My Blog List

Thursday, September 18, 2008

ಇಂದಿನ ಇತಿಹಾಸ History Today ಸೆಪ್ಟೆಂಬರ್ 18


ಇಂದಿನ ಇತಿಹಾಸ
ಸೆಪ್ಟೆಂಬರ್ 18

 ಕ್ಯೂಬಾದ ಗಗನಯಾನಿ ಅರ್ನಾಲ್ಡ್ ಟಮಾಯೋ-ಮೆಂಡೆಝ್ ಅವರು ಬಾಹ್ಯಾಕಾಶಕ್ಕೆ ಹಾರಿದ ಪ್ರಥಮ ಲ್ಯಾಟಿನ್ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಂಟರ್ ಕಾಸ್ಮೋಸ್ ಕಾರ್ಯಕ್ರಮದ ಅಡಿಯಲ್ಲಿ ಬಾಹ್ಯಾಕಾಶಕ್ಕೆ ಹಾರಿಸಲಾದ `ಸೋಯುಜ್-38ರಲ್ಲಿ ಇದ್ದ ಇಬ್ಬರು ಗಗನ ಯಾನಿಗಳ ಪೈಕಿ ಅರ್ನಾಲ್ಡ್ ಒಬ್ಬರಾಗಿದ್ದರು.


2014: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನೀ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ನಡುವಣ ಮಾತುಕತೆಗಳ ಫಲಶ್ರುತಿಯಾಗಿ ಭಾರತ ಮತ್ತು ಚೀನಾ 12 ಒಪ್ಪಂದಗಳಿಗೆ ಸಹಿ ಹಾಕಿದವು. ರೈಲ್ವೇ, ಬಾಹ್ಯಾಕಾಶ ಮತ್ತು ಕಸ್ಟಮ್ಸ್ ಕ್ಷೇತ್ರಗಳಲ್ಲಿ ಸಹಕಾರ ಈ ಒಪ್ಪಂದಗಳಲ್ಲಿ ಸೇರಿವೆ. ಭಾರತ ಮತ್ತು ಚೀನಾ ನಡುವಣ ಬಾಂಧವ್ಯ ವೃದ್ಧಿಯ ಸಂಪೂರ್ಣ ಸಾಮರ್ಥ್ಯ ಅರಿವಿಗೆ ಪರಸ್ಪರ ನಂಬಿಕೆ ಮತ್ತು ಗಡಿಯಲ್ಲಿ ಶಾಂತಿ ಕಾಯ್ದುಕೊಳ್ಳುವುದು ಅತ್ಯಂತ ಮಹತ್ವದ ವಿಚಾರ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಎರಡು ದಿನಗಳ ಮಾತುಕತೆಯಲ್ಲಿ ನಾವು ಆರ್ಥಿಕ, ರಾಜಕೀಯ, ಭದ್ರತೆ ಸೇರಿದಂತೆ ಎಲ್ಲಾ ವಿಷಯಗಳ ಬಗೆಗೂ ರ್ಚಚಿಸಿದ್ದೇವೆ. ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಕೊಳ್ಳಬೇಕು ಎಂದು ನಾವು ನಿರ್ಧರಿಸಿದ್ದೇವೆ ಎಂದು ಪ್ರಧಾನಿ ನುಡಿದರು. ವ್ಯಾಪಾರ ಅಸಮತೋಲನ ಬಗ್ಗೆ ನಾವು ಕಳವಳ ವ್ಯಕ್ತ ಪಡಿಸಿದ್ದೇವೆ ಮತ್ತು ಚೀನಾದಲ್ಲಿ ಭಾರತೀಯ ಕಂಪೆನಿಗಳಿಗೆ ಹೂಡಿಕೆ ಮೇಲಿನ ನಿಯಂತ್ರಣಗಳನ್ನು ನಿವಾರಿಸುವಂತೆ ಚೀನೀ ನಾಯಕ ಕ್ಷಿ ಜಿನ್​ಪಿಂಗ್ ಅವರಿಗೆ ಮನವಿ ಮಾಡಿದ್ದೇವೆ ಎಂದು ಮೋದಿ ಹೇಳಿದರು. ಭಾರತ ಮತ್ತು ಚೀನಾ ನಾಗರಿಕ ಪರಮಾಣು ಸಹಕಾರ ನಿಟ್ಟಿನಲ್ಲೂ ಮಾತುಕತೆ ಆರಂಭಿಸಲು ನಿರ್ಧರಿಸಿವೆ ಎಂದು ಪ್ರಧಾನಿ ವಿವರಿಸಿದರು.

2014: ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ 2000 ಕೋಟಿ ಅಮೆರಿಕನ್ ಡಾಲರ್ (1,21,830 ಕೋಟಿ ರೂಪಾಯಿ) ಮೌಲ್ಯದಷ್ಟು ಹೂಡಿಕೆಯನ್ನು ಭಾರತದಲ್ಲಿ ಮಾಡಲು ಚೀನಾ ಒಪ್ಪಿಕೊಂಡಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನೀ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಮಾತುಕತೆ ಸಂದರ್ಭದಲ್ಲಿ ಈ ವಿಚಾರದಲ್ಲಿ ಚೀನಾ ತನ್ನ ಬದ್ಧತೆಯನ್ನು ಸ್ಪಷ್ಟ ಪಡಿಸಿದೆ ಎಂದು ಪ್ರಧಾನಿ ನಂತರ ತಿಳಿಸಿದರು. ಗಡಿಯುದ್ಧಕ್ಕೂ ಸಂಭವಿಸುತ್ತಿರುವ ಘಟನೆಗಳ ಬಗ್ಗೆ ನಾನು ಕಳವಳ ವ್ಯಕ್ತ ಪಡಿಸಿದೆ. ಗಡಿ ಪ್ರಶ್ನೆಯನ್ನು ಬಗೆಹರಿಸಬೇಕು. ನೈಜ ನಿಯಂತ್ರಣ ರೇಖೆ ಬಗ್ಗೆ ಸ್ಪಷ್ಟತೆಯ ಅಗತ್ಯ ಇದೆ ಎಂದು ನಾವು ಅಭಿಪ್ರಾಯಪಟ್ಟೆವು ಎಂದು ಮೋದಿ ಹೇಳಿದರು. ಚೀನಾದ ವೀಸಾನೀತಿ ಹಾಗೂ ನೀರಿನ ವಿಷಯ ಬಗೆಗೂ ನಾನು ಕಳವಳ ವ್ಯಕ್ತಪಡಿಸಿದೆ. ಈ ಕುರಿತ ವಿವಾದ ಇತ್ಯರ್ಥದಿಂದ ಬಾಂಧವ್ಯ ಇನ್ನಷ್ಟು ಬಲಗೊಳ್ಳುವುದು ಎಂದು ನಾನು ಹೇಳಿದೆ ಎಂದು ಪ್ರಧಾನಿ ವಿವರಿಸಿದರು. ನಾವು ಪರಸ್ಪರ ಕಾಳಜಿಗೆ ಸಂಬಂಧಪಟ್ಟ ಎಲ್ಲಾ ವಿಚಾರಗಳಲ್ಲೂ ಫಲಪ್ರದ ಮಾತುಕತೆ ನಡೆಸಿದ್ದೇವೆ ಎಂದು ಚೀನೀ ಅಧ್ಯಕ್ಷ ಕ್ಷಿ ಜಿನ್​ಪಿಂಗ್ ನುಡಿದರು. ಮುಂದಿನ ವರ್ಷ ಆದಿಯಲ್ಲಿ ಚೀನಾಕ್ಕೆ ಭೇಟಿ ನೀಡುವಂತೆಯೂ ಕ್ಷಿ ಅವರು ಈ ಸಂದರ್ಭದಲ್ಲಿ ಮೋದಿ ಅವರಿಗೆ ಆಮಂತ್ರಣ ನೀಡಿದರು. 2015ನೇ ವರ್ಷವನು ಚೀನಾದಲ್ಲಿ 'ಭಾರತಕ್ಕೆ ಭೇಟಿ ನೀಡಿ' (ವಿಸಿಟ್ ಇಂಡಿಯಾ) ವರ್ಷವಾಗಿ ಆಚರಿಸಲಾಗುವುದು ಎಂದೂ ಅವರು ನುಡಿದರು. ಪ್ರದೇಶದಲ್ಲಿ ಬೆಳವಣಿಗೆ ಮತ್ತು ಸಮೃದ್ಧಿಗಾಗಿ ಅವಳಿ ಎಂಜಿನ್​ಗಳಂತೆ ಚೀನಾ ಮತ್ತು ಭಾರತ ಕಾರ್ಯ ನಿರ್ವಹಿಸಲಿವೆ ಎಂದು ಚೀನಾ ಅಧ್ಯಕ್ಷರು ಹೇಳಿದರು. ಪರಸ್ಪರರ ಕಾಳಜಿಗಳನ್ನು ಗೌರವಿಸಲು ನಾವು ನಿರ್ಧರಿಸಿದೆವು. ಚೀನಾವು ಗಡಿ ವಿವಾದ ಇತ್ಯರ್ಥಕ್ಕೆ ದೃಢ ನಿಲುವು ಹೊಂದಿದೆ ಎಂದು ಅವರು ನುಡಿದರು. ಗಡಿಯನ್ನು ಗುರುತಿಸಿಲ್ಲವಾದ್ದರಿಂದ ಕೆಲವು ಘಟನೆಗಳು ಸಂಭವಿಸುತ್ತಿವೆ. ಆದರೆ ಇಂತಹ ಘಟನೆಗಳನ್ನು ನಿರ್ವಹಿಸಲು ಉಭಯ ರಾಷ್ಟ್ರಗಳು ವ್ಯವಸ್ಥೆ ರೂಪಿಸುವುವು ಎಂದು ಅವರು ಹೇಳಿದರು.

