My Blog List

Thursday, August 14, 2008

Left Handers day! ಎಡಚರೆಂದು ಜರೆಯದಿರಿ ನಮ್ಮ...!

Left Handers day!

You will observe Friendship day, Lovers Day, Fathers Day, Mothers Day, Doctors day etc etc. But will you observe Left Handers day? Yes. Left handers also have day. Why left handers need a day? Pls go through this article by Nethrakere Udaya Shankara.


ಎಡಚರೆಂದು ಜರೆಯದಿರಿ ನಮ್ಮ...!

'ಅಪ್ಪನ ದಿನ, ಅಮ್ಮನ ದಿನ, ಪ್ರೇಮಿಗಳ ದಿನ, ಅಂಧರ ದಿನ ಎಲ್ಲವೂ ಗೊತ್ತು. ಆದರೆ ವಿಶ್ವ ಎಡಗೈ ಮಂದಿಯ ದಿನ ಗೊತ್ತೇ? ಆಗಸ್ಟ್ 13ರಂದು ವಿಶ್ವ ಎಡಗೈ ಮಂದಿಯ ದಿನ. ಬಲಗೈ ಮಂದಿಯಿಂದ ಎಡಗೈ ಮಂದಿ ಏನನ್ನು ಅಪೇಕ್ಷಿಸುತ್ತಾರೆ?

ನೆತ್ರಕೆರೆ ಉದಯಶಂಕರ

ಅಬ್ಬ ! ಈಗಲೂ ನೆನಪಾಗುತ್ತದೆ. ಅದೆಷ್ಟು ಸಲ ನಾನು ಅಮ್ಮನಿಂದ, ಅಪ್ಪನಿಂದ ಬೈಸಿಕೊಂಡಿದ್ದೇನೆ. 'ಇಚ್ಚಿ ಕೈಯಲ್ಲಿ ಬರೆಯಬೇಡವೋ' ಎಂದು ಅಕ್ಕನಿಂದ ಕೈಗಂಟಿಗೆ ಕುಟ್ಟಿಸಿಕೊಂಡಿದ್ದೇನೆ.' ಅವನು ಎಡಚ. ಅವನಿಗೆ ಬಲಗೈಯಲ್ಲಿ ಬರೆಯಲು ಬರುವುದಿಲ್ಲವೋ' ಎಂದು ಗೆಳೆಯರಿಂದ, ಸಹಪಾಠಿಗಳಿಂದ ಅವಮಾನಕ್ಕೆ ಗುರಿಯಾಗಿದ್ದೇನೆ.

ಏಕಪ್ಪಾ ನನಗೀ ಕಷ್ಟ ಅಂತ ಅದೆಷ್ಟು ಸಲ, ಕೋಣೆಯ ಮೂಲೆಯಲ್ಲಿ ಕುಳಿತು ಅತ್ತಿದ್ದೇನೆ.

ಆದರೆ ನಾನೇನು ಮಾಡಲಿ? ನನಗೆ ಏನಾದರೂ ಕೆಲಸ ಮಾಡಬೇಕು ಅನ್ನಿಸಿದರೆ ಸಾಕು ಮುಂದಕ್ಕೆ ಬರುವುದು ಎಡಗೈಯೇ. ಬಲಗೈಯನ್ನು ಮುಂದೆ ತರಬೇಕು ಅಂದುಕೊಂಡರೂ ಏಕೋ ಏನೋ ಅದು ಸಾಧ್ಯವಾಗುವುದೇ ಇಲ್ಲ.

ಅಲ್ಲ, ತಪ್ಪಾದರೂ ಏನು? ದೇವರ ಸೃಷ್ಟಿಯಲ್ಲಿ ಎಲ್ಲವೂ ಒಂದೇ ಎಂದು ಹೇಳುವ ಜನರೇ ಎಡಗೈ ಬಗ್ಗೆ ಹೀಗೇಕೆ ವರ್ತಿಸುತ್ತಾರೆ? ಎಡಗೈಗೂ ಬಲಗೈಯಷ್ಟೇ ತಾಕತ್ತು ಇಲ್ಲವೇನು? ಯಾರಾದರೂ ನನ್ನೊಂದಿಗೆ ಲಡಾಯಿಗೆ ನಿಂತರೆ ಅವರನ್ನು ಕೆಳಕ್ಕೆ ಬೀಳಿಸಿಬಿಡಲು ನನ್ನ ಎಡಗೈಯೇ ಸಾಕು!

ಮೊದ ಮೊದಲಿಗೆ ನನಗೆ ಅಳುವೇ ಬಂದು ಬಿಡುತ್ತಿತ್ತು. ಈಗ ಬಿಡಿ, ಎಡಗೈಗೂ ಬಲಗೈಯಷ್ಟೇ ಶಕ್ತಿ ಉಂಟು , ಸಾಮರ್ಥ್ಯ ಉಂಟು ಅಂತ ಖಚಿತವಾಗಿದೆ. ಹೆಚ್ಚೇಕೆ ಈ ಬಲಗೈ ಮಂದಿಗಿಂತ ಎಡಗೈ ಮಂದಿಯೇ ಬುದ್ಧಿವಂತಿಕೆಯಲ್ಲೂ ಮುಂದಿದ್ದಾರೆ ಎಂಬುದೂ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಬಹಳ ಓದಿದ ಮೇಲೆಯೇ ನನಗೂ ಈ ಬಗ್ಗೆ ಗೊತ್ತಾದದ್ದು. ಅಲ್ಲವಾ ಮತ್ತೆ? ಜಗತ್ತಿನಲ್ಲಿ ಕೋಟ್ಯಂತರ ಮಂದಿ ಹುಚ್ಚೆದ್ದು ಓಡುತ್ತಾರಲ್ಲ - ಚಾರ್ಲಿ ಚಾಪ್ಲಿನ್ ಸಿನೆಮಾ ಅಂತ, ಆ ಚಾಪ್ಲಿನ್ ಏನು ಬಲಗೈಯವನಾ? ವಿಜ್ಞಾನಿ ಐಸಾಕ್ ನ್ಯೂಟನ್ ಇದ್ದಾನಲ್ಲ ಅವನೇನು ಬಲಗೈಯವನಾ? ಅಲ್ಬರ್ಟ್ ಐನ್ ಸ್ಟೀನ್ ಯಾವ ಕೈಯವ?

ಬೇಡ, ಹೆಸರಾಂತ ಚೆಸ್ ಪಟು ಬಾಬ್ಬಿ ಫಿಶರ್ ಇದ್ದಾನಲ್ಲ- ಅವ ಚೆಸ್ ಆಡುತ್ತಿದ್ದುದು ಬಲಗೈಯಲ್ಲಾ? ಮಹಾನ್ ಸಂಗೀತಗಾರರಾದ ಬಾಬ್ ಡೈಲಾನ್, ಪೌಲ್ ಮೆಕ್ ಕಾಟ್ನಿ, ವೈಂಟನ್ ಮಾರ್ಸಲಿಸ್ ಅವರೆಲ್ಲ ಬಲಗೈಯವರಾ?

ಇಂತಹ ಮಹಾಮಹಿಮರೆಲ್ಲಾ ಎಡಗೈ ವೀರರು ಎಂದು ಹೇಳಲು ನಿಜಕ್ಕೂ ನನಗೆ ಹೆಮ್ಮೆಯಾಗುತ್ತದೆ.
ಒಂದು ವಿಷಯ ತಿಳಿದುಕೊಳ್ಳಿ: ನಮಗೆ ಎಡಗೈ ಅಥವಾ ಬಲಗೈ ಬಳಕೆಯ ಅಭ್ಯಾಸ ಯಾಕೆ ಅಂಟಿಕೊಳ್ಳುತ್ತದೆ ಎಂಬುದು ಈವರೆಗೂ ಖಚಿತವಾಗಿ ಯಾರಿಗೂ ಗೊತ್ತಾಗಿಲ್ಲ. ಆದರೆ ನಮ್ಮ ಮೆದುಳಿನ ಬಲಭಾಗವು ದೇಹದ ಎಡಭಾಗವನ್ನೂ, ಮೆದುಳಿನ ಎಡಭಾಗವು ದೇಹದ ಬಲಭಾಗವನ್ನೂ ನಿಯಂತ್ರಿಸುತ್ತದಂತೆ. ಇದು ವಿಜ್ಞಾನಿಗಳ ಮಾತು. ಅಂದರೆ ಗೊತ್ತಾಯಿತಲ್ಲ, ನೀವೆಲ್ಲ ನಿಮ್ಮದು ಬಲಗೈ ಅಂತ ಕೊಚ್ಚಿಕೊಳ್ಳಬೇಕಾದ್ದು ಏನೂ ಇಲ್ಲ, ಏಕೆಂದರೆ ನಿಮಗೆ ಇರುವುದು ಬಲ ಮೆದುಳಲ್ಲ, ಎಡ ಮೆದುಳು!, ಬಲ ಮೆದುಳು ನಮ್ಮದು!

ಈ ಮನುಷ್ಯರಲ್ಲಿ ಒಂದು ಮನೋಭಾವ ಬೆಳೆದುಬಿಟ್ಟಿದೆ. 'ಎಡ' ಅಂದರೆ ಇಂಗ್ಲಿಷಿನಲ್ಲಿ 'ಲೆಫ್ಟ್' ಅಂದರೆ ದುರ್ಬಲ, ಉಪಯೋಗ ಇಲ್ಲದ್ದು, 'ಬಲ' ಅಂದರೆ ಇಂಗ್ಲಿಷಿನಲ್ಲಿ 'ರೈಟ್' ಅಂದರೆ 'ಸರಿಯಾದದ್ದು' ಅಂತ.

ರಸ್ತೆಯಲ್ಲಿ ನಡೆದುಹೋಗುತ್ತಾ ಇರುವ ಪ್ರತಿ 10 ಮಂದಿಯಲ್ಲಿ ಒಬ್ಬ ಮಾತ್ರ 'ಎಡಗೈ' ವ್ಯಕ್ತಿಯಂತೆ. ಹಾಗಂತ ಸಮೀಕ್ಷೆಗಳು ಹೇಳುತ್ತವೆ. ಹೀಗಾಗಿ ಉಳಿದ ಒಂಬತ್ತು ಮಂದಿ ಜಗತ್ತು ಬಲಗೈ ಮಂದಿಗೆ ಸೇರಿದ್ದು ಅಂತ ತೀರ್ಮಾನಿಸಿಬಿಟ್ಟರು.

ಜಗತ್ತಿನಲ್ಲಿ ಏನನ್ನೇ ತಯಾರಿಸಿ, ಅದೆಲ್ಲ ಬಲಗೈ ಮಂದಿ ಬಳಸುವಂತೆಯೇ ಇರಬೇಕು ಅಂತ ನಿರ್ಧರಿಸಿಬಿಟ್ಟರು. ಬೇಕಿದ್ದರೆ ನೋಡಿ ಕತ್ತರಿಯಿಂದ ಹಿಡಿದು ಸ್ಕ್ರೂ ಡ್ರೈವರ್ ವರೆಗೆ, ಹಾಕಿ ಸ್ಟಿಕ್ಕಿನಿಂದ ಹಿಡಿದು ಬೇಸ್ ಬಾಲ್ ಕವಚದವರೆಗೆ ಎಲ್ಲವೂ ಬಲಗೈ ಮಂದಿಗೆ ಬಳಸಲು ಅನುಕೂಲವಾಗುವಂತದ್ದೇ. ಇತ್ತೀಚೆಗೆ ಬಂದ ಕಂಪ್ಯೂಟರ್ ಮೌಸ್ ನೋಡಿ ಸ್ವಾಮಿ, ಯಾಕೆ ಅದನ್ನು ಬಲಭಾಗದಲ್ಲೇ ಇಟ್ಟುಕೊಳ್ಳುವಂತೆ ರೂಪಿಸಬೇಕು?

ಒಂದು ಸಣ್ಣ ಪ್ರಯೋಗ ಮಾಡಿ. ನೀವು ಬಲಗೈಯವರಾಗಿದ್ದರೆ ನೀವು ಬಳಸುವ ಕತ್ತರಿಯನ್ನು ಎಡಗೈಯಲ್ಲಿ ಹಿಡಿದುಕೊಂಡು ಕಾಗದದ ಒಂದು ಹಾಳೆಯನ್ನು ನೇರವಾಗಿ ಕತ್ತರಿಸಲು ಪ್ರಯತ್ನಿಸಿ. ಇಲ್ಲವೇ ಪೆನ್ ತೆಗೆದುಕೊಂಡು ಎಡಗೈಯಲ್ಲಿ ಹಿಡಿದು ಬರೆಯಲು ಯತ್ನಿಸಿ. ಬಲಗೈ ಪ್ರಪಂಚದ ಸಲಕರಣೆಗಳನ್ನು ಹಿಡಿದುಕೊಂಡು ನಾವು ಎಡಗೈ ಮಂದಿ ಪ್ರತಿದಿನ ಎಷ್ಟು ಒದ್ದಾಡುತ್ತಿದ್ದೇವೆ ಎಂದು ನಿಮಗೆ ಅರ್ಥವಾಗಬಹುದು.

ಜಗತ್ತಿನಲ್ಲಿ ಒಂದಷ್ಟು ಮಂದಿಗೆ 'ಬೆಕ್ಕಿನ ಕಣ್ಣು' ಉಂಟಲ್ಲ? ಯಾಕೆ ಅಂತ ಯಾವತ್ತಾದರೂ ಕೇಳಿದ್ದೀರಾ? ಈ ಕೆಲವರಿಗೆ 'ಬೆಕ್ಕಿನ ಕಣ್ಣು' ಹೇಗೆ ಬರುತ್ತದೋ ಹಾಗೆಯೇ ನಮ್ಮಂತಹ ಕೆಲವರಿಗೆ 'ಎಡಗೈ' ಬರುತ್ತದೆ ಅಂತ ವೈದ್ಯಕೀಯ ಸಂಶೋಧಕರೇ ಅಭಿಪ್ರಾಯಪಟ್ಟಿದ್ದಾರೆ ಸ್ವಾಮೀ. ಆದರೂ ಎಷ್ಟೋ ಮಂದಿ ಶಿಕ್ಷಕರು, ಅಪ್ಪ- ಅಮ್ಮಂದಿರಿಗೆ ಇದು ಅರ್ಥವಾಗುವುದಿಲ್ಲವಲ್ಲ!

ಅಮ್ಮನ, ಅಪ್ಪನ, ಶಿಕ್ಷಕನ ಕಷ್ಟ ಅರ್ಥ ಮಾಡಿಕೊಂಡು ಅವರಿಗೆ ಒಂದಷ್ಟು ಗೌರವ, ಪ್ರೀತಿ, ಪ್ರೇಮ ಧಾರೆ ಎರೆಯುವುದಕ್ಕಾಗಿ ಅವರ ದಿನಗಳನ್ನು ಆಚರಿಸುತ್ತೀರಿ. 'ಪ್ರೇಮಿಗಳ ದಿನ' 'ಸ್ನೇಹದ ದಿನ', 'ಅಂಧರ ದಿನ', 'ಅಂಗವಿಕಲರ ದಿನ' ಇತ್ಯಾದಿ ದಿನಗಳನ್ನೆಲ್ಲ ಆಚರಿಸುತ್ತೀರಿ. ಆದರೆ ಯಾಕೆ ಸ್ವಾಮೀ ನಮ್ಮನ್ನು ಮರೆತುಬಿಟ್ಟಿದ್ದೀರಿ?

ಇರಲಿ ಬಿಡಿ, ಈಗ ನಾವೂ ಒಂದು ಸಂಘ ಕಟ್ಟಿಕೊಂಡಿದ್ದೇವೆ. 'ಲೆಫ್ಟ್ ಹ್ಯಾಂಡರ್ಸ್ ಇಂಟರ್ ನ್ಯಾಷನಲ್' ಅಂತ. ಅದರ ಮೂಲಕ 'ವಿಶ್ವ ಎಡಗೈ ದಿನ' (ಇಂಟರ್ ನ್ಯಾಷನಲ್ ಲೆಫ್ಟ್ ಹ್ಯಾಂಡರ್ಸ್ ಡೇ) ಆಚರಿಸುತ್ತಿದ್ದೇವೆ.

1976ರಲ್ಲಿ ಆಗಸ್ಟ್ 13ರಂದು ಮೊದಲ ಬಾರಿಗೆ ಈದಿನ ಆಚರಿಸಿದ್ದೇವೆ. ವಿದೇಶಗಳಲ್ಲೆಲ್ಲ ಈ ದಿನದಂದು ಪ್ರತಿವರ್ಷ 'ವಿಶ್ವ ಎಡಗೈ ದಿನ' ಆಚರಿಸುತ್ತಾರೆ. ನಾವೂ ಅದನ್ನು ಆಚರಿಸಲು ಮನಸ್ಸು ಮಾಡಿದ್ದೇವೆ.

ವಿಶ್ವ ಎಡಗೈ ದಿನ ಆಚರಣೆ ಯಾಕೆ ಅಂತ ಗೊತ್ತಾ? ಬಲಗೈ ಮಂದಿಯ ಜಗತ್ತಿನಲ್ಲಿ ಎಡಗೈ ಮಂದಿಯ ಬದುಕನ್ನು ಒಂದಿಷ್ಟಾದರೂ ಹಸನುಗೊಳಿಸುವ ಯತ್ನಕ್ಕಾಗಿ. ಎಡಗೈ ಮಂದಿಗೆ ಮುಖ್ಯವಾಗಿ ತೊಂದರೆಯಾಗುವಂತಹ ಅಡಿಗೆ ಕೋಣೆಯ ಪರಿಕರಗಳು, ಕಾರ್ಖಾನೆಯ ಯಂತ್ರೋಪಕರಣಗಳು, ಕ್ರೀಡಾ ಸಾಮಗ್ರಿಗಳು, ಕಂಪ್ಯೂಟರ್ ಮೌಸ್ ಮತ್ತಿತರ ಉಪಕರಣಗಳನ್ನು ಎಡಗೈ ಮಂದಿಯ ಬಳಕೆಗೆ ಅನುಕೂಲವಾಗುವಂತೆ ತಯಾರಿಸಲು ಒತ್ತಡ ತರುವ ಸಲುವಾಗಿ. ಎಡಗೈ ಬರಹ ಅಂದರೆ ಬಲಗೈ ಬರಹದ ಕನ್ನಡಿ ಪ್ರತಿಬಿಂಬ ಮಾತ್ರ ಎಂಬುದರ ಬಗ್ಗೆ ತಿಳುವಳಿಕೆ ಮೂಡಿಸುವ ಸಲುವಾಗಿ, ಬಲಗೈಯಲ್ಲೇ ಬರೆಯಿರಿ ಅಂತ ಎಡಗೈ ಮಂದಿಯ ಮೇಲೆ ಒತ್ತಡ ಹೇರಿ ಶಿಕ್ಷಿಸಬೇಡಿ- ಅದು ಅಪರಾಧವಲ್ಲ, ಅಥವಾ ಯಾವುದೇ ರೋಗ ಇಲ್ಲವೇ ನ್ಯೂನತೆ ಅಲ್ಲ ಎಂಬ ವಿಚಾರವನ್ನು ಬಲಗೈ ಮಂದಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ.

ಬಲಗೈ ಜಗತ್ತಿನ ಮಂದಿ ಎಡಗೈ ಜಗತ್ತಿನ ಮಂದಿಯ ಕಷ್ಟವನ್ನು ಅರ್ಥಮಾಡಿಕೊಂಡು ತಾವೂ ಪ್ರತಿವರ್ಷ ಆಗಸ್ಟ್ 13ರಂದು ಈ ದಿನವನ್ನು ಆಚರಿಸಿ ಎಡಗೈ ಮಂದಿಯನ್ನು ಹರಸುವರು ಎಂದು ಹಾರೈಸಲೇ?

- ಬಲಗೈ ಮಂದಿಯ ಸಹಕಾರದ ನಿರೀಕ್ಷೆಯಲ್ಲಿ

ನಿಮ್ಮ ಪ್ರೀತಿಯ,

ಎಡಚ.

No comments:

Advertisement