Sunday, September 7, 2008

ವಿಜ್ಞಾನಿಗೆ ಕೈಕೊಟ್ಟ ಕಂಪ್ಯೂಟರ್ ಉಪಕರಣಗಳು..!

ವಿಜ್ಞಾನಿಗೆ ಕೈಕೊಟ್ಟ

ಕಂಪ್ಯೂಟರ್ ಉಪಕರಣಗಳು..!


ಭಾರಿ ಪ್ರಮಾಣದಲ್ಲಿ ಅರ್ಜಿದಾರರಿಂದ ಹಣ ಪಡೆದು, ಕಳಪೆ ಕಂಪ್ಯೂಟರ್ ಉಪಕರಣಗಳನ್ನು ಒದಗಿಸಿದ್ದು, ಅದರ ಬಗ್ಗೆ ದೂರು ಬಂದಾಗಲೂ ನಿರ್ಲಕ್ಷಿಸಿದ್ದು, ತನ್ಮೂಲಕ ಅರ್ಜಿದಾರರಿಗೆ ಮಾನಸಿಕ ಕ್ಲೇಶ ಹಾಗೂ ಆರ್ಥಿಕ ನಷ್ಟ ಉಂಟಾಗುವಂತೆ ಮಾಡಿದ್ದು ನಿಶ್ಚಿತವಾಗಿ ಪ್ರತಿವಾದಿ ಪಾಲಿನ ಸೇವಾಲೋಪ ಆಗುತ್ತದೆ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬಂದಿತು.

ನೆತ್ರಕೆರೆ ಉದಯಶಂಕರ

ಅಂಗಡಿಯಿಂದ ಖರೀದಿಸುವ ಯಾವುದೇ ವಸ್ತು ಉಪಯೋಗಕ್ಕೆ ಬರಬೇಕು ಎಂಬುದು ಪ್ರತಿಯೊಬ್ಬ ಗ್ರಾಹಕನ ಆಸೆ. ಆದರೆ ಹಾಗೆ ಕೊಂಡು ತಂದ ವಸ್ತು ಕೈಕೊಟ್ಟರೆ? ಅದನ್ನು ದುರಸ್ತಿಪಡಿಸಿಕೊಡಬೇಕಾದದ್ದು ಇಲ್ಲವೇ, ಬದಲಾಯಿಸಿಕೊಡಬೇಕಾದದ್ದು ಮಾರಾಟಗಾರನ ಕರ್ತವ್ಯ. ಈ ಕರ್ತವ್ಯವನ್ನು ಮಾಡದ ಮಾರಾಟಗಾರರ ವಿರುದ್ಧ ಗ್ರಾಹಕರು ಕ್ರಮ ಕೈಗೊಳ್ಳಬಹುದೇ?

ಹೌದು ಎನ್ನುತ್ತದೆ ಗ್ರಾಹಕ ಸಂರಕ್ಷಣಾ ಕಾನೂನು. ತನ್ನ ಮುಂದೆ ಬಂದ ಇಂತಹ ಪ್ರಕರಣವೊಂದರಲ್ಲಿ ಬೆಂಗಳೂರಿನ ನಗರ ಜಿಲ್ಲಾ ಗ್ರಾಹಕ ನ್ಯಾಯಾಲಯವು ಗ್ರಾಹಕರಿಗೆ ನ್ಯಾಯ ಒದಗಿಸಿದ ಪ್ರಕರಣ ಇದು.

ಈ ಪ್ರಕರಣದ ಅರ್ಜಿದಾರರು: ಬೆಂಗಳೂರು ನಗರದ ನಿವಾಸಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾದ ಪಿ. ಬಾಲಮುರಳಿ ಕೃಷ್ಣ. ಪ್ರತಿವಾದಿಗಳು: ಬೆಂಗಳೂರು ಯಶವಂತಪುರದ ಸ್ವರಾಜ್ ಕಂಪ್ಯೂಟರ್ ಎಂಜಿನಿಯರ್ಸ್ ಮಾಲಕ ಕೇಶವಸ್ವರಾಜ್.

ಅರ್ಜಿದಾರ ಬಾಲ ಮುರಳಿ ಕೃಷ್ಣ ಅವರು ಒಟ್ಟು 8,250 ರೂಪಾಯಿ ನೀಡಿ ಪ್ರತಿವಾದಿ ಕೇಶವಸ್ವರಾಜ್ ಅವರ ಅಂಗಡಿಯಿಂದ ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರ್ ಸೇರಿದಂತೆ ಕಂಪ್ಯೂಟರ್ ಸಂಬಂಧಿತ ಉಪಕರಣಗಳನ್ನು ಖರೀದಿಸಿದರು. ಈ ಕಂಪ್ಯೂಟರ್ ಉಪಕರಣಗಳು ಪ್ರಾರಂಭದಿಂದಲೇ ಸಮರ್ಪಕವಾಗಿ ಕಾರ್ಯ ನಿರ್ವಹಿಸಲಿಲ್ಲ. ಈ ಉಪಕರಣಗಳ ಜೊತೆಗೆ ಒಂದು ಗಿಗಾಬೈಟ್ ಸಾಮರ್ಥ್ಯದ ರ್ಯಾಮ್ ನೀಡುವುದಾಗಿಯೂ ಪ್ರತಿವಾದಿ ಭರವಸೆ ನೀಡಿದ್ದರು. ಈ ಭರವಸೆ ಈಡೇರಿಸುವಲ್ಲಿಯೂ ಅವರು ವಿಫಲರಾದರು.

ವಿಜ್ಞಾನಿಯಾಗಿದ್ದ ಅರ್ಜಿದಾರರಿಗೆ ತಮ್ಮ ಉದ್ಯೋಗದ ಹಿನ್ನೆಲೆಯಲ್ಲಿ ಕಂಪ್ಯೂಟರ್ ಬಳಕೆ ಅಗತ್ಯವಾಗಿತ್ತು. ಅದರೆ ಪ್ರಾರಂಭದಿಂದಲೂ ಖರೀದಿಸಿದ ಈ ಉಪಕರಣಗಳು ಕೈಕೊಟ್ಟ ಪರಿಣಾಮವಾಗಿ ಆರ್ಥಿಕ ನಷ್ಟದ ಜೊತೆಗೆ ಮಾನಸಿಕವಾಗಿಯೂ ತೀವ್ರ ಕಿರಿಕಿರಿಯಾಯಿತು.

ತಮಗಾದ ತೊಂದರೆಗಳನ್ನು ವಿವರಿಸಿ ಬಾಲ ಮುರಳಿ ಅವರು ಪ್ರತಿವಾದಿ ಕೇಶವ ಸ್ವರಾಜ್ ಅವರಿಗೆ ಪತ್ರ ಬರೆದು, ಕಂಪ್ಯೂಟರ್ ಉಪಕರಣಗಳನ್ನು ಬದಲಾಯಿಸಿಕೊಡುವಂತೆ ಇಲ್ಲವೇ ಹಣ ಹಿಂದಿರುಗಿಸುವಂತೆ ಆಗ್ರಹಿಸಿದರು.

ಪ್ರತಿವಾದಿ ಈ ಪತ್ರಕ್ಕೆ ಉತ್ತರಿಸಲಿಲ್ಲ. ಅರ್ಜಿದಾರರು ವಕೀಲರ ಮೂಲಕ ಲೀಗಲ್ ನೋಟಿಸ್ ಕೂಡಾ ಕಳುಹಿಸಿದರು. ಅದಕ್ಕೂ ಪ್ರತಿವಾದಿಯಿಂದ ಶೂನ್ಯ ಸ್ಪಂದನೆ.

ಪ್ರತಿವಾದಿಯ ಈ ವರ್ತನೆ ಸೇವಾ ನ್ಯೂನತೆಯಲ್ಲದೆ ಬೇರೇನಲ್ಲ ಎಂದು ಆಪಾದಿಸಿದ ಅರ್ಜಿದಾರರು ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿ ತಮಗೆ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದರು.

ಅಧ್ಯಕ್ಷ ಎ.ಎಂ. ಬೆನ್ನೂರು, ಸದಸ್ಯರಾದ ಸೈಯದ್ ಉಸ್ಮಾನ್ ರಜ್ವಿ ಮತ್ತು ಶ್ರೀಮತಿ ಯಶೋದಮ್ಮ ಅವರಿದ್ದ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ನ್ಯಾಯಾಲಯವು ಅರ್ಜಿದಾರರ ಪರ ವಕೀಲ ಎ. ಗೋಪಿ ಪ್ರಕಾಶ್ ಅವರ ಅಹವಾಲು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು. ಪ್ರತಿವಾದಿಗೆ ನೋಟಿಸನ್ನೂ ಕಳುಹಿಸಿತು.

ಗ್ರಾಹಕ ನ್ಯಾಯಾಲಯದ ನೋಟಿಸಿಗೂ ಪ್ರತಿವಾದಿ ಉತ್ತರಿಸಲಿಲ್ಲ. ನ್ಯಾಯಾಲಯಕ್ಕೆ ಹಾಜರಾಗಲೂ ಇಲ್ಲ. ಆದರೆ ಅರ್ಜಿದಾರರು ತಮ್ಮ ಬಳಿ ಇದ್ದ ಸಾಕ್ಷ್ಯಾಧಾರಗಳ ಜೊತೆಗೆ ಪ್ರಮಾಣಪತ್ರವನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದರು.

ಅರ್ಜಿದಾರರು ಸಲ್ಲಿಸಿದ ಪ್ರಮಾಣಪತ್ರ ಹಾಗೂ ಸಾಕ್ಷ್ಯಾಧಾರಗಳನ್ನು ಗಮನಿಸಿದ ನ್ಯಾಯಾಲಯವು, ಪ್ರತಿವಾದಿಯು ಅರ್ಜಿದಾರರ ಆರೋಪಗಳಿಗೆ ಯಾವುದೇ ಪ್ರತ್ಯುತ್ತರ ಇಲ್ಲವೇ ಆಕ್ಷೇಪ ಸಲ್ಲಿಸದ ಕಾರಣ ಅವರು ಈ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಭಾವಿಸಿತು.

ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಪ್ರತಿವಾದಿಯ ಗೈರು ಹಾಜರಿಯಲ್ಲೇ ವಿಚಾರಣೆ ಮುಂದುವರೆಸಿದ ಪೀಠವು ಅರ್ಜಿದಾರರ ದೂರಿನಲ್ಲಿ ಅಸಹಜವಾದುದೇನೂ ಇಲ್ಲ ಎಂಬುದನ್ನು ಹಾಗೂ ಅರ್ಜಿದಾರರಿಗೆ ಪ್ರತಿವಾದಿ ವಿರುದ್ಧ ಯಾವುದೇ ಪೂರ್ವದ್ವೇಷ ಇಲ್ಲದೇ ಇದ್ದುದನ್ನು ಗಮನಕ್ಕೆ ತೆಗೆದುಕೊಂಡಿತು.

ಭಾರಿ ಪ್ರಮಾಣದಲ್ಲಿ ಅರ್ಜಿದಾರರಿಂದ ಹಣ ಪಡೆದು, ಕಳಪೆ ಕಂಪ್ಯೂಟರ್ ಉಪಕರಣಗಳನ್ನು ಒದಗಿಸಿದ್ದು, ಅದರ ಬಗ್ಗೆ ದೂರು ಬಂದಾಗಲೂ ನಿರ್ಲಕ್ಷಿಸಿದ್ದು, ತನ್ಮೂಲಕ ಅರ್ಜಿದಾರರಿಗೆ ಮಾನಸಿಕ ಕ್ಲೇಶ ಹಾಗೂ ಆರ್ಥಿಕ ನಷ್ಟ ಉಂಟಾಗುವಂತೆ ಮಾಡಿದ್ದು ನಿಶ್ಚಿತವಾಗಿ ಪ್ರತಿವಾದಿ ಪಾಲಿನ ಸೇವಾಲೋಪ ಆಗುತ್ತದೆ ಎಂಬ ನಿರ್ಧಾರಕ್ಕೆ ಬಂದ ನ್ಯಾಯಾಲಯವು ಅರ್ಜಿದಾರರು ಸೂಕ್ತ ಪರಿಹಾರಕ್ಕೆ ಅರ್ಹರಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟಿತು.

ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಎಲ್ಲ ಕಂಪ್ಯೂಟರ್ ಉಪಕರಣಗಳನ್ನು ಹಿಂದಕ್ಕೆ ಪಡೆದು 7900 ರೂಪಾಯಿಗಳನ್ನು 3000 ರೂಪಾಯಿ ಪರಿಹಾರ ಮತ್ತು 500 ರೂಪಾಯಿ ಖಟ್ಲೆ ವೆಚ್ಚ ಸಹಿತವಾಗಿ ಅರ್ಜಿದಾರರಿಗೆ ನೀಡಬೇಕು ಎಂದು ಪ್ರತಿವಾದಿಗೆ ಆಜ್ಞಾಪಿಸಿತು.

No comments:

Advertisement