರವರೆಗೆ 9 ದಿನ ಮರು ಸಮರ್ಪಿತ ದೇಗಲದಲ್ಲಿ `ವಿಟ್ಲಾಯನ' ಎಂದೇ ಖ್ಯಾತಿ ಪಡೆದ ವರ್ಷಾವಧಿ ಜಾತ್ರೆ - ಹೀಗೆ 22 ದಿನಗಳ ಕಾಲ ಮಹಾ ಉತ್ಸವದ ಸಡಗರದಲ್ಲಿ ತೇಲುತ್ತಿದೆ. ಧರ್ಮಸ್ಥಳದ ನಡಾವಳಿಯ ಸಂಭ್ರಮವನ್ನು ನೆನಪಿಗೆ ತರುತ್ತಿದೆ. ಪ್ರತಿನಿತ್ಯ ಸಹಸ್ರಾರು ಮಂದಿಗೆ ಅನ್ನದಾನ, ಧಾರ್ಮಿಕ ವಿಧಿಗಳು, ಸಾಂಸ್ಕೃತಿಕ, ಮನರಂಜನಾ ಕಾರ‌್ಯಕ್ರಮಗಳು, ಯಕ್ಷಗಾನ, ನೃತ್ಯ, ನಾಟಕ ಸಂಗೀತದಲ್ಲಿ ಪ್ರತಿದಿನವೂ ಮಿಂದೇಳುತ್ತಿದ್ದಾರೆ.
ಅತ್ಯಂತ ಪುರಾತನವಾದ ಈ ಪಂಚಲಿಂಗೇಶ್ವರ ದೇವಸ್ಥಾನ ಪಾಂಡವ ನಿರ್ಮಿತ ದೇವಸ್ಥಾನ ಎಂದೇ ಪ್ರತೀತಿ. ಪಾಂಡವರು ಅರಗಿನ ಅರಮನೆಯಿಂದ ಪಾರಾದ ಬಳಿಕ ಕೆಲಕಾಲ ವಾಸವಿದ್ದ ಏಕಚಕ್ರ ನಗರವೇ ಈಗಿನ ವಿಟ್ಲ ಎಂಬ ನಂಬಿಕೆ ಇದೆ. ಭೀಮ ಬಕಾಸುರನನ್ನು ಕೊಂದದ್ದು ಇಲ್ಲಿಯೇ ಎಂದು ಹೇಳುವ ಜನ ಅದಕ್ಕೆ ಸಾಕ್ಷಿ ಎಂಬಂತೆ ದೇವಸ್ಥಾನದ ಆವರಣದಲ್ಲೇ ಕುಂತಿ ಮನೆ, ದೇವಾಲಯದಲ್ಲಿ ಕುಂತೀಶ್ವರ ಗುಡಿ, ಬಕಾಸುರ ವಾಸವಾಗಿದ್ದನೆನ್ನಲಾದ ಸಮೀಪದ ಕಳಂಜಿಮಲೆಯ ಬಕಾಸುರ ಗುಹೆ, ಭೀಮ- ಬಕಾಸುರ ಕದನದಲ್ಲಿ ಬಕಾಸುರನ ಅವಯವಗಳಾದ ತಲೆ, ಕಣ್ಣು, ಕೈ, ಬಾಯಿ ಹೋಗಿ ಬಿತ್ತೆನ್ನಲಾದ ಜಾಗಗಳಿಗೆ ತಲೆಂಗಳ, ಕಣ್ಣೂರು, ಕೈಯೂರು, ಬಾಯಾರು ಎಂದು ಹೆಸರಾದದ್ದು, ಭೀಮ ಸ್ನಾನ ಮಾಡಿದ ಕೆರೆ -ನೆತ್ತರಕೆರೆ ಎಂದು ಹೆಸರಾದ `ದಂತಕತೆ'ಯನ್ನು ಉಸುರುತ್ತಾರೆ.
ಇನ್ನೊಂದು ಪುರಾಣ ಕತೆಯ ಪ್ರಕಾರ ಪಾಂಡವರು ತಮ್ಮ ಸುತ್ತಾಟದ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ನೆಲೆಸಿದ್ದರು ಎನ್ನಲಾಗುತ್ತದೆ. ತಮ್ಮ ನೆನಪಿಗಾಗಿ ಶಿವನನ್ನು ಸ್ಥಾಪಿಸುವುದಕ್ಕೆ ಮನಮಾಡಿದ ಪಾಂಡವರು ವಾಯುವೇಗದಲ್ಲಿ ಗಮಿಸಬಲ್ಲ ಭೀಮನನ್ನು ಕಾಶಿಗೆ ಕಳುಹಿಸಿ ಲಿಂಗಗಳನ್ನು ತರಲು ನಿಯೋಜಿಸಿದರು. ಭೀಮ ಲಿಂಗಗಳನ್ನು ತರುವಾಗ ತಡವಾದದ್ದರಿಂದ ನಿಶ್ಚಿತ ಲಗ್ನದಲ್ಲಿ ಆತನು ಆಗಮಿಸುವುದಕ್ಕೆ ಮೊದಲೇ ಶಿಲೆಯೊಂದನ್ನು ಪ್ರತಿಷ್ಠಿಸಿ ಪೂಜೆ ನೆರವೇರಿಸಲಾಯಿತು. ಆದರೆ ಭೀಮನು ಆಗಮಿಸಿ ಪ್ರತಿಷ್ಠಾಪಿಸಿದ ಶಿಲೆಯನ್ನು ಕಿತ್ತೆಸೆದು ತಾನು ತಂದ ಲಿಂಗಗಳನ್ನು ಪ್ರತಿಷ್ಠಾಪಿಸಿದನು. ಭೀಮನು ಕಿತ್ತೆಸೆದ ಲಿಂಗವು ವಿಟ್ಲ ದೇಗುಲದ ಬಡಗು ದಿಕ್ಕಿನಲ್ಲಿ ಕೆರೆಯ ಮಧ್ಯೆ ಕಲ್ಲಿನ ಮಂಟಪದಲ್ಲಿ ಈಗಲೂ ಇದೆಯೆಂದು ಹೇಳಲಾಗುತ್ತಿದೆ. ಹೀಗೆ ಈ ಶಿವಲಿಂಗಗಳು ಪಾಂಡವರಿಂದ ಪ್ರತಿಷ್ಠೆಗೊಂಡಿದೆ ಎನ್ನಲಾಗಿದೆ. ನೈವೇದ್ಯಕ್ಕೆ ಬೇರೇನೂ ಇಲ್ಲದೇ ಇದ್ದುದರಿಂದ ಅದಾಗಲೇ ನೈವೇದ್ಯ ಮಾಡಲಾದ ಅನ್ನಕ್ಕಿಷ್ಟು ನೀರು ಚಿಮುಕಿಸಿ ಅದನ್ನೊಮ್ಮೆ ಬೆಂಕಿಗಿರಿಸಿ ತೆಗೆದು ಭೀಮನು ನೈವೇದ್ಯ ಮಾಡಿದನು ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕೆ ಇಲ್ಲಿನ ಪಂಚಲಿಂಗನಿಗೆ ತಂಗುಳನ್ನದ ನೈವೇದ್ಯ ಇಂದಿಗೂ ನಡೆದುಕೊಂಡು ಬಂದಿದೆ. ಮತ್ತೊಂದು ಐತಿಹ್ಯದ ಪ್ರಕಾರ ಭೀಮನು ಕಾಶಿಗೆ ಹೋದಾಗ ಅವನ ಬೆನ್ನ ಹಿಂದೆಯೇ ಹನುಮಂತನೂ ಹೋದನಂತೆ. ವೇಗದಲ್ಲಿ ಹನುಮಂತ ಹೆಚ್ಚು ಸಮರ್ಥನಾದ ಕಾರಣ ಭೀಮನಿಗಿಂತ ಮೊದಲು ಲಿಂಗವನ್ನು ತಂದು ನಿಶ್ಚಿತ ಸಮಯಕ್ಕೆ ಪ್ರತಿಷ್ಠಾಪನೆ ನಡೆಯಿತು ಎಂದು ಡಾ.ಕೆ.ಅನಂತರಾಮು ಅವರು ಉದ್ಧರಿಸಿದ್ದಾರೆ. ಆದರೆ ಕಿತ್ತ ಲಿಂಗವು ಕೆರೆ ಮಧ್ಯದಲ್ಲಿ ಇದೆ ಎಂದು ಈ ಐತಿಹ್ಯದಲ್ಲಿ ಉದ್ಧರಿಸಿಲ್ಲ ಎಂದು ಡಾ.ಪಾದೆಕಲ್ಲು ವಿಷ್ಣು ಭಟ್ ಲೇಖನದಲ್ಲಿ ಬರೆದಿದ್ದಾರೆ.
ಖ್ಯಾತ ಸಂಶೋಧಕ ಡಾ. ಪಿ. ಗುರುರಾಜ ಭಟ್ ಅವರ ಪ್ರಕಾರ ಪಂಚಲಿಂಗೇಶ್ವರ ದೇವಸ್ಥಾನ ಕ್ರಿ.. 7-8ನೇ ಶತಮಾನದ್ದು. ಕ್ರಿ.. 1257ಕ್ಕೂ ಮೊದಲು ವಿಟ್ಲ ಸೀಮೆಯನ್ನು ಆಳುತ್ತಿದ್ದ ದೊಂಬ ಹೆಗ್ಗಡೆ ಅರಸು ಮನೆತನದ ಆರಾಧ್ಯ ದೈವ ವಿಟ್ಲದ ಪಂಚಲಿಂಗೇಶ್ವರ ಎನ್ನಲಾಗಿದೆ. ಕೇಪುವಿನಲ್ಲಿ ಇರುವ ಉಳ್ಳಾಳ್ತಿ ಗುಡಿಯೂ ಇದೇ ದೊಂಬ ಹೆಗ್ಗಡೆ ಅರಸು ಕುಟುಂಬಕ್ಕೆ ಸೇರಿದ್ದು. `ಬಲ್ಲಾಳ' ಎಂಬುದು ಈ ಅರಸು ಮನೆತನದ ಉಪನಾಮ.

ಲಭ್ಯ ಮಾಹಿತಿಗಳ ಪ್ರಕಾರ
1436, 1477 ಮತ್ತು 1894ರಲ್ಲಿ ದೇವಳದ ಜೀರ್ಣೋದ್ಧಾರ ನಡೆದಿತ್ತು ಎಂದು ಹೇಳಲಾಗಿದೆ. 1928, 1990ರಲ್ಲೂ ಅಲ್ಪಸ್ವಲ್ಪ ಜೀರ್ಣೋದ್ಧಾರ ನಡೆದಿತ್ತು.
ಈ ಮಧ್ಯೆ ಅರಸು ಮನೆತನಕ್ಕೆ ಸಂಕಷ್ಟದ ದಿನಗಳು ಎದುರಾದ ಹಿನ್ನೆಲೆಯಲ್ಲಿ ದೇವಸ್ಥಾನ ಜೀರ್ಣವಾಗುತ್ತಲೇ ಹೋಯಿತು. ಇಂತಹ ಸಂದರ್ಭದಲ್ಲಿ 2001ರಲ್ಲಿ ಭಕ್ತಾದಿಗಳು ದೇವಸ್ಥಾನದ ಜೀರ್ಣೋದ್ಧಾರ ಕೈಂಕರ್ಯಕ್ಕೆ ಕೈಹಾಕಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ
. ಡಿ. ವೀರೇಂದ್ರ ಹೆಗ್ಗಡೆ ಗೌರವಾಧ್ಯಕ್ಷತೆಯಲ್ಲಿ ರೂಪುಗೊಂಡ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಪೇಜಾವರದ ವಿಶ್ವೇಶ ತೀರ್ಥ ಶ್ರೀಪಾದರು, ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ, ಒಡಿಯೂರಿನ ಗುರುದೇವಾನಂದ ಸ್ವಾಮೀಜಿ, ಶ್ರೀ ಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತಿತರ ಯತಿಗಳ ಮಾರ್ಗದರ್ಶನದಲ್ಲಿ ಮುನ್ನಡೆಯಿತು.




ಜೀರ್ಣೋದ್ಧಾರದ ಸಮಗ್ರ ಯೋಜನೆ
2002ರಲ್ಲಿ ರೂಪುಗೊಂಡು 2007ರವರೆಗೆ ನಿಧಿ ಸಂಗ್ರಹ ನಡೆಯಿತು. ವಿಟ್ಲ ಸೀಮೆಯ 16-17 ಗ್ರಾಮಗಳ ಮನೆ ಮನೆಯಿಂದಲೂ ದೇಣಿಗೆ ಹರಿದು ಬಂತು. ಜೊತೆಗೆ ವಿಟ್ಲದಿಂದ ಹೊರಹೋಗಿ ನೆಲೆಸಿದ ವ್ಯಕ್ತಿಗಳು ಅವರ ಮಿತ್ರರು, ಬಂಧುಗಳ ಮೂಲಕ ವಿಶ್ವಾದ್ಯಂತದಿಂದ ಕಾಣಿಕೆಯ ಪ್ರವಾಹ ಹರಿಯಿತು.2007ರ ಜನವರಿ 27ರಂದು `ಬಾಲಾಲಯ' ಉದ್ಘಾಟನೆ, ನಂದಿ (ಬಸವ) ಮೂಲಕ ಕಳಸವನ್ನು ಕೆಳಕ್ಕೆ ಎಳೆಯುವುದರೊಂದಿಗೆ ಜೀರ್ಣೋದ್ಧಾರ ಕಾರ್ಯಕ್ಕೆ ನಾಂದಿ. ಒಂದೇ ದಿನದಲ್ಲಿ ಸಹಸ್ರಾರು ಭಕ್ತರು ಮೂರು ಅಂತಸ್ತಿನ ಛಾವಣಿಯನ್ನು ಬಿಚ್ಚಿದರು. ಮುಂದಿನ 9 ದಿನದಲ್ಲಿ ಅಲ್ಲಿ ಉಳಿದಿದ್ದುದು ಅಡಿಪಾಯದ ಸ್ಥಳ ಮಾತ್ರ. ಅಂದಿನಿಂದ ಆರಂಭವಾದ ದೇಗುಲ ಪುನರ್ ನಿರ್ಮಾಣದ ಕಾರ‌್ಯ ನಿರಂತರವಾಗಿ 5 ವರ್ಷಗಳ ಕಾಲ ಮುಂದುವರೆಯಿತು. ಬೃಹದಾಕಾರದ ದೇವಾಲಯದ ಹೊರಗಿನ ಗೋಡೆಯಲ್ಲಿ 421 ಕೆಂಪು ಕಲ್ಲುಗಳ 42 ಸಾಲು, ಒಳಗಿನ ಗೋಡೆಯಲ್ಲಿ 421 ಕೆಂಪು ಕಲ್ಲುಗಳ 52 ಸಾಲು ಹೊರಭಾಗಕ್ಕೆ ಸಂಪೂರ್ಣವಾಗಿ ಶಿಲಾಮಯ ಗೋಡೆ. ಈ ಶಿಲೆಗಳಲ್ಲಿ ಸುಂದರ ಕೆತ್ತನೆ. `ಕೊಡಿಮರ' ಎಂದು ಕರೆಯಲಾಗುವ ಬೃಹತ್ ಧ್ವಜಸ್ಥಂಭವನ್ನು ದೀರ್ಘಕಾಲದ ಬಾಳಿಕೆಗಾಗಿ ಎಳ್ಳೆಣ್ಣೆಯ ತೊಟ್ಟಿಯಲ್ಲಿ ಮುಳಗಿಸಿ ಇಡಲಾಗಿತ್ತು ಇದಕ್ಕೆ ಭಕ್ತಾದಿಗಳೆಲ್ಲರೂ ದೇಣಿಗೆ ಅರ್ಪಿಸಿ ಎಳ್ಳೆಣ್ಣೆ ಎರೆದದ್ದು, ದೇವಾಲಯಕ್ಕೆ ಬಳಸಿದ ಮರಗಳಿಗೆ ಪರ್ಯಾಯವಾಗಿ ಸಹಸ್ರಾರು ಸಸಿಗಳು ವಿಟ್ಲ ಸೀಮೆ ಪರಿಸರಲ್ಲಿ ವಿತರಿಸಿ ನೆಟ್ಟದ್ದು ಸದಾಕಾಲ ನೆನಪಿನಲ್ಲಿ ಉಳಿಯುವ ಘಟನೆಗಳಾದವು.
ಐದು ಲಿಂಗ ಏಕೆ?


ಪಂಚಲಿಂಗೇಶ್ವರ ದೇಗುಲದ ಈ ಐದು ಲಿಂಗಗಳು ಪಂಚತತ್ವಗಳ ಸೂಚಕ. ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಎಂಬ ಶಿವನ ಪಂಚಸ್ವರೂಪಗಳು ಭಾರತೀಯ ಪರಂಪರೆಯಲ್ಲಿ ಶಾಶ್ವತವಾಗಿ ಮಿಳಿತಗೊಂಡ ಪಂಚತತ್ವಗಳನ್ನು ಪ್ರತಿನಿಧೀಕರಿಸುವ ಮೂರ್ತ ಸ್ವರೂಪಗಳು. ಸದ್ಯೋಜಾತನಾಗಿ ಮೂಲಾಧಾರ(ಭೂಮಿ), ವಾಮದೇವನಾಗಿ ಸ್ವಾಧಿಷ್ಠಾನ(ಜಲ), ಅಘೋರನಾಗಿ ಮಣಿಪು (ಅಗ್ನಿ), ತತ್ಪುರುಷನಾಗಿ ಅನಾಹತ(ವಾಯು), ಈಶಾನನಾಗಿ ವಿಸುದ್ಧ(ಆಕಾಶ) ತತ್ವಗಳನ್ನು ಪ್ರತಿನಿಧೀಕರಿಸುವುದು. ಪ್ರಕೃತಿಯ ಶಕ್ತಿಸೆಲೆಗಳಾದ ಪಂಚಭೂತಗಳಲ್ಲಿ ಪರಮೇಶ್ವರನನ್ನು ಪ್ರಮಾಣೀಕರಿಸಿ ಶಿರಬಾಗಿ ಉಪಾಸನೆಯನ್ನು ಸಲ್ಲಿಸುವ ಪದ್ಧತಿ ಇಲ್ಲಿದೆ.
ದೇವಸ್ಥಾನದ ಗರ್ಭಗುಡಿಯೂ ಅಷ್ಟೇ ವಿಶಿಷ್ಟವಾದದ್ದು. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕೇರಳದಲ್ಲಿ ಇರುವ ದೇವಾಲಯಗಳದು `ಗಜಪೃಷ್ಠಾಕೃತಿಯ' ಶೈಲಿ. ಮುಖಮಂಟಪಗಳೂ ಗರ್ಭಗುಡಿಗೆ ಹೊಂದಿಕೊಂಡಿರುವುದು ಇದರ ವಿಶೇಷತೆ. ಗರ್ಭಗುಡಿಯ ಹಿಂಭಾಗ ಆನೆಯ ಹಿಂಭಾಗದಂತೆ ಇರುವುದರಿಂದ ಈ ಹೆಸರು. ಈ ಪರಿಸರದಲ್ಲಿ ಇಷ್ಟೊಂದು ಬೃಹತ್ತಾದ ಗಜಪೃಷ್ಠ ಗರ್ಭಗುಡಿಯ ದೇವಾಲಯ ಬೇರಾವುದೂ ಇಲ್ಲ. ಗಣಪತಿ, ಅಮ್ಮನವರ ಗುಡಿ, ಕುಂತೀಶ್ವರ ಗುಡಿ ಇವು ದೇವಾಲಯ ಪ್ರಾಂಗಣದಲ್ಲೇ ಇರುವ ಇತರ ಗುಡಿಗಳು.

ಧರ್ಮಸ್ಥಳವಿಟ್ಲದ ಬಾಂಧವ್ಯ


ವಿಟ್ಲ ಮತ್ತು ಧರ್ಮಸ್ಥಳಕ್ಕೆ ಅವಿನಾಭಾವ ಸಂಬಂಧ ಉಂಟು. ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದ, `ಮಾತನಾಡುವ ಮಂಜುನಾಥ' ಎಂದೇ ಖ್ಯಾತರಾಗಿದ್ದ ದಿವಂಗತ ಮಂಜಯ್ಯ ಹೆಗ್ಗಡೆ ವಿಟ್ಲದವರು. ಇದನ್ನು ನೆನಪಿಸಿಕೊಂಡ ಈಗಿನ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು `ಮಂಜುನಾಥ'ನ ಪ್ರೇರಣೆಯಿಂದ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಮೂರು ಕಳಸಗಳನ್ನು ಧರ್ಮಸ್ಥಳದ ವತಿಯಿಂದ ನೀಡಿದರು. ಈ ಮೂರು ಸ್ವರ‌್ಣ ಲೇಪಿತ ಬೆಳ್ಳಿ ಕಳಸಗಳಿಗಾದ ವೆಚ್ಚ ಬರೋಬ್ಬರಿ 1.20 ಕೋಟಿ ರೂಪಾಯಿಗಳು. ಇಡೀ ದೇವಸ್ಥಾನದ ಜೀರ್ಣೋದ್ಧಾರ ಹೆಗ್ಗಡೆ ಅವರ ಗೌರವಾಧ್ಯಕ್ಷತೆಯಲ್ಲೇ ನಡೆದದ್ದು ಮತ್ತೊಮ್ಮೆ ವಿಟ್ಲ-ಧರ್ಮಸ್ಥಳದ ಅವಿನಾಭಾವ ಸಂಬಂಧವನ್ನು ಗಟ್ಟಿಗೊಳಿಸಿತು.
ಚಿತ್ರಗಳು:
1) ಪುನರ್ ನಿರ್ಮಿತ ದೇವಾಲಯದ ಮುಂಭಾಗ.
2) ಹೊರೆ ಕಾಣಿಕೆ.
3) 
ಬ್ರಹ್ಮಕಲಶ ಸಂಭ್ರಮ.
4) ಹೊರೆ ಕಾಣಿಕೆ.

5) ನಂದಿಯಿಂದ ಕಳಸ ಎಳೆಯಿಸುವ ಮೂಲಕ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ
. ಹಿಂಭಾಗದಲ್ಲಿ ಹಿಂದಿದ್ದ ದೇವಸ್ಥಾನದ ಹಿಂಭಾಗದ ದೃಶ್ಯ.
6) ತೈಲದ ತೊಟ್ಟಿಯಲ್ಲಿ ನೂತನ ಧ್ವಜಸ್ಥಂಭ.
7) ಪುನರ್ ನಿರ್ಮಿತ ದೇವಾಲಯ, ಪುಷ್ಕರಣಿಯ ವಿಹಂಗಮ ನೋಟ.
8) ಪ್ರಜಾವಾಣಿಯಲ್ಲಿ 22-01-2013ರ ಮಂಗಳವಾರ ಕರ್ನಾಟಕ ದರ್ಶನದಲ್ಲಿ ಪ್ರಕಟವಾದ ಲೇಖನ.

-
ನೆತ್ರಕೆರೆಉದಯಶಂಕರ

ಚಿತ್ರಗಳು
ಸದಾಶಿವ ಬನ `ಶಿಲ್ಪಿ ವಿಟ್ಲಮತ್ತು ಯಶು ವಿಟ್ಲ.


Thursday, March 6, 2008

Wahl! What Water falls..!


Keshav Vittla, freelance photographer has clicked more than 1000 photos of waterfalls, dams, rivers and beaches apart from landscape pictures of Karnataka. His pictures of waterfalls are fantastic and fascinating. Tourism Department of Karnataka has organized an exhibition of his selected pictures related to Water in Venkatappa Art Gallery at Bangalore recently. It attracted several prominent personalities too including Anil Kumble, well-known leg spinner and Captain of Indian Cricket Team.



ಕಂಡಿರಾ 'ಅಬ್ಬಿ ಅಬ್ಬೆ'ಯ ಸೊಬಗು..?

'ಅಬ್ಬಿ'ಯ ಹರವು ವಿಸ್ತಾರಗೊಂಡು, ನೆಲದ ಮೇಲೆ ಹರಿಯುತ್ತಾ ಸಾಗಿದರೆ 'ತೋಡು', 'ಹಳ್ಳ', 'ನದಿ' ಸೃಷ್ಟಿಯಾಗುತ್ತದೆ. ಒಂದೇ ಕಡೆಯಲ್ಲಿ ವಿಶಾಲವಾಗಿ ನಿಂತರೆ 'ಕೆರೆ', 'ಜಲಾಶಯ' ಆಗುತ್ತದೆ. 'ನದಿ'ಗೆ ಮನುಷ್ಯನೇ ಅಡ್ಡಗಟ್ಟೆ ಹಾಕಿದರೆ ಅದು 'ಅಣೆಕಟ್ಟು' 'ಡ್ಯಾಂ' ಎಂಬ ಹೆಸರು ಪಡೆದುಕೊಳ್ಳುತ್ತದೆ. ಜಲಾಶಯ ಬೃಹತ್ ಗಾತ್ರದ್ದಾಗಿ ಅಲೆಗಳ ಜೊತೆಗೆ ಭೋರ್ಗರೆಯತೊಡಗಿದರೆ ಅದೇ 'ಸಮುದ್ರ' ಇಲ್ಲವೇ 'ಸಾಗರ'ವಾಗುತ್ತದೆ. ಅದೇ 'ಅಬ್ಧಿ'!

ನೆತ್ರಕೆರೆ ಉದಯಶಂಕರ

'ಅಬ್ಬೆ' ಅಂದರೆ ಅಮ್ಮ. ಜನ್ಮದಾತೆ, ಮಾತೆ, ಹೆತ್ತವಳು. ಪ್ರೀತಿ, ಒಲವಿನ ಧಾರೆ ಎರೆಯುವವಳು ಆಕೆ. ಆಕೆ ಇದ್ದರೆ ಬದುಕು, ಆಕೆ ಇಲ್ಲದೇ ಇದ್ದರೆ ಜಗತ್ತಿನ ಜೀವ ಸಂಕುಲ ಇರುತ್ತಿರಲೇ ಇಲ್ಲ!

ಧುಮುಕುವ ಜಲಧಾರೆಗೂ 'ಅಬ್ಬೆ'ಗೆ ಹತ್ತಿರದ 'ಅಬ್ಬಿ' ಎಂಬ ಹೆಸರಿದೆ. ಈ 'ಅಬ್ಬಿ'ಯನ್ನು ಕಣ್ತುಂಬಿಕೊಂಡು ನೋಡುತ್ತಿದ್ದರೆ ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ. 'ಅಬ್ಬಿ'ಯನ್ನೂ 'ಅಬ್ಬೆ' ಎಂದರೆ ತಪ್ಪಲ್ಲ, ಏಕೆಂದರೆ ಅಬ್ಬೆ ಹೆತ್ತರೆ, ಅಬ್ಬಿ ನಮ್ಮ ದಾಹ ಇಂಗಿಸುತ್ತಾ ಪೊರೆಯುತ್ತಾಳೆ!

ಪ್ರತಿಯೊಬ್ಬರ ಮನೆಯಲ್ಲಿ ಒಬ್ಬ 'ಅಬ್ಬೆ' ಇದ್ದರೆ, ಪಶ್ಚಿಮಘಟ್ಟದಲ್ಲಿ ಸುತ್ತಾಡಿ ನೋಡಿ. ನಿಮಗೆ ಹತ್ತಾರು 'ಅಬ್ಬಿ'ಯರು ಕಾಣಸಿಗುತ್ತಾರೆ. 'ಅಬ್ಬಿ', 'ಒನಕೆ ಅಬ್ಬಿ', 'ಕುದುರೆ ಅಬ್ಬಿ','ಕೋಟಿ ಅಬ್ಬಿ', 'ಅಬ್ಬಿ ಮಠ'.....ಹೀಗೆ.

ಈ ಯಾವ 'ಅಬ್ಬಿ'ಯ ಮುಂದೆ ನಿಂತರೂ ನಿಮ್ಮನ್ನು
ನೀವು ಮರೆಯುವುದು ಖಂಡಿತ.

ಈ 'ಅಬ್ಬಿ'ಯರನ್ನು 'ಜಲಪಾತ'ಗಳೆಂದೂ ನಾವು ಕರೆಯುತ್ತೇವೆ. ಇಲ್ಲಿ ಈ 'ಅಬ್ಬಿ'ಯರ ಗಾತ್ರ, ವ್ಯಾಪ್ತಿ ದೊಡ್ಡದಾಗಿರುತ್ತದೆ ಅಷ್ಟೆ.

'ಅಬ್ಬಿ'ಯ ಹರವು ವಿಸ್ತಾರಗೊಂಡು, ನೆಲದ ಮೇಲೆ ಹರಿಯುತ್ತಾ ಸಾಗಿದರೆ 'ತೋಡು', 'ಹಳ್ಳ', 'ನದಿ' ಸೃಷ್ಟಿಯಾಗುತ್ತದೆ. ಒಂದೇ ಕಡೆಯಲ್ಲಿ ವಿಶಾಲವಾಗಿ ನಿಂತರೆ 'ಕೆರೆ', 'ಜಲಾಶಯ' ಆಗುತ್ತದೆ. 'ನದಿ'ಗೆ ಮನುಷ್ಯನೇ ಅಡ್ಡಗಟ್ಟೆ ಹಾಕಿದರೆ ಅದು 'ಅಣೆಕಟ್ಟು' 'ಡ್ಯಾಂ' ಎಂಬ ಹೆಸರು ಪಡೆದುಕೊಳ್ಳುತ್ತದೆ.

ಜಲಾಶಯ ಬೃಹತ್ ಗಾತ್ರದ್ದಾಗಿ ಅಲೆಗಳ ಜೊತೆಗೆ ಭೋರ್ಗರೆಯತೊಡಗಿದರೆ ಅದೇ 'ಸಮುದ್ರ ಇಲ್ಲವೇ 'ಸಾಗರ'ವಾಗುತ್ತದೆ. ಹಾಂ! ಸಾಗರಕ್ಕೆ 'ಅಬ್ಧಿ' (ಅಬ್ಬಿಗೆ ಬಹಳ ಹತ್ತಿರದ ಶಬ್ಧ) ಎಂದೇ ಕರೆಯುತ್ತೇವಲ್ಲ!!

ಜಗತ್ತಿನ ಜೀವಸೆಲೆಯಾದ 'ಅಬ್ಬಿ'ಯ ವಿಶ್ವರೂಪ ನೋಡಿ - ಎಂತಹವರಾದರೂ ಅಚ್ಚರಿ ಪಡಲೇಬೇಕು.

ಪುಟ್ಟ 'ಒರತೆ'ಯ ರೂಪದಲ್ಲಿ ಹುಟ್ಟಿ, ವಿವಿಧ ರೂಪ ಪಡೆಯುತ್ತಾ ಸಾಗುವ ಭೂಮಿಯ ಈ ಜೀವ ದ್ರವ್ಯ 'ಜಲ'ದ ವಿವಿಧ ರೂಪಗಳನ್ನು ನೋಡಬೇಕೆಂದರೆ ನಿಸರ್ಗದ ಮಡಿಲಲ್ಲಿ ಸುತ್ತಾಡಬೇಕು. ಅವುಗಳ ಸೊಬಗನ್ನು ಕಂಡು ಆಸ್ವಾದಿಸಬೇಕು ಎಂದರೆ ನಮ್ಮ ಒಳಗಣ್ಣನ್ನು ತೆರೆಯಬೇಕು.

ಹೀಗೆ ಒಳಗಣ್ಣು ತೆರೆದಾಗ ಪ್ರಕಟವಾದ 'ಅಬ್ಬಿ'ಯ ವಿಶ್ವರೂಪ ದರ್ಶನವನ್ನು ಎಲ್ಲಾದರೂ ಒಂದೇ ಕಡೆ ನೋಡಬೇಕೆಂದು ನಿಮಗೆ ಅನ್ನಿಸಿದರೆ ಸೀದಾ ಕೇಶವ ವಿಟ್ಲ ಅವರ ಬಳಿಗೆ ಹೋಗಿ. ಅವರ ಬಳಿ ಇರುವ ಛಾಯಾಚಿತ್ರಗಳ ಆಲ್ಬಮ್ ತೆರೆದರೆ, ನೀರಿನ ವಿಶ್ವರೂಪ ದರ್ಶನವಾಗುತ್ತದೆ.

ಜಲಪಾತ ಅಂದೊಡನೆ ಜೋಗ ಜಲಪಾತ, ಗೋಕಾಕ, ಗಗನಚುಕ್ಕಿ ಭರಚುಕ್ಕಿ ಮುಂತಾದ ಕೆಲವೇ ಕೆಲವು ಜಲಧಾರೆಗಳ ಚಿತ್ರಗಳನ್ನು ಮನಸ್ಸಿಗೆ ತಂದುಕೊಳ್ಳುವ ನಮಗೆ, ಕೆರೆ, ನದಿ ಎಂದರೂ ನೆನಪಾಗುವುದು ಕೆಲವು ಪ್ರಸಿದ್ಧ ಕೆರೆಗಳು, ನದಿಗಳ ಹರಿವಿನ ಸೊಬಗು ಮಾತ್ರ.

ಕೇಶವ ವಿಟ್ಲ ಅವರ ಛಾಯಾಚಿತ್ರ ಲೋಕಕ್ಕೆ ನುಸುಳಿದರೆ... ಅಬ್ಬಿ, ಒನಕೆ ಅಬ್ಬಿ, ಕುದುರೆ ಅಬ್ಬಿ, ಕೋಟಿ ಅಬ್ಬಿ, ಅಬ್ಬಿ ಮಠ, ಮಾಣಿಕ್ಯಧಾರಾ, ಬೆಣ್ಣೆ, ಜೋಡುಪಲ, ಗೊಡಚಿನ ಮಲ್ಕಿ, ಶಿರ್ಲೆ, ಸಿರಿಮನೆ, ಅಪ್ಸರಕೊಂಡ ಮುಂತಾದ ಇನ್ನೆಷ್ಟೋ ಅರಿವಿನಲ್ಲೇ ಇರದ ಜಲಪಾತಗಳ ದರ್ಶನವಾಗುತ್ತದೆ.

ಹೊನ್ನಮ್ಮನ ಹಳ್ಳ, ಗಾಳಿಕೆರೆ (ಬಾಬಾಬುಡನ್ ಗಿರಿ), ಅಯ್ಯನಕೆರೆ, ಕವಡಿಕೆರೆ, ಕಾರ್ಗಲ್ ವಾಟರ್ ಬೆಡ್, ಹಿಡ್ಕಲ್ ಅಣೆಕಟ್ಟು, ಆಲಮಟ್ಟಿ ಅಣೆಕಟ್ಟು, ವಾಣಿವಿಲಾಸ ಸಾಗರ, ಕೃಷ್ಣರಾಜ ಸಾಗರ, ಕಾಳಿನದಿ, ನೇತ್ರಾವತಿ ನದಿ, ಮಲಪ್ರಭಾ ನದಿಗಳ ಸೌಂದರ್ಯ ಕಣ್ಣಿನ ಮುಂದೆ ಪ್ರತ್ಯಕ್ಷವಾಗುತ್ತದೆ.

ಕರ್ನಾಟಕದ ಏಕೈಕ ಕರಾವಳಿಯಾದ ಪಶ್ಚಿಮದ ಅರಬ್ಬಿ ಸಮುದ್ರ ದಂಡೆಯ ಉದ್ದಕ್ಕೂ ಇರುವ ಸುಂದರ ತಾಣಗಳಾದ ಓಂ ಬೀಚ್ ಗೋಕರ್ಣ, ಗೋಕರ್ಣ ಬೀಚ್, ಸುರತ್ಕಲ್ ಬೀಚ್, ಕುಡ್ಲೆ ಬೀಚ್, ಕಾರವಾರ ಬೀಚ್, ಉಳ್ಳಾಲ ಬೀಚ್, ಬಾಡ ಬೀಚ್ (ಕುಮಟಾ), ಪಣಂಬೂರು ಬೀಚ್, ತಿಲ್ಮತಿ ಬೀಚ್, ಮುರುಡೇಶ್ವರ ಬೀಚ್, ಸೋಮೇಶ್ವರ ಬೀಚ್, ಬೇಂಗ್ರೆ (ಮಂಗಳೂರು) ಇತ್ಯಾದಿಗಳೆಲ್ಲ ಕಣ್ಮನ ಸೆಳೆಯುತ್ತವೆ.

ಅಷ್ಟೇ ಅಲ್ಲ, ನಮ್ಮ ಚಾರಿತ್ರಿಕ ಪುಣ್ಯಕ್ಷೇತ್ರಗಳು ಕೂಡಾ ನೀರಿನ ಹಿನ್ನೆಲೆಯಲ್ಲೇ ತಮ್ಮ ಸೊಬಗನ್ನು ಅದೆಷ್ಟು ಹೆಚ್ಚಿಸಿಕೊಂಡಿವೆ ಎಂಬುದರ ಅರಿವಾಗುತ್ತದೆ. ಕೂಡಲ ಸಂಗಮ, ಭಾಗಮಂಡಲ, ಸಹಸ್ರಲಿಂಗ ಮತ್ತಿತರ ಕ್ಷೇತ್ರಗಳ ಆಕರ್ಷಣೆಯ ಹಿಂದಿನ 'ಜಲ'ದ ವಿರಾಟ್ ದರ್ಶನವಾಗುತ್ತದೆ.

ಕಂಬಳದಂತಹ ಸುಂದರ ಸಾಹಸಿ ಜಲಕ್ರೀಡೆಗಳ ಪರಿಚಯವೂ ಆಗುತ್ತದೆ.

ಕೇಶವ ವಿಟ್ಲ ಅವರ 'ಕ್ಯಾಮರಾ' ಚಳಕ ಇಷ್ಟಕ್ಕೇ ನಿಲ್ಲುವುದಿಲ್ಲ. ಕರ್ನಾಟಕದ ಸುಂದರ ನಿಸರ್ಗ ತಾಣಗಳ ಸೊಬಗಿನ ಸಾಕಾರವನ್ನೂ ಅದು ಮಾಡಿದೆ. ಇಂತಹ ಸಾವಿರಕ್ಕೂ ಹೆಚ್ಚು ಛಾಯಾಚಿತ್ರಗಳು ಈಗ ವಿಟ್ಲ 'ಬತ್ತಳಿಕೆ'ಯಲ್ಲಿ ಇವೆ.!

24 ವರ್ಷಗಳ ಹಿಂದೆ, 1984ರಲ್ಲಿ ನಾನು ಮಂಗಳೂರಿನಲ್ಲಿ 'ಮುಂಗಾರು' ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪತ್ರಿಕೆ ಸೇರಿ ನನ್ನೊಂದಿಗೆ ಮಂಗಳೂರಿನ ಬೀದಿಗಳು, ಗಲ್ಲಿಗಳನ್ನು ಅಡ್ಡಾಡಿದ್ದ ಕೇಶವ ವಿಟ್ಲ, ನಂತರ 'ಕನ್ನಡ ಪ್ರಭ'ದಲ್ಲಿ ಪತ್ರಿಕಾ ಛಾಯಾಗ್ರಾಹಕರಾಗಿ ತಮ್ಮ ಕ್ಯಾಮರಾದ ಒಳಗಣ್ಣಿನ ಹೊಳಪು ಹೆಚ್ಚಿಸಿಕೊಂಡವರು.

ಮುಂದೆ ಹವ್ಯಾಸಿ ಛಾಯಾಗ್ರಾಹಕರಾಗಿ 'ಉದಯವಾಣಿ' 'ರೂಪತಾರಾ'ಗಳಿಗೆ ಕಾಣಿಕೆ ಸಲ್ಲಿಸಿದ ಅವರು, ಈಗ 'ಟೆಲಿಗ್ರಾಫ್' ಪತ್ರಿಕೆಗೆ ಹವ್ಯಾಸಿ ಛಾಯಾಗ್ರಾಹಕ. ವಿಟ್ಲ ಅವರ ಛಾಯಾಚಿತ್ರ ಪ್ರಪಂಚಕ್ಕೆ ಇಣುಕಿದರೆ ಅವರು ನಿಸರ್ಗದ ಮಡಿಲನ್ನು ನೋಡುತ್ತಾ ಬೆಳೆದ ಪರಿ ಅಚ್ಚರಿ ಮೂಡಿಸುತ್ತದೆ.

ಖುಷಿಯ ಸಂಗತಿ ಎಂದರೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಕೇಶವ ವಿಟ್ಲ ಅವರ ಸಾಹಸವನ್ನು ಗುರುತಿಸಿದೆ. ಬೆಂಗಳೂರಿನ ವೆಂಕಟಪ್ಪ ಕಲಾಗ್ಯಾಲರಿಯಲ್ಲಿ ಅದು ಇತ್ತೀಚೆಗೆ ವಿಟ್ಲ ಅವರ 'ಜಲ ವಿನ್ಯಾಸ'ಗಳ ಸುಂದರ ಪ್ರದರ್ಶನವನ್ನು ಏರ್ಪಡಿಸಿತ್ತು. ಭಾರತದ ಕ್ರಿಕೆಟ್ ತಂಡದ ನಾಯಕ, ವಿಶ್ವವಿಖ್ಯಾತ ಲೆಗ್ ಸ್ಪಿನ್ನರ್ ಅನಿಲ್ ಕುಂಬಳೆಯಂತಹವರೂ ಸೇರಿದಂತೆ ಸಹಸ್ರಾರು ಮಂದಿ ಈ ಪ್ರದರ್ಶನ ವೀಕ್ಷಿಸಿ ಕರ್ನಾಟಕದ ನಿಸರ್ಗ ಸೊಬಗನ್ನು ಕಣ್ತುಂಬಿಕೊಂಡರು..

ಕೇಶವ ವಿಟ್ಲ ಅವರ ನೀರಿನ ಸೊಬಗಿನ ಚಿತ್ರಗಳ ಪ್ರದರ್ಶನ ಮಾಡಿದರಷ್ಟೇ ಸಾಕೆ ಎಂಬ ಪ್ರಶ್ನೆ ನಮ್ಮನ್ನು 'ಕಾಡು'ತ್ತದೆ. ಏಕೆಂದರೆ 'ಕಾಡು'ನಾಶದಿಂದ ಇಂತಹ ಸುಂದರ ಅಬ್ಬಿ, ಜಲಪಾತಗಳು ಕಣ್ಮರೆಯಾಗುತ್ತಿವೆ. ನದಿಗಳು ಒಣಗುತ್ತಿವೆ. ಕಲುಷಿತ ನೀರು ಮಿಶ್ರಗೊಂಡು ನದಿ, ತೊರೆಗಳೂ ಸೊಬಗನ್ನು ಕಳೆದುಕೊಳ್ಳುತ್ತಿವೆ.

ಕಾಡುನಾಶಕ್ಕೆ ಅಂಕುಶ, ಜಲ ಮಾಲಿನ್ಯಕ್ಕೆ ಕಡಿವಾಣ ಹಾಕುವುದರ ಜೊತೆಗೆ ನೀರಿನ ಮೂಲವಾದ 'ಒರತೆ' ಹೆಚ್ಚುವಂತಾಗಲು ಎಲ್ಲೆಡೆಯಲ್ಲಿ ನೀರಿಂಗಿಸುವ ಭಗೀರಥ ಪ್ರಯತ್ನಕ್ಕೆ ಸಕಲರೂ ಕೈಜೋಡಿಸದೇ ಇದ್ದರೆ ಈ ಸೊಬಗನ್ನು ಮುಂದಿನ ತಲೆಮಾರಿಗೆ ಉಳಿಸಿಕೊಡುವುದು ಕಷ್ಟವಾಗಬಹುದು.

ಕೇಶವ ವಿಟ್ಲ ಅವರಿಗೆ ಅಭಿನಂದನೆ ಹೇಳುವುದರೊಂದಿಗೆ, 'ಅಬ್ಬಿ ಅಬ್ಬೆ'ಯ ರಕ್ಷಣೆಗೆ ಸಿದ್ಧರಾಗೋಣವೇ?

Wednesday, January 9, 2013

ವಿಟ್ಲ ಪಂಚಲಿಂಗೇಶ್ವರನಿಗೆ ಧರ್ಮಸ್ಥಳದ 'ಮುಗುಳಿ'


ವಿಟ್ಲ ಪಂಚಲಿಂಗೇಶ್ವರನಿಗೆ ಧರ್ಮಸ್ಥಳದ 'ಮುಗುಳಿ'


ಬ್ರಹ್ಮಕಲಶದ ಸಡಗರ
, ವಿಟ್ಲ ಪರಿಸರಗಲ್ಲಿ ಗೌಜಿಯೋ ಗೌಜಿ..
'ವಿಟ್ಲ ಪೇಟೆ ಇಡೀ ಗೌಜಿಯೋ ಗೌಜಿ. ನಾಕು ಮಾರ್ಗದವರೆಗೂ ಚಪ್ಪರ ಹಾಕಿದ್ದವು. ಎಲ್ಲಾ ಮಾರ್ಗಂಗಳಲ್ಲಿಯೂ ಕಾವಿ ಧ್ವಜ. ತೇರಗೆದ್ದೆಲಿದೇ ಚಪ್ಪರ. ಕಟ್ಟೆ ಸೇಸುಮೂಲ್ಯನ ಗೆದ್ದೆಲಿ ಅಡಿಗೆಗೆ ಭಾರೀ ಸಿದ್ಧತೆ ಆವುತ್ತಾ ಇದ್ದು. ಉದಿಯಪ್ಪಂದ ಕಸ್ತಲೆವರೆಗೂ ಬಪ್ಪೋರಿಂಗೆಲ್ಲಾ ಊಟ, ತಿಂಡಿ, ಕಾಫಿಯ ವ್ಯವಸ್ಥೆ ಆವುತ್ತಾ ಇದ್ದು. ಊರಿಲಿ ಆರುದೇ ಅಡಿಗೆ ಮಾಡುವ ಹಾಂಗೆ ಇಲ್ಲೆಡ್ಡ.....'
ಮಾಮೂಲಿಯಾಗಿ ಫೋನ್ ಮಾಡಿದ್ದೇ ತಡ ಆ ಕಡೆಯಿಂದ ಅಮ್ಮನ ವರದಿ. ಅವರಿಗೆ ವಯಸ್ಸು 80 ದಾಟಿದೆ. ಆದರೆ ಉತ್ಸಾಹಕ್ಕೆ ವಯಸ್ಸಿನ ಅಡ್ಡಿ ಎಲ್ಲಿಯದು? ನಮ್ಮ ಜೀವಮಾನದಲ್ಲಿ ನಡೆಯುವ ಹೆಮ್ಮೆಯ ಕಾರ್ಯಕ್ರಮ ಇದು ಎಂಬ ಅಭಿಮಾನ. ಫೋನ್ ಮಾಡಿದರೆ ಸಾಕು ಅದರದ್ದೇ ಸುದ್ದಿ.
ವಿಟ್ಲಪೇಟೆಯ ಯಾರ ಮನೆಗಳಿಗೆ ಫೋನ್ ಮಾಡಿದರೂ ಈಗ ಇಂತಹುದೇ ಸಂಭಾಷಣೆ.

ಹೌದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೇಟೆಯಲ್ಲಿ ಈ ಶತಮಾನದಲ್ಲೇ ಅಪೂರ್ವ ಎನ್ನಬಹುದಾದ ಕಾರ್ಯಕ್ರಮವೊಂದು ಜರುಗುತ್ತಿದೆ
. ಅದೇ ವಿಟ್ಲದ ಶ್ರೀ ಪಂಚಲಿಂಗೇಶ್ವರನ ಬ್ರಹ್ಮಕಲಶೋತ್ಸವ ಸಮಾರಂಭದ ಸಡಗರ. ಜನವರಿ 9ರಿಂದ 21ರ ವರೆಗೆ ಬ್ರಹ್ಮಕಲಶದ ಸಂಭ್ರಮವಾದರೆ, 21ರಿಂದ ನಂತರ 9 ದಿನ ವಿಟ್ಲಾಯನದ ಗೌಜಿ. ಅಂದರೆ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯ ಗೌಜಿ. ಅಂದರೆ ಹೆಚ್ಚು ಕಡಿಮೆ ಒಂದು ತಿಂಗಳ ಕಾಲ ಸಂಭ್ರಮವೋ ಸಂಭ್ರಮ.
ಸಂಭ್ರಮಕ್ಕೆ ನೀರೆರೆದವರು ಒಬ್ಬಿಬ್ಬರಲ್ಲ. ಮೊತ್ತ ಮೊದಲ ಸಾಲಿನಲ್ಲಿ ನಿಲ್ಲುವವರು ವಿಟ್ಲ ಸೀಮೆಯ 16 ಗ್ರಾಮಗಳ ಭಕ್ತ ಜನ, ವಿಟ್ಲದಿಂದ ಪರವೂರುಗಳು ಅಂದರೆ ಮಂಗಳೂರು, ಬೆಂಗಳೂರು, ಮುಂಬೈ, ದೆಹಲಿ ಅಷ್ಟೇ ಏಕೆ ಅಮೆರಿಕದವರೆಗೂ ತೆರಳಿ ಅಲ್ಲಿ ವ್ಯಾವಹಾರಿಕ ಬದುಕಿನ ಸಲುವಾಗಿ ಕೆಲಸಕ್ಕೆ ಸೇರಿಕೊಂಡ ಇಲ್ಲಿನ ಜನ ಅವರ ಕುಟುಂಬ ಸದಸ್ಯರು, ಬಂಧು ಮಿತ್ರರು ಅವರ ಮೂಲಕ ದೇಗುಲದ ಪುನರ್ ನಿರ್ಮಾಣಕ್ಕೆ ತಮ್ಮ ಅಳಿಲ ಸೇವೆಗಳನ್ನು ಸಲ್ಲಿಸಿದವರು.
ದೇವಾಲಯದ ನಿರ್ಮಾಣ ಒಬ್ಬಿಬ್ಬರಿಂದ ಆಗುವಂತಹುದಲ್ಲ. ಲಕ್ಷಾಂತರ ಕೈಗಳು ಜೊತೆಗೂಡಬೇಕು ಎನ್ನುತ್ತಾರೆ. ವಿಟ್ಲದ ಪಂಚಲಿಂಗೇಶ್ವರ ದೇವಾಲಯದ ವಿಚಾರದಲ್ಲಿ ಇದು ಸತ್ಯ. ಪುಟ್ಟ ಗುಡಿಸಲಿನಲ್ಲಿ ವಾಸಿಸುವ ಶ್ರಮಜೀವಿಯಿಂದ ಹಿಡಿದು, ದೊಡ್ಡ ಮನೆಗಳನ್ನು ಕಟ್ಟಿಕೊಂಡ ಶ್ರೀಮಂತರವರೆಗೆ ಸಹಸ್ರ ಸಹಸ್ರ ಮಂದಿ ಈ ದೇವಾಲಯದ ಪುನರ್ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ತಮ್ಮ ತಮ್ಮ ಕಾಣಿಕೆ ಸಲ್ಲಿಸಿದ್ದಾರೆ. ಈಗಲೂ ಸಲ್ಲಿಸುತ್ತಲೇ ಇದ್ದಾರೆ.

ಪಾಂಡವರ ಕಾಲದಲ್ಲಿ ನಿರ್ಮಾಣವಾದದ್ದು ಎಂಬ ಪ್ರತೀತಿ ಇರುವ ಈ ದೇವಸ್ಥಾನ ಅದೆಷ್ಟು ಬಾರಿ ಜೀರ್ಣೋದ್ಧಾರಗೊಂಡಿದೆಯೋ ಖಚಿತವಾಗಿ ಯಾರಿಗೂ ಗೊತ್ತಿಲ್ಲ
. ಕೆಲವು ನೂರು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡದ್ದಕ್ಕೆ ದಾಖಲೆಗಳು ಸಿಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಅಂದರೆ ಆರೇಳು ವರ್ಷಗಳ ಹಿಂದೆ ಮತ್ತೊಮ್ಮ ದೇವಾಲಯ ಜೀರ್ಣಾವಸ್ಥೆಗೆ ತಲುಪಿದಾಗ ಈಗಿನ ತಲೆಮಾರಿನ ಒಂದಷ್ಟು ಮಂದಿ ಭಕ್ತರು ಅದರ ಜೀರ್ಣೋದ್ಧಾರದ ಕೆಲಸಕ್ಕೆ ಕೈಹಾಕಿದರು.
ಜೀರ್ಣೋದ್ಧಾರ ಎಂದು ಬಸವನಿಂದ ಹಗ್ಗ ಕಟ್ಟಿ ಎಳೆಸುವ ಮೂಲಕ ಆರಂಭವಾದ ಕೆಲಸ, ಮುಗಿದದ್ದು ಜೀರ್ಣೋದ್ಧಾರದೊಂದಿಗೆ ಅಲ್ಲ, ಬದಲಾಗಿ ಸಂಪೂರ್ಣವಾಗಿ ಪುನರ್ ನಿರ್ಮಾಣದೊಂದಿಗೆ ಎಂಬುದೇ ವಿಶೇಷ. ಜೀರ್ಣೋದ್ಧಾರಕ್ಕಾಗಿ ದೇವಾಲಯವನ್ನು ಬಿಚ್ಚುವ ಕೆಲಸಕ್ಕೆ ಲಕ್ಷ ಲಕ್ಷ ಮಂದಿ ಟೊಂಕ ಕಟ್ಟಿ ಒಂದೇ ದಿನದಲ್ಲಿ ಮೂರು ಅಂತಸ್ಥಿನ ದೇಗುಲವನ್ನು ಸಂಪೂರ್ಣವಾಗಿ ಬಿಚ್ಚಿಟ್ಟಿದ್ದರು. ಆಗ ಕಂಡು ಬಂದ ದೇವಾಲಯದ ಒಳಭಾಗ ಅಚ್ಚರಿ ಮೂಡಿಸುವಂತಹುದಾಗಿತ್ತು. ಸಂಪೂರ್ಣ ಮಣ್ಣಿನಿಂದ ದೇವಾಲಯ ಅಷ್ಟೊಂದು ಕಾಲ ಎದ್ದು ನಿಂತಿತ್ತು.
ಈಗ ಅದನ್ನು ಸಂಪೂರ್ಣವಾಗಿ ತೆಗೆದು ಅದೇ ಆಯ -ಅಡಿಪಾಯದಲ್ಲಿ ಸಂಪೂರ್ಣ ಕಲ್ಲಿನಿಂದಲೇ ನಿರ್ಮಿಸಿದ ಶಿಲಾಮಯ ದೇವಸ್ಥಾನ ಈಗ ಭವ್ಯವಾಗಿ ತಲೆ ಎತ್ತಿ ನಿಂತಿದೆ.ಈ ಮಹಾಕಾರ್ಯಕ್ಕೆ ಮಾರ್ಗದರ್ಶನ ಮಾಡಿದ ಮಹಾನುಭಾವರೂ ಕಡಿಮೆಯೇನಿಲ್ಲ. ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಗೌರವಾಧ್ಯಕ್ಷತೆಯಲ್ಲಿ ರೂಪುಗೊಂಡಿದ್ದ ದೇಗುಲ ಪುನರ್ ನಿರ್ಮಾಣ ಸಮಿತಿಯಲ್ಲಿ ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರು, ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು, ಸುಬ್ರಹ್ಮಣ್ಯ ಶ್ರೀಗಳು, ಒಡಿಯೂರು ಶ್ರೀಗಳು, ಮಾಣಿಲ ಶ್ರೀಗಳು - ಹೀಗೆ ಅನೇಕ ಯತಿವರ್ಯರೂ ಈ ಮಹಾ ಕಾರ್ಯಕ್ಕೆ ಮಾರ್ಗದರ್ಶನ ಮಾಡಿದ್ದಾರೆ.

ದೇವಸ್ಥಾನಕ್ಕಾಗಿ ರೂಪಿಸಲಾದ ಬೃಹತ್ ಗರುಡಗಂಭ ಸಹಸ್ರಾರು ವರ್ಷ ಬಾಳಲೆಂದು ಹರಸಿ ಕಾಣಿಕೆ ಸಲ್ಲಿಸಿ ಅದಕ್ಕೆ ಎಣ್ಣೆ ಎರೆದವರ ಸಂಖ್ಯೆಯಂತೂ ಲೆಕ್ಕವಿಲ್ಲದಷ್ಟು
.
ಇಡೀ ದೇಗುಲಕ್ಕೆ ಕಳಸಪ್ರಾಯವಾದ ಮುಗಳಿಯನ್ನು ಧರ್ಮಸ್ಥಳವೇ ಒದಗಿಸಿದೆ. ಈ ಬಂಗಾರದ ಮುಗುಳಿಯನ್ನು ಸಂಭ್ರಮದೊಂದಿಗೆ ಮೆರವಣಿಗೆಯಲ್ಲಿ ತರುವ ಮೂಲಕ 2013 ಜನವರಿ 6ರ ಭಾನುವಾರದಿಂದ ಇಡೀ ವಿಟ್ಲ ಪರಿಸರ ಸಡಗರದಲ್ಲಿ ತೇಲುತ್ತಿದೆ.
ಸಡಗರದ ಸಂಭ್ರಮದ ಕೆಲವು ಕ್ಷಣಗಳನ್ನು ಹಂಚಿಕೊಳ್ಳುವ ಅಳಿಸೇವೆಯನ್ನು 'ಪರ್ಯಾಯ' ಮಾಡುತ್ತಿದೆ. ಬನ್ನಿ ಸಡಗರದ ಪೂರ್ಣ ಅನುಭವ ಪಡೆಯಲುಮ್ಮ ತಲೆಮಾರಿನಲ್ಲಿ ಮಾತ್ರವೇ ಕಂಡು ಆನಂದಿಸಬಹುದಾಗ ಅಪೂರ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ವಿಟ್ಲಕ್ಕೆ ಬನ್ನಿ ಎಂಬ ಆದರ ಪೂರ್ವ ಕರೆ ಹೊತ್ತ ಆಮಂತ್ರಣ ಪತ್ರಿಕೆಯ ಕೆಲವು ಪುಟಗಳು ಇಲ್ಲಿವೆ. ಫೋಟೋಗಳನ್ನು ಕ್ಲಿಕ್ಕಿಸಿ ವಿವರವಾಗಿ ಆಮಂತ್ರಣವನ್ನು ವೀಕ್ಷಿಸಬಹುದು.
ಧರ್ಮಸ್ಥಳದಿಂದ ಬಂದ ಬಂಗಾರದ 'ಮುಗುಳಿ'ಯ ಮೆರವಣಿಗೆ ಚಿತ್ರವೂ ಇದರೊಂದಿಗಿದೆ.

ಬಂಟ್ವಾಳ ತಾಲ್ಲೂಕಿನ ವಿಟ್ಲ ಪಂಚಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವ ಪ್ರಯುಕ್ತ ಗರ್ಭಗುಡಿ ಮತ್ತು ತೀರ್ಥಮಂಟಪಕ್ಕೆ ಅಳವಡಿಸುವ ನೂತನ 
`ಮುಗುಳಿ'ಯನ್ನು ಧರ್ಮಸ್ಥಳದಿಂದ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೂಲಕ ಮೆರವಣಿಗೆಯಲ್ಲಿ 6-01-2013ರ ಭಾನುವಾರ ಕೊಂಡೊಯ್ಯಲಾಯಿತು.
-ನೆತ್ರಕೆರೆ ಉದಯಶಂಕರ  

ಆಮಂತ್ರಣ ಪತ್ರಿಕೆ



Saturday, November 1, 2025

ಹೆಸರಾಂತ ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ ಇನ್ನಿಲ್ಲ

 ಹೆಸರಾಂತ ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ ಇನ್ನಿಲ್ಲ

ಹೆಸರಾಂತ ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ ಅವರು ಇನ್ನಿಲ್ಲ. ೨೦೨೫ರ ನವೆಂಬರ್‌ ೧ರ ಶನಿವಾರ ಅವರು ಸ್ವರ್ಗಸ್ಥರಾದರು.
ಶಂಭು ಶರ್ಮರ ಬಗ್ಗೆ ಯಕ್ಷದೀಪ.ಕಾಮ್‌ ಐದು ವರ್ಷಗಳ ಹಿಂದೆ ಇದೇ ದಿನ ಪ್ರಕಟಿಸಿದ್ದ ಬರಹ ಇಲ್ಲಿದೆ. ಶಂಭುಶರ್ಮದ ಸಂಪೂರ್ಣ ಚಿತ್ರವನ್ನು ಇದು ನೀಡುತ್ತದೆ. ಇದರ ಜೊತೆಗೆ ಶಂಭು ಶರ್ಮರು ಉತ್ತರಕುಮಾರನಾಗಿ ಮಾಡಿದ್ದ ಅರ್ಥಗಾರಿಕೆಯ ತುಣುಕೊಂದು ಇಲ್ಲಿದೆ.
ವಿಟ್ಲ ಶಂಭು ಶರ್ಮ ಎಂಬ ಹೆಸರೇ ಒಂದು ಕಾಲದಲ್ಲಿ ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿದ್ದ ಹೆಸರು. ತಾಳಮದ್ದಳೆ ಪ್ರಿಯ ಪ್ರೇಕ್ಷಕರ ದೈನಂದಿನ ಚರ್ಚೆಗಳಲ್ಲಿ ಆಗಾಗ ಪ್ರಸ್ತಾಪವಾಗುತ್ತಿದ್ದ ವ್ಯಕ್ತಿತ್ವ. ನಾನು ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿಯೂ ಮನೆಯಲ್ಲಿ, ಸಮಾರಂಭಗಳಲ್ಲಿ ಶಂಭು ಶರ್ಮ ಎಂಬ ತಾಳಮದ್ದಳೆಯ ಹೊಸ ಪ್ರತಿಭೆಯ ಬಗ್ಗೆ ಮಾತನಾಡುವುದನ್ನು ಕೇಳಿದ್ದೆ. ‘ಒಳ್ಳೆ ಅರ್ಥ ಹೇಳ್ತಾರಂತೆ, ವಾದದಲ್ಲಿ ಎತ್ತಿದ ಕೈ” ಹೀಗೆ ಮಾತನಾಡುವುದು ಕೇಳಿಬರುತ್ತಿತ್ತು.
ಆಮೇಲೆ ಅವರ ಅರ್ಥಗಾರಿಕೆಯನ್ನು ಹಲವಾರು ಬಾರಿ ಕೇಳುವ ಅವಕಾಶವೂ ಬಂತು.  ವರ್ತಮಾನದ ಆಗುಹೋಗುಗಳ ಹೋಲಿಕೆ, ಹಾಸ್ಯಪ್ರವೃತ್ತಿ, ಶೃಂಗಾರಹುಡುಗಾಟಿಕೆಯ ಮನೋಭಾವಇವುಗಳನ್ನೆಲ್ಲಾ ತನ್ನ ಅರ್ಥಗಾರಿಕೆಯಲ್ಲಿ ಬಳಸುವ ಶಂಭು ಶರ್ಮರ ಅರ್ಥಗಾರಿಕೆಯ ಶೈಲಿ  ಜನಪ್ರಿಯತೆಯನ್ನು ಸಾಧಿಸಿತು.  ತಾಳಮದ್ದಳೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಹೆಸರು. ಮಲ್ಪೆ ಶಂಕರನಾರಾಯಣ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್, ದೇರಾಜೆ ಸೀತಾರಾಮಯ್ಯ ಮತ್ತು  ಪ್ರಸ್ತುತ ಕೂಟಗಳಲ್ಲಿ ಸಕ್ರಿಯರಾಗಿರುವ ಹಲವಾರು ಈಗಿನ ಕಿರಿಯ ಅರ್ಥಧಾರಿಗಳ ಜೊತೆಗೂ ಈಗಲೂ ಬಹುಬೇಡಿಕೆಯ ಅರ್ಥಧಾರಿ.
ಅವರು ಅತಿ ಕಿರಿಯ ವಯಸ್ಸಿನಲ್ಲಿ ಪ್ರೇಕ್ಷಕನಾಗಿ ಹೋಗಿದ್ದ ತಾಳಮದ್ದಳೆ ಕೂಟವೊಂದರಲ್ಲಿ ಅನಿವಾರ್ಯವಾಗಿ ಅರ್ಥಧಾರಿಯಾಗಿ ಭಾಗವಹಿಸಿದಾಗ ಎದುರು ಪಾತ್ರಧಾರಿಯಿಂದ ಆದ ಮಾತಿನ ದಾಳಿಯಲ್ಲಿ ಸೋತು ಕಣ್ಣೀರಿಳಿಸಿದ ಅವರು ಮುಂದೆ ಹಠದಿಂದ ತಾಳಮದ್ದಳೆ ಅರ್ಥಧಾರಿಯಾಗಿ ಸಾಧನೆಯನ್ನು ಮಾಡಿದರು. 

ವಿಟ್ಲ ಶಂಭುಶರ್ಮ ಹುಟ್ಟಿದ್ದು  13-10-1951ರಲ್ಲಿ ಕುಂಬಳೆ ಸೀಮೆಯ ಎಡನಾಡು ಗ್ರಾಮದ ಶೆಡಂಪಾಡಿ ಎಂಬಲ್ಲಿ.  ತಂದೆಯವರು ದಿ| ಕೃಷ್ಣ ಭಟ್ರು, ತಾಯಿ ಹೇಮಾವತಿ ಅಮ್ಮ. ತಂದೆಯವರು ಹೆಡ್‍ಮಾಸ್ಟ್ರು. ಓದಿದ್ದು ಬೇರೆ ಬೇರೆ ಕಾಲೇಜುಗಳಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ  ಓದಿ 35 ವರ್ಷ ಬೇರೆ ಬೇರೆ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ದುಡಿದು ಎಲ್ಲಿಯೂ ಖಾಯಂ ಆಗದೆ ನಿವೃತ್ತಿ ಹೊಂದಿದರು. 
ಮೊದಲೇ ಹೇಳಿದಂತೆ ಆಕಸ್ಮಿಕ ಸನ್ನಿವೇಶವೊಂದರಲ್ಲಿ ಯಕ್ಷಗಾನ ತಾಳಮದ್ದಳೆ ಕೂಟವೊಂದರಲ್ಲಿ ಅರ್ಥ ಹೇಳಿದ ಶಂಭು ಶರ್ಮ ಮುಂದಕ್ಕೆ ಅದರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಮೊದಲ ಅನಿರೀಕ್ಷಿತ ಅವಕಾಶದಲ್ಲಿ ಆದ ಮುಖಭಂಗ ಅವರನ್ನು ಮುಂದೆ ಹಠವಾದಿಯನ್ನಾಗಿ ಬೆಳೆಸಿತು. ವಿಟ್ಲಕ್ಕೆ ಬಂದಿದ್ದ ಪ್ರಸಿದ್ಧ ಅರ್ಥಧಾರಿ ದೇರಾಜೆ ಸೀತಾರಾಮಯ್ಯನವರನ್ನು ಭೇಟಿಯಾಗಿ ಅರ್ಥಗಾರಿಕೆ ಕಲಿಸಿಕೊಡುವಂತೆ ಬಿನ್ನವಿಸಿದ್ದರು. ‘‘ಅರ್ಥಗಾರಿಕೆ ಎಂಬುದು ಕಲಿಸಿಕೊಡುವಂಥದ್ದಲ್ಲ. ತಾನಾಗಿ ಕಲಿತು ಸಿದ್ಧಿಸುವಂತದ್ದು’’ ಎಂದು ದೇರಾಜೆಯವರು ಹೇಳಿದರು. ಆದರೂ ಅವರೊಡನೆ ಸಂಭಾಷಣೆಯ ಮತ್ತು ಪಾತ್ರಗಳ ಸೂಕ್ಷ ಮರ್ಮಗಳನ್ನು ಕಲಿತರು.
ಅರ್ಥಧಾರಿಯಾಗಿ ಬೆಳೆಯಲು ಕರ್ಗಲ್ಲು ಸುಬ್ಬಣ್ಣ ಭಟ್ಟರು ಶಂಭು ಶರ್ಮರಿಗೆ ತುಂಬಾ ಪ್ರೋತ್ಸಾಹವನ್ನು ಕೊಟ್ಟರು. ಅದರಂತೆ ವಿಟ್ಲದ ಹಲವಾರು ಕೂಟಗಳಲ್ಲಿ ಹಿರಿಯ ಕಲಾವಿದರಾಗಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು, ಪೆರುವೋಡಿ ನಾರಾಯಣ ಭಟ್ಟರೇ ಮೊದಲಾದವರು ಭಾಗವಹಿಸುತ್ತಿದ್ದುದರಿಂದ ಶಂಭು ಶರ್ಮರಿಗೆ ಅರ್ಥಧಾರಿಯಾಗಿ ಬೆಳೆಯಲು ಅನುಕೂಲವಾಯಿತು. ಆದರೆ ಶಂಭು ಶರ್ಮರಿಗೆ ಉದ್ಯೋಗದ ಕಾರಣದಿಂದ ಅರ್ಥಗಾರಿಕೆಯಲ್ಲಿ ಮತ್ತು ತಾಳಮದ್ದಳೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲು ಆಗುತ್ತಲೇ ಇರಲಿಲ್ಲ. ಅವರು ಉಪನ್ಯಾಸಕ ವೃತ್ತಿಯನ್ನು ಕೈಗೊಂಡಿದ್ದ ಕೆಲವು ಕಾಲೇಜಿನ ಪರಿಸರಗಳಲ್ಲಿ ಯಕ್ಷಗಾನ, ತಾಳಮದ್ದಳೆಗಳು ನಡೆಯುತ್ತಿರಲಿಲ್ಲ. ಹೀಗೆ ಆಗಾಗ ತನ್ನ ವೃತ್ತಿ ಬದುಕಿನ ನಡುವೆ ಯಕ್ಷಗಾನ ಕ್ಷೇತ್ರದಿಂದ ದೂರ ಉಳಿಯಬೇಕಾಗಿ ಬರುತ್ತಿತ್ತು. 
ತುರ್ತುಪರಿಸ್ಥಿತಿಯ ವಿರುದ್ಧದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಕ್ಷಗಾನದಿಂದ ದೂರವಾಗಿದ್ದರು.  ತುರ್ತುಪರಿಸ್ಥಿತಿಯ ನಂತರ ಗಣಪತಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿದ ನಂತರ ಆ ಸಂದರ್ಭದಲ್ಲಿ ಪುನಃ ಯಕ್ಷಗಾನದಲ್ಲಿ ಬೆಳೆಯುವುದಕ್ಕೆ ಅವಕಾಶ ಆಯಿತು. ಬೆಸೆಂಟ್ ಸಂಜೆ ಕಾಲೇಜು, ಬೆಸೆಂಟ್ ಡೇ ಕಾಲೇಜು- ಹೀಗೆ ಹಲವು ಕಾಲೇಜುಗಳಲ್ಲಿ ದುಡಿಯುತ್ತಾ  ರಾತ್ರಿ ಶ್ರೀಧರ ರಾಯರ ನೇತೃತ್ವದ ಯಕ್ಷಗಾನ ಬಯಲಾಟಗಳಲ್ಲಿ ಭಾಗವಹಿಸುತ್ತಿದ್ದರು. ತಾಳಮದ್ದಳೆಗಳಲ್ಲಿ ಭಾಗವಹಿಸುತ್ತಿದ್ದರು. 
ಯೌವನದ ಪ್ರಾರಂಭದಲ್ಲಿ ಹೀಗೆ ಅವಿಶ್ರಾಂತಿಯಿಂದ ದುಡಿಯುತ್ತಿದ್ದರೂ ಮತ್ತೆ ಪುನಃ ಮೂರ್ನಾಡಿಗೆ ಉದ್ಯೋಗಕ್ಕಾಗಿ ತೆರಳಿದಾಗ ಯಕ್ಷಗಾನದ ಸಂಪರ್ಕ ಮುರಿಯಿತು. ಎರಡು ವರ್ಷದ ನಂತರ ಮೂರ್ನಾಡಿಂದ ಮಂಗಳೂರಿನ ಫಿಶರೀಸ್ ಕಾಲೇಜಿಗೆ ಬಂದಾಗ ಮತ್ತೆ ಯಕ್ಷಗಾನದ ಅವಕಾಶಗಳು ಕೈತುಂಬಾ ಬಂದು ಜನಪ್ರಿಯನಾಗಲು ಸಹಾಯಕವಾಯಿತು. ಆದರೆ ಯಾಕೋ ಮತ್ತೆ ತಡೆ ಬಂತು. ಮುಂದಿನ ಎಂಟು ವರ್ಷಗಳ ಕಾಲ ಸೋಮವಾರಪೇಟೆಯ ಕಾಲೇಜಿನಲ್ಲಿ ಕೆಲಸ ಮಾಡಬೇಕಾಗಿ ಬಂತು. ಹೀಗೆ ಯಕ್ಷಗಾನದ ಸಂಪರ್ಕ ಆಗಾಗ ಕಡಿಯುತ್ತಾ ಇದ್ದುದು ಶಂಭು ಶರ್ಮರ ಕಲಾ ಬದುಕಿನ ದುರಂತವೆಂದೇ ಹೇಳಬೇಕು. ಸೋಮವಾರಪೇಟೆಯಿಂದ ಬಂದ ನಂತರ ವಿಜಯಾ ಕಾಲೇಜು, ಮುಲ್ಕಿ, ಸುಂಕದಕಟ್ಟೆ ಕಾಲೇಜು ಇಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರಥಮ ಹಂತದ ಅರ್ಥಧಾರಿಗಳ ಸಾಲಿಗೆ ಸೇರಿದ್ದರು. 
ವಿಟ್ಲ ಶಂಭು ಶರ್ಮ ಕೇವಲ ತಾಳಮದ್ದಳೆ ಕ್ಷೇತ್ರದಲ್ಲಿ ಅರ್ಥಧಾರಿ ಎಂದು ಹಚ್ಚಿನವರು ಭಾವಿಸಿರಬಹುದು. ಆದರೆ ಅವರು ಯಕ್ಷಗಾನ ವೇಷಧಾರಿಯಾಗಿಯೂ ಕೆಲವು ವರ್ಷಗಳ ತಿರುಗಾಟ ಮಾಡಿದ್ದಾರೆ ಎಂದರೆ ಕೆಲವರಿಗೆ ಆಶ್ಚರ್ಯವಾಗಬಹುದು. ಶ್ರೀಧರ ರಾಯರ ತಂಡದಲ್ಲಿ ಹಾಗೂ ಕರ್ನೂರು ಕೊರಗಪ್ಪ ರೈಗಳ ತಂಡದಲ್ಲಿ ಖಾಯಂ ವೇಷಧಾರಿಯಾಗಿದ್ದರು.  ಮಾತ್ರವಲ್ಲ ಫೆಬ್ರವರಿ 28ಕ್ಕೆ ಕಾಲೇಜಿನ ಪಾಠವನ್ನು ಮುಗಿಸಿದ ಮೇಲೆ, ಬೇರೆ ಬೇರೆ ಮೇಳಗಳಲ್ಲಿ ಅಂದರೆ, ಸುಬ್ರಹ್ಮಣ್ಯ, ಕದ್ರಿಮೇಳ ಮೊದಲಾದುವುಗಳಲ್ಲಿ ಅತಿಥಿ ಕಲಾವಿದನಾಗಿ ಭಾಗವಹಿಸುತ್ತಿದ್ದರು.  ಒಂದು ವರ್ಷ ಉದ್ಯೋಗಕ್ಕೆ ರಜೆ ಹಾಕಿ ಪೂರ್ಣಾವಧಿ ಕಲಾವಿದನಾಗಿ ನಾರಾಯಣ ಕಮ್ತಿಯವರ ಬಪ್ಪನಾಡು ಮೇಳದಲ್ಲಿ ತಿರುಗಾಟ ಮಾಡಿದ್ದರು.
ಆಮೇಲೆ ಅನಿರೀಕ್ಷಿತ ಅಪಘಾತವಾಗಿದ್ದರಿಂದ ಚಿಟ್ಟೆಪಟ್ಟಿ ಕಟ್ಟಲಿಕ್ಕೂ ಕಷ್ಟವಾಗಿ ಯಕ್ಷಗಾನ ತಿರುಗಾಟವನ್ನು ನಿಲ್ಲಿಸಿದ್ದರು. ಆದರೆ ಕೆಲವೊಮ್ಮೆ ಅತಿಥಿ ಕಲಾವಿದನಾಗಿ ಅಪರೂಪಕ್ಕೆ ಒಂದೊಂದು ವೇಷವನ್ನು ಆಗಾಗ ಮಾಡುತ್ತಿದ್ದರು. ಶಂಭು ಶರ್ಮ ತನ್ನ 14ನೆಯ ವಯಸ್ಸಿನಲ್ಲಿ ಸೂರಂಬೈಲಿನಲ್ಲಿ ನಡೆದ ‘ಭೀಷ್ಮಪರ್ವ’ ತಾಳಮದ್ದಳೆ ಕೂಟದಲ್ಲಿ ದೊಡ್ಡ ಸಾಮಗರ (ಮಲ್ಪೆ ಶಂಕರನಾರಾಯಣ ಸಾಮಗ) ಭೀಷ್ಮನ ಪಾತ್ರಕ್ಕೆದುರಾಗಿ ಅಭಿಮನ್ಯುವಾಗಿ ಅರ್ಥ ಹೇಳಿದ್ದರು. ದೊಡ್ಡ ಸಾಮಗರು ಇವರ ಅರ್ಥವನ್ನು ಮೆಚ್ಚಿಕೊಂಡು ಪ್ರಶಂಸಿಸಿದ್ದರು. 
ಯಕ್ಷಗಾನಕ್ಕೆ ಶೈಕ್ಷಣಿಕ ಶಿಸ್ತಿನ ಗ್ರಂಥವನ್ನು ಅವಶ್ಯಕತೆಯ ಬಗ್ಗೆ ಶಂಭು ಶರ್ಮರಲ್ಲಿ ಕೇಳಿದಾಗ “ಅದು ಸಾಧ್ಯ ಇಲ್ಲ ಎಂದೇ ನನ್ನ ಅಭಿಪ್ರಾಯ. ಯಕ್ಷಗಾನ ಎಂದರೆ ಚೌಕಟ್ಟಿನೊಳಗಿರುವ ಸ್ವಾತಂತ್ರ್ಯ. ಇದಕ್ಕೆ ಚೌಕಟ್ಟೂ ಇದೆ, ಸ್ವಾತಂತ್ರ್ಯವೂ ಇದೆ ಎಂದಾಗ ಒಂದು clean syllabus ಸಾಧ್ಯವಿಲ್ಲ. ಒಂದು ರೂಪುರೇಷೆಗಳ outline ಮಾಡಬಹುದೇ ಹೊರತು ಕಡ್ಡಾಯ ಕಾನೂನಿನಲ್ಲಿ ಯಕ್ಷಗಾನವನ್ನು ಒಳಪಡಿಸಲು ಸಾಧ್ಯವೇ ಇಲ್ಲ. ಸ್ವಾತಂತ್ರ್ಯ ಸ್ವಲ್ಪ ಇದ್ದರೂ ಅದು ದುರುಪಯೋಗ ಆಗಬಾರದು ಎಂದು ನಿರ್ದೇಶನಗಳನ್ನು ಕೊಡಬಹುದೇ ಹೊರತು ಕಟ್ಟುನಿಟ್ಟು ಎಂಬುದು ಯಕ್ಷಗಾನದಲ್ಲಿ ಕಷ್ಟ” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಶಂಭು ಶರ್ಮರಿಗೆ ಸಂಕಷ್ಟದ ಕಾಲವೊಂದಿತ್ತು. ಅಪಘಾತವೊಂದರಲ್ಲಿ ದೈಹಿಕವಾಗಿ ಜರ್ಝರಿತರಾಗಿದ್ದ ಸಮಯದಲ್ಲಿ ಫ್ರಾಕ್ಚರ್ ಆಗಿ ಕೈಯೊಂದನ್ನು ರಾಡ್ ಹಾಕಿ ಕೊರಳಿಗೆ ನೇತಾಡಿಸಿದ್ದರು. ಈ ಸ್ಥಿತಿಯಲ್ಲೇ ಶಂಭು ಶರ್ಮರು ಸುಮಾರು 50 ತಾಳಮದ್ದಳೆಗಳಲ್ಲಿ ಭಾಗವಹಿಸಿದ್ದರು. ಎಲ್ಲರಿಂದಲೂ ಇದು ಸಾಧ್ಯವಾಗುವ ಕಾರ್ಯವಲ್ಲ. ಶಂಭು ಶರ್ಮ ಇವರು ಯಕ್ಷರಂಗ ಪ್ರಶಸ್ತಿ, ಪೆರ್ಲ ಕೃಷ್ಣ ಭಟ್ಟ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆಯ ಪುರಸ್ಕಾರ, ವಿಟ್ಲ ಜೋಷಿ ಪ್ರಶಸ್ತಿ, ಮುಂಬಯಿ ಅಜೆಕಾರು ಪ್ರಶಸ್ತಿಯೇ ಮೊದಲಾದ ಹಲವಾರು ಪ್ರಶಸ್ತಿ, ಸನ್ಮಾನಗಳನ್ನು ಪಡೆದಿದ್ದಾರೆ. ಈಗ ಪತ್ನಿ ಲಕ್ಷ್ಮೀಶರ್ಮ, ಮಗ ಕೃಷ್ಣರಾಜ, ಸೊಸೆ ವಿದ್ಯಾ, ಮೊಮ್ಮಗ ನಿಶ್ಚಯರೊಂದಿಗೆ ಸಂತೃಪ್ತ ಜೀವನವನ್ನು ನಡೆಸಿದ್ದರು.

ಲೇಖನ: ಮನಮೋಹನ್ ವಿ.ಎಸ್. 

ಕೃಪೆ: ಯಕ್ಷದೀಪ.ಕಾಮ್‌ (https://yakshadeepa.com/)

Advertisement