Wednesday, August 6, 2008

ಇಂದಿನ ಇತಿಹಾಸ History Today ಆಗಸ್ಟ್ 6

ಇಂದಿನ ಇತಿಹಾಸ

ಆಗಸ್ಟ್ 6

ಹಿರಿಯ ಬಿಜೆಪಿ ನಾಯಕ, ಪರಿಶಿಷ್ಟ ಜಾತಿ/ವರ್ಗಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಸೂರಜ್ ಭಾನ್ ಹೃದಯಾಘಾತದಿಂದ ನವದೆಹಲಿಯಲ್ಲಿ ನಿಧನರಾದರು. ಎನ್ ಡಿಎ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಭಾನ್, 1999ರಲ್ಲಿ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.

2007: `ಕೃಷಿ ರಂಗದ ಪುನಶ್ಚೇತನಕ್ಕೆ ಪ್ರತಿಯೊಂದು ರಾಜ್ಯದ ಭೌಗೋಲಿಕ ವೈಶಿಷ್ಟ್ಯಕ್ಕೆ ಪೂರಕವಾಗುವಂತಹ ವಿಶಿಷ್ಟ ಕೃಷಿ ನೀತಿ ರೂಪಿಸಿ, ರೈತರಿಗಾಗಿ `ಹವಾಮಾನ ಸಾಕ್ಷರತೆ' ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು' ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಭಿಪ್ರಾಯಪಟ್ಟರು. ರಾಷ್ಟ್ರಪತಿಯಾದ ಬಳಿಕ ನವದೆಹಲಿಯಲ್ಲಿ ಮೊತ್ತ ಮೊದಲ ಅಧಿಕೃತ ಸಮಾರಂಭದಲ್ಲಿ ಅವರು ಈ ಮಾತು ಹೇಳಿದರು. ಅವರು ಪಾಲ್ಗೊಂಡಿದ್ದುದು ಕೃಷಿ ವಿಜ್ಞಾನ ರಾಷ್ಟ್ರೀಯ ಅಕಾಡೆಮಿ ಸಭೆ.

2007: ಇರಾಕಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಬಾಂಬ್ ಸ್ಫೋಟ ಘಟನೆಗಳಲ್ಲಿ ಒಟ್ಟು 37 ಮಂದಿ ಮೃತರಾಗಿ 50ಕ್ಕೂ ಅಧಿಕ ಮಂದಿ ಗಾಯಗೊಂಡರು. ತಲ್ ಅಫಾರ್ ಸಮೀಪದ ಶಿಯಾ ಗ್ರಾಮದಲ್ಲಿ ಮಾನವ ಬಾಂಬ್ ಸ್ಫೋಟಿಸಿ 28 ಮಂದಿ ಸಾವಿಗೀಡಾದರು. ಸ್ಫೋಟಕ ತುಂಬಿದ್ದ ಟ್ರಕ್ ಚಲಾಯಿಸುತ್ತಿದ್ದ ವ್ಯಕ್ತಿ ಈ ಸ್ಫೋಟ ನಡೆಸಿದ್ದ. ಉತ್ತರ ಬಾಗ್ದಾದಿನಲ್ಲಿ ಅಲ್- ಖೈದಾ ಪ್ರಬಲರಾಗಿರುವ ಪ್ರದೇಶದ ಮೇಲೆ ಅಮೆರಿಕದ ವಾಯುಪಡೆ ದಾಳಿ ನಡೆಸಿದ್ದರಿಂದ ಕನಿಷ್ಠ ಎಂಟು ಮಂದಿ ಸಾವಿಗೀಡಾದರು.

2007: ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತೊಂದು ಐತಿಹಾಸಿಕ ಸಾಧನೆ ಮಾಡುವ ಮೂಲಕ ಗಮನ ಸೆಳೆದರು. ವಿಶ್ವ ಮಹಿಳಾ ಟೆನಿಸ್ ಸಂಸ್ಥೆ (ಡಬ್ಲ್ಯುಟಿಎ) ಬಿಡುಗಡೆ ಮಾಡಿದ ಹೊಸ ರ್ಯಾಂಕಿಂಗ್ ಪಟ್ಟಿಯಲ್ಲಿ ಅವರು ಮೂವತ್ತನೇ ಸ್ಥಾನ ಪಡೆದುಕೊಂಡರು. ಮುತ್ತಿನ ನಗರಿಯ ಬೆಡಗಿ ಇದರೊಂದಿಗೆ ಮೊದಲ ಮೂವತ್ತನೇ ಶ್ರೇಯಾಂಕದೊಳಗೆ ಪದಾರ್ಪಣೆ ಮಾಡಿದ ಭಾರತದ ಪ್ರಥಮ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆದರು. 1987ರಲ್ಲಿ ರಮೇಶ್ ಕೃಷ್ಣನ್ ಅವರು 23ನೇ ಶ್ರೇಯಾಂಕ ಪಡೆದುಕೊಂಡಿದ್ದರು. ಸ್ಯಾನ್ ಡಿಯಾಗೊ ಚಾಂಪಿಯನ್ ಶಿಪ್ ನ ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿದ ಬಳಿಕವೂ ಡಬಲ್ಸಿನಲ್ಲಿ ಸಾನಿಯಾ ಅವರು 26ನೇ ಸ್ಥಾನ ಉಳಿಸಿಕೊಂಡರು.

2007: ಕರ್ನಾಟಕದ ಹೆಮ್ಮೆಯ ಆಟಗಾರ ರೋಹನ್ ಬೋಪಣ್ಣ ಅವರು ಪುರುಷರ ಡಬಲ್ಸಿನಲ್ಲಿ 92ನೇ ಸ್ಥಾನ ಪಡೆದುಕೊಂಡರು. ಇದರೊಂದಿಗೆ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ನಂತರ ಡಬಲ್ಸಿನಲ್ಲಿ ಮೊದಲ ನೂರು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದ ಖ್ಯಾತಿ ಕೊಡಗಿನ ಹುಡುಗನದಾಯಿತು. ಇಂಗ್ಲೆಂಡ್ ಹಾಗೂ ಸ್ಪೇನಿನಲ್ಲಿ ನಡೆದ ಪುರುಷರ ಚಾಲೆಂಜರ್ ಟೆನಿಸ್ ಚಾಂಪಿಯನ್ ಶಿಪ್ ನ ಡಬಲ್ಸ್ ವಿಭಾಗದಲ್ಲಿ ಪಾಕಿಸ್ತಾನದ ಅಸಿಮ್ ಉಲ್ ಹಕ್ ಖುರೇಶಿ ಅವರೊಂದಿಗೆ ಜೊತೆಗೂಡಿ ಆಡಿದ ಬೋಪಣ್ಣ ಜಯಗಳಿಸಿ ಹೊಸ ದಾಖಲೆ ಬರೆದಿದ್ದರು.

2007: 1998ರ ಕೊಯಮತ್ತೂರು ಸರಣಿ ಸ್ಫೋಟ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು ಇನ್ನೂ ಐವರನ್ನು ತಪ್ಪಿತಸ್ಥರೆಂದು ಘೋಷಿಸಿತು. ವಿಶೇಷ ನ್ಯಾಯಾಧೀಶ ಕೆ. ಉಥಿರಾಪತಿ ಅವರು ಸರಬ್ದುದೀನ್, ಸಿಕಂದರ್, ಮೀರ್ ಶಬೀರ್ ಅಹ್ಮದ್, ಅಯ್ಯಪ್ಪನ್ ಹಾಗೂ ಉಬೈದುರ್ ರೆಹಮಾನ್ ಅವರನ್ನು ಸಣ್ಣ ಅಪರಾಧಕ್ಕಾಗಿ ತಪ್ಪಿತಸ್ಥರೆಂದು ಘೋಷಿಸಿದರು. ಸ್ಫೋಟದ ಸಂಚಿನಂತಹ ಗುರುತರ ಆರೋಪ ಇವರ ಮೇಲೆ ಇಲ್ಲದ ಕಾರಣ ಜಾಮೀನು ಅರ್ಜಿ ಸಲ್ಲಿಸುವಂತೆ ಈ ಐವರಿಗೆ ನ್ಯಾಯಾಧೀಶರು ಸೂಚಿಸಿದರು. ಆಗಸ್ಟ್ 1ರಂದು ನ್ಯಾಯಾಲಯ, ಸರಣಿ ಸ್ಫೋಟ ಪ್ರಕರಣದ 167 ಆರೋಪಿತರಲ್ಲಿ 153 ಜನ ತಪ್ಪಿತಸ್ಥರೆಂದು ಘೋಷಿಸಿತ್ತು. ಕೇರಳ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಬ್ದುಲ್ ನಾಸೇರ್ ಮದನಿ ಸೇರಿದಂತೆ 8 ಜನರನ್ನು ಆರೋಪದಿಂದ ಮುಕ್ತಗೊಳಿಸಲಾಗಿತ್ತು. 1998ರ ಫೆಬ್ರುವರಿ 14ರಂದು ಲೋಕಸಭಾ ಚುನಾವಣೆ ಪ್ರಚಾರದ ಅಂಗವಾಗಿ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರು ಕೊಯಮತ್ತೂರಿನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುವ ಕೆಲವೇ ನಿಮಿಷಗಳ ಮುನ್ನ, ಈ ಸರಣಿ ಸ್ಫೋಟಗಳು ಸಂಭವಿಸಿದ್ದವು. 58 ಜನ ಮೃತರಾಗಿ 250 ಜನ ಗಾಯಗೊಂಡಿದ್ದರು.

2007: ವಿವಾದಕ್ಕೆ ಒಳಗಾಗಿದ್ದ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆನಿಯಂತ್ರಣ) ಮಸೂದೆಗೆ (2007) ವಿಧಾನಸಭೆ ತನ್ನ ಒಪ್ಪಿಗೆ ನೀಡಿತು. ಈ ಹಿಂದೆ ವಿಧಾನಸಭೆಯಿಂದ ಅಂಗೀಕಾರವಾಗಿದ್ದ ಈ ವಿಧೇಯಕಕ್ಕೆ ವಿಧಾನ ಪರಿಷತ್ತಿನಲ್ಲಿ ತಿದ್ದುಪಡಿ ತರಲು ನಿರ್ಧರಿಸಿ ಸದನ ಸಮಿತಿ ರಚಿಸಲಾಗಿತ್ತು. ಈ ವಿಧೇಯಕದ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಸೇರಿದಂತೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರ ವರ್ಗಾವಣೆಯನ್ನು ನಿಯಂತ್ರಿಸಲಾಗುವುದು. ವಿಧೇಯಕ ಪ್ರಕಾರ ಪ್ರತಿ ಶಿಕ್ಷಕ ಕನಿಷ್ಠ ಐದು ವರ್ಷಕಾಲ ಕಾಲ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು. ಈ ಹಿಂದೆ ಗ್ರಾಮೀಣ ಸೇವೆ ಮಾಡದ ಶಿಕ್ಷಕರು ಕೂಡ ಕನಿಷ್ಠ ಐದು ವರ್ಷಕಾಲ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು. ಶಿಕ್ಷಕ ನೇಮಕವಾದ ಜೇಷ್ಠತಾ ಘಟಕದಿಂದ ಮತ್ತೊಂದು ಜೇಷ್ಠತಾ ಘಟಕಕ್ಕೆ ವರ್ಗಾವಣೆ ಮಾಡುವುದನ್ನು ಮಸೂದೆ ನಿಷೇಧಿಸುವುದು.

2006: ಗಾಂಧಿವಾದಿ, ಹಿರಿಯ ಸ್ವಾತಂತ್ರ್ಯ ಯೋಧೆ ಮಹಾದೇವಿ ತಾಯಿ (101) ಅವರು ಬೆಂಗಳೂರಿನ ಕುಮಾರಕೃಪಾ ರಸ್ತೆಯ ವಲ್ಲಭ ನಿಕೇತನ ಆಶ್ರಮದಲ್ಲಿ ನಿಧನರಾದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ದೊಡ್ಡಪ್ಪನ ಮಗಳಾದ ಮಹಾದೇವಿ ತಾಯಿ ಅವರು ಆಚಾರ್ಯ ವಿನೋಬಾ ಭಾವೆ ಅವರ ಆಶ್ರಮದ ಪ್ರಭಾವಕ್ಕೆ ಒಳಗಾಗಿದ್ದರು. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ದೊಡ್ಮನೆ ಕುಟುಂಬದ ಕೃಷ್ಣಯ್ಯ ಸುಬ್ಬಯ್ಯ ಹೆಗಡೆ ಅವರ ಮಗಳಾಗಿ ಮಹಾದೇವಿ ತಾಯಿ 1906ರಲ್ಲಿ ಜನಿಸಿದ್ದರು. `ವಿಶ್ವನೀಡಂ' ಟ್ರಸ್ಟ್ ಸಂಸ್ಥಾಪಕರೂ ಆಗಿದ್ದ ಅವರು ಮಹಾತ್ಮಾ ಗಾಂಧೀಜಿ ಅವರ ಅನುಯಾಯಿಯಾಗಿ 1930ರಲ್ಲಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದರು. ವಿನೋಬಾ ಭಾವೆ ಅವರ ಭೂದಾನ ಪಾದಯಾತ್ರೆ ಸಂದರ್ಭದಲ್ಲಿ ಇಡೀ ರಾಜ್ಯ ಸುತ್ತಿ ಚಳವಳಿಗೆ ಬಲ ತಂದಿದ್ದರು.

2006: ಹಿರಿಯ ಬಿಜೆಪಿ ನಾಯಕ, ಪರಿಶಿಷ್ಟ ಜಾತಿ/ವರ್ಗಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಸೂರಜ್ ಭಾನ್ ಹೃದಯಾಘಾತದಿಂದ ನವದೆಹಲಿಯಲ್ಲಿ ನಿಧನರಾದರು. ಎನ್ ಡಿಎ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಭಾನ್, 1999ರಲ್ಲಿ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.

2006: ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯ ಸರ್ಕಾರಗಳು ತಂಪು ಪಾನೀಯಗಳಲ್ಲಿ ಕೀಟನಾಶಕ ಅಂಶಗಳು ಕಂಡು ಬಂದ ವರದಿಗಳ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳ ಕ್ಯಾಂಟೀನುಗಳಲ್ಲಿ ತಂಪು ಪಾನೀಯಗಳನ್ನು ನಿಷೇಧಿಸಿದರು.

2006: ಪಾಠಕ್ ವರದಿ ಸೋರಿಕೆ ಹಿನ್ನೆಲೆಯಲ್ಲಿ ವಿದೇಶಾಂಗ ಖಾತೆ ಮಾಜಿ ಸಚಿವ ಕೆ. ನಟವರ್ ಸಿಂಗ್ ಅವರು ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ರಾಜ್ಯಸಭೆಯಲ್ಲಿ `ಹಕ್ಕುಚ್ಯುತಿ' ಮಂಡಿಸಲು ನೋಟಿಸ್ ಕಳುಹಿಸಿದರು.

1999: ಮಾಜಿ ಕೇಂದ್ರ ಸಚಿವ ಕಲ್ಪನಾಥ ರಾಯ್ (58) ನಿಧನರಾದರು.

1998: ಶ್ವೇತಭವನದ ಮಾಜಿ ಸಿಬ್ಬಂದಿ ಮೋನಿಕಾ ಲೆವಿನ್ ಸ್ಕಿ ಅವರು ಅಧ್ಯಕ್ಷ ಕ್ಲಿಂಟನ್ ಅವರ ಜೊತೆಗೆ ತನಗಿದ್ದ ಸಂಬಂಧದ ಬಗ್ಗೆ ಗ್ರ್ಯಾಂಡ್ ಜ್ಯೂರಿ ಎದುರು ಎಂಟೂವರೆ ಗಂಟೆಗಳ ಕಾಲ ವಿಚಾರಣೆಯಲ್ಲಿ ವಿವರಿಸಿದರು.

1986: ಶ್ಯಾಮಜಿ ಮತ್ತು ಮಣಿ ಚಾವ್ಲಾ ದಂಪತಿಯ ಮಗುವಾಗಿ ಭಾರತದ ಮೊತ್ತ ಮೊದಲ ಪ್ರಣಾಳಶಿಶು `ಹರ್ಷ' ಜನಿಸಿತು. ಮುಂಬೈಯ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಹಾಸ್ಪಿಟಲ್ ನ ಡಾ. ಇಂದಿರಾ ಹಿಂದುಜಾ ಅವರು ಮೂರು ವರ್ಷಗಳ ಕಾಲ ನಡೆಸಿದ ಸಂಶೋಧನೆಯ ಫಲವಾಗಿ ಈ ಸಾಧನೆ ಸಾಧ್ಯವಾಯಿತು.

1970: ಕೆವಿನ್ ಮರ್ಫಿ ಅವರು ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿ ದಾಟಿದ ಮೊತ್ತ ಮೊದಲ ಬ್ರಿಟಿಷ್ ವ್ಯಕ್ತಿಯಾದರು. ಅವರು ಕಡಲ್ಗಾಲುವೆಯನ್ನು ಕ್ರಮಿಸಲು 35 ಗಂಟೆ 10 ನಿಮಿಷಗಳನ್ನು ತೆಗೆದುಕೊಂಡರು.

1956: ಕಛ್, ಸೌರಾಷ್ಟ್ರ, ಗುಜರಾತ್, ಮಹಾರಾಷ್ಟ್ರ, ವಿದರ್ಭ ಮತ್ತು ಮರಾಠಾವಾಡಗಳನ್ನು ಒಳಗೊಂಡ ಸಮ್ಮಿಶ್ರ ಮುಂಬಯಿ ಪ್ರಾಂತ್ಯವನ್ನು ರಚಿಸಲು ಸೂಚಿಸುವ ನಿರ್ಣಯವನ್ನು ಕಾಂಗ್ರೆಸ್ ಸಂಸದೀಯ ಮಂಡಳಿ ಈದಿನ ಅಂಗೀಕರಿಸಿತು. ನಿರ್ಣಯವನ್ನು ಮತಕ್ಕೆ ಹಾಕಿದಾಗ ಎಸ್. ವಿ. ಗಾಡ್ಗೀಳ್ ಒಬ್ಬರ ಮತ ಮಾತ್ರ ಇದಕ್ಕೆ ವಿರುದ್ಧವಾಗಿ ಬಿದ್ದಿತು.

1948: ಸಾಹಿತಿ ಕೆ.ಆರ್. ಕೃಷ್ಣಯ್ಯ ಜನನ.

1947: ಸಾಹಿತಿ ಎಸ್. ಸತ್ಯವತಿ ಜನನ.

1945: ಎರಡನೇ ಜಾಗತಿಕ ಸಮರದ ಸಂದರ್ಭದಲ್ಲಿ ಜಪಾನಿನ ಹಿರೋಷಿಮಾ ಮೇಲೆ ಅಮೆರಿಕ ಅಣುಬಾಂಬನ್ನು ಎಸೆಯಿತು. ಯುದ್ಧದಲ್ಲಿ ಮೊತ್ತ ಮೊದಲನೆಯ ಅಣ್ವಸ್ತ್ರ ಬಳಕೆ ಇದು. `ಎನೋಲಾ ಗೇ' ಹೆಸರಿನ ಬಿ-29 ಸೂಪರ್ ಫೋರ್ ಟ್ರೆಸ್ ಬಾಂಬರ್ ಹಿರೋಷಿಮಾ ಪಟ್ಟಣದ ಮೇಲೆ ಬೆಳಿಗ್ಗೆ 8.15ರ ವೇಳೆಗೆ ಬಾಂಬನ್ನು ಬೀಳಿಸಿತು. ಪಟ್ಟಣದಿಂದ 1900 ಅಡಿಗಳಷ್ಟು ಎತ್ತರದಲ್ಲೇ ಬಾಂಬ್ ಸ್ಫೋಟಗೊಂಡಿತು. ಪಟ್ಟಣದ ಮೂರನೇ ಎರಡರಷ್ಟು ಭಾಗ ಧ್ವಂಸವಾಯಿತು. ಅಂದಾಜು 3.5 ಲಕ್ಷ ಜನರ ಪೈಕಿ 1.4 ಲಕ್ಷ ಜನ ಅಸುನೀಗಿದರು.

1944: ಸಾಹಿತಿ ಗಂಗಾಧರ ನಂದಿ ಜನನ.

1926: ಅಮೆರಿಕದ ಈಜುಗಾರ್ತಿ ಗೆರ್ ಟ್ರೂಡ್ (ಕರೋಲಿನ್) ಎಡರ್ಲೆ ಅವರು ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿದ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಫ್ರಾನ್ಸಿನ ಕೇಪ್ ಕ್ರಿಸ್- ನೆಝ್ ನಿಂದ ಇಂಗ್ಲೆಂಡಿನ ಡೋವರ್ ವರೆಗಿನ 35 ಮೈಲು (56 ಕಿಮೀ) ದೂರವನ್ನು 14 ಗಂಟೆ 31 ನಿಮಿಷಗಳಲ್ಲಿ ಕ್ರಮಿಸಿ ಪುರುಷರ ದಾಖಲೆಯನ್ನು ಮುರಿದರು.

1904: ಕರ್ನಾಟಕದಲ್ಲಿ ವಿದ್ಯುತ್ತಿನ ಮೂಲ ನೆಲೆ ಶಿವನ ಸಮುದ್ರ. ಕೋಲಾರ ಚಿನ್ನದ ಗಣಿ, ಭದ್ರಾವತಿ ಕಬ್ಬಿಣದ ಕಾರ್ಖಾನೆಗೆ ವಿದ್ಯುತ್ ಒದಗಿಸುವ ಸಲುವಾಗಿ ಶಿಂಷಾ ಹೈಡ್ರೋ ಎಲೆಕ್ಟ್ರಿಕ್ ಪವರ್ ಸ್ಟೇಷನ್ ದಿವಾನ್ ಶೇಷಾದ್ರಿ ಅಯ್ಯರ್ ಅವರ ಕಾಲದಲ್ಲಿ ಈದಿನ ಆರಂಭವಾಯಿತು. ಇಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿರುವುದನ್ನು ಬ್ರಿಟಿಷರು ನಂಬಲಿಲ್ಲ. ಇದೆಲ್ಲ ಬರೀ ಬುರುಡೆ ಎಂದು ಅವರು ಹೇಳಿದ್ದರು. ಶಿಂಷಾ ಪವರ್ ಸ್ಟೇಷನ್ನಿನಿಂದ ವಿದ್ಯುತ್ತು ನೇರವಾಗಿ ಕನಕಪುರದ ಕಾನಕಾನಹಳ್ಳಿ ಎಲೆಕ್ಟ್ರಿಕ್ ಗ್ರಿಡ್ ಗೆ ಬಂದು ನಂತರ ಬೆಂಗಳೂರು ನಗರಕ್ಕೆ ಸರಬರಾಜು ಆಗುತ್ತಿತ್ತು. ಆನಂದರಾವ್ ಸರ್ಕಲ್ಲಿನಲ್ಲಿ ವಿದ್ಯುತ್ತಿನ ಮುಖ್ಯ ಕಚೇರಿ ಇತ್ತು. ಪ್ರತಿದಿನ ರಾತ್ರಿ 9ಕ್ಕೆ ಸರಿಯಾಗಿ ಒಂದು ಸೆಕೆಂಡ್ ಕಾಲ ಇಡೀ ಬೆಂಗಳೂರನ್ನು ಕತ್ತಲು ಮಾಡುತ್ತಿದ್ದರು.

1884: ಸಾಹಿತಿ, ವಿದ್ವಾಂಸ ಪಂಡಿತ ಮಹಾದೇವ ಪೂಜಾರ (6-8-1884ರಿಂದ 5-1-1962) ಅವರು ಧಾರವಾಡ ಜಿಲ್ಲೆಯ ಬಂಕಾಪುರದ ಬಡ ಅರ್ಚಕ ಮನೆತನದಲ್ಲಿ ಈದಿನ ಜನಿಸಿದರು

1 comment:

Unknown said...

Hi,
I do not understand the language this blog has been written in.
But the person in the picture, Dr. Suraj Bhan is my grand father, hence I would be grateful if you could please send me an English copy of this blog.
Kindly send it to: chhavi.banswal@gmail.com

Thanks

Advertisement