Wednesday, February 6, 2008

Sanjeevini on the Earth

ಧರಣಿ ಮಂಡಲದ ಸಂಜೀವಿನಿ

'Cow is the Sanjeevini on this Earth' says Shobhana Yermunja. PARYAYA presents this article published in 'Gou Vishwa' or 'Cow Universe', as part of continued discussion on Global Warming. Shobhana explains the benefits from Cow and claims that contribution to Global Warming is more from human beings compared to Cows.


ಶೋಭನಾ ಯರ್ಮುಂಜ

ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ,
ಆಯವರಿತು ಹೊಡೆಯೆ ಮಧುರಗಾನಕ್ಕಾದೆ.
ಹಾದಿಬೀದಿಯಲಿರುವ ಕಸದ ಹುಲ್ಲನು ಹುಡುಕಿ
ಮೇದು, ಮನೆಗೈದಿನಾನಮೃತವೀವೆ; ಅದನುಂಡು ಎನಗೆರಡು
ಬಗೆವ ನೀನಾರಿಗಾದೆಯೋ ಎಲೆ ಮಾನವ?

ಎಂಬ ಗೋಮಾತೆಯ ನುಡಿಯಲ್ಲಿ ಗೋವಿನ ತ್ಯಾಗವನ್ನೂ, ಮಾನವನ ಕ್ರೌರ್ಯವನ್ನೂ ಕವಿ ಎಷ್ಟು ಅರ್ಥಪೂರ್ಣವಾಗಿ ಬಿಂಬಿಸಿದ್ದಾರಲ್ಲವೇ? ಆ ಮಹಾನ್ ಕವಿ ಎಸ್. ಜಿ. ನರಸಿಂಹಾಚಾರ್ಯರಿಗೆ ವಂದನೆಯನ್ನು ಸಲ್ಲಿಸಲೇಬೇಕು.

ಗೋಮಾತೆ ನಮಗೆ ಏನು ನೀಡಿದ್ದಾಳೆ ಎಂಬ ಪ್ರಶ್ನೆಯನ್ನು ನಮಗೆ ನಾವು ಹಾಕಿಕೊಂಡರೆ, ಉತ್ತರ ನೀಡುವುದು ಕಷ್ಟಸಾಧ್ಯವಾಗುತ್ತದೆ. ಏಕೆಂದರೆ ಆಕೆ ಮನುಕುಲಕ್ಕೆ ಸಕಲವನ್ನೂ ನೀಡಿದ್ದಾಳೆ.

ಬೆಳಗಿನಜಾವ ಚುಮುಚುಮು ಚಳಿಯಲ್ಲಿ, ದಿನಪತ್ರಿಕೆಯನ್ನು ಓದುವಾಗ, ಆ ಸುಂದರ ಮುಂಜಾನೆಗೆ ಜೊತೆಯಾಗುವುದು ಬಿಸಿಬಿಸಿಯಾದ ದಪ್ಪಹಾಲಿನಿಂದ ಮಾಡಿದ ಕಾಫಿ ಅಥವಾ ಚಹಾ. ಆ ಪಾನೀಯದ ರುಚಿಯನ್ನುಸವಿಯುವಾಗ ಹಾಲನ್ನು ನಮಗಿತ್ತ ಗೋಮಾತೆಯ ಬಗ್ಗೆ ಒಂದು ಕ್ಷಣವಾದರೂ ಆಲೋಚಿಸುತ್ತೇವೆಯೇ? ಹಾಲಿನ ಉತ್ಪನ್ನಗಳಿಂದ ತಯಾರಿಸಿದ ಸಿಹಿತಿಂಡಿಗಳನ್ನು ಬಾಯಿ ಚಪ್ಪರಿಸಿ ತಿನ್ನುವಾಗ ಗೋಮಾತೆಯನ್ನು ಸ್ಮರಿಸುತ್ತೇವೆಯೇ?

ಹೋಗಲಿ, ಉದ್ಯಾನದಲ್ಲಿ ಕುಳಿತಾಗ ಕಣ್ತುಂಬುವ ಪುಷ್ಪಗಳ ಬೆಳವಣಿಗೆಗೆ ಗೊಬ್ಬರದ ಕಾಣಿಕೆಯಿತ್ತ ಆ ಗೋಮಾತೆಯ ಬಗ್ಗೆ ನಾವು ಆಲೋಚಿಸಿದ್ದೇವೆಯೇ? ಪ್ರಾಮಾಣಿಕವಾಗಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದರೆ, `ಇಲ್ಲ' ಎಂಬ ಉತ್ತರವೇ ದೊರೆಯುತ್ತದೆ. ಹಾಗಾದರೆ ನಾವೆಷ್ಟು ಕೃತಘ್ನರಲ್ಲವೇ?

ಮಾನವ ತಾಯಿಯ ಹಾಲಿನ ನಂತರ ಕುಡಿಯುವುದೇ ಹಸುವಿನ ಹಾಲು. ವೈಜ್ಞಾನಿಕವಾಗಿ ಹಸುವಿನ ಹಾಲು ಎಲ್ಲಾ ರೀತಿಯ ಪೋಷಕಾಂಶಗಳಿರುವ ಪರಿಪೂರ್ಣ ಆಹಾರ. ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪೂಜ್ಯಸ್ಥಾನವಿದೆ. ಆಕೆಯಲ್ಲಿ ಕೋಟಿ ದೇವತೆಗಳು ವಾಸಿಸುತ್ತಾರೆ ಎಂಬ ನಂಬಿಕೆಯಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ಗೋಮಾತೆ `ನಡೆದಾಡುವ ದೇಗುಲ'.

ಅಂತಹ ಗೋಮಾತೆಯನ್ನು ಪೂಜಿಸುವುದಿರಲಿ, ನೆನೆಸಿಕೊಳ್ಳಲಾದರೂ ಮಾನವನಿಗೆ ಸಮಯವಿದೆಯೇ ? ಅವಳನ್ನು ನೆಮ್ಮದಿಯಿಂದ ಬದುಕಲು ಬಿಡುವ ಮನಸ್ಥಿತಿಯೂ ಮಾನವನಿಗಿಲ್ಲ. ತನ್ನ ರಕ್ತದ ಹನಿಹನಿಯನ್ನು ಮಾನವನ ಉಪಯೋಗಕ್ಕಾಗಿ ಮೀಸಲಿಟ್ಟ ಆಕೆಯನ್ನು ಹೊಡೆದು, ಕಡಿದು ತಿನ್ನುವತ್ತ ಮಾನವನು ಉತ್ಸುಕನಾಗಿದ್ದಾನೆ ಎಂದರೆ ಅದು ವಿಪರ್ಯಾಸವಲ್ಲದೆ ಇನ್ನೇನು? ಇದು ಆತನ ಬುದ್ಧಿವಂತಿಕೆಯ ಲಕ್ಷಣವೋ ಅಥವಾ ಅಥವಾ ಮೂರ್ಖತನದ ಪರಮಾವಧಿಯೋ?

ಪುರಾಣಗಳಲ್ಲಿ ಹೇಳಿದುದು ಮಾತ್ರವಲ್ಲ, ವೈಜ್ಞಾನಿಕವಾಗಿಯೂ ಗೋವಿನಿಂದ ಉತ್ಪತ್ತಿಯಾಗುವ ಪ್ರತಿಯೊಂದು ವಸ್ತುವೂ ಉಪಯುಕ್ತ ಹಾಗೂ ಅನೇಕ ಮಾರಕ ರೋಗಗಳಿಗೆ ರಾಮಬಾಣ. ತೋಟಗಾರಿಕೆ ನನ್ನ ತಾಯಿಯ ಪ್ರಿಯವಾದ ಹವ್ಯಾಸ. ಮನೆಯ ಕೈದೋಟದಲ್ಲಿ ವಿವಿಧ ಬಗೆಯ ಹೂಗಳನ್ನೂ, ತರಕಾರಿಗಳನ್ನೂ ಬೆಳೆಸಿದ್ದರು. ಆದರೆ ಹೂವಿನ ಮೊಗ್ಗು ಅರಳುವ ಮೊದಲೇ ಯಾವುದೋ ಕೀಟಕ್ಕೆ ಆಹಾರವಾಗುತ್ತಿತ್ತು. ಕೀಟ ಎಲೆಗಳನ್ನೂ ಬಿಡದೆ ಭಕ್ಷಿಸಿದುದರಿಂದ ಹೂವಿನ ಗಿಡಗಳು ಸಾವಿಗೆ ಈಡಾಗುತ್ತಿದ್ದವು.

ಬೆಳೆಸಿದ ಅಲಸಂದೆ ಕಾಯಿಗಳ ಮೇಲೆ `ಬಂಬುಚ್ಚಿ' ಎಂಬ ಕೀಟ ಕುಳಿತು ಅದರ ಸಾರವನ್ನೆಲ್ಲಾ ಹೀರಿ ಬಿಡುತ್ತಿತ್ತು. ಹರಿವೆ ಗಿಡಗಳು (ದಂಟಿನಸೊಪ್ಪು) ಕಂಬಳಿ ಹುಳಗಳಿಗೆ ಆಹಾರವಾಗುತ್ತಿದ್ದವು. ಕೊನೆಗೆ ಯಾರದೋ ಸಲಹೆ ಮೇರೆಗೆ ಗೋಮೂತ್ರವನ್ನು ಸಿಂಪಡಿಸಿದಾಗ ದೊರೆತ ಫಲಿತಾಂಶ ಮಾತ್ರ ಅದ್ಭುತವಾಗಿತ್ತು. ತರಕಾರಿ, ಹೂವಿನ ಗಿಡಗಳನ್ನು ಹಾಳುಗೆಡಹುತ್ತಿದ್ದ ಕೀಟಗಳೆಲ್ಲಾ ಮಾಯ! ಇಂದು ನಮ್ಮಲ್ಲಿ ಗಿಡಗಳು ಹುಲುಸಾಗಿ, ಆರೋಗ್ಯವಾಗಿ ಬೆಳೆಯುತ್ತಿವೆ.

ಇದರಿಂದ ಗೋಮೂತ್ರ ಅತ್ಯಂತ ಉಪಯುಕ್ತ ಕೀಟನಾಶಕ ಎಂಬುದು ಸ್ಪಷ್ಟವಾಗುತ್ತದೆ. ಇದರಿಂದ ಯಾವುದೇ ರೀತಿಯ ದುಷ್ಪರಿಣಾಮಗಳಿಲ್ಲ. ಕೆಲವರು ಅದೆಷ್ಟೋ ಪ್ರಮಾಣದಲ್ಲಿ ಕಾಸರಕನ ಎಲೆಗಳನ್ನು ಗೋಮೂತ್ರದಲ್ಲಿ ಕೊಳೆಯಿಸಿ,ಕೀಟನಾಶಕವಾಗಿ ಉಪಯೋಗಿಸಿ, ಯಶಸ್ವಿಯಾಗಿದ್ದಾರೆ. ಗೋಮೂತ್ರ ಹಾಗೂ ಗೋಮಯ ಬೆರೆತ, ಹಟ್ಟಿತೊಳೆದ ನೀರನ್ನು ಗಿಡಗಳಿಗೆ ಉಣಿಸುವುದರಿಂದ ಗಿಡಗಳು ಹುಲುಸಾಗಿ ಬೆಳೆಯುತ್ತವೆ ಹಾಗೂ ಒಳ್ಳೆಯ ಫಸಲನ್ನೂ ನೀಡುತ್ತವೆ.

ಇದನ್ನು ಉಪಯೋಗಿಸುವಾಗ ಬೇರೆ ಗೊಬ್ಬರಗಳ ಅವಶ್ಯಕತೆಯಿಲ್ಲ. ಇದರಿಂದ ಗೋಮೂತ್ರ ಹಾಗೂ ಗೋಮಯ ಗಿಡಗಳಿಗೆ ಉತ್ತಮ ಗೊಬ್ಬರ ಎಂಬುದು ಸ್ಪಷ್ಟವಾಗುತ್ತದೆ.


ಮಂಗಳೂರಿನ ನಿರ್ಮಲಾ (ಹೆಸರು ಬದಲಾಯಿಸಲಾಗಿದೆ) ಎಂಬುವವರು ಬಾಯಿಯ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಕ್ಯಾನ್ಸರ್ ಹುಣ್ಣುಗಳು ಗಂಟಲು, ಅನ್ನನಾಳವನ್ನು ವ್ಯಾಪಿಸಿದ್ದವು. ವೈದ್ಯರು ಅವರ ರೋಗ ಅಂತಿಮ ಸ್ಥಿತಿಯಲ್ಲಿದೆ; ಆಕೆಬದುಕುವುದು ಸಂಶಯ ಎಂದಿದ್ದರು. ಕೊನೆಗೆ ಯಾರೋ ಒಬ್ಬರು ವೈದ್ಯರ ಸಲಹೆಯ ಮೇರೆಗೆ, ನಿರ್ಮಲಾ ಗೋಮೂತ್ರದಿಂದ ತಯಾರಿಸಿದ ಅರ್ಕವನ್ನು ಉಪಯೋಗಿಸಲಾರಂಭಿಸಿದರು. ಯಮಲೋಕದ ಬಾಗಿಲು ತಟ್ಟುತ್ತಿದ್ದ ನಿರ್ಮಲಾರನ್ನು ಗೋ ಅರ್ಕ ಹಿಂದಕ್ಕೆ ಕರೆತಂದಿದೆ. ಆಶ್ಚರ್ಯವಾಗುತ್ತಿದೆಯಲ್ಲವೇ? ಇಂದು ಆಕೆ ಸಂಪೂರ್ಣ ಗುಣಮುಖರಾಗಿದ್ದಾರೆ.

ಗೋ ಅರ್ಕವನ್ನು ಸೇವಿಸಿದುದರಿಂದ ರಕ್ತದೊತ್ತಡ, ಮಧುಮೇಹಗಳು ನಿಯಂತ್ರಣದಲ್ಲಿವೆ ಎಂದು ಅದರ ಉಪಯೋಗ ಪಡೆದುಕೊಂಡ ಅನೇಕರು ಹೇಳುತ್ತಾರೆ. ಗೋಅರ್ಕ ಸೇವಿಸಿದುದರಿಂದ ಮುಖದಲ್ಲಿ ಮೊಡವೆಗಳ ಹಾವಳಿ ಕಡಿಮೆಯಾಗಿದೆ ಎಂಬುದು ಕೋಮಲಾಂಗಿಯರ ಹೇಳಿಕೆ. ಗೋಮೂತ್ರದಿಂದ ತಯಾರಿಸಿದ ಅರ್ಕ, ಕ್ಯಾನ್ಸರ್ ರೋಗ ನಿವಾರಕ ಎಂದು ನಮ್ಮ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಅಂಗೀಕೃತವಾಗಿದೆ; ಜೊತೆಗೆ ಲೀಟರ್ಗೆ 6 ರೂ.ಗಳಂತೆ ಮಾರಾಟವಾಗುತ್ತಿದೆ.

ಗೋಮೂತ್ರ ಹಾಗೂ ಗೋಮಯದಿಂದ ತಯಾರಿಸಿದ ಶ್ಯಾಂಪೂ ಬಹಳ ಉಪಯುಕ್ತವಾಗಿದೆ. ಅದನ್ನು ಉಪಯೋಗ ಮಾಡುವುದರಿಂದ ತಲೆಹೊಟ್ಟು, ಕೂದಲಿನ ಸೀಳುವಿಕೆ ಕಡಿಮೆಯಾಗುತ್ತದೆ; ಜೊತೆಗೆ ಕೆಂಬಣ್ಣಕ್ಕೆ ತಿರುಗುತ್ತಿರುವಕೂದಲು ಕಪ್ಪಾಗುತ್ತದೆ. ಇದು ನನ್ನ ಸ್ವಂತ ಅನುಭವ.

ಗೋಮಯದಿಂದ ತಯಾರಿಸಿರುವ ಸಾಬೂನು ಅನೇಕ ಚರ್ಮರೋಗಗಳ ನಿವಾರಣೆಯಲ್ಲಿ ಹಾಗೂ ತಡೆಗಟ್ಟುವಿಕೆಯಲ್ಲಿ ಸಹಕಾರಿಯಾಗಿದೆ. ಗೋಮಯದಿಂದ ತಯಾರಿಸಲಾಗಿರುವ ದಂತಮಂಜನ ಒಸಡುಗಳಲ್ಲಿನ ರಕ್ತಸ್ರಾವವನ್ನೂ, ದಂತಕುಳಿಯನ್ನೂ ಕಡಿಮೆಗೊಳಿಸುತ್ತದೆ. ಗೋಮಯದಿಂದ ವಿಭೂತಿ, ಗಂಧದ ಕಡ್ಡಿಗಳನ್ನು ತಯಾರಿಸುತ್ತಾರೆ. ಇವುಗಳು ಅತ್ಯಂತ ಸುಗಂಧಭರಿತವಾಗಿವೆ. ನಾನು ಇಲ್ಲಿ ಗೋವಿನ ಉತ್ಪನ್ನಗಳಿಗೆ ಜಾಹೀರಾತು ನೀಡುತ್ತಿದ್ದೇನೆ ಎಂದು ಭಾವಿಸಬೇಡಿ. ಉಪಯೋಗ ಪಡೆದುಕೊಂಡವರ ಮಾತುಗಳಿಗೆ ಅಕ್ಷರಗಳ ರೂಪವನ್ನು ನೀಡುವ ಪ್ರಯತ್ನವನ್ನಷ್ಟೇ ಇಲ್ಲಿ ಮಾಡಲಾಗಿರುವುದು.

ಗೋವುಗಳು ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣವಾಗುತ್ತವೆಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ ಎಂಬ ಲೇಖನವನ್ನು ಓದಿದ್ದೇನೆ. ಆದರೆ ಮಾನವ ಕಾರಣವಾಗುವಷ್ಟು ಗೋವುಗಳು ಖಂಡಿತಾ ಕಾರಣವಾಗಲಾರವು. ಗೋವುಗಳು ಮೆಲುಕು ಹಾಕುವಾಗ ಉತ್ಪತ್ತಿಯಾಗುವ ಮೀಥೇನ್ ಅನಿಲ ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸಂಶೋಧನೆಗಳು ಹೇಳುತ್ತವೆ. ಆದರೆ ಮನುಷ್ಯನ ಕಾರ್ಯಚಟುವಟಿಕೆಗಳಿಂದ, ಆತನ ಹೊಸ ಹೊಸ ಅನ್ವೇಷಣೆಗಳ ಕೂಸುಗಳಿಂದ ಉತ್ಪತ್ತಿಯಾಗುವ ಮೀಥೇನ್ ಅನಿಲಕ್ಕೆ ಹೋಲಿಸಿದರೆ, ಗೋವುಗಳು ಮೆಲುಕು ಹಾಕುವಾಗ ಉತ್ಪತ್ತಿಯಾಗುವ ಮೀಥೇನ್ ಅನಿಲದ ಪ್ರಮಾಣ ಅತ್ಯಂತ ಕಡಿಮೆ. ಪರಿಸರದ ಮಲಿನತೆಗೆ ಮನುಷ್ಯ ನೀಡುವಷ್ಟು ಕೊಡುಗೆಯನ್ನು ಬೇರೆ ಯಾವ ಜೀವಿಯೂ ನೀಡಲಾರದು.

ಹಸುಗಳಿಗೆ ವಯಸ್ಸಾದಾಗ, ಅವುಗಳ ಸಂತಾನೋತ್ಪತ್ತಿ ಕಾಲ ಮುಗಿದಾಗ, ನಾವು ಅವುಗಳನ್ನು ಕಸಾಯಿಖಾನೆಗಳಿಗೆ ಒಪ್ಪಿಸುತ್ತೇವೆ. ಜೀವಂತ ಹಸುಗಳ ಮೈಗೆ ಬಿಸಿ ನೀರು ಸುರಿದು, ಧರ್ಮ ಸುಲಿದು ಕೈಚೀಲ, ಚಪ್ಪಲಿಗಳನ್ನು ತಯಾರಿಸಿ ಮೆರೆಯುತ್ತೇವೆ. ಹಸುಗಳ ಆ ಪರಿಸ್ಥಿತಿ ನಮಗೆ ಬಂದೊದಗಿದರೆ ಹೇಗಿರಬಹುದು?

ಗೋಮಾಂಸವನ್ನು ತಿನ್ನದೆ ಬದುಕಲು ಮಾನವನಿಂದ ಸಾಧ್ಯವಿದೆ; ಆದರೆ ಗೋವಿನ ಹಾಲು ಕುಡಿಯದೆ ಬದುಕಲು, ಹಾಲಿನಿಂದ ತಯಾರಿಸಿದ ಉತ್ಪನ್ನಗಳನ್ನು ಉಪಯೋಗಿಸದೆ ಬದುಕಲು ಸಾಧ್ಯವಿದೆಯೇ? ಯಾರಾದರೂ ನಾವು ಕೇವಲ ಗೋಮಾಂಸವನ್ನು ತಿಂದು, ಗೋವಿನ ಹಾಲು ಕುಡಿಯದೆ ಹಾಲಿನಿಂದ ತಯಾರಿಸಿದ ಉತ್ಪನ್ನಗಳನ್ನು ಉಪಯೋಗಿಸದೆ ಬದುಕುತ್ತೇವೆ ಎಂದು ಹೇಳಲಿ, ನೋಡೋಣ!

ಉಪಯೋಗವಿದ್ದಾಗ ಉಪಯೋಗಿಸಿಕೊಂಡು, ಬೇಡವಾದಾಗ ಬಿಸಾಕುವ ಹೀನರು ಮಾನವರು! ನಮ್ಮದು ಬಡದೇಶ, ಅವುಗಳಿಂದ (ಗೋವು) ಯಾವುದೇ ಉತ್ಪತ್ತಿ ಇಲ್ಲದಾದಾಗ ಅವುಗಳನ್ನು ಸಾಕುವ ಖರ್ಚನ್ನು ನಿಭಾಯಿಸುವುದು ಹೇಗೆ? ಎಂಬ ಪ್ರಶ್ನೆ ಏಳುವುದು ಸಹಜ. ಆದರೆ ನಮಗೂ ವಯಸ್ಸಾದಾಗ ದೇಹ ಕಾಯಿಲೆಗಳ ಗೂಡಾದಾಗ ನಮ್ಮಿಂದಲೂ ಯಾವುದೇ ಉಪಯೋಗವಿಲ್ಲ. ಆಗ ನಮ್ಮ ಮಕ್ಕಳೂ ಔಷಧೋಪಚಾರಗಳ ಖರ್ಚನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ನಮ್ಮನ್ನೂ ಕಸಾಯಿಖಾನೆಗೆ ಒಪ್ಪಿಸಿದರೆ ಪರಿಸ್ಥಿತಿ ಹೇಗಿರಬಹುದು? ಒಂದು ಕ್ಷಣ ಯೋಚಿಸಿ ನೋಡಿ. ಈ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿದೆಯೇ?

ಗೋವಿಗೆ ವಯಸ್ಸಾದರೂ, ಅದರಿಂದ ದೊರೆಯುವ ಸಂಜೀವಿನಿಯಾದ ಗೋಮೂತ್ರ ಹಾಗೂ ಗೋಮಯ ದೊರೆತೇ ದೊರೆಯುತ್ತದೆ. ಗೋವು ತನ್ನ ಹುಟ್ಟಿನಿಂದ ಸಾವಿನವರೆಗೂ ಕಾಮಧೇನುವಾಗಿ ಮನುಷ್ಯನ ಹೆಚ್ಚಿನ ಆಗತ್ಯಗಳನ್ನು ಪೂರೈಸುತ್ತದೆ.

ವಿಷವ ಕಕ್ಕುವ ನರನ ಕ್ಷಮಿಸಿ

ಅಮೃತವೀವ ತಾಯಿ ನೀ

ತಾಳ್ಮೆ ಕ್ಷಮಾ ಸಹನವಾಹಿನಿ

ಗೋ ಮಾತೆ ನೀ ಸಂಜೀವಿನಿ


ಆದುದರಿಂದ ಗೋವಿನ ಸಂರಕ್ಷಣೆ ಜಗತ್ತಿನ ಮಾನವರೆಲ್ಲರ ಹೊಣೆಯಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳಿಗೆ ನಮ್ಮ ನುಡಿ ನಮನಗಳನ್ನು ಸಲ್ಲಿಸಲೇಬೇಕು. ಧರಣಿ ಮಂಡಲದ ಸಂಜೀವಿನಿಯ ಅಳಿವು-ಉಳಿವು ಮಾನವರ ಕೈಯಲ್ಲಿದೆ. ಗೋವಿಲ್ಲದ ಪ್ರಪಂಚವನ್ನು, ಬದುಕನ್ನು ಊಹಿಸಿಕೊಳ್ಳುವುದೂ ಅಸಾಧ್ಯ.

"ಗಾವಃ ವಿಶ್ವಸ್ಯ ಮಾತರಃ"

ಕೃಪೆ: 'ಗೋ ವಿಶ್ವ' ಸರ್ವಜಿತ್ ಸಂವತ್ಸರ ಭಾದ್ರಪದ ನವಂಬರ್ 2007 ಸಂಪುಟ-1 ಸಂಚಿಕೆ-2

1 comment:

Anonymous said...

ನೀವು ಹೇಳಿರುವುದು ಖಂಡಿತ ಸತ್ಯ. ಪರಿಸರ ಮಾಲಿನ್ಯಕ್ಕೆ ಪ್ರಕೃತಿಯ ವಿರುದ್ದ ಹೋಗುತ್ತಿರುವ ಮನುಷ್ಯ ಹೊಣೆಗಾರನೇ ಹೊರತು ಬಡಪಾಯಿ ಹಸುಗಳಲ್ಲ.



ಗಿರೀಶ ಕೆ.ಎಸ್.
girikavya@gmail.com

Advertisement