Thursday, July 24, 2008

ಇಂದಿನ ಇತಿಹಾಸ History Today ಜುಲೈ 24

ಇಂದಿನ ಇತಿಹಾಸ

ಜುಲೈ 24

ಐದು ವರ್ಷ ಭಾರತದ ಯಶಸ್ವಿ ರಾಷ್ಟ್ರಪತಿಯಾಗಿ ಹುದ್ದೆಗೆ ಶೋಭೆ ತಂದುಕೊಟ್ಟ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅಧಿಕಾರಾವಧಿಯ ಕೊನೆಯ ದಿನವಿದು. ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದರೂ ಕಲಾಂ ಅವರು ಒಬ್ಬ ಮಾನವಪ್ರೇಮಿಯಾಗಿ ಜನಮಾನಸದಲ್ಲಿ ಸದಾಕಾಲಕ್ಕೂ ಉಳಿಯುವ `ಜನರ ರಾಷ್ಟ್ರಪತಿ.'

2007: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯವು ಈದಿನ ಮತ್ತೆ ಮೂವರು ಆರೋಪಿಗಳಿಗೆ ಮರಣದಂಡನೆ ಹಾಗೂ ಇನ್ನೊಬ್ಬ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತು. 1993ರ ಮಾರ್ಚ್ 12ರಂದು ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ ಸಮಯದಲ್ಲಿ ನಗರದ ಮಾಹಿಮ್ ಪ್ರದೇಶದಲ್ಲಿ ಮೀನುಗಾರರ ಕಾಲೋನಿ ಮೇಲೆ ಗ್ರೆನೇಡ್ ದಾಳಿ ನಡೆಸಲಾಗಿತ್ತು. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿ ಆರು ಜನ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯದ ನ್ಯಾಯಾಧೀಶ ಪಿ.ಡಿ. ಕೋಡೆ ಅವರು ಆರೋಪಿಗಳಾದ ಜಾಕೀರ್ ಹುಸೇನ್ ಶೇಖ್, ಫಿರೋಜ್ ಮಲ್ಲಿಕ್ ಮತ್ತು ಅಬ್ದುಲ್ ಅಕ್ತರ್ ಖಾನ್ ಗೆ ಗಲ್ಲು ಶಿಕ್ಷೆ ಮತ್ತು ಇನ್ನೊಬ್ಬ ಆರೋಪಿ ಮೋಹಿನ್ ಖುರೇಷಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಈ ಗ್ರೆನೇಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಮೊದಲೇ ಆರೋಪಿ ಬಷೀರ್ ಕಹಿರುಲ್ಲಾಗೆ ಸಹ ಜೀವಾವಧಿ ಶಿಕ್ಷೆ ವಿಧಿಸಿತ್ತು. 257 ಜನರನ್ನು ಬಲಿ ತೆಗೆದುಕೊಂಡ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಇದುವರೆಗೆ 100 ಆರೋಪಿಗಳಲ್ಲಿ 91 ಆರೋಪಿಗಳಿಗೆ ಶಿಕ್ಷೆ ವಿಧಿಸಿದಂತಾಯಿತು.

2007: ಐದು ವರ್ಷ ಭಾರತದ ಯಶಸ್ವಿ ರಾಷ್ಟ್ರಪತಿಯಾಗಿ ಹುದ್ದೆಗೆ ಶೋಭೆ ತಂದುಕೊಟ್ಟ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅಧಿಕಾರಾವಧಿಯ ಕೊನೆಯ ದಿನವಿದು. ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದರೂ ಕಲಾಂ ಅವರು ಒಬ್ಬ ಮಾನವಪ್ರೇಮಿಯಾಗಿ ಜನಮಾನಸದಲ್ಲಿ ಸದಾಕಾಲಕ್ಕೂ ಉಳಿಯುವ `ಜನರ ರಾಷ್ಟ್ರಪತಿ.' ಭಾರತ ರತ್ನ (1997), ಪದ್ಮಭೂಷಣ (1981), ಪದ್ಮ ವಿಭೂಷಣ (1991), ರಾಷ್ಟ್ರೀಯ ಭಾವೈಕ್ಯಕ್ಕಾಗಿ ಇಂದಿರಾಗಾಂಧಿ ಪ್ರಶಸ್ತಿ (1998) ಈ ಪ್ರಶಸ್ತಿಗಳು ಕಲಾಂ ಅವರ ಕಿರೀಟ ಸೇರುವ ಮೂಲಕ ತಮ್ಮ ಘನತೆ ಹೆಚ್ಚಿಸಿಕೊಂಡವು. `ಕನಸು ಕಾಣಿ, ಕಾಣುತ್ತಿರಿ, ಕಾಣುತ್ತಲೇ ಇರಿ. ಉದಾತ್ತವಾದುದನ್ನು ಯೋಚಿಸಿ' ಎನ್ನುತ್ತಾ ಅಪ್ಪಟ ಕನಸುಗಾರನಾಗಿ ಮಕ್ಕಳಲ್ಲಿ ಉದಾತ್ತ ಚಿಂತನೆಯ ಬೆಳಕು ಮೂಡಿಸುತ್ತಿದ್ದ ಕಲಾಂ ದೇಶದ ಪ್ರಗತಿಗಾಗಿ ತಂತ್ರಜ್ಞಾನದ ಬಳಕೆಯನ್ನು ಪ್ರಬಲವಾಗಿ ಪ್ರತಿಪಾದಿಸಿದವರು. ಮಕ್ಕಳೊಂದಿಗೆ ಮಗುವಾಗುತ್ತಿದ್ದ ಕಲಾಂ ವಿಶ್ವದ ಅತ್ಯಂತ ಎತ್ತರದ ನೀರ್ಗಲ್ಲ ಪ್ರದೇಶ ಸಿಯಾಚಿನ್ ನಲ್ಲಿ ಕಾಲಿಟ್ಟ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಜಲಾಂತರ್ಗಾಮಿ ನೌಕೆ ಹಾಗೂ ಸೂಪರ್ ಸಾನಿಕ್ `ಸುಖೋಯ್ 30' ಯುದ್ಧ ವಿಮಾನದಲ್ಲಿ ಪ್ರಯಾಣಿಸಿದ ಪ್ರಥಮ ರಾಷ್ಟ್ರಪತಿ ಎಂಬ ಕೀರ್ತಿ ಕೂಡಾ ಕಲಾಂ ಅವರದೇ. ದೇಶದ ಮೊಟ್ಟಮೊದಲ ದೇಶೀಯ ತಂತ್ರಜ್ಞಾನದ ಉಪಗ್ರಹ ಉಡಾವಣಾ ವಾಹನ (ಎಸ್ಎಲ್ವಿ -3) ತಯಾರಿಕೆಯಲ್ಲಿ ಯೋಜನಾ ನಿರ್ದೇಶಕರಾಗಿ ಕಲಾಂ ಕೊಡುಗೆ ಅನನ್ಯ. 1980ರಲ್ಲಿ `ರೋಹಿಣಿ' ಉಪಗ್ರಹವನ್ನು ಇದೇ ಉಡಾವಣಾ ವಾಹನದ ಮೂಲಕ ಕಕ್ಷೆಗೆ ಹಾರಿಬಿಟ್ಟದ್ದು ಈಗ ಇತಿಹಾಸ. ಇಸ್ರೋದ ಉಪಗ್ರಹ ಉಡಾವಣಾ ಯೋಜನೆಯಲ್ಲಿ ಕಲಾಂ ಅವರದ್ದು ಸಿಂಹಪಾಲು. ಕಲಾಂ 1992ರಿಂದ 1999ರವರೆಗೆ ರಕ್ಷಣಾ ಸಚಿವಾಲಯದ ವೈಜ್ಞಾನಿಕ ಸಲಹೆಗಾರರಾಗಿ ಹಾಗೂ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಓ) ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಇದೇ ಅವಧಿಯಲ್ಲಿ ದೇಶ ಪ್ರೋಖ್ರಾನಿನಲ್ಲಿ ಪರಮಾಣು ಬಾಂಬನ್ನು ಪ್ರಯೋಗಾರ್ಥ ಪ್ರಯೋಗಿಸಿದ್ದು ಎಂಬುದು ಗಮನಾರ್ಹ. ಕಲಾಂ ಅವರು ಮದ್ರಾಸ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಏರೋನಾಟಿಕಲ್ ಪದವಿ ಪಡೆದವರು. 1931 ಅಕ್ಟೋಬರ್ 15 ಕಲಾಂ ಜನ್ಮದಿನ. ರಾಮೇಶ್ವರದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅಸಾಮಾನ್ಯ ಅಬ್ದುಲ್ ಕಲಾಂ ಅವರು ಬೆಳೆದುಬಂದ ರೀತಿ ಮಾತ್ರ ಬೆರಗುಹುಟ್ಟಿಸುವಂತಹದು. ಅವರ ಬದುಕು ಎಲ್ಲರಿಗೂ ಆದರ್ಶಪ್ರಾಯ.

2007: ಆಫ್ಘಾನಿಸ್ಥಾನ ಗಡಿಯಲ್ಲಿರುವ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ತಾಲಿಬಾನ್ ಪ್ರಮುಖ ನಾಯಕ ಅಬ್ದುಲ್ಲಾ ಮೆಹ್ಸುದ್ ಎಂಬಾತ ಸೇನಾ ದಾಳಿಯ ಸಂದರ್ಭದಲ್ಲಿ ಬಂಧನವನ್ನು ತಪ್ಪಿಸಿಕೊಳ್ಳಲು ಸ್ವತಃ ಕೈ ಬಾಂಬ್ ಸ್ಫೋಟಿಸಿ ಆತ್ಮಹತ್ಯೆ ಮಾಡಿಕೊಂಡ. ತಾಲಿಬಾನ್ ಪರವಾಗಿ ಹೋರಾಡುತ್ತಿದ್ದ 32 ವರ್ಷದ ಅಬ್ದುಲ್ಲಾ 2003ರಲ್ಲಿ ಗ್ವಾಂಟೆನಾಮೋ ಕೊಲ್ಲಿ ಪ್ರದೇಶದಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಬಂಧಿತನಾಗಿದ್ದ. ಈತನನ್ನು 2004 ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಆ ಬಳಿಕ ದಕ್ಷಿಣ ವಜೀರಿಸ್ಥಾನದಲ್ಲಿ ತಾಲಿಬಾನ್ ಉಗ್ರಗಾಮಿ ಸಂಘಟನೆಯನ್ನು ಮುನ್ನಡೆಸುತ್ತಿದ್ದ ಈತ, ಚೀನಾದ ಇಬ್ಬರು ಎಂಜಿನಿಯರುಗಳ ಅಪಹರಣಕ್ಕೆ ಕಾರಣನಾಗಿದ್ದ. ಇದಲ್ಲದೆ, ಇತ್ತೀಚೆಗೆ ಪಾಕಿಸ್ಥಾನದ ಪೇಶಾವರ ಮತ್ತು ಹಬ್ ಪಟ್ಟಣಗಳಲ್ಲಿ ಚೀನಿಯರ ಮೇಲೆ ನಡೆದ ದಾಳಿಯಲ್ಲಿ ಈತನ ಕೈವಾಡವಿತ್ತು. ಹೀಗಾಗಿ ಈತನನ್ನು ಹಿಡಿಯಲು ಪಾಕಿಸ್ಥಾನ ಸೇನೆ ಬಲೆ ಬೀಸಿತ್ತು. ಅಬ್ದುಲ್ಲಾ ತಾಲಿಬಾನ್ ಪರ ಅನುಕಂಪ ಹೊಂದಿದ ಜಮಾತ್ ಉಲೆಮಾ ಇಸ್ಲಾಮಿನ ಉನ್ನತ ನಾಯಕ ಶೇಖ್ ಅಯೂಬ್ ಮುತ್ತಖೇಲ್ನನ್ನು ಭೇಟಿಯಾಗಲು ಬಂದಾಗ ಸೇನೆ ಈತನ ಸೆರೆಗಾಗಿ ಬಲೆ ಬೀಸಿತು.

2007: ಭಿಕ್ಷುಕನನ್ನು ಕೊಲೆ ಮಾಡಿ ಆತನ ಅಂಗಾಂಗಗಳನ್ನು ಆಸ್ಪತ್ರೆಯೊಂದಕ್ಕೆ ಮಾರಾಟ ಮಾಡಿದ ಆರೋಪ ಸಾಬೀತಾದ ಕಾರಣ ಚೀನಾದ ಹೈಬೆ ಪ್ರಾಂತ್ಯದ ಉತ್ತರ ಭಾಗದ ಗ್ರಾಮದ ನಿವಾಸಿ ವಾಂಗ್ ಚಾವೊಯಂಗ್ ಎಂಬಾತನಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಈತ ಕಳೆದ ವರ್ಷ ತಾಂಗ್ ಗೆಫಾಯ್ ಎಂಬ ಭಿಕ್ಷುಕನನ್ನು ಅಪಹರಿಸಿ ಕೊಲೆ ಮಾಡಿದ್ದ ಎಂದು `ಬೀಜಿಂಗ್ ಟೈಮ್ಸ್' ವರದಿ ಮಾಡಿತು. 2006ರ ನವೆಂಬರ್ ತಿಂಗಳಲ್ಲಿ ಚಾವೊಯಂಗ್ ನನ್ನು ಬಂಧಿಸಲಾಗಿತ್ತು. ಚಾವೊ ವೈದ್ಯರಿಗೆ ಸುಳ್ಳು ಹೇಳಿ ಭಿಕ್ಷುಕನ ಅಂಗಾಂಗ ಮಾರಾಟ ಮಾಡಿ 2,000 ಡಾಲರ್ ಸಂಪಾದಿಸಿದ್ದ.

2007: ಚೀನಾದ ವೈದ್ಯರು ರೋಗಿಯೊಬ್ಬರ ತಲೆಯಲ್ಲಿ ಬೆಳೆದಿದ್ದ 15 ಕೆಜಿ ತೂಕದ ದುರ್ಮಾಂಸದ ಗಡ್ಡೆಯನ್ನು ಹೊರ ತೆಗೆದು ನೂತನ ದಾಖಲೆ ನಿರ್ಮಿಸಿದರು. 31ರ ವಯಸಿನ ಹುಂಗ್ ಚುಂಚಿ ತಲೆಯ ಎಡ ಭಾಗದಲ್ಲಿ ದುರ್ಮಾಂಸ ಬೆಳದ ಪರಿಣಾಮ ಆತನ ಎಡಗಣ್ಣು ಸಂಪೂರ್ಣ ಕಾಣದಂತಾಗಿತ್ತು. ಕೆಳ ದವಡೆಯಿಂದ ಕಿವಿಯ ಭಾಗ ಊದಿಕೊಂಡು ಭುಜದ ಕಡೆ ವಾಲಿಕೊಂಡಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಚೀನಾ ವೈದ್ಯರು ಸುಮಾರು ಒಂದೂವರೆ ಗಂಟೆ ಶಸ್ತ್ರಚಿಕಿತ್ಸೆ ನಡೆಸಿ, ತಲೆ ಹಾಗೂ ಮುಖದ ಭಾಗದಲ್ಲಿದ್ದ ಗಡ್ಡೆಯನ್ನು ಹೊರ ತೆಗೆದರು. ಸುಮಾರು 30 ವರ್ಷಗಳಿಂದ ಈತ ಈ ಬಾಧೆ ಅನುಭವಿಸುತ್ತಿದ್ದ.

2007: ಬ್ರಿಟಿಷ್ ನ್ಯಾಯಾಲಯವೊಂದು ಹಿಂದೂ ಸಮುದಾಯದ ಪ್ರತಿಭಟನೆಯ ನಡುವೆಯೂ ಕ್ಷಯರೋಗ ತಗುಲಿದ ವೇಲ್ಸಿನ ಸ್ಕಂದ ವೇಲ್ ದೇವಾಲಯದ ಪವಿತ್ರ `ಶಂಬೊ' ಹೋರಿಯನ್ನು ವಧಿಸಲು ಆದೇಶಿ ನೀಡಿತು. `ಹೋರಿಯನ್ನು ಸಂಹರಿಸದೆ ಬೇರೆ ಮಾರ್ಗವಿಲ್ಲ' ಎಂದು ನ್ಯಾಯಾಧೀಶ ಮಾಲ್ಕಂ ಪಿಲ್ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ಅಭಿಪ್ರಾಯ ಪಟ್ಟಿತು. ಆದರೆ ನ್ಯಾಯಾಲಯದ ತೀರ್ಪಿನಿಂದ ಪಶುಗಳನ್ನು ಪೂಜಿಸುವ ಹಿಂದೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಸ್ಕಂದ ವೇಲ್ ದೇವಾಲಯದ ಸ್ವಾಮಿ ಸೂರ್ಯಾನಂದ ಪ್ರತಿಕ್ರಿಯಿಸಿದರು.

2006: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಡೆಹ್ರಾಡೂನಿನ ಆಶ್ರಮದಲ್ಲಿ `ಸ್ವಾಮೀಜಿ' ವೇಷದಲ್ಲಿ ಜೀವಿಸಿ, 1977ರ ಏಪ್ರಿಲ್ 10ರಂದು ನಿಧನರಾದರು ಎಂದು ಸಂಶೋಧಕರ ತಂಡವೊಂದು ಅಭಿಪ್ರಾಯಪಟ್ಟಿತು. ತಮ್ಮ ಸಂಶೋಧನೆಗೆ ಸಂಬಂಧಿಸಿದಂತೆ ಸಂಭಾಷಣೆ, ಛಾಯಾಚಿತ್ರಗಳು ಮತ್ತು ಪತ್ರಗಳ ದಾಖಲೆಯನ್ನು 4 ಮಂದಿ ಸ್ವತಂತ್ರ ಸಂಶೋಧಕರ ಈ ತಂಡ ಡೆಹ್ರಾಡೂನಿನಲ್ಲಿ ಬಿಡುಗಡೆ ಮಾಡಿತು. ಮಾಜಿ ಸಿಬಿಐ ಇನ್ ಸ್ಪೆಕ್ಟರ್ ಓಂ ಪ್ರಕಾಶ್ ಶರ್ಮಾ, ಡಿಎವಿ ಕಾಲೇಜು ಪ್ರೊಫೆಸರ್ ದೇವೇಂದ್ರ ಭಾಸಿನ್ ಮತ್ತು ಇತರ ಇಬ್ಬರು ಈ ತಂಡದ ಸದಸ್ಯರು. ಪಶ್ಚಿಮ ಬಂಗಾಳದ ಜಲಪಾಯಿಗುರಿಯಿಂದ 1973ರಲ್ಲಿ ಡೆಹ್ರಾಡೂನಿಗೆ ಬಂದಿದ್ದ ಈ ಸ್ವಾಮೀಜಿಯ ಚಿತ್ರಗಳಲ್ಲಿನೇತಾಜಿ ಹೋಲಿಕೆ ಇದೆ. ಇಂತಹ ಸ್ವಾಮೀಜಿ ಒಬ್ಬರ ಬಗ್ಗೆ ನೇತಾಜಿ ಕಣ್ಮರೆ ಬಗ್ಗೆ ತನಿಖೆ ನಡೆಸಿರುವ ಮುಖರ್ಜಿ ಆಯೋಗವೂ ಪ್ರಸ್ತಾಪಿಸಿದೆ. ಡೆಹ್ರಾಡೂನಿಗೆ ಬರುವ ಮುನ್ನ ಈ ಸ್ವಾಮೀಜಿ ಜಲಪಾಯಿಗುರಿಯ ಶೌಲ್ಮರಿ ಆಶ್ರಮದಲ್ಲಿ ಇದ್ದರು ಎಂದು ಮುಖರ್ಜಿ ಆಯೋಗ ಹೇಳಿತ್ತು. ಈ ಸ್ವಾಮೀಜಿಯ ಅಂತ್ಯಕ್ರಿಯೆ 1977ರ ಏಪ್ರಿಲ್ 13ರಂದು ಹೃಷಿಕೇಶದಲ್ಲಿ ನಡೆದಿತ್ತು. ಸ್ವಾಮೀಜಿಯ ಆಪ್ತ ಕಾರ್ಯದರ್ಶಿಯಾಗಿದ್ದ ರಮಣಿ ರಂಜನ್ ದಾಸ್ ಅವರು ಸ್ವಾಮೀಜಿ ಭಸ್ಮದ ವಿಸರ್ಜನೆ ಕಾಲದಲ್ಲಿ `ನೇತಾಜಿ ನೀವು ನನಗೆ ವಹಿಸಿದ ಕಾರ್ಯ ಪೂರ್ಣಗೊಂಡಿತು' ಎಂದು ಉದ್ಘರಿಸಿದ್ದರು ಎಂದು ಸ್ವಾಮೀಜಿಯ ಅಂತ್ಯಕ್ರಿಯೆ ಕಾಲದಲ್ಲಿ ಹಾಜರಿದ್ದ ಪೊಲೀಸ್ ಇನ್ ಸ್ಪೆಕ್ಟರ್ ಇಂದರ್ ಪಾಲ್ ಸಿಂಗ್ ನೆನಪು ಮಾಡಿಕೊಂಡದ್ದನ್ನೂ ತಂಡ ಉಲ್ಲೇಖಿಸಿದೆ. ಈಗ ಲಭಿಸಿರುವ ಸಾಕ್ಷ್ಯಾಧಾರಗಳ ಬಗ್ಗೆ ಸರ್ಕಾರ ಸಿಬಿಐ ತನಿಖೆ ನಡೆಸಬೇಕು ಎಂದು ಸಂಶೋಧಕರ ತಂಡ ಆಗ್ರಹಿಸಿತು.

2006: ಪೋರ್ಟೊರಿಕೊದ 18ರ ಹರೆಯದ ಜಲೈಕಾ ರಿವೆರಾ ಮೆಂಡೋಜಾ 2006ನೇ ಸಾಲಿನ ಭುವನ ಸುಂದರಿಯಾಗಿ ಆಯ್ಕೆಯಾದರು. ಜಪಾನಿನ ಕುರಾರಾ ಚಿಬಾನಾ ಎರಡನೇ ಸ್ಥಾನ ಗಳಿಸಿದರು.

2006: ಕರ್ನಾಟಕ ವಿಧಾನ ಮಂಡಲವು ವಿಶೇಷ ಅಧಿವೇಶನದಲ್ಲಿ ಅಂಗೀಕರಿಸಿ ಅಂಕಿತಕ್ಕಾಗಿ ಕಳುಹಿಸಿದ್ದ `ಲಾಭದಾಯಕ ಹುದ್ದೆ'ಗೆ ಸಂಬಂಧಿಸಿದ ಮಸೂದೆಯನ್ನು ರಾಜ್ಯಪಾಲರು ಈ ದಿನ ವಾಪಸ್ ಕಳುಹಿಸಿದರು.

1997: ಮಾಜಿ ಹಂಗಾಮಿ ಪ್ರಧಾನಿ ಗುಲ್ಜಾರಿಲಾಲ್ ನಂದಾ ಮತ್ತು ಮರಣೋತ್ತರವಾಗಿ ಸ್ವಾತಂತ್ರ್ಯ ಹೋರಾಟಗಾರ್ತಿ ಅರುಣಾ ಅಸಫ್ ಅಲಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತರತ್ನ ಪ್ರಶಸ್ತಿಯನ್ನು ನೀಡಲಾಯಿತು.

1993: ಲೋಕಸಭೆಯ ವಿರೋಧ ಪಕ್ಷ ನಾಯಕರಾಗಿ ಅಟಲ್ ಬಿಹಾರಿ ವಾಜಪೇಯಿ ಆಯ್ಕೆಯಾದರು.

1969: ಗಗನನೌಕೆ ಅಪೋಲೊ-11 ಭೂಮಿಗೆ ವಾಪಸಾಯಿತು.

1932: ರೋಗಿಗಳ ಶುಶ್ರೂಷೆ ಮತ್ತು ಮಾನವೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ರಾಮಕೃಷ್ಣ ಮಿಷನ್ ಸೇವಾ ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿತು.

1874: ರಂಗಭೂಮಿ ನಟ, ಪತ್ರಿಕೋದ್ಯಮಿ, ಕರ್ನಾಟಕ ಏಕೀಕರಣಕ್ಕಾಗಿ ದುಡಿದವರಲ್ಲಿಪ್ರಮುಖರಾಗಿದ್ದ ಲೇಖಕ ಮುದವೀಡು ಕೃಷ್ಣರಾಯ (24-7-1874ರಿಂದ 7-9-1947) ಅವರು ಹನುಮಂತರಾವ್- ಗಂಗಾಬಾಯಿ ದಂಪತಿಯ ಮಗನಾಗಿ ಬಾಗಲಕೋಟೆಯಲ್ಲಿ ಜನಿಸಿದರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಕರ್ತ, ಸಾಹಿತಿ, ನಾಟಕಕಾರ ರಂಗಭೂಮಿ ನಿರ್ದೇಶಕರಾಗಿ ನಾಡಿಗೆ ಅಪಾರ ಸೇವೆ ಸಲ್ಲಿಸಿದ ಮುದವೀಡು ಅವರನ್ನು 1939ರಲ್ಲಿ ಬೆಳಗಾವಿಯಲ್ಲಿ ನಡೆದ 24ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಜನತೆ ಗೌರವಿಸಿತು. ಆಂಧ್ರಪ್ರದೇಶಕ್ಕೆ ಸೇರಿದ ಮುದವೀಡು ಗ್ರಾಮದಿಂದ ಇವರ ಹಿರಿಯರು ಬಂದ್ದದರಿಂದ ಈ ಕುಟುಂಬಕ್ಕೆ ಮುದವೀಡು ಹೆಸರು ಅಂಟಿಕೊಂಡಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement