Thursday, April 10, 2008

ಇಂದಿನ ಇತಿಹಾಸ History Today ಏಪ್ರಿಲ್ 10

ಇಂದಿನ ಇತಿಹಾಸ

ಏಪ್ರಿಲ್ 10

ಇಂದು ವಿಶ್ವ ಹೋಮಿಯೋಪಥಿ ದಿನ.ಸ್ಯಾಮ್ಯುಯೆಲ್ ಹ್ಯಾನಿಮನ್ (1755-1843) ಜನ್ಮದಿನ. ಜರ್ಮನಿಯ ವೈದ್ಯನಾದ ಈತ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯನ್ನು ಸ್ಥಾಪಿಸಿದ.

ಭಾರತದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಮುಂಬೈಯಲ್ಲಿ ತಮ್ಮ 99ನೇ ವಯಸ್ಸಿನಲ್ಲಿ ಮೃತರಾದರು.

2007: ಸಾಂಪ್ರದಾಯಿಕವಾಗಿ ಅಗ್ನಿಸ್ಪರ್ಶ ಮಾಡುವ ಮೂಲಕ ಬಹಿರಂಗವಾಗಿ ಅಂತ್ಯಕ್ರಿಯೆ ನೆರವೇರಿಸಲು ಅವಕಾಶ ನಿರಾಕರಿಸಿದ ಲಂಡನ್ನಿನ ಸ್ಥಳೀಯ ಅಧಿಕಾರಿಗಳ ನಿರ್ಧಾರದ ನ್ಯಾಯಾಂಗ ಪರಾಮರ್ಶೆಗೆ ಇಂಗ್ಲೆಂಡ್ ಹೈಕೋರ್ಟ್ ಒಪ್ಪಿಗೆ ನೀಡಿತು. ದೇವೇಂದ್ರ ಕುಮಾರ ಘಾಯ್ ಎಂಬ 68 ವರ್ಷದ ಅಸ್ವಸ್ಥ ಹಿಂದೂ ಒಬ್ಬರು ಈ ನಿಟ್ಟಿನಲ್ಲಿ ನಡೆಸಿದ ಯತ್ನಕ್ಕೆ ಹೈಕೋರ್ಟ್ ಒಪ್ಪಿಗೆ ನೀಡಿತು. ಈಶಾನ್ಯ ಇಂಗ್ಲೆಂಡಿನಲ್ಲಿ ಮಂಜೂರಾತಿ ಪಡೆದ ಮೊತ್ತ ಮೊದಲ ನಿವೇಶನದಲ್ಲಿ 4000 ವರ್ಷಗಳಷ್ಟು ಪುರಾತನ ಪರಂಪರೆಯಾದ ಅಗ್ನಿಸ್ಪರ್ಶದ ಮೂಲಕ ಅಂತ್ಯಕ್ರಿಯೆ ನೆರವೇರಿಸಲು ವರ್ಷದ ಹಿಂದೆ ನಡೆದಿದ್ದ ಯತ್ನವನ್ನು ಸ್ಥಳೀಯ ಆಡಳಿತವು `ಅಂತ್ಯಕ್ರಿಯೆ ಕಾನೂನಿನ ಉಲ್ಲಂಘನೆ ಆಗುತ್ತದೆ' ಎಂದು ಹೇಳಿ ನಿರ್ಬಂಧಿಸಿತ್ತು.

2007: ಅಮಾನತುಗೊಂಡ ಮುಖ್ಯನ್ಯಾಯಮೂರ್ತಿ ಇಫ್ತಿಕಾರ್ ಅಹ್ಮದ್ ಚೌಧರಿ ಅವರ ವಿರುದ್ಧ ವಿಚಾರಣೆ ನಡೆಸುತ್ತಿದ್ದ ಸರ್ವೋಚ್ಚ ನ್ಯಾಯಾಂಗ ಮಂಡಳಿಯ (ಎಸ್ ಜೆ ಸಿ) ಶಾಸನಬದ್ಧತೆಯನ್ನೇ ಪ್ರಶ್ನಿಸಿದ ಎರಡು ಅರ್ಜಿಗಳನ್ನು ಅಂಗೀಕರಿಸಿದ ಪಾಕಿಸ್ತಾನದ ಸುಪ್ರೀಂಕೋರ್ಟ್, ಅಧ್ಯಕ್ಷರ ಸಚಿವಾಲಯ ಹಾಗೂ ಕಾನೂನು ಸಚಿವಾಲಯಗಳಿಗೆ ನೋಟಿಸ್ ಜಾರಿ ಮಾಡಿತು.

2007: ಭಾರತೀಯ ಕಾರ್ಮಿಕರಿಗೆ ಕೆಲಸದ ಭದ್ರತೆ ಒದಗಿಸುವುದು, ಶೋಷಣೆಗೆ ತಡೆಹಾಕುವುದು, ವೇತನ ಖಾತರಿ ನೀಡುವುದು ಸೇರಿದಂತೆ ವಿವಿಧ ಸವಲತ್ತುಗಳ ಭರವಸೆಯನ್ನು ನೇಮಕಾತಿ ಕಾಲದಲ್ಲೇ ನೀಡಲು ಕ್ರಮ ಕೈಗೊಳ್ಳುವಂತಹ ಮಹತ್ವದ ಕಾರ್ಮಿಕ ಒಪ್ಪಂದ ಒಂದಕ್ಕೆ ಕುವೈತ್ ಮತ್ತು ಭಾರತ ಸಹಿ ಹಾಕಿದವು. ಈ ನಿಟ್ಟಿನ ತಿಳುವಳಿಕೆ ಪತ್ರಕ್ಕೆ ಭಾರತದ ಸಾಗರೋತ್ತರ ವ್ಯವಹಾರಗಳ ಸಚಿವ ವಯಲಾರ್ ರವಿ ಮತ್ತು ಕುವೈತ್ನ ಸಾಮಾಜಿಕ ವ್ಯವಹಾರಗಳು ಮತ್ತು ಕಾರ್ಮಿಕ ಸಚಿವ ಶೇಖ್ ಸಬಾ ಅಲ್ ಖಲೀದ್ ಅಲ್- ಹಮದ್ ಅಲ್ ಸಬಾ ಸಹಿ ಮಾಡಿದರು.

2006: ಉತ್ತರಪ್ರದೇಶದ ಮೀರತ್ನ ವಿಕ್ಟೋರಿಯಾ ಪಾರ್ಕಿನಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಗ್ರಾಹಕರ ವಸ್ತುಗಳ ವ್ಯಾಪಾರದ ಬ್ರಾಂಡ್ ಇಂಡಿಯಾ ಮೇಳದ ಕೊನೆಯ ದಿನ ಅಗ್ನಿ ಅನಾಹುತ ಸಂಭವಿಸಿ 50ಕ್ಕೂ ಹೆಚ್ಚು ಜನ ಮೃತರಾಗಿ 115ಕ್ಕೂ ಹೆಚ್ಚು ಜನ ಗಾಯಗೊಂಡರು. ಶಾರ್ಟ್ ಸರ್ಕಿಟಿನಿಂದ ಈ ದುರಂತ ಸಂಭವಿಸಿತು.

2006: ದಿನಗೂಲಿ ಕಾರ್ಮಿಕರಿಗೆ ಸರ್ಕಾರದಲ್ಲಿ ಕಾಯಂ ಉದ್ಯೋಗ ಪಡೆಯುವ ಹಕ್ಕು ಇಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ನೇತೃತ್ವದ ಐವರು ಸದಸ್ಯರ ಪೀಠ ಈ ತೀರ್ಪು ನೀಡಿದ್ದು, ಇದರಿಂದ ಕರ್ನಾಟಕದ ಸುಮಾರು 17,000 ದಿನಗೂಲಿ ನೌಕರರ ಭವಿಷ್ಯ ಅತಂತ್ರ ಸ್ಥಿತಿಗೆ ಸಿಲುಕಿತು. 15 ವರ್ಷಗಳಿಂದ ದಿನಗೂಲಿ ನೌಕರರು ನಡೆಸುತ್ತಾ ಬಂದಿದ್ದ ಹೋರಾಟಕ್ಕೂ ಹಿನ್ನಡೆಯಾಯಿತು.

2006: ಕೀನ್ಯ ಸೇನಾ ಪಡೆಗೆ ಸೇರಿದ ವಿಮಾನವೊಂದು ಬೆಟ್ಟಕ್ಕೆ ಅಪ್ಪಳಿಸಿದ ಪರಿಣಾಮವಾಗಿ ಅದರಲ್ಲಿದ್ದ 14 ಮಂದಿ ಮೃತರಾದರು.

2006: ರಾಯಬರೇಲಿ ಉಪ ಚುನಾವಣೆಯ ಹಿನ್ನೆಲಯಲ್ಲಿ ಸರ್ಕಾರದಿಂದ ಅನುದಾನ ಪಡೆಯುವ ನೆಹರೂ- ಗಾಂಧಿ ಕುಟುಂಬದ ಸಂಘಟನೆಗಳು ಸೇರಿದಂತೆ ಎಲ್ಲ ಸಾಮಾಜಿಕ, ಸಾಂಸ್ಕತಿಕ ಸಂಘಗಳಿಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜೀನಾಮೆ ನೀಡಿದರು.

2006: ಕೃಷ್ಣಮೃಗ ಬೇಟೆಯಾಡಿದ ಅಪರಾಧಕ್ಕಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಕಜೋಧಪುರ ನ್ಯಾಯಾಲಯವು ಐದು ವರ್ಷಗಳ ಕಠಿಣ ಸಜೆ ವಿಧಿಸಿತು. ತೀರ್ಪು ನೀಡಿದ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಬ್ರಿಜೇಂದ್ರ ಕುಮಾರ ಜೈನ್ ಅವರು 25,000 ರೂಪಾಯಿಗಳ ದಂಡವನ್ನೂ ವಿಧಿಸಿದರು. ತೀರ್ಪು ಹೊರಬಿದ್ದ ಕೂಡಲೇ ಸಲ್ಮಾನ್ ಖಾನ್ ಅವರನ್ನು ವಶಕ್ಕೆ ತೆಗೆದುಕೊಂಡು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು. 1998ರಲ್ಲಿ ಸಲ್ಮಾನ್ ಖಾನ್ ಮತ್ತು ಇತರ ಐವರು ಅಕ್ರಮವಾಗಿ ಬೇಟೆಯಾಡಿ ಕೃಷ್ಣಮೃಗವನ್ನು ಹತ್ಯೆ ಮಾಡಿದ ಆರೋಪಕ್ಕೆ ಒಳಗಾಗಿದ್ದರು.

2006: ಗಿನ್ನೆಸ್ ವಿಶ್ವ ದಾಖಲೆಗಳ ಪುಸ್ತಕದಲ್ಲಿ ಜಗತ್ತಿನ ಅತಿ ಚಿಕ್ಕ ವಯಸ್ಸಿನ ನಿರ್ದೇಶಕ ಎಂಬುದಾಗಿ ಹೆಸರು ನಮೂದಿಸಲು ಯತ್ನಿಸುತ್ತಿರುವ ಬೆಂಗಳೂರಿನ ಒಂಬತ್ತು ವರ್ಷದ ಬಾಲಕ ಕಿಷನ್ ಶ್ರೀಕಾಂತ್ ತನ್ನ 'ಸಾಧನೈ ಕೇರಾಫ್ ಪ್ಲಾಟ್ ಫಾರಂ' ತ್ರಿಭಾಷಾ ಚಿತ್ರದ ತಮಿಳು ಆವೃತ್ತಿಗಾಗಿ ಚಿತ್ರೀಕರಣ ಆರಂಭಿಸಿದ.

2000: ಜುಂಪಾ ಲಾಹಿರಿ ಅವರು ತಮ್ಮ 9 ಸಣ್ಣ ಕಥೆಗಳ ಸಂಗ್ರಹ `ಇಂಟರ್ ಪ್ರೆಟರ್ ಆಫ್ ಮ್ಯಾಲಡೀಸ್' ಕೃತಿಗಾಗಿ ಪುಲಿಟ್ಜರ್ ಪ್ರಶಸ್ತಿ ಗಳಿಸಿದರು.

1995: ಭಾರತದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಮುಂಬೈಯಲ್ಲಿ ತಮ್ಮ 99ನೇ ವಯಸ್ಸಿನಲ್ಲಿ ಮೃತರಾದರು.

1982: ಭಾರತದ ಇನ್ ಸಾಟ್-1ಎ ಉಪಗ್ರಹವನ್ನು ಅಮೆರಿಕದ ಡೆಲ್ಟಾ ರಾಕೆಟ್ ಬಾಹ್ಯಾಕಾಶಕ್ಕೆ ಹಾರಿಸಿತು. ಇದು ಜಗತ್ತಿನ ಮೊತ್ತ ಮೊದಲ ಹವಾಮಾನ ಮತ್ತು ಸಂಪರ್ಕ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

1959: ಕಲಾವಿದೆ ಜ್ಯೋತಿ ಜನನ.

1957: ಶ್ರೀರಾಮ ನವಮಿ ಉತ್ಸವ ಮುಗಿಸಿ ಭದ್ರಾಚಲಂನಿಂದ ವಾಪಸಾಗುತ್ತಿದ್ದ ಭಕ್ತರ ದೋಣಿಯೊಂದು ಹೈದರಾಬಾದ್ ಸಮೀಪ ಗೋದಾವರಿ ನದಿಯಲ್ಲಿ ಮಗುಚಿ 70 ಜನ ಮೃತರಾದರು. ದೋಣಿಯಲ್ಲಿ ಸುಮಾರು 100 ಜನರಿದ್ದರು.

1943: ಕಲಾವಿದ ಕೃಷ್ಣಾನಂದ ರಾಜು ಜನನ.

1930: ಕಲಾವಿದ ಎಂ. ವಾದಿರಾಜ ಜನನ.

1924: ಕಲಾವಿದ ವೇಣುಗೋಪಾಲ್ ಬಿ.ಡಿ. ಜನನ.

1917: ಖ್ಯಾತ ಪಿಟೀಲು ವಿದ್ವಾಂಸ ಬಿ.ಆರ್. ಗೋವಿಂದಸ್ವಾಮಿ (10-4-1917ರಿಂದ 25-1-1966) ಅವರು ರಾಮಯ್ಯ- ನಾಗಮ್ಮ ದಂಪತಿಯ ಮಗನಾಗಿ ಚಿಕ್ಕಬಳ್ಳಾಪುರದಲ್ಲಿ ಜನಿಸಿದರು.

1875: ಸ್ವಾಮಿ ದಯಾನಂದ ಸರಸ್ವತಿ ಅವರು ಆರ್ಯ ಸಮಾಜದ ಮೊದಲ ಶಾಖೆಯನ್ನು ಮುಂಬೈಯಲ್ಲಿ ಸ್ಥಾಪಿಸಿದರು. ವೇದಗಳನ್ನು ಹಿಂದೂ ನಂಬಿಕೆ ಹಾಗೂ ಆಚರಣೆಗಳ ಆಧಾರವಾಗಿ ಪುನಃಸ್ಥಾಪನೆ ಮಾಡುವ ಉದ್ದೇಶ ಇದಕ್ಕಿತ್ತು. ವೇದಗಳ ಜೊತೆಗೇ ಶಿಕ್ಷಣಕ್ಕೂ ಮಹತ್ವ ನೀಡುವ ಮೂಲಕ ಆಧುನಿಕ ಭಾರತದ ನಿರ್ಮಾಣದಲ್ಲಿ ಆರ್ಯಸಮಾಜ ಮಹತ್ವದ ಪಾತ್ರ ವಹಿಸಿತು.

1858: ಲಂಡನ್ನಿನ ಪೂರ್ವಭಾಗದ ವೈಟ್ ಚಾಪೆಲ್ ನಲ್ಲಿ ಜಗತ್ತಿನ ಖ್ಯಾತ ಗಂಟೆ `ಬಿಗ್ ಬೆನ್' ನ್ನು ಎರಕಹೊಯ್ಯಲಾಯಿತು. 13.5 ಟನ್ ತೂಕದ ಈ ಗಂಟೆಗೆ ಆಗಿನ ಕಮೀಷನರ್ ಸರ್ ಬೆಂಜಮಿನ್ ಹಾಲ್ ಅವರ ಹೆಸರನ್ನು ಇಡಲಾಯಿತು. ಅತ್ಯಂತ ಉದ್ದನೆಯ ವ್ಯಕ್ತಿಯಾಗಿದ್ದ ಬೆಂಜಮಿನ್ `ಬಿಗ್ ಬೆನ್' ಎಂದೇ ಖ್ಯಾತಿ ಪಡಿದಿದ್ದರು.

1849: ವಾಲ್ಟೇರ್ ಹಂಟ್ ಅವರಿಗೆ `ಸೇಫ್ಟಿ ಪಿನ್'ಗೆ ಪೇಟೆಂಟ್ ಲಭಿಸಿತು. ತನ್ನ 15 ಡಾಲರ್ ಸಾಲವನ್ನು ತೀರಿಸುವ ಸಲುವಾಗಿ ಹಂಟ್ ಈ `ಸೇಫ್ಟಿ ಪಿನ್' ಸಂಶೋಧಿಸಿದನಂತೆ. ಇದನ್ನು ರೂಪಿಸಲು ಆತನಿಗೆ ತಗುಲಿದ ಸಮಯ ಕೇವಲ ಮೂರು ಗಂಟೆ. ಈ ಐಡಿಯಾವನ್ನು ಈತ 400 ಡಾಲರುಗಳಿಗೆ ಮಾರಾಟ ಮಾಡಿದ.

1847: ಜೋಸೆಫ್ ಪುಲಿಟ್ಜರ್ (1847-1911) ಹುಟ್ಟಿದ ದಿನ. ಅಮೆರಿಕಾದ ಖ್ಯಾತ ವೃತ್ತಪತ್ರಿಕಾ ಸಂಪಾದಕನಾದ ಈತ `ಪುಲಿಟ್ಜರ್ ಪ್ರಶಸ್ತಿ' ಹುಟ್ಟುಹಾಕಿ 1917ರಿಂದ ಪ್ರತಿವರ್ಷ ಅದನ್ನು ನೀಡುತ್ತಾ ಬಂದ.

1755: ಸ್ಯಾಮ್ಯುಯೆಲ್ ಹ್ಯಾನಿಮನ್ (1755-1843) ಜನ್ಮದಿನ. ಜರ್ಮನಿಯ ವೈದ್ಯನಾದ ಈತ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯನ್ನು ಸ್ಥಾಪಿಸಿದ .

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement