My Blog List

Sunday, September 7, 2008

ಇಂದಿನ ಇತಿಹಾಸ History Today ಸೆಪ್ಟೆಂಬರ್ 07

ಇಂದಿನ ಇತಿಹಾಸ

ಸೆಪ್ಟೆಂಬರ್ 7

ಮಹಾತ್ಮಗಾಂಧಿ ಪಾತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದಿದ್ದ ನಟ ಸರ್ ಬೆನ್ ಕಿಂಗ್ ಸ್ಲೆ ತಮಗಿಂತ ಅರ್ಧದಷ್ಟು ವಯಸ್ಸಿನ ಬ್ರೆಜಿಲ್ ನಟಿಯೊಬ್ಬರನ್ನು ಗುಟ್ಟಾಗಿ ಮದುವೆಯಾದರು. ಇದು ಕಿಂಗ್ ಸ್ಲೆ ಅವರಿಗೆ ನಾಲ್ಕನೇ ಮದುವೆ.63 ವರ್ಷದ ಬೆನ್ 34 ವರ್ಷದ ಡೇ ನಿಯಲಾ ಕಾರ್ನ್ ನಿರೋ ಅವರನ್ನು ವಿವಾಹವಾದರು.


ಇದು ಟೆಲಿವಿಷನ್ ಜನ್ಮದಿನ. 1927ರಲ್ಲಿ ಅಮೆರಿಕದ ಸಂಶೋಧಕ ಫಿಲೋ ಟಿ ಫ್ರಾನ್ಸ್ ವರ್ಥ್ ಅವರು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ `ಇಮೇಜ್ ಡಿಸೆಕ್ಟರ್' ಎಂಬ ಉಪಕರಣವನ್ನು ಬಳಸಿ ಸಂಪೂರ್ಣವಾಗಿ ಎಲೆಕ್ಟ್ರಾನಿಕ್ ಮೂಲಕ ಚಿತ್ರವನ್ನು ರವಾನಿಸುವಲ್ಲಿ ಯಶಸ್ವಿಯಾದರು. `ನೀನು ಎಲೆಕ್ಟ್ರಾನಿಕ್ ಟೆಲಿವಿಷನ್!' ಎಂದು ಈ ಸಂದರ್ಭದಲ್ಲಿ ಅವರು ಉದ್ಘರಿಸಿದರು.

2007: ಲಾರಿಯೊಂದು ಕಣಿವೆಗೆ ಉರುಳಿ 128 ಜನ ಮೃತರಾಗಿ ಸುಮಾರು ನೂರು ಮಂದಿ ಗಾಯಗೊಂಡ ಘಟನೆ ಈದಿನ ರಾತ್ರಿ ಎಂಟು ಗಂಟೆಗೆ ರಾಜಸ್ಥಾನದ ಉದಯಪುರಕ್ಕೆ 150 ಕಿಲೋ ಮೀಟರ್ ದೂರವಿರುವ ರಾಜಸಮುಂದ್ ಜಿಲ್ಲೆಯ ದೆಸುರಿ ಕಿ ನಾಲ್ ಗ್ರಾಮದ ಬಳಿ ನಡೆಯಿತು. ಚಾಲಕನ ನಿಯಂತ್ರಣ ತಪ್ಪಿ ಲಾರಿಯು ರಸ್ತೆ ಪಕ್ಕದ ರಕ್ಷಣಾ ಗೋಡೆಗೆ ಡಿಕ್ಕಿ ಹೊಡೆದು ಕಡಿದಾದ ಕಣಿವೆಗೆ ಉರುಳಿದ್ದರಿಂದ ಈ ದುರ್ಘಟನೆ ಸಂಭವಿಸಿತು. ಹಿಂದೂ ಮುಸ್ಲಿಂ ಸಮುದಾಯದ ನೂರಾರು ಭಕ್ತರನ್ನು ಕರೆದುಕೊಂಡ ಈ ಲಾರಿಯು ಜೈಸಲ್ಮೇರಿನಲ್ಲಿರುವ ಸೂಫಿ ಸಂತ ರಾಮ್ ದೇವ್ರಾ ಜಾತ್ರೆಗೆ ಹೊರಟಿತ್ತು.

2007: ಆಂಧ್ರಪ್ರದೇಶದ ಚಿತ್ವೇಡ್ ಗ್ರಾಮದಲ್ಲಿ ಶಂಕಿತ ಮಾವೋವಾದಿ ನಕ್ಸಲರು ನಡೆಸಿದ ಶಕ್ತಿಶಾಲಿ ನೆಲಬಾಂಬ್ ಸ್ಫೋಟದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಎನ್. ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಹಾಲಿ ಸಚಿವೆ ಎನ್. ರಾಜ್ಯಲಕ್ಷ್ಮಿ ಪಾರಾದರು. ಅವರ ಜೊತೆಗಿದ್ದ ಕಾಂಗ್ರೆಸ್ಸಿನ ಮೂವರು ಕಾರ್ಯಕರ್ತರು ಸಾವನ್ನಪ್ಪಿದರು. ಬೆಳಗಿನ ಜಾವ 6.30ಕ್ಕೆ ಭಾರಿ ಬೆಂಗಾವಲು ಪಡೆಯೊಂದಿಗೆ ತಮ್ಮ ಗ್ರಾಮದ ಮನೆಯಿಂದ ತಿರುಪತಿಯತ್ತ ಹೊರಟಿದ್ದ ರೆಡ್ಡಿ ಅವರ ಹತ್ಯೆ ಉದ್ದೇಶದಿಂದಲೇ ರಿಮೋಟ್ ಸಾಧನ ಬಳಸಿ ಸೇತುವೆಯೊಂದರ ಬಳಿ ಈ ಸ್ಫೋಟ ನಡೆಸಲಾಯಿತು. 70 ವರ್ಷ ವಯಸ್ಸಿನ ಜನಾರ್ದನ ರೆಡ್ಡಿ 1992ರಲ್ಲಿ ನಕ್ಸಲರ ಮೇಲೆ ನಿಷೇಧ ಹೇರಿದಾಗ ಆಂಧ್ರ ಮುಖ್ಯಮಂತ್ರಿಯಾಗಿದ್ದರು. ಆಗಿನಿಂದಲೂ ಅವರನ್ನು ಕೊಲ್ಲಲು ಮಾವೋವಾದಿ ನಕ್ಸಲರು ಯತ್ನಿ ನಡೆಸಿದ್ದರು. 2003ರಲ್ಲಿ ಅವರ ಮೇಲೆ ಇಂತಹುದೇ ಹತ್ಯೆ ಯತ್ನ ನಡೆದಿತ್ತು.

2007: ನಿಕರಾಗುವದ ಪೊರ್ಟೊ ಕ್ಯಾಬೆಜಾಸ್ ಪ್ರದೇಶದಲ್ಲಿ ಬೀಸಿದ ಬಲಶಾಲಿಯಾದ 'ಫೆಲಿಕ್ಸ್' ಚಂಡಮಾರುತಕ್ಕೆ 98 ಮಂದಿ ಬಲಿಯಾದರು.

2007: ಆಸ್ಪತ್ರೆ ಬಳಿ ಮೊಬೈಲ್ ಫೋನ್ ಬಳಸುವುದರಿಂದ ಆಸ್ಪತ್ರೆಯಲ್ಲಿನ ರೋಗಿಗಳು ಮತ್ತು ಹೃದಯಕ್ಕೆ ಸಂಬಂಧಿಸಿದ ಉಪಕರಣಗಳಾದ ಪೇಸ್ ಮೇಕರ್ (ಹೃದಯ ನಿಯಂತ್ರಕ ವಿದ್ಯುದುಪಕರಣ), ವೇಂಟಿಲೇಟರುಗಳಿಗೆ (ವಾಯು ಸಂಚಾರಕ ಸಲಕರಣೆ) ಹಾನಿ ಉಂಟಾಗುತ್ತದೆ ಎಂದು ಡಚ್ ಸಂಶೋಧನೆ ಮಂಡಳಿಯ ಸಂಶೋಧನೆ ಹೇಳಿತು. ಆಸ್ಪತ್ರೆಗಳಲ್ಲಿ ಮೊಬೈಲ್ ಫೋನ್ ಬಳಕೆಯಿಂದಾಗುವ ಪರಿಣಾಮ ಕುರಿತಂತೆ 50 ಪ್ರಕರಣಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಮೊಬೈಲ್ ಫೋನಿನಿಂದ ಹೊರಹೊಮ್ಮುವ ವಿದ್ಯುತ್ಕಾಂತೀಯ ತರಂಗಗಳಿಂದ ಶೇ 75ರಷ್ಟು ಅಪಾಯ ಉಂಟಾಗುತ್ತದೆ ಎಂದು ಆಮ್ ಸ್ಟರ್ ಡ್ಯಾಮ್ ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆ ಹಚ್ಚಿದರು. ಇದೇ ವರ್ಷದ ಆರಂಭದಲ್ಲಿ ಮಯೊ ಕ್ಲಿನಿಕ್ಕಿನ ಸಂಶೋಧಕರು ಪ್ರಮುಖ ಆಸ್ಪತ್ರೆಗಳ ತುರ್ತು ಚಿಕಿತ್ಸಾ ಉಪಕರಣಗಳ ಮೇಲೆ ಮೊಬೈಲ್ ಬಳಕೆಯಿಂದ ಯಾವುದೇ ಆಪಾಯ ಆಗುವುದಿಲ್ಲ ಎಂದು ಪ್ರಕಟಿಸಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇತ್ತೀಚೆಗೆ ನಡೆಸಿದ ಸಂಶೋಧನೆಯಿಂದ ಆಧುನಿಕ ತಂತ್ರಜ್ಞಾನದ ಜನರಲ್ ಪಾಕೇಟ್ ರೇಡಿಯೊ ಸರ್ವೀಸ್ (ಜಿಪಿಆರ್ ಎಸ್) ತರಂಗಗಳು ಮತ್ತು ನಿಸ್ತಂತು ಅಂತರ್ಜಾಲ ವ್ಯವಸ್ಥೆಯಿಂದ ಅಪಾಯ ಉಂಟಾಗುತ್ತದೆ ಎಂದು ತಿಳಿದುಬಂತು.

2007: ಮಹಾತ್ಮಗಾಂಧಿ ಪಾತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದಿದ್ದ ನಟ ಸರ್ ಬೆನ್ ಕಿಂಗ್ ಸ್ಲೆ ತಮಗಿಂತ ಅರ್ಧದಷ್ಟು ವಯಸ್ಸಿನ ಬ್ರೆಜಿಲ್ ನಟಿಯೊಬ್ಬರನ್ನು ಗುಟ್ಟಾಗಿ ಮದುವೆಯಾದರು. ಇದು ಕಿಂಗ್ ಸ್ಲೆ ಅವರಿಗೆ ನಾಲ್ಕನೇ ಮದುವೆ. 63 ವರ್ಷದ ಬೆನ್ 34 ವರ್ಷದ ಡೇ ನಿಯಲಾ ಕಾರ್ನ್ ನಿರೋ ಅವರನ್ನು ವಿವಾಹವಾದರು. ಸ್ಪೆಲ್ಸ್ ಬರಿಯಲಿರುವ ಬೆನ್ ಅವರ ನಿವಾಸ ಆಕ್ಸ್ ಫರ್ಡ್ ಶಿರೆಯಿಂದ ಅನತಿ ದೂರ ಐನ್ ಶಾಮ್ ಹಾಲಿನಲ್ಲಿ ಈ ವಿವಾಹ ಸಮಾರಂಭ ನಡೆಯಿತು.

2007: ವೃತ್ತಿಜೀವನದ ಎಂಟನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆಲ್ಲಬೇಕು ಎಂಬ ಭಾರತದ ಲಿಯಾಂಡರ್ ಪೇಸ್ ಅವರ ಕನಸು ನುಚ್ಚುನೂರಾಯಿತು. ನ್ಯೂಯಾರ್ಕಿನಲ್ಲಿ ನಡೆಯುತ್ತಿರುವ ಅಮೆರಿಕಾ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದ ಫೈನಲಿನಲ್ಲಿ ಪೇಸ್- ಮೇಗನ್ ಶಾಗ್ನೆಸಿ ಜೋಡಿ ಮುಗ್ಗರಿಸಿತು. ಅಂತಿಮ ಪಂದ್ಯದಲ್ಲಿ ಬೆಲಾರಸ್ ನ ಮ್ಯಾಕ್ಸ್ ಮಿರ್ನಿ ಮತ್ತು ವಿಕ್ಟೋರಿಯಾ ಅಜರೆಂಕಾ ಜೋಡಿ 6-4, 7-5 ರಲ್ಲಿ ಭಾರತ- ಅಮೆರಿಕ ಜೋಡಿ ವಿರುದ್ಧ ಗೆಲುವು ಪಡೆದು ಪ್ರಶಸ್ತಿ ಜಯಿಸಿತು. 30ರ ಹರೆಯದ ಮ್ಯಾಕ್ಸ್ ಮಿರ್ನಿಗೆ ಇದು ಏಳನೇ ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಪ್ರಶಸ್ತಿ. ಇದೇ ವೇಳೆ 18ರ ಹರೆಯದ ಅಜರೆಂಕಾ ತಮ್ಮ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಟ್ರೋಫಿಗೆ ಮುತ್ತಿಕ್ಕಿದರು.

2006: ವಂದೇ ಮಾತರಂ ಗೀತೆ ರಚನೆಯ ಶತಮಾನ ದಿನವನ್ನು ಭಾರತದಾದ್ಯಂತ ಆಚರಿಸಲಾಯಿತು. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಬಹುಪಾಲು ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಈ ಗೀತೆಯನ್ನು ಹಾಡದೆ ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿದವು. ನವದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ವಂದೇ ಮಾತರಂ ಗಾಯನದಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಪಾಲ್ಗೊಳ್ಳಲ್ಲಿಲ.

1997: ಜೈರೆಯ ಮಾಜಿ ಸರ್ವಾಧಿಕಾರಿ ಮೊಬುಟು ಸೆಸೆ ಸೆಕೊ ಅವರು ದೇಶಭ್ರಷ್ಟರಾಗಿದ್ದಾಗ ಮೊರಾಕ್ಕೊದಲ್ಲಿ ತಮ್ಮ 66ನೇ ವಯಸ್ಸಿನಲ್ಲಿ ಮೃತರಾದರು.

1986: ಡೆಸ್ಮಂಡ್ ಟುಟು ಅವರು ಕೇಪ್ ಟೌನಿನ ಆರ್ಚ್ ಬಿಷಪ್ ಆಗಿ ನೇಮಕಗೊಂಡರು. ದಕ್ಷಿಣ ಆಫ್ರಿಕದ ಆಂಗ್ಲಿಕನ್ ಚರ್ಚ್ ಮುನ್ನಡೆಸುವ ಪ್ರಪ್ರಥಮ ಕರಿಯ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದಾಯಿತು.

1969: ಸಾಹಿತಿ ಡಾ. ಶ್ರೀನಿವಾಸ ಕಾ.ವೆಂ. ಜನನ.

1908: ಖ್ಯಾತ ಸಾಹಿತಿ, ಕನ್ನಡ ನಾಡು ನುಡಿಯ ಮೌನ ಸೇವಾವ್ರತಿ, ಸಾಮಾಜಿಕ ಕಾರ್ಯಕರ್ತ ಬಿ. ದಾಮೋದರ ಬಾಳಿಗ (7-9-1908ರಿಂದ 21-5-1985) ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜನಿಸಿದರು. ಕನ್ನಡ ಹಾಗೂ ಇಂಗ್ಲಿಷಿನಲ್ಲಿ ಹಲವಾರು ಕೃತಿಗಳನ್ನು ರಚಿಸಿದ ಇವರು ಗೋವಿಂದ ಪೈಗಳ ಗೋಲ್ಗೊಥಾ, ವೈಶಾಖಿ, ಹೆಬ್ಬೆರಳು, ಚಿತ್ರಭಾನು ಇತ್ಯಾದಿಗಳನ್ನು ಪ್ರಕಟಿಸಿದವರು. ಗೋಲ್ಗೊಥಾವನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿದ ಹೆಮ್ಮೆ ಕೂಡಾ ಇವರದು.

1903: ನ್ಯೂಯಾರ್ಕಿನಲ್ಲಿ ಅಮೆರಿಕನ್ ಸೈಕ್ಲಿಸ್ಟ್ ಒಕ್ಕೂಟ ರಚನೆಯಾಯಿತು.

1900: ಸಾಹಿತಿ ಚನ್ನಬಸಪ್ಪ ಎಲ್ಲಪ್ಪ ಕವಲಿ ಜನನ.

1822: ಪೋರ್ಚುಗಲ್ಲಿನಿಂದ ಬೇರ್ಪಟ್ಟ ಬ್ರೆಜಿಲ್ ಸ್ವತಂತ್ರ ರಾಷ್ಟ್ರವಾಯಿತು.

1813: ನ್ಯೂಯಾರ್ಕಿನ ಟ್ರಾಯ್ ಪೋಸ್ಟ್ ತನ್ನ ಸಂಪಾದಕೀಯದಲ್ಲಿ ಅಮೆರಿಕವನ್ನು ಸಾಂಕೇತಿಕವಾಗಿ ಉಲ್ಲೇಖಿಸಲು ಮೊತ್ತ ಮೊದಲ ಬಾರಿಗೆ `ಅಂಕಲ್ ಸ್ಯಾಮ್' ಅಡ್ಡ ಹೆಸರನ್ನು ಬಳಸಿತು. `ಅಂಕಲ್ ಸ್ಯಾಮ್' ಶಬ್ದವು ನ್ಯೂಯಾರ್ಕಿನ ವರ್ತಕ ಸ್ಯಾಮುವೆಲ್ ವಿಲ್ಸನ್ ಗೆ ಸಂಬಂಧಿಸಿದ್ದು. 1812ರಲ್ಲಿ ಸೇನೆಗೆ ಆತ ಸರಬರಾಜು ಮಾಡುತ್ತಿದ್ದ ಮಾಂಸದ ಬ್ಯಾರೆಲ್ಲುಗಳಿಗೆ ಸರ್ಕಾರಿ ಆಸ್ತಿ ಎಂದು ಸೂಚಿಸಲು `ಯು.ಎಸ್.' ಎಂದು ಬರೆಯಲಾಗುತ್ತಿತ್ತು. ಈ ಗುರುತು ಅಮೆರಿಕವನ್ನು `ಅಂಕಲ್ ಸ್ಯಾಮ್' ಎಂಬ ಅಡ್ಡ ಹೆಸರಿನಿಂದಲೇ ಗುರುತಿಸಲು ಕಾರಣವಾಯಿತು. 1961ರಲ್ಲಿ ಕಾಂಗ್ರೆಸ್ ಅಂಗೀಕರಿಸಿದ ನಿರ್ಣಯವೊಂದು ವಿಲ್ಸನ್ ಅವರನ್ನು ರಾಷ್ಟ್ರೀಯ ಸಂಕೇತಕ್ಕೆ ಕಾರಣಕರ್ತ ಎಂದು ಮಾನ್ಯ ಮಾಡಿತು.

1812: ಜನರಲ್ ಕುಟುಝೊವ್ ನೇತೃತ್ವದಲ್ಲಿ ರಷ್ಯದ ಸೇನೆ ಮಾಸ್ಕೊದಿಂದ 110 ಕಿ.ಮೀ. ಪಶ್ಚಿಮಕ್ಕಿರುವ ಬೊರೊಡಿನೊ ಕದನದಲ್ಲಿ ನೆಪೋಲಿಯನ್ನನ್ನು ಸೋಲಿಸಿತು. ನೆಪೋಲಿಯನ್ ಒಂದು ವಾರದ ಬಳಿಕ ಮಾಸ್ಕೊ ಪ್ರವೇಶಿಸಿದ.

No comments:

Advertisement