Friday, September 5, 2008

ಇಂದಿನ ಇತಿಹಾಸ History Today ಸೆಪ್ಟೆಂಬರ್ 05

ಇಂದಿನ ಇತಿಹಾಸ

ಸೆಪ್ಟೆಂಬರ್ 5

ಇಂದು ಶಿಕ್ಷಕರ ದಿನ. 1888ರಲ್ಲಿ ಈದಿನ ಸರ್ವಪಳ್ಳಿ ರಾಧಾಕೃಷ್ಣನ್ ಜನಿಸಿದರು. ವಿದ್ವಾಂಸ ಹಾಗೂ ಮುತ್ಸದ್ದಿಯಾಗಿದ್ದ ಅವರು 1962ರಿಂದ 1967ರವರೆಗೆ ಭಾರತದ ರಾಷ್ಟ್ರಪತಿಯಾಗಿದ್ದರು. ಅವರ ಜನ್ಮದಿನವನ್ನು `ಶಿಕ್ಷಕರ ದಿನ'ವಾಗಿ ಆಚರಿಸಲಾಗುತ್ತದೆ.

2007: ಇರಾನಿನಲ್ಲಿ ಈದಿನ ಒಂದೇ ದಿನ 21 ಅಪರಾಧಿಗಳನ್ನು ಸಾಮೂಹಿಕವಾಗಿ ಗಲ್ಲಿಗೇರಿಸಲಾಯಿತು. ಆಫ್ಘಾನಿಸ್ಥಾನ ಮತ್ತು
ತುರ್ಕ್ಮೆನಿಸ್ಥಾನದ ಗಡಿಯಲ್ಲಿರುವ ಈಶಾನ್ಯ ಪ್ರಾಂತ್ಯವಾದ ಖೊರಸಾನ್ ರಜವಿಯಲ್ಲಿ ಹೆರಾಯಿನ್ ಮತ್ತಿತರ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 17 ಮಂದಿಯನ್ನು ಮತ್ತು ಇವರೊಂದಿಗೆ ದಕ್ಷಿಣದ ಶಿರಾಜ್ ನಗರದಲ್ಲಿ ಇತರ ನಾಲ್ವರು ಅಪರಾಧಿಗಳನ್ನು ನೇಣಿಗೇರಿಲಾಯಿತು. ಇದೇ ರೀತಿ ಕಳೆದ ಜುಲೈ ಮತ್ತು ಆಗಸ್ಟ್ ತಿಂಗಳು ಅತ್ಯಾಚಾರ, ದರೋಡೆ ಮತ್ತು ಅಪಹರಣ ಕೃತ್ಯಗಳಿಗೆ ಸಂಬಂಧಿಸಿ 21 ಮಂದಿಯನ್ನು ಇರಾನ್ ಸರ್ಕಾರ ಗಲ್ಲಿಗೇರಿಸಿತ್ತು.

2007: ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆಯನ್ನು ಜಾರಿಗೊಳಿಸದಿರುವ ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತು. ತಂಪು ಪಾನೀಯ ಬಾಟಲಿ ಮೇಲೆ ಉತ್ಪನ್ನದ ವಿವರ ಮುದ್ರಿಸುವುದನ್ನು ಕಂಪೆನಿಗಳಿಗೆ ಕಡ್ಡಾಯಗೊಳಿಸುವಂತೆ ಸೂಚಿಸಿರುವ ಆದೇಶವನ್ನು ಡಿಸೆಂಬರ್ ಅಂತ್ಯದೊಳಗೆ ಜಾರಿಗೊಳಿಸಬೇಕು ಎಂದು ನ್ಯಾಯಮೂರ್ತಿಗಳಾದ ಸಿ.ಕೆ. ಥಕ್ಕರ್ ಹಾಗೂ ದಲ್ವೀರ್ ಭಂಡಾರಿ ಅವರನ್ನೊಳಗೊಂಡ ಪೀಠ ತಾಕೀತು ಮಾಡಿತು. ತಂಪು ಪಾನೀಯಗಳಾದ ಪೆಪ್ಸಿ ಮತ್ತು ಕೋಕಾ ಕೋಲಾದಲ್ಲಿ ಕೀಟನಾಶಕ ಮತ್ತು ರಾಸಾಯನಿಕ ವಸ್ತುಗಳನ್ನು ಬಳಸುವುದರಿಂದ ಇವು ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತವೆ. ಹೀಗಾಗಿ ಇವುಗಳನ್ನು ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ನಿರ್ದೇಶನ ನೀಡಿತು.

2007: ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ ಗಿರಿ ಮಾರ್ಗದಲ್ಲಿ ಖಾಸಗಿ ಬಸ್ ಉರುಳಿ ಸಂಭವಿಸಿದ ಭೀಕರ ದುರಂತದಲ್ಲಿ ಇಬ್ಬರು ಮಹಿಳೆಯರು ಸೇರಿ 9 ಮಂದಿ ಮೃತರಾಗಿ, 28 ಜನ ಗಾಯಗೊಂಡರು.

2007: ದಾವಣಗೆರೆ ಜಿಲ್ಲೆಯ ಹರಿಹರ ವಿಧಾನ ಸಭಾ ಕ್ಷೇತ್ರಕ್ಕೆ 2004ರ ಏಪ್ರಿಲ್ 20ರಂದು ನಡೆದ ಚುನಾವಣೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿತು. ಹತ್ತು ದಿನಗಳ ಒಳಗೆ ಒಬ್ಬ ಅಧಿಕಾರಿಯನ್ನು ನೇಮಿಸಿ, ಈ ಕ್ಷೇತ್ರದ ಮತ ಎಣಿಕೆ ಕಾರ್ಯವನ್ನು ಮತ್ತೆ ನಡೆಸಿ, ಒಂದು ತಿಂಗಳ ಒಳಗೆ ಫಲಿತಾಂಶ ಪ್ರಕಟಿಸಬೇಕು ಎಂದು ನ್ಯಾಯಾಲಯವು ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶಿಸಿತು. 569 ಮತಗಳ ಅಂತರದಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಡಾ. ವೈ. ನಾಗಪ್ಪ ಅವರ ವಿರುದ್ಧ ಪರಾಭವಗೊಂಡ ಜೆಡಿ (ಎಸ್) ಅಭ್ಯರ್ಥಿ ಶಿವಪ್ಪ ಅವರ ಚುನಾವಣಾ ಏಜೆಂಟ್ ಎಸ್. ಪ್ರಸನ್ನ ಕುಮಾರ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಗೋಪಾಲಗೌಡ ಈ ಆದೇಶ ಹೊರಡಿಸಿದರು.

2006: ರಾಷ್ಟ್ರನಿರ್ಮಾಣ ಚಟುವಟಿಕೆಗಳಿಗೆ ನೀಡಿದ ಅಪಾರ ಕೊಡುಗೆಗಾಗಿ ಸಾರ್ವಜನಿಕ ಕ್ಷೇತ್ರದ ಭಾರತ ಹೆವಿ ಎಲೆಕ್ಟ್ರಿಕಲ್ಸ್ (ಬಿಎಚ್ ಇಎಲ್) ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ಸೇರ್ಪಡೆಯಾಯಿತು. ಲಿಮ್ಕಾ ಪುಸ್ತಕದ `ಡೂಯಿಂಗ್ ಇಂಡಿಯಾ ಪ್ರೌಡ್' ವಿಭಾಗದಲ್ಲಿ ಬಿ ಎಚ್ ಇ ಎಲ್ ಗೆ ಮಾನ್ಯತೆ ಲಭಿಸಿತು. ದೇಶದ ವಿದ್ಯುತ್ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಸ್ಥೆ ನೀಡಿದ ಕೊಡುಗೆ ಪರಿಗಣಿಸಿ ಈ ಗೌರವ ನೀಡಲಾಯಿತು.

2006: ಶಾಂತಿ ಪಾಲನಾ ಪಡೆಯ ಅಂಗವಾಗಿ ಲೆಬನಾನಿನಲ್ಲಿ ಕಾರ್ಯ ನಿರ್ವಹಿಸಿದ ಸಿಖ್ ರೆಜಿಮೆಂಟಿನ 4ನೇ ಬೆಟಾಲಿಯನ್ ಗೆ ವಿಶ್ವಸಂಸ್ಥೆಯ ಫೋರ್ಸ್ ಕಮಾಂಡರ್ಸ್ ಪುರಸ್ಕಾರ ಲಭಿಸಿತು. ತುಕಡಿಯ 73 ಯೋಧರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಈ ಭಾರತೀಯ ಯೋಧರು ಇಸ್ರೇಲ್ ಮತ್ತು ಲೆಬನಾನ್ ನಡುವಣ 34 ದಿನಗಳ ಸಂಘರ್ಷ ಕಾಲದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಮಾನವೀಯ ಸೇವೆ ಕೈಗೊಂಡಿದ್ದರು.

2006: ಕರ್ನಾಟಕದ ರಾಜಕಾರಣಿಗಳು ಮತ್ತು ಪೊಲೀಸರು ತನ್ನಿಂದ 2000 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿರುವುದಾಗಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತೆಲಗಿ ಮಂಪರು ಪರೀಕ್ಷೆಯಲ್ಲಿ ಹೇಳಿರುವ ವಿಚಾರ ಬಹಿರಂಗಗೊಂಡಿತು. 2003ರ ಡಿಸೆಂಬರ್ 29ರಂದು ತೆಲಗಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ಮಂಪರು ಪರೀಕ್ಷೆಗೆ ಒಳಪಡಿಸಲಾಗಿತ್ತು. ಒಂದೂವರೆ ತಾಸು ಕಾಲ ನಡೆದ ಈ ವಿಚಾರಣೆಯನ್ನು ವಿಡಿಯೋ ಸಿ.ಡಿ.ಗಳಲ್ಲಿ ಧ್ವನಿಮುದ್ರಿಸಲಾಗಿದ್ದು ಈ ಸಿ.ಡಿ.ಗಳು ಈ ದಿನ ಪತ್ರಿಕಾಲಯಗಳಿಗೆ ತಲುಪಿ ವಿಷಯ ಬಹಿರಂಗಗೊಂಡಿತು.

2006: `ಸಿದ್ದ' ಚಿಕಿತ್ಸೆ ಪದ್ಧತಿಯಲ್ಲಿ ಹೆಸರುವಾಸಿಯಾದ ಕೇರಳದ ಅಲಪ್ಪುಳ ಜಿಲ್ಲೆಯ ಚಾಂದಿರೂರ್ ಗ್ರಾಮವನ್ನು ದೇಶದ ಮೊದಲ ಸಿದ್ದ ಗ್ರಾಮ' ಎಂದು ಘೋಷಿಸಲಾಯಿತು. ಗ್ರಾಮಕ್ಕೆ ಭೇಟಿ ನೀಡಿದ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಅವರು ಈ ಪ್ರಕಟಣೆ ಮಾಡಿದರು. ತಿರುವಂತಪುರ ಮೂಲದ ಶಾಂತಿಗಿರಿ ಆಶ್ರಮ ಈ ಗ್ರಾಮವನ್ನು ಆಯ್ಕೆ ಮಾಡಿ ಗ್ರಾಮಸ್ಥರಿಗೆ `ಸಿದ್ದ ವೈದ್ಯ ಪದ್ಧತಿ' ಬಗ್ಗೆ ಉಚಿತ ತಿಳುವಳಿಕೆ ನೀಡಿತ್ತು.

2006: `ನಡೆದಾಡುವ ವಿಶ್ವಕೋಶ' ಎಂದು ಖ್ಯಾತರಾಗಿದ್ದ ಉರ್ದು ಸಾಹಿತಿ ಪ್ರೊ. ಅಬ್ದುಲ್ ಮಘನಿ (70) ಈದಿನ ಬಿಹಾರಿನ ಪಟ್ನಾದಲ್ಲಿ ನಿಧನರಾದರು. ಉರ್ದು ಭಾಷೆಯಲ್ಲಿ ಅಪಾರ ಪ್ರೌಢಿಮೆ ಹೊಂದಿದ್ದ ಮಘನಿ, ಖ್ಯಾತ ಉರ್ದು ಕವಿ ಇಕ್ಬಾಲ್ ಬರಹಗಳ ಕುರಿತು ಒಂದು ಸಂಪುಟ ಸಹಿತ 18 ಪುಸ್ತಕಗಳನ್ನು ಪ್ರಕಟಿಸಿದ್ದರು. `ಕುರಾನ್' ಗ್ರಂಥವನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದರು. ಮಿಥಿಲಾ ವಿಶ್ವವಿದ್ಯಾಲಯದ ಕುಲಪತಿಯಾಗಿ, ಬಿಹಾರಿನ `ಅಂಜುಮನ್ ತಾರಿಖಿ' ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
2006: ಹೆಸರಾಂತ ಪಕ್ಕವಾದ್ಯ ಕಲಾವಿದ ಅಲಿಪ್ಪರಂಬು ಶಿವರಾಮ ಪೊದುವಾಳ್ (82) ಅವರು ಕೇರಳದ ಚೆರಪುಲ್ಲಸೇರಿ ಪಟ್ಟಣದ ತಮ್ಮ ನಿವಾಸದಲ್ಲಿ ನಿಧನರಾದರು. ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದ ಅವರು `ಚೆಂಡೆ ವಾದನ'ದಲ್ಲಿ ಪ್ರಾವೀಣ್ಯ ಸಾದಿಸಿದ್ದರು.

1997: ಮದರ್ ತೆರೇಸಾ ಅವರು ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು.

1986: ಪ್ರಾಣಾಪಾಯವನ್ನು ಲೆಕ್ಕಿಸದೆ ಅಪಹೃತರಿಗೆ ನೆರವು ನೀಡಿದ್ದಕ್ಕಾಗಿ ಗಗನಸಖಿ ನೀರಜಾ ಭಾನೋಟ್ ಬಲಿದಾನ ಮಾಡಬೇಕಾಗಿ ಬಂದ ದಿನವಿದು. ಮುಂಬೈಯಿಂದ ಪಾಕಿಸ್ಥಾನದ ಕರಾಚಿಗೆ ಅಪಹರಿಸಲಾದ ಅಮೆರಿಕದ ಪಾನ್ ಆಮ್ 73 ವಿಮಾನದ ಗಗನಸಖಿ ನೀರಜಾ ಅವರನ್ನು ಭಯೋತ್ಪಾದಕರು ಪ್ರಯಾಣಿಕರಿಗೆ ಪಾರಾಗಲು ಮಾರ್ಗದರ್ಶನ ಮಾಡಿದ್ದಕ್ಕಾಗಿ ಗುಂಡಿಟ್ಟು ಕೊಂದರು. 394 ಜನರಿದ್ದ ಈ ವಿಮಾನ ಅಪಹರಣದ ನಾಟಕ 16 ಗಂಟೆಗಳ ಬಳಿಕ ಕೊನೆಗೊಂಡಾಗ 19 ಜನರ ಸತ್ತು 130 ಜನ ಗಾಯಗೊಂಡಿದ್ದರು. ರಾಷ್ಟ್ರವು ನೀರಜಾ ಬಾನೋಟ್ ಅವರನ್ನು `ಮರಣೋತ್ತರ ಅಶೋಕ ಚಕ್ರ' ಪ್ರಶಸ್ತಿ ನೀಡಿ ಗೌರವಿಸಿತು.

1980: ಪ್ರಪಂಚದ ಅತಿ ಉದ್ದದ ಸ್ವಯಂಚಾಲಿತ ಸುರಂಗಮಾರ್ಗ ಸ್ವಿಜರ್ಲೆಂಡಿನಲ್ಲಿ (ಸ್ವಿಸ್) ಆರಂಭ.

1972: ಒಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸದ ರಕ್ತರಂಜಿತ ದಿನ ಇದು. `ಬ್ಲಾಕ್ ಸೆಪ್ಟೆಂಬರ್' ಗುಂಪಿನ ಅರಬ್ ಭಯೋತ್ಪಾದಕರು ಮ್ಯೂನಿಕ್ ಒಲಿಂಪಿಕ್ ಕ್ರೀಡಾಗ್ರಾಮಕ್ಕೆ ನುಗ್ಗಿ ಇಬ್ಬರು ಇಸ್ರೇಲಿ ಅಥ್ಲೆಟ್ ಗಳನ್ನು ಕೊಂದು ಇತರ 9 ಜನರನ್ನು ಒತ್ತೆಯಾಳುಗಳನ್ನಾಗಿ ಹಿಡಿದಿಟ್ಟುಕೊಂಡರು. ನಂತರ ನಡೆದ ಗುಂಡಿನ ಘರ್ಷಣೆಯಲ್ಲಿ ಒಬ್ಬ ಜರ್ಮನ್ ಪೊಲೀಸ್ ಸೇರಿದಂತೆ ಒತ್ತೆಯಾಳುಗಳು ಹಾಗೂ ಭಯೋತ್ಪಾದಕರು ಮೃತರಾದರು.

1967: ಪ್ರಧಾನಿ ಅಧ್ಯಕ್ಷತೆಯಲ್ಲಿ ಕೇಂದ್ರೀಯ ಹಿಂದಿ ಸಮಿತಿ ರಚನೆಯಾಯಿತು.

1958: ಮೊದಲ ಕಲರ್ ವಿಡಿಯೋ ರೆಕಾರ್ಡಿಂಗ್ ಕ್ಯಾಸೆಟ್ ಬಿಡುಗಡೆ.

1953: ಸಾಹಿತಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಜನನ.

1948: ಸಾಹಿತಿ ಶ್ರೀಕಂಠ ಕೂಡಿಗೆ ಜನನ.

1919: ಸಾಹಿತಿ ಕೃಷ್ಣಮೂರ್ತಿ ಪುರಾಣಿಕ ಜನನ.

1872: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಚಿದಂಬರಂ ಪಿಳ್ಳೈ (1872-1936) ಜನ್ಮದಿನ. 1909ರಲ್ಲಿ ಇವರು `ಸ್ವದೇಶಿ ಶಿಪ್ಪಿಂಗ್ ಕಂಪೆನಿ' ಹೆಸರಿನಲ್ಲಿ ಭಾರತದಲ್ಲಿ ಮೊತ್ತ ಮೊದಲ ಶಿಪ್ಪಿಂಗ್ ಕಂಪೆನಿಯನ್ನು ಸ್ಥಾಪಿಸಿದರು.

1844: ಮೈಸೂರು ತಾತಯ್ಯ ಎಂದೇ ಖ್ಯಾತರಾಗಿದ್ದ ಸಮಾಜ ಸೇವಕ, ಸಾಹಿತಿ, ಪತ್ರಿಕೋದ್ಯಮಿ ಎಂ. ವೆಂಕಟಕೃಷ್ಣಯ್ಯ (5-9-1844ರಿಂದ 8-11-1933) ಅವರು ಸುಬ್ಬಯ್ಯ- ಭಾಗೀರಥಮ್ಮ ದಂಪತಿಯ ಮಗನಾಗಿ ಹೆಗ್ಗಡದೇವನಕೋಟೆ ತಾಲ್ಲೂಕಿನ ಮಗ್ಗೆ ಗ್ರಾಮದಲ್ಲಿ ಜನಿಸಿದರು.

1612: ಈಸ್ಟ್ ಇಂಡಿಯಾ ಕಂಪೆನಿಯ ನೌಕಾದಳ ಅಸ್ತಿತ್ವಕ್ಕೆ ಬಂದಿತು.

(ಸಂಗ್ರಹ:
ನೆತ್ರಕೆರೆ ಉದಯಶಂಕರ)

1 comment:

amrithv-cartoons said...

nice bloag.. I liked it

Amrith

Advertisement