Monday, April 14, 2008

ಇಂದಿನ ಇತಿಹಾಸ History Today ಏಪ್ರಿಲ್ 14

ಇಂದಿನ ಇತಿಹಾಸ

ಏಪ್ರಿಲ್ 14

ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಭಾರತೀಯ ನೆಲದಲ್ಲಿ ಮೊತ್ತ ಮೊದಲ ಬಾರಿಗೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು. ಇಂಫಾಲಿನಿಂದ 45 ಕಿ.ಮೀ. ದೂರದ ಮೊಯಿರಂಗ್ ಹೆಸರಿನ ಈ ಸ್ಥಳದಲ್ಲಿ ಈಗ ಭಾರತೀಯ ರಾಷ್ಟ್ರೀಯ ಸೇನೆ (ಇಂಡಿಯನ್ ನ್ಯಾಷನಲ್ ಆರ್ಮಿ) ಸ್ಮಾರಕ ಸಭಾಂಗಣ ಹಾಗೂ ವಾರ್ ಮ್ಯೂಸಿಯಂ ಇದೆ.

2007: ಭ್ರಷ್ಟಾಚಾರ ಪ್ರಕರಣದಲ್ಲಿ `ಸಾರ್ವಜನಿಕರ ಸೇವಕರ' ಮೇಲೆ ಮೊಕ್ದದಮೆ ಹೂಡಲು ಪೂರ್ವಾನುಮತಿಯ ಅಗತ್ಯ ಇಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ಸಾರ್ವಜನಿಕ ರಂಗದಲ್ಲಿ ಮಿತಿ ಮೀರುತ್ತಿರುವ ಲಂಚಗುಳಿತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇದು ಗಮನಾರ್ಹವಾದ ತೀರ್ಪು. 1988ರ ಭ್ರಷ್ಟಾಚಾರ ತಡೆ ಕಾನೂನಿನ ಅಡಿ ದಾಖಲಾಗುವ ಪ್ರಕರಣದಲ್ಲಿ ಪೂರ್ವಾನುಮತಿ ತನ್ನಷ್ಟಕ್ಕೆ ತಾನೇ ಅಂತರ್ಗತವಾಗಿದೆ. ಆದ್ದರಿಂದ ಅನುಮತಿ ನೀಡಲಾಗಿದೆಯೇ ಇಲ್ಲವೇ ಎನ್ನುವುದು ಮಹತ್ವ ಪಡೆಯುವುದಿಲ್ಲ ಎಂದು ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಮತ್ತು ಎಚ್. ಎಸ್. ಕಪಾಡಿಯಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿತು.

2007: ಶಿಯಾ ಜನಾಂಗದವರ ಪವಿತ್ರ ನಗರವಾದ ಕರ್ಬಾಲದಲ್ಲಿನ ಬಸ್ಸು ನಿಲ್ದಾಣದಲ್ಲಿ ಕಾರು ಬಾಂಬ್ ಸ್ಫೋಟ ಸಂಭವಿಸಿ ಕನಿಷ್ಠ 56 ಜನರು ಮೃತರಾಗಿ, ಇತರ 70ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚು. ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮೊಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರ ಪವಿತ್ರ ಸಮಾಧಿ ಸ್ಥಳದಿಂದ ಕೇವಲ 200 ಮೀಟರ್ಗಳ ಅಂತರದಲ್ಲಿ ಈ ಸ್ಫೋಟ ನಡೆಯಿತು. ಕರ್ಬಾಲ ನಗರವು ಬಾಗ್ದಾದಿನಿಂದ 80 ಕಿ.ಮೀ. ದೂರದಲ್ಲಿದೆ.

2007: ಮಾಧ್ಯಮಗಳಲ್ಲಿ ಬಹುಚರ್ಚಿತ ಪ್ರೇಮ ಪ್ರಸಂಗ ಬ್ರಿಟನ್ನಿನ ರಾಜಕುಮಾರ ವಿಲಿಯಮ್ಸ್ ಮತ್ತು ಕೇಟ್ ಮಿಡ್ಲ್ಟನ್ರದ್ದು. ಆದರೆ ಈಗ ಈ ಪ್ರೇಮ ಬಾಂಧವ್ಯ ಮುರಿದುಬಿದ್ದಿದ್ದು, ಬ್ರಿಟನ್ನ ಸನ್ ಪತ್ರಿಕೆ ಇವರ ವೈಮನಸ್ಸನ್ನು ಪ್ರಕಟಿಸಿತು. 24 ಹರೆಯದ ವಿಲಿಯಮ್ಸ್ ಮತ್ತು 25 ಹರೆಯದ ಕೇಟ್ ಕಳೆದ ತಿಂಗಳಷ್ಟೇ ಸ್ವಿತ್ಜರ್ಲೆಂಡಿನಲ್ಲಿ ತಬ್ಬಿಕೊಳ್ಳುತ್ತ ಮುತ್ತಿಡುತ್ತ ಚಳಿಗಾಲದ ರಜೆಯನ್ನು ಕಳೆದಿದ್ದರು.. ಮಧ್ಯಮ ವರ್ಗದ ವಾಣಿಜ್ಯೋದ್ಯಮಿಯೊಬ್ಬರ ಮಗಳಾದ ಕೇಟ್ ತನ್ನ ಫ್ಯಾಷನ್ ಉಡುಗೆ ತೊಡುಗೆಗಳಿಂದ ಜನಪ್ರಿಯಳಾಗಿದ್ದಳು. ಬಹುತೇಕ ಜನರು ಕೇಟ್ ರನ್ನು ರಾಣಿಯ ಸ್ವರೂಪದಲ್ಲಿ ಸ್ವೀಕರಿಸಿದ್ದರು..

2007: ಇತ್ತೀಚೆಗೆ ಮಹಿಳೆಯರನ್ನು ತೀವ್ರವಾಗಿ ಕಾಡುತ್ತಿರುವ ಸ್ತನ ಕ್ಯಾನ್ಸರಿಗೆ ಯೋಗದ ಮೂಲಕ ಸುಲಭವಾಗಿ ಮದ್ದು ಕಂಡುಕೊಂಡು ಪರಿಣಾಮಕಾರಿಯಾದ ಫಲಿತಾಂಶ ಪಡೆಯಬಹುದು ಎಂಬುದು ಬೆಳಕಿಗೆ ಬಂದಿತು. ಸ್ತನ್ಯ ಕ್ಯಾನರಿಗೆ ತುತ್ತಾಗಿರುವ ಮಹಿಳೆಯರಿಗೆ ಯೋಗದ ಕೆಲವು ನಿರ್ದಿಷ್ಟ ಆಸನಗಳನ್ನು ಪ್ರತಿದಿನ ಅಭ್ಯಾಸ ಮಾಡಿಸಿದಾಗ ಅದು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದನ್ನು ನಾರ್ತ್ ಕರೊಲಿನಾದ ಸಂಶೋಧಕರು ಪತ್ತೆ ಹಚ್ಚಿದರು. ನಾರ್ತ್ ಕರೊಲಿನಾದ ದುರ್ಹಮ್ ಪ್ರದೇಶದಲ್ಲಿರುವ ಡ್ಯೂಕ್ ಯುನಿವರ್ಸಿಟಿ ಆಫ್ ಮೆಡಿಕಲ್ ಸೆಂಟರಿನಲ್ಲಿ ಮಹಿಳೆಯರ ಸ್ತನ್ಯ ಕ್ಯಾನ್ಸರ್ ಮೇಲೆ ಯೋಗದ ಪರಿಣಾಮ ಕುರಿತಂತೆ ಕೈಗೊಂಡ್ದಿದ ಸಂಶೋಧನೆ ಯಶಸ್ವಿಯಾಗಿದೆ ಎಂದು ಅಧ್ಯಯನ ತಂಡದ ಮುಖ್ಯಸ್ಥ ಡಾ. ಜೇಮ್ಸ್ ಡಬ್ಲ್ಯೂ. ಕಾರ್ಲ್ ಸನ್ ಈ ದಿನ ಪ್ರಕಟಿಸಿದರು. ಸ್ತನ ಕಾನ್ಸರ್ ಬರುವುದಕ್ಕೆ ಮುಂಚೆಯೇ ಮಹಿಳೆ ಆ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಉತ್ತಮ. ಸ್ತನ ಕ್ಯಾನ್ಸರ್ ಇರುವ ಸುಮಾರು 59 ವರ್ಷದ 13 ಮಹಿಳೆಯರಿಗೆ ವಾರಕ್ಕೊಮ್ಮೆ ಯೋಗ ತರಬೇತಿ ನೀಡಲಾಗುತ್ತಿತ್ತು. ಇದೇ ರೀತಿ ಸತತವಾಗಿ 8 ವಾರಗಳ ಕಾಲ ಮಾಡಿದಾಗ ಅವರಲ್ಲಿ ನೋವು ಕಡಿಮೆಯಾಗಿ ಚೈತನ್ಯ ಕಂಡು ಬರತೊಡಗಿತು. ಇದು ನೋವು ನಿರೋಧಕ ಶಕ್ತಿಯ ಪ್ರಮಾಣವನ್ನೂ ಹೆಚ್ಚು ಮಾಡಿತ್ತು ಎಂದು ಸಂಶೋಧನ ತಂಡ ಕಂಡು ಹಿಡಿಯಿತು. ಪ್ರತಿದಿನ ಯೋಗ ಮಾಡುವುದರಿಂದ ಸ್ತನ ಕ್ಯಾನ್ಸರ್ ಪೀಡಿತ ಮಹಿಳೆಯರು ಪರಿಣಾಮಕಾರಿ ಫಲಿತಾಂಶ ಪಡೆಯಬಹುದು. `ಯೋಗದಿಂದ ನೋವು. ಆಯಾಸ ಕಡಿಮೆಯಾಗಿ ದೇಹಕ್ಕೆ ಹೆಚ್ಚು ಉತ್ಸಾಹ ಉಂಟಾಗುತ್ತದೆ' ಎಂಬುದು ಕಾರ್ಲ್ ಸನ್ ಅಭಿಪ್ರಾಯ..

2006: ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ರಾಮಾಯಣ ಮಹಾಸತ್ರವನ್ನು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ನ್ಯಾಸ ಸಮಿತಿ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್ ಉದ್ಘಾಟಿಸಿದರು. ರಾಮಚಂದ್ರಾಪುರ ಮಠದ ಸ್ವಾಮೀಜಿ ಶ್ರೀ ರಾಘವೇಶ್ವರ ಭಾರತೀ ಅವರು ಖ್ಯಾತ ಸಾಹಿತಿ ಎಸ್ .ಎಲ್. ಭೈರಪ್ಪ ಅವರಿಗೆ ಪ್ರಥಮ ಪುರುಷೋತ್ತಮ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ವಾಲ್ಮೀಕಿ ರಾಮಾಯಣದ ಸಾರವನ್ನು ಶ್ರೀಸಾಮಾನ್ಯರಿಗೆ ಬಿತ್ತುವ ಉದ್ದೇಶದ ಇಂತಹ ಕಾರ್ಯಕ್ರಮ ಇತಿಹಾಸದಲ್ಲಿ ಇದೇ ಪ್ರಥಮ.

2006: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಎ.ಬಿ.ಎ. ಘನಿಖಾನ್ ಚೌಧರಿ ಅವರು ಕೋಲ್ಕತ್ತಾದಲ್ಲಿ ನಿಧನರಾದರು.

2006: ದೆಹಲಿಯ ಜಾಮಾ ಮಸೀದಿ ಸಂಕೀರ್ಣದಲ್ಲಿ ಎರಡು ಸ್ಫೋಟಗಳು ಸಂಭವಿಸಿ 13 ಜನ ಗಾಯಗೊಂಡರು. ಆದರೆ ಮಸೀದಿಗೆ ಯಾವುದೇ ಹಾನಿ ಉಂಟಾಗಲಿಲ್ಲ.

1965: ಕಲಾವಿದೆ ಪ್ರತಿಭಾ ಟಿ.ಎಸ್. ಜನನ.

1951: ಭಾರತದಲ್ಲಿ ದಕ್ಷಿಣ ರೈಲ್ವೇ ಸ್ಥಾಪನೆಗೊಂಡಿತು. ಇದು ಮೊತ್ತ ಮೊದಲ ವಲಯ ರೈಲ್ವೇ (ಝೋನಲ್ ರೈಲ್ವೇ) ಆಗಿದ್ದು, ಮದ್ರಾಸ್, ದಕ್ಷಿಣ ಮರಾಠಾ, ದಕ್ಷಿಣ ಭಾರತ ಮತ್ತು ಮೈಸೂರು ರಾಜ್ಯ ರೈಲ್ವೇಗಳನ್ನು ವಿಲೀನಗೊಳಿಸಿ ಈ ರೈಲ್ವೇ ವಲಯವನ್ನು ಸ್ಥಾಪಿಸಲಾಯಿತು.

1947: ಕಲಾವಿದ ಕಮಲಾಕ್ಷ ಪಿ. ಜನನ.

1944: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಭಾರತೀಯ ನೆಲದಲ್ಲಿ ಮೊತ್ತ ಮೊದಲ ಬಾರಿಗೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು. ಇಂಫಾಲಿನಿಂದ 45 ಕಿ.ಮೀ. ದೂರದ ಮೊಯಿರಂಗ್ ಹೆಸರಿನ ಈ ಸ್ಥಳದಲ್ಲಿ ಈಗ ಭಾರತೀಯ ರಾಷ್ಟ್ರೀಯ ಸೇನೆ (ಇಂಡಿಯನ್ ನ್ಯಾಷನಲ್ ಆರ್ಮಿ) ಸ್ಮಾರಕ ಸಭಾಂಗಣ ಹಾಗೂ ವಾರ್ ಮ್ಯೂಸಿಯಂ ಇದೆ.

1928: ಕರ್ನಾಟಕ ಸಾಂಪ್ರದಾಯಿಕ ಚಿತ್ರಕಲೆಗೆ ಬಂಗಾಳಿ ಕಲೆಯನ್ನು ಸಮ್ಮಿಶ್ರಣ ಮಾಡಿ ವಿನೂತನ ಶೈಲಿಯನ್ನು ರೂಪಿಸಿದ ಶಂಕರಗೌಡ ಅವರು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬೆಟ್ಟದೂರಿನಲ್ಲಿ ಜನಿಸಿದರು. ರೇಖಾಚಿತ್ರ, ಜಲವರ್ಣ, ನೆರಳು ಬೆಳಕಿನ ಕಲೆ, ತೈಲವರ್ಣ, ಭಾವಚಿತ್ರ ಮುಂತಾದುವುಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ಬೆಟ್ಟದೂರು 14ರ ವಯಸಿನಲ್ಲೇ ರಬೀಂದ್ರನಾಥ ಟ್ಯಾಗೋರ್, ಮಹಾತ್ಮ ಗಾಂಧಿ, ಸುಭಾಶ್ ಚಂದ್ರ ಬೋಸ್ ಅವರ ಭಾವಚಿತ್ರ ರಚಿಸಿದವರು.

1900: ಕಲಾವಿದ ಎಚ್.ಎಸ್. ಇನಾಮತಿ ಜನನ.

1891: ಭೀಮರಾವ್ ರಾಮ್ ಜಿ ಅಂಬೇಡ್ಕರ್ (ಡಾ. ಬಿ.ಆರ್. ಅಂಬೇಡ್ಕರ್) (1891-1956) ಜನ್ಮದಿನ. ಹರಿಜನರ ನಾಯಕರಾಗಿದ್ದ ಇವರು 1947-51ರ ಅವಧಿಯಲ್ಲಿ ಭಾರತ ಸರ್ಕಾರದ ಕಾನೂನು ಸಚಿವರಾಗಿದ್ದರು. ಭಾರತದ ಸಂವಿಧಾನ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಮುತ್ಸದ್ದಿ ಇವರು.

1889: ಅರ್ನಾಲ್ಡ್ (ಜೋಸೆಫ್) ಟಾಯ್ನಬೀ (1889-1975) ಹುಟ್ಟಿದ ದಿನ. ಇಂಗ್ಲಿಷ್ ಇತಿಹಾಸಕಾರನಾದ ಈತ `ಎ ಸ್ಟಡಿ ಆಫ್ ಹಿಸ್ಟರಿ' ಗ್ರಂಥದ ಮೂಲಕ ಖ್ಯಾತನಾದ.

1866: ಆನ್ ಸುಲ್ಲೀವಾನ್ ಮ್ಯಾಕೆ (1866-1936) ಹುಟ್ಟಿದ ದಿನ. ಅಮೆರಿಕಾದವಳಾದ ಈಕೆ ಕುರುಡಿ, ಕಿವುಡಿ, ಮೂಕಿಯಾಗಿದ್ದ ಹೆಲನ್ ಕೆಲ್ಲರ್ ನ ಶಿಕ್ಷಕಿ.

1828: ನಾಹ್ ವೆಬ್ಸ್ಟರ್ ತನ್ನ `ಅಮೆರಿಕನ್ ಡಿಕ್ಷನರಿ ಆಫ್ ಇಂಗ್ಲಿಷ್ ಲ್ಯಾಂಗ್ವೇಜ್'ನ ಮೊದಲ ಆವೃತ್ತಿಯನ್ನು ಪ್ರಕಟಿಸಿದ

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement