My Blog List

Friday, May 9, 2008

ಇಂದಿನ ಇತಿಹಾಸ History Today ಮೇ 9

ಇಂದಿನ ಇತಿಹಾಸ

ಮೇ 9

ದಕ್ಷಿಣ ಆಫ್ರಿಕಾದ ನೂತನ ಚುನಾಯಿತ ಸಂಸತ್ತು ನೆಲ್ಸನ್ ಮಂಡೇಲಾ ಅವರನ್ನು ರಾಷ್ಟ್ರದ ಪ್ರಥಮ ಕರಿಯ ರಾಷ್ಟ್ರಪತಿಯಾಗಿ ಆಯ್ಕೆ ಮಾಡಿತು.


2007: ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಹಿರಿಯ ಪುತ್ರ ಎಂ.ಕೆ. ಅಳಗಿರಿ ಅವರ ಬೆಂಬಲಿಗರು ಮದುರೆಯಲ್ಲಿ ಜನಪ್ರಿಯ ತಮಿಳು ದೈನಿಕ `ದಿನಕರನ್' ಕಚೇರಿ ಮೇಲೆ ದಾಳಿ ಮಾಡಿ ಇಬ್ಬರು ನೌಕರರು ಹಾಗೂ ಭದ್ರತಾ ಸಿಬ್ಬಂದಿಯನ್ನು ಕೊಂದು ಹಾಕಿದರು. ಇದರೊಂದಿಗೆ ಆಡಳಿತಾರೂಢ ಡಿಎಂಕೆಯ ಸಂಭಾವ್ಯ ಉತ್ತರಾಧಿಕಾರಿ ಸಮರ ಬಹಿರಂಗವಾಗಿ ಬೀದಿಗೆ ಬಂತು. ಕರುಣಾನಿಧಿಯ ಕಿರಿಯ ಪುತ್ರ ಎಂ.ಕೆ. ಸ್ಟಾಲಿನ್ ಅವರನ್ನು 84ರ ಹರೆಯದ ಕರುಣಾನಿಧಿ ಅವರ ರಾಜಕೀಯ ಉತ್ತರಾಧಿಕಾರಿ ಎಂಬುದಾಗಿ ಬಿಂಬಿಸಿ `ದಿನಕರನ್' ಪ್ರಕಟಿಸಿದ ಸಮೀಕ್ಷೆಗೆ ಪ್ರತಿಭಟನೆಯಾಗಿ ಈ ದಾಳಿ ನಡೆಯಿತು.

2007: ಮೂಲಸೌಕರ್ಯಗಳಿಲ್ಲದ ಕಾರಣಕ್ಕಾಗಿ 27 ನರ್ಸಿಂಗ್ ಕಾಲೇಜುಗಳ ಮಾನ್ಯತೆಯನ್ನು (ಸಂಯೋಜನೆ) ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯವು ರದ್ದುಪಡಿಸಿತು. ಹೈಕೋರ್ಟ್ ನೀಡಿರುವ ತೀರ್ಪಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿ.ವಿ. ಕುಲಪತಿ ಡಾ.ಪಿ.ಎಸ್. ಪ್ರಭಾಕರನ್ ಪ್ರಕಟಿಸಿದರು.

2007: ಮಹಿಳಾ ನೌಕರರಿಗೆ ರಾತ್ರಿ ಪಾಳಿಯನ್ನು ನಿಷೇಧಿಸುವ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆ- 1961ರ ತಿದ್ದುಪಡಿಗೆ ರಾಜ್ಯ ಸರ್ಕಾರವು ಸಮ್ಮತಿ ನೀಡಿದ್ದು, ರಾಜ್ಯಪಾಲರ ಮುದ್ರೆ ಪಡೆದ ನಂತರ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಕಾಯ್ದೆ 2007 ನ್ನು ಏಪ್ರಿಲ್ 30ರಂದು ರಾಜ್ಯಪತ್ರದಲ್ಲಿ (ಗೆಜೆಟ್) ಪ್ರಕಟಿಸಿದೆ, ಈ ಸಂಬಂಧ ಅಧಿಸೂಚನೆ 15 ದಿನಗಳ ಒಳಗೆ ಜಾರಿಯಾಗಲಿದೆ ಎಂದು ಕಾರ್ಮಿಕ ಸಚಿವ ಇಕ್ಬಾಲ್ ಅನ್ಸಾರಿ ಪ್ರಕಟಿಸಿದರು.