2014: ನವದೆಹಲಿ: ಲಡಾಖ್​ನ ಚುಮುರ್ ವಿಭಾಗದಲ್ಲಿ ಸುಮಾರು 1000 ಮಂದಿ ಚೀನೀ ಸೈನಿಕರು ಚೀನಾದ ಅಧ್ಯಕ್ಷ ಕ್ಷಿ ಜಿನ್​ಪಿಂಗ್ ಅವರು ಭಾರತಕ್ಕೆ ಭೇಟಿ ನೀಡಿರುವ ವೇಳೆಯಲ್ಲೇ ಈದಿನ ಭಾರತದೊಳಕ್ಕೆ ನುಸುಳಿ ಬಂದರು. ಸೇನಾ ಮೂಲಗಳ ಪ್ರಕಾರ 1000 ಮಂದಿ ಚೀನೀ ಸೈನಿಕರು ಜಮ್ಮು ಮತ್ತು ಕಾಶ್ಮೀರದ ಲಡಾಖ್ ಪ್ರದೇಶದಲ್ಲಿ ನೈಜ ನಿಯಂತ್ರಣ ರೇಖೆಯನ್ನು ದಾಟಿ ದೇಶದೊಳಕ್ಕೆ ನುಸುಳಿ ಬಂದಿದ್ದು ಹಿಂದಕ್ಕೆ ಹೋಗಲೂ ನಿರಾಕರಿಸಿದರು. ಭಾರತೀಯ ಸೇನೆ ಮೂರು ಬೆಟಾಲಿಯನ್​ಗಳನ್ನು ತತ್ ಕ್ಷಣವೇ ಚುಮುರ್ ವಿಭಾಗದ ನೈಜ ನಿಯಂತ್ರಣ ರೇಖೆಯ ಕಡೆಗೆ ಕಳುಹಿಸಿತು. ಉಭಯ ರಾಷ್ಟ್ರಗಳ ಮಧ್ಯೆ ಧ್ವಜಸಭೆ ನಡೆದ ಮರುದಿನವೇ ಈ ಘಟನೆ ಘಟಿಸಿತು. ಚೀನೀ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರು ಹಿಂದಿನ ದಿನವಷ್ಟೇ ಅಹಮದಾಬಾದಿನಿಂದ ಮೂರು ದಿನಗಳ ಭಾರತ ಪ್ರವಾಸ ಆರಂಭಿಸಿದ್ದರು.

2014: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ರಾತ್ರಿ ಚೀನೀ ಅಧ್ಯಕ್ಷ ಕ್ಷಿ ಜಿನ್​ಪಿಂಗ್ ಅವರ ಜೊತೆಗಿನ ಮಾತುಕತೆ ಕಾಲದಲ್ಲಿ ಚೀನೀ ಅತಿಕ್ರಮಣದ ವಿಷಯವನ್ನು ಪ್ರಸ್ತಾಪಿಸಿದರು. ಉಭಯ ನಾಯಕರು ಈದಿನ ಶೃಂಗಸಭೆ ನಡೆಸುವ ವೇಳೆಯಲ್ಲಿ ಭಾರತದ ಕಡೆಯಿಂದ ಈ ವಿಚಾರವನ್ನು ಇನ್ನಷ್ಟು ವಿವರವಾಗಿ ಪ್ರಸ್ತಾಪಿಸಲಿದ್ದಾರೆ ಎಂದು ಎಂಇಎ ವಕ್ತಾರರು ತಿಳಿಸಿದರು. ಶೃಂಗಸಭೆಗಳು ನಾಯಕರಿಗೆ ದ್ವಿಪಕ್ಷೀಯ ಬಾಂಧವ್ಯಕ್ಕೆ ಸಂಬಂಧಿಸಿದ ಎಲ್ಲ ಪ್ರಮುಖ ವಿಚಾರಗಳನ್ನೂ ಪ್ರಸ್ತಾಪಿಸಲು ಉತ್ತಮ ಸಂದರ್ಭಗಳು. ಪ್ರಧಾನಿಯವರು ಹಿಂದಿನ ರಾತ್ರಿಯ ಮಾತುಕತೆ ಸಂದರ್ಭವನ್ನು ಭಾರತ ಭೇಟಿಯಲ್ಲಿ ಇರುವ ಚೀನೀ ಅಧ್ಯಕ್ಷರ ಜೊತೆಗೆ ಪ್ರಸ್ತಾಪಿಸಲು ಬಳಸಿಕೊಂಡರು ಎಂದು ಎಂಇಎ ವಕ್ತಾರ ಸೈಯದ್ ಅಕ್ಬರುದ್ದೀನ್ ನುಡಿದರು. ನಿಯೋಗ ಮಟ್ಟದಲ್ಲಿ ನಡೆಯುವ ಮಾತುಕತೆಗಳಲ್ಲಿ ಈ ವಿಷಯವನ್ನು ಮತ್ತಷ್ಟು ವಿಷದವಾಗಿ ಚರ್ಚಿಸಲಾಗುವುದು. ಚೀನೀ ಅಧ್ಯಕ್ಷರು ಅಹಮದಾಬಾದಿಗೆ ಬಂದ ಬಳಿಕ ಅವರಿಗೆ ಖಾಸಗಿ ಭೋಜನಕೂಟ ಏರ್ಪಡಿಸಿದ್ದ ಪ್ರಧಾನಿ, ಈ ಸಂದರ್ಭವನ್ನು ಬಳಸಿಕೊಂಡು ಚೀನೀ ಅತಿಕ್ರಮಣಗಳ ಬಗೆಗಿನ ಭಾರತದ ಕಳವಳವನ್ನು ವ್ಯಕ್ತ ಪಡಿಸಿದರು. ಚೀನೀ ಪಡೆಗಳು ಚುಮರ್ ವಿಭಾಗದಲ್ಲಿ ಮತ್ತಷ್ಟು ಅತಿಕ್ರಮಣ ನಡೆಸಿರುವುದಾಗಿ ವರದಿಗಳು ತಿಳಿಸಿದವು.

2014: ನವದೆಹಲಿ: ಭಾರತದೊಂದಿಗೆ ಶಾಂತಿ ಮತ್ತು ಸಮೃದ್ಧಿಯನ್ನು ಇನ್ನೂ ಎತ್ತರಕ್ಕೆ ಒಯ್ಯುವ ಸಲುವಾಗಿ ಆಯಕಟ್ಟಿನ ಮತ್ತು ಸಹಕಾರಾತ್ಮಕ ಸಹಭಾಗಿತ್ವವನ್ನು ಮುಂದಕ್ಕೆ ಒಯ್ಯುವ ಆಶಯವನ್ನು ಚೀನೀ ಅಧ್ಯಕ್ಷ ಕ್ಷಿ ಜಿನ್​ಪಿಂಗ್ ವ್ಯಕ್ತ ಪಡಿಸಿದರು. ಇದೇ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಲಡಾಖ್ ಪ್ರದೇಶದಲ್ಲಿ ನಡೆಯುತ್ತಿರುವ ಚೀನೀ ಅತಿಕ್ರಮಣದ ವಿಚಾರವನ್ನು ಪ್ರಸ್ತಾಪಿಸಿದರು. ಮೂರು ದಿನಗಳ ಭಾರತ ಭೇಟಿಗಾಗಿ ಆಗಮಿಸಿದ ಕ್ಷಿ ಅವರಿಗೆ ನವದೆಹಲಿಯಲ್ಲಿ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಈದಿನ ಮುಂಜಾನೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಸಂಪ್ರದಾಯ ಮುರಿದು ಕ್ಷಿ ಅವರಿಗೆ ಹಿಂದಿನ ದಿನವೇ ತಮ್ಮ ತಾಯ್ನಾಡು ಗುಜರಾತಿನಲ್ಲಿ ಅದ್ಧೂರಿಯ ಸ್ವಾಗತ ನೀಡಿ, ಶೃಂಗಸಭೆ ಮಾತುಕತೆಗಳಿಗೆ ವೇದಿಕೆ ಸಜ್ಜುಗೊಳಿಸಿದ್ದರು. ಮೋದಿ ಮತ್ತು ಕ್ಷಿ ಅವರ ಎರಡನೇ ದಿನದ ಶೃಂಗಸಭೆ ಮಾತುಕತೆ ಹೈದರಾಬಾದ್ ಭವನದಲ್ಲಿ ಆರಂಭವಾಯಿತು. ಇದೇ ವೇಳೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಲಡಾಖ್ ಪ್ರದೇಶದ ಗಡಿಯಲ್ಲಿ ಭಾರತ ಮತ್ತು ಚೀನೀ ಸೇನೆ ಪರಸ್ಪರ ಮುಖಾಮುಖಿಯಾಗಿ ನಿಂತಿದ್ದವು.

2014: ಶ್ರೀನಗರ: ಶತಮಾನದ ಭೀಕರ ಪ್ರವಾಹದ ಪರಿಣಾಮವಾಗಿ 11 ದಿನಗಳಿಂದ ಮುಚ್ಚಿದ್ದ ಜಮ್ಮು ಮತ್ತು ಕಾಶ್ಮೀರದ ನಾಗರಿಕ ಸಚಿವಾಲಯ ಈದಿನ ಮತ್ತೆ ತೆರೆಯಿತು. ಆದರೆ ನಿಗದಿತ ಕಚೇರಿ ವೇಳೆಯಾದ 9.30 ಗಂಟೆಗೆ ಶೇಕಡಾ 10ರಷ್ಟು ನೌಕರರು ಮಾತ್ರ ಕೆಲಸಕ್ಕೆ ಹಾಜರಾದರು ಎಂದು ಸಚಿವಾಲಯದ ಭದ್ರತಾ ಉಸ್ತುವಾರಿ ಅಧಿಕಾರಿ ತಿಳಿಸಿದರು. ಸಚಿವಾಲಯದ ಮುಖ್ಯದ್ವಾರವೂ ಸೇರಿದಂತೆ ಸುತ್ತುಮುತ್ತಣ ಪ್ರದೇಶ ಇನ್ನೂ ಸುಮಾರು ಒಂದು ಅಡಿಯಷ್ಟು ನೀರಿನಲ್ಲಿ ಮುಳುಗಿದೆ. ಜಲಾವೃತಗೊಂಡಿರುವ ಕಾರಣ ಸಚಿವಾಲಯದ ನೆಲಮಹಡಿಯಲ್ಲಿ ಕಾರ್ಯ ನಿರ್ವಹಣೆ ಇನ್ನೂ ದುಸ್ತರವಾಗಿಯೇ ಇದೆ. 7 ಮಹಡಿಗಳ ಕಟ್ಟಡದಲ್ಲಿ ಮೇಲಿನ ಮಹಡಿಗಳಲ್ಲಿನ ಉಳಿದ ಕಚೇರಿಗಳು ಈದಿನ ತೆರೆದಿವೆ ಎಂದು ಅಧಿಕಾರಿ ಹೇಳಿದರು. ಸೆಪ್ಟೆಂಬರ್ 18ರಂದು ಶ್ರೀನಗರದ ನಾಗರಿಕ ಸಚಿವಾಲಯದ ಕಾರ್ಯನಿರ್ವಹಣೆಯೊಂದಿಗೆ ಸರ್ಕಾರ ಕಾರ್ಯಾರಂಭಿಸಬೇಕು ಎಂದು ಕಳೆದ ವಾರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ರಾಜ್ಯ ಸಚಿವ ಸಂಪುಟವು ನಿರ್ಧರಿಸಿತ್ತು. ಭೀಕರ ಪ್ರವಾಹಕ್ಕೆ 200ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.

2014: ನವದೆಹಲಿ: ಮುಖ್ಯ ಜಾಗೃತಾ ಆಯುಕ್ತ (ಚೀಫ್ ವಿಜಿಲೆನ್ಸ್ ಕಮೀಷನರ್ - ಸಿವಿಸಿ) ನೇಮಕಾತಿಗೆ ಪರಿಗಣನಾ ವಲಯವನ್ನು ವಿಸ್ತರಿಸಬೇಕು ಮತ್ತು ಇಡೀ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಬೇಕು ಎಂಬುದಾಗಿ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಅಕ್ಟೋಬರ್ 9ರ ಒಳಗೆ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ನಿರ್ದೇಶಿಸಿತು. ನ್ಯಾಯಾಲಯವು ಪ್ರಕರಣವನ್ನು ಆಲಿಸುವವರೆಗೆ ಸರ್ಕಾರವು ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸುವುದಿಲ್ಲ ಎಂಬುದಾಗಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ನ್ಯಾಯಾಲಯಕ್ಕೆ ಭರವಸೆ ನೀಡಿದ ಬಳಿಕ ಪೀಠವು ಈ ನಿರ್ದೇಶನ ನೀಡಿತು. ಪ್ರಕರಣದ ಅಂತಿಮ ವಿಚಾರಣೆಗೆ ಅಕ್ಟೋಬರ್ 14ರ ದಿನವನ್ನು ಪೀಠವು ನಿಗದಿ ಪಡಿಸಿತು.
2014: ಘಾಜಿಯಾಬಾದ್: ಮಾಜಿ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಅವರ ಬಂಗ್ಲೆಯ ನೀರು ಮತ್ತು ವಿದ್ಯುತ್ ಪೂರೈಕೆ ಕಡಿತಗೊಳಿಸಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಲೋಕ ದಳ (ಆರ್​ಎಲ್​ಡಿ) ಮತ್ತು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು)ನ 200ಕ್ಕೂ ಹೆಚ್ಚು ರೈತರು ಮತ್ತು ಪೋಲಿಸರು ತೀವ್ರ ಗಾಯಗೊಂಡ ಘಟನೆ ಇಲ್ಲಿನ ಮುರಾದ್ ನಗರದಲ್ಲಿ ಘಟಿಸಿತು. ಇತ್ತೀಚೆಗಷ್ಟೆ ತುಘಲಕ್ ಮಾರ್ಗದಲ್ಲಿರುವ ಅಜಿತ್ ಸಿಂಗ್ ಬಂಗ್ಲೆಯನ್ನು ತೆರವುಗೊಳಿಸುವ ಹಿನ್ನೆಲೆಯಲ್ಲಿ ಸರ್ಕಾರವೇ ನೀರು ಮತ್ತು ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿತ್ತು. ಇದನ್ನು ವಿರೋಧಿಸಿ ಈ ಎರಡೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ 58ರಲ್ಲಿ ವಾಹನ ಸಾಗಟಕ್ಕೆ ಅಡ್ಡಿ ಪಡಿಸಿದರು. ಅಷ್ಟೇ ಅಲ್ಲ ಸೋನಿಯಾ ವಿಹಾರ ನೀರು ಸಂಸ್ಕರಣಾ ಘಟಕಕ್ಕೂ ದಾಳಿ ನಡೆಸಿದರು. ಈ ವೇಳೆ ಪೋಲಿಸರು ಮತ್ತು ಪ್ರತಿಭಟನಾಕಾರರ ನಡುವೆ ಚಕಮಕಿ ನಡೆದು ಬಳಿಕ ಹಿಂಸಾ ಸ್ವರೂಪ ಪಡೆದುಕೊಂಡಿತು. ಘಟನೆಯಲ್ಲಿ ವಿಜಯ ನಗರ ಪೋಲಿಸ್ ಠಾಣೆಯ ಅಧಿಕಾರಿ ಅರುಣ್ ಕುಮಾರ್ ಸಿಂಗ್ ಗಂಭಿರವಾಗಿ ಗಾಯಗೊಂಡರು. ಪ್ರತಿಭಟನಾಕಾರರನು ಚದುರಿಸಲು ನಡೆಸಿದ ಪೋಲಿಸರ ರಬ್ಬರ್ ಗುಂಡಿನ ದಾಳಿಯಲ್ಲಿ ಆರ್​ರಲ್​ಡಿ ಮುಖಂಡ ವೀರ್ ಪಾಲ್ ಸಿಂಗ್ ಕೂಡ ತೀವ್ರ ಗಾಯಗೊಂಡರು.

2007: ರೈತರಿಗೆ ಈಗ ನೀಡಲಾಗುತ್ತಿರುವ ವಿದ್ಯುತ್ ಸಹಾಯಧನದ ಬದಲಾಗಿ, ನಗದು ಪರಿಹಾರ ನೀಡುವ ಮೂಲಕ ಅಂತರ್ಜಲ ಮಟ್ಟ ಕುಸಿತ ನಿಯಂತ್ರಿಸಲು ಯೋಜನಾ ಆಯೋಗ ಸಲಹೆ ಮಾಡಿತು. `ಅಂತರ್ಜಲ ನಿರ್ವಹಣೆ ಮತ್ತು ಮಾಲೀಕತ್ವ' ಕುರಿತು ತಜ್ಞರ ತಂಡ ತಯಾರಿಸಿದ ವರದಿಯನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿದ ಆಯೋಗದ ಸದಸ್ಯ ಕಿರೀಟ್ ಪಾರಿಖ್, 2001-02ರಲ್ಲಿ ಸುಮಾರು ರೂ.30,000 ಕೋಟಿಯಷ್ಟಿದ್ದ ವಿದ್ಯುತ್ ಸಹಾಯಧನ ಪ್ರಮಾಣವನ್ನು ಹೆಚ್ಚಿಸದೇ ಇದನ್ನು ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು. ರೈತರಿಗೆ ವಿದ್ಯುತ್ ಸಹಾಯಧನ ನೀಡುವುದಕ್ಕಿಂತ ಯುನಿಟ್ಟಿಗೆ ಇಷ್ಟು ಎಂದು ನಿಶ್ಚಿತ ಮೊತ್ತವನ್ನು ಹಾಗೂ ಒಟ್ಟು ವಾರ್ಷಿಕ ಬಳಕೆ ಪ್ರಮಾಣವನ್ನು ನಿಗದಿಪಡಿಸಬೇಕು. ವರ್ಷಾಂತ್ಯದಲ್ಲಿ ಬಳಸಲಾದ ವಿದ್ಯುತ್ ಪ್ರಮಾಣವನ್ನು ಇದರಲ್ಲಿ ಕಡಿತಗೊಳಿಸಿ, ಬಾಕಿ ಹಣವನ್ನು ರೈತರಿಗೆ ನಗದಾಗಿ ನೀಡಬೇಕು. ಆಗ ಹೆಚ್ಚು ನಗದು ಪರಿಹಾರ ಪಡೆಯುವ ಉದ್ದೇಶದಿಂದ ರೈತರು ವಿದ್ಯುತ್ ಬಳಕೆ ಕಡಿಮೆ ಮಾಡುತ್ತಾರೆ ಎಂದು ಪಾರೀಖ್ ಹೇಳಿದರು. ಇದರಿಂದ ವಿದ್ಯುತ್ ಸಬ್ಸಿಡಿ ಮೇಲಿನ ಒತ್ತಡ ತಗ್ಗಿ ಅವು ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಇನ್ನೊಂದೆಡೆ ರೈತರಲ್ಲಿ ಜಲಪ್ರಜ್ಞೆ ಬೆಳೆದು ನೀರಿನ ಸದುಪಯೋಗವಾಗುತ್ತದೆ ಎಂದು ಅವರು ವಿವರಿಸಿದರು. ರಾಜ್ಯ ಹಾಗೂ ಕೇಂದ್ರ ವಿದ್ಯುತ್ ಮಂಡಳಿಗಳು ವಿದ್ಯುತ್ ಬಳಕೆ ನಿಯಂತ್ರಿಸುವುದಕ್ಕೆ ಒತ್ತು ನೀಡುವುದಕ್ಕಿಂತ ಅಂತರ್ಜಲ ನಿರ್ವಹಣೆ, ಮಳಕೊಯ್ಲು ವಿಷಯಗಳಿಗೆ ಆದ್ಯತೆ ನೀಡಬೇಕು ಎಂದು ಪಾರಿಖ್ ಸಲಹೆ ಮಾಡಿದರು.

2007: ಸರ್ಕಾರಿ ಬಂಗಲೆ, ಕಟ್ಟಡಗಳಲ್ಲಿ ಅನಧಿಕೃತವಾಗಿ ವಾಸಿಸುವ ರಾಜಕಾರಣಿಗಳು, ಅಧಿಕಾರಿಗಳ ಬೆನ್ನು ಹತ್ತುವ ಧೈರ್ಯ ಸರ್ಕಾರಕ್ಕೆ ಇಲ್ಲ ಎಂದು ಸುಪ್ರೀಂಕೋರ್ಟ್ ಛೀಮಾರಿ ಹಾಕಿತು. ಅಧಿಕಾರ ಮುಗಿದ ಮೇಲೂ ಸರ್ಕಾರಿ ಬಂಗ್ಲೆಗಳಲ್ಲಿ ಗೂಟ ಹೊಡೆದುಕೊಂಡು ಇರುವ ರಾಜಕಾರಣಿಗಳು, ಹಿರಿಯ ಅಧಿಕಾರಿಗಳನ್ನು ಒಕ್ಕಲೆಬ್ಬಿಸಲು, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅಥವಾ ಅವರಿಂದ ಭಾರಿ ಮೊತ್ತದ ಬಾಕಿ ಹಣ ವಸೂಲು ಮಾಡಲು ಸರ್ಕಾರಕ್ಕೆ ಧೈರ್ಯವಿಲ್ಲ ಎಂದು ನ್ಯಾಯಮೂರ್ತಿ ಬಿ. ಎನ್. ಅಗರವಾಲ್ ಹಾಗೂ ಬಿ.ಕೆ. ಜೈನ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿತು.

2007: ರಾಮನ ಅಸ್ತಿತ್ವ ಹಾಗೂ ರಾಮಾಯಣದ ಕುರಿತು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ ವಿವಾದಾತ್ಮಕ ಪ್ರಮಾಣ ಪತ್ರವನ್ನು ಹಿಂದಕ್ಕೆ ಪಡೆದ ಬೆನ್ನಲ್ಲೇ ಕೇಂದ್ರ ಸರ್ಕಾರವು ಪುರಾತತ್ವ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿತು. ಈ ವಿವಾದದ ಹೊಣೆ ಹೊತ್ತು ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ರಾಜೀನಾಮೆ ನೀಡಬೇಕು ಎಂದು ಬಹಿರಂಗ ಹೇಳಿಕೆ ನೀಡಿದ್ದ ವಾಣಿಜ್ಯ ಖಾತೆ ರಾಜ್ಯ ಸಚಿವ ಜೈರಾಮ್ ರಮೇಶ್ ತಮ್ಮ ಹೇಳಿಕೆಗಾಗಿ ಅಂಬಿಕಾ ಅವರ ಕ್ಷಮೆ ಯಾಚಿಸಿದರು. ಸೇತುಸಮುದ್ರಂ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸುಪ್ರೀಂಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಯೋಜನಾ ಪ್ರದೇಶದಲ್ಲಿ ಹೂಳೆತ್ತಲು ಹಾಗೂ ಕಾರ್ಮಿಕರನ್ನು ಸಾಗಿಸಲು ನಿಯೋಜಿಸಲಾಗಿದ್ದ ಮೂರು ಹಡಗುಗಳನ್ನು ನಾಗಪಟ್ಟಣಂಗೆ ಕಳುಹಿಸಲಾಯಿತು.

 2007: ಇನ್ನು ಮುಂದೆ ಕಡಿಮೆ ನೀರು ಬಳಸಿ ಭತ್ತ ಬೆಳೆಯುವುದು ಸಾಧ್ಯವಾಗಲಿದೆ. ಬೆಂಗಳೂರಿನ ವಿಜ್ಞಾನಿಯೂ ಸೇರಿದಂತೆ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ವಂಶವಾಹಿ ತಂತ್ರಜ್ಞಾನ ಬಳಸಿ ಭತ್ತದ ಹೊಸ ತಳಿ ಕಂಡು ಹಿಡಿದಿರುವುದನ್ನು ನವದೆಹಲಿಯಲ್ಲಿ ಬಹಿರಂಗ ಪಡಿಸಿತು. ಎಚ್. ಆರ್. ಡಿ.ವೈ. (ಹಾರ್ಡಿ) ಹೆಸರಿನ ವಂಶವಾಹಿಯನ್ನು `ಅರಬಿಡೋಪ್ಸಿಸ್' ಎಂಬ ಹೆಸರಿನ ಮಾದರಿ ತಳಿಯಿಂದ ಹೊರತೆಗೆಯಲಾಗಿದ್ದು, ಇದನ್ನು ಬಳಸಿ ರೂಪಿಸಲಾಗಿರುವ ಅಂತರ್ ವಂಶವಾಹಿ ಭತ್ತ ಕಡಿಮೆ ನೀರಿನಲ್ಲಿಯೂ ಚೆನ್ನಾಗಿ ಬೆಳೆಯುವುದು ಸಾಬೀತಾಗಿದೆ ಎಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ಆರತಿ ಕರಬ ತಿಳಿಸಿದರು. `ಭತ್ತದ ಇತರ ಪಾರಂಪರಿಕ ತಳಿಗಳಿಗೆ ಹೋಲಿಸಿದರೆ, ಈ ಹೊಸ ತಳಿ ಕಡಿಮೆ ನೀರಿನಲ್ಲಿಯೂ ಅತಿ ಹೆಚ್ಚು ಪ್ರಮಾಣ ಹಾಗೂ ತೂಕದ ಬೇರು ಹಾಗೂ ಕಾಂಡವನ್ನು ಹೊಂದಬಲ್ಲುದು. ಅಲ್ಲದೆ ಅದರ ದ್ಯುತಿಸಂಶ್ಲೇಷಣೆ ಸಾಮರ್ಥ್ಯವೂ ಹೆಚ್ಚು' ಎಂದು ಅವರು ಹೇಳಿದರು. `ಈಗ ಚಾಲ್ತಿಯಲ್ಲಿರುವ ಭತ್ತದ ಇತರ ತಳಿಗಳಿಂತ ಹಾರ್ಡಿ ಭತ್ತದ ತಳಿ ನೀರಿನ ಕೊರತೆ ಇರುವ ಪ್ರದೇಶದಲ್ಲಿಯೂ ಚೆನ್ನಾಗಿ ಬೆಳವಣಿಗೆ ಹೊಂದಬಲ್ಲುದು. ಇಂತಹ ಪ್ರದೇಶಗಳಲ್ಲಿ ಬೆಳೆಯಲಾದ ಭತ್ತದ ಇತರ ತಳಿಗಳಿಗಿಂತ ಹಾರ್ಡಿ ತಳಿ ಶೇ.50ರಷ್ಟು ಹೆಚ್ಚು ಜೈವಿಕ ತೂಕ ಹೊಂದಿತ್ತು. ಬರಪೀಡಿತ ಪ್ರದೇಶದ ರೈತರಿಗೆ ಈ ತಳಿ ಉಪಯುಕ್ತವಾಗಿದ್ದು, ನೀರಾವರಿ ಪ್ರದೇಶಕ್ಕೂ ಸೂಕ್ತವಾಗಿದೆ' ಎಂಬುದು ಸಂಶೋಧನಾ ತಂಡದ ಸದಸ್ಯರಲ್ಲಿ ಒಬ್ಬರಾದ ಶೀತಲ ದೀಕ್ಷಿತ ಅಭಿಪ್ರಾಯ. ಡಚ್ ಕೃಷಿ ಸಚಿವಾಲಯದ ಧನ ಸಹಾಯ ಪಡೆದಿರುವ ಸಂಶೋಧನಾ ತಂಡದಲ್ಲಿ ಭಾರತವಲ್ಲದೇ ಹಾಲೆಂಡ್, ಅಮೆರಿಕ, ಇಟಲಿ, ಇಂಡೋನೇಷ್ಯ, ಮೆಕ್ಸಿಕೋ ದೇಶದ ಪ್ರತಿನಿಧಿಗಳೂ ಇದ್ದರು. ಹೊಸ ತಳಿಯ ಇಳುವರಿ ಪ್ರಮಾಣದ ಅಧ್ಯಯನ ನಡೆದಿದ್ದು, ಅಲ್ಲಿ ಕೂಡ ಉತ್ತಮ ಇಳುವರಿ ಬಂದರೆ, ತಳಿಯನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲಾಗುವುದು. ಗೋಧಿ ಅಥವಾ ಮೆಕ್ಕೆಜೋಳಕ್ಕೆ ಹೋಲಿಸಿದರೆ ಭತ್ತ ಅತಿ ಹೆಚ್ಚು ನೀರು ಬೇಡುವ ಸಸ್ಯ. ಇತರ ಪಾರಂಪರಿಕ ಬೆಳೆಗಳಿಗಿಂತ ಮೂರು ಪಟ್ಟು ಹೆಚ್ಚು ನೀರನ್ನು ಇದು ಬಳಸುತ್ತದೆ. ಜಗತ್ತಿನೆಲ್ಲೆಡೆ ಕೃಷಿಯಲ್ಲಿ ಬಳಸಲಾಗುವ ಶೇ.30ರಷ್ಟು ನೀರನ್ನು ಭತ್ತದ ಬೆಳೆಯೊಂದೇ ಬಳಸುತ್ತಿರುವುದರಿಂದ  ಈ ಹೊಸ ತಳಿ ಭರವಸೆ ಮೂಡಿಸಿದೆ.

2007: ಕೆನಡಾದಲ್ಲಿ ಪತ್ತೆ ಮಾಡಲಾಗಿದ್ದ 5650 ಲಕ್ಷ ವರ್ಷ ಹಳೆಯ ಪಳೆಯುಳಿಕೆಗೆ ಭಾರತದ ನಿವೃತ್ತ ಭೂಗರ್ಭ ಶಾಸ್ತ್ರಜ್ಞರೊಬ್ಬರ ಹೆಸರು ಇಡಲಾಗಿದ್ದು, ಇದು ಭಾರತೀಯನೊಬ್ಬನಿಗೆ ದೊರೆತ ಅಪರೂಪದ ಗೌರವ. 60ರ ದಶಕದ ಕೊನೆಯಲ್ಲಿ ಭೂಗರ್ಭ ಶಾಸ್ತ್ರಜ್ಞ ಡಾ. ಎಸ್.ಬಿ.ಮಿಶ್ರ ಅವರು ಅನೇಕ ಪುರಾತನ ಪಳೆಯುಳಿಕೆಗಳನ್ನು ಶೋಧಿಸಿದ್ದರು. ಈ ಪೈಕಿ ಒಂದು ಪಳೆಯುಳಿಕೆಗೆ ಮಿಶ್ರ ಅವರ ಹೆಸರನ್ನು ಇಡಲು ಕೆನಡಾದ ಪೋರ್ಚುಗಲ್ ಕೊವ್ ಸೌತ್ ಸಿಟಿಯಲ್ಲಿ ನಡೆದ  ಸಭೆ ತೀರ್ಮಾನಿಸಿತು. ಇನ್ನುಮುಂದೆ  ಈ ಪಳೆಯುಳಿಕೆಯನ್ನು ` ಫ್ರಾಕ್ಟೊಫ್ಯುಸಸ್ ಮಿಸ್ರೈ' ಎಂದು ಕರೆಯಲಾಗುತ್ತದೆ. ಮಿಶ್ರ ಅವರು `ಮಿಸ್ಟೇಕನ್ ಪಾಯಿಂಟ್' ನಲ್ಲಿ ಈ ಪಳೆಯುಳಿಕೆಯನ್ನು ಪತ್ತೆ ಹಚ್ಚಿ ಅದರ ಕಾಲವನ್ನು ಅಂದಾಜು ಮಾಡಿದ್ದರು. ಹೀಗಾಗಿ ಈ ಸ್ಥಳವನ್ನು ಕೆನಡಾ ಸರ್ಕಾರ ಸಂರಕ್ಷಿತ ತಾಣವೆಂದು ಘೋಷಿಸಿದೆ.

2007: ರಷ್ಯದಲ್ಲೇ ಅತಿ ಎತ್ತರ ಎನ್ನಬಹುದಾದ ಗಗನ ಚುಂಬಿ ಕಟ್ಟಡಕ್ಕೆ ಮಾಸ್ಕೊದ (ಇತಾರ್ ತಾಸ್) ಮೇಯರ್ ಯುರಿ ಲುಝಕೊವ್ ಶಿಲಾನ್ಯಾಸ ನೆರವೇರಿಸಿದರು. `ರಷ್ಯಾದ ಗಗನಚುಂಬಿ ಕಟ್ಟಡ ಅಥವಾ `ದಿ ರಷ್ಯಾ ಟವರ್' ಎಂದು  ಕರೆಯಲ್ಪಡುವ ಈ ಕಟ್ಟಡದ ವಿನ್ಯಾಸಕಾರ ಬ್ರಿಟಿಷ್ ವಾಸ್ತುಶಿಲ್ಪಿಕಾರ ನಾರ್ಮನ್ ಫಾಸ್ಟೆರ್. ಪಿರಮಿಡ್ ಶೈಲಿಯಲ್ಲಿ ನಿರ್ಮಿಸಲಾಗುವ ಈ ಕಟ್ಟಡದ ಎತ್ತರ 612 ಮೀಟರುಗಳು.

2007: ವಿಶ್ವದ ಹಿರಿಯಜ್ಜ ಜಪಾನಿನ ಟೋಕಿಯೋದ ಟೊಮೊಜಿ ತನಾಬೆ ಅವರಿಗೆ ಈದಿನ 112 ನೇ ಜನ್ಮದಿನದ ಸಂಭ್ರಮ. ಜಪಾನಿನ ಸಾಂಪ್ರದಾಯಿಕ ಉಪಾಹಾರ ಸೇವನೆ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಕೊಂಡ ಅವರು, 'ನಾನು ಅಜರಾಮರನಾಗಲು ಬಯಸುವೆ' ಎಂದು ಹೇಳಿದರು. ಜಪಾನಿನ ಮಿಯಾಝಕಿಯಲ್ಲಿರುವ ತಮ್ಮ ಮಗನ ಜತೆ ವಾಸವಾಗಿರುವ ಈ  ಹಿರಿಯಜ್ಜ, ದಿನಚರಿ ಬರೆಯುತ್ತಾರೆ. ದಿನಪತ್ರಿಕೆ ಓದುವ ಹವ್ಯಾಸವಿದೆ. `ನನಗೆ ಸಾಯಲು ಇಷ್ಟವಿಲ್ಲ. ದೀರ್ಘಾಯುಷಿಯಾಗಲು ಬಯಸುತ್ತೇನೆ. ಮದ್ಯ ಸೇವನೆಯಿಂದ ದೂರ ಇರುವುದೇ ನನ್ನ ಸುದೀರ್ಘ ಬದುಕಿನ ಗುಟ್ಟು' ಎಂದು ತನಾಬೆ ನೀಡಿದ ಹೇಳಿಕೆಯನ್ನು ಕ್ಯುಡೋ ಸುದ್ದಿ ಸಂಸ್ಥೆ ವರದಿ ಮಾಡಿತು.

2007: 1994ಕ್ಕಿಂತ ಮೊದಲು ವಿವಾಹವಾದ ಮಹಿಳೆ ಕೂಡ ಪಿತ್ರಾರ್ಜಿತ ಆಸ್ತಿಯಲ್ಲಿ ಪುರುಷನಷ್ಟೇ ಸಮಪಾಲುದಾರಳು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. ಈ ಅವಧಿ ನಂತರ ವಿವಾಹವಾದ ಮಹಿಳೆ ಮಾತ್ರ ಪಿತ್ರಾರ್ಜಿತ ಆಸ್ತಿಯಲ್ಲಿ (ತಂದೆ ಅಥವಾ ತಾಯಿಗೆ ಅವರ ಪೂರ್ವೀಕರಿಂದ ಬಂದ ಪಾಲು) ಸಮಪಾಲು ಕೇಳಲು ಅರ್ಹ ಎಂಬ `ಹಿಂದು ಉತ್ತರಾಧಿಕಾರಿ ಕಾಯ್ದೆ-1956'ಕ್ಕೆ ರಾಜ್ಯ ಸರ್ಕಾರ ಮಾಡಿರುವ ತಿದ್ದುಪಡಿಯನ್ನು ಕೋರ್ಟ್ ಅನೂರ್ಜಿತಗೊಳಿಸಿತು. ಅಂತೆಯೇ, ಇಬ್ಬರೂ ಸಮಾನ ಹಕ್ಕುದಾರರು ಎಂದು ಕೇಂದ್ರ ಸರ್ಕಾರವು 2005 ರಲ್ಲಿ ಮಾಡಿದ ತಿದ್ದುಪಡಿಯನ್ನು ನ್ಯಾಯಮೂರ್ತಿ ವಿ.ಜಗನ್ನಾಥನ್ ಎತ್ತಿ ಹಿಡಿದರು. ಕಾಯ್ದೆಯ 6(ಎ)(ಬಿ) ಪ್ರಕಾರ ವಿವಾಹಿತ ಮಹಿಳೆ ಹಾಗೂ ಪುರುಷರು ಸಮಾನರು ಎಂದು ತಿಳಿಸಲಾಗಿದ್ದರೂ, 1990 ರಲ್ಲಿ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿತು. 1994ರ ಜುಲೈ 30ಕ್ಕೆ ಅನ್ವಯ ಆಗುವಂತೆ ಮಾಡಲಾದ ಈ ತಿದ್ದುಪಡಿಯಲ್ಲಿ 6(ಎ)(ಸಿ) ಕಲಮು ಸೇರ್ಪಡೆಯಾಯಿತು. ಈ ಕಲಮಿನ ಪ್ರಕಾರ ಮಹಿಳೆಯ ಆಸ್ತಿ ಹಕ್ಕಿಗೆ 1994ರ ಜುಲೈ 30ರ ದಿನಾಂಕವನ್ನು `ಕಟ್ ಆಫ್' ದಿನಾಂಕವನ್ನಾಗಿ ನಿಗದಿ ಮಾಡಲಾಯಿತು. ಈ ಅವಧಿಯ ನಂತರದಲ್ಲಿ ವಿವಾಹವಾದ ಮಹಿಳೆ ಮಾತ್ರ ಪಿತ್ರಾರ್ಜಿತ ಆಸ್ತಿಯಲ್ಲಿ ಭಾಗಿದಾರಳೇ ವಿನಾ, ಮೊದಲು ವಿವಾಹವಾದ ಮಹಿಳೆಗೆ ಅನರ್ಹಳು ಎಂದು ತಿಳಿಸಲಾಯಿತು. ಆದರೆ ಕೇಂದ್ರ ಸರ್ಕಾರ 2005 ರಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಿ, ಆಸ್ತಿಯಲ್ಲಿ ಇಬ್ಬರೂ ಸಮಾನರು ಎಂದು ಘೋಷಿಸಿತು. ಕೇಂದ್ರ ಸರ್ಕಾರದ ತಿದ್ದುಪಡಿ ರಾಜ್ಯ ಸರ್ಕಾರದ ತಿದ್ದುಪಡಿಗಿಂತ ನಂತರದ ಅವಧಿಯಲ್ಲಿ ಆಗಿರುವ ಕಾರಣ, ಅದೇ ಊರ್ಜಿತಗೊಳ್ಳುತ್ತದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟರು. ತಿದ್ದುಪಡಿಯನ್ನು ಪ್ರಶ್ನಿಸಿ ವಿಜಾಪುರ ಜಿಲ್ಲೆ ಸಿಂಧಗಿಯ ಸುಗಲಾಬಾಯಿ ಮಾಲಗಾರ ಹಾಗೂ ಕೋಲಾರ ಜಿಲ್ಲೆಯ ಶಿಡ್ಲಘಟ್ಟದ ವೆಂಕಟರಾಯಪ್ಪ ಅವರು ಸಲ್ಲಿಸಿದ ಅರ್ಜಿಯನ್ನು ಇತ್ಯರ್ಥ ಮಾಡಿದ ಕೋರ್ಟ್, ಕೇಂದ್ರ ಸರ್ಕಾರದ ತಿದ್ದುಪಡಿ ಪ್ರಕಾರ, ಇಬ್ಬರಿಗೂ ಸಮಾನ ಅವಕಾಶ ಇದೆ ಎಂದು  ಅವರು  ಆದೇಶಿಸಿದರು.

2007: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ-2007ರ ಅಧ್ಯಕ್ಷತೆಯನ್ನು ಹಿರಿಯ ವಿದ್ವಾಂಸರೂ, ಕನ್ನಡ ನಿಘಂಟು ತಜ್ಞರೂ ಆದ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ವಹಿಸುವರು ಎಂದು ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಪ್ರಕಟಿಸಿದರು. ಸಮೇಳನವನ್ನು ಹಿರಿಯ ಸಾಹಿತಿ ಕಾದಂಬರಿಕಾರ ವ್ಯಾಸರಾಯ ಬಲ್ಲಾಳ ಉದ್ಘಾಟಿಸುವರು.

2007: ಸಂವೇದಿ ಸೂಚ್ಯಂಕವು ಇದೇ ಮೊದಲ ಬಾರಿಗೆ 16 ಸಾವಿರ ಅಂಶ ದಾಟುವ ಮೂಲಕ ಮುಂಬೈ ಷೇರುಪೇಟೆಯಲ್ಲಿ ಹೊಸ ಮೈಲಿಗಲ್ಲೊಂದು ಸ್ಥಾಪನೆಗೊಂಡಿತು.

2007: ಯುವ ಹಾಗೂ ಬಿರುಸಿನ ಹೊಡೆತಗಳ ಆಟಗಾರ ಮಹೇಂದ್ರ ಸಿಂಗ್ ದೋನಿ ಅವರನ್ನು ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ರಾಷ್ಟ್ರೀಯ ಆಯ್ಕೆ ಸಮಿತಿ ಸಭೆಯು ಸ್ವದೇಶದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಹಾಗೂ ಪಾಕಿಸ್ಥಾನ ವಿರುದ್ಧದ ಏಕದಿನ ಸರಣಿಗೆ ಈ ಆಯ್ಕೆ ಮಾಡಿತು. ರಾಹುಲ್ ದ್ರಾವಿಡ್ ಅವರು ನಾಯಕತ್ವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದರಿಂದ ಈ ಹುದ್ದೆ ತೆರವಾಗಿತ್ತು.

2007: ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ಸರ್ಕಾರದ ಹಿರಿಯ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಣೆಯಿಂದ ತನಿಖೆ ಆರಂಭಿಸುವ ಅಧಿಕಾರವನ್ನು ಸುಗ್ರೀವಾಜ್ಞೆ ಮೂಲಕ ಲೋಕಾಯುಕ್ತರಿಗೆ ನೀಡಲು ಕರ್ನಾಟಕ ರಾಜ್ಯ ಸಚಿವ ಸಂಪುಟ ನಿರ್ಧರಿಸಿತು. ಆದರೆ ಸ್ವಯಂಪ್ರೇರಣೆಯಿಂದ ವಿಚಾರಣೆ ನಡೆಸುವ ಅಧಿಕಾರದಿಂದ ಶಾಸಕರು, ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಹೊರಗಿರಿಸಲಾಯಿತು. ಈ ವರ್ಗವನ್ನು ಸಹ ಸ್ವಯಂಪ್ರೇರಣೆಯಿಂದ ತನಿಖೆ ನಡೆಸುವ ವ್ಯಾಪ್ತಿಗೆ ತರಬೇಕು ಎನ್ನುವ ಆಗ್ರಹವನ್ನು ಲೋಕಾಯುಕ್ತರು ಮಾಡಿದ್ದರು.

2006: 1993ರ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿಂತೆ ತಲೆ ತಪ್ಪಿಸಿಕೊಂಡಿರುವ ಮುಖ್ಯ ಆರೋಪಿ ಟೈಗರ್ ಮೆಮನ್ ನ ಮಾಜಿ ಅಕೌಂಟೆಂಟ್ ಅಸ್ಘರ್ ಯೂಸುಫ್ ಮುಕದಮ್ ಮತ್ತು ಆತನ ಸಹಚರ ಶಾನವಾಜ್ ಅಬ್ದುಲ್ ಖಾದರ್ ಖುರೇಷಿ ಅವರನ್ನು 1993ರಲ್ಲಿ ಪ್ಲಾಜಾ ಥಿಯೇಟರಿನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ತಪ್ಪಿತಸ್ಥರು ಎಂದು ವಿಶೇಷ ಟಾಡಾ ನ್ಯಾಯಾಧೀಶ ಪಿ.ಡಿ. ಕೋಡೆ ಅವರು ತೀರ್ಪು ನೀಡಿದರು. ಮುಕದಮ್ ಸಹಚರ ಖುರೇಷಿ ಶಸ್ತ್ರಾಸ್ತ್ರ ತರಬೇತಿ ಪಡೆಯಲು ಪಾಕಿಸ್ತಾನಕ್ಕೆ ತೆರಳುವ ಅಪರಾಧವನ್ನೂ ಎಸಗಿದ್ದಾನೆ ಎಂದು ನ್ಯಾಯಾಲಯ ಹೇಳಿತು. ನ್ಯಾಯಾಂಗ ತೀರ್ಪಿನಲ್ಲಿ ನೆರೆ ರಾಷ್ಟ್ರವೊಂದರರಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದ ವಿಚಾರ ಪ್ರಸ್ತಾಪಗೊಂಡದ್ದೂ ಇದೇ ಮೊತ್ತ ಮೊದಲನೆಯ ಸಲ.

2006: ವಿಶ್ವದ ಮೊದಲ ಮಹಿಳಾ ಪ್ರವಾಸಿ ಹಾಗೂ ಪ್ರಥಮ ಇರಾನ್ ಸಂಜಾತೆ ಅಮೆರಿಕದ ಅನೌಷೇಹ ಅನ್ಸಾರಿ ಅವರನ್ನು ಹೊತ್ತ ರಷ್ಯದ ಸೋಯುಜ್ ಅಂತರಿಕ್ಷ ನೌಕೆಯು ಕಜಕಸ್ಥಾನದ ಬೈಕನೂರ್ ಉಡಾವಣಾ ಕೇಂದ್ರದಿಂದ ಬೆಳಕ್ಕೆ 9.39ಕ್ಕೆ ಬಾಹ್ಯಾಕಾಶದಲ್ಲಿನ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಉಡಾವಣೆಗೊಂಡಿತು. ರಷ್ಯದ ಮಿಖಾಯಿಲ್ ಟ್ಯುರಿನ್ ಮತ್ತು ಅಮೆರಿಕದ ಮೈಕೆಲ್ ಲೋಪೆಜ್ ಅವರು ಗಗನ ನೌಕೆಯೊಳಗಿರುವ ಇತರ ಇಬ್ಬರು ಗಗನಯಾತ್ರಿಗಳು. 10 ದಿನಗಳ ಬಳಿಕ ಅನ್ಸಾರಿ ಭೂಮಿಗೆ ವಾಪಸಾಗುವರು.

2006: ಜಾರ್ಖಂಡ್ ರಾಜ್ಯದ ನಾಲ್ಕನೇ ಮುಖ್ಯಮಂತ್ರಿಯಾಗಿ ಪಕ್ಷೇತರ ಶಾಸಕ ಮಧು ಕೋಡಾ ರಾಂಚಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.

2001: ದಕ್ಷಿಣ ಆಫ್ರಿಕದ ಕ್ರಿಕೆಟಿಗ ಜಾಕಿಸ್ ಕಾಲ್ಲೀಸ್ ಅವರು ಬುಲಾವೆಯೋದ ಕ್ರಿಕೆಟ್ ಟೆಸ್ಟಿನಲ್ಲಿ ಔಟಾಗದೇ ದೀರ್ಘಕಾಲ ಬ್ಯಾಟಿಂಗ್ ಮಾಡುವ ಮೂಲಕ ಜಾಗತಿಕ ದಾಖಲೆ ನಿರ್ಮಿಸಿದರು. ಎರಡು ಟೆಸ್ಟ್ ಪಂದ್ಯ ಸರಣಿಯಲ್ಲಿ ಅವರು 388 ರನ್ನುಗಳನ್ನು ಗಳಿಸಿದರು. ಔಟಾಗದೇ 1028 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ ಅವರು ಇಂಗ್ಲೆಂಡಿನ ನಾಸ್ಸೇರ್ ಹುಸೇನ್ ಅವರು 1999-2000ದಲ್ಲಿ ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯದಲ್ಲಿ ಮಾಡಿದ ದಾಖಲೆಯನ್ನು (1021 ನಿಮಿಷ) ಮುರಿದರು.

1990: ಭಾರತದ ಮಾಜಿ ಉಪ ರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿ ಎಂ. ಹಿದಾಯತುಲ್ಲಾ (89) ನಿಧನರಾದರು.

1980: ಕ್ಯೂಬಾದ ಗಗನಯಾನಿ ಅರ್ನಾಲ್ಡ್ ಟಮಾಯೋ-ಮೆಂಡೆಝ್ ಅವರು ಬಾಹ್ಯಾಕಾಶಕ್ಕೆ ಹಾರಿದ ಪ್ರಥಮ ಲ್ಯಾಟಿನ್ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಂಟರ್ ಕಾಸ್ಮೋಸ್ ಕಾರ್ಯಕ್ರಮದ ಅಡಿಯಲ್ಲಿ ಬಾಹ್ಯಾಕಾಶಕ್ಕೆ ಹಾರಿಸಲಾದ `ಸೋಯುಜ್-38ರಲ್ಲಿ ಇದ್ದ ಇಬ್ಬರು ಗಗನ ಯಾನಿಗಳ ಪೈಕಿ ಅರ್ನಾಲ್ಡ್ ಒಬ್ಬರಾಗಿದ್ದರು.

1970: ರಾಕ್ ಸಂಗೀತಗಾರ ಜಿಮಿ ಹೆಂಡ್ರಿಕ್ಸ್ ಲಂಡನ್ನಿನಲ್ಲಿ ತಮ್ಮ 27ನೇ ವಯಸ್ಸಿನಲ್ಲಿಮೃತರಾದರು. ಮನಸ್ಸನ್ನು ಶಾಂತಗೊಳಿಸಿ ನಿದ್ದೆ ಬರುವಂತೆ ಮಾಡುವ ಮಾದಕ ದ್ರವ್ಯದ (ಬಾರ್ಬಿಟ್ಯುರೇಟ್ಸ್) ಅತಿ ಸೇವನೆ ಪರಿಣಾಮವಾಗಿ ಅವರು ಅಸುನೀಗಿದರು.

1961: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಡಾಗ್ ಹ್ಯಾಮರ್ ಶೀಲ್ಡ್ ಅವರು ಲಿಯೋಪೋಲ್ಡ್ ವಿಲ್ಲೆಗೆ ಪ್ರಯಾಣ ಮಾಡುತ್ತಿದ್ದಾಗ ಉತ್ತರ ರೊಡೇಸಿಯಾದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿಮೃತರಾದರು. 1961ರಲ್ಲಿ ಅವರಿಗೆ ಮರಣೋತ್ತರ ನೊಬೆಲ್ ಶಾಂತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

1958: ಭಾರತೀಯ ತತ್ವಶಾಸ್ತ್ರಜ್ಞ ಹಾಗೂ ವಿದ್ವಾಂಸ ಡಾ. ಭಗವಾನ್ ದಾಸ್ ಅವರು ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು.

1958: ಸಾಹಿತಿ ಗಿರಿಜಾ ಶಾಸ್ತ್ರಿ ಜನನ.

1951: ಖ್ಯಾತ ಚಿತ್ರನಟಿ ಶಬಾನಾ ಆಜ್ಮಿ ಜನನ. ಖ್ಯಾತ ಸಾಹಿತಿ ಕೈಫಿ ಆಜ್ಮಿ- ರಂಗನಟಿ ಶೌಕತ್ ದಂಪತಿಯ ಪುತ್ರಿ ಶಬಾನಾ ಆಜ್ಮಿ ಅವರ ಪತಿ ಚಿತ್ರ ಸಾಹಿತಿ ಜಾವಿದ್ ಅಖ್ತರ್. ಮನೋವಿಜ್ಞಾನದಲ್ಲಿ ಪದವಿ, ಪುಣೆ ಭಾರತೀಯ ದೂರದರ್ಶನ ಮತ್ತು ಚಲನಚಿತ್ರ ಸಂಸ್ಥೆಯಲ್ಲಿ ಕಲಾ ತರಬೇತಿ ಪಡೆದ ಶಬಾನಾ ಅವರ ಮೊದಲ ಚಿತ್ರ- ಶ್ಯಾಮ್ ಬೆನಗಲ್ ನಿರ್ದೇಶನದ `ಅಂಕುರ್'. 1983, 1984, 1985ರಲ್ಲಿ ಚಲನಚಿತ್ರ ರಾಷ್ಟ್ರ ಪ್ರಶಸ್ತಿಗಳನ್ನು ಗಳಿಸಿದ ಶಬಾನಾಗೆ 1988ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿತು.

1950: ಸಾಹಿತಿ ಭಾಗ್ಯಲಕ್ಷ್ಮಿ ಎನ್.ವಿ. ಜನನ.

1948: ಈದಿನ ಸಂಜೆ 4.30ರ ವೇಳೆಗೆ ಹೈದರಾಬಾದ್ ರಾಜ್ಯದ ಪಡೆಗಳ ಕಮಾಂಡರ್ ಮೇಜರ್ ಜನರಲ್ ಎಲ್ ಎಡ್ರೋಸ್ ಅವರು ಹೈದರಾಬಾದ್ ನಿಜಾಮನ ಪರವಾಗಿ ಭಾರತೀಯ ಸೇನೆಯ ಮೊದಲ ಸಶಸ್ತ್ರ ವಿಭಾಗದ ಕಮಾಂಡರ್ ಮೇಜರ್ ಜನರಲ್ ಜೆ.ಎನ್. ಚೌಧರಿ ಅವರಿಗೆ ಶರಣಾಗತರಾದರು. ರಜಕಾರರ ನಾಯಕ ಕಾಸಿಂ ರಿಜ್ವಿಯನ್ನು ಬಂಧಿಸಿ, ರಜಕಾರರ ಸಂಘಟನೆಯನ್ನು ನಿಷೇಧಿಸಲಾಯಿತು. ಮೇಜರ್ ಜನರಲ್ ಜೆ.ಎನ್. ಚೌಧರಿ ಅವರನ್ನು ಮಿಲಿಟರಿ ಗವರ್ನರ್ ಆಗಿ ನೇಮಿಸಲಾಯಿತು. 1950ರ ಜನವರಿ 26ರಂದು ಹೈದರಾಬಾದನ್ನು ಭಾರತಕ್ಕೆ ಸೇರ್ಪಡೆ ಮಾಡಲಾಯಿತು.

1938: ಸಾಹಿತಿ ಶಾರದಾ ತಿರುಮಲೈ ಜನನ.

1935: ಸಾಹಿತ್ಯ, ಸಂಗೀತ, ಕ್ರೀಡಾಪ್ರೇಮಿ ಸದಾನಂದ ಕನವಳ್ಳಿ ಅವರು ವೀರಪ್ಪ- ವೀರಮ್ಮ ದಂಪತಿಯ ಮಗನಾಗಿ ಸವಣೂರು ತಾಲ್ಲೂಕಿನ ಹಿರೇಮುಗದೂರ ಗ್ರಾಮದಲ್ಲಿ ಜನಿಸಿದರು.

1935: ಸಾಹಿತಿ ಜಿ.ಎಚ್. ನಾಯಕ ಜನನ.

1917: ಸಾಹಿತಿ ವಸಂತಾದೇವಿ ಅನಕೃ ಜನನ.

1851: ಹೆನ್ರಿ ಜಾರ್ವಿಸ್ ರೇಮಂಡ್ ಅವರಿಂದ ಸ್ಥಾಪನೆಯಾದ `ದಿ ನ್ಯೂಯಾರ್ಕ್ ಟೈಮ್ಸ್' ಪತ್ರಿಕೆಯ ಮೊದಲ ಸಂಚಿಕೆ ಪ್ರಕಟವಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement