ಗ್ರಾಹಕರ ಸುಖ-ದುಃಖ

My Blog List

Monday, September 8, 2008

ಇಂದಿನ ಇತಿಹಾಸ History Today ಸೆಪ್ಟೆಂಬರ್ 08

ಇಂದಿನ ಇತಿಹಾಸ

ಸೆಪ್ಟೆಂಬರ್ 8

ಅಮೆರಿಕದ ಸೇನೆಗಾಗಿ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಲ್ಲಿ ಬಳಸಲು ಉಪಯುಕ್ತವಾದ `ಮಾದರಿ ಮಾನ್ಯತೆ' (ಪ್ಯಾಟರ್ನ್ ರೆಕಗ್ನಿಷನ್) ಭಾಗಗಳನ್ನು ಅಭಿವೃದ್ಧಿ ಪಡಿಸಿದ ಭಾರತದ ಅಸ್ಸಾಂ ಮೂಲದ ಅಮೆರಿಕ ವಿಜ್ಞಾನಿ ಅಭಿಜಿತ್ ಮಹಾಲನೋಬಿಸ್ ಅವರನ್ನು ಪ್ರತಿಷ್ಠಿತ ಎಮರಾಲ್ಡ್ ಆನರ್ಸ್ ಸಂಸ್ಥೆಯು `ವರ್ಷದ ವಿಜ್ಞಾನಿ' ಗೌರವಕ್ಕೆ ಆಯ್ಕೆ ಮಾಡಿತು. ಪ್ರತಿಷ್ಠಿತ ಎಮರಾಲ್ಡ್ ಆನರ್ಸ್ ಸಂಸ್ಥೆಯು ಅಲ್ಪಸಂಖ್ಯಾತ ವಿಜ್ಞಾನಿಗಳ ಸಾಧನೆಯನ್ನು ಗುರುತಿಸಿ ಈ ಗೌರವವನ್ನು ನೀಡುತ್ತದೆ.

2007: ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಗೌಡನಪಾಳ್ಯದಲ್ಲಿ ಲಘು ವಿಮಾನವೊಂದು ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಪರಿಣಾಮವಾಗಿ ಪೈಲಟ್ ಸಹಿತ ನಾಲ್ವರು ಮೃತರಾದರು. ಮೃತರನ್ನು ಪಟ್ನಾದ ಪೈಲಟ್ ಸಂತೋಷ್, ಸಹ ಪೈಲಟ್ ಕೊಯಮತ್ತೂರಿನ ಷಣ್ಮುಗಂ, ಕೊಟ್ಟಾಯಂನ ಸುನೀಲ್ ಜೋಸೆಫ್ ಮತ್ತು ಚೆನ್ನೈನ ಮೊಹಮ್ಮದ್ ಶಬೀರ್ ಎಂದು ಗುರುತಿಸಲಾಯಿತು. ಕೇರಳದ ಆಲೂಕಾಸ್ ಜ್ಯುಯೆಲರಿ ಗ್ರೂಪಿಗೆ ಸೇರಿದ ಪಿ68/ಸಿ ಲಘು ವಿಮಾನ ಬೆಂಗಳೂರಿನಿಂದ ಕೊಚ್ಚಿಗೆ ಹೊರಟಿತ್ತು. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಎಚ್ ಎಎಲ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಕೆಲವೇ ನಿಮಿಷಗಳಲ್ಲಿ (3.14ಕ್ಕೆ) ನಿಯಂತ್ರಣ ಕಳೆದುಕೊಂಡಿತು. ಗೌಡನಪಾಳ್ಯದಲ್ಲಿರುವ ತೆಂಗಿನ ಮರವೊಂದಕ್ಕೆ ಮೊದಲು ಡಿಕ್ಕಿ ಹೊಡೆದು, ನಂತರ ಕೆರೆಗೆ ಬಿತ್ತು.

2007: ಇಂಗ್ಲೆಂಡಿನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಅಂತ್ಯಗೊಂಡ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತು. ಬೌಲರ್ ಹಾಗೂ ಬ್ಯಾಟ್ಸ್ ಮನ್ ಗಳ ಸೊಗಸಾದ ಪ್ರದರ್ಶನದ ನೆರವಿನಿಂದ ಏಳು ವಿಕೆಟ್ ಗೆಲುವು ಸಾಧಿಸಿದ ಆತಿಥೇಯ ಇಂಗ್ಲೆಂಡ್ 4-3ರಲ್ಲಿ ಸರಣಿ ಗೆದ್ದು ಬೀಗಿತು. ಸರಣಿಯಲ್ಲಿ 70.33 ಸರಾಸರಿಯಲ್ಲಿ ಒಟ್ಟು 422 ರನ್ ಪೇರಿಸಿದ ಇಯಾನ್ ಬೆಲ್ `ಸರಣಿ ಶ್ರೇಷ್ಠ' ಎನಿಸಿದರು. ಕಾಲಿಂಗ್ ವುಡ್ ಗೆ `ಪಂದ್ಯ ಪುರುಷೋತ್ತಮ' ಗೌರವ ಲಭಿಸಿತು.

2007: ಬ್ರಿಟನ್ನಿನ ಪ್ರಧಾನಿ ಬ್ರೌನ್ ಅವರ ಪತ್ನಿ ಸಾರಾ ಬ್ರೌನ್ ಅವರಿಗೆ ವೊಲ್ವರ್ ಹ್ಯಾಂಪ್ಟನ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿತು. ಕುಲಪತಿ ಲಾರ್ಡ್ ಸ್ವರಾಜ್ ಪಾಲ್ ವಿವಿ ಘಟಿಕೋತ್ಸವದಲ್ಲಿ ಲಾರಾಗೆ ಪದವಿ ಪ್ರದಾನ ಮಾಡಿದರು.

2007: ಮೊಬೈಲ್ ಸಂಸ್ಥೆ ಹಚ್ ಮೊಟ್ಟಮೊದಲ ಬಾರಿಗೆ ಕರೆ ನಿರ್ಬಂಧಿಸುವ (ಕಾಲ್ ಫಿಲ್ಟರ್) ಸೇವೆ ಆರಂಭಿಸಿತು. ಈ ಸೌಲಭ್ಯದಡಿಯಲ್ಲಿ ಗ್ರಾಹಕರು ನಿರ್ದಿಷ್ಟವಾದ ಸಂಖ್ಯೆಗಳಿಂದ ಒಳಬರುವ ಕರೆಗಳನ್ನು ತಡೆಯಬಹುದು. ಅನಗತ್ಯವಾದ ಸಂಖ್ಯೆಗಳಿಂದ ಒಳಬರುವ ಕರೆ ಬಂದಾಗ, ಕರೆ ಮಾಡಿದವರಿಗೆ ಪ್ರಸ್ತುತ ಹಚ್ ಚಂದಾದಾರರು ನಿಮ್ಮ ಕರೆ ಸ್ವೀಕರಿಸಲು ಇಚ್ಛಿಸುವುದಿಲ್ಲ, ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ ಎಂಬ ಸಂದೇಶ ಕೇಳಿಸುತ್ತದೆ. ಈ ಸೇವೆಯಿಂದ ಗ್ರಾಹಕರಿಗೆ ತಮಗೆ ಬರುವ ಕರೆಗಳ ಮೇಲೆ ಸಂಪೂರ್ಣ ನಿಯಂತ್ರಣ ದೊರೆಯುತ್ತದೆ. ಸ್ವೀಕರಿಸದ ಕರೆಗಳ ಬಗ್ಗೆ ನೀಡುವ ಮಾಹಿತಿ (ಮಿಸ್ಡ್ ಕಾಲ್ ಅಲರ್ಟ್) ತಡೆಹಿಡಿಯಲಾದ ಸಂಖ್ಯೆಗಳಿಂದ ಬಂದ ಕರೆಗಳ ಕುರಿತು ನೀಡಲಾಗುತ್ತದೆ. ತಡೆಹಿಡಿಯಲಾದ ಸಂಖ್ಯೆಯಿಂದ ಮತ್ತೆ ಕರೆ ಬರುವಂತೆ ಸಹ ಚಂದಾದಾರರು ಮಾಡಿಕೊಳ್ಳಲು ಅವಕಾಶವಿರುತ್ತದೆ. ಕಪ್ಪು ಪಟ್ಟಿಯಿಂದ ಆ ಸಂಖ್ಯೆಗಳನ್ನು ತೆಗೆದುಹಾಕಿ ಒಳಬರುವ ಕರೆಗಳನ್ನು ಪುನಃ ಪಡೆಯಬಹುದು.

2007: ಲಾಹೋರಿನಲ್ಲಿ ನಡೆದ ಪ್ರಥಮ ದಕ್ಷಿಣ ಏಷ್ಯಾ ಈಜು ಮತ್ತು ವಾಟರ್ ಪೋಲೊ ಚಾಂಪಿಯನ್ಶಿಪ್ ನಲ್ಲಿ ಭಾರತದ ಪುರುಷರು ಒಟ್ಟಾರೆ ಹತ್ತೊಂಬತ್ತು ಚಿನ್ನದ ಪದಕಗಳನ್ನು ಗೆದ್ದುಕೊಂಡರು. ಅಗ್ನೀಶ್ವರ್ ಜಯಪ್ರಕಾಶ್ ಅವರು ಮುಕ್ತ ವಿಭಾಗದಲ್ಲಿ ಎರಡು ಬಂಗಾರದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಅವರು 400 ಮೀ. ವೈಯಕ್ತಿಕ ಮೆಡ್ಲೆಯಲ್ಲಿ 4 ನಿಮಿಷ 48 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಅವರಿಗೆ ನಿಕಟ ಪೈಪೋಟಿ ನೀಡಿದ ಭಾರತದವರೇ ಆದ ಆದಿತ್ಯ ಸಾಂಗ್ವೇಕರ್ 4 ನಿಮಿಷ ಹಾಗೂ 51.67 ಸೆಕೆಂಡುಗಳಲ್ಲಿ ನಿಗದಿತ ಅಂತರವನ್ನು ಕ್ರಮಿಸಿ, ಎರಡನೇ ಸ್ಥಾನ ಪಡೆದರು. ಕಂಚಿನ ಪದಕವು ಆತಿಥೇಯ ಪಾಕಿಸ್ತಾನದ ಆದಿಲ್ ಬೇಗ್ ಅವರ ಪಾಲಾಯಿತು. ಅವರು 5 ನಿಮಿಷ ಹಾಗೂ 11.46 ಸೆಕೆಂಡುಗಳಲ್ಲಿ ಗುರಿ ತಲುಪಿದರು. 100 ಮೀ. ಬ್ರೆಸ್ಟ್ ಸ್ಟ್ರೋಕಿನಲ್ಲಿಯೂ ಅಗ್ನೀಶ್ವರ್ಗೆ (1:07.73 ಸೆ.) ಅಗ್ರಸ್ಥಾನದ ಗೌರವ ಸಿಕ್ಕಿತು. ಪಾಕಿಸ್ಥಾನದ ಅಬ್ದುಲ್ ಅಜೀಜ್ (1:10.25 ಸೆ.) ಹಾಗೂ ಶ್ರೀಲಂಕಾದ ಎಂ.ಎ.ಚಣಕಾ (1:12.03 ಸೆ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಪಡೆದರು.

2007: ಮೊಹಮ್ಮದ್ ಆಸಿಫ್ ಗೆ ಬ್ಯಾಟಿನಿಂದ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ಥಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯು ಶೋಯಬ್ ಅಖ್ತರ್ ಮೇಲೆ ಅನಿರ್ಧಿಷ್ಟ ಅವಧಿಯ ನಿಷೇಧ ಹೇರಿತು. ಟ್ವೆಂಟಿ-20 ವಿಶ್ವಕಪ್ ಕ್ರಿಕೆಟಿನಲ್ಲಿ ಆಡುವ ಪಾಕಿಸ್ಥಾನ ತಂಡದಲ್ಲಿ ಇದ್ದ ಶೋಯಬ್ ಅಭ್ಯಾಸದ ಸಂದರ್ಭದಲ್ಲಿ ಆಸಿಫ್ ಜೊತೆಗೆ ಮಾತಿನ ಚಕಮಕಿ ನಡೆಸಿದ್ದರು. ಆನಂತರ ಕೋಪದಿಂದ ಬ್ಯಾಟಿನಿಂದ ಹೊಡೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ, ಪಿಸಿಬಿ ನಿಷೇಧ ಶಿಕ್ಷೆ ವಿಧಿಸಿತು.

2006: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸೂಕ್ಷ್ಮ ಪಟ್ಟಣವಾದ ಮಾಲೆಗಾಂವ್ ನ ಮಸೀದಿ ಹಾಗೂ ಮುಶಾವರಾತ್ ಮಾರುಕಟ್ಟೆ ಪ್ರದೇಶದಲ್ಲಿ ಶಕ್ತಿಶಾಲಿ ತ್ರಿವಳಿ ಸ್ಫೋಟಗಳು ಸಂಭವಿಸಿದ ಪರಿಣಾಮವಾಗಿ 38 ಜನ ಮೃತರಾಗಿ 100ಕ್ಕೂ ಹೆಚ್ಚು ಜನ ಗಾಯಗೊಂಡರು. ನೂರಾನಿ ಮಸೀದಿ ಬಳಿಯ ಬಡಾ ಖಬರಸ್ಥಾನ ಪ್ರದೇಶದ ಹೊರಗೆ ಹಾಗೂ ನಗರದ ಹೃದಯ ಭಾಗದಲ್ಲಿ ಜನರು ಶುಕ್ರವಾರದ ಪ್ರಾರ್ಥನೆ ಮುಗಿಸಿ ಹೊರಡುತ್ತಿದ್ದಾಗ ಮಧ್ಯಾಹ್ನ 1.50 ರ ಸಮಯದಲ್ಲಿ ಈ ಸ್ಫೋಟಗಳು ಸಂಭವಿಸಿದವು.

2006: ಅಮೆರಿಕದ ಸೇನೆಗಾಗಿ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಲ್ಲಿ ಬಳಸಲು ಉಪಯುಕ್ತವಾದ `ಮಾದರಿ ಮಾನ್ಯತೆ' (ಪ್ಯಾಟರ್ನ್ ರೆಕಗ್ನಿಷನ್) ಭಾಗಗಳನ್ನು ಅಭಿವೃದ್ಧಿ ಪಡಿಸಿದ ಭಾರತದ ಅಸ್ಸಾಂ ಮೂಲದ ಅಮೆರಿಕ ವಿಜ್ಞಾನಿ ಅಭಿಜಿತ್ ಮಹಾಲನೋಬಿಸ್ ಅವರನ್ನು ಪ್ರತಿಷ್ಠಿತ ಎಮರಾಲ್ಡ್ ಆನರ್ಸ್ ಸಂಸ್ಥೆಯು `ವರ್ಷದ ವಿಜ್ಞಾನಿ' ಗೌರವಕ್ಕೆ ಆಯ್ಕೆ ಮಾಡಿತು. ಪ್ರತಿಷ್ಠಿತ ಎಮರಾಲ್ಡ್ ಆನರ್ಸ್ ಸಂಸ್ಥೆಯು ಅಲ್ಪಸಂಖ್ಯಾತ ವಿಜ್ಞಾನಿಗಳ ಸಾಧನೆಯನ್ನು ಗುರುತಿಸಿ ಈ ಗೌರವವನ್ನು ನೀಡುತ್ತದೆ. ಅಮೆರಿಕ ಸೇನೆಯ ಲಕ್ಹೀಡ್ ಮಾರ್ಟಿನ್ ಕ್ಷಿಪಣಿ ಮತ್ತು ಅಗ್ನಿ ನಿಯಂತ್ರಣ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಸ್ಸಾಂ ಮೂಲದ ಮಹಾಲನೋಬಿಸ್ ಅವರು ಮನುಷ್ಯರು ಮತ್ತು ಪ್ರಾಣಿಗಳ ಪ್ರಮುಖ ಜೋಡಣೆಗಳ ವಿಶ್ಲೇಷಣೆ ಮಾಡಲು ಸಾಧ್ಯವಾಗುವಂತಹ ಕಂಪ್ಯೂಟರ್ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದರು. ಇದು ಕಂಪ್ಯೂಟರೀಕೃತ ಕ್ಷಿಪಣಿ ಬ್ಯಾಟರಿಗಳು ಗುರಿ ತಪ್ಪುವುದುನ್ನು ನಿವಾರಿಸಲು ಅನುಕೂಲವಾಗುವಂತಹ `ಮಾದರಿ ಮಾನ್ಯತೆ ವ್ಯವಸ್ಥೆ' ಅಭಿವೃದ್ಧಿ ಪಡಿಸಲು ಅನುಕೂಲ ಒದಗಿಸಿತು. ಮಹಾಲನೋಬಿಸ್ ಅವರ `ಆಟೋಮ್ಯಾಟಿಕ್ ಟಾರ್ಗೆಟ್ ರೆಕಗ್ನಿಷನ್ ಸಿಸ್ಟಮ್' ಕ್ಷಿಪಣಿ ಮತ್ತು ಅಮೆರಿಕ ಸೇನೆಯ ಅಗ್ನಿ ನಿಯಂತ್ರಣ ವ್ಯವಸ್ಥೆಗೆ ಅಡಿಪಾಯ ಒದಗಿಸಿತು. ಅಷ್ಟೇ ಅಲ್ಲ, ಭವಿಷ್ಯದ ಎಲ್ಲ ಸೇನಾ ಕಂಪ್ಯೂಟರ್ ಮಾನ್ಯತಾ ವ್ಯವಸ್ಥೆಗಳಿಗೆ ಒಂದು ಮಾದರಿಯನ್ನು ಒದಗಿಸಿತು ಎಂದು `ಸೈನ್ಸ್ ಸ್ಪ್ರೆಕ್ಟಮ್' ಬರೆಯಿತು.

2006: ವಿವಾದಕ್ಕೆ ಎಡೆ ಮಾಡಿದ್ದ ಕರ್ನಾಟಕದ ಧಾರ್ಮಿಕ ದತ್ತಿ ಕಾಯ್ದೆಯನ್ನು ಹೈಕೋರ್ಟ್ ರದ್ದು ಪಡಿಸಿತು. ಈ ಕಾಯ್ದೆ ಹಿಂದುಗಳಲ್ಲಿ ಒಡುಕುಂಟು ಮಾಡುವಂತಹುದು ಎಂದು ಕೋರ್ಟ್ ಹೇಳಿತು. ಮಠಗಳು, ಜೈನರು ಮತ್ತು ಸಿಖ್ ಧಾರ್ಮಿಕ ಸಂಸ್ಥೆಗಳನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಟ್ಟ ಸರ್ಕಾರದ ನಿಲುವು ಅಸಮಾನತೆಯಿಂದ ಕೂಡಿದೆ ಎಂದು ನ್ಯಾಯಮೂರ್ತಿ ಗುರುರಾಜನ್ ಮತ್ತು ನ್ಯಾಯಮೂರ್ತಿ ಸಿ.ಆರ್. ಕುಮಾರ ಸ್ವಾಮಿ ಅವರನ್ನು ಒಳಗೊಂಡ ಪೀಠ ತಿಳಿಸಿತು.

2006: ಆಸ್ಟ್ರೇಲಿಯಾದ ಖ್ಯಾತ ಮೋಟಾರ್ ರೇಸಿಂಗ್ ಚಾಲಕ ಪೀಟರ್ ಬ್ರೋಕ್ ಅವರು ಸಿಡ್ನಿಯಲ್ಲಿ ನಡೆದ ಮೋಟಾರ್ ರ್ಯಾಲಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತರಾದರು.

2006: ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದ ಯುರೇಕಾ ಅರಣ್ಯದಲ್ಲಿ ಇತ್ತೀಚೆಗೆ ಪತ್ತೆಯಾದ ಮೂರು ರೆಕ್ ವುಡ್ ಮರಗಳು (ಕೆಂಪು ಬಣ್ಣದ ಮಂಜತ್ತಿ ಮರ) ವಿಶ್ವದಲ್ಲೇ ಅತಿ ಎತ್ತರ ಎಂದು ತಜ್ಞರು ಅಂದಾಜು ಮಾಡಿದರು. ಈ ಮೂರು ಮರಗಳಲ್ಲಿ ಒಂದು ಮರ ಸುಮಾರು 378.1 ಅಡಿ (115.2 ಮೀಟರ್) ಎತ್ತರವಿದ್ದು, ಇದಕ್ಕೆ `ಹೈಪೀರಿಯನ್' ಎಂದು ಹೆಸರಿಡಲಾಗಿದೆ.

