Wednesday, September 17, 2008

ಇಂದಿನ ಇತಿಹಾಸ History Today ಸೆಪ್ಟೆಂಬರ್ 17

ಇಂದಿನ ಇತಿಹಾಸ

ಸೆಪ್ಟೆಂಬರ್ 17

ಸಿ.ಎನ್. ಅಣ್ಣಾದುರೈ ಅವರು `ಪೆರಿಯಾರ್' ಸಂಬಂಧ ಕಡಿದುಕೊಂಡು `ದ್ರಾವಿಡ ಮುನ್ನೇತ್ರ ಕಳಗಂ' (ಡಿಎಂಕೆ) ಪಕ್ಷವನ್ನು ಸ್ಥಾಪಿಸಿದರು.

2007: ಕನ್ನಡ ಪುಸ್ತಕ ಪ್ರಾಧಿಕಾರದ 2006ನೇ ಸಾಲಿನ ಶ್ರೇಷ್ಠ ಪ್ರಕಾಶನ ಪ್ರಶಸ್ತಿಗೆ ಬೆಂಗಳೂರಿನ ನವಕರ್ನಾಟಕ ಪ್ರಕಾಶನ ಆಯ್ಕೆಯಾಯಿತು. ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿಗೆ ಒಟ್ಟು 24 ಸಂಸ್ಥೆಗಳು ಸ್ಪರ್ಧೆಯಲ್ಲಿದ್ದವು. ಹಿರಿಯ ವಿಮರ್ಶಕ ಪ್ರೊ. ಜಿ. ಎಚ್. ನಾಯಕ ಅಧ್ಯಕ್ಷತೆಯ ಆಯ್ಕೆ ಸಮಿತಿ ಅಂತಿಮವಾಗಿ ಈ ಆಯ್ಕೆ ನಡೆಸಿತು.
 
2007: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಸಂಬಂಧವನ್ನು ಪ್ರತಿಬಿಂಬಿಸುವ ಉದ್ದೇಶದಿಂದ  ಡರ್ಬಾನಿನ ಖ್ಯಾತ ಕ್ವಾಜುಲು- ನಾಟಲ್ ವಿಶ್ವವಿದ್ಯಾಲಯವು, ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಭಾರತದ ಮಹಾತ್ಮ ಗಾಂಧಿ ಹಾಗೂ ದಕ್ಷಿಣ ಆಫ್ರಿಕದ ಆಲ್ಬರ್ಟ್ ಲುಥುಲಿ ಅವರ ಸ್ಮರಣಾರ್ಥ ಶಾಂತಿ ಅಧ್ಯಯನ ಪೀಠ ಆರಂಭಿಸುತ್ತಿರುವುದಾಗಿ ಪ್ರಕಟಿಸಿತು. 1997ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಡರ್ಬಾನ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಾಗ ಅವರಿಗೆ ಈ ಅಧ್ಯಯನ ಪೀಠದ ಕಲ್ಪನೆ ಮೊಳೆಯಿತು. ಈ ಯೋಜನೆಯನ್ನು ಮೊದಲು ಪ್ರಸ್ತಾಪಿಸಿದವರೇ ಗಾಂಧಿ ಅವರ ಮೊಮ್ಮಗಳು ಇಳಾ ಗಾಂಧಿ. ನಂತರ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್  ಪೀಠದ ಪ್ರಾಯೋಜಕತ್ವ ವಹಿಸಿಕೊಂಡಿತು. ಆಫ್ರಿಕದಲ್ಲೇ ಮಹಾತ್ಮ ಗಾಂಧಿ ಸತ್ಯಾಗ್ರಹ ಚಳವಳಿ ಆರಂಭಿಸಿದ್ದರು.

