Friday, August 15, 2008

ಇಂದಿನ ಇತಿಹಾಸ History Today ಆಗಸ್ಟ್ 15

ಇಂದಿನ ಇತಿಹಾಸ

ಆಗಸ್ಟ್ 15

`ಶೋಲೆ' ಹಿಂದಿ ಚಲನಚಿತ್ರವು ಬಾಂಬೆಯ (ಈಗಿನ ಮುಂಬೈ) ಮಿನರ್ವ ಥಿಯೇಟರಿನಲ್ಲಿ ಬಿಡುಗಡೆಗೊಂಡಿತು. ಇಲ್ಲಿ ಈ ಚಲನಚಿತ್ರವು 3 ವರ್ಷಗಳ ಕಾಲ ನಿಯಮಿತ (ರೆಗ್ಯುಲರ್) ಹಾಗೂ 2 ವರ್ಷಗಳ ಕಾಲ ಮಧ್ಯಾಹ್ನದ (ಮ್ಯಾಟಿನಿ) ಪ್ರದರ್ಶನಗಳನ್ನು ಕಂಡಿತು.

2007: ವಿಶ್ವದ ಅತ್ಯಂತ ಎತ್ತರ ಪ್ರದೇಶದಲ್ಲಿ ಮೋಟರ್ ಬೈಕ್ ಸಾಹಸಿಗರ ತಂಡವೊಂದು ತ್ರಿವರ್ಣ ಧ್ವಜಾರೋಹಣ ಮಾಡುವ ಮೂಲಕ ದೇಶದ 60ನೇ ಸ್ವಾತಂತ್ರ್ಯೋತ್ಸವಕ್ಕೆ ವಿಶೇಷ ಮೆರುಗು ನೀಡಿತು. ಹಿಮಾಚಲ ಪ್ರದೇಶದ ಲಾಹುಲ್ ಮತ್ತು ಸ್ಪಿಟಿ ಜಿಲ್ಲೆಯ ಕಿಬ್ಬರ್ ಎಂಬ ಹಳ್ಳಿ ಸಮುದ್ರ ಮಟ್ಟದಿಂದ 14,500 ಅಡಿ ಎತ್ತರದಲ್ಲಿದ್ದು ವಿಶ್ವದ ಅತ್ಯಂತ ಎತ್ತರದ ಹಳ್ಳಿ ಎಂಬ ಖ್ಯಾತಿ ಪಡೆದಿದೆ. ದೆಹಲಿ, ಚಂಡಿಗಢ ಮತ್ತು ಶಿಮ್ಲಾಕ್ಕೆ ಸೇರಿದ ನಾಲ್ವರು ಯುವಕರು ಈ ಹಳ್ಳಿಯಲ್ಲಿ ತ್ರಿವರ್ಣ ಧ್ವಜ ಅರಳಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದರು.

2007: ಉತ್ತರ ಇರಾಕಿನಲ್ಲಿ ಪ್ರಾಚೀನ ಯಾಜಿದಿ ಜನಾಂಗವನ್ನು ಗುರಿಯಾಗಿಸಿ ನಾಲ್ಕು ಆತ್ಮಹತ್ಯಾ ಟ್ರಕ್ ಬಾಂಬ್ ಸ್ಫೋಟಿಸಿ 200ಕ್ಕೂ ಹೆಚ್ಚು ಜನರ ಸಾಮೂಹಿಕ ಹತ್ಯೆ ನಡೆಯಿತು. ಘಟನೆಗಳಲ್ಲಿ ಇತರ 200ಕ್ಕೂ ಅಧಿಕ ಮಂದಿ ಗಾಯಗೊಂಡರು. ಇರಾಕಿನಲ್ಲಿ ನಾಲ್ಕು ವರ್ಷಗಳ ಕದನದ ಅವಧಿಯಲ್ಲಿ ಸಂಭವಿಸಿದ ಅತ್ಯಂತ ದೊಡ್ಡ ರಕ್ತಪಾತದ ದಾಳಿ ಇದು.

2007: ಪೆರು ಸಾಗರ ತೀರದಲ್ಲಿ ಈದಿನ ಸಂಜೆ 6.40ಕ್ಕೆ ಸಂಭವಿಸಿದ ಭೂಕಂಪದಲ್ಲಿ 72 ಜನರು ಮೃತರಾಗಿ ಒಟ್ಟು 700ಕ್ಕೂ ಹೆಚ್ಚು ಜನರು ಗಾಯಗೊಂಡರು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ ಸುಮಾರು 7.9 ರಷ್ಟಿತ್ತು. ಸುಮಾರು ಎರಡು ನಿಮಿಷಗಳ ಕಾಲ ಸಂಭವಿಸಿದ ಭೂಕಂಪನದಿಂದ ಜನರು ಭಯಬೀತರಾಗಿ ಮನೆಗಳಿಂದ ಹೊರಗೆ ಓಡಿಬಂದರು. ಸುನಾಮಿ ಉಂಟಾಗಬಹುದೆಂಬ ಭಯದಿಂದ ದಕ್ಷಿಣ ಅಮೆರಿಕದ ಫೆಸಿಪಿಕ್ ಸಾಗರ ತೀರದಲ್ಲಿ ಅನೇಕ ನಗರಗಳನ್ನೇ ತೆರವುಗೊಳಿಸಿದರು.

2007: ಆರು ತಿಂಗಳುಗಳಿಂದ ಅರ್ಜೆಂಟೀನಾದ ವಶದಲ್ಲಿದ್ದ ಬೊಫೋರ್ಸ್ ಹಗರಣದ ಮುಖ್ಯ ಆರೋಪಿ ಒಟ್ಟಾವಿಯೋ ಕ್ವಟ್ರೋಚಿ (69) ಬಿಡುಗಡೆಗೊಂಡು ತನ್ನ ಸ್ವದೇಶ ಇಟಲಿಗೆ ಮರಳಿದ. ಈತನ ಹಸ್ತಾಂತರಕ್ಕೆ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಭಾರತ ವಿಫಲವಾದ ಹಿನ್ನೆಲೆಯಲ್ಲಿ ಕಾನೂನು ಸಮರವೂ ಕೊನೆಗೊಂಡಂತಾಯಿತು. ಅರ್ಜೆಂಟೀನಾ ನ್ಯಾಯಾಲಯದಲ್ಲಿ ಕ್ವಟ್ರೋಚಿ ಪರವಾಗಿ ತೀರ್ಪು ಬಂದ ನಂತರ ಅದರ ವಿರುದ್ಧ ಭಾರತೀಯ ತನಿಖಾ ಸಂಸ್ಥೆ ಸಿಬಿಐ ಯಾವುದೇ ಮೇಲ್ಮನವಿ ಸಲ್ಲಿಸದ ಕಾರಣ ಅಲ್ಲಿನ ಆಡಳಿತವು ವಾರದ ಹಿಂದೆ ಆತನ ಪಾಸ್ ಪೋರ್ಟ್ ಹಿಂತಿರುಗಿಸಿತ್ತು.

2006: ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅಂತರ್ಜಾಲ ತಾಣ w.w.w.presidentofindia.nic.in ಗೆ ಈದಿನ ಒಂದೇ ದಿನದಲ್ಲಿ ಒಂದು ಕೋಟಿ ಭೇಟಿ (ಹಿಟ್ಸ್) ದಾಖಲಾಯಿತು. ವಿಶ್ವದಾದ್ಯಂತದಿಂದ ಆಗಸ್ಟ್ ತಿಂಗಳಿನಲ್ಲಿ ಈ ಅಂತರ್ಜಾಲ ತಾಣಕ್ಕೆ ದಾಖಲಾದ ಭೇಟಿ 12 ಕೋಟಿ. ಈ ತಾಣದಲ್ಲಿ ರಾಷ್ಟ್ರಪತಿಗಳ ಸಂದೇಶ, ಭಾಷಣ, ಸಂವಾದದ ವಿವರಗಳ ಜೊತೆಗೆ ವಿದ್ಯಾರ್ಥಿಗಳ ಹಾಗೂ ವಿಜ್ಞಾನಿಗಳ ಪ್ರಶ್ನೆಗೆ ಕಲಾಂ ಅವರು ನೀಡಿದ ಉತ್ತರಗಳು ಲಭಿಸುತ್ತವೆ.

2006: ಭಾರತದ ಸುಪ್ರೀಂಕೋರ್ಟ್ 1950ರಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಇದೇ ಮೊದಲ ಬಾರಿ ಈದಿನ ಸ್ವಾತಂತ್ರ್ಯೋತ್ಸವ ಆಚರಿಸಿತು. ಹಲವು ಗಣ್ಯರ ಸಮ್ಮುಖದಲ್ಲಿ ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ಧ್ವಜಾರೋಹಣ ಮಾಡುವುದರೊಂದಿಗೆ ಇತಿಹಾಸ ಸೃಷ್ಟಿಯಾಯಿತು. ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರೂ ಈ ಚೊಚ್ಚಲ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

2006: ಇನ್ನೂರು ವರ್ಷಗಳ ಬಳಿಕ ಮೊತ್ತ ಮೊದಲ ಬಾರಿಗೆ ಚಾರಿತ್ರಿಕ ವೆಲ್ಲೂರು ಕೋಟೆಯಲ್ಲಿ 60ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾಧಿಕಾರಿ ಧರ್ಮೇಂದ್ರ್ರ ಪ್ರದೀಪ ಯಾದವ್ ಧ್ವಜಾರೋಹಣ ನೆರವೇರಿಸಿದರು. 1806ರ ಜುಲೈ 10ರಂದು 23ನೇ ಸೈನಿಕ ಪಡೆಯ ಮೂರು ಸೈನಿಕ ತುಕಡಿಗಳು ದಂಗೆ ಎದ್ದು ವೆಲ್ಲೂರು ಕೋಟೆ ಬಳಿ ಬೀಡು ಬಿಟ್ಟಿದ್ದ ಯುರೋಪಿನ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ ಕೋಟೆ ಮೇಲೆ ಧ್ವಜ ಹಾರಿಸಿದ್ದವು. ಈ ದಂಗೆ ಬ್ರಿಟಿಷ್ ಆಳ್ವಿಕೆ ವಿರುದ್ಧ ಸೈನಿಕರು ನಡೆಸಿದ್ದ ಮೊದಲ ದಂಗೆಯಾಗಿದ್ದು, 1857ರಲ್ಲಿ ಮತ್ತೊಮ್ಮೆ ಸೈನಿಕರು ಬ್ರಿಟಿಷರ ವಿರುದ್ಧ ದಂಗೆ ಎದ್ದರು. ಇದು ಬ್ರಿಟಿಷರ ಪಾಲಿಗೆ ಸಿಪಾಯಿ ದಂಗೆ ಎನಿಸಿಕೊಂಡರೆ, ಭಾರತೀಯರ ಪಾಲಿಗೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎನಿಸಿತು.

2006: ವಿದ್ವಾಂಸ ರಾಮಚಂದ್ರ ಉಚ್ಚಿಲ (86) ಅವರು ಸೋಮೇಶ್ವರ ಉಚ್ಚಿಲದಲ್ಲಿ ನಿಧನರಾದರು. ಸ್ವಯಂ ಸಾಧನೆಯಿಂದ ತಮ್ಮನ್ನು ರೂಪಿಸಿಕೊಂಡ ಉಚ್ಚಿಲ ಅವರು ಯಕ್ಷಗಾನ ಹಿತರಕ್ಷಣೆಗಾಗಿ ಅವಿರತ ಹೋರಾಟ ನಡೆಸಿದವರು. ಹಲವು ಪತ್ರಿಕೆಗಳ ಅಂಕಣಕಾರ, ಉತ್ತಮ ಕ್ರೀಡಾಪಟುವಾಗಿದ್ದರು. ಕಡಲಕರೆಯ ಚಿತ್ರಗಳು, ಪದರ, ಯಕ್ಷಗಾನ ನಡೆದು ಬಂದ ದಾರಿ, ಪುನರಪಿ ಜನನಂ, ಮ್ದುದಣ ಕವಿ ಮತ್ತು ಯಕ್ಷಗಾನ ಚರಿತ್ರೆ (ಡಾ. ಶ್ರೀನಿವಾಸ ಹಾವನೂರ ಅವರ ಜೊತೆಗೆ), ಕನ್ನಡ ವ್ಯಾಕರಣ ಮತ್ತು ಛಂದಸ್ಸು, ಸುಲಭ ವ್ಯಾಕರಣ, ನೆನಪಿನ ಬುತ್ತಿ, ಹೊಸ ಗನ್ನಡಿ, ಪಂಪ ರಾಮಾಯಣ ಇತ್ಯಾದಿ ಅವರ ಕೃತಿಗಳು.

2001: ಭಾರತೀಯ ನೌಕಾಪಡೆಯ ಹಡಗುಗಳು ಮತ್ತು ಜಲಾಂತರ್ಗಾಮಿಗಳು ಸೇಂಟ್ ಜಾರ್ಜ್ ನ `ಕ್ರಾಸ್' ಗೆ (ಶಿಲುಬೆ) ಬದಲಾಗಿ ಭಾರತೀಯ ಲಾಂಛನವುಳ್ಳ ಹೊಸ ಧ್ವಜವನ್ನು ಹಾರಿಸಿದವು. ನೌಕೆಯ ತುದಿಯನ್ನು ಒಳಗೊಂಡ ಹೊಸ ಬಿಳಿ ಮತ್ತು ನೀಲಿ ಬಣ್ಣದ ಧ್ವಜವನ್ನು ಸರಳತೆ ಮತ್ತು ಸೇನೆ ಹಾಗೂ ವಾಯುಪಡೆಗಳ ಧ್ವಜಗಳಿಗೆ ಸಾಮ್ಯ ಇರುವಂತೆ ರೂಪಿಸಲಾಗಿದೆ.

1982: ಭಾರತಕ್ಕೆ ಕಲರ್ ಟಿವಿ ಬಂತು. ಪ್ರಧಾನಿ ಇಂದಿರಾಗಾಂಧಿಯವರು ದೆಹಲಿಯ ಕೆಂಪುಕೋಟೆಯ ಮೇಲಿನಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದ ವರ್ಣರಂಜಿತ ಪ್ರಸಾರದೊಂದಿಗೆ ಕಲರ್ ಟಿವಿ ಪ್ರಸಾರದ ಉದ್ಘಾಟನೆಯಾಯಿತು.

1981: ಕಾಂಗೈ ಪಕ್ಷವೇ ನಿಜವಾದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಎಂದು ಚುನಾವಣಾ ಆಯೋಗವು ಮನ್ನಣೆ ನೀಡಿತು. ಕಾಂಗ್ಯುಗೆ ರಾಷ್ಟ್ರೀಯ ಪಕ್ಷದ ಮಾನ್ಯ ರದ್ದು ಪಡಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳು ಪರಿಶೀಲನೆ ಬಳಿಕ ಸುಪ್ರೀಂಕೋರ್ಟ್ ಅವುಗಳನ್ನು ವಜಾ ಮಾಡಿತು.

1975: ಢಾಕಾದಲ್ಲಿ ನಡೆದ ಕ್ಷಿಪ್ರದಂಗೆಯಲ್ಲಿ ಬಾಂಗ್ಲಾದೇಶದ ಅಧ್ಯಕ್ಷ ಮುಜಿಬುರ್ ರೆಹಮಾನ್ ಅವರನ್ನು ಹತ್ಯೆಗೈಯಲಾಯಿತು.

1975: `ಶೋಲೆ' ಹಿಂದಿ ಚಲನಚಿತ್ರವು ಬಾಂಬೆಯ (ಈಗಿನ ಮುಂಬೈ) ಮಿನರ್ವ ಥಿಯೇಟರಿನಲ್ಲಿ ಬಿಡುಗಡೆಗೊಂಡಿತು. ಇಲ್ಲಿ ಈ ಚಲನಚಿತ್ರವು 3 ವರ್ಷಗಳ ಕಾಲ ನಿಯಮಿತ (ರೆಗ್ಯುಲರ್) ಹಾಗೂ 2 ವರ್ಷಗಳ ಕಾಲ ಮಧ್ಯಾಹ್ನದ (ಮ್ಯಾಟಿನಿ) ಪ್ರದರ್ಶನಗಳನ್ನು ಕಂಡಿತು.

1972: `ಪಿನ್ಕೋಡ್' ಎಂದೇ ಪರಿಚಿತವಾಗಿರುವ ಆರು ಅಂಕಿಗಳ `ಪೋಸ್ಟಲ್ ಇಂಡೆಕ್ಸ್ ಕೋಡ್ ನಂಬರ್' (ಪಿಐಎನ್) ಅನುಷ್ಠಾನಗೊಂಡಿತು.

1969: ಅಣುಶಕ್ತಿ ಇಲಾಖೆಯ ಅಡಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ರಚಿಸಲಾಯಿತು.

1958: ಸಾಹಿತಿ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ತಿಮ್ಮಶೆಟ್ಟಿಗೌಡರು- ಪಾರ್ವತಮ್ಮ ದಂಪತಿಯ ಮಗನಾಗಿ ನಾಗಮಂಗಲ ತಾಲ್ಲೂಕಿನ ನಾಗತಿಹಳ್ಳಿಯಲ್ಲಿ ಜನಿಸಿದರು.

1956: ಸಾಹಿತಿ ಯಶೋದ ವಿ. ಜನನ.

1955: ಗೋವಾ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಆರಂಭಗೊಂಡಿತು.

1950: ಭಾರತದ ಸಂವಿಧಾನ ಜಾರಿಗೆ ಬಂತು.

1947: ಭಾರತವು ಬ್ರಿಟಿಷ್ ಆಡಳಿತದಿಂದ ಬಿಡುಗಡೆಗೊಂಡು ಸ್ವತಂತ್ರ ರಾಷ್ಟ್ರವಾಯಿತು. ಪಂಡಿತ ಜವಾಹರಲಾಲ್ ನೆಹರೂ ಅವರು ಭಾರತದ ಪ್ರಥಮ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಬ್ರಿಟಿಷ್ ಆಳ್ವಿಕೆ ಕೊನೆಗೊಂಡಿರುವುದರ ಸಂಕೇತವಾಗಿ ನೆಹರೂ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. ಕೆಂಪುಕೋಟೆಯ ಮೇಲೆ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪ್ರಧಾನಿ ಧ್ವಜ ಹಾರಿಸುವ ಪರಂಪರೆಗೆ ಇದು ನಾಂದಿಯಾಯಿತು.

1946: ಸಾಹಿತಿ ಮಧು ಪಿ. ಹಳ್ಳಿ ಜನನ.

1942: ಮಹಾತ್ಮ ಗಾಂಧಿ ಅವರ ಆಪ್ತ ಕಾರ್ಯದರ್ಶಿ ಮಹಾದೇವ ಹರಿಭಾಯಿ ದೇಸಾಯಿ ನಿಧನ.

1939: `ದಿ ವಿಝಾರ್ಡ್ ಆಫ್ ಓಝ್' ಚಲನಚಿತ್ರವು ಹಾಲಿವುಡ್ಡಿನ ಗ್ರುಮಾನ್ಸ್ ಚೈನೀಸ್ ಥಿಯೇಟರಿನಲ್ಲಿ ಪ್ರದರ್ಶನಗೊಂಡಿತು.

1938: ಸಾಹಿತಿ ಬೆಸಗರಹಳ್ಳಿ ರಾಮಣ್ಣ ಜನನ.

1926: ಸಾಹಿತಿ, ಚಲನಚಿತ್ರ ಸಂಭಾಷಣಕಾರ, ಗೀತ ರಚನಾಕಾರ ಎಂ. ನರೇಂದ್ರ ಬಾಬು (15-8-1926ರಿಂದ 18-10-1999) ಈ ದಿನ ಮೈಸೂರಿನಲ್ಲಿ ಜನಿಸಿದರು. ಸುಮಾರು 10 ಕಾದಂಬರಿಗಳನ್ನು ರಚಿಸಿರುವ ನರೇಂದ್ರಬಾಬು, 85ಕ್ಕೂ ಹೆಚ್ಚು ಕನ್ನಡ ಚಲನ ಚಿತ್ರಗಳಿಗೆ ಸಾಹಿತ್ಯ, 150ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ರಚಿಸಿದ್ದಾರೆ.

1921: ಕಾದಂಬರಿಕಾರ, ಅನುವಾದಕಾರ ಅಮೃತರಾಯ್ ಜನನ.

1914: ಪನಾಮಾ ಕಾಲುವೆಯನ್ನು ಅಧಿಕೃತವಾಗಿ ಸಂಚಾರದ ಸಲುವಾಗಿ ತೆರೆಯಲಾಯಿತು.

1910: ಸಾಹಿತಿ ಐರೋಡಿ ಯಜ್ಞ ನಾರಾಯಣ ಉಡುಪ ಜನನ. ಇವರು ಬರೆದಿರುವ 'ಪುರಾನಣ ಭಾರತ ಕೋಶ' ಕೃತಿಯು ಭಾರತದ ವಿವಿಧ ಪುರಾಣಗಳಲ್ಲಿ ಪ್ರಸ್ತಾಪಗೊಂಡಿರುವ ಹೆಸರುಗಳು, ಪದಗಳ ಉಲ್ಲೇಖ ಸಂದರ್ಭ, ಅರ್ಥ ವಿವರಣೆ ಇತ್ಯಾದಿ ಒದಗಿಸುವ ಒಂದು ಸುಂದರ ಶಬ್ಧಕೋಶ. ಕನ್ನಡ ಪುಸ್ತಕ ಪ್ರಾಧಿಕಾರವು ಇದನ್ನು ತನ್ನ ಜನಪ್ರಿಯ ಪುಸ್ತಕಮಾಲೆಯಲ್ಲಿ ಪ್ರಕಟಿಸಿದೆ. ಖ್ಯಾತ ಸಾಹಿತಿ ಶಿವರಾಮ ಕಾರಂತ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ.

1872: ಅರವಿಂದರ ಜನ್ಮದಿನ.

1795: ಸಂಗೊಳ್ಳಿ ರಾಯಣ್ಣ ಜನ್ಮದಿನ.

1769: ನೆಪೋಲಿಯನ್ ಬೋನಪಾರ್ಟೆ ಜನ್ಮದಿನ. ಮೊದಲಿಗೆ ಫ್ರೆಂಚ್ ಜನರಲ್ ಆಗಿದ್ದು ನಂತರ ಫ್ರಾನ್ಸಿನ ಚಕ್ರವರ್ತಿಯಾದ ಈತ ಮಾಡಿದ ಹಲವಾರು ಸುಧಾರಣೆಗಳು ಫ್ರಾನ್ಸ್ ಮತ್ತು ಪಶ್ಚಿಮ ಯುರೋಪಿನಲ್ಲಿ ಅಚ್ಚಳಿಯದ ಪರಿಣಾಮ ಬೀರಿವೆ.

1519: ಪನಾಮಾ ನಗರ ಸ್ಥಾಪನೆ.

No comments:

Advertisement