Friday, April 18, 2008

ಒಡನಾಟ.. Odanaata

On April 20, 2008, two books, one of S.R. Vijya Shankar's 'Odanata' with 26 pen pictures and 'Parigraha' collection essays in literary criticism by Prof.T.G.Raghav will be released in Suchitra Kala Kendra, Banashankari, Bangalore.

ಒಡನಾಟ..

ನೆತ್ರಕೆರೆ ಉದಯಶಂಕರ

ಏಪ್ರಿಲ್ 20ರ ಭಾನುವಾರ ಎಸ್.ಆರ್. ವಿಜಯಶಂಕರ ಅವರ 'ಒಡನಾಟ' ಮತ್ತು ಪ್ರೊಫೆಸರ್. ಟಿ.ಜಿ. ರಾಘವ ಅವರ 'ಪರಿಗ್ರಹ' ಪುಸ್ತಕಗಳು ಬೆಂಗಳೂರಿನ ಬನಶಂಕರಿಯ ಸುಚಿತ್ರ ಕಲಾ ಕೇಂದ್ರದಲ್ಲಿ ಬಿಡುಗಡೆಗೊಳ್ಳಲಿವೆ. ಇಲ್ಲಿದೆ.. 'ಎಸ್ಸಾರ್' ಒಡನಾಟದ ಮೆಲುಕು...!

'ನನ್ನ ಮಟ್ಟಿಗೆ ಈತ ಇಂದಿಗೂ 'ಎಸ್ಸಾರ್'. 'ನೋ ಸಾರ್' ಎನ್ನುವ ಪ್ರಶ್ನೆಯೇ ಇಲ್ಲ, ಏಕೆಂದರೆ ಈತ ನನ್ನ ಚಡ್ಡಿ ದೋಸ್ತ್ ಅಂದರೂ ತಪ್ಪೇನಿಲ್ಲ. ಎಂಟನೆಯ ವರ್ಗದಿಂದ ಎರಡನೇ ವರ್ಷದ ಪಿಯುಸಿಯವರೆಗೆ ಒಟ್ಟಿಗೆ ಓದಿದ್ದು, ಒಡನಾಡಿದ್ದು, ಆಡಿದ್ದು, ಕವನಗಳನ್ನು ಕಟ್ಟಿ ಹಾಡಿದ್ದು ಎಂದಿಗೂ ಮರೆತುಹೋಗಲು ಸಾಧ್ಯವೇ ಇಲ್ಲ. ಈತ ವಿದ್ಯಾರ್ಥಿ ನಾಯಕನಾದದ್ದು ಅಷ್ಟೇ ಅಲ್ಲ, ರಂಗದ ಮೇಲೆ ಬಣ್ಣದ ವೇಷ ಹಾಕಿ ಅರ್ಭಟಿಸಿದ್ದೂ ನನ್ನ ನೆನಪಿನಾಳದಿಂದ ಅಳಿದಿಲ್ಲ.

ಹೌದು ಈ 'ಎಸ್ಸಾರ್' ಬೇರಾರೂ ಅಲ್ಲ, ಪ್ರಸ್ತುತ ಇಂಟೆಲ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ನಲ್ಲಿ ಮ್ಯಾನೇಜರ್ (ಸರ್ಕಾರಿ ವ್ಯವಹಾರಗಳು ಮತ್ತು ನೌಕರರ ಸಂಪರ್ಕಗಳು) ಆಗಿರುವ ಎಸ್.ಆರ್. ವಿಜಯಶಂಕರ.

ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ವಿಟ್ಲ ಗ್ರಾಮದಿಂದ ಮೈಸೂರಿಗೆ ಹಾರಿದ ಈ 'ಎಸ್ಸಾರ್' ಅಲ್ಲಿ ಶಿಕ್ಷಣ ಪೂರೈಸಿದ ಮೇಲೆ ಮಾಸ್ತರನಾಗಿ ಕೆಲಸ ಮಾಡಿ, ಎಚ್.ಎಂ.ಟಿ ಸೇರಿ ಅಲ್ಲಿಂದ ಸಿಸ್ಕೋಗೆ ನುಗ್ಗಿ ಈಗ ಇಂಟೆಲ್ನಲ್ಲಿ ನಿಂತಿರುವ ವ್ಯಕ್ತಿ.

ಜೀವನೋಪಾಯಕ್ಕಾಗಿ ಇಷ್ಟೆಲ್ಲ ಸುತ್ತಾಟ ನಡೆಸುವುದರ ಜೊತೆಗೇ ಆಸಕ್ತಿಯ ವಿಷಯವಾದ ಸಾಹಿತ್ಯದ ಸೆಳೆತದಿಂದಾಗಿ ವಿಜಯಶಂಕರ್ಗೆ ಸಿಕ್ಕಿದ್ದು ಒಂದಿಬ್ಬರ ಒಡನಾಟ ಅಲ್ಲ, ಹತ್ತಾರು ಬಗೆಯ ಹತ್ತಾರು ಅಭಿರುಚಿಗಳ ಭಿನ್ನ ಭಿನ್ನ ವ್ಯಕ್ತಿತ್ವಗಳ ಒಡನಾಟ.
ಅವರ ಈ ಒಡನಾಟ ಈಗ ಪುಸ್ತಕ ರೂಪಕ್ಕೆ ಇಳಿದಿದೆ. ಹೌದು ವಿಜಯಶಂಕರ್ ಮಸ್ತಕದಿಂದ ಪುಸ್ತಕಕ್ಕೆ ಇಳಿದ ಬರಹಗಳ ಸಂಗ್ರಹ ಇದು. ಇದರ ಹೆಸರೇ 'ಒಡನಾಟ'.

ಈ ಪುಸ್ತಕದ ಒಳಹೊಕ್ಕರೆ ಒಂದಿಬ್ಬರಲ್ಲ, 26 ಮಂದಿಯ 'ವ್ಯಕ್ತಿಚಿತ್ರ'ಗಳು ಸಿಗುತ್ತವೆ. ಅವರೆಲ್ಲ ಭಿನ್ನ ಭಿನ್ನ ವ್ಯಕ್ತಿತ್ವದ ಮಂದಿ ಎಂಬುದೇ ವಿಶೇಷ. ಸಾಹಿತ್ಯ ಕ್ಷೇತ್ರದ ಮಹಾನ್ ವ್ಯಕ್ತಿತ್ವಗಳು ಎನಿಸಿದ ಬೇಂದ್ರೆ, ಮೂರ್ತಿರಾವ್, ಗೌರೀಶ ಕಾಯ್ಕಿಣಿ, ಯುಆರ್ಎ (ಯು.ಆರ್. ಅನಂತಮೂರ್ತಿ) ಮತ್ತಿತರರು, ವಿದ್ವಾಂಸರಾದ ಸೇಡಿಯಾಪು ಕೃಷ್ಣಭಟ್, ಇಂಗ್ಲಿಷ್ ಪ್ರೊಫೆಸರುಗಳಾದ ಸಿ.ಡಿ. ನರಸಿಂಹಯ್ಯ, ವ್ಯಂಗ್ಯಚಿತ್ರಕಾರ ಶಿಂಗಣ್ಣ (ಕನ್ನೆಪ್ಪಾಡಿ ರಾಮಕೃಷ್ಣ), ಸಂಪಾದಕ ವೈ.ಎನ್.ಕೆ. ಅವರಂತಹ ಪತ್ರಕತ್ರರು - ಇವರೆಲ್ಲ ಈ 'ಒಡನಾಟ'ದ ಒಳಕ್ಕೆ ನುಗ್ಗಿದ್ದಾರೆ.

ಡಾ. ಶಿವರಾಮ ಕಾರಂತರಂತಹ ಹಿರಿಯ ಪ್ರಖರ ಸಾಹಿತಿ, ಕೈಗಾರಿಕಾ ಕ್ಷೇತ್ರದ ಧುರೀಣರಾದ ಎಚ್.ಆರ್. ಆಳ್ವ, ಚಿಕ್ಕವನಾಗಿದ್ದಾಗಿನಿಂದಲೇ ದೊಡ್ಡ ಮಟ್ಟದ ಪರಿಣಾಮ ಬೀರಿದ ಕೂಡೂರು ಕೃಷ್ಣಭಟ್ ಅವರಂತಹ ವ್ಯಕ್ತಿಗಳ ಜೊತೆಗಿನ ವೈಯಕ್ತಿಕ ಒಡನಾಟದ ನೆನಪುಗಳೂ ಇಲ್ಲಿ ಗರಿಬಿಚ್ಚಿವೆ.

ವ್ಯಕ್ತಿ ಚಿತ್ರಗಳ ರೂಪದ ಈ 'ಒಡನಾಟ' ಸಣ್ಣ ಕಥೆಗಳು, ಈ ಮಹಾನ್ ವ್ಯಕ್ತಿಗಳು ಮಾಡಿದ ಕೆಲಸಗಳ ಬಗೆಗಿನ ಅರಿವು, ಅವರ ವ್ಯಕ್ತಿತ್ವ, ಅವರ ಬರಹಗಳು, ವಿಮರ್ಶಾ ಲೇಖನಗಳನ್ನು ಒಳಗೊಂಡಿದೆ.

ಕಥೆಯಂತೆ ಓದಿಸಿಕೊಂಡು ಹೋಗುವ ಈ 'ಒಡನಾಟ' ಬಹುಶಃ ವ್ಯಕ್ತಿಚಿತ್ರ ಬರಹ ಶೈಲಿಯಲ್ಲಿ ಹೊಸದೊಂದು ಪ್ರವೃತ್ತಿಯನ್ನು ಹುಟ್ಟು ಹಾಕಬಹುದೇನೋ?

ಎಸ್.ಆರ್. ವಿಜಯಶಂಕರ ಅವರ ಈ 'ಒಡನಾಟ'ಕ್ಕೆ ಈಗ ಬಿಡುಗಡೆ ಯೋಗ ಬಂದಿದೆ. ಖ್ಯಾತ ಸಾಹಿತಿ, ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಕಂಬಾರ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 20ರ (2008) ಭಾನುವಾರ ಬೆಂಗಳೂರು ಬನಶಂಕರಿ ಎರಡನೇ ಹಂತದ 9ನೇ ಮುಖ್ಯರಸ್ತೆ (ಬಿ.ವಿ. ಕಾರಂತ ರಸ್ತೆ) ಸುಚಿತ್ರ ಕಲಾಕೇಂದ್ರದಲ್ಲಿ ನಡೆಯುವ ಸಮಾರಂಭದಲ್ಲಿ ಇದು ಬಿಡುಗಡೆ ಆಗಲಿದೆ.

ಜೊತೆಗೇ ಪ್ರೊ. ಟಿ.ಜಿ. ರಾಘವ ಅವರ 'ಪರಿಗ್ರಹ' ಸಾಹಿತ್ಯ ವಿಮರ್ಶಾ ಲೇಖನಗಳ ಸಂಗ್ರಹ ಕೂಡಾ ಬಿಡುಗಡೆ ಗೊಳ್ಳಲಿದೆ.
ಡಾ. ಎಚ್.ಎಸ್. ವೆಂಕಟೇಶ ಮೂರ್ತಿ, ಕೆ. ಸತ್ಯನಾರಾಯಣ, ಡಾ. ಡಿ.ವಿ. ಗುರುಪ್ರಸಾದ್ ಅವರೂ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಚಿತ್ರದುರ್ಗ ಜಿಲ್ಲೆ ಮಲ್ಲಾಡಿಹಳ್ಳಿಯ ಆನಂದ ಕಂದ ಗ್ರಂಥ ಮಾಲೆ ಈ ಪುಸ್ತಕಗಳನ್ನು ಪ್ರಕಟಿಸಿದೆ.

ಆಸಕ್ತರೆಲ್ಲ ಖಂಡಿತ ಬೆಳಗ್ಗೆ 10.30ಕ್ಕೆ ಸುಚಿತ್ರ ಕಲಾಕೇಂದ್ರದ ಸಭಾಂಗಣದತ್ತ ಹೆಜ್ಜೆ ಹಾಕಬಹುದು.

No comments:

Advertisement