2001: ಬಾಂಗ್ಲಾದೇಶದ ಬ್ಯಾಟ್ಸ್ ಮನ್ ಮಹಮ್ಮದ್ ಆಶ್ರಫುಲ್ ಅವರು ಕೊಲಂಬೋದಲ್ಲಿ ನಡೆದ ಒಂದು ದಿನದ ಏಷಿಯನ್ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಶ್ರೀಲಂಕಾ ವಿರುದ್ಧ 114 ರನ್ನುಗಳನ್ನು ಗಳಿಸಿ, ಕ್ರಿಕೆಟ್ ಇತಿಹಾಸದಲ್ಲೇ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ತಮ್ಮ 17ನೇ ಜನ್ಮದಿನದ ಮುನ್ನಾದಿನ ಅವರು ಈ ಸಾಧನೆ ಮಾಡಿದರು. 1960-61ರಲ್ಲಿ ಮುಸ್ತಾಕ್ ಮಹಮ್ಮದ್ ಅವರು 17 ವರ್ಷ 81 ದಿನಗಳ ವಯಸ್ಸಿನಲ್ಲಿ ಭಾರತ ವಿರುದ್ಧ ನಡೆದ ಪಂದ್ಯದಲ್ಲಿ ಶತಕ ಬಾರಿಸಿ ಅತ್ಯಂತ ಕಿರಿಯ ಆಟಗಾರ ಎನಿಸಿದ್ದರು.

1999: ಪಂಜಾಬಿನ ಮುಖ್ಯಮಂತ್ರಿಯಾಗಿ ಹರಿಚರಣ್ ಸಿಂಗ್ ಬ್ರಾರ್ ಅಧಿಕಾರ ಸ್ವೀಕಾರ.

1988: ತಮ್ಮ ಮೈಕ್ರೋ ಲೈಟ್ ಸಿಂಗಲ್ ಎಂಜಿನ್ ವಿಮಾನದಲ್ಲಿ ಲಂಡನ್ನಿನಿಂದ ಅಹಮದಾಬಾದಿಗೆ 21 ದಿನಗಳಲ್ಲಿ ಕ್ರಮಿಸುವ ಮೂಲಕ ಕೈಗಾರಿಕೋದ್ಯಮಿ ವಿಜಯಪತ್ ಸಿಂಘಾನಿಯಾ ಅವರು ವಿಮಾನಯಾನದಲ್ಲಿ ದಾಖಲೆ ನಿರ್ಮಿಸಿದರು.

1982: ಕಾಶ್ಮೀರಿ ನಾಯಕ ಷೇಕ್ ಅಬ್ದುಲ್ಲ ಅವರು ಶ್ರೀನಗರದಲ್ಲಿ ತಮ್ಮ 76ನೇ ವಯಸ್ಸಿನಲ್ಲಿ ನಿಧನರಾದರು.

1952: ಎರ್ನೆಸ್ಟ್ ಹೆಮಿಂಗ್ವೇ ಅವರ `ದಿ ಓಲ್ಡ್ ಮ್ಯಾನ್ ಅಂಡ್ ದಿ ಸೀ' ಕಾದಂಬರಿ ಪ್ರಕಟಗೊಂಡಿತು. ಈ ಕಾದಂಬರಿ ಹೆಮಿಂಗ್ವೇ ಅವರಿಗೆ `ಪುಲಿಟ್ಜರ್ ಪ್ರಶಸ್ತಿ'ಯನ್ನು ತಂದು ಕೊಟ್ಟಿತಲ್ಲದೆ, 1954ರಲ್ಲಿ ಸಾಹಿತ್ಯಕ್ಕಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತು.

1949: ಸಾಹಿತಿ ಜರಗನಹಳ್ಳಿ ಶಿವಶಂಕರ್ ಜನನ.

1945: ಸಾಹಿತಿ ಕವಿತಾ ಕೃಷ್ಣ ಜನನ.

1942: ಸಾಹಿತಿ ಬಿ.ಎಸ್. ಸ್ವಾಮಿ ಜನನ.

1939: ಸಾಹಿತಿ ಕುಲಶೇಖರಿ ಜನನ.

1938: ಕೃಷಿ, ಪರಿಸರ ಕಾಳಜಿ, ಸಾಹಿತ್ಯ, ವಿಜ್ಞಾನ, ಮಾನವ ಶಾಸ್ತ್ರ ಇತ್ಯಾದಿ ಕ್ಷೇತ್ರಗಳಲ್ಲಿ ಅಪಾರ ಅಧ್ಯಯನ ನಡೆಸಿ ಪಾಂಡಿತ್ಯ ಪಡೆದ ಕೆ.ಪಿ. ಪೂರ್ಣಚಂದ್ರ್ರ ತೇಜಸ್ವಿ ಅವರು ಕುವೆಂಪು (ಕೆ.ವಿ. ಪುಟ್ಟಪ್ಪ) - ತಾಯಿ ಹೇಮಾವತಿ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಈದಿನ ಜನಿಸಿದರು. ನವೋದಯ, ನವ್ಯ, ನವ್ಯೋತ್ತರ, ಆಧುನಿಕ ಕನ್ನಡ ಸೇರಿದಂತೆ ಕನ್ನಡ ಸಾಹಿತ್ಯದ ಎಲ್ಲ ಘಟ್ಟಗಳಲ್ಲೂ ಸಾಹಿತ್ಯ ಕೃತಿ ರಚಿಸಿದ ತೇಜಸ್ವಿ ಅವರು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದವರು.

1933: ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ ಜನನ. 925ಕ್ಕೂ ಹೆಚ್ಚು ಬಾಲಿವುಡ್ ಚಿತ್ರಗಳಿಗೆ ಹಿನ್ನೆಲೆ ಗಾಯನ ನೀಡಿರುವ ಆಶಾ ಅವರು ಲತಾ ಮಂಗೇಶ್ಕರ್ ಅವರ ಸಹೋದರಿ. ಸಿನಿಮಾ, ಪಾಪ್, ಘಜಲ್, ಭಜನ್, ಭಾರತದ ಶಾಸ್ತ್ರೀಯ ಸಂಗೀತ, ಜಾನಪದ ಗೀತೆಗಳು, ಕವ್ವಾಲಿ ಮತ್ತು ರಬೀಂದ್ರ ಸಂಗೀತವನ್ನು ಹಾಡುವುದರಲ್ಲಿ ಆಶಾ ನಿಷ್ಣಾತರು. ಹಿಂದಿ, ಮರಾಠಿ, ಗುಜರಾತಿ, ತಮಿಳು, ಕನ್ನಡ, ಇಂಗ್ಲಿಷ್, ರಷ್ಯನ್, ಮಲಯ ಸೇರಿದಂತೆ 14 ಭಾಷೆಗಳಲ್ಲಿ ಹಾಡಿದ ಹೆಗ್ಗಳಿಕೆ ಇವರದು. ಇವರು ಹಾಡಿರುವ ಹಾಡುಗಳ ಒಟ್ಟು ಸಂಖ್ಯೆ 12,000ಕ್ಕೂ ಹೆಚ್ಚು ಎಂದು ಅಂದಾಜು.

1928: ಸಾಹಿತಿ ಟಿ. ಮಹಾಬಲೇಶ್ವರ ಭಟ್ಟ ಜನನ.

1664: ಡಚ್ಚರು ನ್ಯೂ ಆಮ್ ಸ್ಟರ್ ಡ್ಯಾಮನ್ನು ಬ್ರಿಟಿಷರಿಗೆ ಒಪ್ಪಿಸಿದರು. ಬ್ರಿಟಿಷರು ಅದಕ್ಕೆ ಯಾರ್ಕಿನ ಡ್ಯೂಕ್ ಭವಿಷ್ಯದ ದೊರೆ ಎರಡನೇ ಜೇಮ್ಸ್ ಗೌರವಾರ್ಥ `ನ್ಯೂಯಾರ್ಕ್' ಎಂದು ಹೆಸರಿಟ್ಟರು.

No comments:

Advertisement