2007: ಕರ್ನಾಟಕದಲ್ಲಿ ಸುಮಾರು 1728.68 ಕೋಟಿ ರೂಪಾಯಿ ಹೂಡಿಕೆಯ ಎರಡು ವಿಶೇಷ ವಿತ್ತ ವಲಯಗಳಿಗೆ ಕೇಂದ್ರ ಸರ್ಕಾರವು ಮಂಜೂರಾತಿ ನೀಡಿತು. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ತುಂಬೆ ಗ್ರಾಮದ ಬಳಿ 432.84 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಮಾಹಿತಿ ತಂತ್ರಜ್ಞಾನ ವಲಯ ಸ್ಥಾಪನೆ ಹಾಗೂ ಉಡುಪಿ ತಾಲ್ಲೂಕಿನ ಹೆಜಮಾಡಿ, ನಂದಿಕೂರು, ಫಲಿಮಾರು ಹಾಗೂ ನಡ್ಸಾಲು (ಪಡುಬಿದ್ರಿ) ಗ್ರಾಮಗಳ ಬಳಿ ಉನ್ನತ ತಂತ್ರಜ್ಞಾನ ಉತ್ಪನ್ನಗಳು ಹಾಗೂ ಸಂಬಂಧಿತ ಸೇವೆಗಳ ವಿಶೇಷ ಆರ್ಥಿಕ ವಲಯ ಸ್ಥಾಪನೆ ಇವುಗಳಲ್ಲಿ ಸೇರಿವೆ.

2007: ಪ್ರಶಸ್ತಿ ಪ್ರದಾನ ಸಮಾರಂಭ ಒಂದರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರ ಪಂಚೆ ಎಳೆದ ಆರೋಪ ಹೊತ್ತಿದ್ದ ಕನ್ನಡ ಸಂಘರ್ಷ ಸಮಿತಿಯ ಐವರು ಪದಾಧಿಕಾರಿಗಳನ್ನು ನಿರ್ದೋಷಿಗಳು ಎಂದು ಬೆಂಗಳೂರು ನಗರದ ಒಂದನೇ ಹೆಚ್ಚುವರಿ ಪ್ರಧಾನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ನೀಡಿತು.

2007: ಭೂ ಮೇಲ್ಮೈಯಿಂದ ಭೂ ಮೇಲ್ಮೈಗೆ ನೆಗೆಯುವಂತಹ ಅತ್ಯಾಧುನಿಕ ಮಧ್ಯಂತರಗಾಮೀ ಸ್ವದೇಶೀ ನಿರ್ಮಿತ `ಪೃಥ್ವಿ-1' ಕ್ಷಿಪಣಿಯ ಪರೀಕ್ಷಾ ಉಡಾವಣೆಯನ್ನು ಭಾರತವು ಒರಿಸ್ಸಾದ ಬಾಲಸೋರ್ ಸಮೀಪದ 15 ಕಿ.ಮೀ. ದೂರದ ಚಂಡಿಪುರದ ಸಮಗ್ರ ಪರೀಕ್ಷಾ ವಲಯದಿಂದ ಯಶಸ್ವಿಯಾಗಿ ನಡೆಸಿತು.

2007: ಲೇಖಕ ಮತ್ತು ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿ ತರೂರ್ ಅವರಿಗೆ ಸಾಗರೋತ್ತರ ಭಾರತೀಯರಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ನೀಡಲಾಯಿತು.

2007: ಕನ್ನಡ ಸಾಹಿತ್ಯ ಪರಿಷತ್ ಮತ್ತು ಬಿಎಂಟಿಸಿ ಸಹಯೋಗದಲ್ಲಿ ನೀಡಲಾಗುವ ಪ್ರತಿಷ್ಠಿತ `ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಪ್ರಶಸ್ತಿ'ಗೆ ಹಿರಿಯ ಸಾಹಿತಿ ಪ್ರೊ. ದೇ. ಜವರೇಗೌಡ ಅವರನ್ನು ಆಯ್ಕೆ ಮಾಡಲಾಯಿತು.

2006: ಭಾರತದ ಮಹತ್ವಾಕಾಂಕ್ಷೆಯ `ಚಂದ್ರಯಾನ-1' ಯೋಜನೆಯ ಐತಿಹಾಸಿಕ ಒಪ್ಪಂದ ಪತ್ರಕ್ಕೆ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದ ಜಾಗತಿಕ ದಿಗ್ಗಜ ಸಂಸ್ಥೆಗಳಾದ ಭಾರತದ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ `ನಾಸಾ' ಸಹಿ ಹಾಕಿದವು. ಇದರೊಂದಿಗೆ ಉಭಯ ರಾಷ್ಟ್ರಗಳ ಬಾಹ್ಯಾಕಾಶ ಸಂಶೋಧನೆ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಗೊಂಡಿತು. ಭಾರತದ ಶ್ರೀಹರಿಕೋಟಾದಿಂದಲೇ ಮಾನವ ರಹಿತ `ಚಂದ್ರಯಾನ-1' ಉಪಗ್ರಹ ಉಡಾವಣೆಗೊಳ್ಳಲಿದ್ದು, ಚಂದ್ರಲೋಕದ ಪೂರ್ವಾಪರಗಳ ಸಂಶೋಧನೆ ನಡೆಸುವುದು.

2006: ವಿವಾದಾತ್ಮಕ `ಲಾಭದ ಹುದ್ದೆ' ವ್ಯಾಪ್ತಿಯಿಂದ ಇನ್ನಷ್ಟು ಹುದ್ದೆಗಳಿಗೆ ವಿನಾಯ್ತಿ ನೀಡುವ ಸಲುವಾಗಿ ಕಾಯ್ದೆಗೆ ತಿದ್ದುಪಡಿ ತರಲು ಪ್ರಧಾನಿ ಮನಮೋಹನ್ ಸಿಂಗ್ ನೇತೃತದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿತು.

2006: ವಾರಣಾಸಿ ಸಂಕಟ ಮೋಚನ ಹನುಮಾನ್ ಮಂದಿರದಲ್ಲಿ ನಡೆದ ಬಾಂಬ್ಸ್ಫೋಟದ ರೂವಾರಿ ಎನ್ನಲಾದ ಜಾವೇದ್ ಯಾನೆ ಜುಬೇರ್ ಜಮ್ಮು-ಕಾಶ್ಮೀರ ಪೊಲೀಸರ ಗುಂಡಿಗೆ ಬಲಿಯಾದ. ಉತ್ತರ ಪ್ರದೇಶದ ಭರೂಜ್ ನಿವಾಸಿ ಜುಬೇರನ ಚಟುವಟಿಕೆಗಳ ಮೇಲೆ ಒಂದು ತಿಂಗಳಿನಿಂದ ಕಣ್ಣಿಡಲಾಗಿತ್ತು.

2006: ಮಾನವ ಹಕ್ಕುಗಳ ಮಂಡಳಿಯ ಸದಸ್ಯತ್ವಕ್ಕೆ ಭಾರತವು ಆಯ್ಕೆಯಾಯಿತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಏಷ್ಯಾದ 13 ರಾಷ್ಟ್ರಗಳನ್ನು ಗೌಪ್ಯ ಮತದಾನಕ್ಕೆ ಒಳಪಡಿಸಿದಾಗ ಭಾರತಕ್ಕೆ ಅತೀ ಹೆಚ್ಚು ಅಂದರೆ 173 ಮತಗಳು ಬಂದವು.

2006: ಆಸ್ಟ್ರೇಲಿಯಾದ ಗಣಿಯೊಳಗಿನ ತಂತಿಯ ಪಂಜರದಲ್ಲಿ 14ದಿನಗಳ ಕಾಲ ಸಿಕ್ಕಿ ಹಾಕಿಕೊಂಡಿದ್ದ ಬ್ರಾಂಟ್ ವೆಬ್ (37) ಮತ್ತು ಟಾಡ್ ರಸೆಲ್ (34) ಎಂಬ ಇಬ್ಬರು ಆಸ್ಟ್ರೇಲಿಯಾ ಗಣಿಕಾರ್ಮಿಕರನ್ನು ಬೆಳಗಿನ ಜಾವ ರಕ್ಷಿಸಲಾಯಿತು. ಮೂರನೇ ಗಣಿಕಾರ್ಮಿಕ ಲ್ಯಾರಿ ನೈಟ್ (44) ಭೂಕುಸಿತದಲ್ಲಿ ಸಾವಿಗೀಡಾದ. ಭೂಕಂಪದಿಂದ ಭೂಕುಸಿತ ಉಂಟಾಗಿ ಈ ಗಣಿ ಕಾರ್ಮಿಕರು 925 ಮೀಟರ್ ಆಳದಲ್ಲಿ ಎರಡು ಹಾಸಿಗೆ ಹಾಕುವಷ್ಟು ತಂತಿಯಿಂದ ಮಾಡಿದ ಪಂಜರದಲ್ಲಿ ಏ.25ರಂದು ಸಿಕ್ಕಿಹಾಕಿಕೊಂಡಿದ್ದರು.

2006: ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ತಿಂಡಿವನಮ್ಮಿನಲ್ಲಿ ಪಿಎಂಕೆಯಿಂದ ಪಕ್ಷಾಂತರಗೊಂಡ ಎಐಎಡಿಎಂಕೆ ಕಾರ್ಯಕರ್ತ ಮುರುಘನಂದಮ್ ಕೊಲೆಗೆ ಮೇ 8ರ ರಾತ್ರಿ ಪ್ರಚೋದನೆ ನೀಡಿದ ಆಪಾದನೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಅನ್ಬುಮಣಿ ರಾಮದಾಸ್ ಮತ್ತು ಪಿ ಎಂ ಕೆ ಸ್ಥಾಪಕ ಡಾ. ಎಸ್. ರಾಮದಾಸ್ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.

1994: ದಕ್ಷಿಣ ಆಫ್ರಿಕಾದ ನೂತನ ಚುನಾಯಿತ ಸಂಸತ್ತು ನೆಲ್ಸನ್ ಮಂಡೇಲಾ ಅವರನ್ನು ರಾಷ್ಟ್ರದ ಪ್ರಥಮ ಕರಿಯ ರಾಷ್ಟ್ರಪತಿಯಾಗಿ ಆಯ್ಕೆ ಮಾಡಿತು.


1986: ಎಡ್ಮಂಡ್ ಹಿಲರಿ ಜೊತೆಗೆ ಮೊತ್ತ ಮೊದಲ ಬಾರಿಗೆ ಎವರೆಸ್ಟ್ ಪರ್ವತವನ್ನು ಏರಿದ್ದ ತೇನ್ ಸಿಂಗ್ ನಾರ್ಗೆ ಡಾರ್ಜಿಲಿಂಗಿನಲ್ಲಿ ತನ್ನ 72ನೇ ಹುಟ್ಟುಹಬ್ಬಕ್ಕೆ 6 ದಿನ ಮುಂಚಿತವಾಗಿ ಮೃತನಾದ.

1984: ಭಾರತದ ಫು ದೋರ್ಜಿ ಆಮ್ಲಜನಕ ಇಲ್ಲದೆಯೇ ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯ ಎನ್ನಿಸಿಕೊಂಡ.

1975: ಕಲಾವಿದೆ ಯಮುನಾ ರಾಣಿ ಜನನ.

1951: ಕಲಾವಿದೆ ಲತಾ ನಾಡಿಗೇರ್ ಜನನ.

1935: ಕಲಾವಿದ ಬಿ.ಆರ್.ಜಿ. ರಾವ್ ಜನನ.

1927: ಸಂಗೀತ, ನೃತ್ಯ, ಭೌತ ವಿಜ್ಞಾನ, ಪುರಾತತ್ವ ಕ್ಷೇತ್ರಗಳಲ್ಲಿ ಖ್ಯಾತಿ ಪಡೆದ ಸಂಗೀತಗಾರರ ಮನೆತನದ ರಾ. ಸತ್ಯನಾರಾಯಣ ಅವರು ರಾಮಯ್ಯ- ವರಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.

1921: ಕಲಾವಿದ ನಾರಾಯಣ ಎಲ್. ನಾಥನ್ ಜನನ.

1915: ಕಲಾವಿದ ಮಣಿ ಅಯ್ಯರ್ ಜನನ.

1908: ಕನ್ನಡನಾಡು, ನುಡಿಯ ಬಗ್ಗೆ ಮುಂಚೂಣಿಯ ಹೋರಾಟಗಾರರಾಗಿ ಕನ್ನಡಿಗರಲ್ಲಿ ಕನ್ನಡತನ ಬಡಿದೆಬ್ಬಿಸಿದ ಅರಕಲಗೂಡು ನರಸಿಂಗರಾಯ ಕೃಷ್ಣರಾಯ (ಅ.ನ.ಕೃ) (1908-1971) ಅವರು ಈದಿನ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ನರಸಿಂಗರಾಯ- ಅನ್ನಪೂರ್ಣಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಶಾಲಾ ದಿನಗಳಿಂದಲೇ ಸಾಹಿತ್ಯದ ಹುಚ್ಚು ಹಚ್ಚಿಕೊಂಡ ಇವರನ್ನು ಮಣಿಪಾಲದ 42ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ನಾಡು ಗೌರವಿಸಿತು. 14 ಐತಿಹಾಸಿಕ ಕಾದಂಬರಿ ಸೇರಿ 116 ಕಾದಂಬರಿ, ನಾಟಕಗಳು, ಸಾಹಿತ್ಯ ವಿಮರ್ಶೆ, ಜೀವನ ಚರಿತ್ರೆ, ಅನುವಾದ, ಸಂಪಾದಿತ ಗ್ರಂಥಗಳು ಇತ್ಯಾದಿ ಸೇರಿ ಒಟ್ಟು 250ಕ್ಕೂ ಹೆಚ್ಚು ಕೃತಿ ರಚಿಸಿದವರು ಅ.ನ.ಕೃ. 1971ರ ಜುಲೈ 8ರಂದು ಅವರು ನಿಧನರಾದರು.

1866: ಗೋಪಾಲ ಕೃಷ್ಣ ಗೋಖಲೆ (1866-1915) ಜನ್ಮದಿನ. ಭಾರತದ ರಾಷ್ಟ್ರೀಯ ನಾಯಕರಾದ ಇವರು ರಾಷ್ಟ್ರದ ಅತ್ಯಂತ ದುರ್ಬಲ ವರ್ಗದ ಜನರ ಏಳಿಗೆಗಾಗಿ `ಸರ್ವೆಂಟ್ಸ್ಸ್ ಆಫ್ ಇಂಡಿಯಾ ಸೊಸೈಟಿ ಸ್ಥಾಪಿಸಿದರು. ಪುಣೆಂಯಲ್ಲಿ ರಾನಡೆ ಇನ್ ಸ್ಟಿಟ್ಯೂಟ್ ಆಫ್ ಇಕನಾಮಿಕ್ಸ್ ಸ್ಥಾಪಿಸಿದ್ದು ಕೂಡಾ ಇವರೇ.

1800: ಅಮೆರಿಕದ ಗುಲಾಮೀ ಪದ್ಧತಿ ವಿರೋಧಿ ಹೋರಾಟಗಾರ ಜಾನ್ ಬ್ರೌನ್ (1800-1849) ಜನ್ಮದಿನ. ಗುಲಾಮೀ ಪದ್ಧತಿಯನ್ನು ಹೋಗಲಾಡಿಸಲು ಈತ ನಡೆಸಿದ ಪ್ರಯತ್ನಗಳು ಅಮೆರಿಕದ ಅಂತರ್ ಯುದ್ಧದಲ್ಲಿ ಪ್ರಮುಖ ಕಾರಣಗಳಾದವು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement