ಗ್ರಾಹಕರ ಸುಖ-ದುಃಖ

My Blog List

Wednesday, June 4, 2008

ಇಂದಿನ ಇತಿಹಾಸ History Today ಜೂನ್ 4

ಇಂದಿನ ಇತಿಹಾಸ

ಜೂನ್ 4

ಚೀನಾದ ಪಡೆಗಳು ಪ್ರಜಾಪ್ರಭುತ್ವ ಪರ ಚಳವಳಿಗಾರರನ್ನು ದಮನ ಮಾಡುವ ಸಲುವಾಗಿ ಬೀಜಿಂಗಿನ ಟಿಯನಾನ್ ಮನ್ ಚೌಕದಲ್ಲಿ ಚಳವಳಿಗಾರರಿಗೆ ಮುತ್ತಿಗೆ ಹಾಕಿದವು. ಈ ದಮನ ಕಾರ್ಯಾಚರಣೆಯಲ್ಲಿ ಸುಮಾರು 2600 ಜನ ಸತ್ತು, 10,000ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2007: ಸಾಲುಮರದ ತಿಮ್ಮಕ್ಕ, ಡಾ. ವಿಜಯ್ ಅಂಗಡಿ, ಎಂ.ಆರ್. ಪ್ರಭಾಕರ ಮತ್ತು ಕೇಶವ ಹೆಗಡೆ ಕೊರ್ಸೆ ಸೇರಿದಂತೆ ನಾಲ್ಕು ಮಂದಿ ಗಣ್ಯರು ಹಾಗೂ ನಾಲ್ಕು ಸಂಸ್ಥೆಗಳು 2007-08ನೇ ಸಾಲಿನ `ಪರಿಸರ ಪ್ರಶಸ್ತಿ'ಗೆ ಆಯ್ಕೆಯಾದವು.

2007: ಬಂಜರು ಭೂಮಿಯಲ್ಲಿ ಹಸಿರುಕ್ಕಿಸಿರುವ ಬೀದರ್ ಅರಣ್ಯ ಅಭಿವೃದ್ಧಿ ಸಂಸ್ಥೆ ಮತ್ತು ಕೈಯಿಂದ ಹಣ ಖರ್ಜು ಮಾಡಿ ಚನ್ನರಾಯಪಟ್ಟಣದಲ್ಲಿ ನೂರಾರು ಮರಗಳನ್ನು ಬೆಳೆಸಿದ ಸಿ.ಎನ್. ಅಶೋಕ ಅವರು 2005ರ ಸಾಲಿನ ಕೇಂದ್ರ ಸರ್ಕಾರದ `ಇಂದಿರಾ ಪ್ರಿಯದರ್ಶಿನಿ' ಪ್ರಶಸ್ತಿಗೆ ಆಯ್ಕೆಯಾದರು.

2007: ಹೆಚ್ಚುತ್ತಿರುವ ಜಗ ತಾಪ ಏರಿಕೆ ಪರಿಣಾಮವಾಗಿ ಅಪರೂಪದ ಕೆಲವು ಜೀವ ಸಂಕುಲಗಳು ನಶಿಸುವ ಅಂಚಿಗೆ ತಲುಪಿವೆ. ನ್ಯೂಜಿಲೆಂಡ್ ನೆಲದಲ್ಲಿ ಮಾತ್ರ ಕಂಡು ಬರುವ ಡೈನೋಸಾರ್ ಯುಗಕ್ಕೆ ಸೇರಿದ ಅಪರೂಪದ ಸರೀಸೃಪ ಸಂತಾನೋತ್ಪತ್ತಿ ನಿಲ್ಲಿಸಿದೆ. ಆಮೆ, ಓತಿಕ್ಯಾತ ಇತ್ಯಾದಿ ಜೀವಿಗಳೂ, ಅವುಗಳಲ್ಲೂ ವಿಶೇಷವಾಗಿ ಓತಿಕ್ಯಾತಗಳು ವಿನಾಶದ ಅಂಚಿನತ್ತ ಸಾಗುತ್ತಿವೆ. ಅವುಗಳ ಮೊಟ್ಟೆಗಳಿಂದ ಗಂಡು ಸಂತಾನ ಮಾತ್ರ ಹುಟ್ಟುತ್ತಿದ್ದು ಇದಕ್ಕೆ ಜಗ ತಾಪ ಏರಿಕೆ ಕಾರಣ ಎಂದು ವೆಲ್ಲಿಂಗ್ಟನ್ ವಿಜ್ಞಾನಿಗಳು ಪ್ರಕಟಿಸಿದರು.

2007: ಧಾರವಾಡ ಸಮೀಪದ ಬೇಲೂರಿನಲ್ಲಿ ಟಾಟಾ ಸಂಸ್ಥೆ ನಿರ್ಮಿಸಲು ಉದ್ದೇಶಿಸಿದ್ದ ಐಶಾರಾಮಿ ಮತ್ತು ಸಣ್ಣ ಬಸ್ ಹಾಗೂ ಲಘು ವಾಣಿಜ್ಯ ವಾಹನ ಉತ್ಪಾದನಾ ಘಟಕ್ಕೆ ಈಗಾಗಲೇ ನೀಡಲಾದ 600 ಎಕರೆ ಜೊತೆಗೆ ಇನ್ನೂ ಹೆಚ್ಚುವರಿಯಾಗಿ 300 ಎಕರೆ ನೀಡುವ ಮೂಲಕ ಕರ್ನಾಟಕ ಸಚಿವ ಸಂಪುಟ ಈ ಯೋಜನೆಗೆ ಅನುಮತಿ ನೀಡಿತು.

2007: ಕುಡಿದು ವಾಹನ ಚಲಾಯಿಸಿದ ತಪ್ಪಿಗಾಗಿ 10 ದಿನಗಳ ಕಾಲ ಸಂಚಾರ ನಿರ್ವಹಣೆಯಲ್ಲಿ ಪೊಲೀಸರಿಗೆ ನೆರವಾಗುವಂತೆ ನವದೆಹಲಿಯ ವ್ಯಕ್ತಿಯೊಬ್ಬನಿಗೆ ಆಜ್ಞಾಪಿಸುವ ಮೂಲಕ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗೌತಮ್ ಮನನ್ ಇತಿಹಾಸ ನಿರ್ಮಿಸಿದರು. ದಕ್ಷಿಣ ದೆಹಲಿಯ ದೀಪಕ್ ಗುಪ್ತನಿಗೆ ಫೆಬ್ರುವರಿ 16ರಂದು ಕುಡಿದು ವಾಹನ ಚಲಾಯಿಸಿದ್ದಕ್ಕೆ ಈ ಶಿಕ್ಷೆ ನೀಡಲಾಯಿತು.

2006: ಅಸ್ವಸ್ಥಗೊಂಡು ಎರಡು ದಿನಗಳ ಹಿಂದೆ ದೆಹಲಿಯ ಅಪೋಲೊ ಆಸ್ಪತ್ರೆಗೆ ದಾಖಲಾದ ರಾಹುಲ್ ಮಹಾಜನ್ ಮೂತ್ರದಲ್ಲಿ ಕೊಕೇನ್ ಪತ್ತೆಯಾಗಿದ್ದು ಮದ್ಯ ಹಾಗೂ ಮಾದಕ ದ್ರವ್ಯಗಳ ಮಿಶ್ರಣವೇ ವಿವೇಕ ಮೊಯಿತ್ರಾ ಸಾವು ಹಾಗೂ ರಾಹುಲ್ ಅಸ್ವಾಸ್ಥ್ಯಕ್ಕೆ ಕಾರಣ ಎಂದು ವೈದ್ಯಕೀಯ ವರದಿಗಳು ತಿಳಿಸಿದವು.

2006: ಬಿಜೆಪಿ ಧುರೀಣ ಪ್ರಮೋದ್ ಮಹಾಜನ್ ಅವರ ನೆರಳಿನಂತೆಯೇ ಇದ್ದ ವಿವೇಕ್ ಮೊಯಿತ್ರ ಅವರ ಅಂತ್ಯಕ್ರಿಯೆ ಮುಂಬೈಯಲ್ಲಿ ನಡೆಯಿತು. ಮಹಾಜನ್ ಅವರ ಅಂತ್ಯಕ್ರಿಯೆ ಮೇ 4ರಂದು ನಡೆದರೆ, ಒಂದು ತಿಂಗಳ ನಂತರ ಅದೇ ದಿನಾಂಕದಂದು ಮೈತ್ರ ಅವರೂ ಚಿತೆಯೇರುವಂತಾದುದು ವಿಧಿ ವಿಲಾಸ. 39 ವರ್ಷ ವಯಸ್ಸಿನ ಮೊಯಿತ್ರ ಅವರು ಜೂನ್ 2ರಂದು ನಸುಕಿನ ವೇಳೆಯಲ್ಲಿ ದೆಹಲಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ವಿಷಪ್ರಾಶನಕ್ಕೆ ಒಳಗಾಗಿ ಮೃತರಾದರು. ಕಳೆದ 22 ವರ್ಷಗಳಿಂದ ಬಿಜೆಪಿಯಲ್ಲಿ ಇದ್ದ ಮೊಯಿತ್ರ ಮೊದಲಿಗೆ ಗೋಪಿನಾಥ ಮುಂಡೆ ಹಾಗೂ ನಂತರ ಪ್ರಮೋದ್ ಮಹಾಜನ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು.

1997: ಅಜಿತ್ ಭಾರಿಹೋಕ್ ನೇತೃತ್ವದ ವಿಶೇಷ ನ್ಯಾಯಾಲಯವು ಸೇಂಟ್ ಕಿಟ್ಸ್ ಹಗರಣದಲ್ಲಿ ಆಪಾದಿತರಾಗಿದ್ದ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಮತ್ತು ಕೆ.ಕೆ. ತಿವಾರಿ ಅವರನ್ನು ಅರೋಪಮುಕ್ತಗೊಳಿಸಿತು. ನರಸಿಂಹರಾವ್ ವಿರುದ್ಧ ಹೂಡಲಾಗಿದ್ದ ಮೂರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಕಿಟ್ಸ್ ಪ್ರಕರಣವೂ ಒಂದು. ಜಾರ್ಖಂಡ್ ಮುಕ್ತಿ ಮೋರ್ಚಾ ಹಗರಣ ಮತ್ತು ಲಖೂಬಾಯಿ ಪಾಠಕ್ ಹಗರಣ - ಇವು ನರಸಿಂಹರಾವ್ ವಿರುದ್ಧ ಹೂಡಲಾದ ಇತರ ಎರಡು ಭ್ರಷ್ಟಾಚಾರ ಪ್ರಕರಣಗಳು.

1989: ಚೀನಾದ ಪಡೆಗಳು ಪ್ರಜಾಪ್ರಭುತ್ವ ಪರ ಚಳವಳಿಗಾರರನ್ನು ದಮನ ಮಾಡುವ ಸಲುವಾಗಿ ಬೀಜಿಂಗಿನ ಟಿಯನಾನ್ ಮನ್ ಚೌಕದಲ್ಲಿ ಚಳವಳಿಗಾರರಿಗೆ ಮುತ್ತಿಗೆ ಹಾಕಿದವು. ಈ ದಮನ ಕಾರ್ಯಾಚರಣೆಯಲ್ಲಿ ಸುಮಾರು 2600 ಜನ ಸತ್ತು, 10,000ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

1959: ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಮದ್ರಾಸಿನ (ಈಗಿನ ಚೆನ್ನೈ) ವಿವೇಕಾನಂದ ಕಾಲೇಜಿನಲ್ಲಿ ಸ್ವತಂತ್ರ ಪಕ್ಷದ ಸ್ಥಾಪನೆ ಮಾಡಿದರು.

1955: ಸಾಹಿತಿ ಶಕುಂತಳಾ ಭಟ್ ಜನನ.

1955: ಭಾರತದ ಕಬ್ಬಿಣ ಮತ್ತು ಉಕ್ಕು ಸಚಿವಾಲಯ ಸ್ಥಾಪನೆ.

1953: ಗಾಯಕಿ ಡಾ.ಆರ್. ಎನ್. ಶ್ರೀಲತಾ ಅವರು ಆರ್. ಕೆ. ನಾರಾಯಣಸ್ವಾಮಿ- ಸಾವಿತ್ರಮ್ಮ ದಂಪತಿಯ ಮಗಳಾಗಿ ಹಾಸನ ಜಿಲ್ಲೆಯ ರುದ್ರಪಟ್ಟಣದಲ್ಲಿ ಜನಿಸಿದರು.

1947: ಸಾಹಿತಿ ಸಂಶೋಧಕ ವೀರಣ್ಣ ರಾಜೂರ ಅವರು ಬಸಪ್ಪ- ಫಕೀರಮ್ಮ ದಂಪತಿಯ ಪುತ್ರನಾಗಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೆನಕನಾಳದಲ್ಲಿ ಈದಿನ ಜನಿಸಿದರು.

1936: ಭಾರತೀಯ ಚಲನಚಿತ್ರ ತಾರೆ ನೂತನ್ ಸಮರ್ಥ (1936-1991) ಜನ್ಮದಿನ.

1932: ರಾಮಕೃಷ್ಣ ಪರಮಹಂಸರ ಅನುಯಾಯಿ ಮಹೇಂದ್ರನಾಥ ಗುಪ್ತ ನಿಧನ.

1903: ಗಾಂಧೀಜಿ ಅವರು `ಇಂಡಿಯನ್ ಒಪೀನಿಯನ್' ಪತ್ರಿಕೆ ಆರಂಭಿಸಿದರು.

1872: ಇಂಗ್ಲಿಷ್ ರಸಾಯನ ವಿಜ್ಞಾನ ತಜ್ಞ ಆಗಸ್ಟಸ್ ಚೆಸ್ ಬ್ರೊ ತಾನು ಅಭಿವೃದ್ಧಿ ಪಡಿಸಿದ `ಪೆಟ್ರೋಲಿಯಂ ಜೆಲ್ಲಿಗಾಗಿ ಪೇಟೆಂಟ್ ಪಡೆದ. 1859ರಲ್ಲಿ ಪೆನ್ಸಿಲ್ವೇನಿಯಾ ಮತ್ತು ಟಿಟ್ಸುವಿಲ್ ನಲ್ಲಿ ಹೊರಚಿಮ್ಮಿದ ತೈಲಕ್ಕೆ ಗಾಯಗಳನ್ನು ಗುಣಪಡಿಸುವ ಗುಣ ಇದೆ ಎಂದು ಕಾರ್ಮಿಕರು ಪತ್ತೆ ಹಚ್ಚಿದ್ದನ್ನು ಅನುಸರಿಸಿ ಸಂಶೋಧನೆ ನಡೆಸಿದ ಈತ 1870ರಿಂದ `ವ್ಯಾಸಲೀನ್' ಎಂಬ ಟ್ರೇಡ್ ಮಾರ್ಕಿನಲ್ಲಿ ತಾನು ಕಂಡು ಹಿಡಿದ `ಪೆಟ್ರೋಲಿಯಂ ಜೆಲ್ಲಿ'ಯ ಉತ್ಪಾದನೆ ಆರಂಭಿಸಿದ.

1783: ಅನ್ನೋನೆಯ ಮಾರುಕಟ್ಟೆ ಪ್ರದೇಶದಲ್ಲಿ ಮಾಂಟೆಗೋಲ್ಫಿಯರ್ ಸಹೋದರರಾದ ಜೋಸೆಫ್ ಮೈಕೆಲ್ ಮತ್ತು ಜಾಕ್ವೆಸ್ ಎಟಿನ್ ಮೊತ್ತ ಮೊದಲ `ಏರ್ ಹಾಟ್ ಬಲೂನಿನ' (ಬಿಸಿಗಾಳಿ ಬಲೂನ್) ಸಾರ್ವಜನಿಕ ಪ್ರದರ್ಶನ ನಡೆಸಿದರು. ಬಲೂನ್ 3000 ಅಡಿಗಳಷ್ಟು ಎತ್ತರಕ್ಕೆ ಏರಿ 10 ನಿಮಿಷಗಳ ಕಾಲ ಆಕಾಶದಲ್ಲಿ ಉಳಿಯಿತು. ನಂತರ ಒಂದೂವರೆ ಮೈಲು ದೂರ ಸಾಗಿ ನೆಲಕ್ಕೆ ಇಳಿಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement