ಇಂದಿನ ಇತಿಹಾಸ
ಏಪ್ರಿಲ್ 13
ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ನಡೆದ ದಿನ. ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಇ. ಡೈಯರ್ ನೇತೃತ್ವದಲ್ಲಿ ಬ್ರಿಟಿಷ್ ಪಡೆಗಳು ಅಮೃತಸರದ ಜಲಿಯನ್ ವಾಲಾ ಬಾಗ್ ನಲ್ಲಿ ಸಭೆ ಸೇರಿದ್ದ 10,000ಕ್ಕೂ ಹೆಚ್ಚು ಮಂದಿ ಪುರುಷರು, ಮಹಿಳೆಯರು, ಮಕ್ಕಳ ಮೇಲೆ 15 ನಿಮಿಷಗಳ ಕಾಲ ಗುಂಡಿನ ಮಳೆಗರೆದವು. ಕನಿಷ್ಠ 379 ಜನ ಮೃತರಾಗಿ 1200ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈ ಹತ್ಯಾಕಾಂಡ ಭಾರತೀಯರ ಸ್ವಾತಂತ್ರ್ಯ ಹೋರಾಟದ ಕೆಚ್ಚನ್ನು ಇನ್ನಷ್ಟು ಹೆಚ್ಚಿಸಿತು.
2007: ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯ ಅವಧಿಯೊಳಗೆ 25 ಮಂದಿಗೆ ಅಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡುವ ಮೂಲಕ ಜಯದೇವ ಹೃದ್ರೋಗ ಕೇಂದ್ರವು ರಾಷ್ಟ್ರೀಯ ದಾಖಲೆ ಮಾಡಿತು ಎಂದು ಕೇಂದ್ರದ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಪ್ರಕಟಿಸಿದರು.
2007: ಪ್ರಸ್ತುತ ಸಾಲಿನ ಅನುಪಮಾ ನಿರಂಜನ ಪ್ರಶಸ್ತಿಗೆ ಲೇಖಕಿ ಆನಂದಿ ಸದಾಶಿವರಾವ್ ಆಯ್ಕೆಯಾದರು.
2007: 2006-07 ಸಾಲಿನ ಪ್ರೌಢಶಾಲಾ ಸಹಾಯಕ ಶಿಕ್ಷಕರ (ಗ್ರೇಡ್-2) ನೇಮಕಾತಿಯಲ್ಲಿ ಅಂಗವಿಕಲರಿಗೆ ಶಾಸನಬದ್ಧವಾಗಿ ಸಿಗಬೇಕಾದ ಮೀಸಲಾತಿ ಸೌಲಭ್ಯ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿತು.
2007: ಆಸ್ತಿ ವಿವರ ಸಲ್ಲಿಸದ ಶಾಸಕರ ವಿರುದ್ಧ ಕಾನೂನು ಹೋರಾಟ ಮುಂದುವರೆಸಿದ ಲೋಕಾಯುಕ್ತರು ಬೆಂಗಳೂರಿನಲ್ಲಿ ವಿಧಾನಸೌಧದ ಮೊಗಸಾಲೆಯಲ್ಲಿ ಎಲ್ಲರಿಗೂ ನೋಟಿಸ್ ಜಾರಿಮಾಡಿದರು.
2006: ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಬಡ ಮಹಿಳೆಯರಿಗಾಗಿ ಮೊದಲ ಬಾರಿ ಜಾರಿಗೆ ತರಲಾಗಿರುವ ಸೂಕ್ಷ್ಮ ಪಿಂಚಣಿ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಉದ್ಘಾಟಿಸಿದರು. ಶ್ರೀ ಮಹಿಳಾ ಸೇವಾ ಸಹಕಾರಿ ಬ್ಯಾಂಕ್ (ಸೇವಾ ಬ್ಯಾಂಕ್) ತನ್ನ ಎಂಟು ಲಕ್ಷ ಸದಸ್ಯರಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಬ್ಯಾಂಕ್ ಸಂಸ್ಥಾಪಕಿ ಇಳಾ ಭಟ್ ಅವರ ಚಿಂತನೆಯ ಮೂಸೆಯಲ್ಲಿ ರೂಪುಗೊಂಡ ಈ ಯೋಜನೆಗೆ ಆರಂಭದ ದಿನವೇ 25,025 ಮಹಿಳೆಯರು ಸದಸ್ಯರಾದರು.
2006: ಕನ್ನಡದ ಮೇರುನಟ ಡಾ. ರಾಜ್ ಕುಮಾರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಚಿತ್ರಾ ಪೌರ್ಣಮಿಯಂದು ಸಂಜೆ 5.40ರ ಗೋಧೂಳಿ ಲಗ್ನದಲ್ಲಿ ಅವರ ಕರ್ಮಭೂಮಿ ಕಂಠೀರವ ಸ್ಟುಡಿಯೋ ಆವರಣದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಸಂಭವಿಸಿದ ಹಿಂಸಾಚಾರ, ಪೊಲೀಸ್ ಗೋಲಿಬಾರಿಗೆ 8 ಜನ ಬಲಿಯಾದರು, ಬಸ್ ಮತ್ತಿತರ ವಾಹನಗಳು ಬೆಂಕಿಗೆ ಆಹುತಿಯಾದವು.
2006: ಒರಿಸ್ಸಾದ ಬಾಲಸೋರ್ ಸಮೀಪದ ಚಂಡೀಪುರದಲ್ಲಿ ಪಿನಾಕ ಬಹುಬ್ಯಾರೆಲ್ ರಾಕೆಟ್ ವ್ಯವಸ್ಥೆಯನ್ನು ಎರಡು ಬಾರಿ ಯಶಸ್ವಿಯಾಗಿ ಪ್ರಯೋಗಿಸಲಾಯಿತು. ಸೇನಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಪಿನಾಕವನ್ನು ಅಭಿವೃದ್ಧಿ ಪಡಿಸಿದೆ. ಅತಿ ಶೀಘ್ರವಾಗಿ ಚಲಿಸಬಲ್ಲ ಈ ರಾಕೆಟ್ ವ್ಯವಸ್ಥೆ 30 ಕಿ.ಮೀ. ವ್ಯಾಪ್ತಿ ಮೀರಿ ಗುರಿ ಇಡುವ ಹಾಗೂ ಬಂಕರುಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಇದು 44 ಸೆಕೆಂಡುಗಳಲ್ಲಿ 144 ರಾಕೆಟ್ಟುಗಳನ್ನು ಚಿಮ್ಮಿಸಬಲ್ಲುದು.
2006: ಜಾರ್ಖಂಡಿನ ರಾಂಚಿಯ ತಪೋವನ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಐದು ದಿನಗಳ ಭಾರತ ಸುರಕ್ಷಾ ಯಾತ್ರೆಯ ಎರಡನೇ ಸುತ್ತನ್ನು ಆರಂಭಿಸಿದರು.
1999: `ಡಾ. ಡೆತ್' ಎಂದೇ ಕುಖ್ಯಾತಿ ಪಡೆದ ಜ್ಯಾಕ್ ಕೆರ್ವೋರ್ಕಿಯನ್ ಗೆ ಮಿಚಿಗನ್ನ ಪೊಂಟಿಯಾಕಿನಲ್ಲಿ 10ರಿಂದ 25 ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಯಿತು. 1998ರಲ್ಲಿ ಥಾಮಸ್ ಯೌಕ್ ಎಂಬ ವ್ಯಕ್ತಿಯನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿ ಅದನ್ನು ವಿಡಿಯೋಟೇಪ್ ಮಾಡಿ ಟೆಲಿವಿಷನ್ನಿನಲ್ಲಿ ಪ್ರಸಾರ ಮಾಡಿದುದಕ್ಕಾಗಿ ಈತನಿಗೆ ಈ ಶಿಕ್ಷೆ ವಿಧಿಸಲಾಯಿತು.
1968: ಕಲಾವಿದ ಗೋವಿಂದರಾಜ ಸ್ವಾಮಿ ಜನನ.
1963: ಗ್ಯಾರಿ ಕ್ಯಾಸ್ಪರೋವ್ ಹುಟ್ಟಿದ ದಿನ. ರಷ್ಯಾದ ಚೆಸ್ ಮಾಸ್ಟರ್ ಆದ ಇವರು 1985ರಲ್ಲಿ ವಿಶ್ವ ಚೆಸ್ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1951: ಗಾನಕೋಗಿಲೆ ಎನಿಸಿದ ಭಾಗ್ಯಮೂರ್ತಿ ಅವರು ಸುಬ್ರಹ್ಮಣ್ಯ ಶಾಸ್ತ್ರಿ- ರಂಗನಾಯಕಮ್ಮ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.
1948: ಕಲಾವಿದ ಜಿ.ಎಂ. ಹೆಗಡೆ ಜನನ.
1919: ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ನಡೆದ ದಿನ. ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಇ. ಡೈಯರ್ ನೇತೃತ್ವದಲ್ಲಿ ಬ್ರಿಟಿಷ್ ಪಡೆಗಳು ಅಮೃತಸರದ ಜಲಿಯನ್ ವಾಲಾ ಬಾಗ್ ನಲ್ಲಿ ಸಭೆ ಸೇರಿದ್ದ 10,000ಕ್ಕೂ ಹೆಚ್ಚು ಮಂದಿ ಪುರುಷರು, ಮಹಿಳೆಯರು, ಮಕ್ಕಳ ಮೇಲೆ 15 ನಿಮಿಷಗಳ ಕಾಲ ಗುಂಡಿನ ಮಳೆಗರೆದವು. ಕನಿಷ್ಠ 379 ಜನ ಮೃತರಾಗಿ 1200ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈ ಹತ್ಯಾಕಾಂಡ ಭಾರತೀಯರ ಸ್ವಾತಂತ್ರ್ಯ ಹೋರಾಟದ ಕೆಚ್ಚನ್ನು ಇನ್ನಷ್ಟು ಹೆಚ್ಚಿಸಿತು.
1772: ವಾರನ್ ಹೇಸ್ಟಿಂಗ್ಸ್ ನನ್ನು ಬಂಗಾಳದ ಗವರ್ನರ್ ಆಗಿ ನೇಮಿಸಲಾಯಿತು.
1772: ಅಮೆರಿಕದ ಗಡಿಯಾರ ತಯಾರಕ ಎಲಿ ಟೆರ್ರಿ (1772-1852) ಹುಟ್ಟಿದ ದಿನ. ಅಮೆರಿಕದಲ್ಲಿ ಬೃಹತ್ ಪ್ರಮಾಣದಲ್ಲಿ ಹೊಸ ವಿನ್ಯಾಸದ ಗಡಿಯಾರಗಳನ್ನು ತಯಾರಿಸಿದ ಈತ `ಹೆನ್ರಿ ಫೋರ್ಡ್ ಆಫ್ ಕ್ಲಾಕ್ಸ್' ಎಂಬ ಹೆಸರನ್ನು ಗಳಿಸಿದ.
1743: ಅಮೆರಿಕದ ಮೂರನೇ ಅಧ್ಯಕ್ಷ ಥಾಮಸ್ ಜೆಫರ್ ಸನ್ (1743-1826) ಜನ್ಮದಿನ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
(Picture courtesy: www.rediff.com)
No comments:
Post a Comment