Saturday, April 12, 2008

ಹೆಲಿಕಾಪ್ಟರ್ ಪಯಣದಲ್ಲಿ ಅವಾಂತರ...! Consumer awareness

ಹೆಲಿಕಾಪ್ಟರ್ ಪಯಣದಲ್ಲಿ

ಅವಾಂತರ...!


ದಿವಂಗತ ಪೈ ಅವರೊಂದಿಗೆ ಅನುಚಿತವಾಗಿ ವರ್ತಿಸಿ, ಬೈದಾಡಿ, ಅವರನ್ನು ಹೆಲಿಕಾಪ್ಟರಿನೊಳಕ್ಕೆ ಎಳೆದುಕೊಂಡು ಹೋಗಲಾಯಿತು. ಪರಿಣಾಮವಾಗಿ ಅವರಿಗೆ ಹೃದಯಾಘಾತವಾಗಿ ಸಾವು ಸಂಭವಿಸಿತು ಎಂಬುದು ಅರ್ಜಿದಾರರ ಆರೋಪ. ಆದರೆ ಅದನ್ನು ಸಾಬೀತುಪಡಿಸುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿತು.

ನೆತ್ರಕೆರೆ ಉದಯಶಂಕರ

ಬಸ್ಸಿರಲಿ, ಹಡಗಿರಲಿ ಅಥವಾ ವಿಮಾನಯಾನವೇ ಇರಲಿ - ಯಾವುದೇ ಸಾರಿಗೆ ಸಂಸ್ಥೆಯ ಸಿಬ್ಬಂದಿ ತಮ್ಮ ಗ್ರಾಹಕರೊಂದಿಗೆ ಸಹೃದಯತೆಯೊಂದಿಗೆ ವ್ಯವಹರಿಸಬೇಕಾದ್ದು ನಿಯಮ. ಹಾಗೆ ವ್ಯವಹರಿಸದೇ ಇದ್ದರೆ ಅವರ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ಹೋಗಲು ಅವಕಾಶ ಇದೆ. ಆದರೆ ಅಂತಹ ಸಂದರ್ಭದಲ್ಲಿ ಸಿಬ್ಬಂದಿಯ ಅನುಚಿತ ವರ್ತನೆಯನ್ನು ಸಾಬೀತುಪಡಿಸುವಂತಹ ಹೊಣೆಗಾರಿಕೆ ಗ್ರಾಹಕರ ಮೇಲೆಯೇ ಇರುತ್ತದೆ.

ವಿಮಾನಯಾನ ಸಂಸ್ಥೆಯ ಸಿಬ್ಬಂದಿ ವಿರುದ್ಧ ಬಂದ ಇಂತಹ ದೂರಿನ ವಿಚಾರಣೆ ನಡೆಸಿದ ಕರ್ನಾಟಕ ರಾಜ್ಯ ಗ್ರಾಹಕ ನ್ಯಾಯಾಲಯವು ಸಾಕ್ಷ್ಯಾಧಾರದ ಕೊರತೆ ಹಿನ್ನೆಲೆಯಲ್ಲಿಪ್ರಯಾಣಿಕರ ದೂರನ್ನು ತಳ್ಳಿಹಾಕಿದ ಪ್ರಕರಣವಿದು.

ಈ ಪ್ರಕರಣದ ಅರ್ಜಿದಾರರು: ರಾಜಕೋಟ್ ನಿವಾಸಿ ದಿವಂಗತ ಎಚ್. ಎಂ. ಪೈ ಅವರ ಪತ್ನಿ ಆಶಾ ಎಂ. ಪೈ ಮತ್ತು ಪುತ್ರಿ ವಿಶಾಖ ಎಂ. ಪೈ. ಪ್ರತಿವಾದಿಗಳು: ಬೆಂಗಳೂರು ಬಳ್ಳಾರಿ ರಸ್ತೆ ಜಕ್ಕೂರು ಏರೋಡ್ರಮ್ ನ ಡೆಕ್ಕನ್ ಎವಿಯೇಷನ್ ಪ್ರೈವೇಟ್ ಲಿಮಿಟೆಡ್ ಕಾರ್ಪೊರೇಟ್ ಕಚೇರಿಯ ಆಡಳಿತ ನಿರ್ದೇಶಕರು.

ಅರ್ಜಿದಾರರಾದ ಆಶಾ ಎಂ. ಪೈ ಮತ್ತು ವಿಶಾಖ ಎಂ. ಪೈ ಅವರ ದೂರಿನ ಪ್ರಕಾರ ದಿವಂಗತ ಎಚ್.ಎಂ. ಪೈ ಅವರು ಆಶಾ ಪೈ ಮತ್ತು ವಿಶಾಖ ಪೈ ಜೊತೆಗೆ 2004ರ ಜೂನ್ 7ರಂದು ವಿಮಾನದ ಮೂಲಕ ಜಮ್ಮುವಿಗೆ ಬಂದರು. ನಂತರ ಜೂನ್ 9ರಂದು ಕತ್ರಾದಿಂದ ಸಂಜಿಚಾಟಿಗೆ ಹೆಲಿಕಾಪ್ಟರಿನಲ್ಲಿ ಪ್ರಯಾಣ ಮತ್ತು ಮರುಪಯಣ ಮಾಡುವ ಸಲುವಾಗಿ 12,000 ರೂಪಾಯಿ ನೀಡಿ ಟಿಕೆಟ್ ಖರೀದಿಸಿದರು.

ಬುಕ್ಕಿಂಗ್ ಪ್ರಕಾರ ಪ್ರತಿವಾದಿ ಸಂಸ್ಥೆಯು ಮೂವರನ್ನೂ ಕತ್ರಾದಿಂದ ಸಂಜಿಚಾಟಿಗೆ ಕರೆದೊಯ್ದಿತು. ಅಲ್ಲಿ ವೈಷ್ಣೋದೇವಿ ದರ್ಶನದ ಬಳಿಕ ಹೆಲಿಪ್ಯಾಡಿಗೆ ಮರಳಿದ ಅವರು ಮಧ್ಯಾಹ್ನ 1.30ರ ವೇಳೆಗೆ ಪ್ರತಿವಾದಿ ಸಂಸ್ಥೆಯ ಸಿಬ್ಬಂದಿಯ ಬಳಿ ಬೋರ್ಡಿಂಗ್ ಪಾಸುಗಳನ್ನು ನೀಡಿ ತಮ್ಮ ಹೆಸರುಗಳನ್ನು ನೋಂದಾಯಿಸಿದರು. ಭೋಜನದ ಬಳಿಕ ಹೆಲಿಕಾಪ್ಟರ್ ಏರಬಹುದು ಎಂದು ಅವರಿಗೆ ಸಿಬ್ಬಂದಿ ತಿಳಿಸಿದರು.

ವೈಷ್ಣೋದೇವಿ ದರ್ಶನದ ಬಳಿಕ ಸಂಜಿಚಾಟಿನಿಂದ ಕತ್ರಾಕ್ಕೆ ಮೊದಲು ಬಂದು ಹೆಸರು ನೋಂದಾಯಿಸಿದವರನ್ನು ಮೊದಲು ಕಳುಹಿಸುವುದು ನಿಯಮ. ಆದರೆ ತಾವು ಮಧ್ಯಾಹ್ನ 1.30ಕ್ಕೆ ಬಂದು ಬೋರ್ಡಿಂಗ್ ಪಾಸ್ ನೀಡಿ ಹೆಸರು ನೋಂದಾಯಿಸಿದ್ದರೂ, ತಮ್ಮನ್ನು ನಿರ್ಲಕ್ಷಿಸಿದ ಸತ್ಪಾಲ್ ಶರ್ಮಾ ಮತ್ತು ಸಂಜಯ ಕೌಲ್ ಎಂಬ ಸಿಬ್ಬಂದಿ ತಮ್ಮ ನಂತರ ಬಂದವರನ್ನು ಹೆಲಿಕಾಪ್ಟರಿಗೆ ಹತ್ತಿಸಿದರು ಎಂಬುದು ಅರ್ಜಿದಾರರ ಆರೋಪ. ದಿವಂಗತ ಪೈ ಅವರು ಸಿಬ್ಬಂದಿಯ ಈ ವರ್ತನೆಯನ್ನು ಪ್ರತಿಭಟಿಸಿದಾಗ ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ಅವರನ್ನು ಹೆಲಿಕಾಪ್ಟರಿನೊಳಕ್ಕೆ ಎಳೆದೊಯ್ದು ಕುಳ್ಳಿರಿಸಲಾಯಿತು. ಇದರಿಂದಾಗಿ ಹೃದಯಾಘಾತಕ್ಕೆ ಒಳಗಾದ ಪೈ ಅವರಿಗೆ ತತ್ ಕ್ಷಣದ ಚಿಕಿತ್ಸೆಗೂ ವ್ಯವಸ್ಥೆ ಮಾಡಲಿಲ್ಲ. ಪರಿಣಾಮವಾಗಿ ಪೈ ಅವರು ಅಸು ನೀಗಿದರು ಎಂದು ದೂರಿದ ಅರ್ಜಿದಾರರು ಪ್ರತಿವಾದಿ ಸಂಸ್ಥೆಯ ಸಿಬ್ಬಂದಿಯ ಈ ಅನುಚಿತ ವರ್ತನೆ ಸೇವಾಲೋಪವಾಗಿದ್ದು ತಮಗೆ 50 ಲಕ್ಷ ರೂಪಾಯಿಗಳ ಪರಿಹಾರ ಕೊಡಿಸಬೇಕು ಎಂದು ಗ್ರಾಹಕ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಸದಸ್ಯರಾದ ರಮಾ ಅನಂತ್ ಮತ್ತು ಶಾಮ ಭಟ್ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಪರ ವಕೀಲ ಕೆ. ಪುಟ್ಟೇಗೌಡ ಮತ್ತು ಪ್ರತಿವಾದಿ ಸಂಸ್ಥೆಯ ಪರ ವಕೀಲ ಮೆಸರ್ಸ್ ಕಮಲ ಮತ್ತು ಭಾನು ಅವರ ಅಹವಾಲುಗಳನ್ನು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.

ಕತ್ರಾ-ಸಂಜಿಚಾಟ್ ನಡುವಣ ಪಯಣ-ಮರುಪಯಣಕ್ಕಾಗಿ ಅರ್ಜಿದಾರರು ಟಿಕೆಟ್ ಖರೀದಿಸ್ದಿದನ್ನು ಪ್ರತಿವಾದಿ ಸಂಸ್ಥೆ ಒಪ್ಪಿಕೊಂಡಿತು. ಆದರೆ ಅರ್ಜಿದಾರರು ಮಾಡಿದ ಇತರ ಎಲ್ಲ ಆಪಾದನೆಗಳನ್ನೂ ನಿರಾಕರಿಸಿತು. ದಿವಂಗತ ಪೈ ಅವರಿಗೆ ಹೃದಯಾಘಾತ ಸಂಭವಿಸಿ ಅವರು ನಿಧನರಾದುದಕ್ಕೆ ತಮ್ಮ ಸಿಬ್ಬಂದಿ ಯಾವುದೇ ರೀತಿಯಲ್ಲೂ ಹೊಣೆಗಾರರಲ್ಲ ಎಂದು ಪ್ರತಿವಾದಿ ಸಂಸ್ಥೆ ವಾದಿಸಿತು.

ಅರ್ಜಿದಾರರಿಗೆ ಮರುಪಯಣಕ್ಕೆ ಸಂಜೆಗೆ ಸಮಯ ನಿಗದಿಯಾಗಿತ್ತು. ಅಲ್ಲದೆ ಅರ್ಜಿದಾರರು ಬರುವುದಕ್ಕೆ ಮೊದಲೇ ಬಂದಿದ್ದ ಹಲವಾರು ವ್ಯಕ್ತಿಗಳು ಮರುಪಯಣಕ್ಕೆ ಕಾದಿದ್ದರು. ದಾಖಲಾತಿಗೆ ಅನುಗುಣವಾಗಿ ಹಾಗೆ ಮೊದಲು ಬಂದಿದ್ದವರಿಗೆ ಮೊದಲು ಮರುಪಯಣಕ್ಕೆ ಅವಕಾಶ ಒದಗಿಸಲಾಯಿತು ಎಂದೂ ಸಂಸ್ಥೆ ಪ್ರತಿಪಾದಿಸಿತು.

ಅರ್ಜಿದಾರರು ಮಧ್ಯಾಹ್ನ 1.30ಕ್ಕೆ ತಾವು ಹೆಲಿಪ್ಯಾಡಿಗೆ ಮರಳಿರುವುದಾಗಿ ಹೇಳಿದ್ದರೂ ಅದನ್ನು ಸಾಬೀತುಪಡಿಸುವಂತಹ ದಾಖಲೆಗಳನ್ನು ನೀಡಿರಲಿಲ್ಲ. ದಾಖಲೆಗಳಲ್ಲಿ ಮರುಪಯಣದ ಸಮಯ ಸಂಜೆ ಎಂಬುದಾಗಿ ನಮೂದಾಗಿದ್ದುದರಿಂದ ಮಧ್ಯಾಹ್ನವೇ ಅವರಿಗೆ ಹೆಲಿಕಾಪ್ಟರ್ ಸೇವೆ ಒದಗಿಸಬೇಕಾಗಿತ್ತು ದೂರುವುದು ಸರಿಯಲ್ಲ ಎಂದು ನ್ಯಾಯಾಲಯ ಭಾವಿಸಿತು.

ವಿಮಾನಯಾನ ಸಂಸ್ಥೆಯ ಇಬ್ಬರು ಸಿಬ್ಬಂದಿ ಅನಪೇಕ್ಷಣೀಯ ಭಾಷೆ ಬಳಸಿ ಅನುಚಿತ ರೀತಿಯಲ್ಲಿ ವರ್ತಿಸಿದರು ಎಂಬುದು ಅರ್ಜಿದಾರರ ಗಂಭೀರ ಆರೋಪವಾಗಿತ್ತು. ಈ ಆರೋಪಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಪ್ರತಿವಾದಿಗೆ ಲಿಖಿತ ದೂರನ್ನೂ ನೀಡಿದ್ದರು. ಈ ದೂರನ್ನು ಅನುಸರಿಸಿ ಪ್ರತಿವಾದಿ ಸಂಸ್ಥೆಯು ಕರ್ನಲ್ ಎಸ್. ಭೂತಾನಿ ತನಿಖಾ ಸಮಿತಿಯನ್ನು ರಚಿಸಿತ್ತು.

ಈ ತನಿಖಾ ಸಮಿತಿ ಸಲ್ಲಿಸಿದ್ದ ವರದಿಯನ್ನೂ ನ್ಯಾಯಾಲಯ ಪರಿಶೀಲಿಸಿತು. ಈ ಸಮಿತಿಯ ವರದಿ ಪ್ರಕಾರ ದಿವಂಗತ ಪೈ ಅವರು ತಮ್ಮನ್ನು ಹಾಗೂ ಕುಟುಂಬ ಸದಸ್ಯರಿಗೆ ಆದ್ಯತೆ ಆಧಾರದಲ್ಲಿ ಯಾನ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದರು. ಆದರೆ ಅವರಿಗಿಂತ ಮೊದಲೇ ಬಂದ ವ್ಯಕ್ತಿಗಳು ಇದ್ದುದರಿಂದ ಅದನ್ನು ನಿರಾಕರಿಸಲಾಯಿತು.

ಯಾವುದೇ ಸಂದರ್ಭದಲ್ಲಿ ಪೈ ಅವರಾಗಲೀ ಅವರ ಕುಟುಂಬ ಸದಸ್ಯರಾಗಲೀ ಪೈ ಅವರಿಗೆ ಹೃದ್ರೋಗ ಇರುವ ಬಗ್ಗೆ ಹೇಳಿರಲಿಲ್ಲ. ಹೆಲಿಕಾಪ್ಟರಿನಲ್ಲಿ ಪಯಣಿಸುತ್ತಿದ್ದಾಗ ಪೈ ಅವರು ಅಸ್ವಸ್ಥರಾದರು. ಇಂತಹ ಸಂದರ್ಭದಲ್ಲಿ ಸಿಬ್ಬಂದಿ ನೆರವಿಗೆ ಬರಲಿಲ್ಲ ಎಂಬುದು ಅರ್ಜಿದಾರರ ಇನ್ನೊಂದು ಗಂಭೀರ ಆರೋಪ. ಆದರೆ ಹೆಲಿಕಾಪ್ಟರಿನೊಳಗಿನ ಸದ್ದಿನ ಮಧ್ಯೆ ನೆರವಿಗಾಗಿ ಅವರು ಮಾಡಿದ ಮನವಿ ಕೇಳದೇ ಹೋಗಿರುವ ಸಾಧ್ಯತೆ ಇದೆ ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದ್ದುದನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು.

ಹೆಲಿಕಾಪ್ಟರಿನಿಂದ ಇಳಿದ ತತ್ ಕ್ಷಣವೇ ದಿವಂಗತ ಪೈ ಅವರನ್ನು ಕತ್ರಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಕುಟುಂಬ ಸದಸ್ಯರ ಜೊತೆಗೆ ಸಬ್ ಇನ್ಸ್ಪೆಕ್ಟರ್ ಸಂಜಯ ಅಬ್ರೋಲ್ ಮತ್ತು ವಿಮಾನಯಾನ ಸಂಸ್ಥೆಯ ಇಬ್ಬರು ಸಿಬ್ಬಂದಿ ಇದ್ದರು ಎಂದೂ ಈ ವರದಿ ಹೇಳಿದ್ದುದನ್ನು ನ್ಯಾಯಾಲಯ ಪರಿಶೀಲಿಸಿತು.

ಪ್ರತ್ಯಕ್ಷದರ್ಶಿಗಳ ಹೇಳಿಕೆ ಮತ್ತು ದಾಖಲಾತಿಗಳ ಪರೀಕ್ಷೆಯಿಂದ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯಿಂದ ಅನುಚಿತ ವರ್ತನೆ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿಲ್ಲ. ಇಂತಹ ಘಟನೆ ಬಗ್ಗೆ ಯಾವುದೇ ಸಹ ಪ್ರಯಾಣಿಕರೂ ಹೇಳಿಕೆ ನೀಡಿಲ್ಲ ಎಂದೂ ಹೇಳಿರುವ ವರದಿ, ಉಭಯ ಸಿಬ್ಬಂದಿಗೂ ಭವಿಷ್ಯದಲ್ಲಿ ಪ್ರಯಾಣಿಕರ ಜೊತೆಗೆ ಎಚ್ಚರಿಕೆಯಿಂದ ವರ್ತಿಸುವಂತೆ ಸೂಚಿಸಿದ್ದನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು.

ಪ್ರತಿವಾದಿ ಸಂಸ್ಥೆಯ ಸಿಬ್ಬಂದಿ ಬಗ್ಗೆ ಮಾಡಿದ ತಮ್ಮ ಗಂಭೀರ ಆರೋಪವನ್ನು ಸಾಬೀತು ಪಡಿಸುವಂತಹ ಸ್ವತಂತ್ರ ಸಾಕ್ಷ್ಯಾಧಾರವನ್ನು ಕೂಡಾ ಅರ್ಜಿದಾರರು ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿವಾದಿ ವಿಮಾನಯಾನ ಸಂಸ್ಥೆಯಿಂದ ಸೇವಾಲೋಪ ಆಗಿದೆ ಎಂಬುದನ್ನು ಸಾಬೀತು ಪಡಿಸುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆ ಎಂದು ಹೇಳಿದ ನ್ಯಾಯಾಲಯ ಅರ್ಜಿಯನ್ನು ವಜಾ ಮಾಡಿ, ಖಟ್ಲೆ ವೆಚ್ಚವನ್ನು ಉಭಯ ಕಕ್ಷಿದಾರರು ಸ್ವತಃ ಭರಿಸಬೇಕು ಎಂದು ತೀರ್ಪು ನೀಡಿತು.

No comments:

Advertisement