2007: ಬ್ರಿಟನ್ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ವಿಶ್ವದ ಮೊಟ್ಟಮೊದಲ ಸೀಡ್ಲೆಸ್ (ಬೀಜರಹಿತ) ನಿಂಬೆಹಣ್ಣು ಕಾಣಿಸಿಕೊಳ್ಳಲಿದೆ ! ಬ್ರಿಟನ್ನಿನ ರೈತರೊಬ್ಬರು ಬೀಜಗಳೇ ಇಲ್ಲದ ನಿಂಬೆ ಹಣ್ಣನ್ನು ಅಭಿವೃದ್ಧಿಪಡಿಸಿದ್ದಾರೆ. ಒಗರು ಮಿಶ್ರಿತ ಸಿಹಿ ರುಚಿ ಹೊಂದಿರುವ ಈ ವಿಶಿಷ್ಟ ನಿಂಬೆ  ಮುಂದಿನ ವರ್ಷದ ಆರಂಭದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಬೀಜರಹಿತ ನಿಂಬೆ ವಿಶೇಷ ಹಣ್ಣು. ಯುರೋಪಿನ 900 ವರ್ಷಗಳ ಇತಿಹಾಸದಲ್ಲಿ ಇಂಥ ಹಣ್ಣನ್ನು ಕಂಡಿಲ್ಲ ಎಂದು ಇಂಗ್ಲೆಂಡಿನ ಮಾಧ್ಯಮಗಳು ವರದಿ ಮಾಡಿದವು.

2007: ಅಂತರ್ಜಾಲದಲ್ಲಿ ಗೂಗಲ್ ಸರ್ಚ್ ಎಂಜಿನ್ ಹಾಗೂ ಜಿ-ಮೇಲ್ ಸೇರಿದಂತೆ ಅನೇಕ ವಿದೇಶಿ ವೆಬ್ಸೈಟ್, ಇ-ಮೈಲ್ ತಾಣಗಳ ಬಳಕೆಯನ್ನು ಇರಾನ್ ನಿಷೇಧಿಸಿತು.

2007: ಎಳ್ಳು ಹಾಗೂ ಶೇಂಗಾ ಆಮದಿನ ಮೇಲೆ ಹೇರಿದ್ದ ನಿಷೇಧವನ್ನು ರಷ್ಯ ತೆರವುಗೊಳಿಸಿತು. ಭಾರತದ ಶೇಂಗಾ ಹಾಗೂ ಎಳ್ಳಿನ ಮೇಲೆ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಉಳಿಕೆ ಹೆಚ್ಚಾಗಿರುತ್ತಿದ್ದುದರಿಂದ ರಷ್ಯಾದ ಕೃಷಿ ಕಾವಲುಪಡೆ ಈ ನಿರ್ಬಂಧ ಹೇರಿತ್ತು.

2006: ಭಯೋತ್ಪಾದನೆ ನಿಗ್ರಹ ಕುರಿತು ಭಾರತದ ನಿಲುವನ್ನು ಬೆಂಬಲಿಸಿದ ಅಲಿಪ್ತ ಚಳವಳಿಯ ರಾಷ್ಟ್ರಗಳ ಒಕ್ಕೂಟವು (ನ್ಯಾಮ್) ಭಯೋತ್ಪಾದನೆ ನಿಗ್ರಹಿಸಲು ಎಲ್ಲ ಸದಸ್ಯ ರಾಷ್ಟ್ರಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವ 91 ಪುಟಗಳ ನಿರ್ಣಯವನ್ನು ಸ್ವೀಕರಿಸಿತು. ಭಯೋತ್ಪಾದನೆಯಲ್ಲಿ ತೊಡಗಿರುವವರ ಗಡೀಪಾರು ಅಥವಾ ಹಸ್ತಾಂತರ ಮತ್ತು ನ್ಯಾಯಾಂಗದ ಪರಿಧಿಗೆ ಅವರನ್ನು ತರಲು ಸದಸ್ಯ ರಾಷ್ಟ್ರಗಳು ಪ್ರಯತ್ನಿಸಬೇಕು ಎಂದು ನಿರ್ಣಯ ಹೇಳಿತು.

1980: ನಿಕರಾಗುವಾದ ಮಾಜಿ ಅಧ್ಯಕ್ಷ ಅನಾಸ್ಟಾಸಿಯೊ ಸೊಮಾಝಾ ಅವರನ್ನು ಪರಗ್ವೆಯಲ್ಲಿ ಹತ್ಯೆಗೈಯಲಾಯಿತು.

1970: ಸಾಹಿತಿ ರಾಘವೇಂದ್ರ ದಂಡಿನ ಜನನ.

1960: ಸಿಂಧು ಮತ್ತು ಅದರ ಉಪನದಿಗಳ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಭಾರತ ಮತ್ತು ಪಾಕಿಸ್ತಾನ ಸಹಿ.

1956: ಒಎನ್ ಜಿಸಿ ಆರಂಭ.

1950: ಭಾರತ ಸರ್ಕಾರವು ಇಸ್ರೇಲಿಗೆ ಮಾನ್ಯತೆ ನೀಡಿತು.

1949: ಸಿ.ಎನ್. ಅಣ್ಣಾದುರೈ ಅವರು `ಪೆರಿಯಾರ್' ಸಂಬಂಧ ಕಡಿದುಕೊಂಡು `ದ್ರಾವಿಡ ಮುನ್ನೇತ್ರ ಕಳಗಂ' (ಡಿಎಂಕೆ) ಪಕ್ಷವನ್ನು ಸ್ಥಾಪಿಸಿದರು.

1948: ಹೈದರಾಬಾದ್ ಭಾರತದೊಂದಿಗೆ ವಿಲೀನಗೊಂಡ ಬಗ್ಗೆ ಹೈದರಾಬಾದ್ ನಿಜಾಮನಿಂದ ಘೋಷಣೆ.

1939: ಸಾಹಿತಿ ಗುರುಸ್ವಾಮಿ ಕಲಗೇರಿ ಜನನ.

1915: ಸಮಕಾಲೀನ ಭಾರತೀಯ ಕಲಾವಿದ ಹಾಗೂ ಚಿತ್ರ ನಿರ್ಮಾಪಕ ಮಕ್ಬೂಲ್ ಫಿದಾ ಹುಸೇನ್ ಜನ್ಮದಿನ.

1906: ಜ್ಯೂನಿಯಸ್ ರಿಚರ್ಡ್ ಜಯವರ್ಧನೆ ಜನ್ಮದಿನ. ವಕೀಲ ಹಾಗೂ ಸರ್ಕಾರಿ ಅಧಿಕಾರಿಯಾಗಿದ್ದ ಇವರು 1978ರಿಂದ 1989ರ ಅವಧಿಯಲ್ಲಿ ಶ್ರೀಲಂಕಾದ ಅಧ್ಯಕ್ಷರಾಗಿದ್ದರು.

1879: ಸಮಾಜ ಸುಧಾರಕ ಹಾಗೂ `ದ್ರಾವಿಡ ಕಳಗಂ' ಪಕ್ಷದ ಸ್ಥಾಪಕ ಇ.ವಿ. ರಾಮಸ್ವಾಮಿ `ಪೆರಿಯಾರ್' ಜನ್ಮದಿನ.

1876: ಭಾರತೀಯ ಕಾದಂಬರಿಕಾರ ಶರತ್ ಚಂದ್ರ ಚಟರ್ಜಿ (1876-1938) ಜನ್ಮದಿನ.

1867: ಭಾರತೀಯ ಕಲಾವಿದ ಹಾಗೂ ಒಳಾಂಗಣ ಕಲಾವಿದ ಗಗನೇಂದ್ರನಾಥ ಟ್ಯಾಗೋರ್ (1867-1938) ಜನ್ಮದಿನ. ಇವರು ರಬೀಂದ್ರನಾಥ ಟ್ಯಾಗೋರ್ ಅವರ ಸೋದರಳಿಯ.

1850: ಸಾಹಿತಿ, ಶಿಕ್ಷಣ ತಜ್ಞ, ಮುಂಬೈ ಕರ್ನಾಟಕದ ಏಳಿಗೆಗಾಗಿ ಶ್ರಮಿಸಿದ ರೊದ್ದ ಶ್ರೀನಿವಾಸರಾಯರು (17-9-1850ರಿಂದ 4-8-1929) ಕೋನೆರರಾಯರು- ಸುಬ್ಬಮ್ಮ ದಂಪತಿಯ ಮಗನಾಗಿ ಧಾರವಾಡದ ಮದಿಹಾಳದಲ್ಲಿ ಜನಿಸಿದರು.

1827:  ಬ್ರೈಟನ್ನಿನಲ್ಲಿ ಸಸೆಕ್ಸ್ ವಿರುದ್ಧ ಕೆಂಟ್ ಪಂದ್ಯದಲ್ಲಿ ಕ್ರಿಕೆಟ್ ಆಟಕ್ಕೆ `ವೈಡ್ ಬಾಲ್' ಪ್ರವೇಶ ಪಡೆಯಿತು. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement